ಕಾವ್ಯ ಸಂಗಾತಿ
ಡಾ. ಭಾಗ್ಯವತಿ ಅಮರೇಶ್ವರ
ಗಜಲ್


ಉಸಿರು ಅರಸಿ ದಣಿದ ನಿಟ್ಟುಸಿರುಗಳಿವೆ ನನ್ನೊಂದಿಗೆ
ಮನದ ಚೆಲುವ ಕಾಣದೆ ಸೋತ ಕಂಗಳಿವೆ ನನ್ನೊಂದಿಗೆ
ಹಾದಿಯ ತುಂಬಾ ಕೆಂಗುಲಾಬಿಗಳಿವೆ ಎಂದು ಭ್ರಮಿಸಿದೆ
ನಡೆದು ನಡೆದು ಕೆಂಪೇರಿದ ಪಾದಗಳಿವೆ ನನ್ನೊಂದಿಗೆ
ಆಸೆ ಪಡಬೇಡ ಎಂಬ ಬುದ್ಧನ ಮಾತಿಗೆ ಕಿವಿಗೊಡಲಿಲ್ಲನಾನು
ಇಷ್ಟವು ಕೈಗೂಡದೆ ಸಮಾಧಿಯಾದ ಕನಸುಗಳಿವೆ ನನ್ನೊಂದಿಗೆ
ಲೋಕದ ಡೊಂಕಿಗೆ ಮನ ಕಳವಳಿಸಿ ತಲ್ಲಣಿಸಿದೆ ದೇವಾ
ಕಣ್ಣಲಿ ಮನೆ ಮಾಡಿದ ಕಣ್ಣೀರ ಮೋಡಗಳಿವೆ ನನ್ನೊಂದಿಗೆ
ನನ್ನವರಾರು ಪರರು ಯಾರೆಂದು ತಿಳಿಯುತಿಲ್ಲ ಭಾಗ್ಯ
ಜನಿಸಿದ ಕ್ಷಣದಲ್ಲೆ ಮಸಣ ಸೇರಿದ ಭಾವಗಳಿವೆ ನನ್ನೊಂದಿಗೆ
ಡಾ. ಭಾಗ್ಯವತಿ ಅಮರೇಶ್ವರ



