ಧಾರಾವಾಹಿ ಸಂಗಾತಿ-19 ಸವಿತಾದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ ಭಾಗ-೧೯*ಜಯದೇವಿ ತಾಯಿಯವರ ಜೀವನ ವೃತ್ತಾಂತ*(ಅಸಹಾಯಕರು ಒತ್ತಿಟ್ಟ ಆಸ್ತಿ ಹಿಂದಿರುವಿಕೆ) *ಅಮರವಾಗಲು | ಭ್ರಮೆಯು ನಿಕ್ಕರಿಸಿಸಮರ ಯೋಗ ದೊರೆಬೇಕು -ಮನದತಾಮಸಾದಿ ಗುಣ ಅಳಿಬೇಕು||* ಈ ಸಾಲುಗಳು ತುಂಬಾ ಆಳವಾದ ತತ್ವವನ್ನು ಒಳಗೊಂಡಿವೆ. ಜಯದೇವಿ ತಾಯಿಯವರ ಚಿಂತನೆ ಎಷ್ಟು ಶುದ್ಧ, ಎಷ್ಟು ಜೀವನಾನುಭವದಿಂದ ಬಂದದ್ದು ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.“ಅಮರವಾಗಲು ಭ್ರಮೆಯು ನಿಕ್ಕರಿಸಿ” “ದೈಹಿಕವಾಗಿ ಅಮರವಾಗುವದು ಒಬ್ಬರ ಹೆಸರು, ಕಾರ್ಯ, ಮೌಲ್ಯಗಳು ಕಾಲಾಂತರಕ್ಕೂ ಉಳಿಯಬೇಕು ಎಂಬ ಅರ್ಥ. “ಭ್ರಮೆಯು ನಿಕ್ಕರಿಸಿ” ….. ಮನಸ್ಸಿನಲ್ಲಿರುವ ಅಜ್ಞಾನ, ಮಿಥ್ಯಾಭಾವನೆಗಳು, ಜೀವನದಲ್ಲಿ ನಾವು ಕಾಣುವ ಬಹುತೇಕ ದುಃಖಗಳಿಗೆ ಕಾರಣ ನಮ್ಮ ಭ್ರಮೆಗಳೇ—ಅಹಂಕಾರ, ಆಸೆ, ಮಮಕಾರ. “ಸಮರ ಯೋಗ ದೊರೆಬೇಕು – ಮನದ”ಇಲ್ಲಿ “ಸಮರ” ಇದು ಹೊರಗಿನ ಯುಧ್ಧ ಹಾಗೂ ನಮ್ಮೊಳಗಿನ ಯುದ್ಧ. ವಿರುದ್ಧ ನಡೆಯುವ ಆಂತರಿಕ ಸಮರ.“ಯೋಗ ದೊರೆಬೇಕು…. ಸಮರದಲ್ಲಿ ಜಯ ಸಾಧಿಸಲು ಮನಸ್ಸು ಶಾಂತವಾಗಿರಬೇಕು, ಏಕಾಗ್ರವಾಗಿರಬೇಕು. “ತಾಮಸಾದಿ ಗುಣ ಅಳಿಬೇಕು”ತಾಮಸ ಗುಣ ಬೇರೆಯವರಿಗೆ ನೋವು ಕೊಡುವುದು ಅವರ ಆಸ್ತಿಯ ಹಕ್ಕು ಪಡೆಯುವುದು ಇವು ನಮ್ಮನ್ನು ಕೆಳಕ್ಕೆಳೆಯುವ ಕೆಟ್ಟ ಗುಣಗಳನ್ನು ಸಂಪೂರ್ಣವಾಗಿ ನಾಶ ಮಾಡಬೇಕು. ಆಗ ಮಾತ್ರ ಮನಸ್ಸು ಶುದ್ಧವಾಗುತ್ತದೆ.ತನ್ನೊಳಗಿನ ಕೆಟ್ಟ ಗುಣಗಳ ವಿರುದ್ಧ ಹೋರಾಡಿ, ಶುದ್ಧ ಮನಸ್ಸಿನಿಂದ ಬದುಕಬೇಕು. ಇದೇ ನಿಜವಾದ “ಅಮರತ್ವ”ದ ಮಾರ್ಗ.ಇದು ಕವಿತೆಯ ಸಾಲುಗಳು ಬದುಕಿಗೆ ದಾರಿ ತೋರಿಸುವ ಮಾರ್ಗಗಳು ಹಾಗೆ ಜಯದೇವಿತಾಯಿಯವರು ಬದುಕಿದರು. ೩೬ನೇ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಳ್ಳುವುದು ಯಾವ ಸ್ತ್ರೀಯಿಗೂ ಜೀವನದ ದೊಡ್ಡ ಆಘಾತದ ನೋವನ್ನು ಅನುಭವಿಸಿದ ಜಯದೇವಿ ತಾಯಿಯವರ ಮನಸ್ಸಿನಾಳದಲ್ಲಿ ತುಂಬಿದ ಶೋಕವು ನಂದಿ ಹೋಗುವ ಮುನ್ನವೇ….. ಅನೇಕ ಕಾರ್ಯಗಳನ್ನು ಕೈಕೊಂಡರು…..ಅವರು ಶಾಂತರಾಗಿ ಕುಳಿತುಕೊಳ್ಳಲಿಲ್ಲ… ಜೀವನ ಇನ್ನೂ ಅನೇಕ ಹೊಣೆಗಾರಿಕೆಗಳನ್ನು ತಮ್ಮ ಕೈಯಲ್ಲಿ ಇಟ್ಟಿದೆ ಎಂಬ ಅರಿವು ಅವರಿಗೆ ಬಹಳ ಸ್ಪಷ್ಟವಾಗಿತ್ತು.ಪತಿ ಬಿಟ್ಟಿದ್ದ ಆಸ್ತಿಪಾಸ್ತಿಗಳು, ಗರ್ಭಶ್ರೀಮಂತಿಕೆ, ಹಾಗೂ ಬಡ್ಡಿ ವ್ಯವಹಾರವು ಮುಖ್ಯವಾಗಿ ಮಕ್ಕಳ ಲಾಲನೆ ಪಾಲನೆ ಬಹು ದೊಡ್ಡ ಹೊಣೆಗಾರಿಕೆಯಾಗಿ ಅವರ ಮುಂದೆ ನಿಂತವು. ಸಾಮಾನ್ಯವಾಗಿ ಇಂತಹ ಪರಿಸ್ಥಿತಿಯಲ್ಲಿ ಹೆಣ್ಣು ಮಕ್ಕಳು ದಿಕ್ಕುತೋಚದೆ ಇತರರ ಮೇಲೆ ಅವಲಂಬಿತರಾಗತಾರೆ. ಆದರೆ ಜಯದೇವಿ ತಾಯಿಯವರು ಅದಕ್ಕೆ ವಿರುದ್ಧವಾಗಿ ಸ್ವತಃ ಮುಂದೆ ಬಂದರು. *ಚಿಂತಿಸುವೆಕೆ ನೀ |ಶಾಂತವಾಗಿರುವ ಮನವೇಎಂಥ ವಿಪತ್ತು ಬಂದರರೂ- ಹೆದರದೆಧೈರ್ಯದಿ ಅಡಿ ಇಡು ಮುಂದೆ||* ಅಂತ ಹೇಳುತಅವರು ಮನೆಮಠದ ಆರ್ಥಿಕ ಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲು ಪ್ರಾರಂಭಿಸಿದರು.ಅದರಿಂದಲೇ ಅವರು ಒಂದು ಮಹತ್ವದ ನಿರ್ಧಾರ ಕೈಗೊಂಡರು…… ಭರಾಟೆಯಲ್ಲಿ ನಡೆಯುತ್ತಿದ್ದ ಬಡ್ಡಿ ವ್ಯವಹಾರದಿಂದ ಬಂದ ಹಣ ಮತ್ತೊಬ್ಬರ ಕಣ್ಣೀರಿಗೆ ಕಷ್ಟಕ್ಕೆ ಕಾರಣವಾಗುತ್ತಿರುವುದನ್ನು ಗ್ರಹಿಸಿದರು. ತಾಯಿಯವರು “ಭ್ರಮೆಯು ನಿಕ್ಕರಿಸಿ, ತಾಮಸಾದಿ ಗುಣ ಅಳಿಬೇಕು” ಎಂದು ಬರೆದ್ದಂತೆ ಬದುಕಿನಲ್ಲಿ ನಡೆದು ತೋರಿಸಿದ ಸತ್ಯ. ಬಡ್ಡಿ ವ್ಯವಹಾರವನ್ನು ನೋಡಿದಾಗ ಅವರ ಮನಸ್ಸು ಒಳಗೆ ಒಳಗೆ ಕದಡಿತು. ಈ ವ್ಯವಹಾರವನ್ನು ಪೂರ್ತಿಯಾಗಿ ಇಲ್ಲಸಬೇಕು….. ಅಂತ ಪತಿಯಲ್ಲಿ ಬಹಳಷ್ಟು ಸಲ ಕೇಳಿಕೊಂಡಿದ್ದರು ಆದರೆ ಅದರಿಂದ ಹಿಂದೆತಿರುಗುವದು ಅಸಾಧ್ಯವಾದ ಮಾತು ಎನ್ನುತಿದ್ದರು ಪತಿ ಅದರಿಂದಾಗುವ ನಷ್ಟಗಳನ್ನು ಬಹಳಷ್ಟು ಸಲ ಹೇಳಿದ್ದರು. ಶ್ರೀಮಂತಿಕೆ ಹೆಚ್ಚಿದಂತೆಲ್ಲ ಬಡ್ಡಿಯ ವ್ಯವಹಾರವು ತನ್ನಿಂದತಾನಾಗಿ ಕುದುರಿಕೊಳ್ಳುವುದು ಸಹಜವಾಗಿತ್ತು….. ಇಂತ ಪರಿಸ್ಥಿತಿಯಲ್ಲಿ ಹಿಂದಿರುಗುವುದು ಬಹಳ ಕಠಿಣವಾಗಿರುತ್ತದೆ…. ಏಕೆಂದರೆ ಬಡ್ಡಿಯ ವ್ಯವಹಾರಗಳನ್ನು ನೋಡಿಕೊಂಡು ಹೋಗಲೇ 14 ಮುನಿಮರನ್ನು ಅವರು ನೇಮಿಸಿದ್ದರು….. ಅಂದರೆ ನಾವು ಊಹಿಸಬಹುದು ಅದು ಎಂಥ ದೊಡ್ಡ ಬಡ್ಡಿ ವಹಿವಾಟು ಅಲ್ಲಿ ನಡೆಯುತ್ತಿತ್ತು ಅನ್ನುವುದನ್ನು ಗಮನಿಸಬಹುದಾಗಿದೆ .ಒಮ್ಮಿಂದ ಒಮ್ಮಲೆ ವ್ಯವಹಾರವನ್ನು ಸ್ಥಗಿತಗೊಳಿಸಲಾಗದಂತ ಸ್ಥಿತಿ ಇತ್ತು ಅನ್ನುವುದು ಖಚಿತವಾಗಿತು. *ಬಾರೆ ಇಚ್ಛಾಶಕ್ತಿ |ತೋರೆ ಕ್ರಿಯಾ ಶಕ್ತಿಬೀರೆ ಮಂತ್ರಶಕ್ತಿ ಪ್ರಭಾವ -ಆದಿಶಕ್ತಿಪರಾಶಕ್ತಿ ನೀನು ದಾರಿ ತೋರೆ||* ಅಂತ ಜಯದೇವಿ ತಾಯಿಯವರು ತನ್ನ ಇಚ್ಛಾಶಕ್ತಿ- ಆತ್ಮ ಶಕ್ತಿಯನ್ನೇ ಆದಿಶಕ್ತಿಯನ್ನಾಗಿ ಮಾಡಿಕೊಂಡು ಕ್ಷಣಾರ್ಧದಲ್ಲಿ ಅವರು ಒಂದು ದೊಡ್ಡ ನಿರ್ಧಾರ ಕೈಗೊಂಡರು….ಮನೆಯಲ್ಲಿದ್ದ ಬಡ್ಡಿ ವ್ಯವಹಾರವನ್ನು ಸಂಪೂರ್ಣವಾಗಿ ನಿಲ್ಲಿಸುವುದಾಗಿ.