ಗೃಹ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ
“ಗೃಹ ಕೃತ್ಯ ಹಾಗೂ
ಕೌಟುಂಬಿಕ ಜವಾಬ್ದಾರಿ… ಕಾನೂನು”


ಮನಸ್ಸಿನಲ್ಲಿ ಅತ್ಯಂತ ಗೊಂದಲವನ್ನು ಮೂಡಿಸಿ ಒಂದು ಬಗೆಯ ವಿಷಣ್ಣತೆಯನ್ನು ತುಂಬಿದ ಒಂದು ಪೋಸ್ಟ್ ಮುಖ ಪುಸ್ತಕದ ಪುಟದಲ್ಲಿ ಓದಿದೆ.
ವಿಷಯ ಇಷ್ಟೇ ಕರ್ನಾಟಕದ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಲ್ಲಿ ಒಬ್ಬರಾದ ನ್ಯಾಯಮೂರ್ತಿ ಚಿಲಕೂರು ಸುಮಲತಾ ಅವರು ವಿವಾಹಿತ ಪತ್ನಿಯು ತನ್ನ ಪತಿ ಮತ್ತು ಆತನ ಕುಟುಂಬದವರಿಂದ ಗೃಹ ಕೃತ್ಯಗಳನ್ನು ಮಾಡಲೇಬೇಕು ಎಂಬ ಒತ್ತಾಯವನ್ನು ಹಾಗೂ ಪತಿಯ ತಂದೆ ತಾಯಿ ಹಾಗೂ ಕುಟುಂಬದ ಸರ್ವ ಸದಸ್ಯರ ಎಲ್ಲ ರೀತಿಯ ಕಾಳಜಿ ಮಾಡಬೇಕು ಎಂಬ ವಾದವನ್ನು ತಳ್ಳಿ ಹಾಕಿದೆ.
ತಮ್ಮ ಪಾಲಕರ ಕಾಳಜಿಯನ್ನು ಮಾಡುವುದು ಅವರ ಗಂಡು ಹಾಗೂ ಹೆಣ್ಣು ಮಕ್ಕಳ ಮೊದಲ ಕರ್ತವ್ಯವಾಗಿರುತ್ತದೆಯೇ ಹೊರತು ಸೊಸೆ ಇಲ್ಲವೇ ಅಳಿಯನ ಕೆಲಸವಲ್ಲ… ಅಂತಹ ಕಾಳಜಿಯನ್ನು ಅವರು ತಾವೇ ಸ್ವಯಂ ಇಚ್ಛಾ ಪೂರ್ವಕವಾಗಿ ಮಾಡುತ್ತಿದ್ದರೆ ಪರವಾಗಿಲ್ಲ ಆದರೆ ಈ ಕುರಿತು ಅವರ ಮೇಲೆ ಯಾವುದೇ ರೀತಿಯ ನಿಯಂತ್ರಣ ಹೇರುವುದು ತಪ್ಪು ಎಂದು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.
ಮುಂದುವರಿಸಿದ ನ್ಯಾಯಮೂರ್ತಿ ಸುಮಲತಾ ಅವರು ವಿವಾಹ ಎಂಬ ಪ್ರಕ್ರಿಯೆಯು ಸಂಗಾತಿಯನ್ನು ನಿಯಂತ್ರಿಸುವ ಅಥವಾ ಅವರ ಮೇಲೆ ಅಧಿಕಾರ ಚಲಾಯಿಸುವ, ಅವರ ವ್ಯಕ್ತಿತ್ವಕ್ಕೆ ಕುಂದು ತರುವ, ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಲೈಸೆನ್ಸ್ ಅಲ್ಲ. ಈ ಕುರಿತು ಯಾರೊಬ್ಬರೂ ತಮ್ಮ ಸಂಗಾತಿಯನ್ನು ಒತ್ತಾಯ ಪಡಿಸಬಾರದು ಎಂದು ತಮ್ಮ ತೀರ್ಪಿನಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಹೆಣ್ಣು ಮಕ್ಕಳು ತಮ್ಮ ಪಾಲಕರನ್ನು ಭೇಟಿಯಾಗುವುದಕ್ಕೆ ಪತಿಯ ಇಲ್ಲವೇ ಗಂಡನ ಮನೆಯವರ ಅನುಮತಿಯ ಅವಶ್ಯಕತೆ ಇಲ್ಲ ಎಂದು ಅವರು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ. ತನ್ನಿಂದ ದೂರವಾದ ಪತ್ನಿ ಮತ್ತು ಮಗಳ ಮುಂದಿನ ಬದುಕನ್ನು ನಿರ್ವಹಿಸಲು ಅಗತ್ಯವಾದ ನಿರ್ವಹಣಾ ವೆಚ್ಚವನ್ನು ಕೊಡಲು ನಿರಾಕರಿಸಿ ಆಕೆಯ ಪತಿ ಹಾಕಿದ ಪಿಟಿಶನ್ ಅರ್ಜಿಯನ್ನು ತಿರಸ್ಕರಿಸಿದ ಈ ಮಾತನ್ನು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಹೇಳಿದ್ದಾರೆ.
