ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಸ್ವಾತಂತ್ರ್ಯ ಎಂದರೆ ಕೇವಲ ಆಗಸ್ಟ್ ೧೫ರಂದು ಧ್ವಜಾರೋಹಣ ಮಾಡುವುದು, ರಾಷ್ಟ್ರಗೀತೆ ಹಾಡುವುದು ಅಥವಾ ಇತಿಹಾಸದ ಪುಸ್ತಕಗಳಲ್ಲಿ ಬರೆದಿರುವ ಘಟನೆಗಳನ್ನು ನೆನಪಿಸಿಕೊಳ್ಳುವುದು ಮಾತ್ರವಲ್ಲ. ಅದು ನಮ್ಮ ರಕ್ತದಲ್ಲಿ, ನಮ್ಮ ಉಸಿರಿನಲ್ಲಿ, ನಮ್ಮ ಪ್ರತಿದಿನದ ನಡವಳಿಕೆಯಲ್ಲಿ ಜೀವಂತವಾಗಿರಬೇಕು. ಸ್ವತಂತ್ರ ಭಾರತದಲ್ಲಿ ನಾವೆಲ್ಲರೂ ಯಾವುದೇ ರೀತಿಯ ಚಿಂತೆಯಿಲ್ಲದೆ ಆರಾಮವಾಗಿ ಉಸಿರಾಡಲು, ಮನಸಿಗೆ ಬಂದದ್ದನ್ನು ಮಾಡಲು ಕಾರಣ ದೇಶಾದ್ಯಂತ ಲಕ್ಷಾನುಗಟ್ಟಲೇ ಜನರು ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿ, ಅದೆಷ್ಟೋ ವರ್ಷಗಳ ಕಾಲ ಸ್ವಾತಂತ್ರ್ಯಕ್ಕಾಗಿ ನಡೆಸಿದ ಸತತ ಹೋರಾಟ. ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯನ್ನು ಕೊನೆಗೊಳಿಸುವ ಅಹಿಂಸಾ ಸಂಗ್ರಾಮ.

ಆ ಹೋರಾಟದಲ್ಲಿ ಅಸಂಖ್ಯಾತ ಜನರು ತಮ್ಮ ಜೀವವನ್ನೇ ಅರ್ಪಿಸಿದರು. ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ನಡೆದ ಸತ್ಯಾಗ್ರಹ, ಅಸಹಕಾರ ಚಳುವಳಿ ಮತ್ತು ಕ್ವಿಟ್ ಇಂಡಿಯಾ ಚಳುವಳಿಗಳು ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟವು. ಆ ತ್ಯಾಗವನ್ನು ನಾವು ಎಂದಿಗೂ ಮರೆಯಬಾರದು. ಆ ಎಲ್ಲಾ ಸ್ವಾತಂತ್ರ್ಯ ಯೋಧರಿಗೆ ಶತ ಶತ ನಮನಗಳು.

ನನ್ನ ಮಾವನವರಾದ ದಿ. ಶ್ರೀ. ಗುರುರಾವ್ ರಂಗರಾವ್ ಇನಾಮದಾರರು ಸಹ ಈ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದರು. ಅವರ ತಾಯಿ ತಮ್ಮ ಹಿರಿಯ ಮಗನ ಜೊತೆಗೆ ಪ್ರೌಢಶಾಲಾ ಶಿಕ್ಷಣಕ್ಕಾಗಿ ಇವರನ್ನೂ ಸಹ ವಿಜಯಾಪುರ ಜಿಲ್ಲೆಯ ನಮ್ಮ ಹಳ್ಳಿ ಗೊಣಶಿಗಿಯ ಸಮೀಪವಿರುವ ಅಥಣಿ ಎಂಬ ಸಣ್ಣ ಪಟ್ಟಣಕ್ಕೆ ಕಳಿಸಿದ್ದರು.

