ಅಂಕಣ ಸಂಗಾತಿ ಜ್ಯೋತಿ ಡಿ . ಬೊಮ್ಮಾ ಮನದ ಮಾತುಗಳು ಜಿರಳೆಗಳು ಮತ್ತು ಶಿಕ್ಷಣ ವ್ಯವಸ್ಥೆ. ಈ ಸಂದರ್ಭದ ಮಾತುಗಳಂದ್ರ ಮಳಿ ಮತ್ತು ಜಿರಲೆಗಳು.ಮಳಿಗಾಲ ಶರು ಆಗಿ ಎರಡು ತಿಂಗಳಾದಮ್ಯಾಲ ಈಗ ನಮ್ಮ ಕಲ್ಬುರ್ಗಿ ಕಡಿ ಮಳಿ ಬರಲತದ. ಬಿತ್ತಿದ ಉದ್ದು ಹೆಸರು ಬೆಳೆಗಳು ಮಳಿ ಇಲ್ದೆ ಬಾಡಿ ಹೋದ್ವು.ಈಗ ಬಿತ್ತಿದ ತೊಗರಿ ಅತೀ ಮಳೆಯಿಂದ ಎನಾಗತದೋ , ಪ್ರತಿ ವರ್ಷ ಇದೇ ಕತಿ .ಅತಿವೃಷ್ಟಿ ಅಥವಾ ಅನಾವೃಷ್ಟಿ , ಆಹಾರ ಹೆಂಗಾದ್ರೂ ಮಾಡ್ಬಹುದು. ಬೋರ್ವೆಲ್ ಗಳದಾಗೆಲ್ಲ ಅಂತರ್ಜಲ ಮಟ್ಟ ಕುಸದು ನೀರು ಬತ್ತಿ ಹೋಗಿದ್ವು. ಇನ್ನೂ ಸ್ವಲ್ಪ ದಿನ ಮಳಿ ಬರದಿದ್ರ ನೀರಿನ ಬರಗಾಲ ಕಾಣಬೇಕಾಗಿತ್ತು.ಮಳಿ ಕರುಣೆ ತೋರಿಸ್ತು. ಇದರ ಜೋತೆಗೆ ನಮ್ಮ ದೇಶದ ಯುವ ಜಿರಲೆಗಳ ಹರತಾಳ ಒಂದು ರೀತಿ ಯಶಶ್ವಿ ಆಯ್ತು.ಈಗಿನ ಯುವ ಪಿಳಗಿ ಜೆನ್ ಝಿ ಗಳ ಒಂದು ರೀತಿ ಹಠಮಾರಿಗಳು.ಅವರ ವಿದ್ಯ ಬಗ್ಗೆ ಹೇಳಬೆಕಂದ್ರ ಈಗ ಎಲ್ಲರೂ ಓದಿದವ್ರೆ.ಓದಲಾರದವ್ರು ಕೂಡ ಸೋಸಿಯಲ್ ಮಿಡಿಯಾದ ಪ್ರಭಾವದಿಂದ ವುದ್ಯಾವಂತ್ರೆ.ಯಾಕಂದ್ರ ಇಂಗ್ಲಿಷ್ ಓದಕ್ಕ ಬರೆಯಕ್ಕ ಬರದಿದ್ರೂ ಇವರು ಪೋನ್ ನಲ್ಲಿ ಇಂಗ್ಲಿಷ್ ಒದ್ತಾರ.ಮತ್ತ ಟೈಪ್ ಕೂಡ ಮಾಡತಾರ.ಇದು ಝನ್ ಝಿ ಗಳ ಕರಾಮತ್ತು. ನಮ್ಮ ನ್ಯಾಯವಾದುಗಳು ಈಗಿನ ನಿರುದ್ಯೋಗಿ ಯುವ ಪಿಳಿಗಿ ಜಿರಲೆಗಳಂತೆ ಎಲ್ಲರ ಮ್ಯಾಲ ಎಗರಿ ಬಿಳತಾರ ಅಂತ ಹೆಳಿದ್ರು.ಆದ್ರ ಅದು ಸುಳ್ಳು. ಝನ್ ಝಿ ಗಳು ತಮ್ಮ ಪಾಡಿಗಿ ತಾವು ಯಾವಾಗ್ಲೂ ಪೋನ್ ನಲ್ಲಿ ಮುಳಗಿರತಾವ.ಅವರಿಗೆ ಭವಿಷ್ಯದ ಬಗ್ಗೆ ಅತೀ ನಿರೀಕ್ಷೆ ಗಳಿಲ್ಲ. ಯಾರ ಜೋತೆ ಹೆಚ್ಚು ಮಾತಿಲ್ಲ , ಎಕಾಂಗಿಯಾಗೆ ಇರತಾರ.ಮನಿಗಿ ಯಾರಾದ್ರೂ ಅಥಿತಿ ಗಳು ಬಂದ್ರ ಸುಮ್ನ ಮಾರಿ ತೋರ್ಸಿ ರೂಂ ನೊಳಗ ಹೋಗಿ ಸೇರಿಕೊಂಡು ಬಿಡತಾವ.ಅವ್ರು ಗೆಳೆಯರೊಂದಿಗೆ ಆಪ್ತ ಆಗಿ ಇರುವಷ್ಟು ಹೆತ್ತವರೊಂದಿಗೂ ಇರಲ್ಲ.ತಮ್ಮ ಮನದಾಳ ಗೂಗಲ್ ಅಥವಾ ಅಲೆಕ್ಸಾ ಗ ಹೇಳತಾರ ಹೊರತಾಗಿ ಹೆತ್ತವರಿಗಿ ಹೇಳಲ್ಲ. ಆದ್ರ ಅವರಿಗಿ ಒತ್ತಾಯಿಸಿದ್ರ ದಬ್ಬಾಳಿಕಿ ಮಾಡಿದ್ರ , ಕಿಡಿಕಿಡಿ ಆಗತಾರ. ಆತ್ಮಹತ್ಯೆಗಳಂತ ನಿರ್ಧಾರ ಕ್ಕೂ ಕೂಡ ಯುವ ಜನ ಅಂಜತಿಲ್ಲ.ಇದು ಶೋಚನೀಯ ವಿಷಯ. ಈಗಿನ ಯುವ ಜನ ಗೌಪ್ಯತೆ ಇಷ್ಟ ಪಡತಾರ.ಯಾರೊಂದಿಗೂ ಹೆಚ್ಚು ಎನನ್ನು ಹಂಚಿಕೊಳ್ಳಲ್ಲ. ಎಕಾಂತ ಮತ್ತು ಪೋನ್ ಗಳೆ ಅವ್ರ ಆಪ್ತ ಸಂಗಾತಿಗಳು. ಇನ್ನೂ ಶಿಕ್ಷಣದ ವಿಷಯ ಬಂದ್ರೆ ಯುವ ಜನ ಅದರ ಬಗ್ಗೆ ಸಂತುಷ್ಟರಾಗಿಲ್ಲ.ಎಷ್ಟೇ ಓದಿ ಎರಡೆರಡು ಡಿಗ್ರಿ ತಗೊಂಡ್ರು ಉದ್ಯೋಗದ ಭರವಸೆಗಳಿಲ್ಲ.ಗ್ರಾಮೀಣ ಭಾಗದಲ್ಲಿ ಓದಿದ ವಿದ್ಯಾರ್ಥಿಗಳು ಕಾರ್ಪೊರೇಟ್ ನೌಕರಿಗಾಗಿ ದೊಡ್ಡ ಊರು ಸೇರಿ ಪಟ್ಟಣದವರೊಂದಿಗೆ ಸೆಣಸಿ ತಮ್ಮ ನೌಕರಿ ಉಳಿಸಿಕೊಳ್ಳಲು ಹರಸಾಹಸ ಪಡಬೇಕು.ಇನ್ನೂ ಸರ್ಕಾರಿ ನೌಕರಿ ಸೇರಬೇಕಾದ್ರ ವಶೀಲಿ ಅಥವಾ ದುಡ್ಡಿನ ಆಧಾರ ಬೇಕು. ಸರ್ಕಾರಿ ನೌಕರಿ ಸಿಕ್ರು ನೆಮ್ಮದಿ ಇಲ್ಲ.ವ್ಯವಸ್ಥೆ ವಿರುದ್ದ ಹೋಗಲಾರದೆ , ತಮ್ಮಿಷ್ಟದಂತೆ ಕೆಲಸ ಮಾಡ್ಲಿಕ್ಕಾಗ್ದೆ ಅಶಾಂತಿ ಯಲ್ಲೆ ಇರತಾರ. ಶಿಕ್ಷಣ ಯುವಜನಕ್ಕೆ ಯಾವ ರೀತಿ ಉಪಯೋಗ ಆಗ್ತಾ ಇದೆ ಅಂತ ಚಿಂತಿ ಆಗತದ.ಬಿ ಎ . ಬಿ ಕಾಂ ನಂತಹ ಡಿಗ್ರಿ ಮಾಡಿ ಮುಂದೆ ಏನ್ ಮಾಡ್ಬೇಕು . ಅದಕ್ಕ ಎಲ್ರೂ ಡಾಕ್ಟರ್ ಇಂಜಿನಿಯರ್ ಗಳೆ ಆಗಬೇಕು ಅಂತ ಹೆತ್ತವರ ಆಸೆ.ಮಕ್ಕಳಿಗಿ ಇಷ್ಟ ಇರಲಿ ಬಿಡ್ಲಿ , ಆಸ್ತಿ ಮಾರಿ ಸಾಲ ಮಾಡಿಯಾದ್ರೂ ಮಕ್ಕಳಿಗಿ ಡಾಕ್ಟರ್ ಇಂಜಿನಿಯರ್ ಮಾಡ್ಬೇಕು ಎಂಬುದೇ ಹೆತ್ತವರ ಉದ್ದೇಶ. ಡಾಕ್ಟರ್ ಇಂಜಿನಿಯರ್ ಓದಿದವ್ರು ಈಗ ನಿರುದ್ಯೋಗಿಗಳು.ಇನ್ನೂ ಆರ್ಟ್ಸ್ , ಕಾಮರ್ಸ್ ಮಾಡಿದವ್ರ ಪಾಡು ಕೆಳೋದೇ ಬ್ಯಾಡ.ಇಂತಹ ಸಂದರ್ಭದಾಗ ಯುವಜನತೆಯ ಮನಸ್ಥಿತಿ ಏನಾಗಿರತದ..! ಮಾಡಲು ಕೆಲಸ ಇಲ್ದೆ ಭವಿಷ್ಯದ ಬಗ್ಗೆ ನಿರುತ್ಸಾಹಿತರಾಗತಾರ.ಇದಕ್ಕ ಯಾರು ಹೊಣೆ..! ಈಗಿನ ಯುವ ಪಿಳಿಗಿ ಓದುವ ವಿಷಯಕ್ಕೆ ಎಲ್ರು ಜಾಣರೆ ಇದ್ದಾರ.ಹಗಲೂ ರಾತ್ರಿ ಓದ್ತಾರ.ಡಾಕ್ಟರ್ ಇಂಜಿನಿಯರ್ ಆಗ್ಲೇಬೇಕು ಅಂತ ಅತೀ ಆಕಾಂಕ್ಷೆ ಇಟ್ಟುಕೊಂಡು ಓದ್ತಾರ.ಅಂತದ್ದರಲ್ಲಿ ಈ ಪೇಪರಗಳು ಪರೀಕ್ಷೆಗೆ ಮೊದಲೆ ಸೋರಿ ಕಣ್ಣಾಗ ಎಣ್ಣಿ ಹಾಕ್ಕೊಂಡು ಓದಿದವ್ರಿಗೆ ಹತಾಶ ಭಾವ ಉಂಟುಮಾಡತದ.ಸಹಜ , ಒಂದಲ್ಲ ಎರಡಲ್ಲ , ಮ್ಯಾಲಿಂದ ಮ್ಯಾಲ ಪೇಪರ್ ಲೀಕ್ ಆಗೋದು.ಪರಿಕ್ಷೆಗಳು ಮತ್ತ ನಡೆಯೊದು ಇವೆಲ್ಲ ವಿದ್ಯಾರ್ಥಿಗಳಿಗಿ ಒತ್ತಡ ಉಂಟು ಮಾಡತದ. ಭವಿಷ್ಯದ ಬಗ್ಗೆ ಹತಾಶರಾಗಿ ಆತ್ಮಹತ್ಯೆ ಗೆ ಶರಣಾಗತಿದ್ದಾರ. ಇದಕ್ಕೆಲ್ಲ ಯಾರು ಹೊಣೆ..! ಸರ್ಕಾರ. ಯುವಕರಿಗೆ ಉದ್ಯೋಗವಕಾಶಗಳನ್ನು ಮೊದಲು ಒದಗಿಸಬೇಕು.ಒಂದರನಂತರ ಒಂದು ಹೋಸ ಹೋಸ ಕಾಲೇಜ್ ಗಳಿಗಿ ಪರವಾನಗಿ ಕೊಟ್ಡು ವಿದ್ಯಾವಂತ ನಿರಿದ್ಯೋಗಿಗಳನ್ನು ಸರ್ಕಾರ ಸೃಷ್ಟಿ ಮಾಡಲತದ.ಹೆಚ್ಚು ಹೆಚ್ಚು ಶಿಕ್ಷಣ ಸಂಸ್ಥೆ ಗಳು ಬೆಳೆದಂದ ಉದ್ಯೋಗ ಗಳನ್ನು ಒದಗಿಸ್ರಿ. ಡಿಗ್ರಿ ಕೊಡೊದಷ್ಟೆ ನಮ್ಮ ಕೆಲಸ ಅಂತ ಸರ್ಟಿಫಿಕೇಟ್ ಕೊಟ್ಟು ಕಳಸಿದ್ರ.. ಹೊರಗ ಬಂದಮ್ಯಾಲ ಯುವಜನತೆ ಏನು ಮಾಡ್ಬೇಕು..! ಇದಕ್ಕೆಲ್ಲ ಉತ್ತರಾನೆ ಇಲ್ಲ ಬಿಡ್ರಿ. ಈಗ ಅತೀ ವಿದ್ಯಾವಂತ್ರೆ ಹೆಚ್ಚು ಆತ್ಮಹತ್ಯೆ ಗಳಿಗೆ ಶರಣಾಗತಿದ್ದಾರ.ವಿದ್ಯ ವ್ಯಕ್ತಿತ್ವ ವಿಕಸನ ಮಾಡುವ ಬದಲಾಗಿ ವ್ಯಕ್ತಿತ್ವವನ್ನು ಹತಾಶೆಗೊಳಿಸ್ತಿದೆ.ಹಂಗಾದ್ರೆ ಮುಂದಿನ ಪಿಳಿಗೆಯ ಭವಿಷ್ಯ..! ಇಂತಹ ವಿಷಯಗಳು ಮಾತಾಡ್ಬೇಕಾದ ಸರ್ಕಾರ ಮೌನವಾಗಿದ್ರ ಯುವಜನ ದಂಗೆ ಏಳಲಾರಧ ಮತ್ತೆನು ಮಾಡ್ಬೇಕು. ಪ್ರಶ್ನೆ ಪತ್ರಿಕೆ ಸೋರಿಕೆ ಎಲ್ಲಾ ಸರ್ಕಾರದ ಅವಧಿಯಲ್ಲೂ ಆಗಿರಬಹುದು.ಅದಕ್ಕಾಗಿ ದ್ವನಿ ಎತ್ತುವ ಸಮಯ ಈಗ ಬಂದಿತ್ತು.ಆ ವಿಷಯದ ಚರ್ಚೆಗಾಗಿ ಸರ್ಕಾರದ ಸಿದ್ದವಿರಲಾರದಕ್ಕ ಪರಿಸರ ಹೋರಾಟಗಾರ ಸೋನ್ಂ ವಾಂಗ್ಚೂಕ್ ವಿದ್ಯಾರ್ಥಿ ಗಳ ಪ್ರತಿನಿಧಿ ಯಾಗಿ ಉಪವಾಸ ಸತ್ಯಾಗ್ರಹ ಆರಂಬಿಸಿದ್ರು. ಆಗಲಾದ್ರೂ ಸರ್ಕಾರ ಅವರೊಂದಿಗೆ ಚರ್ಚೆಗೆ ಬರಬೇಕಾಗಿತ್ತು.ಒಬ್ಬ ವ್ಯಕ್ತಿ ದೇಶದ ವಿಷಯದ ಬಗ್ಗೆ ಉಪವಾಸ ಸತ್ಯಾಗ್ರಹ ಮಾಡತಿದ್ರೆ ಸರ್ಕಾರದ ಕರ್ತವ್ಯ ಆಗತಿರದ ಆ ವ್ಯಕ್ತಿಗೆ ಭೇಟಿ ಮಾಡಿ ಸಮಸ್ಯೆ ಆಲಿಸಿ ಅದರ ಪರಿಹಾರಕ್ಕಾಗಿ ನಾವು ನೀವು ಕೂಡಿ ಪ್ರಯತ್ನಿಸೋಣ ಎಂದು ಹೇಳೊದು. ಆದ್ರ ನಮ್ಮ ಸರ್ಕಾರ ಇದರ ಬಗ್ಗೆ ಚರ್ಚಿಸೋದು ಇರಲಿ.ಒಬ್ಬ ವ್ಯಕ್ತಿ ಉಪವಾಸ ಮಾಡಿ ಸಾಯುವ ಸ್ಥಿತಿಗೆ ಬರತಿದ್ದಾನ ಅಂತ ಗೊತ್ತಿದ್ದೂ ಆ ವಿಷಯದ ಬಗ್ಗೆ ಚಕಾರ ಎತ್ತದೆ ಇರೊದ್ರೀಂದ ಜನರ ಅದರಲ್ಲೂ ಯುವಜನರ ವಿರೋಧ ಎದಿರಿಸಬೇಕಾಯ್ತು. ನಮ್ಮ ದೇಶದ ಬಿಜೆಪಿ ಸರ್ಕಾರಕ್ಕೆ ಯಾಕ ಇಷ್ಟು ಆತ್ಮ ಪ್ರತಿಷ್ಟೆ..! ನಾವು ಏನು ಮಾಡಿದ್ರು ನಡಿತದ ಎಂಬ ದೋರಣೆ. ನಾವು ಮಾಡಿದ್ದೆಲ್ಲ ಸರಿ ಇರತದ ಎಂಬ ಅತೀ ಆತ್ಮ ವಿಶ್ವಾಸ. ಇಂಥ ಸರ್ವಾಧಿಕಾರಿ ದೋರಣೆ ನಮ್ಮ ದೇಶದ ಯುವಜನರನ್ನ ರೊಚ್ಚಿಗೆಬ್ಬಿಸ್ತು. ಮೊದಲೆ ಶಿಕ್ಷಣ ವ್ಯವಸ್ಥೆ ಯಿಂದ , ನಿರುದ್ಯೋಗ ದಿಂದ ಒದ್ದಾಡತಿರೋ ವಿದ್ಯಾರ್ಥಿಗಳು , ತಮಗಾಗಿ ಉಪವಾಸ ಸತ್ಯಾಗ್ರಹ ಮಾಡುವರ ಪರ ಆದ್ರು.ಸರ್ಕಾರದ ವಿರುದ್ದ ದಂಗೆ ಎದ್ರು. ಸತ್ಯಾಗ್ರಹ ಗಳಲ್ಲಿ ಮುಷ್ಕರ ಗಳಲ್ಲಿ ದಂಗೆಗಳಾಗತ್ತವ.ಕೆಲವು ದಂಗೆಕೋರರು ಇಂತಹ ಅವಕಾಶ ಬಳಸಿಕೊಳ್ಳಲಿಕ್ಕೆ ಕಾಯ್ತಿರತಾರ. ವಿದ್ಯಾರ್ಥಿ ಗಳು ಮಾಡತಿರೋ ಮುಷ್ಕರ ದಲ್ಲಿ ಕಿಡಿಗೇಡಿಗಳು ಪೋಲಿಸ್ ರ ಮೇಲೆ ಹಲ್ಲೆ ಮಾಡಿದಕ್ಕೆ ವಿದ್ಯಾರ್ಥಿ ಸಮೂಹದ ಮ್ಯಾಲ ಲಾಠಿ ಚಾರ್ಜ್ ಮಾಡಿ ಹೊಡೆಯೊದು ಅಮಾನುಷ ವರ್ತನೆ. ಹೊಡೆತ ತಿಂದ ವಿದ್ಯಾರ್ಥಿಗಳು ಮತ್ತಷ್ಟು ದಂಗೆ ಎದ್ರು.ಇದನ್ನು ನಿತಂತ್ರಿಸಲಿಕ್ಕೆ ಪೋಲಿಸರು ಮತ್ತಷ್ಟು ಲಾಠಿ ಚಾರ್ಜ್ ಮಾಡಿದ್ರು.ಈ ಘರ್ಷಣೆ ಗೆ ಸರ್ಕಾರ ಹೊಣೆ.ನಮ್ಮ ಪ್ರಧಾನ ಮಂತ್ರಿ ಯ ಮೌನದಿಂದಲೇ ಇಷ್ಟೆಲ್ಲಾ ಆಯ್ತು.ಇನ್ನೂ ಮುಷ್ಕರ ದಲ್ಲಿ ಯುವಕ ಯುವತಿಯರ ವರ್ತನೆಗಳ ಬಗ್ಗೆ ಎಲ್ಲಾ ಸಕಾರಾತ್ಮಕವಾಗೆ ಹೇಳಲಿಕ್ಕಾಗಲ್ಲ.ಯುವ ಪಿಳಗಿ ಅಂದ್ರ ಒಂದು ರೀತಿ ಕಪಿಗಳಂಗ.ಕೆಣಕಿದ್ರ ಮೈಮ್ಯಾಲ ಬರತಾವ.ತಮಗಾದ ಅನ್ಯಾಯಕ್ಕೆ ಎನಾದ್ರೂ ಸಮಾಧಾನ ಆಗುವಹಂಗ ಮಾತಾಡಿ ರಮಿಸ್ತಾರ ನಮ ಪ್ರಧಾನ ಮಂತ್ರಿಗಳು ಅಂತ ಆಪೇಕ್ಕಾ ಪಟ್ರ ತಮಗ ಲಾಠಿಯಿಂದ ಹೊಡ್ಸತಾರ ಅಂತ ಮತ್ತಿಟು ಸಿಟ್ಟಾದ್ವು. ಆಗ ನಮ್ಮ ಪ್ರ ಮಂ ಗಳಿಗಿ ಗೊತ್ತಾಯ್ತು.ಈ ಝನ್ ಝಿ ಪಿಳಗಿ ಲಾಠಿ ಏಟಗಿ ಬಗ್ಗವು ಅಲ್ಲ.ಇವಕ್ಕೆ ಪ್ರೀತಿಯಿಂದ ಅವ್ರ ಭಾಷಾದಾಗೆ ಒಲಿಸಿಕೊಳ್ಳಬೇಕು ಅಂತ ಪೋನ್ ಮಾರಿ ಮುಂದ ಹಿಡಕೊಂಡು ರಾತ್ರಿ ಅವರಾತ್ರಿ ರೀಲ್ ಮಾಡಿ ಝನ್ ಝಿ ಆಗಲಿಕ್ಕ ಪ್ರಯತ್ನಿಸಿದ್ರು.ಇದೇ ಮೊದಲೆ ಮಾಡಿದ್ರ ಆಗ್ತಿತ್ತು..ಆದ್ರ ನಾನೇ ಶ್ರೇಷ್ಠ ಅಂದಕೊಳ್ಳೋರಿಗೆ ಸಮಯನೆ ಪಾಠ ಕಲಿಸ್ತದಂತ. ಜ್ಯೋತಿ ಡಿ ಬೊಮ್ಮಾ