ಉಚ್ಚ ನ್ಯಾಯಾಲಯದ ಈ ತೀರ್ಪನ್ನು ಸಾಕಷ್ಟು ಮನನೊಂದ ಮಹಿಳೆಯರು ಸ್ವಾಗತಿಸಿದ್ದಾರೆ. ಆದರೆ ಬಹಳಷ್ಟು ಜನ ಹಿರಿಯ ಜೀವಿಗಳು ಭಾರತೀಯ ಸಂಪ್ರದಾಯಕ್ಕೆ ವಿರೋಧವಾದ ಈ ಮನಸ್ಥಿತಿಯನ್ನು ಖಂಡಿಸಿದ್ದಾರೆ. ಹಾಗಾದರೆ ಮದುವೆಯಾಗುವುದರ ಅವಶ್ಯಕತೆಯಾದರೂ ಏನಿದೆ ಎಂದು ಕೆಲ ಯುವಕರು ಹಾಗೂ ಅವರ ಹೆತ್ತವರು ಪ್ರಶ್ನಿಸಿದ್ದಾರೆ.
ಮತ್ತೆ ಕೆಲ ಗಂಡಸರ ಮಾತುಕತೆ ವಾದಗಳನ್ನು ನೋಡಿದಾಗ ಅವರ ವೈವಾಹಿಕ ಬದುಕಿನ ಮುಖ್ಯ ಉದ್ದೇಶ ಓರ್ವ ಪುಕ್ಕಟೆ ಕೆಲಸದ ಹೆಣ್ಣು ಮಗಳನ್ನು ಪಡೆಯುವುದು ಆಗಿದೆ ಎಂಬಂತೆ ತೋರುತ್ತದೆ. ಅವರ ಪ್ರಕಾರ ಮದುವೆ ಎಂದರೆ ಪರಸ್ಪರ ಒಪ್ಪಿ ವಿವಾಹವಾದ ಗಂಡು ಹೆಣ್ಣಿನ ನಡುವಿನ ಸಾಂಗತ್ಯ, ಜೊತೆಗಾರಿಕೆ, ಪರಸ್ಪರ ಗೌರವ ಮತ್ತು ಒಟ್ಟಾಗಿ ಬದುಕನ್ನು ಕಟ್ಟಿಕೊಳ್ಳುವ ಪ್ರಕ್ರಿಯೆ ಎಂಬ ಅರಿವು ಇಲ್ಲವೇ ಇಲ್ಲ. ಹಿರಿಯರು ನೋಡಿ ಮಾಡುವ ಅರೇಂಜ್ಡ್ ಮ್ಯಾರೇಜ್ ನಂತಹ ವೈವಾಹಿಕ ಸಂಬಂಧಗಳಲ್ಲಿ ವಿವಾಹಕ್ಕೆ ಗಳಿಸುವ ವಧು ಮತ್ತು ವರರು ಪರಸ್ಪರ ಭೇಟಿಯಾಗುವುದು, ಅರಿತುಕೊಳ್ಳುವುದು ಹಾಗೂ ತಮ್ಮ ಜೊತೆ ಬದುಕು ಕಟ್ಟಿಕೊಂಡು ಸುಖವಾಗಿ ಸಂಸಾರ ಮಾಡಬೇಕಾದ ಕುರಿತು ಯಾವುದೇ ಮಾತುಕತೆಗಳು ಇರುವುದಿಲ್ಲ.. ಇದರಿಂದಾಗಿ ಗಂಡು ಹುಡುಗರ ಮನದ ಮಾತುಗಳು ಅಲ್ಲಿಯೇ ಮುಚ್ಚಿ ಹೋದರೆ ಹೆಣ್ಣು ಮಕ್ಕಳು ಕೂಡ ಇದರಿಂದ ಹೊರತಾಗುವುದಿಲ್ಲ.
ಅಕಸ್ಮಾತ್ ಮೊದಲ ಭೇಟಿಯಲ್ಲಿಯೇ ಮನೆಯ ಎಲ್ಲಾ ಕೆಲಸಗಳನ್ನು ನೀನೆ ಮಾಡಬೇಕು, ನನ್ನ ಪಾಲಕರ ಜವಾಬ್ದಾರಿಯೂ ನಿನ್ನದೇ ಎಂದು ಹುಡುಗನೇನಾದರೂ ಹೇಳಿದರೆ ಖಂಡಿತವಾಗಿಯೂ ಆಕೆ ಒಪ್ಪುವುದಿಲ್ಲ. ಬದಲಾಗಿ ತನ್ನ ಕುಟುಂಬವನ್ನು ಒಪ್ಪವಾಗಿಸುವ ತನ್ನ ಪಾಲಕರನ್ನು ಚೆನ್ನಾಗಿ ನೋಡಿಕೊಳ್ಳುವ ತನ್ನ ಜವಾಬ್ದಾರಿಯಲ್ಲಿ ಒಂದಷ್ಟು ಪಾಲನ್ನು ನೀನು ಹೊತ್ತುಕೋ ಎಂದು ಹೇಳಿದರೆ ಭಾರತೀಯ ಸಮಾಜದ ರೀತಿ ನೀತಿಗಳನ್ನು ಸಹಜವಾಗಿ ಆಕೆ ಒಪ್ಪಿಕೊಳ್ಳುತ್ತಾಳೆ.