ಸ್ವಾತಂತ್ರ್ಯ ಚಳುವಳಿ ಪ್ರಾರಂಭವಾದಾಗ ನಮ್ಮ ಮಾವನವರ ವಯಸ್ಸು ಕೇವಲ 10 ವರ್ಷ.ಒಂದು ದಿನ ಸಂಜೆ ಕೆಲವು ಸ್ವಾತಂತ್ರ್ಯ ಚಳುವಳಿಯ ನಾಯಕರಿಂದ ಹತ್ತಿರದ ಬಯಲು ಪ್ರದೇಶದಲ್ಲಿ ಸ್ವಾತಂತ್ರ್ಯ ಚಳುವಳಿಯ ಸಭೆ ನಡೆಸುವವರಿದ್ದಾರೆ ಎಂದು ಈ ಇನಾಮದಾರ ಬಂಧುಗಳಿಗೆ ಗೊತ್ತಾಯಿತು. ಯಾವ ಹೆದರಿಕೆ ಅಥವಾ ಹಿಂಜರಿಕೆ ಇಲ್ಲದೆ ತಮ್ಮ ಅಣ್ಣನ ಜೊತೆ ಅವರೂ ಸಹ ಭಾಗವಹಿಸಲು ಒಂದು ನಿಗದಿತ ಸ್ಥಳಕ್ಕೆ ಹೋದರು. ಸಭೆಯ ನಡುವೆ ಪೊಲೀಸ್ ಪಡೆ ನುಗ್ಗಿತು. ಲಾಠಿ ಚಾರ್ಜ್ ಮಾಡಲಾಯಿತು. ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗುವ ಮೊದಲ ಅಲ್ಲಿದ್ದವರನ್ನೆಲ್ಲ ಹಿಡಿದು ಹಿಂದೆ ಮುಂದೆ ನೋಡದೆ, ಪ್ರಾಣಿಗಳ ಹಾಗೆ ಪೋಲಿಸ್ ಗಾಡಿಗಳಲ್ಲಿ ತುಂಬಿಕೊಂಡು ಬೆಳಗಾವಿಯ ಹಿಂಡಲ್ಗಾ ಕೇಂದ್ರ ಕಾರಾಗೃಹದಲ್ಲಿ ಸೆರೆ ಹಾಕಿದರು. ಅಲ್ಲಿ 6 ತಿಂಗಳ ವರೆಗೆ ಬಂಧನದಲ್ಲಿ ಇದ್ದರು. ನಂತರ ಅಲ್ಲಿಂದ ಪುಣೆಯ ಯೆರವಡಾ ಜೈಲಿಗೆ ಸ್ಥಳಾಂತರಿಸಲಾಯಿತು. ಅಲ್ಲಿ 8
ತಿಂಗಳ ಕಾಲ ಅವರನ್ನು ಇಟ್ಟಿದ್ದರಂತೆ.
ಬಳಿಕ ಅಣ್ಣಾ- ತಮ್ಮ ಅಥಣಿಗೆ ಬಂದು ವಿದ್ಯಾಭ್ಯಾಸ ಮುಂದುವರೆಸಿ, ನಂತರ ಧಾರವಾಡದ ಕರ್ನಾಟಕ ಕಾಲೇಜಿನಗೆ MSc ಮುಗಿಸಿ, ಭಾರತ ಸರಕಾರದ ಉದ್ಯೋಗ ಸಚಿವಾಲಯದಲ್ಲಿ ಮುಖ್ಯ ಸಲಹೆಗರಾಗಿ (Chief Industrial Advisor) ದೆಹಲಿಯಲ್ಲಿ ಅನೇಕ ವರ್ಷಗಳ ಕಾಲ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಈ ನಡುವೆ ದೆಹಲಿ ಕರ್ನಾಟಕ ಸಂಘದ ಏಳಿಗೆಗೆ ಎಲೆಮರೆಯ ಕಾಯಿಯಂತೆ ಅನೇಕ ವರ್ಷಗಳವರೆಗೆ ಎಲ್ಲರೊಂದಿಗೆ ಬೆರೆತು ಸೇವೆ ಸಲ್ಲಿಸಿದ್ದಾರೆ. ಅವರಿಗೆ ತಾವು ನೀಡಿದ ಸೇವೆಗಳ ಬಗ್ಗೆ ಸಾರ್ವಜನಿಕವಾಗಿ ಹೇಳಿಕೊಳ್ಳಲು ಸುತಾರಾಂ ಇಷ್ಟವಿರಲಿಲ್ಲ. ಹಾಗಾಗಿ ಅವರ ಫೋಟೋ ಹಳೆಯ ದಾಖಲೆಗಳಲ್ಲಿ ಕಂಡು ಬರುವುದಿಲ್ಲ. ಆದರೆ ಅದೇನೋ ಅಂತಾರಲ್ಲ – ಒಳಿತನ್ನು ಮಾಡಿದವರು ಹೆಸರು ಅಳಿಸಲು ಸಾಧ್ಯವಿಲ್ಲ ಎಂಬಂತೆ ಅವರ ಈ ನಿಸ್ವಾರ್ಥ ಸೇವೆಗಳನ್ನು ನೆನೆದು, ದೆಹಲಿ ಕರ್ನಾಟಕ ಸಂಘದಲ್ಲಿ ದಿ. ನಾಗರಾಜ್ ಅವರ ಅಧ್ಯಕ್ಷತೆ ಮತ್ತು ಶ್ರೀ ಕೃಷ್ಣ ಭಟ್ ಅವರು ಕಾರ್ಯದರ್ಶಿಗಳಾಗಿದ್ದ ಅವಧಿಯಲ್ಲಿ ನಮ್ಮ ಮಾನವರಿಗೆ ಮಾನ್ಯ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರಿಂದ ಸನ್ಮಾನ ಮಾಡಲಾಗಿದೆ ಎಂದು ತಿಳಿಸಲು ತುಂಬಾ ಹೆಮ್ಮೆ ಎನಿಸುತ್ತದೆ.
ಈ ಸಾಮಾಜಿಕ ಕಾರ್ಯಗಳ ಜೊತೆಗೆ ನಮ್ಮ ಹಳ್ಳಿಯ ಸುಧಾರಣೆಗಾಗಿಯೂ ದಾದಾ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ.