ಧಾರಾವಾಹಿ ಸಂಗಾತಿ ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ ರಾಜಕೀಯ ಜೀವನ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯು ೧೯೫೧ ಅಕ್ಟೋಬರ್ 25ರಿಂದ ೧೯೫೨ರ ಫೆಬ್ರವರಿ 21ರವರೆಗೆ ನಡೆಯಿತು. ಇದು ಸ್ವಾತಂತ್ರ್ಯಾನಂತರದ ಮೊದಲ ರಾಷ್ಟ್ರೀಯ ಚುನಾವಣೆಯಾಗಿದ್ದು… ರಾಷ್ಟ್ರೀಯ ಕಾಂಗ್ರೆಸ್ ಭರ್ಜರಿ ಜಯದ ತಯಾರಾಯಲ್ಲಿ ಇತ್ತು. ಸ್ವಾತಂತ್ರ ಭಾರತದ ಪ್ರಥಮ ಸಾರ್ವತ್ರಿಕ ಚುನಾವಣೆ ನಡೆದಾಗ ದೇಶದಾದ್ಯಂತ ರಾಜಕೀಯ ಚಟುವಟಿಕೆಗಳು ಅತಿಯಾಗಿ ಚುರುಕುಗೊಂಡಿದ್ದವು. ಆ ಸಂದರ್ಭದಲ್ಲಿ ಜಯದೇವಿ ತಾಯಿಯವರು ಕೂಡ ಅನೇಕ ರಾಷ್ಟ್ರೀಯ ನಾಯಕರಂತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಪಕ್ಷದ ಕಾರ್ಯಕರ್ತೆಯಾಗಿ,…. ಪ್ರಮುಖ ನಾಯಕರು ಮತ್ತು ಜನರ ನಡುವಿನ ಕೊಂಡಿಯಾಗಿ ಸೇವೆ ಸಲ್ಲಿಸಿದರು. ಸಂಘಟನಾ ಸಾಮರ್ಥ್ಯ, ಪ್ರಾಮಾಣಿಕತೆ ಮತ್ತು ಜನಪರ ಕಾಳಜಿಯಿಂದಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ವಿಶ್ವಾಸವನ್ನು ಗಳಿಸಿದ್ದರು. ಆ ಸಮಯದಲ್ಲಿ ಮಹಾರಾಷ್ಟ್ರ ಪ್ರಾಂತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದ ಹಿರಿಯ ನಾಯಕರು ಜಯದೇವಿ ತಾಯಿಯವರ ಕಾರ್ಯಕ್ಷಮತೆಯನ್ನು ಗಮನಿಸಿ, ಅವರನ್ನು ಚುನಾವಣೆಗೆ ಸ್ಪರ್ಧಿಸಲು ಆಹ್ವಾನಿಸಿದರು. ರಾಜಕೀಯವಾಗಿ ಉಜ್ವಲ ಭವಿಷ್ಯ ಮತ್ತು ಮಂತ್ರಿ ಸ್ಥಾನವೂ ಅವರಿಗೆ ಸುಲಭವಾಗಿ ದೊರೆಯಬಹುದಾಗಿತ್ತು.ಅಂದಿನ ಕೆಲವು ನಾಯಕರು, ಕರ್ನಾಟಕದ ಪರವಾಗಿ ಅವರು ನಡೆಸುತ್ತಿದ್ದ ಹೋರಾಟವನ್ನು ಮೃದುಗೊಳಿಸಲು ಹಾಗೂ ಅವರನ್ನು ತಮ್ಮ ಮಂತ್ರಿಮಂಡಲದಲ್ಲಿ ಸೇರಿಸಿಕೊಳ್ಳುವ ಯೋಚನೆಯನ್ನೂ ಮಾಡಿಕೊಂಡಿದ್ದರು ಎನ್ನಲಾಗುತ್ತದೆ. ಜಯದೇವಿ ತಾಯಿಯವರು ಅಧಿಕಾರದ ಆಸೆಗೆ ಮಣಿಯುವ ವ್ಯಕ್ತಿತ್ವ ಹೊಂದಿರಲಿಲ್ಲ. ಅವರ ದೃಷ್ಟಿಯಲ್ಲಿ ಹುದ್ದೆ, ಅಧಿಕಾರ ಮತ್ತು ವೈಯಕ್ತಿಕ ಗೌರವಕ್ಕಿಂತ ನಾಡು-ನುಡಿ ಮತ್ತು ಜನರ ಹಿತವೇ ಶ್ರೇಷ್ಠವಾಗಿತ್ತು. ಆದ್ದರಿಂದ ಚುನಾವಣೆಗೆ ಸ್ಪರ್ಧಿಸುವಂತೆ ಕೇಳಿದಾಗ ಅವರು ನೀಡಿದ ಉತ್ತರ ಅವರ ವ್ಯಕ್ತಿತ್ವದ ಎತ್ತರವನ್ನು ತೋರಿಸುತ್ತದೆ.ಅವರು ಸ್ಪಷ್ಟವಾಗಿ ಹೀಗೆ ಹೇಳಿದರು…. “ರಾಜ್ಯಸಭೆಯಲ್ಲಿ ಸೋಲ್ಲಾಪುರ ಕರ್ನಾಟಕದ ಭಾಗವಾಗಲೇಬೇಕು ಎಂದು ಧೈರ್ಯವಾಗಿ ಹೇಳುವ ಸಂಪೂರ್ಣ ಸ್ವಾತಂತ್ರ್ಯ ಮತ್ತು ಅನುಮತಿ ನನಗೆ ಇದ್ದರೆ ಮಾತ್ರ ನಾನು ಚುನಾವಣೆಗೆ ಸಹಕರಿಸಲು ಸಿದ್ಧ.”ಈ ಮಾತುಗಳು ಜಯದೇವಿ ತಾಯಿಯವರ ಅಚಲ ನಿಲುವಿಗೆ ಸಾಕ್ಷಿಯಾಗಿವೆ. ಅವರಿಗೆ ಚುನಾವಣೆಯಲ್ಲಿ ಗೆಲ್ಲುವುದು ಅಥವಾ ಮಂತ್ರಿಯಾಗುವುದು ಮುಖ್ಯವಲ್ಲ……ಗಡಿ ಭಾಗದ ಕನ್ನಡಿಗರ ನ್ಯಾಯಸಮ್ಮತ ಹಕ್ಕುಗಳ ಪರವಾಗಿ ಸಂಸತ್ತಿನಲ್ಲಿಯೂ ಧ್ವನಿ ಎತ್ತಲು ಅವಕಾಶ ದೊರೆಯಬೇಕೆಂಬುದು ಅವರ ಏಕೈಕ ಆಶಯವಾಗಿತ್ತು.ಜಯದೇವಿ ತಾಯಿಯವರು ಅಧಿಕಾರಕ್ಕಾಗಿ ತಮ್ಮ ತತ್ವಗಳನ್ನು ಎಂದಿಗೂ ಬಿಟ್ಟುಕೊಡದ ನಾಯಕಿಯಾದರು. ಅವರ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಮುಖ್ಯ ಕಾರಣವೆಂದರೆ ಗಡಿ ಭಾಗದ ಕನ್ನಡಿಗರ ಹಕ್ಕುಗಳ ರಕ್ಷಣೆ… ಕನ್ನಡಿಗರ ಆಸ್ತಿ ತ್ವದ ರಕ್ಷಣೆ ಆಗಬೇಕು ಅಖಂಡ ಕರ್ನಾಟಕದ ನಿರ್ಮಾಣ ಮಾಡುವ ಉದ್ದೇಶವಾಗಿತ್ತು. ಕರ್ನಾಟಕದವರ ಪರವಹಿಸಿ ಮಾತನಾಡುತ್ತಿದ್ದ ಜಯದೇವಿತಾಯಿಯವರನ್ನು ಶಾಂತಗೊಳಿಸಲು ಆಗಿನ ಎಂಪಿ ಸಿಸಿ ಅಧ್ಯಕ್ಷರಾಗಿದ್ದ ಹಿರೇಯವರು ಚುನಾವಣೆಯಲ್ಲಿ ನಿಲ್ಲಲು ಜಯದೇವಿ ತಾಯಿಯವರಿಗೆ ಕೇಳಿದರು. ಜಯದೇವಿತಾಯಿಯವರು ಸ್ಪರ್ಧಿಸಿಸಲು ಒಪ್ಪದಿದ್ದಾಗ ಹೀರೆಯವರು..”ತಾಯಾಯವರೆ ನೀವು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ನೀವು ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸದಿದ್ದರೆ, ನಿಮ್ಮ ಅಭಿಪ್ರಾಯದಂತೆ ಜನಸೇವೆಗೆ ಸಮರ್ಥರಾಗಿರುವ ವ್ಯಕ್ತಿಯೊಬ್ಬರನ್ನು ಸೂಚಿಸಿ” ಎಂದು ಕೇಳಿದರು. ಆಗ ಜಯದೇವಿ ತಾಯಿಯವರು ಯಾವುದೇ ವೈಯಕ್ತಿಕ ಲಾಭ ಅಥವಾ ರಾಜಕೀಯ ಲೆಕ್ಕಾಚಾರವಿಲ್ಲದೆ *ಮಹಾರಾಣಿ ನಿರ್ಮಲಾರಾಜೆ ಭೋಸಲೆ ಅವರ ಹೆಸರನ್ನು ಶಿಫಾರಸು ಮಾಡಿದರು.ನಿರ್ಮಲಾರಾಜೆ ಭೋಸಲೆ *ಅವರು ಅಕ್ಕಲಕೋಟೆ ಸಂಸ್ಥಾನದ ಮಹಾರಾಣಿಯಾಗಿದ್ದರು. ಅರಮನೆಯ ವೈಭವದ ಜೀವನದಲ್ಲಿದ್ದವರು…. ಅವರಲ್ಲಿದ್ದ ನಾಯಕತ್ವತೆ,ಸಂವೇದನಾ ಶೀಲತೆ ಮತ್ತು ಸೇವಾ ಮನೋಭಾವವು ಸಮಾಜದ ಅಭಿವೃದ್ಧಿಗೆ ಬಳಕೆಯಾಗಬೇಕೆಂದು ಜಯದೇವಿ ತಾಯಿಯವರು ನಿರ್ಮಲಾ ರಾಜಯೆವರಿಗೆ ಹೇಳಿದರು “ಅರಮನೆಯ ನಾಲ್ಕು ಗೋಡೆಗಳೊಳಗೆ ಜೀವನವನ್ನು ಸೀಮಿತಗೊಳಿಸದೆ, ಜನರ ನಡುವೆ ಬೆರೆತು ಅವರ ಕಷ್ಟ-ಸುಖಗಳನ್ನು ಅರಿಯಬೇಕು” ಎಂದು ಅವರು ನಿರ್ಮಲಾ ರಾಜೆಯವರನ್ನು ಪ್ರೇರೇಪಿಸಿದರು.ಜಯದೇವಿ ತಾಯಿಯವರ ಪ್ರೋತ್ಸಾಹದಿಂದ ನಿರ್ಮಲಾ ರಾಜೆಯವರು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ ಶಿಕ್ಷಣ, ಮಹಿಳಾ ಕಲ್ಯಾಣ, ಸಾರ್ವಜನಿಕ ಸೇವೆ ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸಮಾಜಸೇವೆಯ ಅನುಭವವು ಅವರಿಗೆ ಜನಜೀವನದ ನೈಜ ಸಮಸ್ಯೆಗಳ ಪರಿಚಯವನ್ನು ನೀಡಿತು. ಈ ಸಾಮಾಜಿಕ ಸೇವೆಯ ಪಯಣವೇ ಮುಂದೆ ಅವರನ್ನು ರಾಜಕೀಯ ಕ್ಷೇತ್ರಕ್ಕೂ ಕೊಂಡೊಯ್ದಿತು. ಜನಸೇವೆಯನ್ನು ಇನ್ನಷ್ಟು ವ್ಯಾಪಕವಾಗಿ ಮಾಡಲು ರಾಜಕೀಯವೂ ಒಂದು ಸಾಧನ ಎಂಬ ಅರಿತಿದ್ದ ಜಯದೇವಿ ತಾಯಿಯವರು ನಿರ್ಮಲಾರಾಜೆ ಭೋಸಲೆ ಅವರ ನಾಯಕತ್ವದ ವಿಶಿಷ್ಟ ಗುಣ ಔದಾರ್ಯವೆಂದು ತೋರಿಸಿಕೊಟ್ಟರು. ಸಮಾಜಕ್ಕೆ ಉತ್ತಮ ನಾಯಕತ್ವ ನೀಡಬಲ್ಲ ವ್ಯಕ್ತಿಗಳನ್ನು ಗುರುತಿಸಿ, ಅವರನ್ನು ಬೆಳೆಸುವ ಮಹತ್ತರ ಕಾರ್ಯವನ್ನು ಮಾಡಿದರು. ನಿಜವಾದ ನಾಯಕ ಎಂದರೆ ಸ್ವತಃ ಮುಂದೆ ನಿಲ್ಲದೇ ಮತ್ತೊಬ್ಬ ನಾಯಕನನ್ನು ರೂಪಿಸುವ ಸಾಮರ್ಥ್ಯವೂ ಹೊಂದಿರಬೇಕು ಎಂಬುದಕ್ಕೆ ಜಯದೇವಿ ತಾಯಿಯವರ ಜೀವನವೇ ಅತ್ಯುತ್ತಮ ಉದಾಹರಣೆಯಾಗಿದೆ. ಕನ್ನಡ ನಾಡಿನ ಗಡಿಭಾಗಗಳ ಬಗ್ಗೆ ಅವರಿಗೆ ಅಪಾರವಾದ ಕಾಳಜಿ. ಅಕ್ಕಲಕೋಟ, ಸೊಲ್ಲಾಪುರ ಸೇರಿದಂತೆ ಕನ್ನಡಿಗರ ಬದುಕು, ಭಾಷೆ ಮತ್ತು ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದ್ದ ಪ್ರದೇಶಗಳು ಕರ್ನಾಟಕದೊಂದಿಗೆ ಉಳಿಯಬೇಕು ಎಂಬುದು ಅವರ ಆಂತರಿಕ ಬಯಕೆಯಾಗಿತ್ತು. ಅಕ್ಕಲಕೋಟ ಮತ್ತು ಸೊಲ್ಲಾಪುರ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಗೊತ್ತುವಳಿ ತರಲು ನಿರ್ಮಲ ರಾಜಯೆಅವರು ಕಾರಣರಾದರು ಎಂಬ ಸುದ್ದಿ ಜಯದೇವಿ ತಾಯಿಯವರ ಕಿವಿಗೆ ಬಿದ್ದಾಗ, ಅದು ಅವರ ಮನಸ್ಸಿನ ಮೇಲೆ ಬಿದ್ದ ದೊಡ್ಡ ಹೊಡೆತವಾಗಿತ್ತು.ಯಾಕೆಂದರೆ, ತಾವು ನಂಬಿ ಬೆಳೆಸಿದ ವ್ಯಕ್ತಿಯೇ ತಮ್ಮ ಮನಸ್ಸಿಗೆ ವಿರುದ್ಧವಾದ ನಿಲುವು ತೆಗೆದುಕೊಂಡಿದ್ದಾರೆ ಎಂಬ ನೋವು ಒಂದು ಕಡೆಯಾಯಿತು. “ನಾವು ಯಾರಿಗಾಗಿ ಹೋರಾಡಿದೆವು?ಯಾರನ್ನು ನಂಬಿ ಮುಂದೆ ಕಳುಹಿಸಿದೆವು?ನಮ್ಮ ನಾಡಿನ ನೋವನ್ನು ಹೇಳಬೇಕಾದವರೇ ನಮ್ಮ ನಾಡಿನ ಗಡಿಯನ್ನು ಬೇರೆಯವರ ಪಾಲಾಗಿಸುವ ಮಾತಿಗೆ ಹೇಗೆ ಕೈಜೋಡಿಸಿದರು?”ಎಂದರು .ಜಯದೇವಿ ತಾಯಿಯವರಿಗೆ ಸಾಮಾನ್ಯ ರಾಜಕೀಯ ಭಿನ್ನಾಭಿಪ್ರಾಯವಾಗಿರಲಿಲ್ಲ.ಅಕ್ಕಲಕೋಟ, ಸೊಲ್ಲಾಪುರ ಕೇವಲ ಭೂಪಟದ ಮೇಲಿನ ಪ್ರದೇಶಗಳಾಗಿರದೆ…..ಅಲ್ಲಿ ಕನ್ನಡದ ಉಸಿರಿತ್ತು. ಕನ್ನಡಿಗರ ಬದುಕಿತ್ತು. ತಲೆಮಾರುಗಳಿಂದ ಬೆಳೆದು ಬಂದ ಭಾಷೆ, ಸಂಸ್ಕೃತಿ, ನೆನಪುಗಳು, ಸಂಬಂಧಗಳು ಇದ್ದವು.ಆ ನೆಲದ ಬಗ್ಗೆ ಅವರಿಗಿದ್ದ ಭಾವನೆ ತಾಯಿಗೆ ತನ್ನ ಮಗುವಿನ ಮೇಲಿರುವ ಮಮತೆಯಂತಿತ್ತು. ತಾವು ಪ್ರೀತಿಸಿದ ನಾಡಿಗಾಗಿ ಹೋರಾಡುವವರನ್ನು ಹುಡುಕಿ, ಅವರನ್ನು ಮುಂದೆ ತಂದು, ಅವರ ಮೇಲೆ ವಿಶ್ವಾಸವಿಟ್ಟು ಜವಾಬ್ದಾರಿ ನೀಡಿದ ಒಬ್ಬ ಹಿರಿಯ ಹೋರಾಟಗಾರ್ತಿಯ ಮನಸ್ಸಿಗೆ ಇದು ಎಷ್ಟು ದೊಡ್ಡ ಆಘಾತವಾಯಿತು. ಜಯದೇವಿ ತಾಯಿಯವರ ರಾಜಕೀಯ ಜೀವನದಲ್ಲಿ ಒಂದು ಕಹಿ ಅಧ್ಯಾಯವಾಗಿದ್ದರೂ, ಅದು ಅವರ ಕನ್ನಡಾಭಿಮಾನವನ್ನು ಕುಗ್ಗಿಸಲಿಲ್ಲ.ಬದಲಿಗೆ ಅವರ ಮನಸ್ಸಿನಲ್ಲಿ ಇನ್ನಷ್ಟು ಗಟ್ಟಿಯಾದ ಸಂಕಲ್ಪ ಮೂಡಿಸಿತು….ಗಡಿ ಕಳೆದುಕೊಂಡರೂ ಕನ್ನಡ ಕಳೆದುಕೊಳ್ಳಬಾರದು.ಭೂಭಾಗದ ಮೇಲೆ ಹಕ್ಕು ಕಳೆದುಕೊಂಡರೂ ಭಾಷೆಯ ಮೇಲಿನ ಪ್ರೀತಿ ಕಳೆದುಕೊಳ್ಳಬಾರದು.ರಾಜಕೀಯದಲ್ಲಿ ಸೋಲು ಬಂದರೂ ನಾಡಿನ ಪರವಾದ ಹೋರಾಟದಲ್ಲಿ ಹಿಂದೆ ಸರಿಯಬಾರದೆಂದ ತಮ್ಮ ಹೊರಾಟ ಮುಂದುವರಿಸಿದರು. ಅವರ ಜೀವನ ನಮಗೆ ಹೇಳುವ ಸಂದೇಶ ಒಂದೇ“ಪದವಿ ಬದಲಾಗಬಹುದು…ರಾಜಕೀಯದವರು ಬದಲಾಗಬಹುದು…ಆದರೆ ಹೆತ್ತ ತಾಯಿಯ ಮೇಲಿನ ಪ್ರೀತಿ, ನಾಡಿನ ಮೇಲಿನ ಅಭಿಮಾನ ಮತ್ತು ನುಡಿಯ ಮೇಲಿನ ನಿಷ್ಠೆ ಬದಲಾಗಬಾರದು.”ಸೊಲ್ಲಾಪುರ ಮತ್ತು ಅಕ್ಕಲಕೋಟ,ಜತ್ತದ ನೆಲದ ಮೇಲೆ ಕನ್ನಡದ ಹೆಜ್ಜೆಗುರುತು ಉಳಿಯಬೇಕು ಎಂಬ ಅವರ ಕನಸನ್ನು ತಮ್ಮ ಹೃದಯದಿಂದ ಎಂದಿಗೂ ಅಳಿಸಿರಲಿಲ್ಲ.ಅದೇಷ್ಟೋ ಬಾರಿ ಕಣ್ಣೀರಿನು ಹಾಕಿದರುಅದು ತನ್ನ ನಾಡು ತನ್ನ ಕೈಯಿಂದ ಜಾರಿಹೋಗುತ್ತಿರುವುದನ್ನು ಕಂಡ ಕನ್ನಡ ತಾಯಿಯ ಹೃದಯದ ನೊಂದಿತ್ತು. *ಕನ್ನಡ ತಾಯಿಗಾಗಿ |ಕಣ್ಣೀರ ಸುರಿದಾವಉನ್ನತ ನಾಡು ಒಂದು ಗೂಡಿಸಲು- ಸಿದ್ದರಾಮಅನ್ನ ನೀರಿನ ಪರಿವೆ ಹರಿಸಿದಿರಿ||* ಅದಕ್ಕಾಗಿಯೇ ಜಯದೇವಿ ತಾಯಿಯವರು ಇಂದಿಗೂ ನಿಸ್ವಾರ್ಥ ಸೇವೆ, ಕನ್ನಡಾಭಿಮಾನ ಮತ್ತು ತತ್ವನಿಷ್ಠ ರಾಜಕೀಯದ ಪ್ರತೀಕವಾಗಿ ಸ್ಮರಿಸಲ್ಪಡುತ್ತಾರೆ. (ಮುಂದುವರೆಯುವುದು) ಸವಿತಾ ದೇಶಮುಖ .
ಅಂಕಣ ಸಂಗಾತಿ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಸಮಾಜವಾದಿ ಚಿಂತಕರು,ಗಾಂಧಿವಾದಿಡಾ ಕುಮಾರ ಸಪ್ತರ್ಷಿ ಗ್ರಾಮ ರಾಜ್ಯದ ಕನಸು ಕಂಡ ಅಪ್ಪಟ ಗಾಂಧಿವಾದಿ ಡಾ. ಕುಮಾರ ಸಪ್ತರ್ಷಿ ಅವರು ಮಹಾರಾಷ್ಟ್ರದ ಪ್ರಸಿದ್ಧ ಹಿರಿಯ ಸಮಾಜವಾದಿ ಚಿಂತಕರು, ಗಾಂಧಿವಾದಿ ಹೋರಾಟಗಾರರು ಮತ್ತು ಯುವ ನಾಯಕರಾಗಿದ್ದರು. ಅವರು ಮಹಾರಾಷ್ಟ್ರದ ಸಾಮಾಜಿಕ, ರಾಜಕೀಯ ಮತ್ತು ಪ್ರಗತಿಪರ ಚಳವಳಿಗಳಲ್ಲಿ ದಶಕಗಳ ಕಾಲ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ದುರದೃಷ್ಟವಶಾತ್, ಅವರು ತಮ್ಮ 85ನೇ ವಯಸ್ಸಿನಲ್ಲಿ 18 ಜುಲೈ 2026 ರಂದು ಪುಣೆಯ ಖಾಸಗಿ ಆಸ್ಪತ್ರೆಯಲ್ಲಿನಿಧನರಾದರು. 1941ರ ಆಗಸ್ಟ್ 21ರಂದು ಜನಿಸಿದ ಸಪ್ತರ್ಷಿ ಅವರು ಬಿಹಾರದ ಗಯಾದಲ್ಲಿ ಜಯಪ್ರಕಾಶ್ ನಾರಾಯಣ್ ಅವರ ನೇತೃತ್ವದಲ್ಲಿ ತಮ್ಮ ಸಾಮಾಜಿಕ ಜೀವನವನ್ನು ಆರಂಭಿಸಿದರು; ಅಲ್ಲಿ ಅವರು ಬರಗಾಲದಿಂದ ತೊಂದರೆಗೀಡಾದ ಜನರಿಗಾಗಿ ಸಹಾಯ ಕೇಂದ್ರವೊಂದನ್ನು ನಡೆಸುತ್ತಿದ್ದರು. ಅವರು 1967ರ ನವೆಂಬರ್‌ನಲ್ಲಿ ‘ಯುಕ್ರಂದ್’ (Yukrand) ಸಂಘಟನೆಯನ್ನು ಸ್ಥಾಪಿಸಿದರು. ಮಹಾರಾಷ್ಟ್ರದ ಇತಿಹಾಸದಲ್ಲಿ ‘ಯುಕ್ರಂದ್’ ಕಾಲಘಟ್ಟವು ಮಹತ್ವದ ಸ್ಥಾನವನ್ನು ಹೊಂದಿದೆ, ಏಕೆಂದರೆ ಇದು ಸಾಮಾಜಿಕ ನ್ಯಾಯದ ವಿಷಯವನ್ನು ಬಲವಾಗಿ ಎತ್ತಿಕೊಂಡ ಸಮಾಜವಾದಿ ನಾಯಕರ ಗುಂಪಾಗಿತ್ತು. ಜಾತಿ ತಾರತಮ್ಯದ ವಿಷಯದಲ್ಲಿ ಈ ಸಂಘಟನೆಯು ಎಷ್ಟು ಸಕ್ರಿಯವಾಗಿತ್ತೆಂದರೆ, ಮುಂದಿನದಿನಗಳಲ್ಲಿಅದು ‘ದಲಿತ ಪ್ಯಾಂಥರ್’ ಜೊತೆಗೂಡಿ ಜಂಟಿ ಹೋರಾಟಗಳನ್ನು ನಡೆಸಿತು. ಕುಮಾರ ಸಪ್ತರ್ಷಿ ಅವರ ಜೀವನ ಮತ್ತು ಪ್ರಮುಖ ಕಾರ್ಯಗಳ ಪ್ರಮುಖ ಸಾಧನೆಗಳು ಮತ್ತು ಸಂಘಟನೆಗಳು ಯುವಕ ಕ್ರಾಂತಿ ದಳ (ಯುಕ್ರಾಂದ್): ಯುವಕರಲ್ಲಿ ಸಾಮಾಜಿಕ ಪ್ರಜ್ಞೆ ಮತ್ತು ಪ್ರಗತಿಪರ ಆಲೋಚನೆಗಳನ್ನು ಬೆಳೆಸಲು ಅವರು 1967 ರಲ್ಲಿ ಈ ಪ್ರಭಾವಿ ಯುವ ಸಂಘಟನೆಯನ್ನು ಸ್ಥಾಪಿಸಿದರು. ಮಹಾರಾಷ್ಟ್ರ ಗಾಂಧಿ ಸ್ಮಾರಕ ನಿಧಿ: ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ, ಗಾಂಧಿವಾದಿ ತತ್ವಗಳನ್ನು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹೊಸ ಪೀಳಿಗೆಗೆ ತಲುಪಿಸಲು ಶ್ರಮಿಸಿದರು.ಸಾಮಾಜಿಕ ಹೋರಾಟಗಳು: ಭ್ರಷ್ಟಾಚಾರ, ಸಾಮಾಜಿಕ ಅಸಮಾನತೆ ಮತ್ತು ಅನ್ಯಾಯದ ವಿರುದ್ಧ ನಿರಂತರವಾಗಿ ಧ್ವನಿ ಎತ್ತಿದ್ದ ಅವರು, ವಿವಿಧ ಆಂದೋಲನಗಳ ಭಾಗವಾಗಿ ಸುಮಾರು 35 ಕ್ಕೂ ಹೆಚ್ಚು ಬಾರಿ ಜೈಲು ಸೇರಿದ್ದರು. ತುರ್ತು ಪರಿಸ್ಥಿತಿಯ (Emergency) ಸಮಯದಲ್ಲಿ ಅವರು ‘ಮಿಸಾ’ (MISA) ಕಾಯ್ದೆಯಡಿ ಯೆರವಾಡ ಜೈಲಿನಲ್ಲಿ ಬಂಧಿಯಾಗಿದ್ದರು. ರಾಜಕೀಯ ಮತ್ತು ಸಾಹಿತ್ಯಿಕ ಕೊಡುಗೆಶಾಸಕರಾಗಿ ಸೇವೆ: 1977 ರಲ್ಲಿ ಜನತಾ ಪಕ್ಷವನ್ನು ಸೇರಿ, 1978 ರ ವಿಧಾನಸಭಾ ಚುನಾವಣೆಯಲ್ಲಿ ಅಹಮದ್‌ನಗರ ಕ್ಷೇತ್ರದಿಂದ ಶಾಸಕರಾಗಿ (MLA) ಆಯ್ಕೆಯಾಗಿದ್ದರು. *ಪತ್ರಿಕೋದ್ಯಮ ಮತ್ತು ಸಾಹಿತ್ಯ: ಪ್ರಗತಿಪರ ವಿಚಾರಗಳನ್ನು ಹರಡಲು ‘ಸತ್ಯಾಗ್ರಹಿ ಪತ್ರಿಕೋದ್ಯಮ’ (Satyagrahi Vichardhara) ಎಂಬ ಮರಾಠಿ ಮಾಸಿಕ ಪತ್ರಿಕೆಯ ಸಂಪಾದಕರಾಗಿ ದೀರ್ಘಕಾಲ ಕೆಲಸ ಮಾಡಿದರು. ಅವರು ‘ಸಂಕಲ್ಪ’, ‘ಯಾತ್ರಿ’ ಮತ್ತು ‘ಡೇಸ್ ಅಟ್ ಯೆರವಾಡ ಯೂನಿವರ್ಸಿಟಿ’ ಸೇರಿದಂತೆ ಹಲವು ಪ್ರಸಿದ್ಧ ಪುಸ್ತಕಗಳನ್ನು ಬರೆದಿದ್ದಾರೆ. ವೃತ್ತಿಯಿಂದ ವೈದ್ಯರಾಗಿದ್ದರೂ (Medical Doctor), ತಮ್ಮ ಇಡೀ ಜೀವನವನ್ನು ಸಮಾಜ ಸೇವೆ, ಜಾತಿ ನಿರ್ಮೂಲನೆ ಮತ್ತು ಸಮಾನತೆಯ ಹೋರಾಟಕ್ಕಾಗಿ ಮುಡುಪಾಗಿಟ್ಟಿದ್ದರು. ಸಮಾಜವಾದದ ಗಟ್ಟಿ ಕೊಂಡಿಯೊಂದು ಕಳಚಿತಿದೆ. ಬುದ್ಧ ಬಸವ ಮಹಾತ್ಮಾ ಗಾಂಧಿ ಬಾಬಾಸಾಹೇಬ ಅಂಬೇಡ್ಕರ ಅವರ ವಿಚಾರ ಧಾರೆಗೆ ಆಕರ್ಷಿತರಾದ ಇವರು ಜೀವನದಲ್ಲಿ ಬಡವರ ಪರವಾಗಿ ಧ್ವನಿ ಎತ್ತಿದರು. ಜೆಪಿ ಚಳುವಳಿಯ ಮಹಾರಾಷ್ಟ್ರದ ಉಸ್ತುವಾರಿ ವಹಿಸಿದ ಅಪ್ಪಟ ಭಾರತೀಯ ಸಂಸ್ಕೃತಿ ಚಿಂತಕ ಸಮಾಜವಾದಿ ಈಗ ನೆನಪು ಮಾತ್ರ. ಇತ್ತೀಚೆಗೆ ಶ್ರೀ ಸಂಜಯ ಇಂಡೆ ಅವರ ಮೂಲಕ ಬಸವ ತಿಳುವಳಿಕೆ ಮತ್ತು ತತ್ವಜ್ಞಾನದ ಒಂದು ದಿನದ ಕಾರ್ಯಾಗಾರವನ್ನು ಪುಣೆಯ ಗಾಂಧಿ ಭವನದಲ್ಲಿ ಮಾಡಲು ಅವರ ಮೂಲಕ ನನಗೆಸೂಚಿಸಿದ್ದರು. ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
ಧಾರಾವಾಹಿ ಸಂಗಾತಿ-36 ಡಾ.ವಿಶ್ವನಾಥ್ ಎನ್.ನೇರಳೆಕಟ್ಟೆ ಅರ್ಜುನ ಉವಾಚ ದಶರಥಸುತ ದಮನಿಸಿದ ದಶಕಂಠನನ್ನು ಇಕ್ಷಾಕು ಮೊದಲಾದ ರಾಜಾಧಿರಾಜರನ್ನು ಹೊಂದಿದ ಶ್ರೇಷ್ಠಕುಲವಾಗಿತ್ತು ಸೂರ್ಯವಂಶ. ಅಯೋಧ್ಯೆಯನ್ನು ಆಧಾರವಾಗಿಟ್ಟುಕೊಂಡು ಇವರೆಲ್ಲರೂ ಆಳ್ವಿಕೆ ನಡೆಸಿದರು. ಹೀಗಿದ್ದ ರವಿಕುಲದಲ್ಲಿ, ಅಯೋಧ್ಯಾಪುರದಲ್ಲಿ ಪುತ್ರಕಾಮೇಷ್ಠಿ ಯಾಗದ ಫಲವಾಗಿ, ದಶರಥಪುತ್ರನಾಗಿ ಜನಿಸಿದ ಮಹಾವಿಷ್ಣು, ಶ್ರೀರಾಮಚಂದ್ರನೆಂಬ ಹೆಸರನ್ನು ಹೊತ್ತು. ಕೌಸಲ್ಯೆಯ ಗರ್ಭದೊಳಗಿಂದ ಈ ಇಳೆಗಿಳಿದ ಶ್ರೀರಾಮ ಬೆಳೆದದ್ದು ಲಕ್ಷಣ, ಭರತ, ಶತ್ರುಘ್ನರೆಂಬ ತಮ್ಮಂದಿರೊಡನೆ. ಕೌಶಿಕ ರಾಜನ ಯಾಗವನ್ನು ಕಾಪಾಡುವ ಹಿರಿದು ಹೊಣೆಯದು ಕಿರಿದು ವಯಸ್ಸಿನಲ್ಲಿಯೇ ಅವನದ್ದಾಯಿತು. ತಾಟಕಿಯೆಂಬ ರಕ್ಕಸಿಯನ್ನು ಕೊಂದ ಕೌಸಲ್ಯಾ ಸುತ. ಶಾಪದ ಫಲವಾಗಿ ಶಿಲೆಯಾಗಿದ್ದ ಗೌತಮ ಋಷಿಯ ಮಡದಿ ಅಹಲ್ಯೆಯನ್ನು ಉದ್ಧರಿಸಿದ ದಶರಥನಂದನ. ಮಿಥಿಲೆಯಲ್ಲಿ ನಡೆಯುತ್ತಿದ್ದ ಸೀತಾ ಸ್ವಯಂವರಕ್ಕೆ ಹೋದವನು ಶಿವಧನುಸ್ಸನ್ನು ಮುರಿದು, ಜನಕರಾಜನ ಸುತೆಯಾದ ಜಾನಕಿಯನ್ನು ಸತಿಯಾಗಿ ಪಡೆದ.ಹೀಗೆ ಬದುಕಿನಲ್ಲಿ ಏಳಿಗೆಯನ್ನು ಗಳಿಸುತ್ತಾ, ಪ್ರವರ್ಧಮಾನಕ್ಕೆ ಬರುತ್ತಿರುವ ಮಗ ಶ್ರೀರಾಮನಿಗೆ ಅಯೋಧ್ಯೆಯ ಪೂರ್ಣ ಜವಾಬ್ದಾರಿಯನ್ನು ನೀಡಬೇಕು ಎನಿಸಿತು ದಶರಥನಿಗೆ. ರಘುಕುಲತಿಲಕನ ಪಟ್ಟಾಭಿಷೇಕಕ್ಕೆ ಮುಹೂರ್ತವದು ನಿಗದಿಗೊಂಡಿತು. ಈ ವಿಚಾರವನ್ನು ಮಂಥರೆಯ ಮೂಲಕ ತಿಳಿದಳು ಕೈಕೇಯಿ. ದಶರಥನ ಪ್ರೀತಿಯ ರಾಣಿ. ಮಂಥರೆಯ ಮತ್ಸರದ ನುಡಿಯದು ಕೈಕೇಯಿ ಮನವನ್ನು ಮಥಿಸಿತು ಹೀನವಾಗಿ. ತನ್ನ ಮಗ ಭರತನಿಗೇ ಪಟ್ಟ ದೊರೆಯಬೇಕೆಂದು ಹಠ ಹಿಡಿದಳು ಗಂಡನಲ್ಲಿ. ಹಿಂದೆ ಅವಳಿಗೆ ಕೊಟ್ಟಿದ್ದ ಮಾತು ಈಗವನ ಬಾಯಿಯನ್ನು ಮುಚ್ಚಿಸಿತು. ಭರತನಿಗೆ ದೊರಕಿತು ಅಯೋಧ್ಯೆಯ ಸಿಂಹಾಸನ. ಪ್ರಭುವಾಗಬೇಕಿದ್ದ ಶ್ರೀರಾಮನದ್ದು ವನದೆಡೆಗಿನ ಗಮನ. ಜೊತೆಗಿದ್ದದ್ದು ಒಲವಿನ ಮಡದಿ ಸೀತೆ, ಪ್ರಿಯ ಸೋದರ ಲಕ್ಷö್ಮಣ.ವನವಾಸದ ಅವಧಿಯಲ್ಲಿ ಅದೆಷ್ಟೋ ರಕ್ಕಸರು ಕೊನೆಗಂಡರು, ರಾಮಬಾಣಕ್ಕೆ ಸಿಲುಕಿ. ಋಷಿಸಂತತಿಯದು ಸಂತಸ ಪಡೆಯಿತು, ಶ್ರೀರಾಮ ಸಹವಾಸದಲಿ.ಹೀಗೆ ರಾಮ, ಲಕ್ಷö್ಮಣ, ಸೀತೆಯರು ದಂಡಕಾರಣ್ಯದಲ್ಲಿದ್ದಾಗ ಅವರನ್ನು ಕಂಡವಳು ರಾವಣ ಸೋದರಿ ಶೂರ್ಪನಖಿ. ರಾಮನಲ್ಲಿ ಮನಸ್ಸಾಯಿತು ಆಕೆಗೆ. ಲಕ್ಷö್ಮಣನಲ್ಲಿಗೆ ಕಳುಹಿಸಿಕೊಟ್ಟ ರಾಮ, ಆ ದುಷ್ಟೆಗೆ ಬುದ್ಧಿ ಕಲಿಸುವ ತೆರದಿ. ಅಂಗಭAಗಕ್ಕೆ ಒಳಗಾಗಿ ಅವಮಾನಕ್ಕೀಡಾದವಳು ಸೀತೆಯ ಚೆಲುವನ್ನು ಹೊಗಳಿದಳು ರಾವಣನಲ್ಲಿ. ಕಾಮದಾಸೆಯಲ್ಲಿ ಅಂಕುಶ ಮೀರಿದ ಲಂಕೆಯ ಅಧಿಪತಿ, ಕಪಟ ವೇಷದಿಂದ ರಾಮ ಲಕ್ಷö್ಮಣರನ್ನು ಮರುಳುಗೊಳಿಸಿ, ಸೀತೆಯನ್ನು ಅಪಹರಿಸಿದ.ಕಾಣದಾದ ಸತಿಯನ್ನು ಹುಡುಕಿ ಹೊರಟ ಶ್ರೀರಾಮ ರಾವಣನನ್ನು ಎದುರಿಸಿ, ಬಿದ್ದಿದ್ದ ಜಟಾಯುವನ್ನು ಕಂಡ. ವಿವರವನ್ನು ಕೇಳಿದ. ಮಾರ್ಗಮಧ್ಯೆ ಕಬಂಧ ಎಂಬ ಅಸುರನನ್ನು ಕೊಂದ. ತನ್ನ ಆಗಮನಕ್ಕಾಗಿ ಕಾಯುತ್ತಿದ್ದ ಶಬರಿಗೆ ದರುಶನವನ್ನಿತ್ತು, ಅವಳನ್ನು ಧನ್ಯಗೊಳಿಸಿದ. ಆಂಜನೇಯ ಬಲವದು ಆ ಸಮಯದಲ್ಲಿಯೇ ಅವನನ್ನು ಸೇರಿತು. ವಾಲಿ ಸುಗ್ರೀವ ಸಹೋದರ ಕಲಹದಲ್ಲಿ ಭಾಗವಹಿಸಿ, ವಾಲಿಯನ್ನು ಕೊಂದ. ಸುಗ್ರೀವ ಸಹಾಯವನ್ನು ಸದಾ ತನ್ನದಾಗಿಸಿಕೊಂಡ. ಜಾಂಬವAತನ ನೆರವು ದೊರಕಿತು ರಘುಕುಲವೀರನಿಗೆ.ಜನಕಸುತೆಯನ್ನು ಹುಡುಕುವುದಕ್ಕೆ ಅಂಜನಾಸುತನನ್ನು ಕಳುಹಿಸಿಕೊಟ್ಟ. ಅಮಿತ ಬಲದಿಂದ ಸಮುದ್ರವನ್ನು ಉಲ್ಲಂಘಿಸಿದ ಹನುಮಂತ. ಶ್ರೀರಾಮಸತಿ ಸೀತೆಗೆ ಶ್ರೀರಾಮಾಂಕಿತದ ಮುದ್ರಿಕೆಯನ್ನಿತ್ತ. ಅವಳ ಸಂದೇಶವನ್ನು ಶ್ರೀರಾಮನಿಗೆ ತಿಳಿಸುವ ಮಾತುಕೊಟ್ಟ. ರಾವಣನ ಅಶೋಕವನವನ್ನು ಧೂಳೀಪಟ ಮಾಡಿದ. ತಡೆಯಲು ಬಂದ ರಕ್ಕಸರನ್ನು ಕೊಂದ. ಬಾಲಕ್ಕೆ ಬಿದ್ದ ಬೆಂಕಿಯಿAದ ಲಂಕೆಯನ್ನೇ ಸುಟ್ಟ. ಸೀತೆಯಿತ್ತ ಸಂದೇಶವನ್ನು ಶ್ರೀರಾಮನಿಗೆ ಹೇಳಿದ.ರಾಮ ರಾವಣರ ಮಧ್ಯೆ ನಡೆಯಿತದೋ ಘೋರ ಕಾಳಗ. ಅಸುರ ಕುಲದ ಹೆಸರೇ ಅಳಿದುಹೋಗುವಂತೆ ಪರಾಕ್ರಮ ತೋರಿದ ಶ್ರೀರಾಮಚಂದ್ರ. ರಾವಣ ಮರಣವನ್ನಪ್ಪಿದ. ವಿಭೀಷಣ ಲಂಕಾಧಿಪತಿ ಎನಿಸಿಕೊಂಡ.ರಾವಣ ಸೆರೆಯಲ್ಲಿದ್ದ ಸೀತೆಯನ್ನು ಮರಳಿ ತನ್ನವಳನ್ನಾಗಿಸಿಕೊಂಡ ಶ್ರೀರಾಮ ಅಯೋಧ್ಯೆಯನ್ನು ಮರಳಿ ಕಂಡ. ತನ್ನವರೆಲ್ಲರನ್ನೂ ನೋಡಿ ಹರ್ಷಗೊಂಡ. ಮಗನ ಮೈಯ್ಯಲ್ಲಿದ್ದ ಗಾಯಗಳನ್ನು ಕಂಡೊಡನೆಯೇ ಕೌಸಲ್ಯೆ ಕರುಳದು ನೊಂದಿತು. “ನಿನ್ನ ಕೋಮಲಕಾಯವನ್ನು ನೋಯಿಸಿದವರು ಯಾರು?” ಎಂದು ಕೇಳುತ್ತಾ, ಪೂರ್ಣ ನೊಂದಳು ರಾಮಮಾತೆ. ತಾಯಿಯನ್ನು ಸಂತೈಸಿದ ಅವಳ ಪ್ರಿಯಸುತ.