ಒಂದು ದಿನ ಎಲ್ಲ ಮುನಿಮರನ್ನು ಕರೆಯಿಸಿ ಒಂದು ಇರ್ತ್ಯಾರ್ಥಕ್ಕೆ ಬಂದರು ….ಅಡವಿಇಟ್ಟ ಜನರನೇಲ್ಲ ಕರೆಸಿಕೊಂಡರು.ಯಾರು ಯಾರಿಗೆ ಎಷ್ಟು ಸಾಲವಿದೆ ಎಂಬುದನ್ನು ಲೆಕ್ಕ ಹಾಕಿ, ಪ್ರತಿಯೊಬ್ಬರನ್ನೂ ಪ್ರೀತಿಯಿಂದ ಕೂಡಿ ಮಾತನಾಡಿದರು.“ನೀವು ಕೊಟ್ಟಿದ್ದು ನಿಮ್ಮದೇ…ಇದು ನಿಮ್ಮ ಹಕ್ಕು… ತೆಗೆದುಕೊಳ್ಳಿ…”ಎಂದು ಹೇಳುತ್ತಾ, ಅವರ ಆಸ್ತಿಯ ಕಾಗದ ಪತ್ರಗಳನ್ನು, ಅಡಿವೆ ಇಟ್ಟ ವಿವಿಧ ರೀತಿಯ ಬಂಗಾರದ ಒಡೆಯ ,ಬೆಳ್ಳಿಯ ಸಾಮಗ್ರಿಗಳು, ತಾಮ್ರದ ಹಿತ್ತಾಳೆಯ ಅಡುಗೆ ಮಾಡುವ ದೊಡ್ಡ ದೊಡ್ಡ ಪಾತ್ರೆಗಳು ಕೂಡ ಇರುತ್ತಿದ್ದವು….ದನ ಕರುಗಳನ್ನು ತಿರುಗಿ ನೀಡಲು ಪ್ರಾರಂಭಿಸಿದರು. ಎಷ್ಟೋ ಜನರು ಅಮ್ಮ ನಮಗೆ ತಿರುಗಿಕೊಡಲು ನಮ್ಮತ್ರ ದುಡ್ಡ ಇಲ್ಲ ಅಂತ ಕಣ್ಣೀರು ಕರೆದರು… ” ಸರಿ ನಿಮಗೆ ಆದಾಗ ಸಾಧ್ಯವಾದಾಗ ತಂದು ಕೊಡಿ” ಅಂತ ಹೇಳಿ ಅವರ ಆಸ್ತಿ ತಿರುಗಿಸಿದರು.ಆ ಕ್ಷಣ ಕಣ್ಣುಗಳು ನಂಬಲಾರದ ಆಶ್ಚರ್ಯ, ಕೃತಜ್ಞತೆಯ ವಾತಾವರಣ ಹರಡಿತು ಕೆಲವರು ಕಣ್ಣೀರಿನಿಂದ ತಾಯಿಯವರ ಪಾದವನ್ನು ತೊಳೆದರೂ… ಹಿಂತಿರುಗಿಸುವ ಕಾರ್ಯವ ಒಂದು ಮನೆತನದ ಧರ್ಮದ ಪುನರ್ಜನ್ಮವಾಗಿತ್ತು. ಈ ಕಾರ್ಯದಿಂದ ತಾಯಿಯವರು ತಮ್ಮೊಳಗಿನ “ತಾಮಸ”ವನ್ನು ಅಳಿಸಿ, “ಸಮರ ಯೋಗ”ವನ್ನು ಸಾಧಿಸಿದವರಾಗಿ ಬೆಳಗಿದರು.ಅವರು ಹೊರಗಿನ ಯುದ್ಧಗಳೊಂದಿಗೆ, ಒಳಗಿನ ಯುದ್ಧವನ್ನು ಗೆದ್ದರು. ಇದೇ ಕಾರಣಕ್ಕೆ ಅವರು ಅಮರರಾದರು…ಜನರ ಮನಸ್ಸಿನಲ್ಲಿ, ಆಶೀರ್ವಾದಗಳಲ್ಲಿ, ಮತ್ತು ಅವರ ಮಾಡಿದ ಸತ್ಕಾರ್ಯಗಳಲ್ಲಿ….. ಅಜರಾಮರರಾದರು…!!! *ಗಳಿಸಿದ ಧನವನು | ಉಳಿಸಬೇಕಾದರೆ ಬಳಿಸಬೇಕಾಗುತ್ತದೆ ಎಚ್ಚರ- ಅಣ್ಣಯ್ಯ ಕಳೆಯಬೇಕಾದ ಅನಾಚಾರದಿ ||* ಹೌದು ಗಳಿಸಿದ ಧನವನ್ನು ಉಳಿಸಬೇಕಾದರೆ ಬಹಳ ಎಚ್ಚರದಿಂದ ಸಆಚಾರದಿಂದ ಉಳಿಸಿ ಬೆಳೆಸಿಕೊಂಡು ಹೋಗಬೇಕು ಅಂತ ಹೇಳುತ್ತಿದ್ದರು. ಅನಾಚಾರದಿಂದ ಗಳಿಸಿದ ದುಡ್ಡು ನಮ್ಮ ಕೈಗೆ ಎಟುಕದು ಅದು ಮುಂದಿನ ಪೀಳಿಗೆಗೆ ಅನಾಹುತ ಮಾಡುವುದು ಖಚಿತ ಅನ್ನೋದನ್ನ ಯಾವಾಗಲೂ ಜಯದೇವಿ ತಾಯಿಯವರು ಹೇಳುತ್ತಿದ್ದರು. ತಾಯಿಯವರು ಅದನ್ನು ನೆನಪಿಸಿಕೊಂಡಾಗ ಅವರ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಿತ್ತು…“ನಮ್ಮ ಮನೆಯ ಹಿಂದಿನ ದಿನಗಳು ತುಂಬಾ ಐಶ್ವರ್ಯವಾಗಿದ್ದವು… ಆದರೆ ಆ ಐಶ್ವರ್ಯಕ್ಕೆ ನೆರಳಾಗಿ ನಿಂತದ್ದು ಬಡ್ಡಿ ವ್ಯಾಪಾರ,” ಎಂದು ಅವರು ನಿಧಾನವಾಗಿ ಹೇಳುತ್ತಿದ್ದರು. ಅವರ ಗಂಡನ ತಂದೆ, ಅಂದರೆ ಮನೆಯ ಅಜ್ಜ, ಬಡ್ಡಿ ವ್ಯಾಪಾರದಲ್ಲಿ ದೊಡ್ಡ ಹೆಸರು ಮಾಡಿದ್ದರು.ಆದರೆ ಅದು … ಕಠೋರವಾದ ಮಾರ್ಗವಾಗಿತ್ತು ಧಡೂತಿ ಜನರನ್ನು ಇಟ್ಟುಕೊಂಡು ಬಡವರ ಮನೆ ಬಾಗಿಲು ತಟ್ಟಿಸುತ್ತಿದ್ದರು. ಸಾಲ ತೀರಿಸಲಾಗದವರ ಕಣ್ಣೀರನ್ನು ಲೆಕ್ಕಿಸದೇ, ಅವರ ಆಸ್ತಿಪಾಸ್ತಿಯನ್ನು ಕಸಿದುಕೊಳ್ಳುತ್ತಿದ್ದರು. ಬಡವರ ಅಳಲು, ತಾಯಿಯರ ನೋವು, ಮಕ್ಕಳ ಭಯದ ನೆರಳು ನಮ್ಮಮನೆಯ ಗೋಡೆಗಳಲ್ಲಿ ಉಳಿದುಕೊಂಡಿದ್ದವೆಂದು…. ತಾಯಿಯವರು ಹೇಳುತ್ತಿದ್ದರು.“ಅವರು ತಮ್ಮ ಆಸ್ತಿಗಳನ್ನು ಬಿಟ್ಟು ಕೊಡುವಾಗ ಎಷ್ಟೊಂದು ಅಳಲುಗಳ ಶಾಪ ಇತ್ತರೋ ಏನೋ…”ಕಾಲ ಕಳೆಯಿತು… …..ಅಜ್ಜ ಕೂಡಿಟ್ಟ ಸಂಪತ್ತಿನ ವೈಭವದಲ್ಲಿ ನಾವೆಲ್ಲ ಇರಬಹುದು. ಆದರೆ ಆ ಪಾಪದ ಶಾಪ ಮನೆಯ ಮೇಲೆ ಹಬ್ಬುತ್ತಲೇ ಹೋಯಿತು.ಅದರ ಪರಿಣಾಮವಾಗಿ ನನ್ನ ಪತಿ ಹಾಗೂ ಅತ್ತೆಯಂದಿರು ಅನುಭವಿಸಬೇಕಾಯಿತು.“ನನ್ನ ಗಂಡ ಒಳ್ಳೆಯ ಮನಸ್ಸಿನವರು… ಯಾರಿಗೂ ನೋವು ಕೊಡದವರು…” ಎಂದು ಹೇಳುವಾಗ ತಾಯಿಯವರ ಧ್ವನಿ ನಡುಗುತ್ತಿತ್ತು.“ಆದರೂ… ಅವರ ಜೀವನ ಬಹಳ ಚಿಕ್ಕದಾಯಿತು… ಬೇಗನೇ ನನ್ನನ್ನು ಬಿಟ್ಟು ಹೋದರು…”ಅವರು ಹೇಳುತ್ತಿದ್ದಾಗ, ಆ ಸಾವು … ಕುಟುಂಬದ ಮೇಲೆ ಬಿದ್ದ ಪಾಪದ ಪ್ರತಿಫಲ ಎಂಬ ಭಾವನೆ ಮೂಡುತ್ತಿತ್ತು. “ಬೇರೆಯವರ ಕಣ್ಣೀರಿಂದ ಕಟ್ಟಿದ ಮನೆ, ಒಂದು ದಿನ ತನ್ನವರ ಕಣ್ಣೀರಿಂದಲೇ ಕರಗುತ್ತದೆ…”ಅವರ ಮಾತಿನಲ್ಲಿ ನೋವು ಇತ್ತು… ಆದರೆ ಅದರಲ್ಲಿ ಒಂದು ದೊಡ್ಡ ಪಾಠವೂ ಇತ್ತುಅನ್ಯಾಯದಿಂದ ಬಂದ ಹಣ ಸುಖ ಕೊಡದು…ಪಾಪದ ಬೀಜ ಯಾವಾಗಲಾದರೂ ಮೊಳೆಯುತ್ತದೆ… ಮತ್ತು ಅದರ ಫಲವನ್ನು ನಿರಪರಾಧಿಗಳೂ ಅನುಭವಿಸಬೇಕಾಗುತ್ತದೆ…ಎನ್ನುವ ಸತ್ಯವನು ಅನೇಕ ಉದಾಹರಣೆಗಳೊಂದಿಗೆ ಹೇಳುತ್ತಿದ್ದರು. ಅಂತಹ ಉದಾಹರಣೆಗಳಲ್ಲಿ ಒಂದು ಉದಾಹರಣೆಯನ್ನು ತಾಯಿಯವರು ಮೇಲಿಂದ ಮೇಲೆ ಹೇಳುತ್ತಿದ್ದರುಅಜ್ಜ ಬಹಳ ಕಾಯಿಲೆ ಇದ್ದಾಗ ಜ್ವರ ಹೆಚ್ಚಾಗಿ ಅವರು ತಾಯಿಯವರನ್ನು ಕರೆದು“ಅಲ್ಲಿ ಹೊರಗಡೆ ಯಾವುದು ಅಮಾಯಕ ಹೆಣ್ಣುಮಗಳು ನನ್ನನ್ನು ಶಪಿಮಿಸುತ್ತಿರುವಳು… ಅವಳನ್ನು ಇಲ್ಲಿಂದ ಕಳಿಸಿಕೊಡು “ಅನ್ನುತ್ತಿದ್ದರಂತೆ. ತಾಯಿಯವರು ನೋಡಿದರೆ ಅಲ್ಲಿ ಯಾರು ಇರುತ್ತಿರಲಿಲ್ಲ ಆದರೂ ಕೂಡ “ಅವಳು ಇಲ್ಲೇ ಇದ್ದಾಳೆ ಹೇಳು ಅವಳಿಗೆ ಹೋಗಲು ಹೇಳು ನೀನು ಹೇಳಿದರೆ ಮಾತ್ರ ಹೋಗುವಳು ಅವಳಿಗೆ ಬೆದರಿಸಿ ಹೇಳು…..”ಅನ್ನುತ್ತಿದ್ದರಂತೆ.ಅದೇ ರೀತಿಯಾಗಿ ತಾಯಿಯವರು “ನೀನು ಹೋಗಮ್ಮ ಇಲ್ಲಿಂದ” ಅಂತ ಬೆದರಿಸಿದಂತೆ ನಟಿಸುತ್ತಿದ್ದರಂತೆ ….