ತಮ್ಮ ಮೊಮ್ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟ ಮತ್ತು ಜೈಲಿನಲ್ಲಿ ಕಳೆದ ಆ ದಿನಗಳನ್ನು ನೆನೆಯುತ್ತ, – “ನಿಮ್ಮ ಹಕ್ಕಿಗಾಗಿ ನೀವು ಹೋರಾಡಲೇ ಬೇಕು. ಯಾವತ್ತೂ ಯಾವುದಕ್ಕೂ ಹೆದರಬಾರದು. ಬಲಶಾಲಿಯಾಗಿರಿ, ಧೈರ್ಯಶಾಲಿಯಾಗಿರಿ, ಜನರಿಗೆ ಸಹಾಯ ಮಾಡಿರಿ ಮತ್ತು ನಮ್ಮ ಮನೆತನದ ಹೆಸರನ್ನು ಉಳಿಸಿರಿ” ಅಂತ ಹೇಳ್ತಾ ಇದ್ದದ್ದು ಇನ್ನೂ ನನಗೆ ನೆನಪಿದೆ.
ಪ್ರೀತಿಯ ದಾದಾ ನಿಮ್ಮ ಬಗ್ಗೆ ನಮಗೆಲ್ಲಾ ತುಂಬಾ ಅಭಿಮಾನವಿದೆ. ನಿಮ್ಮ ಮಾರ್ಗದರ್ಶನ ಮತ್ತು ಹಿತವಚನಗಳು ನನ್ನ ಮಕ್ಕಳಿಗೆ ಶ್ರೀರಕ್ಷೆ ಇದ್ದಂತೆ.
ಸ್ನೇಹಿತರೇ..ನಮ್ಮ ಮಾವನವರು, ಅಜ್ಜ-ಅಜ್ಜಿಯರು, ಸ್ವಾತಂತ್ರ್ಯ ಹೋರಾಟಗಾರರು ಕೇವಲ ಸಂಕಟವನ್ನು ಅನುಭವಿಸಿ, ಜೀವವನ್ನು ಅರ್ಪಿಸಿ ನಮಗೆ ಈ ಸ್ವಾತಂತ್ರ್ಯವನ್ನು ಉಡುಗೊರೆಯಾಗಿ ನೀಡಿದರು. ಅವರು ಕೇವಲ ಇತಿಹಾಸದ ಪುಟಗಳಲ್ಲಿ ಹೆಸರುಗಳಾಗಿ ಉಳಿಯಬಾರದು; ಅವರ ತ್ಯಾಗವು ನಮ್ಮ ಜೀವನದಲ್ಲಿ ಮುಂದುವರಿಯಬೇಕು.
ಸ್ವಾತಂತ್ರ್ಯವೆಂದರೆ ನಮ್ಮ ದೇಶದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕು, ಘನತೆ ಮತ್ತು ಸುರಕ್ಷತೆ ಇರುವುದು. ಅದು ಮಹಿಳೆಯರು ರಾತ್ರಿ ಹೊರಗೆ ಹೋಗುವಾಗ ಭಯವಿಲ್ಲದಿರುವುದು, ಮಕ್ಕಳು ಶಾಲೆಗೆ ಹೋಗುವಾಗ ಸುರಕ್ಷಿತರಾಗಿರುವುದು, ಬಡವರು ನ್ಯಾಯ ಪಡೆಯುವುದು, ಮತ್ತು ಪ್ರತಿಯೊಬ್ಬರೂ ತಮ್ಮ ಕನಸುಗಳನ್ನು ನನಸಾಗಿಸುವ ಸ್ವಾತಂತ್ರ್ಯವನ್ನು ಹೊಂದಿರುವುದು. ಇಂದು ನಾವು ನೋಡುತ್ತಿರುವ ಅನೇಕ ಘಟನೆಗಳು—ಅನ್ಯಾಯ, ಶೋಷಣೆ, ಹಿಂಸೆ—ಸ್ವಾತಂತ್ರ್ಯದ ನಿಜವಾದ ಅರ್ಥವನ್ನು ಕಳೆದುಕೊಳ್ಳುತ್ತಿರುವುದನ್ನು ತೋರಿಸುತ್ತವೆ. ಸ್ವಾತಂತ್ರ್ಯವು ಕಾಗದದ ಮೇಲಿನ ಹಕ್ಕು ಮಾತ್ರವಾಗಿ ಉಳಿದರೆ, ಅದು ಅರ್ಥಹೀನವಾಗುತ್ತದೆ.