ಅಯೋಧ್ಯೆಯ ಅಧಿಕಾರವದು ಈಗ ಶ್ರೀರಾಮನದ್ದಾಯಿತು. ಪಟ್ಟಾಭಿಷಿಕ್ತನಾದ ಪರಮ ಪಾವನ ಪುರುಷೋತ್ತಮ. ಒಂಭತ್ತು ಸಾವಿರ ವರ್ಷಗಳದು ಉರುಳಿಹೋದವು. ಶ್ರೀರಾಮನ ಆಳ್ವಿಕೆಯ ಆ ಕಾಲದಲ್ಲಿ ಪೂರ್ಣ ಅಯೋಧ್ಯೆ ಪರಿಪೂರ್ಣತೆಯನ್ನು ಹೊತ್ತುನಿಂತಿತು. ಎಲ್ಲಿ ನೋಡಿದರೂ ಸಮೃದ್ಧಿ, ಸಂಪನ್ನತೆ. ನೀತಿಶಾಸ್ತçಗಳಿಂದಲೇ ಹೆಸರು ಗಳಿಸಿತು ಅಯೋಧ್ಯೆ.ಹೀಗಿದ್ದಾಗಲೇ ರಘುಕುಲವದು ತನ್ನಿಂದ ಮುಂದಕ್ಕೆ ಮುಂದುವರಿಯಬೇಕೆAಬ ಬಯಕೆ ಮೂಡಿತು ರಾಮನಲ್ಲಿ. ಸಂತಾನದ ಅಪೇಕ್ಷೆ ಅವನದ್ದು. ಏಕಾಂತದಲ್ಲಿ ಸತಿ ಸೀತೆಯ ಜೊತೆಗೆ ಮನದ ಭಾವನೆಯನ್ನು ಹಂಚಿಕೊAಡ.“ಇಕ್ಷಾ÷್ವಕು ವಂಶ ಇದುವರೆಗೂ ಅವಿರತವಾಗಿ ಮುನ್ನಡೆಯುತ್ತಾ ಬಂದಿದೆ. ಈಗ ನಾನು ಮಕ್ಕಳನ್ನು ಪಡೆಯದೇ ಹೋದರೆ ನನ್ನಿಂದ ಈ ಕುಲ ಅಳಿಯಿತೆಂಬ ಕಳಂಕ ನನ್ನದಾಗುತ್ತದೆ. ಸಂಸಾರದ ಭ್ರಾಂತಿಯದು ತನ್ನಿಂದ ತೊಲಗಿಹೋಗಬೇಕಾದರೆ ಸಂತಾನದ ಏಳಿಗೆ ಆಗಬೇಕು. ಆದ್ದರಿಂದ ನಾವಿಬ್ಬರೂ ಕೂಡಿ ಸಂತಾನ ಪ್ರಾಪ್ತವಾಗಿಸಿಕೊಳ್ಳಬೇಕು ಎಂದು ಬಯಸುತ್ತಿದೆ ನನ್ನ ಮನಸ್ಸು” ಎಂದವನು ಅವಳ ಒಪ್ಪಿಗೆಯನ್ನು ಬಯಸಿದ.ಸೀತೆ ಚಿತ್ತವದು ತಾಯ್ತನದೆಡೆಗೆ ಆಕರ್ಷಿತವಾಗಿತ್ತು. ಮಗುವನ್ನು ಹೊಂದುವ ಸಹಜ ಆಸೆ ಅವಳದಾಗಿತ್ತು. ಅದನ್ನೇ ಹೇಳಿಕೊಂಡಳು ಪತಿಯಲ್ಲಿ. ಅವನ ಆಕಾಂಕ್ಷೆಯೇ ತನ್ನ ಆಕಾಂಕ್ಷೆ ಎಂದು ನುಡಿದಳು. ಮುದ್ದು ಶಿಶುವನ್ನು ಪಡೆಯುವ ಹಿರಿದು ಭಾಗ್ಯವದು ಸಕಲ ಹೆಂಗಳೆಯರಿಗೆ ದೊರೆಯುವುದೇ! ಎಂದು ಸಂದೇಹ ವ್ಯಕ್ತಪಡಿಸಿದ್ದಳು.ಹೀಗಿದ್ದಾಗಲೇ ಶ್ರೀರಾಮ ಆಸ್ಥಾನಕ್ಕೆ ಮುನಿಶ್ರೇಷ್ಠ ವಸಿಷ್ಠರ ಆಗಮನವಾಯಿತು. ಸಂತಾನದ ಬಯಕೆಯನ್ನು ಅವರಲ್ಲಿ ಹೇಳಿಕೊಂಡ ಶ್ರೀರಾಮ. “ನಿಮಗಿಬ್ಬರಿಗೂ ಸಂತಾನ ಭಾಗ್ಯವಿದೆ. ಮುಂದೆ ಒಳ್ಳೆಯದಾಗಲಿದೆ” ಎಂಬ ಒಳಿತಿನ ನುಡಿ ಅವರಿಂದ ಮೂಡಿಬಂತು. ಹರ್ಷಚಿತ್ತನಾದನು ಶ್ರೀರಾಮ. ಆಗಲೇ ವಸಂತಕಾಲವದು ಬಂತು… ಡಾ.ವಿಶ್ವನಾಥ್ ಎನ್.ನೇರಳೆಕಟ್ಟೆ
ಧಾರಾವಾಹಿ ಸಂಗಾತಿ-127 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ತರಗತಿಗೆ ತಡವಾಗಿ ಹೋದ ಮಗಳು ತನ್ನನ್ನು ಅಪ್ಪಿಕೊಂಡ ಮಗಳ ತಲೆಯನ್ನು ನೇವರಿಸುತ್ತಾ…. ಏನಾಯ್ತು ಮಗಳೇ, ಇಷ್ಟೊಂದು ಸಂತೋಷದಲ್ಲಿರುವೆ? … ಎಂದು ಸುಮತಿ ಕೇಳಲು,…. “ಅಮ್ಮಾ …ನಿನಗೆ ಇನ್ನೂ ಉತ್ತಮ ಮಟ್ಟದ ಚಿಕಿತ್ಸೆಯನ್ನು ಕೊಡಿಸಹುದೆಂದು ಡಾಕ್ಟರ್ ಹೇಳಿದ್ದಾರೆ….. ನಾವು ಆದಷ್ಟು ಬೇಗ ಬೆಂಗಳೂರಿಗೆ ಹೋಗೋಣ…. ಅಲ್ಲಿನ ಕಿಡ್ನಿ ಫೌಂಡೇಶನ್ ಗೆ ನಿನ್ನನ್ನು ಕರೆದುಕೊಂಡು ಹೋಗುತ್ತಿದ್ದೇವೆ”….ಎಂದು ಮಗಳು ಹೇಳಿದಾಗ…. “ಏನು ಹೇಳುತ್ತಿದ್ದಯಾ? ನಾವು ಬೆಂಗಳೂರಿಗೆ ಹೋಗುವುದೇ?… ಬೆಂಗಳೂರಿಗೆ ಹೋಗಬೇಕಾದರೆ ಹಾಗೂ ಅಲ್ಲಿ ಚಿಕಿತ್ಸೆ ಪಡೆಯಬೇಕಾದರೆ ಹೆಚ್ಚಿನ ಹಣದ ಅಗತ್ಯವಿರುತ್ತದೆ…. ನಮ್ಮಲ್ಲಿ ಅಷ್ಟು ಹಣವಿಲ್ಲ…. ಸುಮ್ಮನೇ ತೊಂದರೆಗಳಿಗೆ ನಮ್ಮನ್ನು ಒಡ್ಡಿಕೊಳ್ಳುವುದು ಬೇಡ”…. ಎಂದು ಸುಮತಿ ಹೇಳಿದಾಗ ಮಗಳು ತಾಯಿಯ ಹಸ್ತವನ್ನು ತನ್ನ ಕರದಲ್ಲಿ ಭದ್ರವಾಗಿ ಹಿಡಿದು….” ಅಮ್ಮಾ …. ನೀನೇನೂ ಚಿಂತಿಸಬೇಡ… ನೀನು ಚಿಕಿತ್ಸೆ ಪಡೆಯುವುದಕ್ಕೆ ತಯಾರಾಗು…. ಬೆಂಗಳೂರಿಗೆ ಹೋಗಲು ನಮಗೆ ಸಹಾಯ ಮಾಡುತ್ತೇವೆ ಎಂದು ಸಣ್ಣ ಸಾಹುಕಾರರು ಮತ್ತು ಅಮ್ಮ ಇಬ್ಬರೂ ಭರವಸೆ ನೀಡಿದ್ದಾರೆ…. ನಾನು ವೈದ್ಯರನ್ನು ಕಂಡು ಈ ಬಗ್ಗೆ ಮಾತನಾಡುತ್ತೇನೆ ಮತ್ತು ನಿನ್ನನ್ನು ಡಿಸ್ಚಾರ್ಜ್ ಮಾಡಲು ವಿನಂತಿಸಿಕೊಳ್ಳುತ್ತೇನೆ…. ಆದಷ್ಟು ಬೇಗ ನಾವು ಬೆಂಗಳೂರಿಗೆ ಹೋಗೋಣ…. ಈ ಬಗ್ಗೆ ತಂಗಿಯ ಜೊತೆಗೂ ಮಾತನಾಡಿದ್ದೇನೆ…ಅವಳು ಸರಿ ಹೋಗಿ ಬನ್ನಿ ನಾನು ಇಲ್ಲಿಯೇ ಇದ್ದು ಅಮ್ಮನ ಪರವಾಗಿ ಶಾಲೆಗೆ ಹೋಗಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುತ್ತೇನೆ ಎಂದು ಹೇಳಿದ್ದಾಳೆ…. ಅಕ್ಕನ ಮನೆಗೆ ಹೋಗಿ, ಬಾವ ನಮ್ಮ ಜೊತೆಗೆ ಬರುವಂತೆ ವಿನಂತಿಸಿಕೊಳ್ಳುತ್ತೇನೆ…. ಖಂಡಿತ ಅವರು ಒಪ್ಪುತ್ತಾರೆ”… ಎಂದಳು ಸುಮತಿಗೆ ಸಂತೋಷವಾಯಿತು. ತಾನು ಪ್ರತಿದಿನವೂ ಅನುಭವಿಸುತ್ತಿರುವ ಸಂಕಟ, ನೋವು ಇನ್ನಾದರೂ ಕಡಿಮೆಯಾಗುತ್ತದೆ ಎನ್ನುವ ಸಮಾಧಾನವೂ ಆಯಿತು. ಆದರೆ ಬೆಂಗಳೂರಿಗೆ ಹೋದರೆ ನಾವು ಎಲ್ಲಿ ಉಳಿದುಕೊಳ್ಳುವುದು? ಎನ್ನುವ ಚಿಂತೆ ಕಾಡಿತು…. “ನೀನು ಹೇಳಿದ್ದು ಎಲ್ಲವೂ ಸರಿ ಮಗಳೇ…. ಆದರೆ ಅಲ್ಲಿ ಹೋದರೆ ನಾವು ಎಲ್ಲಿ ಉಳಿದುಕೊಳ್ಳುವುದು?”… ಎಂದು ಸುಮತಿ ಕೇಳಿದಾಗ…. “ಅಮ್ಮಾ …ಬೆಂಗಳೂರಿನಲ್ಲಿ ನಮ್ಮ ಹಿರಿಯ ಮಾವ ( ಸುಮತಿಯ ಹಿರಿಯ ತಮ್ಮ) ಕುಟುಂಬ ಸಮೇತ ಅಲ್ಲಿಯೇ ಇದ್ದಾರಲ್ಲವೇ ?… ಅವರು ಯಾವ ಬಡಾವಣೆಯಲ್ಲಿ ವಾಸವಾಗಿದ್ದಾರೆ ಎನ್ನುವ ಬಗ್ಗೆ ದೊಡ್ಡಮ್ಮನನ್ನು ಕೇಳಿ ತಿಳಿದುಕೊಳ್ಳುತ್ತೇನೆ…. ಅವರ ವಿಳಾಸ ಪಡೆದು ಅಲ್ಲಿಗೆ ಹೋದರಾಯಿತು”…. ಎಂದಳು ಮಗಳು. ಅವಳು ಹೇಳಿದ್ದು ಸರಿ ಎನಿಸಿತು ಸುಮತಿಗೆ. ಹಾಸನದಿಂದ ಬೆಂಗಳೂರಿಗೆ ತನ್ನ ತಮ್ಮ ವರ್ಗವಾಗಿ ಹೋದ ನಂತರ ಸುಮತಿ ಒಮ್ಮೆಯೂ ಅವನನ್ನು ಭೇಟಿಯಾಗಿರಲಿಲ್ಲ. ಹಾಗಾಗಿ ತಮ್ಮನನ್ನು ನೋಡಬಹುದು ಮತ್ತು ಆಸ್ಪತ್ರೆಗೆ ಹೋಗಿ ಬರಲು ನಮಗೆ ಅವನು ಖಂಡಿತಾ ಸಹಾಯ ಮಾಡಿಯೇ ಮಾಡುತ್ತಾನೆ ಎನ್ನುವ ಭರವಸೆಯೂ ಮೂಡಿತು…. “ಸರಿ ಹಾಗೆಯೇ ಆಗಲಿ ಮಗಳೇ…. ನಾಳೆ ಬೆಳಗ್ಗೆ ಡಾಕ್ಟರ್ ರೌಂಡ್ಸ್ ಗೆ ಬರುವಾಗ ಈ ಬಗ್ಗೆ ಅವರೊಂದಿಗೆ ಮಾತನಾಡು”…. ಎಂದು ಸುಮತಿ ಮಗಳಿಗೆ ಹೇಳಿದಳು. ನಾಳೆ ಬೆಳಗ್ಗೆ ಕಾಲೇಜು ಮುಗಿದ ನಂತರ ದೊಡ್ಡಮ್ಮನ ಮನೆಗೆ ಹೋಗಿ ಮಾವನ ಅಡ್ರೆಸ್ ಪಡೆಯುವುದು ಎಂದು ಆ ಹುಡುಗಿ ತೀರ್ಮಾನಿಸಿದಳು. ಸಂಜೆ ಆಶ್ರಮಕ್ಕೆ ಹೋಗಿ ಬಂದು ರಾತ್ರಿ ಅಮ್ಮನ ಜೊತೆಗೆ ಆಸ್ಪತ್ರೆಯಲ್ಲಿ ಉಳಿದುಕೊಂಡ ಹುಡುಗಿಗೆ ರಾತ್ರಿಯೆಲ್ಲಾ ನಿದ್ರೆ ಬರಲಿಲ್ಲ. ಒಂದೊಂದೇ ಲೆಕ್ಕಾಚಾರ ಮನದಲ್ಲಿ. ಏನೇನೋ ಆಲೋಚನೆಗಳು ಸುಳಿದು ಅವಳ ನಿದ್ರೆಗೆಡಿಸಿದ್ದವು. ಮೊದಲೇ ತೀರ್ಮಾನಿಸಿದಂತೆ ಬೆಳಗ್ಗೆ ಬೇಗನೆ ಎದ್ದು ಆಶ್ರಮಕ್ಕೆ ಹೋದಳು. ಅಲ್ಲಿ ತನ್ನ ಕೆಲಸಗಳನ್ನೆಲ್ಲಾ ಮುಗಿಸಿ ಕಾಲೇಜಿಗೆ ಹೊರಟಳು. ಅಂದು ಕಾಲೇಜಿಗೆ ತಡವಾಯಿತು. ಗಡಿಬಿಡಿಯಲ್ಲಿ ತರಗತಿಯ ಕಡೆಗೆ ಹೋಗುತ್ತಿದ್ದಾಗ ಅದಾಗಲೇ ಲೆಕ್ಚರರ್ ತರಗತಿಯೊಳಗೆ ಪ್ರವೇಶಿಸಿ ಪಾಠ ಮಾಡುತ್ತಿದ್ದರು. ಹಾಗಾಗಿ ತರಗತಿಯ ಆಚೆಯೇ ನಿಂತಳು ಆ ಹುಡುಗಿ. ಪಕ್ಕದ ತರಗತಿಗೆ ಹೋಗಲು ಬಂದ ಅವಳ ಕಸಿನ್ ತರಗತಿಯ ಹೊರಗೆ ನಿಂತಿರುವ ಅವಳನ್ನು ಕಂಡು ಅವಳ ಬಳಿಗೆ ಬಂದು…. “ಏನಾಯ್ತು?…. ಏಕೆ ಇಷ್ಟು ತಡವಾಗಿ ಕಾಲೇಜಿಗೆ ಬಂದಿರುವೆ?… ಸದಾ ಬೇಗನೆ ಬರುತ್ತಿದ್ದ ನಿನಗೆ ಇಂದು ಏನಾಯಿತು?”… ಎಂದು ಕೇಳಿದ. ಅವಳ ಕಸಿನ್ ಕೂಡ ಇದೇ ಡಿಗ್ರಿ ಕಾಲೇಜಿನಲ್ಲಿ ಹೊಸದಾಗಿ ಲೆಕ್ಚರರ್ ಆಗಿ ಸೇರ್ಪಡೆಗೊಂಡಿದ್ದ. ಕಸಿನ್ ಕೇಳಿದ ಪ್ರಶ್ನೆಗೆ…. “ನನ್ನ ತಾಯಿಯ ಆರೋಗ್ಯ ಸರಿ ಇಲ್ಲ…. ಅವಳನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದ್ದೇನೆ”…. ಎಂದು ಹೇಳುತ್ತಾ ಈವರೆಗೂ ನಡೆದ ಎಲ್ಲಾ ವಿಚಾರವನ್ನೂ ಆತನಿಗೆ ತಿಳಿಸಿದಳು. ಅತ್ತೆಗೆ ಹುಷಾರಿಲ್ಲ ಎನ್ನುವುದನ್ನು ಅರಿತ ಆತನ ಮನಸ್ಸಿಗೆ ತುಂಬಾ ಬೇಸರವಾಯಿತು…. “ಒಂದು ಕೆಲಸ ಮಾಡು…. ತರಗತಿಗಳು ಮುಗಿದ ನಂತರ ನೀನು ಆಸ್ಪತ್ರೆಗೆ ಹೋಗುವಾಗ ನನಗಾಗಿ ಸ್ವಲ್ಪ ಹೊತ್ತು ಇಲ್ಲಿಯೇ ಕಾದಿರು…. ನನ್ನ ತರಗತಿ ಮುಗಿದ ನಂತರ ನಾವಿಬ್ಬರೂ ಜೊತೆಯಾಗಿಯೇ ನಮ್ಮ ಮನೆಗೆ ಹೋಗೋಣ…. ಅತ್ತೆಯನ್ನು ನೋಡಲು ನಿನ್ನ ಜೊತೆಗೆ ನಾನೂ ಬರುತ್ತೇನೆ”.. ಎಂದು ಹೇಳಿ, ಅವಳ ತರಗತಿಯ ಬಾಗಿಲನ್ನು ಡಸ್ಟರ್ನಿಂದ ಮೆಲ್ಲಗೆ ತಟ್ಟಿದನು. ತರಗತಿಯನ್ನು ತೆಗೆದುಕೊಳ್ಳುತ್ತಿದ್ದ ಲೆಕ್ಚರರ್ ಬಾಗಿಲ ಕಡೆಗೆ ನೋಡಿದಾಗ ತನ್ನ ಗೆಳೆಯ ತನ್ನ ತರಗತಿಯ ವಿದ್ಯಾರ್ಥಿನಿಯೊಂದಿಗೆ ಹೊರಗಡೆ ನಿಂತಿರುವುದು ಕಂಡಿತು….” ಒಂದು ನಿಮಿಷ ಇರಿ ಮಕ್ಕಳೇ…. ಇದೋ ಬಂದೆ”…. ಎಂದು ಹೇಳುತ್ತಾ, ಗೆಳೆಯನಿಗೆ ಹಸ್ತಲಾಘವ ಕೊಟ್ಟು,… “ಇದೇನು ಹುಡುಗೀ…, ತರಗತಿಗೆ ಬರದೇ ಇಲ್ಲೇಕೆ ನಿಂತಿರುವೆ? ….. ದಿನವೂ ತರಗತಿಗೆ ಸರಿಯಾದ ಸಮಯದಲ್ಲಿ ಹಾಜರಾಗುತ್ತಿದ್ದ ನಿನಗೆ ಇಂದೇನಾಯಿತು?…. ಎಂದಾಗ ಆತನ ಗೆಳೆಯ ತನ್ನ ಕಸಿನ್ ಬಗ್ಗೆ ಎಲ್ಲಾ ವಿವರವನ್ನೂ ತಿಳಿಸಿದ. ಆ ಲೆಕ್ಚರರ್ ಹುಡುಗಿಯನ್ನು ನೋಡಿ ಅನುಕಂಪದಿಂದ…. “ಸರಿ ಹೋಗು…. ತರಗತಿಯಲ್ಲಿ ಕುಳಿತುಕೋ”… ಎಂದು ಹೇಳಿ, ಮತ್ತೆ ಸಿಗೋಣ ಎಂದು ಗೆಳೆಯನಿಗೆ ಹೇಳುತ್ತಾ ಕೈ ಬೀಸಿ, ಲೆಕ್ಚರರ್ ತರಗತಿಗೆ ತೆರಳಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಪ್ರಾರಂಭಿಸಿದರು. ಅವಳ ಗೆಳತಿಯರು ಮತ್ತು ಇತರೇ ವಿದ್ಯಾರ್ಥಿಗಳು ಅವಳನ್ನು ಪ್ರಶ್ನಾರ್ಥಕವಾಗಿ ನೋಡಿದರು. ಆದರೆ ಇವಳ ಗಮನ ಯಾರಡೆಗೂ ಇರಲಿಲ್ಲ. ತರಗತಿಗಳೆಲ್ಲವೂ ಮುಗಿದ ನಂತರ ಇಂದು ತಾನು ಮಾಡಬೇಕಾದ ಕೆಲಸಗಳ ಬಗ್ಗೆ ಯೋಚಿಸುತ್ತಿದ್ದಳು. ತರಗತಿಯಲ್ಲಿ ಪಾಠದ ಕಡೆಗೆ ಕೂಡ ಗಮನ ಹರಿಸಲು ಅವಳಿಂದ ಸಾಧ್ಯವಾಗಲಿಲ್ಲ. ತರಗತಿಗಳಿಲ್ಲವೂ ಮುಗಿದ ಕೂಡಲೇ ಕಾಲೇಜಿನ ಆವರಣದಲ್ಲಿದ್ದ ಮರದ ಕೆಳಗೆ ಕುಳಿತು ತನ್ನ ಕಸಿನ್ ಬರುವಿಕೆಗಾಗಿ ಕಾಯುತ್ತಿದ್ದಳು. ಕಸಿನ್ ಬಂದು ಕೂಡಲೇ ಎದ್ದು ಆತನ ಜೊತೆಗೆ ಅವನ ಮನೆಯ ಕಡೆಗೆ ಹೆಜ್ಜೆ ಹಾಕಿದಳು. ದಾರಿಯುದ್ದಕ್ಕೂ ಮೌನವಾಗಿದ್ದ ಆ ಹುಡುಗಿಯನ್ನು ಕಂಡು ಆತನ ಮನ ಮರುಗಿತು.
ಧಾರಾವಾಹಿ ಸಂಗಾತಿ-29 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ಸಲ್ಲಿಸಿದ ಮಹಾನ್ ಚೇತನ ಕನ್ನಡ ಕೋಟಿ ಪ್ರಕಾಶನ ನಿರ್ಮಾಣ ಗಡಿನಾಡ ಸೊಲ್ಲಾಪುರದಲಿ ಕನ್ನಡ ಕೋಟಿ ಪ್ರಕಾಶನ ಸ್ಥಾಪನೆ ಸ್ವಾತಂತ್ರ್ಯಾನಂತರ ಭಾರತದ ರಾಜ್ಯಗಳ ಪುನರ್ರಚನೆಗೆ ಭಾಷೆಯನ್ನು ಪ್ರಮುಖ ಆಧಾರವನ್ನಾಗಿ ಪರಿಗಣಿಸುವ ಚರ್ಚೆ ಆರಂಭವಾಯಿತು. ಇದೇ ಸಂದರ್ಭದಲ್ಲಿ ಗಡಿ ಪ್ರದೇಶಗಳಾದ ಸೊಲ್ಲಾಪುರ, ಅಕ್ಕಲಕೋಟೆ, ಜತ್ತ, ನಿಪ್ಪಾಣಿ, ಬೀದರ ಮೊದಲಾದ ಭಾಗಗಳಲ್ಲಿ ಭಾಷಾ ಆಧಾರಿತ ಗುರುತಿನ ಪ್ರಶ್ನೆ ತೀವ್ರ ಸ್ವರೂಪ ಪಡೆದಿತು.ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ಸೊಲ್ಲಾಪುರವನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಆತಂಕ ಕನ್ನಡಿಗರಲ್ಲಿ ಮೂಡಿತ್ತು. ಕನ್ನಡಿಗರಲ್ಲಿದ್ದ ಅಜಾಗರೂಕತೆ ಹಾಗೂ ಸಂಘಟನೆಯ ಕೊರತೆಯನ್ನು ಕೆಲವರು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಿದರು.ಆ ಸಮಯದಲ್ಲಿ ದೇಶದಾದ್ಯಂತ ಜನಗಣತಿ ಕಾರ್ಯ ಆರಂಭವಾಗಿತ್ತು. ಜನಗಣತಿಯಲ್ಲಿ ಜನರು ತಮ್ಮ ಮಾತೃಭಾಷೆಯನ್ನು ಯಾವ ಭಾಷೆಯೆಂದು ದಾಖಲಿಸುತ್ತಾರೋ, ಅದರ ಆಧಾರದ ಮೇಲೆಯೇ ಮುಂದಿನ ಭಾಷಾವಾರು ರಾಜ್ಯಗಳ ರಚನೆಗೆ ಮಹತ್ವದ ಆಧಾರ ಸಿಗುವ ಸಾಧ್ಯತೆ ಇತ್ತು. ಹೀಗಾಗಿ ಗಡಿನಾಡಿನ ಕನ್ನಡಿಗರಲ್ಲಿ ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿತ್ತು. ಒಳನಾಡಿನ ಕನ್ನಡಿಗರಿಗಿಂತ ಗಡಿನಾಡಿನ ಕನ್ನಡಿಗರು ಹೆಚ್ಚಿನ ಎಚ್ಚರಿಕೆ ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.ಇಂಥ ಸಂದರ್ಭದಲ್ಲಿ ಕೆಲವು ಮಹಾರಾಷ್ಟ್ರ ಪರ ಸಂಘಟನೆಗಳು ಮುಗ್ಧ ಹಾಗೂ ಅಶಿಕ್ಷಿತ ಜನರನ್ನು ತಪ್ಪು ದಾರಿಗೆಳೆಯುವ ಪ್ರಯತ್ನ ನಡೆಸಿದವು. ಮರಾಠಿಯನ್ನು ಮಾತೃಭಾಷೆಯಾಗಿ ದಾಖಲಿಸಿದರೆ ಹೆಚ್ಚಿನ ಸೌಲಭ್ಯಗಳು ದೊರೆಯುತ್ತವೆ ಎಂಬ ಸುಳ್ಳು ಪ್ರಚಾರ ಮಾಡಲಾಯಿತು. ಇದರಿಂದ ಕನ್ನಡಿಗರ ಅಸ್ತಿತ್ವಕ್ಕೆ ಧಕ್ಕೆಯಾಗುವ ಅಪಾಯ ಎದುರಾಯಿತು.ಇಂಥ ಗಂಭೀರ ಪರಿಸ್ಥಿತಿಯನ್ನು ಅರಿತ ಜಯದೇವಿ ತಾಯಿಯವರು ತಮ್ಮ ಸ್ವಂತ ಖರ್ಚಿನಲ್ಲಿ ಕನ್ನಡ ಕೋಟಿ ಎನ್ನುವ ಪ್ರಕಾಶನವನ್ನು ಪ್ರಾರಂಭಿಸಿದರು.ಅವರ ಜೊತೆ ಕನ್ನಡ ಪರ ಹೋರಾಟಗಾರರು ಮತ್ತು ಸಮಾಜಮುಖಂಡರು ಜನರಲ್ಲಿ ಕನ್ನಡಾಭಿಮಾನ ಬೆಳೆಸಲು ಮುಂದಾದರು. ಜನರಿಗೆ ಕನ್ನಡದ ಇತಿಹಾಸ, ಸಂಸ್ಕೃತಿ, ಸಾಹಿತ್ಯ ಹಾಗೂ ಭಾಷೆಯ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು. ಮನೆ ಮನೆಗೆ ತೆರಳಿ, ಸಭೆ-ಸಮಾರಂಭಗಳನ್ನು ಆಯೋಜಿಸಿ, ಕನ್ನಡವೇ ತಮ್ಮ ಮಾತೃಭಾಷೆ ಎಂದು ಜನಗಣತಿಯಲ್ಲಿ ದಾಖಲಿಸಿಕೊಳ್ಳುವಂತೆ ಮನವಿ ಮಾಡಿದರು.ಈ ಜಾಗೃತಿ ಅಭಿಯಾನದ ಪ್ರಮುಖ ಭಾಗವಾಗಿ ಸೊಲ್ಲಾಪುರದಲ್ಲಿ “ಕನ್ನಡ ಕೋಟಿ” ಎಂಬ ಪ್ರಕಾಶನ ಸ್ಥಾಪಿಸಲಾಯಿತು. ಇದರ ಉದ್ದೇಶ ಗಡಿಭಾಗದ ಕನ್ನಡಿಗರನ್ನು ಒಗ್ಗೂಡಿಸುವುದು, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವುದು, ಮರಾಠೀಕರಣದ ಪ್ರಯತ್ನಗಳನ್ನು ಪ್ರಜಾಸತ್ತಾತ್ಮಕವಾಗಿ ಎದುರಿಸುವುದು ಹಾಗೂ ಕನ್ನಡಿಗರಲ್ಲಿ ಆತ್ಮವಿಶ್ವಾಸ ಮೂಡಿಸುವುದಾಗಿತ್ತು.ಕನ್ನಡ ಕೋಟಿಯ ಮೂಲಕ ಕನ್ನಡ ಶಾಲೆಗಳ ರಕ್ಷಣೆ, ಕನ್ನಡ ಸಾಹಿತ್ಯ ಕಾರ್ಯಕ್ರಮಗಳು, ಸಾಂಸ್ಕೃತಿಕ ಉತ್ಸವಗಳು, ಸಾರ್ವಜನಿಕ ಸಭೆಗಳು ಮತ್ತು ಜಾಗೃತಿ ಬರಹಗಳನ್ನು ಹೊರತಂದರು….ಜನಗಣತಿಯಲ್ಲಿ ಕನ್ನಡವನ್ನೇ ತಮ್ಮ ಮಾತೃಭಾಷೆಯಾಗಿ ದಾಖಲಿಸಿಕೊಳ್ಳುವಂತೆ ವ್ಯಾಪಕ ಪ್ರಚಾರ ನಡೆಸು ಪ್ಲಾಮಪ್ಲೇಟ್ಸ್ಗಳನ್ನು, ಬುಕ್ಲಿಟ್ಸ್ ಗಳನ್ನು ಪ್ರಕಟಿಸಲಾಯಿತು. ಹಳ್ಳಿ ಹಳ್ಳಿಗೆ ಹೋಗಿ ಹಂಚಲಾಯಿತು. ಗಡಿಭಾಗದ ಕನ್ನಡಿಗರಲ್ಲಿ ಹೊಸ ಚೈತನ್ಯ ಮೂಡಿಸಿ, ಕನ್ನಡ ಭಾಷೆ ಗಡಿಭಾಗದ ಜನರಲ್ಲಿ ಬಲವಾದ ಅಡಿಪಾಯ ಹಾಕಿದವು. ಹೀಗೆ ಸೊಲ್ಲಾಪುರದಲ್ಲಿ ಸ್ಥಾಪನೆಯಾದ ಕನ್ನಡ ಕೋಟಿ ಪ್ರಕಾಶನವು ಗಡಿನಾಡಿನ ಕನ್ನಡಿಗರ ಭಾಷಾ ಹಕ್ಕು, ಸಾಂಸ್ಕೃತಿಕ ಅಸ್ತಿತ್ವ ಹಾಗೂ ಸ್ವಾಭಿಮಾನವನ್ನು ಕಾಪಾಡುವ ಮಹತ್ವದ ಚಳವಳಿಯಾಗಿ ರೂಪುಕೊಡುವಲ್ಲಿ, ಭಾಷಾವಾರು ರಾಜ್ಯಗಳ ರಚನೆಯ ಇತಿಹಾಸದಲ್ಲಿ ಗಡಿನಾಡಿನ ಕನ್ನಡ ಜಾಗೃತಿಗೆ ಕೊಟ್ಟ ಕೊಡುಗೆ ಸ್ಮರಣೀಯವಾಗಿದೆ. “ಸುಲಭ ಕನ್ನಡದೊಳು | ಸಲ್ಲಲಿತ ವಚನಾದಿ |ಸಲ್ಲಿಸಿದರು ಅನುಭವ ದಾಸೋಹ – ನಮ್ಮವರು ಕಲಿಸಿದರು ಸರಳ ಶೈಲಿಯನು ||”ಎನ್ನು ತ ಜಯದೇವಿ ತಾಯಿಯವರು ಕನ್ನಡ ಸಾಹಿತ್ಯದ ಶರಣರು ಮತ್ತು ದಾಸರು ಕನ್ನಡ ಭಾಷೆಗೆ ನೀಡಿದ ಅಪೂರ್ವ ಕೊಡುಗೆ”ಸುಲಭ ಕನ್ನಡದೊಳು” ಎಂದರೆ ಎಲ್ಲ ಸಾಮಾನ್ಯ ಜನರಿಗೆ ಅರ್ಥವಾಗುವ ಸರಳ ಕನ್ನಡದಲ್ಲಿ.ಸುಂದರವಾದ, ಲಲಿತವಾದ ವಚನಗಳು ಹಾಗೂ ಇತರ ಸಾಹಿತ್ಯ ಕೃತಿಗಳನ್ನು ಶರಣರು ತಮ್ಮ ಆಧ್ಯಾತ್ಮಿಕ ಅನುಭವಗಳನ್ನು ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಜನರಿಗೆ ಹಂಚಿದರು. ಅದೇ ಅವರ ಅನುಭವ ದಾಸೋಹ.“ನಮ್ಮವರು ಕಲಿಸಿದರು ಸರಳ ಶೈಲಿಯನು” ನಮ್ಮ ಕನ್ನಡದ ಶರಣರು, ದಾಸರು ಮತ್ತು ಕವಿಗಳು ಅಲಂಕಾರಿಕ, ಕಠಿಣ ಭಾಷೆಯ ಬದಲು ಸರಳ, ಸುಲಭ ಮತ್ತು ಜನಸಾಮಾನ್ಯರಿಗೆ ಅರ್ಥವಾಗುವ ಶೈಲಿಯಲ್ಲಿ ಸಾಹಿತ್ಯ ರಚಿಸುವ ಪರಂಪರೆಯನ್ನು ಬೆಳೆಸಿದರು. ಕನ್ನಡದ ಶರಣರು ಮತ್ತು ದಾಸರು ಸರಳ ಕನ್ನಡದಲ್ಲಿ ವಚನಗಳು ಹಾಗೂ ಭಕ್ತಿಸಾಹಿತ್ಯವನ್ನು ರಚಿಸಿ, ತಮ್ಮ ಜೀವನಾನುಭವಗಳನ್ನು ಜನರೊಂದಿಗೆ ಹಂಚಿಕೊಂಡು, ಕನ್ನಡ ಸಾಹಿತ್ಯವನ್ನು ಜನಸಾಮಾನ್ಯರ ಭಾಷೆಯನ್ನಾಗಿ ರೂಪಿಸಿದ ಮಹತ್ವದ ಸೇವೆಯನ್ನು ಕೊಂಡಾಡುತ…. ಜನಸಾಮಾನ್ಯರಿಗೆ ತಲುಪಬೇಕಾದರೆ ಸರಳ ಕನ್ನಡ ಭಾಷೆಯಲ್ಲಿ ಸಾಹಿತ್ಯವನ್ನು ನಿರ್ಮಿಸಿ ಜನರಿಗೆ ಹಂಚುವ ಕಾರ್ಯಕ್ಕಾಗಿ….. ೧೯೫೦ ರಲ್ಲಿ ಕನ್ನಡ ಕೋಟಿ ಪ್ರಕಾಶನ ಪ್ರಾರಂಭಿಸಿದರು ಅದಕ್ಕೆ ಅಧ್ಯಕ್ಷರಾಗಿ ಡಾ. ಶಂಕರ ಮೂಗಿ ಅವರು ಸುಪ್ರೀಂ ಕೋರ್ಟಿನ ನ್ಯಾಯವಾದಿಗಳು(ನನ್ನ ತಂದೆ) ನಿರ್ವಹಿಸಿದರು. ಭಾಷಾ ಜಾಗೃತಿಯ ಕ್ರಾಂತಿಕಾರಿ ಹೆಜ್ಜೆ೧೯೫೦ನೇ ವರ್ಷ ಗಡಿಭಾಗದ ಕನ್ನಡಿಗರ ಪಾಲಿಗೆ ಅತ್ಯಂತ ಮಹತ್ವದ ತಿರುವಿನ ವರ್ಷವಾಗಿತ್ತು. ಭಾಷಾವಾರು ರಾಜ್ಯಗಳ ರಚನೆಯ ಚರ್ಚೆ ದೇಶಾದ್ಯಂತ ನಡೆಯುತ್ತಿದ್ದ ಸಂದರ್ಭದಲ್ಲಿ ಗಡಿಭಾಗಗಳಲ್ಲಿ ಕನ್ನಡ ಭಾಷೆಯ ಅಸ್ತಿತ್ವವೇ ಪ್ರಶ್ನಾರ್ಥಕವಾಗಿತ್ತು.ಇಂತಹ ಸಂಕಷ್ಟದ ಸಂದರ್ಭದಲ್ಲಿ ನಾಡು, ನುಡಿ ಮತ್ತು ಕನ್ನಡಿಗರ ಸ್ವಾಭಿಮಾನವನ್ನು ಉಳಿಸುವ ದೃಢ ಸಂಕಲ್ಪದೊಂದಿಗೆ ಡಾ. ಜಯದೇವಿ ತಾಯಿಯವರು ಮುಂಚೂಣಿಗೆ ಬಂದರು. ಜಯದೇವಿ ತಾಯಿಯವರಿಗೆ ಕನ್ನಡವೆಂದರೆ ಸಂಸ್ಕೃತಿ ಮತ್ತು ಆತ್ಮಗೌರವದ ಪ್ರತೀಕವಾಗಿತ್ತು. ಭಾಷೆ ಉಳಿದರೆ ಸಂಸ್ಕೃತಿ ಉಳಿಯುತ್ತದೆ, ಸಂಸ್ಕೃತಿ ಉಳಿದರೆ ಜನಾಂಗ ಉಳಿಯುತ್ತದೆ ಎಂಬ ದೃಢ ನಂಬಿಕೆಯನ್ನು ಅವರು ಹೊಂದಿದ್ದರು. ಗಡಿಭಾಗದ ಕನ್ನಡಿಗರಲ್ಲಿ ಭಾಷಾಭಿಮಾನ ಬೆಳೆಸುವ ಉದ್ದೇಶದಿಂದ ಸೊಲ್ಲಾಪುರದಲ್ಲಿ ತಮ್ಮ ಸ್ವಂತ ಹಣದಿಂದ “ಕನ್ನಡ ಕೋಟಿ” ಪ್ರಕಾಶನ ಸ್ಥಾಪಿಸಿದರು. ಆ ಕಾಲದಲ್ಲಿ ಯಾವುದೇ ದೊಡ್ಡ ಆರ್ಥಿಕ ನೆರವು ಅಥವಾ ಸರ್ಕಾರಿ ಬೆಂಬಲವಿಲ್ಲದೆ ಇಂತಹ ಸಂಘಟನೆಯನ್ನು ಕಟ್ಟುವುದು ಅತ್ಯಂತ ಸಾಹಸದ ಕೆಲಸವಾಗಿತ್ತು. ಆದರೆ ಜಯದೇವಿ ತಾಯಿಯವರ ಅಚಲ ಸಂಕಲ್ಪದ ಮುಂದೆ ಆರ್ಥಿಕ ಅಡೆತಡೆಗಳು ಅಡ್ಡಿಯಾಗಲಿಲ್ಲ.ಕನ್ನಡ ಕೋಟಿಯ ಮುಖ್ಯ ಉದ್ದೇಶ ಕನ್ನಡ ಭಾಷೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಕನ್ನಡಿಗರನ್ನು ಸಂಘಟಿಸುವುದು ಹಾಗೂ ಗಡಿಭಾಗದಲ್ಲಿ ಕನ್ನಡದ ಅಸ್ತಿತ್ವವನ್ನು ದೃಢಪಡಿಸುವುದಾಗಿತ್ತು. ಗ್ರಾಮದಿಂದ ಗ್ರಾಮಕ್ಕೆ ತೆರಳಿ ಕನ್ನಡದ ಮಹತ್ವವನ್ನು ವಿವರಿಸುವುದು, ಸಭೆ-ಸಮಾರಂಭಗಳನ್ನು ಆಯೋಜಿಸುವುದು, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಜನರಲ್ಲಿ ಅಭಿಮಾನ ಬೆಳೆಸುವುದು, ಯುವಕರನ್ನು ಕನ್ನಡ ಚಳವಳಿಯಲ್ಲಿ ತೊಡಗಿಸಿಕೊಳ್ಳುವುದು ಈ ಸಂಸ್ಥೆಯ ಪ್ರಮುಖ ಕಾರ್ಯಗಳಾಗಿದ್ದವು. ಜನಗಣತಿ ಸಂದರ್ಭದಲ್ಲಿ ಜನರು ತಮ್ಮ ಮಾತೃಭಾಷೆಯಾಗಿ ಕನ್ನಡವನ್ನೇ ದಾಖಲಿಸಿಕೊಳ್ಳುವಂತೆ ವ್ಯಾಪಕ ಜಾಗೃತಿ ಮೂಡಿಸಲಾಯಿತು. ಕನ್ನಡವನ್ನು ಮರೆತು ಬೇರೆ ಭಾಷೆಯನ್ನು ದಾಖಲಿಸಿಕೊಳ್ಳುವುದು ತಮ್ಮ ಸ್ವಂತ ಗುರುತನ್ನು ಕಳೆದುಕೊಳ್ಳುವುದಕ್ಕೆ ಸಮಾನ ಎಂಬ ಅರಿವನ್ನು ಜನರಲ್ಲಿ ಮೂಡಿಸುವಲ್ಲಿ ಕನ್ನಡ ಕೋಟಿ ಪ್ರಮುಖ ಪಾತ್ರವಹಿಸಿತು.ಜಯದೇವಿ ತಾಯಿಯವರು ನಡೆಸಿದ ಈ ಭಾಷಾ ಉತ್ತೇಜಕ ಪ್ರಯೋಗವು ಗಡಿನಾಡಿನ ಕನ್ನಡಿಗರಲ್ಲಿ ಆತ್ಮವಿಶ್ವಾಸವನ್ನು ಬೆಳೆಸಿದ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಳವಳಿಯಾಗಿತ್ತು. ಕನ್ನಡದ ಮೇಲಿನ ಅಭಿಮಾನವನ್ನು ಜನಮನಗಳಲ್ಲಿ ಪುನರುಜ್ಜೀವನಗೊಳಿಸಿದ ಈ ಪ್ರಯತ್ನ ಮುಂದಿನ ಕನ್ನಡ ಹೋರಾಟಗಳಿಗೆ ಭದ್ರ ಬುನಾದಿಯಾಯಿತು. ಹೀಗೆ, ಸೊಲ್ಲಾಪುರದಲ್ಲಿ ಸ್ಥಾಪನೆಯಾದ ಕನ್ನಡ ಕೋಟಿ ಪ್ರಕಾಶನ ಸಂಸ್ಥೆ ಜಯದೇವಿ ತಾಯಿಯವರ ದೂರದೃಷ್ಟಿ, ಧೈರ್ಯ ಮತ್ತು ಕನ್ನಡಪ್ರೇಮದ ಜೀವಂತ ಸಂಕೇತವಾಗಿ ತಮ್ಮ ವೈಯಕ್ತಿಕ ಸಂಪತ್ತನ್ನು ಸಮಾಜದ ಹಿತಕ್ಕಾಗಿ ಮೀಸಲಿಟ್ಟು ಕನ್ನಡ ಭಾಷೆಯ ಉಳಿವಿಗಾಗಿ ಅವರು ಮಾಡಿದ ಈ ಕಾರ್ಯ ಕನ್ನಡ ಇತಿಹಾಸದಲ್ಲಿ ಅಕ್ಷರಶಃ ಚಿರಸ್ಥಾಯಿಯಾಗಿ ಉಳಿದಿದೆ. “ನನ್ನಿಯಿದು ಕಂಡದ್ದು ನುಡಿ | ತಾನಾಗಿ ಬಂದದ್ದು |ಜೇನು ಸವಿದಂತೆ ತುಂಬಿದ – ಪದಗಳದನಿ ದನಿಗೂಡಿಸಿ ಹಾಡುವೆನು || ಎನ್ನುತ ಜಯದೇವಿ ತಾಯಿಯವರುಈ ತ್ರಿಪದಿಯಲ್ಲಿ ತನ್ನ ಮನಸ್ಸಿನಲ್ಲಿ ಸಹಜವಾಗಿ ಮೂಡಿದ ಭಾವನೆಗಳು ಕನ್ನಡದಲ್ಲಿಯೇ…. ಅವು ಯಾರ ಒತ್ತಾಯದಿಂದಲೂ ಬಂದದ್ದಲ್ಲ.. ಸ್ವಯಂಸ್ಫೂರ್ತಿಯಿಂದ ಉದಿಸಿದವು. ಆ ಭಾವನೆಗಳು ಜೇನಿನ ಸವಿಯಂತೆ ಮಧುರವಾಗಿದ್ದು, ಪದಗಳ ರೂಪದಲ್ಲಿ ಹೊರಹೊಮ್ಮಿವೆ. ಆ ಮಧುರ ಪದಗಳಿಗೆ ಧ್ವನಿಯನ್ನು ಸೇರಿಸಿ ಹಾಡುವ ಮೂಲಕ ತಮ್ಮ ಸಂತೋಷ, ಕೃತಜ್ಞತೆ ಹಾಗೂ ಭಾವನೆಗಳನ್ನು ಲೋಕಕ್ಕೆ ಹಂಚಿಕೊಳ್ಳುವ ಸಂಕಲ್ಪವನ್ನು ತಾಯಿಯ ವರು ವ್ಯಕ್ತಪಡಿಸುತ್ತಾರೆ.(ಮುಂದುವರೆಯುವುದು) ಸವಿತಾ ದೇಶಮುಖ