ಆಗ ಅಜ್ಜ ಸಮಾಧಾನರಾಗಿ “ನೋಡು ಅವಳು ನಿನಗೆ ಹೆದರಿ ಹೋಗಿಬಿಟ್ಟ ನೋಡು “ಅನ್ನುತ್ತಿದ್ದರಂತೆ … ನಂತರ ಜಯದೇವಿ ತಾಯಿಯವರು ಸಿದ್ದರಾಮೇಶ್ವರನ ಪ್ರಸಾದವನ್ನು ಹಣೆಗಿಟ್ಟು ಮಲಗಿಸುತ್ತಿದ್ದರಂತೆ.ಇದೆಲ್ಲಾ ಕರ್ಮದ ಫಲಗಳು ಅಂತ ತಾಯಿಯವರು ಹೇಳುತ್ತಿದ್ದರು. ನಾವು ಮಾಡಿದ ಪಾಪ ಪುಣ್ಯಗಳ ಕರ್ಮವನ್ನು ನಮ್ಮ ಮುಂದಿನ ಪೀಳಿಗೆಯು ಭೋಗಿಸಬೇಕಾಗುತ್ತದೆ. ತಾಯಿಯವರು ಜೀವನವನ್ನು ಕೇವಲ ಘಟನೆಗಳ ಸರಣಿ ಹೇಳುತಿದ್ದರು…. ನಮ್ಮ ಕರ್ಮದ ಹಾದಿ ಎಂದು ಗಾಢವಾಗಿ ನಂಬಿದವರು…“ನಾವು ಮಾಡುವ ಪ್ರತಿಯೊಂದು ಕಾರ್ಯಕ್ಕೂ ಪ್ರತಿಫಲ ಇರುತ್ತದೆ… ಅದು ನಮ್ಮನ್ನು, ನಮ್ಮ ಮಕ್ಕಳನ್ನೂ ತಟ್ಟುತ್ತದೆ…” ಎಂದು ಅವರು ಮನಸ್ಸು ತುಂಬಿ ಹೇಳುತ್ತಿದ್ದರು.ಅವರ ಧ್ವನಿಯಲ್ಲಿ… ಅನುಭವದ ಕಿಡಿ ಹೊತ್ತಿತ್ತು… “ನಾವು ಮಾಡಿದ ಪಾಪ… ನಮ್ಮ ನೆರಳಾಗಿ ನಮ್ಮನ್ನು ಹಿಂಬಾಲಿಸುತ್ತದೆ…ನಾವು ಮಾಡಿದ ಪುಣ್ಯ… ನಮ್ಮ ಮಕ್ಕಳಿಗೆ ದಾರಿಯಾಗಿ ಬೆಳಗುತ್ತದೆ…”ಅವರು ನಿಧಾನವಾಗಿ ಮುಂದುವರಿಸುತ್ತಿದ್ದರು:“ಮಕ್ಕಳು ನಮ್ಮ ಸಂಪತ್ತಾದರೆ… ನಮ್ಮ ಕರ್ಮದ ಸಾಲಿಗೂ ವಾರಸುದಾರರಾಗುತ್ತಾರೆ…”ಈ ಮಾತು ಹೇಳುವಾಗ ಅವರ ಕಣ್ಣುಗಳಲ್ಲಿ ಒಂದು ಗಾಢ ನೋವು ಮೂಡುತ್ತಿತ್ತು… ನಾವು ಬದುಕುವ ಪ್ರತಿದಿನವೂ ಜಾಗ್ರತೆ ಇರಬೇಕು…” ಎಂದು ಅವರು ಹೃದಯದಿಂದ ಹೇಳುತ್ತಿದ್ದರು…ಅವರ ಮಾತುಗಳಲ್ಲಿ ಎಚ್ಚರಿಕೆ ಇತ್ತು…ಪ್ರಾರ್ಥನೆ ಇತ್ತು…ಒಂದು ಪಾಠ ಇತ್ತು…“ನಾವು ಬಿತ್ತಿದ ಬೀಜವೇ ಮರವಾಗಿ ನಮ್ಮ ಮಕ್ಕಳ ಮೇಲೆ ನೆರಳಾಗುತ್ತದೆ…ಅದು ನೆರಳೋ… ಇಲ್ಲ ಬೆಂಕಿಯೋ… ಅದು ನಮ್ಮಕ್ಯೆಯಲ್ಲಿದೆ……ಎಂದು ಯಾವಾಗಲೂ ತಿಳಿ ಹೇಳುತ್ತಿದ್ದರು. ನೈತಿಕವಾಗಿಯೂ ತಮ್ಮ ಮನೆತನವನ್ನು ಬಲಪಡಿಸಿದರು. ಅವರ ಈ ಕ್ರಮಶೀಲತೆ ಮತ್ತು ಧೈರ್ಯವು ಇತರ ಮಹಿಳೆಯರಿಗೂ ಮಾದರಿಯಾಗಿ ಪರಿಣಮಿಸಿತು.ಪತಿಯನ್ನು ಕಳೆದುಕೊಂಡ ದುಃಖವನ್ನು ಶಕ್ತಿಯಾಗಿ ಪರಿವರ್ತಿಸಿಕೊಂಡು, ಜಯದೇವಿ ತಾಯಿಯವರು ತಮ್ಮ ಜೀವನವನ್ನು ತಮ್ಮ ಸುತ್ತಲಿನ ಜನರ ಜೀವನವನ್ನೂ ಸುಧಾರಿಸುತ ಮಹಾನ್ ವ್ಯಕ್ತಿತ್ವವಾಗಿ ಬೆಳಗಿದರು. “ನೀರಿನಂತೆ ನಿರ್ಮಲ | ಹಿರಿದಾದ ಮನವಾಗಿ ಪರರಿಗಾಗಿ ಸವೆದು ತಣಿಬೇಕು -ದೇವನಬರುವಿಗಾಗಿ ದಾರಿ ಕಾಯಬೇಕು ||” ಎನ್ನುವಂತೆ ಜೀವನವನ್ನು ಸಮರ್ಪಿಸಿಕೊಂಡಿದ್ದರು. (ಮುಂದುವರೆಯುವುದು) ಸವಿತಾ ದೇಶಮುಖ
ಸಾವಿಲ್ಲದ ಶರಣರುಮಾಲಿಕೆ “ಭಾರತದ ರಾಷ್ಟ್ರಕರಣದ ಧ್ರುವತಾರೆ ಕೆ ಕಾಮರಾಜ” ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ಶರಣ ಸಂಗಾತಿ ಸಾವಿಲ್ಲದ ಶರಣರುಮಾಲಿಕೆ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ “ಭಾರತದ ರಾಷ್ಟ್ರಕರಣದ ಧ್ರುವತಾರೆ ಕೆ ಕಾಮರಾಜ” ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ದೇಶವು ಕಂಡ ಅಪ್ರತಿಮ ರಾಜಕಾರಣಿ ಸ್ವಾತಂತ್ರ್ಯ ಹೋರಾಟಗಾರ ಬಡವರ ಬಂಧು ಧೀಮಂತ ನಾಯಕ ಮಹಾತ್ಮ ಗಾಂಧಿಯವರ ಆಪ್ತ ಶ್ರೀ ಕುಮಾರ ಸ್ವಾಮಿ ಕಾಮರಾಜ ಭಾರತದ ರಾಜಕಾರಣದಲ್ಲಿ ‘ಕಿಂಗ್ ಮೇಕರ್’ ಎಂದೇ ಖ್ಯಾತರಾದ ಕುಮಾರಸ್ವಾಮಿ ಕಾಮರಾಜ್ (ಕೆ. ಕಾಮರಾಜ್) ಜನನ: ಜುಲೈ ೧೫, ೧೯೦೩ ರಂದು ತಮಿಳುನಾಡಿನ ವಿರುಧುನಗರದಲ್ಲಿ (ಹಿಂದಿನ ಮದ್ರಾಸ್ ಪ್ರೆಸಿಡೆನ್ಸಿ) ಜನಿಸಿದರು. ತಂದೆ-ತಾಯಿ: ಇವರ ತಂದೆ ಕುಮಾರಸ್ವಾಮಿ ನಾಡಾರ್ ಮತ್ತು ತಾಯಿ ಶಿವಕಾಮಿ ಅಮ್ಮಾಳ್. ವೃತ್ತಿ: ಇವರ ತಂದೆ ತೆಂಗಿನಕಾಯಿ ವ್ಯಾಪಾರಿಯಾಗಿದ್ದರು. ಕಾಮರಾಜ್ ಅವರಿಗೆ ಕೇವಲ ೬ ವರ್ಷ ವಯಸ್ಸಿದ್ದಾಗ ತಂದೆ ನಿಧನರಾದರು. ಬಾಲ್ಯ ಮತ್ತು ಶಿಕ್ಷಣ: ತಂದೆಯ ನಿಧನದ ನಂತರ ಕುಟುಂಬದ ಜವಾಬ್ದಾರಿ ತಾಯಿಯ ಮೇಲೆ ಬಿತ್ತು. ಬಡತನದ ಕಾರಣದಿಂದಾಗಿ ಕಾಮರಾಜ್ ಅವರು ಕೇವಲ ೧೨ನೇ ವಯಸ್ಸಿನಲ್ಲಿ ಶಾಲೆಯನ್ನು ಬಿಟ್ಟು, ಸೋದರಮಾವನ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದರು. ಮುಖ್ಯಮಂತ್ರಿಯಾಗಿ: ತಮಿಳುನಾಡಿನ ೩ನೇ ಮುಖ್ಯಮಂತ್ರಿಯಾಗಿ (೧೯೫೪–೧೯೬೩) ಸೇವೆ ಸಲ್ಲಿಸಿದರು. ಇವರ ಅವಧಿಯಲ್ಲಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಜಾರಿಗೆ ತಂದಿದ್ದು ಅತ್ಯಂತ ಪ್ರಮುಖ ಸಾಧನೆಯಾಗಿದೆ. ಎಸ್. ನಿಜಲಿಂಗಪ್ಪನವರ ಜೊತೆಗಿನ ಒಡನಾಟ ಕೆ. ಕಾಮರಾಜ್ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರು ರಾಷ್ಟ್ರೀಯ ಮಟ್ಟದ ರಾಜಕೀಯದಲ್ಲಿ ಆಪ್ತ ಒಡನಾಟ ಹೊಂದಿದ್ದರು: ಉತ್ತಮ ಸ್ನೇಹಿತರಾಗಿದ್ದರು. ಸಿಂಡಿಕೇಟ್ ನಾಯಕರು: 1960ರ ದಶಕದಲ್ಲಿ ಕಾಂಗ್ರೆಸ್ ಪಕ್ಷದ ಒಳಗೆ ಪ್ರಭಾವಿ ನಾಯಕರ ಗುಂಪಾಗಿದ್ದ ಸಿಂಡಿಕೇಟ್’ನಲ್ಲಿ ಕಾಮರಾಜ್ ಮತ್ತು ನಿಜಲಿಂಗಪ್ಪ ಪ್ರಮುಖ ಸದಸ್ಯರಾಗಿದ್ದರು. ಇವರಿಬ್ಬರೂ ಪಕ್ಷದ ಆಡಳಿತ ಮತ್ತು ಪ್ರಧಾನ ಮಂತ್ರಿಗಳ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದರು. ಪ್ರಧಾನಿಗಳ ಆಯ್ಕೆ: ನೆಹರೂ ಅವರ ನಿಧನದ ನಂತರ ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ನಂತರ ಇಂದಿರಾ ಗಾಂಧಿಯವರನ್ನು ಪ್ರಧಾನಿ ಹುದ್ದೆಗೆ ತರುವಲ್ಲಿ ಈ ಇಬ್ಬರು ನಾಯಕರು ಒಟ್ಟಾಗಿ ಶ್ರಮಿಸಿದ್ದರು. ಕಾಂಗ್ರೆಸ್ ವಿಭಜನೆ (೧೯೬೯): ಇಂದಿರಾ ಗಾಂಧಿಯವರೊಂದಿಗೆ ಭಿನ್ನಾಭಿಪ್ರಾಯ ಉಂಟಾದಾಗ, ಕಾಂಗ್ರೆಸ್ ಪಕ್ಷವು ಎರಡು ಹೋಳಾಯಿತು. ಆಗ ಕಾಮರಾಜ್ ಮತ್ತು ನಿಜಲಿಂಗಪ್ಪ ಅವರು ಹಳೆಯ ಕಾಂಗ್ರೆಸ್ ನಾಯಕರ ಗುಂಪಾದ ಕಾಂಗ್ರೆಸ್ (O) ಅಡಿಯಲ್ಲಿ ಒಟ್ಟಾಗಿ ನಿಂತರು. ಆದರ್ಶಗಳು: ಇಬ್ಬರೂ ನಾಯಕರು ತಮ್ಮ ಪ್ರಾಮಾಣಿಕತೆ, ಸರಳತೆ ಮತ್ತು ಸಾಮಾನ್ಯ ಜನರ ಬದುಕನ್ನು ಸುಧಾರಿಸುವ ಗುರಿಯನ್ನು ಹೊಂದಿದ್ದರಿಂದ ಅವರಿಬ್ಬರ ನಡುವೆ ಉತ್ತಮ ಬಾಂಧವ್ಯವಿತ್ತು.ಕಾಮರಾಜ್ ಅವರನ್ನು ಇಂದಿಗೂ ತಮಿಳುನಾಡಿನ ಶಿಕ್ಷಣ ಕ್ರಾಂತಿಯ ಹರಿಕಾರ ಎಂದು ಸ್ಮರಿಸಲಾಗುತ್ತದೆ. ಇವರಿಗೆ ೧೯೭೬ರಲ್ಲಿ ಮರಣೋತ್ತರವಾಗಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ನೀಡಿ ಗೌರವಿಸಲಾಯಿತು. ಕೆ. ಕಾಮರಾಜ್ ಅವರ ಸ್ವಾತಂತ್ರ್ಯ ಹೋರಾಟ ಮತ್ತು ರಾಜಕೀಯ ಜೀವನದ ಪ್ರಮುಖ ಘಟ್ಟಗಳು :ಸ್ವಾತಂತ್ರ್ಯ ಹೋರಾಟ (೧೯೨೦–೧೯೪೭) ಕಾಮರಾಜ್ ಅವರು ಕೇವಲ ೧೬ನೇ ವಯಸ್ಸಿನಲ್ಲಿ ಕಾಂಗ್ರೆಸ್ ಸೇರುವ ಮೂಲಕ ದೇಶದ ಸೇವೆಗೆ ಧುಮುಕಿದರು. ಪ್ರೇರಣೆ: ೧೯೧೯ರ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡವು ಅವರನ್ನು ಸ್ವಾತಂತ್ರ್ಯ ಚಳುವಳಿಯತ್ತ ಆಕರ್ಷಿಸಿತು. ಚಳುವಳಿಗಳಲ್ಲಿ ಭಾಗವಹಿಸುವಿಕೆ: ಅವರು ಅಸಹಕಾರ ಚಳುವಳಿ (೧೯೨೧), ನಾಗಪುರ ಧ್ವಜ ಸತ್ಯಾಗ್ರಹ (೧೯೨೩), ಮತ್ತು ಸತ್ಯಮೂರ್ತಿಯವರ ನಾಯಕತ್ವದಲ್ಲಿ ನಡೆದ ಅನೇಕ ಪ್ರತಿಭಟನೆಗಳಲ್ಲಿ ಸಕ್ರಿಯರಾಗಿದ್ದರು. ಉಪ್ಪಿನ ಸತ್ಯಾಗ್ರಹ: ೧೯೩೦ರಲ್ಲಿ ರಾಜಗೋಪಾಲಾಚಾರಿ ಅವರ ನೇತೃತ್ವದಲ್ಲಿ ನಡೆದ ವೇದಾರಣ್ಯಂ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿ ಮೊದಲ ಬಾರಿಗೆ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದರು. ಕ್ವಿಟ್ ಇಂಡಿಯಾ ಚಳುವಳಿ: ೧೯೪೨ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಅವರನ್ನು ಬಂಧಿಸಿ ಮೂರು ವರ್ಷಗಳ ಕಾಲ ಅಮರಾವತಿ ಜೈಲಿನಲ್ಲಿ ಇರಿಸಲಾಯಿತು. ತಮ್ಮ ಜೀವಿತಾವಧಿಯಲ್ಲಿ ಅವರು ಒಟ್ಟು ಆರು ಬಾರಿ ಸುಮಾರು ಎಂಟು ವರ್ಷಗಳ ಕಾಲ ಸೆರೆಮನೆ ವಾಸ ಅನುಭವಿಸಿದರು. ರಾಜಕೀಯ ಜೀವನ ಮತ್ತು ಸಾಧನೆಗಳು (೧೯೪೭–೧೯೭೫)ಸ್ವಾತಂತ್ರ್ಯದ ನಂತರ ಕಾಮರಾಜ್ ಅವರು ತಮಿಳುನಾಡು ಮತ್ತು ರಾಷ್ಟ್ರ ರಾಜಕಾರಣದಲ್ಲಿ ಅಪ್ರತಿಮ ನಾಯಕರಾಗಿ ಬೆಳೆದರು. ತಮಿಳುನಾಡು ಮುಖ್ಯಮಂತ್ರಿಯಾಗಿ (೧೯೫೪–೧೯೬೭): ಒಂಬತ್ತು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ಇವರ ಅವಧಿಯನ್ನು ತಮಿಳುನಾಡಿನ ‘ಸುವರ್ಣ ಯುಗ’ ಎನ್ನಲಾಗುತ್ತದೆ.ಶಿಕ್ಷಣ ಕ್ರಾಂತಿ: ಬಡ ಮಕ್ಕಳು ಶಾಲೆಗೆ ಬರುವಂತೆ ಮಾಡಲು ವಿಶ್ವದಲ್ಲೇ ಮೊದಲ ಬಾರಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಮತ್ತು ಉಚಿತ ಶಿಕ್ಷಣವನ್ನು ಜಾರಿಗೆ ತಂದರು. ಕೈಗಾರಿಕೆ ಮತ್ತು ನೀರಾವರಿ: ಅನೇಕ ಅಣೆಕಟ್ಟುಗಳನ್ನು ನಿರ್ಮಿಸಿ ಕೃಷಿಗೆ ನೆರವಾದರು ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ಬಲವಾದ ಅಡಿಪಾಯ ಹಾಕಿದರು. ಕಾಮರಾಜ್ ಯೋಜನೆ (K-Plan): ೧೯೬೪ರಲ್ಲಿ ಹಿರಿಯ ಕಾಂಗ್ರೆಸ್ ನಾಯಕರು ಅಧಿಕಾರ ಬಿಟ್ಟು ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು ಎಂದು ಪ್ರಸ್ತಾಪಿಸಿದರು. ಸ್ವತಃ ತಾವೇ ಮೊದಲು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಮಾದರಿಯಾದರು.ಕಿಂಗ್ ಮೇಕರ್: ಕಾಂಗ್ರೆಸ್ ಅಧ್ಯಕ್ಷರಾಗಿ (೧೯೬೪–೧೯೬೬), ಜವಾಹರಲಾಲ್ ನೆಹರೂ ಅವರ ನಿಧನದ ನಂತರ ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಇಂದಿರಾ ಗಾಂಧಿ ಅವರನ್ನ ಪ್ರಧಾನ ಮಂತ್ರಿಗಳನ್ನಾಗಿ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಸರಳತೆ: ಅಧಿಕಾರದಲ್ಲಿದ್ದರೂ ಅತ್ಯಂತ ಸಾಮಾನ್ಯ ಜೀವನ ನಡೆಸುತ್ತಿದ್ದ ಇವರು, ನಿಧನರಾದಾಗ ಅವರ ಬಳಿ ಕೇವಲ ಕೆಲವು ಜೊತೆ ಬಟ್ಟೆಗಳು ಮತ್ತು ಅಲ್ಪ ಹಣ ಮಾತ್ರ ಇತ್ತು.ಇವರ ಅಗಾಧ ಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರವು ೧೯೭೬ ರಲ್ಲಿ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಕೆ. ಕಾಮರಾಜರ ಸರಳತೆ ಇಡೀ ದೇಶಕ್ಕೆ ಮಾದರಿಯಾದದ್ದು. ಅಧಿಕಾರದ ಉತ್ತುಂಗದಲ್ಲಿದ್ದರೂ ಅವರು ಸಾಮಾನ್ಯ ಮನುಷ್ಯನಂತೆ ಬದುಕಿದ ರೀತಿ ಅನನ್ಯ. ಅವರ ಸರಳ ಬದುಕಿನ ಕೆಲವು ಆಸಕ್ತಿದಾಯಕ ಅಂಶಗಳು ೧. ವಸ್ತ್ರವಿನ್ಯಾಸ ಮತ್ತು ವಾಸಸ್ಥಳ:ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಕೇವಲ ಒಂದು ಬಿಳಿ ಶರ್ಟ್ ಮತ್ತು ವೇಷ್ಟಿ (ಧೋತಿ) ಧರಿಸುತ್ತಿದ್ದರು. ಇಡೀ ಜೀವನದಲ್ಲಿ ಅವರು ಎಂದಿಗೂ ಆಡಂಬರದ ಬಟ್ಟೆಗಳನ್ನು ಬಳಸಲಿಲ್ಲ.ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಒಂಬತ್ತು ವರ್ಷಗಳ ಕಾಲವೂ ಅವರು ಸರಕಾರಿ ಬಂಗಲೆಯಲ್ಲಿ ವಾಸಿಸದೆ, ತಮ್ಮ ಹಳೆಯ ಪುಟ್ಟ ಬಾಡಿಗೆ ಮನೆಯಲ್ಲಿಯೇ ವಾಸಿಸುತ್ತಿದ್ದರು. ೨. ಆಸ್ತಿ-ಪಾಸ್ತಿ ಇಲ್ಲದ ನಾಯಕ:ರಾಷ್ಟ್ರ ರಾಜಕಾರಣದಲ್ಲಿ ‘ಕಿಂಗ್ ಮೇಕರ್’ ಎಂದು ಕರೆಸಿಕೊಂಡರೂ, ಅವರು ನಿಧನರಾದಾಗ ಅವರ ಬಳಿ ಇದ್ದದ್ದು ಕೇವಲ ಎರಡು ಜೊತೆ ಬಟ್ಟೆಗಳು, ಕೆಲವು ಪುಸ್ತಕಗಳು ಮತ್ತು ಕೇವಲ ೧೩೦ ರೂಪಾಯಿಗಳು ಮಾತ್ರ.ಅವರಿಗೆ ಸ್ವಂತ ಮನೆ ಅಥವಾ ಯಾವುದೇ ಬ್ಯಾಂಕ್ ಬ್ಯಾಲೆನ್ಸ್ ಇರಲಿಲ್ಲ. ೩. ಕುಟುಂಬ ಮತ್ತು ಅಧಿಕಾರ:ಅವರು ತಮ್ಮ ಅಧಿಕಾರವನ್ನು ಎಂದಿಗೂ ಕುಟುಂಬದವರಿಗಾಗಿ ಬಳಸಲಿಲ್ಲ. ಅವರ ತಾಯಿ ಶಿವಕಾಮಿ ಅಮ್ಮಾಳ್ ಅವರು ಕೊನೆಯವರೆಗೂ ತಮ್ಮ ಹಳ್ಳಿಯ ಮನೆಯಲ್ಲಿಯೇ ಸರಳವಾಗಿ ಬದುಕಿದರು.ಒಮ್ಮೆ ಅವರ ತಾಯಿ ಮಗನ ಬಳಿ ಒಂದು ಫ್ಯಾನ್ ಕೇಳಿದಾಗ, “ಇದು ಸರಕಾರಿ ಹಣದಲ್ಲಿ ನಡೆಯುತ್ತಿರುವ ಮನೆ, ಜನರ ತೆರಿಗೆ ಹಣದಲ್ಲಿ ನಾನು ಕುಟುಂಬಕ್ಕೆ ಸೌಲಭ್ಯ ಒದಗಿಸುವುದಿಲ್ಲ” ಎಂದು ನಿರಾಕರಿಸಿದ್ದರು. ೪. ಪ್ರಯಾಣ ಮತ್ತು ಶಿಷ್ಟಾಚಾರ:ಅವರು ಎಲ್ಲಿಗೆ ಹೋದರೂ ತಮಗೆ ವಿಐಪಿ ಶಿಷ್ಟಾಚಾರ (VIP Protocol) ಬೇಕೆಂದು ಬಯಸುತ್ತಿರಲಿಲ್ಲ. ಎಷ್ಟೋ ಬಾರಿ ಸಾಮಾನ್ಯರಂತೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. . ಕಾರಿನಲ್ಲಿ ಹೋಗುವಾಗ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಸಾಮಾನ್ಯರಂತೆ ಕಾಯುತ್ತಿದ್ದರು; ತನಗಾಗಿ ಜನರಿಗೆ ತೊಂದರೆಯಾಗಬಾರದು ಎಂಬುದು ಅವರ ಆಶಯವಾಗಿತ್ತು. ೫. ಹಸಿವಿನ ಅರಿವು: ತಮ್ಮ ಬಡತನದ ಬಾಲ್ಯವೇ ಅವರ ಸರಳತೆಗೆ ಕಾರಣವಾಗಿತ್ತು. ತಾನು ಉಣ್ಣದಿದ್ದರೂ ಪರವಾಗಿಲ್ಲ, ದೇಶದ ಮಕ್ಕಳು ಹಸಿವಿನಿಂದ ಇರಬಾರದು ಎಂದು ಭಾವಿಸಿದ್ದರಿಂದಲೇ ‘ಬಿಸಿಯೂಟ ಯೋಜನೆ’ ಜನ್ಮತಾಳಿತು. ಕಾಮರಾಜರು ರಾಜಕೀಯ ಎಂದರೆ ಅಧಿಕಾರವಲ್ಲ, ಅದೊಂದು ಸಮಾಜ ಸೇವೆ ಎಂಬುದನ್ನು ತಮ್ಮ ಬದುಕಿನ ಮೂಲಕ ಸಾಬೀತುಪಡಿಸಿದರು.ಕಾಮರಾಜರ ಅವರು ಮದುವೆಯಾಗಿರಲಿಲ್ಲ . ಕೆ. ಕಾಮರಾಜ್ ಅವರು ತಮ್ಮ ಜೀವನಪೂರ್ತಿ ಅವಿವಾಹಿತರಾಗಿಯೇ ಉಳಿದರು. ಅವರು ಮದುವೆಯಾಗದಿರಲು ಕೆಲವು ಮುಖ್ಯ ಕಾರಣಗಳು ಮತ್ತು ಅವರ ಬದ್ಧತೆ ಹೀಗಿತ್ತು: ದೇಶಸೇವೆಯೇ ಮೊದಲ ಆದ್ಯತೆ: ಕಾಮರಾಜ್ ಅವರು ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದರು. ದೇಶದ ಬಿಡುಗಡೆ ಮತ್ತು ಜನರ ಸೇವೆಯೇ ಅವರ ಜೀವನದ ಏಕೈಕ ಗುರಿಯಾಗಿತ್ತು. ಸಂಸಾರ ಎಂಬ ಬಂಧನಕ್ಕೆ ಸಿಲುಕಿದರೆ ಸಾರ್ವಜನಿಕ ಸೇವೆಗೆ ಅಡ್ಡಿಯಾಗಬಹುದು ಎಂಬುದು ಅವರ ಭಾವನೆಯಾಗಿತ್ತು. ತಾಯಿಯ ಆಸೆ: ಅವರ ತಾಯಿ ಶಿವಕಾಮಿ ಅಮ್ಮಾಳ್ ಅವರು ಮಗ ಮದುವೆಯಾಗಬೇಕೆಂದು ಬಹಳ ಆಸೆಪಟ್ಟಿದ್ದರು. ಆದರೆ, ಕಾಮರಾಜ್ ಅವರು “ನನಗೆ ಇಡೀ ದೇಶದ ಮಕ್ಕಳೇ ನನ್ನ ಮಕ್ಕಳಿದ್ದಂತೆ, ತಮಿಳುನಾಡಿನ ಜನತೆಯೇ ನನ್ನ ಕುಟುಂಬ” ಎಂದು ಹೇಳಿ ಮದುವೆಯನ್ನು ನಿರಾಕರಿಸುತ್ತಾ ಬಂದರು.ಸರಳ ಮತ್ತು ಸಂನ್ಯಾಸಿ ಜೀವನ: ಒಬ್ಬ ರಾಜಕಾರಣಿಯಾಗಿ ಅವರು ಬದುಕಿದ ರೀತಿ ಒಬ್ಬ ಸಂನ್ಯಾಸಿಗಿಂತ ಕಡಿಮೆ ಇರಲಿಲ್ಲ. ಸ್ವಾರ್ಥವಿಲ್ಲದ, ಆಸ್ತಿ ಮಾಡದ ಅವರ ಜೀವನಶೈಲಿಗೆ ಅವರ ಅವಿವಾಹಿತ ಜೀವನವೂ ಒಂದು ಕಾರಣವಾಗಿತ್ತು.ಕಾಮರಾಜ್ ಅವರಂತೆ ಜೀವನಪೂರ್ತಿ ಬ್ರಹ್ಮಚಾರಿಯಾಗಿದ್ದರು. ದೇಶಕ್ಕಾಗಿ ಶ್ರಮಿಸಿದ ಮಹಾನ್ ನಾಯಕರು . ಕಾಮರಾಜರು ತಮ್ಮ ತಾಯಿ ಶಿವಕಾಮಿ ಅಮ್ಮಾಳ್ ಅವರನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಆದರೆ, ವೈಯಕ್ತಿಕ ಪ್ರೀತಿ ಮತ್ತು ಸಾರ್ವಜನಿಕ ಧರ್ಮದ ನಡುವೆ ಅವರು ಎಂದಿಗೂ ತಾರತಮ್ಯ ಮಾಡಲಿಲ್ಲ. ಅವರ ಮತ್ತು ತಾಯಿಯ ನಡುವಿನ ಕೆಲವು ಹೃದಯಸ್ಪರ್ಶಿ ಪ್ರಸಂಗಗಳು ಇಲ್ಲಿವೆ: ೧. ಫ್ಯಾನ್ ಮತ್ತು ನಲ್ಲಿಯ ಘಟನೆ:ಕಾಮರಾಜರು ಮುಖ್ಯಮಂತ್ರಿಯಾದಾಗ ಅವರ ತಾಯಿ ಹಳ್ಳಿಯಲ್ಲೇ ವಾಸವಿದ್ದರು. ಮಗ ಮುಖ್ಯಮಂತ್ರಿಯಾದ ಮೇಲೆ ಅವರಿಗೆ ಅನುಕೂಲ ಮಾಡಿಕೊಡುತ್ತಾನೆ ಎಂದು ಹಳ್ಳಿಯವರು ಅಂದುಕೊಂಡಿದ್ದರು. ಒಮ್ಮೆ ತಾಯಿ ಮಗನ ಬಳಿ ಮನೆಗೆ ಒಂದು ಫ್ಯಾನ್ ಮತ್ತು ನಲ್ಲಿಯ (Tap) ವ್ಯವಸ್ಥೆ ಮಾಡಿಸಿಕೊಡು ಎಂದು ಕೇಳಿದರು. ಆಗ ಕಾಮರಾಜರು, “ಅಮ್ಮಾ, ನಾನು ಜನರ ಹಣದಲ್ಲಿ ಮುಖ್ಯಮಂತ್ರಿಯಾಗಿದ್ದೇನೆ. ನಾನು ನಿನಗೆ ಈ ಸೌಲಭ್ಯ ಮಾಡಿಕೊಟ್ಟರೆ, ನಾಳೆ ಊರಿನವರೆಲ್ಲಾ ನನ್ನ ಬಳಿ ಬಂದು ಕೇಳುತ್ತಾರೆ. ನಿನಗೆ ಇದು ಬೇಡ” ಎಂದು ಮೃದುವಾಗಿ ನಿರಾಕರಿಸಿದರು. ೨. ಮುನ್ಸಿಪಾಲಿಟಿ ಟ್ಯಾಪ್ ಕಿತ್ತಿಸಿದ ಪ್ರಸಂಗ:ಅವರು ಮುಖ್ಯಮಂತ್ರಿಯಾಗಿದ್ದಾಗ, ಮುನ್ಸಿಪಾಲಿಟಿ ಅಧಿಕಾರಿಗಳು ತಾಯಿಯ ಮನೆಯ ಮುಂದೆ ಅವರಿಗೊಂದು ಪ್ರತ್ಯೇಕ ನೀರಿನ ನಲ್ಲಿ (Tap) ಅಳವಡಿಸಿದ್ದರು. ಇದನ್ನು ತಿಳಿದ ಕಾಮರಾಜರು ತಕ್ಷಣವೇ ಅದನ್ನು ಕಿತ್ತಿಸಲು ಆದೇಶಿಸಿದರು. “ನನ್ನ ತಾಯಿಗೆ ವಿಶೇಷ ಸೌಲಭ್ಯ ಬೇಡ, ಊರಿನವರೆಲ್ಲಾ ಎಲ್ಲಿ ನೀರು ತುಂಬುತ್ತಾರೋ ಅಲ್ಲೇ ನನ್ನ ತಾಯಿಯೂ ತುಂಬಲಿ” ಎಂಬುದು ಅವರ ತತ್ವವಾಗಿತ್ತು. ೩. ಹಣದ ನೆರವಿನ ಮಿತಿ: ತಾಯಿಯ ನಿರ್ವಹಣೆಗಾಗಿ ಕಾಮರಾಜರು ಪ್ರತಿ ತಿಂಗಳು ಕೇವಲ ೧೨೦ ರೂಪಾಯಿಗಳನ್ನು ಮಾತ್ರ ಕಳುಹಿಸುತ್ತಿದ್ದರು. ಆ ಕಾಲದಲ್ಲಿ ಅದು ತಾಯಿಯ ಜೀವನಕ್ಕೆ ಸಾಕಾಗುತ್ತಿತ್ತು. ಅವರ ತಾಯಿ ಇನ್ನೂ ಸ್ವಲ್ಪ ಹೆಚ್ಚು ಹಣ ಕೇಳಿದಾಗ, “ಒಬ್ಬ ಬಡವನ ತಾಯಿಗೆ ಎಷ್ಟು ಹಣ ಬೇಕೋ ಅಷ್ಟನ್ನು ನಾನು ಕೊಡುತ್ತಿದ್ದೇನೆ, ನಿನಗೆ ಐಷಾರಾಮಿ ಬದುಕು ಬೇಡ” ಎಂದು ಹೇಳಿದ್ದರು. ೪. ತಾಯಿಯ ಮರಣದ ನಂತರ:ತಮ್ಮ ಅಧಿಕಾರವನ್ನು ಎಂದಿಗೂ ಕುಟುಂಬಕ್ಕಾಗಿ ಬಳಸದ ಕಾಮರಾಜರು, ತಾಯಿ ನಿಧನರಾದಾಗಲೂ ಯಾವುದೇ ಸರ್ಕಾರಿ ಸೌಲಭ್ಯ ಪಡೆಯಲಿಲ್ಲ. ಒಬ್ಬ ಸಾಮಾನ್ಯ ಮಗನಂತೆ ಎಲ್ಲಾ ವಿಧಿವಿಧಾನಗಳನ್ನು ಪೂರೈಸಿದರು.ಅಧಿಕಾರ ಎನ್ನುವುದು ಜನರಿಗೆ ಸೇವೆ ಸಲ್ಲಿಸಲು ಇರುವ ಸಾಧನವೇ ಹೊರತು ಕುಟುಂಬವನ್ನು ಬೆಳೆಸಲಿಕ್ಕಲ್ಲ ಎಂಬುದನ್ನು ಕಾಮರಾಜರು ಈ ಪ್ರಸಂಗಗಳ ಮೂಲಕ ಜಗತ್ತಿಗೆ ತೋರಿಸಿಕೊಟ್ಟರು. ಅವರು ಕೈಗೊಂಡ ಪ್ರಮುಖ ಅಭಿವೃದ್ಧಿ ಕಾರ್ಯಗಳು : ೧. ಶಿಕ್ಷಣ ಕ್ರಾಂತಿಕಾಮರಾಜರನ್ನು ತಮಿಳುನಾಡಿನಲ್ಲಿ ‘ಕಲ್ವಿ ತಂತೈ’ (ಶಿಕ್ಷಣದ ಪಿತಾಮಹ) ಎಂದು ಕರೆಯಲಾಗುತ್ತದೆ. ಮಧ್ಯಾಹ್ನದ ಬಿಸಿಯೂಟ
ಸಾವಿಲ್ಲದ ಶರಣರುಮಾಲಿಕೆ “ಭಾರತದ ರಾಷ್ಟ್ರಕರಣದ ಧ್ರುವತಾರೆ ಕೆ ಕಾಮರಾಜ” ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ Read Post »
ಧಾರಾವಾಹಿ ಸಂಗಾತಿ-25 ಅರ್ಜುನ ಉವಾಚ ವಿಸ್ವನಾಥ ಎನ್ ನೇರಳೆಕಟ್ಟೆ ಸಮರಥ ಮಹಾರಥರಿಗೆ ಸೋಲುಣಿಸಿದ ಹಂಸಧ್ವಜಸುತ ಸುರಥ ರಥವೇರಿ ಕುಳಿತಾಗಲೇ ಸುರಥನಲ್ಲಿದ್ದದ್ದು ಅತಿರೇಕದ ರೋಷ. ಸಹೋದರ ಸುಧನ್ವನ ರಣಮರಣಕ್ಕೆ ಕಾರಣರಾದವರ ಮರಣವನ್ನು ಕಾಣದೆ ತೆರಳಲಾರೆ ಈ ರಣರಂಗದಿಂದ ಎಂದು ನಿಶ್ಚಯಿಸಿಕೊಂಡೇ ಬಂದಂತಿತ್ತು ಅವನ ನಿಲುವು. “ಇನ್ನು ಆಯುಷ್ಯ ನಿನಗಿಲ್ಲವೋ ಅರ್ಜುನ. ಮೇಧಿನಿಯನ್ನಾಳ್ವ ಋಣವದು ನಿನ್ನಿಂದ ದೂರವಾಯಿತು” ಎಂದು ಆರ್ಭಟಿಸಿದ ನನ್ನೆದುರು ನಿಂತು.ಅವನ ರಣೋತ್ಸಾಹವನ್ನು ಕಂಡ ಕೃಷ್ಣ ನನ್ನಲ್ಲಿ “ಭೂಮಿಯಲ್ಲಿರುವ ಸಕಲ ಪುಣ್ಯಕಾರ್ಯಗಳನ್ನು ಕೈಗೊಂಡವನಿವನು. ಒಂದೂ ಪಾಪಕಾರ್ಯಗಳನ್ನು ಎಸಗಿದವನಲ್ಲ. ಇವನನ್ನು ಗೆಲ್ಲುವುದು ಅತಿಕಠಿಣ ಕಾರ್ಯ. ಈಗಲೇ ನಾವು ಇವನ ಜೊತೆ ಯುದ್ಧಕ್ಕಿಳಿದರೆ ಸೋಲಾಗುವುದು ಖಚಿತ. ಮೊದಲು ಪ್ರದ್ಯುಮ್ನ, ಸಾತ್ಯಕಿ, ಸಾಂಬ, ಅನುಸಾಲ್ವ, ಕೃತವರ್ಮ, ಯೌವನಾಶ್ವ, ವೃಷಕೇತು, ನೀಲಧ್ವಜರನ್ನು ಇವನೆದುರು ಕಳಿಸು. ಅವರು ಯುದ್ಧ ಮಾಡಲಿ” ಎಂದು ರಣೋಪಾಯವನ್ನು ಅರುಹಿದ.ಹಾಗೆಯೇ ಮಾಡಿದೆ. ಸಹೋದರನ ಮರಣದಿಂದ ಕೆರಳಿ ಕೆಂಡವಾಗಿದ್ದ ಸುರಥನ ಮುಂದೆ ನಮ್ಮವರ ಶೌರ್ಯ ಸಾಹಸಗಳು ಸಾಗಲಿಲ್ಲ.ಪ್ರದ್ಯುಮ್ನನನ್ನು ಪುರುಸೊತ್ತಿನಿಂದ ಪತನಗೊಳಿಸಿದ. ಸಾತ್ಯಕಿಗೆ ಸುಲಭವಾಗಿಯೇ ಸೋಲುಣಿಸಿದ. ಕೃತವರ್ಮ ಕ್ರೋಧವದು ಕದನರಂಗದಲ್ಲಿ ಕರಹಿಡಿಯಲಿಲ್ಲ. ಸಾಂಬ ಸರಳವಾಗಿಯೇ ಸೋತುಹೋದ. ಅನುಸಾಲ್ವ ಅನುಕ್ರಮದಿ ಅದಃಪತನವಾದ. ಯೌವನಾಶ್ವ ಯುದ್ಧದಲ್ಲಿ ಯಶಗಾಣಲಿಲ್ಲ. ನೀಲಧ್ವಜ ನೀತಿಯದು ನೆರವೀಯಲಿಲ್ಲ. ಕರ್ಣಸುತ ಕಡುಗೋಪವದು ಕಾರ್ಯವೆಸಗಲಿಲ್ಲ.ಸಂಪೂರ್ಣ ಯಾದವ ಸೇನೆ ಸುರಥನೆದುರು ಸೋಲುಕಂಡಿತು. ಚತುರಂಗ ಸೈನ್ಯವನ್ನು ಸರಳವಾಗಿ ಸವರಿಬಿಟ್ಟ ಸುರಥ. ತನ್ನ ಒಂದೇ ರಥವನ್ನು ಮುಂದಿಟ್ಟುಕೊಂಡು ಸಮರಥ ಮಹಾರಥರನ್ನು ಹೊಡೆದುರುಳಿಸಿದ.ಕಾಲವುರುಳಿದಂತೆ ಅವನ ಶಕ್ತಿಯದು ಹೆಚ್ಚುತ್ತಲೇ ಹೋಯಿತು. ಸರೋವರದ ನೀರನ್ನು ಕಲಕಿ ಮೆರೆಯುವ ಮದ್ದಾನೆಯಂತಿತ್ತು ಅವನ ವರ್ತನೆ. ಅವನ ಬಾಣದ ಹೊಡೆತಕ್ಕೆ ಸಕಲ ಸೇನೆ ನೊಂದಿತು. ಸರ್ವ ಸೈನಿಕರ ಶರೀರದಲ್ಲಿ ಗಾಯದ ಗುರುತುಗಳೆದ್ದವು. ಯುದ್ಧರಂಗವನ್ನು ಬಿಟ್ಟು ಬೀದಿ ಬೀದಿಗಳಲ್ಲಿ ಸೈನಿಕರು ಓಡಿಹೋಗುವಂತೆ ಅವರನ್ನು ಬೆದರಿಸಿದ ಸುರಥ. ಅದೆಂತೋ ಕಷ್ಟಪಟ್ಟು ಸೈನಿಕರನ್ನು ಕರೆತಂದು ಮತ್ತೆ ಯುದ್ಧರಂಗದಲ್ಲಿ ನಿಲ್ಲಿಸಿದರೆ ತನ್ನ ಬಾಣದಿಂದ ಅವರ ಪ್ರಾಣವನ್ನು ತಿಂದುಮುಗಿಸಿದ.ಆ ಬಳಿಕ ಅವನ ನಯನಗಳು ಹುಡುಕಿದ್ದು ನನ್ನನ್ನು; ನನ್ನ ಜೊತೆಗೆ ಘನಶಕ್ತಿಯಾಗಿದ್ದ ಕಮಲನಯನನನ್ನು. ಅವನು ನಮ್ಮ ಸೈನಿಕರನ್ನು ಕೊಂದದ್ದಷ್ಟೇ ಅಲ್ಲ, ಉಳಿದಿದ್ದ ಸೈನಿಕರ ಎದೆಯೊಳಗೆ ಭೀತಿಛಾಯೆಯನ್ನು ಮೂಡಿಸಿದ್ದ. ನಮ್ಮ ಸೈನ್ಯವನ್ನು ಸರ್ವನಾಶ ಮಾಡುವುದಕ್ಕೆ ಸನ್ನದ್ಧನಾದ ಅವನ ಬಗೆಗೆ ನನಗೆ ಕ್ರೋಧ ಉಕ್ಕಿಬಂತು. ನನ್ನನ್ನು ಹುಡುಕುತ್ತಿದ್ದ ಅವನೆದುರು ನಾನೇ ಹೋಗಿನಿಂತೆ. ರೋಷಾವೇಶದಿಂದ ನನ್ನ ಕೈಯ್ಯಲ್ಲಿದ್ದ ಬಿಲ್ಲು ಅದುರಿತು.