ಆದರೆ ಅದೇ ಹೆಣ್ಣು ಮಗಳಿಗೆ ಕೊಂಚ ಸ್ವಾತಂತ್ರವಿದ್ದು ಆಕೆ ತನ್ನನ್ನು ಮದುವೆಯಾಗುವ ವ್ಯಕ್ತಿಯೊಂದಿಗೆ ಒಂದಷ್ಟು ಹೊತ್ತು ಒಡನಾಡುವ ಅವಕಾಶ ದೊರೆತರೆ ಆಕೆ ಸಾಮಾಜಿಕ ಒತ್ತಡದ ಅಡಿಯಲ್ಲಿ ನರಳಲು ಇಚ್ಚಿಸದೆ ವೈಯಕ್ತಿಕ ಸ್ವಾತಂತ್ರ್ಯಕ್ಕಾಗಿ ತನಗೆ ಒದಗಿ ಬಂದ ಸಂಬಂಧವನ್ನು ಒಪ್ಪದೆ ಹೋಗಬಹುದು
ಸಾಮಾಜಿಕ ಒತ್ತಡ ಇಲ್ಲದ ಹೊರತು ಪಿತೃ ಸತ್ತಾತ್ಮಕವಾಗಿ ನಡೆದು ಬಂದ ಯೋಚನೆಯನ್ನು ಈಗಾಗಲೇ ಬಹುತೇಕ ಹೆಣ್ಣು ಮಕ್ಕಳ ತಿರಸ್ಕರಿಸಿದ್ದಾರೆ. ಇನ್ನೂ ಹೆಚ್ಚಿನ ಸ್ವಾತಂತ್ರ್ಯವನ್ನು ಹೆಣ್ಣು ಮಕ್ಕಳಿಗೆ ಕೊಟ್ಟರೆ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಬೇಕಾಗುತ್ತದೆ ಹಾಗೂ ತಮ್ಮ ಪಾಲಕರ ಊಟ ಉಪಚಾರ ಆರೋಗ್ಯ ಹೀಗೆ ಎಲ್ಲವನ್ನು ನೋಡಿಕೊಳ್ಳಲು… ಅದೂ 24/7 ರಜೆ ಹಾಕದೆ ಪುಕ್ಕಟೆ ದುಡಿಯುವವರು ಎಲ್ಲಿ ಸಿಕ್ಕಬೇಕು ಎಂಬ ಆತಂಕ ಗಂಡು ಹುಡುಗರಲ್ಲಿ ಇದ್ದರೆ ಅವರ ಪಾಲಕರು ಭಾರತೀಯ ಸಂಸ್ಕೃತಿಯನ್ನು ಜನರು ಮರೆಯುತ್ತಿದ್ದಾರೆ ಎಂದು ಸಾರಾಸಗಟಾಗಿ ಎಲ್ಲರನ್ನು ಬೈಯುತ್ತಿದ್ದಾರೆ.
ಪಿತೃಸತ್ತಾತ್ಮಕ ಯೋಚನೆಗಳು ಸದಾ ಪುರುಷ ಅಹಂಕಾರವನ್ನು ಹೆಚ್ಚಿಸುವಲ್ಲಿ ಆತನ ಮೇಲರಿಮೆಯನ್ನು ಪೋಷಿಸುವಲ್ಲಿ ಸಹಾಯಕವಾಗಿವೆ. ಆಧುನಿಕ ಯುಗದಲ್ಲಿ ಹೆಣ್ಣು ಮಕ್ಕಳು ಕೂಡ ಶೈಕ್ಷಣಿಕವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಸಬಲೀಕರಣಗೊಂಡಿದ್ದು ತಮ್ಮ ವೈಯಕ್ತಿಕ ನಿರ್ಧಾರಗಳನ್ನು ತಾವೇ ಕೈಗೊಳ್ಳುವಷ್ಟು ಸದೃಢರಾಗಿದ್ದಾರೆ.
ಅಂತೆಯೇ ಇದೀಗ ಅವರ ಮೇಲೆ ಪ್ರೀತಿಯ ಒತ್ತಾಸೆ ಮಾಡಬಹುದೇ ಹೊರತು ಕಡಿವಾಣದ ನಿಯಂತ್ರಣ ಸಾಧ್ಯವಿಲ್ಲ.
ಬಹುಶಃ ಇದನ್ನೇ ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂದು ಹೇಳಬಹುದು. ಆಲ್ವೇ ಸ್ನೇಹಿತರೆ?
ವೀಣಾ ಹೇಮಂತ್ ಗೌಡ ಪಾಟೀಲ್



