ಕಾವ್ಯ ಸಂಗಾತಿ
“ಬೈಸಿಕಲ್ಲು” ವಿಶ್ವ ಸೈಕಲ್
ಸುಜಾತಾ ರವೀಶ್ ಮೈಸೂರು


ಹಿಂದೊಂದು ಕಾಲದ ಪ್ರತಿಷ್ಠೆಯ ಲಾಂಛನ
ಇಂದು ಹೆಸರೇ ಇದರದು ಬಡವರ ವಾಹನ
ಗಾಲಿಯ ಆವಿಷ್ಕಾರದೊಂದಿಗೆ ಇದರ ಉಗಮ
ಸೈಕಲೇರಿದರೆ ಎಷ್ಟು ಮಜಾ! ಆಹಾ ಆರಾಮ!
ಬೇಡದು ಹೆಚ್ಚಿನ ಖರ್ಚಿನ ಇಂಧನ
ಕೇಳದು ದುಬಾರಿ ಸರ್ವೀಸು ಉಸ್ತುವಾರಿಗಳ
ತುಳಿದು ತುಳಿದು ರಟ್ಟೆ ಕಾಲುಗಳಿಗೆ ಬಲ
ಹತ್ತಿರ ಸುಳಿಯದು ಬೊಜ್ಜು ರೋಗ ರುಜಿನ
ಇಲ್ಲ ಸೈಕಲ್ ಸವಾರಿ ಮಾಡಲು ಬಯಸದ ಮನಸು
ಕೆಲವರಿಗಂತೂ ಉಳಿದೇ ಬಿಟ್ಟಿದೆ ಇದಾಗಿ ಕನಸು
ಅಗೆಯುತ್ತಾ ಹೋದರೆ ಬಾಲ್ಯದ ನೆನಪುಗಳ ಗಣಿ
ಸಿಗುವುದು ಎಲ್ಲರಿಗೂ ಸೈಕಲ್ ಕಲಿಕೆಯ ಮೆಲುಕ ಮಣಿ
ಆಗುತ್ತಾ ಹೋದಂತೆ ಮನುಜರು ಸೋಮಾರಿ
ವಿರಳವಾಯಿತು ಸೈಕಲ್ ಉಪಯೋಗ ಸವಾರಿ
ವ್ಯಾಯಾಮ ಆರೋಗ್ಯ ನೀಡುತ್ತಿದ್ದ ಆ ಉಪಕಾರಿ
ಈಗ ತುಕ್ಕು ಹಿಡಿದ ಕಂಬಿಗಳ ಆಸ್ತಿಪಂಜರ ಬರೀ.
ಸಮಯದ ಪರಿವರ್ತನೆಯ ನಿಯಮಗಳ
ಸಾರುವಂತಿದೆ ನಶ್ವರ ಜೀವನದ ತತ್ವಗಳ
ಹೇಳುತ್ತಲಿದೆ ಏಳು ಬೀಳುಗಳ ಪಾಠಗಳ
ವಿಪರ್ಯಾಸಗಳ ವೈಚಿತ್ರ್ಯ ವೈರುಧ್ಯಗಳ ಕಥೆಗಳ
ಹೆಚ್ಚುತ್ತಿರುವ ಪರಿಸರ ಮಾಲಿನ್ಯಕ್ಕೆ ಇದು ವರ
ಕಾಣದ ಕೇಳದ ರೋಗಗಳಿಗೆ ಕೊಡುವ ಉತ್ತರ
ಬನ್ನಿ ಎಲ್ಲಾ ಉಪಯೋಗಿಸೋಣ ಸೈಕಲ್ಲು
ಕಡಿಮೆ ಮಾಡೋಣ ಪೆಟ್ರೋಲು ಡಾಕ್ಟರ ಬಿಲ್ಲು
ಸುಜಾತಾ ರವೀಶ್ ಮೈಸೂರು