ನಾನು ಇದುವರೆಗೂ ಅವನೆದುರು ಹೋಗಿನಿಂತು ಶೌರ್ಯ ತೋರದೇ ಇದ್ದುದಕ್ಕೆ ಕೃಷ್ಣನಿತ್ತಿದ್ದ ಸಲಹೆ ಒಂದು ಕಾರಣವಾದರೆ, ಇನ್ನೊಂದು ಕಾರಣವೂ ಇತ್ತು. ಅದನ್ನೇ ಅವನಲ್ಲಿ ಹೇಳಿದೆ. “ನಿನ್ನ ಸೋದರನಾದ ಆ ಸುಧನ್ವ ಅಳಿದ ದುಃಖವದು ನಿನ್ನಲ್ಲಿದೆ ಎನ್ನುವುದರ ಅರಿವು ನನಗಿದೆ. ಅದಕ್ಕಾಗಿಯೇ ನಾನು ನಿನ್ನ ಮೇಲೆ ದಯೆದೋರಿ ಯುದ್ಧರಂಗಕ್ಕಿಳಿಯುವ ಮನಸ್ಸು ಮಾಡಲಿಲ್ಲ. ಆದರೆ ನೀನು ನನ್ನ ಕರುಣಾಭರಿತ ಚಿತ್ತವನ್ನು ಭಯಪೂರಿತ ಮನಸ್ಸಾಗಿ ಪರಿಭಾವಿಸಿರುವಂತಿದೆ ನಿನ್ನ ವರ್ತನೆ. ಗಟ್ಟಿಯಿದೆಯೆಂದು ತಲೆಯನ್ನು ಬಂಡೆಗೆ ಹೊಡೆದುಕೊಳ್ಳುವ ಮನಸ್ಸು ಮಾಡಿರುವೆ. ನನ್ನೆದುರು ಹೋರಾಡಿದ ಮಾತ್ರಕ್ಕೆ ಗೆಲುವು ನಿನ್ನದಾಗುತ್ತದೆಂಬ ಭ್ರಮೆಯಲ್ಲಿರುವೆ. ಅದು ಸಾಧ್ಯವಿಲ್ಲ. ಕುದುರೆಯನ್ನು ಬಿಟ್ಟುಬಿಡು. ಧರ್ಮರಾಯನ ಸಾರ್ವಭೌಮತ್ವವನ್ನು ಒಪ್ಪು. ಅದುವೇ ನಿನಗೆ ಒಳ್ಳೆಯದು” ಎಂದೆ.ಕರುಣೆಯ ಕಣ್ಣೋಟವದು ಅವನಿಗೆ ಬೇಕಿರಲಿಲ್ಲ. ಅದು ನಿಜವೀರನ ನಿಲುವು. ಸ್ವಾಭಿಮಾನ ಇರುವ ವ್ಯಕ್ತಿ ದೈನ್ಯಾವಸ್ಥೆಯಲ್ಲಿ ಇನ್ನೊಬ್ಬರೆದುರು ಕಾಣಿಸಲಾರ. ಇನ್ನೊಬ್ಬರ ದೈನ್ಯತೆ ಬೆರೆತ ದೃಷ್ಟಿಯನ್ನು ಸಹಿಸಲಾರ. ಸಹೋದರ ಸುಧನ್ವನ ಸಾವನ್ನು ಅಸಾಮಾನ್ಯ ಬಗೆಯಲ್ಲಿ ವರ್ಣಿಸುವ ಮಾತುಗಳನ್ನಾಡಿದ. “ನಿನ್ನಂತಹ ವೀರರು, ಕೃಷ್ಣನಂತಹ ದೇವತೆಗಳೂ ಸಹ ನನ್ನ ಸಹೋದರನ ಸಾಮರ್ಥ್ಯಕ್ಕೆ ಸರಿಹೊಂದುವವರಲ್ಲ. ನಿನ್ನ ಕ್ರೋಧದ ಫಲವಾಗಿ ಮಡಿದವನು ಅವನಲ್ಲ. ಆ ಶ್ರೀಕೃಷ್ಣ ದಯಪಾಲಿಸಿದ ಪುಣ್ಯವದು ನಿನ್ನ ಬಾಣವನ್ನು ಸೇರಲು ಹರಿಪಾದ ಸೇರಿದವನು ಆ ಸುಧನ್ವ. ಇದರಲ್ಲಿ ನಿನ್ನ ಶಕ್ತಿಯಾದರೂ ಏನಿದೆ! ಸುಧನ್ವನ ಸೋಲಾದರೂ ಎಲ್ಲಿದೆ! ಮುಕ್ತಿ ಪಡೆದಿದ್ದಾನೆ ನನ್ನ ಪ್ರಿಯ ಸಹೋದರ” ಎಂದು ಸೋದರ ಸುಧನ್ವನ ಬಗೆಗೆ ಅತಿಮೆಚ್ಚುಗೆಯ ಮಾತನ್ನಾಡಿ ನನ್ನ ಗೆಲುವನ್ನು ಹೀಗಳೆದ ಸುರಥ. “ಕುದುರೆಯನ್ನು ಬಿಟ್ಟು ಕಳುಹಿಸುವುದಕ್ಕೆ ನಾವೇನೂ ಅರಣ್ಯವಾಸಿಗಳಲ್ಲ” ಎಂದು ಗೂಢಾರ್ಥದ ಮಾತನ್ನು ನುಡಿದು ನನ್ನನ್ನು ಚುಚ್ಚಿದ.ಘನಘೋರವಾದ ಕದನವೇ ಪ್ರಾರಂಭವಾಯಿತು. ಶ್ರೀಕೃಷ್ಣನನ್ನೂ ಗಾಯಕ್ಕೀಡುಮಾಡುವ ಘನಗಂಭೀರತೆ ತೋರಿದ ಸುರಥ. ನನ್ನನ್ನೂ ಘಾಸಿಗೊಳಿಸಿದ. ಇನ್ನಿವನನ್ನು ಉಳಿಸಬಾರದು ಎಂಬ ಛಲ ಮೂಡಿತು ನನ್ನಲ್ಲಿ. ಕೃಷ್ಣವಾಣಿಯೂ ಅದೇ ತೆರದಲ್ಲಿತ್ತು. ಬಲವಾದ ಬಾಣದಿಂದ ಅವನ ತೋಳನ್ನು ಕತ್ತರಿಸಿದೆ. ಒಂದು ಕೈಯ್ಯನ್ನು ಕಳೆದುಕೊಂಡವನು ನನ್ನ ರಥದೆಡೆಗೇ ಓಡಿಬರತೊಡಗಿದ. ಇನ್ನೊಂದು ತೋಳನ್ನೂ ಕತ್ತರಿಸುವಂತೆ ಕೃಷ್ಣ ಹುರಿದುಂಬಿಸಿದ. ಹಾಗೆಯೇ ಮಾಡಿದೆ. ಎರಡೂ ಕರಗಳಿಲ್ಲದವನಾದ ಕರಕೌಶಲಿ ಸುರಥ. ಅದೇ ಸ್ಥಿತಿಯಲ್ಲಿ ನನ್ನನ್ನು ಕಾಲಿನಿಂದ ಒದೆಯುವುದಾಗಿ ಬೊಬ್ಬೆ ಹೊಡೆಯುತ್ತಾ ಓಡಿ ಬರತೊಡಗಿದ. ಬಾಣ ಪ್ರಯೋಗಿಸಿದೆ. ಅವನ ಎರಡೂ ತೊಡೆಗಳು ಮುರಿದವು. ನೆಲದೆಡೆಗೆ ಮುಖಮಾಡಿ ಸಂಪೂರ್ಣವಾಗಿ ಕುಸಿದುಬಿದ್ದ. ಆಗಲೂ ಅವನ ಛಲ ತಣಿಯಲಿಲ್ಲ. ಹಾಗೆ ತೆವಳುತ್ತಲೇ ನನ್ನೆಡೆಗೆ ಬರತೊಡಗಿದ. ಆಗ ಅವನ ಶಿರದ ಕಡೆಗೆ ಬಾಣಬಿಟ್ಟೆ. ಶಿರವದು ದೇಹದಿಂದ ಬೇರೆಯಾಗಿ ಬಂದು ಕೃಷ್ಣಪಾದವನ್ನು ಸೇರಿತು.ಅದನ್ನು ಎತ್ತಿಕೊಂಡ ಕೃಷ್ಣ ಕರುಣೆ ನೋಟವನ್ನು ಹರಿಸಿದ. ಆಕಾಶಮಾರ್ಗದಲ್ಲಿ ಸಂಚರಿಸುತ್ತಿದ್ದ ಗರುಡನನ್ನು ಕರೆದ. “ಇದನ್ನು ಪ್ರಯಾಗಕ್ಕೆ ತಲುಪಿಸುವ ಹೊಣೆ ನಿನ್ನದು” ಎಂದು ಹೇಳಿ ಆ ಶಿರವನ್ನಿತ್ತ. ಹರಿಯಾಜ್ಞೆಗೆ ಅನುಸಾರವಾಗಿ ಅದನ್ನು ಕೊಂಡೊಯ್ಯುತ್ತಿದ್ದ ಗರುಡ ನಡೆಯನ್ನು ಕಂಡವನು ಆ ಶಿವ. ತನಗೆ ಸಲ್ಲಬೇಕಾದ ಶಿರವಿದು ಎನಿಸಿತು ಅವನಿಗೆ. ಗರುಡನಿಂದ ಶಿರವನ್ನು ಪಡೆದುಕೊಂಡು ಬರುವಂತೆ ತಿಳಿಸಿ ನಂದಿಯನ್ನು ಕಳುಹಿಸಿಕೊಟ್ಟ… ಡಾ. ವಿಶ್ವನಾಥ ಎನ್ ನೇರಳಕಟ್ಟೆ
ಧಾರಾವಾಹಿ ಸಂಗಾತಿ -18 ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ ಪತಿ ಚೆನ್ನಮಲ್ಲಪ್ಪನವರ ವಿಯೋಗ ೧೯೪೮೯ ಸಮಯ ….ಆಗಲೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗಿತ್ತು….. ಸಂಸ್ಥಾನಗಳ ವಿಲೀನಿಕರಣವಾಗಿ, ನಿರಾಶ್ರಿತರು ತಮ್ಮ ತಮ್ಮ ತಾಣಕ್ಕೆ ಹೋಗಿ ಸೇರಿದ್ದರು.ಜಯದೇವಿ ತಾಯಿಯವರು ಅನೇಕ ಕುಟುಂಬಗಳ ಬದುಕಿಗೆ ಬೆಳಕಾಗಿದ್ದರು .. ಅವರಲ್ಲಿ ಆಶ್ರಯ ಪಡೆದ ಅನಾಥರಿಗೆ ಸಂಸಾರ ದೊರಕಿಸಿಕೊಟ್ಟರು…ತಾಯಿಯ ಮಮತೆಯಿಲ್ಲದೆ ಅಳುತ್ತಿದ್ದ ಮಕ್ಕಳಿಗೆ ತಾಯಿಯ ಅಕ್ಕರೆ ಸಿಕ್ಕಿತು…ಬಾಣಂತಿ ನೋವಿನಲ್ಲಿ ನರಳುತ್ತಿದ್ದ ಮಹಿಳೆಯರಿಗೆ ಅವರು ತಾಯಿ ಆಗಿ ಸೇವೆ ಸಲ್ಲಿಸಿದರು…ಅಜ್ಞಾನದಲ್ಲಿ ಕಳೆದು ಹೋಗುತ್ತಿದ್ದ ಮಕ್ಕಳಿಗೆ ಶಿಕ್ಷಣದ ದಾರಿ ತೋರಿಸಿದರು…ಬಡತನದ ಸಂಕೋಲೆಗಳನ್ನು ಕತ್ತರಿಸಿ ಅವರ ಬದುಕಿಗೆ ನಂಬಿಕೆ ತುಂಬಿದರು…!!!ಆದರೆಜಯದೇವಿ ತಾಯಿಯವರ ಮನಸ್ಸಿನಲ್ಲಿ ದುಃಖದ ಸಾಗರ ಉಕ್ಕುತ್ತಿತು……!!!ಎಲ್ಲರಿಗೂ ಬದುಕು ಕೊಟ್ಟ ಆ ಮಹಾತಾಯಿ,ಸ್ವಂತ ಮನಸ್ಸಿನಲಿ ನೋವನ್ನು ಹೋತ್ತು ಕೊಂಡಿದ್ದರು…..ತಮ್ಮಕಷ್ಟವನ್ನು ಮಾತ್ರ ಯಾರಿಗೂ ತೋರಿಸಲಿಲ್ಲ…ಬಾಹ್ಯವಾಗಿ ಅವರು ಸದಾ ನಗುತ್ತಿದ್ದರು…ಆದರೆ ಆ ನಗುವಿನ ಹಿಂದೆ ಅನೇಕ ಕಹಿ ಅನುಭವಗಳು, ತ್ಯಾಗಗಳ ಗಾಯಗಳು ಮರೆಮಾಚಿಕೊಂಡಿದ್ದವು…ಇತರರ ಕಣ್ಣೀರನ್ನು ಒರೆಸಿದ ಕೈಗಳು,ತಮ್ಮ ಕಣ್ಣೀರನ್ನು ತಾವೇ ಒರೆಸಿಕೊಳ್ಳುತ್ತಿದ್ದರು… ಎಲ್ಲರ ಸಂತೋಷವೇ ತನ್ನ ಸಂತೋಷ ಎಂದು ಕೊಂಡವರ ಬದುಕು ಒಂದು ತ್ಯಾಗದ ಗಾಥೆ,ತನ್ನ ನೋವನ್ನು ಮನದಲ್ಲಿ ಮಡಚಿಟ್ಟಕೊಂಡ ಮಹಾನ್ ಆತ್ಮವದು.