ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಭೂಪಟದ ಗೆರೆಗಳಲಿ
ರಕ್ತದ ಕಲೆಗಳ ಹಸಿವು,
ಅಧಿಕಾರದ ಅಮಲಿಗೆ
ಅನಾಥ ಮಗುವಿನ ಅಳುವೇ ನೈವೇದ್ಯ,

ಉಕ್ಕಿನ ಹಕ್ಕಿಗಳ ಅಬ್ಬರಕೆ
ಮಣ್ಣಾದವು ಬದುಕು,
ಗೆಲುವಿನ ಪಟಾಕಿ ಅಡಿಯಲ್ಲಿ
ಹೂತುಹೋದವು ಸಾವಿರ ಉಸಿರು,

ತುತ್ತು ಅನ್ನದ ಪಾತ್ರೆಯಲಿ
ಬೆಂದು ಹೋದವು ಮದ್ದು-ಗುಂಡು,
ಮನೆಮಠದ ನೆನಪುಗಳಿಗೆ
ಈಗ ಸ್ಮಶಾನವೇ ಕಡೆಯ ಉಡುಗೊರೆ,

ದೇಶಪ್ರೇಮದ ಘೋಷಣೆಯಲಿ
ಕಾಣದಾದವು ಒಲವಿನ ಕಣ್ಣು,
ಯುದ್ಧದ ಬೂದಿಯಲಿ ಉಳಿದದ್ದು
ಬರಿಯ ಬೂದುಬಣ್ಣದ ಮಣ್ಣು,

ಗಡಿ ದಾಟದ ಕನಸುಗಳಿಗೆ
ಬಾಂಬುಗಳೇ ಅಂತಿಮ ವಿರಾಮ,
ಗೆದ್ದವನ ಅಟ್ಟಹಾಸದಲಿ
ಸತ್ತವನ ಹೆಸರಿಗಿಲ್ಲ ಆರಾಮ,

ಬಂಕರಿನ ಕತ್ತಲಲಿ ಬಿಕ್ಕಳಿಸುತಿದೆ ಬಾಲ್ಯ,
ಸಮಾಧಿಯ ಮೇಲೆ ನಿಂತು ನಗುತ್ತಿದೆ ಸಾಮ್ರಾಜ್ಯ;
ಗೆದ್ದವನ ಇತಿಹಾಸದಲಿ ರಕ್ತದ ವಾಸನೆ,
ಸತ್ತವನ ಮನೆಯಲಿ ಬರಿ ಗೋಡೆಯ ಮೌನ ರೋಧನೆ….


About The Author

Leave a Reply

You cannot copy content of this page

Scroll to Top