ನಮ್ಮ ಹಿರಿಯರು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಹೋರಾಡಿದ್ದು ಕೇವಲ ವಿದೇಶಿ ಆಳ್ವಿಕೆಯನ್ನು ಕೊನೆಗೊಳಿಸಲು ಮಾತ್ರವಲ್ಲ. ಅವರು ನ್ಯಾಯ, ಸಮಾನತೆ ಮತ್ತು ಮಾನವೀಯತೆಯನ್ನು ಸ್ಥಾಪಿಸಲು ಹೋರಾಡಿದರು. ಆದ್ದರಿಂದ ನಾವು ಅವರನ್ನು ನೆನಪಿಸಿಕೊಳ್ಳುವಾಗ, ಕೇವಲ ಅವರ ಹೆಸರುಗಳನ್ನು ಪುಸ್ತಕಗಳಲ್ಲಿ ಓದುವುದಲ್ಲದೆ, ಅವರ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅನುಷ್ಠಾನಗೊಳಿಸಬೇಕು. ಅನ್ಯಾಯವನ್ನು ನೋಡಿದಾಗ ಮೌನವಾಗಿರುವುದು, ಭ್ರಷ್ಟಾಚಾರವನ್ನು ಸಹಿಸಿಕೊಳ್ಳುವುದು, ಮಹಿಳೆ-ಮಕ್ಕಳ ಮೇಲಿನ ಹಿಂಸೆಯನ್ನು ನಿರ್ಲಕ್ಷಿಸುವುದು—ಇವೆಲ್ಲವೂ ಸ್ವಾತಂತ್ರ್ಯದ ಮೇಲಿನ ದ್ರೋಹ.
ನಿಜವಾದ ಸ್ವಾತಂತ್ರ್ಯವು ನಮ್ಮಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಯನ್ನು ಹೊರುವಾಗ ಮಾತ್ರ ಸಾಧ್ಯ. ಅದು ನಮ್ಮ ಮತದಾನದಲ್ಲಿ, ನಮ್ಮ ಕೆಲಸದಲ್ಲಿ, ನಮ್ಮ ಮಾತುಗಳಲ್ಲಿ ಮತ್ತು ನಮ್ಮ ಕ್ರಿಯೆಗಳಲ್ಲಿ ಕಾಣಬೇಕು. ಇತಿಹಾಸವು ನಮಗೆ ಪಾಠ ಕಲಿಸುತ್ತದೆ, ಆದರೆ ಭವಿಷ್ಯವನ್ನು ನಿರ್ಮಿಸುವುದು ನಮ್ಮ ಕೆಲಸ. ಸ್ವಾತಂತ್ರ್ಯವನ್ನು ಕೇವಲ ನೆನಪಿನಲ್ಲಿ ಇಡದೆ, ಅದನ್ನು ಪ್ರತಿದಿನ ಜೀವಂತವಾಗಿ ಇರಿಸೋಣ. ನಮ್ಮ ಮಕ್ಕಳು ಸ್ವಾತಂತ್ರ್ಯವನ್ನು ಇತಿಹಾಸದ ಪುಟಗಳಲ್ಲಿ ಮಾತ್ರವಲ್ಲ, ತಮ್ಮ ಜೀವನದಲ್ಲಿ ಅನುಭವಿಸುವಂತೆ ಮಾಡೋಣ.

ನಮ್ಮ ಜೀವನದಲ್ಲಿ ಇಂತಹ ವಿಶೇಷ ವ್ಯಕ್ತಿಗಳೊಂದಿಗೆ ಹಂಚಿಕೊಂಡ ಸುಂದರ
ಸವಿ ನೆನಪುಗಳು ಎಂದಿಗೂ ಮಾಸುವುದಿಲ್ಲ. ತಮ್ಮ ದೇಶಕ್ಕೆ ಮತ್ತು ತಮ್ಮ ಮುಂದಿನ
ಪೀಳಿಗೆಗೆ ಸ್ವಾತಂತ್ರ್ಯವನ್ನು ತರಲು ಹಿಂಜರಿಯದೇ ಹೋರಾಡಿದ ಆ ಎಲ್ಲಾ ವೀರ
ಚೇತನಗಳಿಗೆ ಹೃದಯಾಳದಿಂದ ನಮನಗಳು.

ಜೈ ಹಿಂದ್


About The Author

Leave a Reply

You cannot copy content of this page

Scroll to Top