ಶರಣ ಸಂಗಾತಿ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಶತಕದ ಸಾಧಕ ಪುಲಿಗೆರೆ ಸೋಮನಾಥ ಕನ್ನಡ ಸಾಹಿತ್ಯ ಪರಂಪರೆ ಕನ್ನಡ ಸಾಹಿತ್ಯ ಪರಂಪರೆಯು ಸುಮಾರು ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಸುದೀರ್ಘ ಇತಿಹಾಸವನ್ನು ಹೊಂದಿರುವ ಅತ್ಯಂತ ಶ್ರೀಮಂತ ಮತ್ತು ವೈವಿಧ್ಯಮಯವಾದ ಸಂಪ್ರದಾಯವಾಗಿದೆ. ಭಾರತದ ಅತ್ಯಂತ ಹಳೆಯ ಸಾಹಿತ್ಯ ಸಂಪ್ರದಾಯಗಳಲ್ಲಿ ಇದು ಮೂರನೇ ಸ್ಥಾನದಲ್ಲಿದ್ದು, ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ಚಳವಳಿಗಳೊಂದಿಗೆ ಬೆರೆತು ವಿಕಸನಗೊಂಡಿದೆ. ಕನ್ನಡ ಭಾಷೆ ಹಲ್ಮಡಿ ಶಾಸನದಲ್ಲಿ ಕಂಡು ಬಂದರೂ ಸಹಿತ ಅದಕ್ಕಿಂತ ಮೂರು ಶತಮಾನಕ್ಕೂ ಅಧಿಕವಾದ ಪ್ರಾಚೀನ ಭಾರತೀಯ ದ್ರಾವಿಡ ಭಾಷೆಯಾಗಿದೆ. ಪೂರ್ವದ ಹಳಗನ್ನಡ ಮತ್ತು ಹಳಗನ್ನಡ ಕಾಲ (ಜೈನ ಯುಗ / ಪಂಪ ಯುಗ) ಕ್ರಿ.ಶ. ೫ ನೇ ಶತಮಾನದ ಹಲ್ಮಿಡಿ ಶಾಸನ ಕನ್ನಡದ ಅತ್ಯಂತ ಪ್ರಾಚೀನ ಲಿಖಿತ ದಾಖಲೆಯಾಗಿದೆ. ಕ್ರಿ.ಶ. ೮೫೦ ರ ಸುಮಾರಿನ ಅಮೋಘವರ್ಷ ನೃಪತುಂಗನ ‘ಕವಿರಾಜಮಾರ್ಗ’ ನಮಗೆ ದೊರೆತಿರುವ ಮೊದಲ ಸಾಹಿತ್ಯಿಕ ಗ್ರಂಥವಾಗಿದೆ. ಪಂಪ ಯುಗ: ೧೦ ನೇ ಶತಮಾನವನ್ನು ಕನ್ನಡ ಸಾಹಿತ್ಯದ ‘ಚಿನ್ನದ ಯುಗ’ ಎನ್ನಲಾಗುತ್ತದೆ. ರತ್ನತ್ರಯರು: ಆದಿಕವಿ ಪಂಪ (ವಿಕ್ರಮಾರ್ಜುನ ವಿಜಯ, ಆದಿಪುರಾಣ), ಪೊನ್ನ ಮತ್ತು ರನ್ನ ಕನ್ನಡದ ಮಹಾಕವಿಗಳಾಗಿದ್ದಾರೆ. ಶೈಲಿ: ಈ ಕಾಲದಲ್ಲಿ ‘ಚಂಪೂ’ (ಗದ್ಯ ಮತ್ತು ಪದ್ಯ ಮಿಶ್ರಿತ) ಶೈಲಿಯು ಪ್ರಸಿದ್ಧವಾಗಿತ್ತು. ೨. ನಡುಗನ್ನಡ ಕಾಲ (ವಚನ ಮತ್ತು ವೈಷ್ಣವ ಯುಗ) ೧೨ ನೇ ಶತಮಾನದಿಂದ ಕನ್ನಡ ಸಾಹಿತ್ಯವು ರಾಜಾಶ್ರಯದಿಂದ ಹೊರಬಂದು ಸಾಮಾನ್ಯ ಜನರ ಭಾಷೆಯಾಗಿ ಮಾರ್ಪಟ್ಟಿತು.ವಚನ ಸಾಹಿತ್ಯ: ೧೨ ನೇ ಶತಮಾನದ ಸಾಮಾಜಿಕ ಕ್ರಾಂತಿಯೊಂದಿಗೆ ವಚನ ಚಳವಳಿ ಆರಂಭವಾಯಿತು. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಮುಂತಾದ ವಚನಕಾರರು ಸರಳ ಕನ್ನಡದಲ್ಲಿ ಬದುಕಿನ ತತ್ವಗಳನ್ನು ಬರೆದರು. ಹರಿಹರ ಮತ್ತು ರಾಘವಾಂಕ: ಹರಿಹರನು ‘ರಗಳೆ’ ಸಾಹಿತ್ಯವನ್ನೂ, ರಾಘವಾಂಕನು ‘ಷಟ್ಪದಿ’ ಶೈಲಿಯನ್ನೂ ಪರಿಚಯಿಸಿದರು. ದಾಸ ಸಾಹಿತ್ಯ: ಭಕ್ತಿ ಪಂಥದ ಭಾಗವಾಗಿ ಪುರಂದರದಾಸರು, ಕನಕದಾಸರು ಮುಂತಾದ ಹರಿದಾಸರು ಕೀರ್ತನೆಗಳ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಕುಮಾರವ್ಯಾಸ: ‘ಕರ್ಣಾಟ ಭಾರತ ಕಥಾಮಂಜರಿ’ (ಗದಗಿನ ಭಾರತ) ಮಹಾಕಾವ್ಯದ ಮೂಲಕ ನಡುಗನ್ನಡದ ಶ್ರೇಷ್ಠ ಕವಿಯಾಗಿ ಹೊರಹೊಮ್ಮಿದನು. ಇಂತಹ ಸುದೀರ್ಘ ಸಾಹಿತ್ಯ ಪರಂಪರೆಯ ಶ್ರೇಷ್ಠ ಶತಕ ಸಾಧಕ ಪುಲಿಗೆರೆ ಸೋಮನಾಥ (ಪುಲಗೇರೆ ಸೋಮನಾಥ) ಕನ್ನಡ ಸಾಹಿತ್ಯ ಲೋಕದ ಒಬ್ಬ ಪ್ರಸಿದ್ಧ ಹಳಗನ್ನಡದ ಕವಿ. ಇವರು ಪ್ರಮುಖವಾಗಿ ತಮ್ಮ ನೀತಿಪ್ರಧಾನ ಕಾವ್ಯವಾದ ಸೋಮೇಶ್ವರ ಶತಕ’ಕ್ಕಾಗಿ ಜನಪ್ರಿಯರಾಗಿದ್ದಾರೆ.ಕವಿಯ ಕುರಿತಾದ ಪ್ರಮುಖ ವಿವರಗಳು ವೈಯಕ್ತಿಕ ವಿವರಗಳು ಮತ್ತು ಕಾಲ ಇವರು ಸುಮಾರು ಕ್ರಿ.ಶ. ೧೨೯೯ ಅಥವಾ ೧೩ನೆಯ ಶತಮಾನದ ಉತ್ತರಾರ್ಧದಲ್ಲಿ ಬದುಕಿದ್ದರು ಎಂದು ಅಂದಾಜಿಸಲಾಗಿದೆ. ಇವರು ಹೊಯ್ಸಳ ರಾಜರ ಆಶ್ರಯದಲ್ಲಿದ್ದರು. ಜನ್ಮಸ್ಥಳ: ಇವರು ಪ್ರಸ್ತುತ ಗದಗ ಜಿಲ್ಲೆಯ (ಹಳೆಯ ಧಾರವಾಡ ಜಿಲ್ಲೆ) ಲಕ್ಷ್ಮೇಶ್ವರ ತಾಲೂಕಿನ ಪುಲಿಗೆರೆ (ಈಗಿನ ಲಕ್ಷ್ಮೇಶ್ವರ) ಎಂಬ ಊರಿನವರು.ಪಾಂಡಿತ್ಯ: ಸೋಮನಾಥನು ಕನ್ನಡ ಮತ್ತು ಸಂಸ್ಕೃತ ಎರಡೂ ಭಾಷೆಗಳಲ್ಲಿ ಮಹಾ ಪಂಡಿತನಾಗಿದ್ದನು. ಸಾಹಿತ್ಯ ಕೃಷಿ ಮತ್ತು ಅಂಕಿತ ನಾಮ ಇವರ ಪದ್ಯಗಳ ಅಂಕಿತ ನಾಮ “ಹರಹರಾ ಶ್ರೀ ಚೆನ್ನಸೋಮೇಶ್ವರಾ” ಅಥವಾ “ಹರಹರ ಶ್ರೀ ಚನ್ನಸೋಮೇಶ್ವರ”.ಸೋಮೇಶ್ವರ ಶತಕ: ಇದು ಇವರ ಅತ್ಯಂತ ಪ್ರಸಿದ್ಧ ಕೃತಿ. ವೃತ್ತ ಛಂದಸ್ಸಿನಲ್ಲಿ (ಮತ್ತೇಭವಿಕ್ರೀಡಿತ ವೃತ್ತ) ರಚಿತವಾಗಿರುವ ಈ ಕಾವ್ಯವು ಒಟ್ಟು 100 ಪದ್ಯಗಳನ್ನು ಒಳಗೊಂಡಿದೆ. ಇವು ಸಮಾಜಕ್ಕೆ ಉತ್ತಮ ನೀತಿ, ಆದರ್ಶ ಮತ್ತು ಮಾನವೀಯ ಮೌಲ್ಯಗಳನ್ನು ಬೋಧಿಸುತ್ತವೆ. ರತ್ನಾಕರಂಡಕ: ಇವರು ಚಂಪೂ ಶೈಲಿಯಲ್ಲಿ ‘ರತ್ನಾಕರಂಡಕ’ ಎಂಬ ಕಾವ್ಯವನ್ನೂ ರಚಿಸಿದ್ದಾರೆ. ಪ್ರಸಿದ್ಧ ಸಾಲುಗಳುಇವರ ಸೋಮೇಶ್ವರ ಶತಕದ ಈ ಸಾಲು ಕನ್ನಡ ನಾಡಿನಲ್ಲಿ ಅತ್ಯಂತ ಜನಪ್ರಿಯವಾಗಿದೆ:”ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತಂ…”(ಇದರ ಅರ್ಥ: ಮನುಷ್ಯನು ಸ್ವಲ್ಪ ಜ್ಞಾನವನ್ನು ತಿಳಿದವರಿಂದ ಕಲಿತು, ಇನ್ನು ಸ್ವಲ್ಪ ಜ್ಞಾನವನ್ನು ಶಾಸ್ತ್ರಗಳನ್ನು ಕೇಳಿ ಪಡೆಯುತ್ತಾ ಜ್ಞಾನಿಯಾಗಬೇಕು.) ಪುಲಿಗೆರೆ ಸೋಮನಾಥ ಮೂಲತಃ ಜೈನ ಧರ್ಮೀಯನಾಗಿದ್ದು ಶರಣರ ವಚನಗಳನ್ನು ಆಳವಾಗಿ ಓದಿಕೊಂಡು ನಡುಗನ್ನಡ ದೇಸಿ ಪದ್ಧತಿಯನ್ನು ತನ್ನ ಕಾವ್ಯ ಶೈಲಿಯನ್ನಾಗಿ ಪರಿವರ್ತಿಸಿದನು. ಬಸವಣ್ಣ ಅಕ್ಕ ಮಹಾದೇವಿ ಮತ್ತು ಇತರ ಶರಣರ ವಚನಗಳ ಪ್ರಭಾವ ಈತನ ಮೇಲೆ ಅಪಾರವಾಗಿ ಬೀರಿತ್ತು. ಇವನ ಶತಕಗಳು ಮುಂದೆ ಸರ್ವಜ್ಞ ಮತ್ತು ತತ್ವ ಪದಕಾರರಿಗೆ ಪ್ರಭಾವ ಬೀರಿರಬಹುದು ಎಂದೆನಿಸುತ್ತಿದೆ.ಒಟ್ಟಾರೆ ಸೋಮನಾಥನ ಶತಕಗಳು ಇಂದಿಗೂ ಕನ್ನಡ ಸಾಹಿತ್ಯ ಲೋಕದ ಅಪೂರ್ವ ಆಸ್ತಿ ಎಂದು ಹೇಳ ಬಹುದು ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
ಧಾರಾವಾಹಿ ಸಂಗಾತಿ-35 ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ ಅರ್ಜುನ ಉವಾಚ ಮುನಿಸು ಮಾತಿನ ಮಳೆಗರೆದೆ ಮಣಿಪುರದರಸನ ಮೇಲೆ ನ್ನನ್ನು ತಂದೆಯೆಂದು ಕರೆದು ನನ್ನ ಶುದ್ಧ ಚಾರಿತ್ರ್ಯಕ್ಕೆ ಧಕ್ಕೆ ತಂದನಲ್ಲಾ ಎಂಬ ಕೋಪ ಕಾಡಿತು ನನ್ನನ್ನು. ನನ್ನ ಆಪ್ತರ ಕಣ್ಣನನಗೆ ಸಂಬಂಧಪಡದವನು ನಲ್ಲಿ ನನ್ನ ಮಗನೆಂದೆನಿಸಿ ಯುದ್ಧ ವಿಮುಖನಾಗಿ, ಶರಣಾಗತಿಯನ್ನು ಸಾರಿ ಈ ವೀರಾರ್ಜುನನ ಪರಾಕ್ರಮದ ಹೆಸರಿಗೆ ಕಳಂಕ ತಂದನಲ್ಲಾ ಎಂಬ ಕ್ರೋಧವೂ ಮೂಡಿತು. ನನ್ನನ್ನು ಅವಮಾನಕ್ಕೆ ಈಡುಮಾಡಿದವನ ಚಿತ್ತವನ್ನು ಕ್ಷಣಕ್ಷಣ ಕಣಕಣ ನೋಯಿಸಿ, ಅವನ ಮನಕ್ಕೆ ಮರಣವನ್ನು ತರಬೇಕೆಂಬ ಬಗೆಯ ಉತ್ಸುಕತೆ ನನ್ನದಾಯಿತು. ಆಗದವರನ್ನು ಕೊಲ್ಲುವುದರಲ್ಲಿ ಎರಡು ಬಗೆಗಳಿವೆ. ಬಾಣ ಖಡ್ಗಗಳಿಂದ ಶರೀರವನ್ನು ಘಾಸಿಗೊಳಿಸಿ, ಗಾಯಕ್ಕೆ ಸಿಲುಕಿದ ದೇಹಕ್ಕೆ ಉಪ್ಪು ಸವರಿ ಇನ್ನಿಲ್ಲದ ಯಾತನೆಯನ್ನು ನೀಡಿ ಸಾಯಿಸುವುದು ಒಂದು ಬಗೆ. ಹಾಗೇನೂ ಮಾಡದೆ ನುಡಿಯ ಕಿಡಿಗಳನ್ನು ಸೂಸಿ, ಟೀಕೆಯ ಬೆಂಕಿಯನ್ನು ಎದೆಗಿಟ್ಟು, ಅಪಹಾಸ್ಯದ ಜ್ವಾಲೆಯನ್ನೆಬ್ಬಿಸಿ ಉರಿಉರಿಸಿ ಹಾಕುವುದು ಇನ್ನೊಂದು ಬಗೆ. ಯುದ್ಧಕ್ಕೆ ನಿಂತ ವೀರನಲ್ಲ ಬಭ್ರುವಾಹನ. ಮಾತಿನ ಬಾಣಗಳಿಂದಲೇ ಅವನ ಪ್ರಾಣ ತೆಗೆಯುವುದು ಸರಿಯೆಂದು ತೋರಿತು ನನಗೆ.ನನ್ನ ಪಾದದ ಬಳಿಯಲ್ಲಿ ಕುಳಿತಿದ್ದ ಅವನನ್ನು ಬಲವಾಗಿ ಒದೆದೆ. “ಎಲವೋ ಹೇಡಿ. ನನಗೆ ಜನಿಸಿದವ ನೀನಾಗಿದ್ದರೆ ಈ ಪರಿಯಲ್ಲಿ ಯುದ್ಧಕ್ಕೆ ಹೆದರಿ ಶರಣು ಬರುತ್ತಿರಲಿಲ್ಲ. ಮೊದಲು ಅಶ್ವವನ್ನು ಕಟ್ಟಿದವನು ನೀನು. ಈಗ ಯುದ್ಧ ಮಾಡದೆಯೇ ಅದನ್ನು ಬಿಟ್ಟು ಕಳುಹಿಸುವುದಕ್ಕೆ ಸಿದ್ಧನಾಗಿದ್ದೀಯಲ್ಲಾ! ನೀನಂತೂ ನನ್ನ ಮಗನಲ್ಲ” ಎಂದೆ ರೋಷಾವೇಶದಿಂದ.ನನ್ನ ಕಾಲಿನ ಒದೆತಕ್ಕೆ ಎರಡು ಹೆಜ್ಜೆಗಳಷ್ಟು ಆಚೆಗೆ ಬಿದ್ದ ಬಭ್ರುವಾಹನ. ಅರ್ಜುನನ ಮಗ ನೀನೆಂಬ ಯೋಚನೆಯನ್ನು ಅವನಲ್ಲಿ ಬಿತ್ತಿದವಳು ಅವನ ತಾಯಿ. ಅವಳ ಮಾತನ್ನು ಕೇಳಿಸಿಕೊಂಡು ತಾನೇ ಅವನಿಲ್ಲಿಗೆ ಬಂದದ್ದು! ಹಾಗಿರುವಾಗ ಅವಳನ್ನೂ ತೆಗಳದೇ ಇರಬಾರದು ಎನಿಸಿತು. ಅವನು ಹೇಳಿದ ಹೆಸರೇನದು?! ಚಿತ್ರಾಂಗದೆ! ಅದೇ ಹೆಸರನ್ನು ಮುಂದುಮಾಡಿಕೊAಡು ಬೈಯ್ಯತೊಡಗಿದೆ.“ಆ ಚಿತ್ರಾಂಗದೆಗೆ ವೈಶ್ಯನಿಂದ ಜನಿಸಿದ ಪುತ್ರ ನೀನು. ಅದಂತೂ ಖಚಿತ. ನನಗೆ ಜನಿಸಿದವನಲ್ಲ. ನನ್ನ ಮಗನಾಗಿದ್ದರೆ ಕ್ಷಾತ್ರಧರ್ಮವನ್ನು ಬಿಟ್ಟು ಈ ಬಗೆಯಲ್ಲಿ ವರ್ತಿಸುತ್ತಿರಲಿಲ್ಲ” ಎಂದು ಅಬ್ಬರಿಸಿದೆ, ಅವನ ಕರುಳ ಬಳ್ಳಿಯನ್ನು ಹಿಡಿದೆಳೆದು.ನಾನವನ ತಾಯಿಯನ್ನು ನಿಂದಿಸಿದ್ದು ಅತಿಯಾಗಿಯೇ ನೋಯಿಸಿತು ಅವನನ್ನು. ಅವನ ಮುಖಭಾವದಲ್ಲಿಯೇ ಅದು ಗೋಚರವಾಗುತ್ತಿತ್ತು. ನೆಲದ ಮೇಲೆ ಬಿದ್ದವನಿಗೆ ಇನ್ನೊಂದು ಬಲವಾದ ಹೊಡೆತವಿಕ್ಕಿದರೆ ಪೂರ್ಣವಾಗಿ ಮಣ್ಣುಮುಕ್ಕುತ್ತಾನೆ ಎಂಬ ಯೋಚನೆ ಬಂತು. ಯಾರೇ ಆಗಿರಲಿ, ಇನ್ನೊಬ್ಬರ ಜೊತೆಗಿನ ಕೀಳು ಹೋಲಿಕೆಯನ್ನು ಸಹಿಸಲಾರರು. ಇದು ನನಗೆ ಗೊತ್ತಿತ್ತು. ನನ್ನ ಮಗನೆಂದು ಸುಳ್ಳು ಹೇಳಿಕೊಂಡು ಬಂದವ ಈ ಬಭ್ರುವಾಹನ. ನನ್ನ ನಿಜತನಯನಾದ ಅಭಿಮನ್ಯುವಿನ ಪರಾಕ್ರಮವನ್ನು ಮುಂದುಮಾಡಿಯೇ ಇವನನ್ನು ಹಿಂದಕ್ಕೆಳೆಯುತ್ತೇನೆ ಎಂದುಕೊAಡೆ.“ಸುಭದ್ರೆಗೆ ನನ್ನಿಂದ ಜನಿಸಿದವ ಅಭಿಮನ್ಯು. ಕುರುಕ್ಷೇತ್ರ ಯುದ್ಧವದು ನಡೆಯುತ್ತಿದ್ದಾಗ ಏಕಾಂಗಿಯಾಗಿ ಚಕ್ರವ್ಯೂಹದ ಒಳಹೊಕ್ಕ. ಯುದ್ಧದ ಸಹವಾಸವಿದು ನಿನಗೆ ಬೇಡ ಎಂಬ ಧರ್ಮರಾಯನ ಮಾತಿಗೂ ಕಿವಿಗೊಡಲಿಲ್ಲ. ಅಂತಹ ಪರಾಕ್ರಮಿಯಾಗಿದ್ದ ಅವನು. ಶತ್ರುಸೇನೆಯನ್ನು ಪುಡಿಗಟ್ಟಿ ವೀರಮರಣವನ್ನು ಹೊಂದಿದ. ಅಂತಹ ಸಮರ್ಥನನ್ನು ನನ್ನ ಮಗ ಎಂದು ಒಪ್ಪಿಕೊಳ್ಳುತ್ತೇನೆ. ಅದುಬಿಟ್ಟು ನಿನ್ನಂಥ ಹೇಡಿಯನ್ನು ಮಗನೆಂದು ಸ್ವೀಕರಿಸಲಾದೀತೇ!” ಎಂದು ಚುಚ್ಚಿದೆ.ಸಂತಸದಿAದ, ತುಂಬು ಆನಂದದಿAದ ನನ್ನ ಬಳಿಗೆ ಬಂದಿದ್ದವನು ಬಭ್ರುವಾಹನ. ಅವನ ಮೊಗದ ನಲಿವದು ಕಡಿಮೆಯಾಗುತ್ತಾ ಆಗುತ್ತಾ ನೋವಿನ ಛಾಯೆ ದಟ್ಟವಾಗತೊಡಗಿತ್ತು. ನನಗಿನ್ನೂ ಸಮಾಧಾನ ಆಗಿರಲಿಲ್ಲ.“ಸಿಂಹದ ಹೊಟ್ಟೆಯಲ್ಲಿ ಸಿಂಹವೇ ಜನಿಸುತ್ತದೆ. ನರಿ ಹುಟ್ಟುವುದಿಲ್ಲ. ವೀರನೆಂದು ಜಗತ್ತು ಗುರುತಿಸುತ್ತದೆ, ಗೌರವಿಸುತ್ತದೆ ನನ್ನನ್ನು. ನನ್ನಂತಹ ಪರಾಕ್ರಮಿಗೆ ಮಗನಾಗಿ ನಿನ್ನಂತಹ ಕಡುಹೇಡಿ ಜನಿಸುವುದು ಸಾಧ್ಯವೇ! ಕದನಗೈಯ್ಯದೆ ಕುದುರೆಯನ್ನು ಬಿಟ್ಟುಕೊಡುವ ಮನಸ್ಸು ಮಾಡಿದೆಯೇಕೆ! ಸಾಹಸಿಗಳನ್ನು ಸೋಲಿಸುವ ಸಾಮರ್ಥ್ಯ ಇರುವ ವೀರರಿಗೆ ಸೇನೆ ಬೇಕು; ಛತ್ರ ಚಾಮರಗಳ ಸೊಗಸಿರಬೇಕು. ಆದರೆ ನಿನಗೆ ಚತುರಂಗ ಬಲವೇಕೆ! ಛತ್ರ ಚಾಮರಗಳು ಅದೇಕೆ! ಶತ್ರುಗಳನ್ನು ಕೊಲ್ಲಲು ನೆರವಾಗುವ ಆಯುಧಗಳಾದರೂ ಬೇಕೇ ನಿನಗೆ! ಜೀವದಾಸೆಯನ್ನು ಬಿಡು. ಹೋಗು” ಎಂದು ಹಂಗಿಸಿದೆ ಅವನನ್ನು.ಅವನ ತಾಯಿಯನ್ನು ಆಗ ಬೈದದ್ದು ಸಾಲದು ಎನಿಸಿತು. ಮತ್ತೆ ಬೈದೆ. “ನಿನ್ನ ಮಾತೆ ಚಿತ್ರಾಂಗದೆ ನರ್ತಕಿಯಾಗಿರಬೇಕು. ಯಾವುದೋ ಗಂಧರ್ವನಾಯಕನ ಮಗಳಾಗಿರಬೇಕು. ಅವಳು ನಟನೆಯಲ್ಲಿ ಪರಿಣತಿ ಪಡೆದವಳಿರಬೇಕು. ಇಲ್ಲವಾದರೆ ನೀನು ಈ ಬಗೆಯಲ್ಲಿ ಮಣಿಪುರವನ್ನು ಆಳುವ ಅರಸನ ನಟನೆಯನ್ನು ಮಾಡಲು ಸಾಧ್ಯವಿಲ್ಲ. ನಿನ್ನದಿದು ನಿಜ ರಾಜ ಪರಾಕ್ರಮವಲ್ಲ. ಶಕ್ತಿವಂತನ ನಟನೆಯಷ್ಟೇ ನಿನ್ನದು. ಬಹಳ ಪೌರುಷ ತೋರಿದ್ದೀಯ ಬಿಡು! ಕುದುರೆಯನ್ನು ತಡೆದ ಹೋರಾಡಿದ ಅರಸರೆಲ್ಲಾ ಇಲ್ಲಿಯೇ ಇದ್ದಾರೆ. ಅವರ ಮುಂದೆ ಹೋಗು” ಎಂದು ಕುಹಕದ ನುಡಿಯನ್ನಾಡಿದೆ.ನನ್ನ ಬಿರುಸಿನ ನುಡಿಗೆ ಕನಲಿದ ಕಳ್ಳಸುತ ಬಭ್ರುವಾಹನ. ಸುಬುದ್ಧಿಯಲ್ಲಿ ತನ್ನ ದುಃಖವನ್ನು ತೋಡಿಕೊಂಡ. ನನ್ನ ಬಾಯಿಯಿಂದ ಹೊರಬಿದ್ದ ಪ್ರತಿಯೊಂದು ಅಕ್ಷರಗಳೂ ಬತ್ತಳಿಕೆಯಿಂದ ಹೊರಬಂದ ಬಾಣಗಳಂತೆ ಅವನನ್ನು ನೋಯಿಸಿದ್ದವು. ಅವನನ್ನು ಮಾತ್ರವೇ ಬೈದಿದ್ದರೆ ಸಹಿಸಿಕೊಳ್ಳುತ್ತಿದ್ದನೋ ಏನೋ, ಅವನ ತಾಯಿಯನ್ನು ತೆಗಳಿದ್ದನ್ನು ಸಹಿಸಿಕೊಳ್ಳುವುದಕ್ಕಾಗಲಿಲ್ಲ ಅವನಿಗೆ.“ನನ್ನ ತಾಯಿಯನ್ನೇ ಬೈದೆಯಲ್ಲಾ! ನಿನ್ನ ತಲೆಯನ್ನು ಉರುಳಿಸದೆ ಬಿಡುವವನು ನಾನಲ್ಲ. ಇದಂತೂ ನಿಜ” ಎಂದು ಪ್ರತಿಜ್ಞೆಗೈದವನು ತನ್ನವರ ಜೊತೆಗೆ ಅಲ್ಲಿಂದ ಹೊರಟುಹೋದ. ನನಗೆ ಮರಳಿಸಲೆಂದು ಅವನು ತಂದಿದ್ದ ಕುದುರೆಯದು ಮತ್ತೆ ಮರಳಿ ಅವನ ಲಾಯವನ್ನು ಸೇರಿಕೊಂಡಿತು.ನನ್ನವರ ಜೊತೆಗೆ ಶಿಬಿರಕ್ಕೆ ಮರಳಿದ ನನ್ನೊಳಗೆ ಬಭ್ರುವಾಹನ ನುಡಿಯ ನರ್ತನ. ಅವನು ಹೇಳಿದ್ದ ಮಾತದು ನಿಜವಿರಬಹುದೇ! ಎಂಬ ಯೋಚನೆ ಮತ್ತೆ ಮತ್ತೆ ಕಾಡಿತು. ಬಭ್ರುವಾಹನ ನನ್ನೊಡನೆ ಯುದ್ಧ ಹೂಡದೆ ಇನ್ನು ಸುಮ್ಮನಿರುವವಂತೂ ಅಲ್ಲ ಎನ್ನುವುದು ದೃಢವಾಗಿತ್ತು. ಅವನು ನನ್ನ ಮಗನೇ ಆಗಿದ್ದರೆ ನನ್ನೊಂದಿಗಿನ ಅವನ ಯುದ್ಧ ಹಿಂದೆ ತ್ರೇತಾಯುಗದಲ್ಲಿ ಲವಕುಶರು ಶ್ರೀರಾಮನ ಜೊತೆಗೆ ಹೋರಾಡಿದಂತಿರುತ್ತದೆ ಎನಿಸಿತು. ನನ್ನೊಳಗೀಗ ಶ್ರೀರಾಮ ಕಥನದ ಹಿರಿದಕ್ಷರಗಳು ಮೂಡತೊಡಗಿದವು… ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ
ಧಾರಾವಾಹಿ ಸಂಗಾತಿ-126 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಸುಮತಿಯ ಡಯಾಲಿಸಿಸ್ ಗೆ ಬೆಂಗಳೂರಿಗೆ? ರಾತ್ರಿ ತಾಯಿಯ ಜೊತೆಗೆ ಆಸ್ಪತ್ರೆಯಲ್ಲಿ ಮಲಗಲು ಬಂದ ಮಗಳು ಮಾರನೇ ದಿನ ಕಾಲೇಜಿಗೆ ರಜೆ ಹಾಕಿ ಬೆಳಗಿನ ಬಸ್ಸಿನಲ್ಲಿ ತನ್ನ ಊರಿಗೆ ಹೊರಟಳು. ಅಲ್ಲಿ ಹೋಗಿ ತೋಟದ ಸಾಹುಕಾರರು ಹಾಗೂ ಅವರ ಪತ್ನಿ ‘ಅಮ್ಮ’ ಅವರನ್ನು ಭೇಟಿ ಮಾಡಿದಳು. ತನ್ನ ತಾಯಿಗೆ ಡಯಾಲಿಸಿಸ್ ಚಿಕಿತ್ಸೆ ಕೊಡಿಸಬೇಕೆಂದು ವೈದ್ಯರು ಸೂಚಿಸಿರುವ ಬಗ್ಗೆ ಎಲ್ಲಾ ವಿವರಗಳನ್ನು ಅವರಿಗೆ ತಿಳಿಸಿದಳು….ನಿನ್ನ ಅಕ್ಕನಿಗೂ ತಿಳಿಸಿ ಕೊಡಿಸಬೇಕಾದ ಚಿಕಿತ್ಸೆಯನ್ನು ಕೊಡಿಸು….ಇಲ್ಲಿಂದ ಬೆಂಗಳೂರಿನ ಆಸ್ಪತ್ರೆಗೆ ನೀವು ಹೋಗಲು ಬೇಕಾದ ಎಲ್ಲ ವ್ಯವಸ್ಥೆಯನ್ನು ನಾವು ಮಾಡುತ್ತೇವೆ…. ಎಂದರು. ಸಾಹುಕಾರರು ಹಾಗೂ ಅವರ ಪತ್ನಿಯ ಮಾತನ್ನು ಕೇಳಿದ ಹುಡುಗಿಗೆ ಸಂಜೀವಿನಿ ಸಿಕ್ಕಷ್ಟು ಸಂತೋಷವಾಯಿತು. ತನ್ನ ತಾಯಿಯ ಪ್ರತಿಯೊಂದು ಪರಿಸ್ಥಿತಿಯಲ್ಲೂ ಸಹಾಯಕ್ಕೆ ನಿಲ್ಲುವ ಸಾಹುಕಾರರು ಅವರ ಪತ್ನಿಯ ಬಗ್ಗೆ ಗೌರವ ಹೆಚ್ಚಿತು. ತನ್ನ ಕೃತಜ್ಞತೆಯನ್ನು ತಿಳಿಸಲು ಅವಳಿಗೆ ಪದವಿಲ್ಲದಾಯಿತು. ಸಾಹುಕಾರರಿಗೆ ಹಾಗೂ ಅವರ ಪತ್ನಿಗೆ ವಂದಿಸಿ ತುಸು ನೆಮ್ಮದಿಯಿಂದ ತಂಗಿಯನ್ನು ಭೇಟಿ ಮಾಡಲು ಮನೆಗೆ ಹೋದಳು. ತಂಗಿ ಶಾಲೆಗೆ ಹೊರಡುವ ತರಾತುರಿಯಲ್ಲಿದ್ದಳು. ಅಕ್ಕ ಇದ್ದಕ್ಕಿದ್ದ ಹಾಗೆ ಮನೆಗೆ ಬಂದಿರುವುದನ್ನು ಕಂಡು, ತಂಗಿಗೆ ಆಶ್ಚರ್ಯವಾಯಿತು. ಆದರೆ ತಾಯಿಗೆ ಹೆಚ್ಚಿನ ಚಿಕಿತ್ಸೆ ದೊರಕುವ ವಿಷಯ ತಿಳಿದು ಅವಳು ಸಂತೋಷ ಕೊಟ್ಟಳು…. “ಹಾಗಾದರೆ ತಾಯಿಯನ್ನು ಹೇಗೆ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತೀಯಾ?…. ತಾಯಿಗೆ ಹೆಚ್ಚು ನಡೆದಾಡಲು ಸಾಧ್ಯವಿಲ್ಲ ಅಲ್ಲವೇ?…. ನಿನಗೆ ಬೆಂಗಳೂರಿನಂತಹ ದೊಡ್ಡ ನಗರಕ್ಕೆ ಹೋಗಿ ಅಭ್ಯಾಸವಿಲ್ಲ… ಯಾರ ಜೊತೆಗೆ ಹೋಗುತ್ತೀಯಾ?…. ಒಬ್ಬಳೇ ಅಮ್ಮನನ್ನು ಕರೆದುಕೊಂಡು ಹೋಗಲು ಸಾಧ್ಯವೇ ನಿನಗೆ? …. ನಾನು ಈ ಕೆಲಸವನ್ನು ಬಿಟ್ಟು ನಿನ್ನ ಜೊತೆ ಬರುವುದು ಸಾಧ್ಯವಿಲ್ಲ…. ಅದೂ ಅಲ್ಲದೇ ತಾಯಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲು ಮತ್ತು ಚಿಕಿತ್ಸೆ ಕೊಡಿಸಲು ಹೆಚ್ಚು ಹಣ ಬೇಕಲ್ಲವೇ ನಮ್ಮಲ್ಲಿ ಅಷ್ಟು ಹಣ ಇಲ್ಲವಲ್ಲ”…. ಎಂದು ಚಿಂತಿತಳಾಗಿ ಅಕ್ಕನನ್ನು ಕೇಳಿದಳು. ತಂಗಿಯು ಕೇಳಿದ ಪ್ರಶ್ನೆಗಳಿಗೆ….”ತೋಟದ ಸಾಹುಕಾರರು ನಮಗೆ ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾರೆ…. ಅವರ ಕಾರಿನಲ್ಲಿಯೇ ನಮ್ಮ ತಾಯಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವ ವ್ಯವಸ್ಥೆಯನ್ನು ಮಾಡಿಕೊಡುತ್ತೇನೆ ಎಂದು ಕೂಡಾ ತಿಳಿಸಿದ್ದಾರೆ…. ನೋಡೋಣ ….ಚಿಕಿತ್ಸೆಯ ಖರ್ಚಿಗೆ ಹಣವನ್ನು ಅವರು ಕೊಡಬಹುದು…. ಅಮ್ಮನನ್ನು ಕರೆದುಕೊಂಡು ಹೋಗಲು ಜೊತೆಗೆ ಬಾವನನ್ನು ಬರುವಂತೆ ಕೇಳಿಕೊಳ್ಳುತ್ತೇನೆ…. ನೀನು ಹೆಚ್ಚು ಯೋಚನೆ ಮಾಡಬೇಡ…. ನೀನೊಬ್ಬಳೇ ಇಲ್ಲಿರುವುದನ್ನು ಯೋಚಿಸಿ ನನ್ನ ಮನಸ್ಸು ಸದಾ ಚಿಂತೆಗೆ ಒಳಗಾಗುತ್ತಿದೆ…. ನಮ್ಮ ಅನಿವಾರ್ಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನೀನು ಒಬ್ಬಳೇ ಇಲ್ಲಿದ್ದು ಅಮ್ಮನ ಕೆಲಸವನ್ನು ಕೂಡ ಮಾಡುತ್ತಿದ್ದೀಯಾ….. ನನ್ನ ಜೊತೆಗೆ ಹೆಗಲುಕೊಟ್ಟು ನಿಂತಿರುವ ನೀನು ಇಷ್ಟು ಚಿಕ್ಕ ವಯಸ್ಸಿಗೆ ನನಗಿಂತ ದೊಡ್ಡವಳಾಗಿ ಬಿಟ್ಟೆ”….. ಎಂದು ಹೇಳುತ್ತಾ ತಂಗಿಯನ್ನು ಬಿಗಿಯಾಗಿ ಅಪ್ಪಿಕೊಂಡಳು…. ಅಕ್ಕ ಈಗ ನಮಗೆ ನಾವೇ ಇರುವುದು…. ಹಾಗಾಗಿ ನಾವಿಬ್ಬರೂ ನಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಬೇಕು…. ನೀನು ಧೈರ್ಯವಾಗಿ ನಮ್ಮ ತಾಯಿಯನ್ನು ಕರೆದುಕೊಂಡು ಬೆಂಗಳೂರಿಗೆ ಹೋಗಿ ಬಾ…. ನನಗೆ ಈಗ ಒಬ್ಬಳೇ ಇದ್ದು ಅಭ್ಯಾಸವಾಗಿ ಹೋಗಿದೆ”….ಎಂದಳು. ಇಬ್ಬರ ಕಣ್ಣುಗಳೂ ಹನಿ ಗೂಡಿದವು. ಕೆಲಸಕ್ಕೆ ಹೋಗುವ ಸಮಯವಾಗಿದ್ದರಿಂದ ತಂಗಿ ಮನೆಗೆ ಬೇಗ ಹಾಕಿ ಹೊರಟಳು. ಅಕ್ಕನೂ ಬಸ್ ನಿಲ್ದಾಣದ ಕಡೆಗೆ ಹೊರಟಳು. ಹಿಂತಿರುಗಿ ಸಕಲೇಶಪುರಕ್ಕೆ ಹೋಗಲು ಮಧ್ಯಾಹ್ನದ ಬಸ್ ಬರುವುದಕ್ಕೆ ಇನ್ನೂ ಸ್ವಲ್ಪ ಸಮಯವಿತ್ತು. ಹಾಗಾಗಿ ಆ ಹುಡುಗಿ ಬಸ್ ನಿಲ್ದಾಣದ ಕಟ್ಟೆಯ ಮೇಲೆ ಕುಳಿತುಕೊಂಡು ತನ್ನ ಪುಸ್ತಕವನ್ನು ತೆರೆದು ಓದಲು ಪ್ರಾರಂಭಿಸಿದಳು. ಆಗ ಅಲ್ಲಿ ಹಾದು ಹೋಗುತ್ತಿದ್ದ ಕೆಲಸಗಾರರು ಈ ಹುಡುಗಿಯನ್ನು ನೋಡಿ…. “ಸುಮತಿ ಟೀಚರ್ ಹೇಗಿದ್ದಾರೆ?”…. ಎಂದು ವಿಚಾರಿಸಿಕೊಳ್ಳುತ್ತಿದ್ದರು…. “ಪರವಾಗಿಲ್ಲ…. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ…. ಸುಧಾರಿಸಿಕೊಳ್ಳುತ್ತಿದ್ದಾರೆ”…. ಎಂದು ಉತ್ತರ ಕೊಡುತ್ತಿದ್ದಳು. ಅದೇ ರೀತಿ ತಮ್ಮ ಕುಟುಂಬಕ್ಕೆ ಆಪ್ತರಾದ ಮಲಯಾಳಿ ಡ್ರೈವರ್ ಹಾಗೂ ಅವರ ಪತ್ನಿ ಆ ದಾರಿಯಲ್ಲಿ ಬಂದರು. ಸುಮತಿಯ ಎರಡನೇ ಮಗಳನ್ನು ಕಂಡು ಅವಳ ಬಳಿಗೆ ಬಂದು, ಸುಮತಿಯ ಆರೋಗ್ಯದ ಬಗ್ಗೆ ವಿಚಾರಿಸಿಕೊಂಡರು. ಅವರು ತಮ್ಮ ಕುಟುಂಬಕ್ಕೆ ಆಪ್ತರಾಗಿದ್ದ ಕಾರಣ ಎಲ್ಲಾ ವಿಚಾರವನ್ನು ಆ ಹುಡುಗಿ ಅವರಿಗೆ ತಿಳಿಸಿದಳು. ಅವರಿಬ್ಬರೂ ಕೂಡ ಎಸ್ಟೇಟಿನ ಸಾಹುಕಾರರು ಹಾಗೂ ಅಮ್ಮನನ್ನು ಕೊಂಡಾಡಿದರು…. “ನೀನು ಯಾವುದಕ್ಕೂ ಹೆದರಬೇಡ…. ನಮ್ಮ ಸಾಹುಕಾರರು ಮತ್ತು ಅಮ್ಮ ಇದ್ದಾರೆ…. ಅವರಿಬ್ಬರೂ ಬಹಳ ಒಳ್ಳೆಯವರು…. ದಯಾಳುಗಳು…. ಎಲ್ಲರಿಗೂ ಸಹಾಯ ಮಾಡುವ ಗುಣ ಉಳ್ಳವರು…. ನೀನು ಧೈರ್ಯವಾಗಿ ಅಮ್ಮನನ್ನು ಕರೆದುಕೊಂಡು ಬೆಂಗಳೂರಿಗೆ ಹೋಗಿ ಬಾ….. ಎಲ್ಲವೂ ಒಳ್ಳೆಯದಾಗಲಿ”…. ಎಂದು ಹೇಳಿ ಆ ಹುಡುಗಿಯ ತಲೆಯನ್ನು ನೇವರಿಸಿ ಅಲ್ಲಿಂದ ಹೊರಟುಹೋದರು. ಮಧ್ಯಾಹ್ನದ ಹನ್ನೆರಡು ಗಂಟೆಯ ಬಸ್ಸು ಬಂದಿತು. ಬಸ್ಸಿನಲ್ಲಿ ಹುಡುಗಿಯು ಸಕಲೇಶಪುರದ ಕಡೆಗೆ ಹೊರಟಳು. ಅವಳು ಆಶ್ರಮಕ್ಕೆ ಬಂದಾಗ ಅವಳ ಗೆಳತಿ ಮಧ್ಯಾಹ್ನದ ಅಡುಗೆಯನ್ನು ಮಾಡಿ ಮುಗಿಸಿ ಯಾವುದೋ ಪುಸ್ತಕವನ್ನು ಓದುತ್ತಾ ಕುಳಿತಿದ್ದಳು. ಸುಮತಿಯ ಮಗಳನ್ನು ಕಂಡೊಡನೆ, ಹೋದ ವಿಷಯ ಏನಾಯ್ತು ಎಂದು ಉತ್ಸುಕತೆಯಿಂದ ಕೇಳಿದಳು. ಸಾಹುಕಾರರು ಮತ್ತು ಅವರ ಪತ್ನಿ ಹೇಳಿದ ವಿಷಯವನ್ನು ತಿಳಿಸಿದಳು. ಅವಳಿಗೂ ಸಂತೋಷವಾಯಿತು…. “ಸರಿ ನಡಿ ಊಟ ಮಾಡು…. ಆಸ್ಪತ್ರೆಗೆ ಹೋಗಿ ನಿನ್ನ ತಾಯಿಗೆ ಈ ವಿಷಯವನ್ನ ತಿಳಿಸು…. ಅವರಿಗೂ ಬಹಳ ಸಂತೋಷವಾಗುತ್ತದೆ”…. ಎಂದಳು. ಇಬ್ಬರೂ ಒಟ್ಟಿಗೆ ಕುಳಿತು ಊಟ ಮಾಡಿದರು. ನಂತರ ಸುಮತಿಯ ಮಗಳು ತಾಯಿಯನ್ನು ನೋಡಲು ಆಸ್ಪತ್ರೆಗೆ ಹೊರಟಳು. ತಾಯಿಯ ಬಳಿಗೆ ಹೋಗಿ ಈ ಸಂತಸದ ಸುದ್ದಿ ಯಾವಾಗ ತಿಳಿಸುತ್ತೇನೋ ಎನ್ನುವ ತವಕ ಅವಳಲ್ಲಿತ್ತು. ಹಾಗಾಗಿ ಬೇಗನೇ ಹೆಜ್ಜೆ ಹಾಕಿದಳು. ಲಘುಬಗೆಯಿಂದ ಆಸ್ಪತ್ರೆಯ ಮೆಟ್ಟಿಲು ಹತ್ತಿದಳು. ಓಡು ನಡಿಗೆಯಲ್ಲಿ ವಾರ್ಡ್ ತಲುಪಿದಳು. ಸುಮತಿ ಆಸ್ಪತ್ರೆಯಿಂದ ದೊರೆತ ಮಧ್ಯಾಹ್ನದ ಊಟವನ್ನು ಮಾಡಿ, ಸಣ್ಣಗೆ ನಿದ್ರೆ ಮಾಡುತ್ತಿದ್ದಳು. ಯಾರೋ ಬಂದು ನಿಂತದ್ದು ಅರಿವಾಗಿ ಕಣ್ಣುಬಿಟ್ಟಳು. ಮಗಳ ಮುಖವನ್ನು ನೋಡಿದಳು ಅವಳು ಇಂದು ಬಹಳ ಖುಷಿಯಲ್ಲಿ ಇರುವಂತೆ ಕಂಡಿತು. ನಿಧಾನವಾಗಿ ಎದ್ದು ಕುಳಿತು ….”ಮಗಳೇ ಊಟ ಮಾಡಿದೆಯಾ?”…. ಎಂದು ಕೇಳಿದಳು ಅದಕ್ಕುತ್ತರವಾಗಿ ‘ಹೂಂ’ ಎಂದು ಹೇಳಿ ತಾಯಿಯನ್ನು ಬಿಗಿಯಾಗಿ ಅಪ್ಪಿಕೊಂಡಳು.
ಧಾರಾವಾಹಿ ಸಂಗಾತಿ ಸುಜಾತಾ ರವೀಶ್ ವೃತ್ತಿ ವೃತ್ತಾಂತ ವೃತ್ತಿ ಬದುಕಿನ ಹಿನ್ನೋಟ ನೋಟ -37 ಜನವರಿ ೨೦೦೫ ರಿಂದ ಏಪ್ರಿಲ್ ೨೦೨೬ ರಲ್ಲಿ ನಾನು ನಿವೃತ್ತಿ ಹೊಂದುವ ತನಕ ಕೆಲಸ ಮಾಡಿದ್ದು ಈ ಶಾಖೆ ಐದರಲ್ಲಿ ವೃತ್ತಿ ಜೀವನದ ಅರ್ಧಕ್ಕಿಂತ ಹೆಚ್ಚು ಭಾಗ ಕಳೆದದ್ದು ಇಲ್ಲೇ. ಯಾವುದನ್ನು ಬರೆಯುವುದು ಯಾವುದನ್ನು ಬಿಡುವುದು ಎಂದೆ ತೋಚದಷ್ಟು ಸುದೀರ್ಘ ನೆನಪಿನ ಯಾನ ಇದು. ಒಂದು ಬಾರಿ ಲೂನಾದಿಂದ ಬಿದ್ದು ಅಪಘಾತವಾಗಿ ಒಂದು ರೀತಿ ಬಿಸಿ ಹಾಲು ಕಂಡ ಬೆಕ್ಕಿನಂತೆ ಆಗಿಬಿಟ್ಟಿದ್ದೆ. ಆದರೆ ರವೀಶ್ ಅವರು ಸೇಲ್ಸ್ ಮೇಲೆ ಬೇರೆ ಊರುಗಳಿಗೆ ಹೋದಾಗ ಆಟೋದಲ್ಲಿ ಹೋಗಬೇಕಿತ್ತು. ಗೆಳತಿ ಶೈಲಾ ಒಮ್ಮೊಮ್ಮೆ ಅವಳ ದ್ವಿಚಕ್ರ ವಾಹನದಲ್ಲಿ ಕರೆದೊಯ್ಯುತ್ತಿದ್ದರೂ ಸದಾ ತೊಂದರೆ ಕೊಡುವುದು ನನಗೆ ಇಷ್ಟವಾಗುತ್ತಿರಲಿಲ್ಲ. ಹಾಗಾಗಿ ಮತ್ತೆ ಒಂದು ಸೆಕೆಂಡ್ ಹ್ಯಾಂಡ್ ವಾಹನ ಕೊಂಡು ಧೈರ್ಯವಾಗಿ ಆಫೀಸಿಗೆ ಹೋಗಲು ಆರಂಭಿಸಿದೆ. ನಾನು ಶಾಖೆ ಎರಡರಲ್ಲಿ ಇದ್ದಾಗಲೇ ನನ್ನ ತಂಗಿ ವೈಶಾಲಿ ಅವರು ರಾಮಕೃಷ್ಣನಗರದ ಮನೆ ಕೊಂಡುಕೊಂಡು ಅಲ್ಲಿಗೆ ಬಂದಿದ್ದರು. ಅವರ ಜೊತೆಯೇ ನನ್ನ ತಂದೆ ಇದ್ದದ್ದು .ಹಾಗಾಗಿ ಮಧ್ಯಾಹ್ನ ಊಟದ ವೇಳೆಯಲ್ಲಿ ಅಥವಾ ಸಂಜೆ ಮನೆಗೆ ಹೋಗುವಾಗ ಹೋಗಿ ಅವರನ್ನು ಭೇಟಿಯಾಗಲು ನನಗೆ ವಾಹನವಿದ್ದುದು ತುಂಬಾ ಅನುಕೂಲಕರವಾಗಿತ್ತು. ಹೊಸ ವ್ಯವಹಾರ ವಿಭಾಗದಲ್ಲಿ ಇದ್ದರಿಂದ ಆ ವರ್ಷ ಮಾರ್ಚ್ ಕೊನೆಯ ವರ್ಷಾಂತ್ಯದ ಕೆಲಸಗಳನ್ನು ಸಮರ್ಪಕವಾಗಿ ಮುಗಿಸಿ ವಿಭಾಗೀಯ ಕಚೇರಿಗೆ ಹೋಗಿ ಸಲ್ಲಿಸಿ ಬಂದಿದ್ದಾಯಿತು. ಈ ಶಾಖೆಯಲ್ಲಿ ಎಲ್ಲರೂ ಪಕ್ಕದಲ್ಲಿ ಇದ್ದ ಜಯಲಕ್ಷ್ಮಿ ಹೋಟೆಲಿಗೆ ಕಾಫಿಗೆ ಹೋಗುತ್ತಿದ್ದದ್ದು ನಾನು ಅವರೊಂದಿಗೆ ಹೋಗಿ ಬರುತ್ತಿದ್ದೆ. ಅಲ್ಲಿ ಎದುರುಗಡೆ ಮಲ್ಲಿಗೆ ಕೆಫೆ ಎಂಬ ಹೋಟೆಲ್ ಇತ್ತು .