ಅನುವಾದ ಸಂಗಾತಿ
ಜೆನ್ ಜಿ (Gen Z)
ತೆಲುಗು ಮೂಲ: ಕೋಟ್ಲ ವೆಂಕಟೇಶ್ವರ ರೆಡ್ಡಿ
ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀಮೋಹನ್



ಎಲ್ಲಾ ತಲೆಮಾರುಗಳೂ
ಗಾಣದ ಎತ್ತುಗಳಂತೆ ಕಾಲವನ್ನು ಹೊರಲೊಲ್ಲವು
ಅವು ಜಿರಳೆಗಳೇ ಆಗಿರಬಹುದು;
ಆದರೆ
ಒಂದೇ ಕಡೆ ಗುಂಪಾದರೆ
ಭೂಕಂಪದ ಕಂಪನಗಳೇ!
ಒಂದು ತಲೆಮಾರು ತರ್ಕಿಸಿ
ಒಮ್ಮತಕ್ಕೆ ಬಂದಿತೆಂದರೆ,
ಹಿಂದಿನ ಕಾಲದ ಮೌಲ್ಯಗಳೆಲ್ಲಾ
ತಲೆಕೆಳಗಾಗುವುದು ಖಂಡಿತ!
ಜನತಂತ್ರವು
ಅಪಾಯಕ್ಕೆ ಸಿಲುಕಿದಾಗ,
ಒಂದು ಇನ್‌ಸ್ಟಾಗ್ರಾಮ್ ಸಾಕು
ಸರಣಿ ಬಿರುಗಾಳಿಗಳನ್ನು
ಎಬ್ಬಿಸಲು!
ಬಲಿಷ್ಠ ಕೈಗಳು ಇನ್ನು ಮುಂದೆ
ಉಗುರು ಕಚ್ಚುತ್ತಾ ಕೂರುತ್ತವೆಂಬ
ಭ್ರಮೆ ಬೇಡ,
ಅವು ಅಡಿಪಾಯವನ್ನೇ ಅಗೆದು ನೋಡುತ್ತವೆ.
ಕೈಯಲ್ಲಿನ ಮೊಬೈಲ್‌ಗಳು
ಎಲ್ಲರನ್ನೂ ಒಂದಾಗಿಸುತ್ತವೆ!
ಒಂದೇ ಒಂದು ಕರೆ ಸಾಕು,
ಮೇಡಿಹಣ್ಣಿನಂತಿರುವ
ಓ ಜನತಂತ್ರವೇ,
ನಿನ್ನ ಗುಪ್ತ ತಂತುಗಳನ್ನು ಕಿತ್ತು,
ಬೆಂಕಿಯ ಜ್ವಾಲೆಗಳನ್ನು ಹಚ್ಚಲು!
ದೇಶದ ಬೆನ್ನೆಲುಬುಗಳು
ನೆಟ್ಟಗೆ ನಿಲ್ಲಲು ಯತ್ನಿಸುತ್ತಿರುವಾಗ,
ಬದುಕಲಾರದೆ ಬದುಕು ತಳ್ಳುತ್ತಿರುವ
ಹಿರಿಯ ತಲೆಮಾರೇ,
ಎದ್ದು ಚಪ್ಪಾಳೆ ತಟ್ಟಲೇಬೇಕು!!
ತೆಲುಗು ಮೂಲ: ಕೋಟ್ಲ ವೆಂಕಟೇಶ್ವರ ರೆಡ್ಡಿ
ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀಮೋಹನ್