ಅಲ್ಲಿ ಬಿಸಿಬೇಳೆ ಬಾತ್ ತುಂಬಾ ಚೆನ್ನಾಗಿ ಮಾಡುತ್ತಿದ್ದರು. ಒಮ್ಮೊಮ್ಮೆ ಊಟಕ್ಕೆ ಮನೆಗೆ ಹೋಗದೆ ಅಲ್ಲಿ ನಾನು ಗೆಳತಿಯರು ಒಂದೊಂದು ಬಿಸಿಬೇಳೆ ಬಾತ್ ತೆಗೆದುಕೊಂಡು ಮೊಸರನ್ನು ಇಬ್ಬರು ಮೂವರು ಶೇರ್ ಮಾಡುತ್ತಿದ್ದೆವು. ಆ ಹೋಟೆಲ್ ನನ್ನ ಪಿಯುಸಿ ಸಹಪಾಠಿ ಶ್ರೀನಿವಾಸ್ ಅವರದಂತೆ. ಅದು ಆಗಲೇ ಕ್ಲೋಸ್ ಆಗಿತ್ತು .ಆನಂತರ ನಮ್ಮ ಪಿಯುಸಿ ಸಹಪಾಠಿಗಳು ವಾಟ್ಸಾಪ್ ಗುಂಪು ಮಾಡಿಕೊಂಡಾಗ ಆ ವಿಷಯ ತಿಳಿದು ಬಂತು. ನಾನು ರೇಗಿಸುತ್ತಿದ್ದೆ ನಿನ್ನದು ಎಂದು ತಿಳಿದಿದ್ದರೆ ದಿನ ಅಲ್ಲಿಗೆ ಊಟಕ್ಕೆ ಬಂದುಬಿಡಬಹುದಿತ್ತು ಅಂತ.ಇಲ್ಲಿನ ಮತ್ತೊಂದು ಆಕರ್ಷಣೆ ಎಂದರೆ ಅಲ್ಲೇ ಸರ್ಕಲ್ ಪಕ್ಕದಲ್ಲಿ ಇದ್ದ ಕನಕಗಿರಿ ಸೀರೆಯ ಅಂಗಡಿ. ಅಲ್ಲಿಗೆ ಹೊಸ ಸ್ಟಾಕ್ ಬಂದಾಗಲೆಲ್ಲ ಹೋಗಿ ನೋಡುತ್ತಿದ್ದವು ನೋಡಿದ ಮೇಲೆ ತೆಗೆದುಕೊಳ್ಳದಿದ್ದರೆ ಆಗುತ್ತದೆಯೇ… ಹಾಗಾಗಿ ಬಹಳಷ್ಟು ಸೀರೆಗಳನ್ನು ಆ ಅಂಗಡಿಯಲ್ಲಿ ಕೊಂಡಿದ್ದೆವು. ಈ ಮಧ್ಯೆ ಮುಂದಿನ ಜನವರಿಯಲ್ಲಿ ಶಾಖೆಯ ಕಟ್ಟಡವನ್ನು ಖಾಲಿ ಮಾಡಿ ಅದೇ ರಸ್ತೆಯ ಇನ್ನೊಂದು ತುದಿಯಲ್ಲಿ ಇದ್ದ ಎಸ್ ಬಿ ಎಂ ಬ್ಯಾಂಕಿನ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು ಅಲ್ಲಿ ಎರಡನೆಯ ಮಹಡಿಯಲ್ಲಿ ನಮ್ಮ ಕಚೇರಿ ಲಿಫ್ಟ್ ಸೌಲಭ್ಯ ಏನೋ ಇತ್ತು .ಆದರೆ ಮೂರು ಮೂರು ದಿನಕ್ಕೂ ಲಿಫ್ಟ್ ಕೆಟ್ಟುಹೋಗುತ್ತಿತ್ತು . ನಾವು ಕೆಲವರಿಗೆನೋ ಸುಲಭವಾಗಿ ಹತ್ತಲು ಆಗುತ್ತಿತ್ತು ಆದರೆ ವಯಸ್ಸಾಗಿದ್ದ ಶಾಂತ ಅವರಿಗೆ ಹಾಗೂ ಆರೋಗ್ಯ ಸರಿ ಇಲ್ಲದಿದ್ದ ಲೀಲಾವತಿ ಅವರಿಗೆಲ್ಲ ತುಂಬಾ ಕಷ್ಟವಾಗುತ್ತಿತ್ತು. ಲೀಲಾವತಿ ಆ ವೇಳೆಗಾಗಲೇ ನಾಟಕ ಸಣ್ಣ ಕಥೆ ಸಂಕಲನಗಳನ್ನು ಪ್ರಕಟಿಸಿ ಹೆಸರಾಂತ ಲೇಖಕಿಯಾಗಿದ್ದರು ಎಷ್ಟು ನಿಯತಕಾಲಿಕೆಗಳಲ್ಲಿ ಅವರ ಕಥೆಗಳು ಬಂದಿದ್ದವು. ಆದರೆ ನಾನು ಆಗ ಬರೆಯಲು ಇನ್ನೂ ಆರಂಭಿಸಿರಲಿಲ್ಲ ಈಗ ಅವರ ಜೊತೆ ಇದ್ದಿದ್ದರೆ ಎಷ್ಟೋ ಮಾರ್ಗದರ್ಶನ ಸಿಗುತ್ತಿತ್ತು ಅನಿಸುತ್ತೆ ನಮ್ಮ ಶಾಖೆಯಿಂದ ವಿಭಾಗೀಯ ಕಚೇರಿಗೆ ವರ್ಗಾವಣೆ ತೆಗೆದುಕೊಂಡು ಹೋಗಿ ಒಂದೆರಡು ವರ್ಷಗಳಾದ ನಂತರ ಅವರ ದೇಹಾಂತವಾಯಿತು ಒಳ್ಳೆಯ ಗೆಳತಿ ಆಕೆ.ಇಲ್ಲಿ ಪಕ್ಕದಲ್ಲಿಯೇ ಮೋರ್ ಹಾಗೂ ರಸ್ತೆ ದಾಟಿದ ನಂತರ ಲಾಯಲ್ ವರ್ಲ್ಡ್ ಗಳು ಇದ್ದಿದ್ದು ಸಂಜೆ ಕಚೇರಿ ಮುಗಿದ ನಂತರ ಸಾಮಾನುಗಳನ್ನು ತೆಗೆದುಕೊಂಡು ಹೋಗಲು ತುಂಬಾ ಅನುಕೂಲವಾಗುತಿತ್ತು. ಅದರಲ್ಲೂ ಮೋರ್ನಲ್ಲಿ ಬುಧವಾರದ ದಿನ ತರಕಾರಿ ಹಾಗೂ ಹಣ್ಣುಗಳು ಸ್ವಲ್ಪ ರಿಯಾಯಿತಿ ದರದಲ್ಲಿ ದೊರೆಯುತ್ತಿತ್ತು. ಇಲ್ಲಿ ಎದುರುಗಡೆ ಶಿವ ಸಾಗರ್ ಎಂಬ ಹೋಟೆಲ್ ಇದ್ದರೂ ಸಹ ಕಚೇರಿಗೆ ಒಬ್ಬ ಹುಡುಗ ಟೀ ತಂದು ಕೊಡುತ್ತಿದ್ದು ಎಲ್ಲರೂ ಅಲ್ಲೇ ತೆಗೆದುಕೊಳ್ಳುತ್ತಿದ್ದೆವು. ಇಲ್ಲಿ ಒಂದೇ ಮಹಡಿಯಲ್ಲಿ ಎರಡು ಭಾಗಗಳಿದ್ದವು ಒಂದು ಭಾಗದಲ್ಲಿ ಕ್ಯಾಶ್ ಕೌಂಟರ್ ಲೆಕ್ಕಪತ್ರ ವಿಭಾಗ ಪಾಲಿಸಿ ಸೇವಾ ವಿಭಾಗ ಎಸ್ಎಸ್ ವಿಭಾಗ ಮತ್ತು ದಾವಾಗಿ ಭಾಗಗಳಿದ್ದವು ಮತ್ತೊಂದು ಭಾಗದಲ್ಲಿ ಕಂಪ್ಯೂಟರ್ ಸೆಕ್ಷನ್ ಸಾಕಾಧಿಕಾರಿಗಳ ಕಚೇರಿ ವಿಕ್ರಯ ವಿಭಾಗ ಮತ್ತು ಹೊಸ ವ್ಯವಹಾರಗಳ ವಿಭಾಗ, ಕಛೇರಿ ಸೇವಾ ವಿಭಾಗಗಳೂ ಇದ್ದು ಡೆವಲಪ್ಮೆಂಟ್ ಆಫೀಸರ್ಸ್ ಹಾಗೂ ಏಜೆಂಟ್ ಗಳ ವಿಭಾಗವೂ ಇಲ್ಲಿಯೇ ಇತ್ತು. ಪಾರ್ಕಿಂಗ್ ವ್ಯವಸ್ಥೆ ಎಲ್ಲವೂ ಚೆನ್ನಾಗಿ ಇದ್ದದ್ದರಿಂದ ಬಹಳ ಬೇಗ ಅಡ್ಜಸ್ಟ್ ಆಗಿಬಿಟ್ಟಿತ್ತು. ಈ ನಡುವೆ ಹಳೆಯ ಕಟ್ಟಡದಲ್ಲಿ ಇದ್ದಾಗಲೇ ನಮ್ಮ ತಂದೆ ಸ್ಕೂಟರ್ನಿಂದ ಬಿದ್ದು ತೊಡೆ ಮೂಳೆ ಆಪರೇಷನ್ ಆಗಿತ್ತು. ನಂತರದಲ್ಲಿ ಅವರ ಆರೋಗ್ಯ ಕೆಟ್ಟು ಕೆಮ್ಮು ಹೆಚ್ಚಾಗಿ ಉಸಿರಾಟ ಕಷ್ಟವಾಗಿ ಅಪೋಲೋ ಆಸ್ಪತ್ರೆಗೆ ಸೇರಿಸಿದೆವು. ಕಡೆಗೂ ಅವರನ್ನು ಉಳಿಸಿಕೊಳ್ಳಲು ನಮಗೆ ಆಗಲೇ ಇಲ್ಲ. ಯಾಕೋ ಅಪ್ಪ ನಾನು ಕಳೆದಿಕೊಂಡ ಮೇಲೆ ಎಲ್ಲದರಲ್ಲಿ ನಿರಾಸೆ. ಒಂದು ರೀತಿ ಖಿನ್ನತೆ ಕಾಡುತ್ತಿತ್ತು. ಆಗ ಪೂರ್ತಿ ಕಚೇರಿಯ ಕೆಲಸಗಳಲ್ಲಿ ತೊಡಗಿಸಿಕೊಂಡು ನನ್ನನ್ನು ಮರೆಯಲು ಪ್ರಯತ್ನಿಸುತ್ತಿದೆ . ಪಾಲಿಸಿದಾರರ ಹುಟ್ಟಿದ ದಿನಾಂಕ ಬದಲಾವಣೆ ಆ ರೀತಿ ಎಲ್ಲಾ ತಿದ್ದುವಿಕೆಯ ಕೆಲಸಗಳನ್ನು ಮಾಡತೊಡಗಿದ್ದು ಆಫೀಸ್ನ ಸಮಯದ ನಂತರ 5:30 ಇಂದ 6.30 ತನಕ ಈ ರೀತಿ ಕೆಲಸಗಳನ್ನು ಮಾಡುತ್ತಿದ್ದೆವು. ಆಗ ಶೈಲಾ ನನಗೆ ತುಂಬಾ ಸಹಕಾರ ನೀಡಿ ಜೊತೆಯಲ್ಲಿ ಇರುತ್ತಿದ್ದಳು. ಆಗ ಪಾಲಿಸಿ ಸೇವಾ ವಿಭಾಗದ ಆಡಳಿತ ಅಧಿಕಾರಿಗಳಾಗಿದ್ದವರು ಶ್ರೀ ಲಕ್ಷ್ಮೇಂದ್ರ ಕುಮಾರ್. ಅವರು ಈ ಹಿಂದೆ ಸಕಲೇಶಪುರದಲ್ಲಿ ಅವರು ನನ್ನೊಂದಿಗೆ ಕೆಲಸ ಮಾಡುತ್ತಿದ್ದರು. ಬೇರೆಯ ಕೆಲಸಗಳನ್ನು ಮಾಡುತ್ತಿದ್ದು ಒಂದು ರೀತಿ ನನಗೆ ನನ್ನ ಸಂಸ್ಥೆಗೆ ಸೇವೆ ಸಲ್ಲಿಸುವುದರಲ್ಲಿ ಒಂದು ತೃಪ್ತಿ ತಂದು ಕೊಟ್ಟಿದ್ದು ಎಂದು ಮಾತ್ರ ಹೇಳಬಹುದು. ಮೊದಲಿನಿಂದಲೂ ನಾನು ನನ್ನ ವಿಭಾಗ ಮಾತ್ರ ಎಂಬ ಚೌಕಟ್ಟು ಹಾಕಿಕೊಂಡಿರಲಿಲ್ಲ . ಈವರೆಗೆ ಮಾಡಿ ನನಗೆ ಚೆನ್ನಾಗಿ ತಿಳಿದ ವಿಭಾಗಗಳ ಕೆಲಸ ಆಗಿದ್ದರೆ ಅಥವಾ ಅಲ್ಲಿ ಹೆಚ್ಚುವರಿ ಕೆಲಸ ಆಗಿ ನನ್ನ ಅವಶ್ಯಕತೆ ಇದ್ದಿದ್ದರೆ ಸದಾ ನನ್ನ ನೆರವಿನ ಹಸ್ತ ನೀಡುತ್ತಲೇ ಇರುತ್ತಿದ್ದೆ .ಈ ಮಾತನ್ನು ನನ್ನೊಂದಿಗೆ ಕೆಲಸ ಮಾಡಿದೆ ಎಲ್ಲಾ ಅಧಿಕಾರಿಗಳು ಮುಕ್ತ ಕಂಠದಿಂದ ಶ್ಲಾಘನೆ ಮಾಡುತ್ತಾರೆ. ಹೊಸ ವ್ಯವಹಾರ ವಿಭಾಗದಲ್ಲಿ ಬಹಳಷ್ಟು ದಿನ ಕೆಲಸ ಮಾಡಿದ್ದರಿಂದ ಒಂದು ರೀತಿಯ “ಪಂಟರ್” ಆಗಿಬಿಟ್ಟಿದ್ದೆ. ಬೇರೆ ಶಾಖೆಯವರು ವಿಭಾಗಿಯ ಕಛೇರಿಯವರೂ ಸಹ ಕೆಲವೊಮ್ಮೆ ನನ್ನ ಬಳಿ ಸಲಹೆ ಸೂಚನೆಗಳನ್ನು ತೆಗೆದುಕೊಳ್ಳುತ್ತಿದ್ದರು. ಸಂದೇಹಗಳನ್ನು ಪರಿಹರಿಸಿಕೊಳ್ಳುತ್ತಿದ್ದರು. ಸಿ ಕೆ ರವಿ ಶಾಖಾಧಿಕಾರಿಗಳು ವರ್ಗವಾಗಿ ಹೋಗಿ ಮಂಜುನಾಥ್ ಎನ್ನುವವರು ಬಂದರು. ಅವರು ಮೊದಲು ಪತ್ರಕರ್ತರಾಗಿದ್ದರಂತೆ. ಹಾಗಾಗಿ ಸಾಹಿತ್ಯಾಸಕ್ತರು.ಎಷ್ಟೋ ಸಾಹಿತ್ಯದ ವಿಷಯಗಳನ್ನು ಮಾತನಾಡುತ್ತಿದ್ದೆವು. ಅವರು ಸಹ ನನಗೆ ಹೊಸ ವ್ಯವಹಾರ ವಿಭಾಗದಿಂದ ಬದಲಾವಣೆ ತೆಗೆದುಕೊಳ್ಳಲು ಬಿಡಲೇ ಇಲ್ಲ. ಅವರು ವರ್ಗವಾಗಿ ಹೋಗುವ ಮುಂಚೆ ಎಲ್ಲರಿಗೂ ವಿಭಾಗ ಬದಲಾವಣೆಗಳನ್ನು ಮಾಡಿದರು ಆಗ ನಾನು ತುಂಬಾ ದಿನಗಳಿಂದ ಬಯಸುತ್ತಿದ್ದ ಪಾಲಿಸಿ ಸೇವಾ ವಿಭಾಗಕ್ಕೆ ಬದಲಾವಣೆ ಸಿಕ್ಕಿತು. ಅಲ್ಲಿ ಪಾಲಿಸಿ ಸಾಲ ಕೊಡುವ ವಿಭಾಗ ಮತ್ತು ಇತರೆ ಕೆಲಸಗಳ ವಿಭಾಗ ನನ್ನ ಪಾಲಿಗೆ ಬಂತು. ನನ್ನದೇ ಹೆಸರಿನ ಕೆ ಸುಜಾತ ಎನ್ನುವವರು ಮತ್ತು ಶಿವಶಂಕರ್ ಎನ್ನುವವರು ನನಗೆ ಸಹಾಯಕರು ಮೂರು ಜನವು ಸೇರಿ ಹಳೆಯ ಬಾಕಿ ಇದ್ದದ್ದನ್ನು ಮುಗಿಸಿದಲ್ಲದೆ ಅಂದು ಅರ್ಜಿ ಕೊಟ್ಟ ಸಾಲಗಳನ್ನು ಅಂದೆ ವಿಲೇವಾರಿ ಮಾಡುವಷ್ಟು ಮಟ್ಟಕ್ಕೆ ಒಂದು ತಿಂಗಳಲ್ಲಿ ತೆಗೆದುಕೊಂಡು ಬಂದೆವು. ಅಂದಿನಿಂದ ಇಂದಿನವರೆಗೂ ನಮ್ಮ ಶಾಖೆ ಐದರಲ್ಲಿ ಅಂದು ಕೊಟ್ಟ ಅರ್ಜಿಗಳು ಅಂದೇ ವಿಲೇವಾರಿ ಆಗುವಂತೆ ಕ್ರಮ ಇಂದಿಗೂ ನಡೆದುಕೊಂಡು ಬಂದಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಈ ಸಂಪ್ರದಾಯಕ್ಕೆ ನಾಂದಿ ಹಾಡಿದ್ದು ನಮ್ಮ ಕಾಲದಲ್ಲಿ ಎಂದು ಹೇಳಲು ತುಂಬಾ ಸಂತೋಷವಿದೆ.ಆಗ FEAP Front End Application Programme ಹೊಸದಾಗಿ ಚಾಲ್ತಿಯಲ್ಲಿತ್ತು. 1990 ರ ದಶಕದ ಕೊನೆಯಲ್ಲಿ ಮತ್ತು 2000 ರ ಆರಂಭದಲ್ಲಿ LIC ಪರಿಚಯಿಸಿದ ಒಂದು ಮೂಲಭೂತ ಸಾಫ್ಟ್‌ವೇರ್ ಇದು.. ಇದಕ್ಕೂ ಮುನ್ನ ಬಹುತೇಕ ಕೆಲಸಗಳು ಹಸ್ತಪ್ರತಿ (Manual ledgers) ಅಥವಾ ಹಳೆಯ ಕಂಪ್ಯೂಟರ್ ಪ್ರೋಗ್ರಾಂಗಳ ಮೂಲಕ ನಡೆಯುತ್ತಿದ್ದವು. ಅದನ್ನು ಡಿಜಿಟಲೀಕರಣಗೊಳಿಸಲು FEAP ತರಲಾಯಿತು.ಉದ್ದೇಶ: ಎಲ್.ಐ.ಸಿ ಶಾಖೆಗಳ (Branch Offices) ಕೌಂಟರ್‌ಗಳಲ್ಲಿ ಗ್ರಾಹಕರ ಸೇವೆಗಳನ್ನು ವೇಗಗೊಳಿಸುವುದು.ಮುಖ್ಯ ಕಾರ್ಯಗಳು: ಪಾಲಿಸಿಯ ಸದ್ಯದ ಸ್ಥಿತಿ (Policy Status), ಸಾಲ ಮತ್ತು ಪುನಶ್ಚೇತನದ ಉಲ್ಲೇಖಗಳು (Loan & Revival quotations), ಕಂತು ಪಾವತಿ (Premium payments) ಮತ್ತು ವಿಳಾಸ ಬದಲಾವಣೆಯಂತಹ ಮೂಲಭೂತ ಕೆಲಸಗಳನ್ನು ಮಾಡಲು ಇದು ಸಹಕಾರಿಯಾಗಿತ್ತು.ಕಾರ್ಯವೈಖರಿ: ಇದು ಆಯಾ ಶಾಖೆಯ ಸ್ಥಳೀಯ ಸರ್ವರ್‌ಗಳ (Local Servers) ಆಧಾರದ ಮೇಲೆ ಕೆಲಸ ಮಾಡುತ್ತಿತ್ತು. ನಂತರದ ದಿನಗಳಲ್ಲಿ ಇವುಗಳನ್ನು ವ್ಯಾನ್ (WAN – Wide Area Network) ಮೂಲಕ ಜೋಡಿಸಲಾಯಿತು. ಕಂಪ್ಯೂಟರಿಕರಣ ಎಂದರೆ garbage in garbage out. ಹಾಗಾಗಿ ಅದಕ್ಕೆ ಕೊಡುವ ಎಲ್ಲಾ ಡಾಟಾಗಳು ಸರಿಯಾಗಿರಬೇಕು. ಹಾಗಾಗಿ ರೆಕಾರ್ಡ್ಸ್ ಗಳ ಶುದ್ಧೀಕರಣ ಅಂದರೆ purification of records ಆಗಲೇ ಬೇಕಿತ್ತು ಆ ನಿಟ್ಟಿನಲ್ಲಿ ಪಾಲಿಸಿ ಸೇವಾ ವಿಭಾಗದಲ್ಲಿ ಬಹಳಷ್ಟು ಕೆಲಸಗಳು ಬಾಕಿ ಇದ್ದವು ಆಗ ನಮಗೆ ಆಡಳಿತ ಅಧಿಕಾರಿಗಳಾಗಿ ಇದ್ದವರು ವಿಷಕಂಠನಾಯಕ್ ಅನ್ನುವವರು. ಅವರ ಸಹಕಾರದಿಂದ ನಾನು ಮತ್ತೊಬ್ಬರು ಕೆ. ಸುಜಾತ ಮತ್ತು ಶಿವಶಂಕರ್ ಅವರುಗಳು ಸೇರಿ ಕಂಪ್ಯೂಟರ್ ಸಹಾಯದಿಂದ ಕೊಡುತ್ತಿದ್ದ ಎರರ್ ಲಿಸ್ಟ್ ಗಳನ್ನು ಸರಿ ಮಾಡುತ್ತಾ ಹೋಗುತ್ತಿದ್ದೆವು. ಮೂಲಭೂತವಾಗಿ ನಮ್ಮದು ಜಿಎಸ್‌ಡಿ ಅಂದರೆ ರಾಜ್ಯ ಸರ್ಕಾರಿ ನೌಕರರ ಸಂಬಳ ಕಡಿತ ಯೋಜನೆ ಅಡಿ ಬರುವ ಪಾಲಿಸಿಗಳು ಹೆಚ್ಚು ಇದ್ದದ್ದು ಬೇರೆ ಕಡೆಯಿಂದ ಬಂದ ಪಾಲಿಸಿಗಳಲ್ಲಿ ಡಾಟಾ ಎಷ್ಟೋ ಬೇರೆ ವೇಳೆ ತಪ್ಪಾಗಿ ಇರುತ್ತಿತ್ತು ಕೆಲವೊಮ್ಮೆ ಪಾಲಿಸಿಗಳು ವರ್ಗವಾಗಿ ಬಂದಿರುತ್ತಲೇ ಇರುತ್ತಿರಲಿಲ್ಲ ಈ ಎಲ್ಲಾ ಸಮಸ್ಯೆಗಳಿಂದಾಗಿ ಎರರ್ ಗಳು ಹೆಚ್ಚುತ್ತಾ ಹೋಗುತ್ತಿದ್ದವು ಅದು ಒಂದು ರೀತಿ ಮಧ್ಯಂತರ ಸ್ಥಿತಿ ಆದುದರಿಂದ ಪೂರ್ತಿ ಮಾನ್ಯುಯಲ್ ಆಗಿ ಮಾಡಲು ಆಗದೆ ಕಂಪ್ಯೂಟರ್ ಮೂಲಕ ಮಾಡಲು ಮಾಹಿತಿ ಸರಿ ಇರದೆ ತುಂಬಾ ಕಷ್ಟ ಆಗುತ್ತಿತ್ತು ಹಾಗಾಗಿ ಎಲ್ಲಾ ಎರರ್ ಗಳನ್ನು ಸರಿಪಡಿಸಬೇಕಾಗಿದ್ದು ಆಗ ಮೂಲಭೂತವಾಗಿ ಆಗಬೇಕಿದ್ದ ಕಾರ್ಯ. ಇದಕ್ಕಾಗಿ ಮೊದಲು ವಿವಿಧ ರೀತಿಯ ಲಿಸ್ಟ್ಗಳನ್ನು ಡಿಪಿ ವಿಭಾಗದ ಪ್ರೋಗ್ರಾಮರ್ ರಾಮಚಂದ್ರ ಅವರು ತೆಗೆದುಕೊಡುತ್ತಿದ್ದರು ನಂತರ ನಾವು ನಮ್ಮ ವಿಭಾಗದಲ್ಲಿ ಫೈಲ್ಗಳನ್ನು ತೆಗೆದು ಸರಿಯಾದ ಮಾಹಿತಿಗಳನ್ನು ಕಂಪ್ಯೂಟರ್ಗೆ ಹಾಕಿ ಅದನ್ನು ಸರಿ ಮಾಡುತ್ತಿದ್ದೆವು. ತುಂಬಾ ಖುಷಿ ಪಟ್ಟ ಕೆಲಸ ಅದು ಅದಕ್ಕೆ ಸಹಕಾರ ನೀಡಿದ ವಿಶ್ವಕಂಠನಾಯಕ್ ಸರ್ ಸುಜಾತ ಮತ್ತು ಶಿವಶಂಕರ್ ಹಾಗೂ ರಾಮಚಂದ್ರ ಹಾಗೂ ಕೇಳಿದ ಸಮಯಕ್ಕೆ ಸರಿಯಾಗಿ ಫೈಲ್ಗಳನ್ನು ರೆಕಾರ್ಡ್ಸ್ ನಿಂದ ತೆಗೆದುಕೊಡುತ್ತಿದ್ದ ಪ್ರತಾಪ್ ಎಲ್ಲರಿಗೂ ಈ ಮೂಲಕ ಮತ್ತೊಮ್ಮೆ ಧನ್ಯವಾದಗಳು ಈ ರೀತಿ