ತಾಯಿಯವರ ಗಂಡ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು .ಮಲಗಿದ ಅವರ ನಿಶಕ್ತ ದೇಹದ… ಪ್ರತಿ ಉಸಿರು ಅವರ ಆಯುಷ್ಯದ ರೇಖೆಯನ್ನು ಕಡಿಮೆಗೊಳ್ಳಿಸುತ್ತಿರುವದ ತೋರುತ್ತಿತ್ತು. ಗಂಡನ ಕಣ್ಣಿನಲ್ಲಿ ಕಾಣುತ್ತಿದ್ದ ವೇದನೆ ಸಹಿಸದಾಗಿತ್ತು… ತಿಳಿಯದ ಅಜ್ಞಾತ ಭಯ ಕಾಡುತ್ತಿತ್ತು…..!!!! ಆದರೂ ಮುಖದಲ್ಲಿ ನೋವಿನ ಛಾಯೆ ತೋರಿಸಲಿಲ್ಲ. ಧೈರ್ಯವಾಗಿ ನಿಂತವರು. ಸಭೇ- ಸಮಾರಂಭ-ಜನರ ಮಧ್ಯೆ ಹಾಜರಾಗುತ್ತಿದ್ದರು. ಅವರಿಗೆ ಯಾವ ಸಮಾರಂಭಕ್ಕೆ ಹೋಗುವದು ಬೇಡವಾದರೂ ಗಂಡ ಮಾತ್ರ ಹರ್ಷದಿಂದಲೇ ಅವರಿಗೆ ಹೋಗಿ ಬರಲು ಹೇಳುತ್ತಿದ್ದರು. “ನನ್ನನ್ನು ನೋಡಿಕೊಳ್ಳಲು ಆಳುಗಳು ಇದ್ದಾರಲ್ಲ ಎರಡು ದಿನದಲ್ಲಿ ನನಗೇನಾಗತದ??!! ಹೋಗಿ ಬಾ” ಅಂತ ಉತ್ಸಾಹ ತುಂಬಿಸುತ್ತಿದ್ದರು. ಒಂದು ಕಡೆ ದೇಶದ ಸ್ವಾತಂತ್ರ್ಯದ ಸಂಭ್ರಮದ ಆಚರಣೆ ಮತ್ತೊಂದು ಕಡೆ ಅತ್ಯಂತ ಪ್ರೀತಿಯ ವ್ಯಕ್ತಿಯನ್ನು ಕಳೆದುಕೊಳ್ಳುವ ಭೀತಿ…ಈ ಎರಡರ ನಡುವೆ ತಾಯಿಯ ಮನಸ್ಸು ಹೋರಾಡುತ್ತಿತ್ತು.ತಮ್ಮ ವೈಯಕ್ತಿಕ ದುಃಖವನ್ನು ಮರೆತು, ಸಮಾಜದ ಹಿತಕ್ಕಾಗಿ ಸದಾ ಮುಂದೆ ಸಾಗಿದ ಅಜರಾಮರ ವ್ಯಕ್ತಿತ್ವ. *ಸಂಸಾರ ಸಾಗರವು|ಈಸಲು ಹೊರಟಾಗಏಸೊಂದು ಕಷ್ಟಗಳ ಮೊಸಳೆ -ಬಂದು ನುಸುಳೂತ ಹಾದಿ ಕಟ್ಟುವವು!! *.ಆ ಕ್ಷಣಗಳು ಅವರ ಜೀವನದ ಅತ್ಯಂತ ಕಠಿಣ ಅಧ್ಯಾಯವಾಗಿದ್ದರೂ, ತಾಯಿಯವರ ಅಂತರಂಗದ ಶಕ್ತಿಯನ್ನು ಮತ್ತಷ್ಟು ಗಾಢಗೊಳಿಸಿತು… ತಮ್ಮ ಆರೋಗ್ಯದ ಸ್ಥಿತಿ ಗೊತ್ತಿದ್ದ ಚನ್ನಲ್ಲಪ್ಪನವರು ತನ್ನ ಹಿರಿಯ ಮಗಳ ಮದುವೆಯನ್ನಾದರೂ ಮಾಡಬೇಕೆಂದು ಹಂಬಲ ಪಟ್ಟರು ಹಾಗೆ ತನ್ನ ಮಾವನಾದ ಚನ್ನಬಸಪ್ಪ ಮಡಿಕಿ ಅವರೊಂದಿಗೆ ಸಮಾಲೋಚನೆ ಮಾಡಿ ಇತ್ಯರ್ಥಕ್ಕೆ ಬಂದರು. ಅವರ ಮಗ ರಾಜಶೇಖರ ಮಡಿಕೇರಿ (ಜಯದೇವಿ ತಾಯಿಯವರ ತಮ್ಮ)ಅತ್ಯಂತ ಸುಶೀಲರು ಸುದ್ರೂಪಿಯು ಆಗಿದ್ದ ರಾಜಶೇಖರನಿಗೆ ಕೊಟ್ಟು ಮದುವೆ ಮಾಡಬೇಕು ಅನ್ನುವ ಹಂಬಲ ವ್ಯಕ್ತಪಡಿಸಿದರು……ಅದರಂತೆ ತಾಯಿಯವರು ಮನಸ್ಸಿನಿಂದ ಒಪ್ಪಿ ಮದುವೆ ಮಾಡಿ ಮುಗಿಸಿದರು. ಅತ್ಯಂತ ವಿಜೃಂಭಣೆಯಿಂದ ಮದುವೆಯನ್ನು ಮಾಡಿದರು. ಅಳಿಯನಿಗೆ ಕಾಲೇಜ್ ಹೋಗಿ ಬರಲು ಕುದುರೆಯನ್ನು ಕಾಣಿಕೆಯಾಗಿ ಕೊಟ್ಟರು. ಜಯದೇವಿ ತಾಯಿಯವರು ತಮ್ಮಗಂಡನ ಆರೋಗ್ಯದ ಸ್ಥಿತಿ ಸುಧಾರಿಸಲು ಅದೆಷ್ಟೊಂದು ವ್ರತಗಳನ್ನು ಉಪವಾಸ ತಪವಾಸಗಳನ್ನು ಮಾಡಲು ಪ್ರಾರಂಭಿಸಿದರು. ಹಾಗೆ ಸಿದ್ದರಾಮನ ದೇವಸ್ಥಾನಕ್ಕೆ ಬರಿಗಾಲಿನಿಂದ ನಡೆದುಕೊಂಡುಹೋಗುವರು… ,ಮನೆಯ ಹೂದೂಟದಲ್ಲಿ ಬೆಳೆದ ಹೂಗಳನ್ನು ತೆಗೆದುಕೊಂಡು ಸುಂದರವಾದ ಹಾರನ್ನು ಹೆಣೆದು ಸಿದ್ದರಾಮನಿಗೆ ಅರ್ಪಿಸಿ ನಂತರ ಮನೆಗೆ ಬಂದು ಪ್ರಸಾದ ತೆಗೆದುಕೊಳ್ಳುವರು .ಅಷ್ಟರೊಳಗಾಗಿ ಮೂರು ನಾಲ್ಕು ಗಂಟೆ ಆಗಿರುತ್ತಿತ್ತು ಅಲ್ಲಿಯವರೆಗೂ ಉಪವಾಸವಿರುತ್ತಿದ್ದರು. ಹೀಗಾಗಿ ಅವರ ಆರೋಗ್ಯದ ಮೇಲೆ ಬಹಳಷ್ಟು ದುಷ್ಪರಿಣಾಮಗಳು ಬೀಳಲು ಆರಂಭಿಸಿದವು ಅಂತ ತಾಯಿಯವರೇ ನಮಗೆ ಬಹಳಷ್ಟು ಸಲ ಹೇಳುತ್ತಿದ್ದ ನೆನಪು ……!!!ಹಾಗೆ ಮುಂಜಾನೆಯ ಫಲಹಾರ ಆರೋಗ್ಯದ ಗುಟ್ಟು ಅಂತನು ಹೇಳ್ತಾ ಇದ್ದರು . ಒಂದು ದಿನ ಸಿದ್ದರಾಮನ ಹಣೆಯ ಅಂಗಾರವ ತಂದು ಗಂಡನ ಮಸ್ತಕಕ್ಕೆ ಹಚ್ಚಲು ಲಗುಬಗೆಯಿಂದ ಮೆಟ್ಟಲು ಏರಲು ಹೋಗಿ ಕಾಲು ಜಾರಿ ಬಿದ್ದು ಸೊಂಟ ನೋವನ್ನು ಅನುಭವಿಸಿದ್ದರು. ಆದರೆ ಈ ಸಮಾಚಾರವನ್ನು ಗಂಡನಿಗೆ ಯಾರು ಹೇಳು ತಕ್ಕದ್ದಲ್ಲ ಅಂತ ಹೇಳಿದ್ದರು ಆ ನೋವಿನಲ್ಲಿ ಅವರು ಎದ್ದು ಮತ್ತೆ ಗಂಡನ ಸೂಶ್ರುಷಯದಲಿ ತೊಡಗಿದ್ದರು.ಪತಿ ಇಹಲೋಕವನ್ನು ಬಿಟ್ಟು ಹೋಗುವ ಸಮಯ ಸಮಿಪಿಸಿದಂತೆ…. ಗಂಡ ತಾಯಿಯವರಿಗೆ ಮಗುವಾದರು… ಮೇಲಿಂದ ಮೇಲೆ ತಾಯಿಯವರಿಗೆ ಕರೆದು ಹತ್ತಿರ ಕುಳಿತುಕೊಳ್ಳಲು ಕೇಳುತ್ತಿದ್ದರು. ಆತುರದಿಂದ |ಓತು ನೋಡುವ ಕಣ್ಣು,ಆತುಮಕ್ಕೆ ಶಾಂತಿ ನೀಡೂವ- ಪರಿಶುದ್ಧ ಮಾತುಗಳನ್ನು ಕೇಳಿಸುವ ತವಕ || ಸತತವಾಗಿ ಬಸವಣ್ಣನ ವಚನಗಳನ್ನು ಪಠಣ ಮಾಡಲು ಕೇಳಿಕೊಳ್ಳುತ್ತಿದ್ದರು .ಹಾಗೆ ಮಂತ್ರಗಳ ಉಚ್ಚರಣೆ ಮಾಡಲು ಹೇಳುತ್ತಿದ್ದರು .ಅವರ ಜೊತೆಗೆ ತಾನು ಕೂಡ ಆ ಮಂತ್ರ ಪಠಣವನ್ನು ಮಾಡುತ್ತಿದ್ದರು. “ನಿಮಗೆ ಆಯಾಸವಾಗಿತ್ತು ಜೋರಾಗಿ ಹೇಳಬೇಡಿ ನಾನು ಹೇಳ್ತೀನಿ ಕೇಳ್ರಿ “ಅಂತ ತಾಯಿಯವರು ಬಹಳಷ್ಟು ಸಲ ಹೇಳಿದರೂ ಅದಕ್ಕೆ ಅವರು ನಕ್ಕು “ದೇವರ ಹೆಸರು ಹೇಳಿದರೆ ಆಯಾಸ ಯಾತರದು” ಅಂದು ತಾವು ಕೂಡ ಜೋರ ಜೋರಾಗಿ ಮಂತ್ರಗಳನ್ನು ಹೇಳುತ್ತಿದ್ದರು. ಆ ದಿನ ಅದೇಕೋ ಪತಿಯ ಆರೋಗ್ಯ ಕ್ಷೀಣವಾಗ್ತಾ ಇದೆ ಅಂತ ಅನಿಸಿದಾಗ ತಾಯಿಯವರು ಒಂದು ನಿಮಿಷವೂ ಗಂಡನಿಂದ ದೂರ ಸರಿಯಲಿಲ್ಲ .ಕೊನೆಗೆ ಸಂಜೆ ಹೊತ್ತಿಗೆ ಸ್ವಲ್ಪ ಪ್ರಸಾದ ತೆಗೆದುಕೊಂಡು ಬರಲು ಒತ್ತಾಯಿಸಿದರೂ ಅವರು ಅಲ್ಲಿಂದ ಕದಲಲಿಲ್ಲ ….ತಾಯಿಯವರ ತಂದೆ ಬಂದಾಗ “ಈಗ ನಿಮ್ಮ ತಂದೆ ಬಂದಿದ್ದಾರೆ ಸ್ವಲ್ಪ ಹೋಗು ಹೊಟ್ಟೆ ಏನಾರು ತೆಗೆದುಕೊಂಡು ಬಾ”ಅಂತ ಒತ್ತಾಯಿಸಿದರು..ಆಗ ತಾಯಿಯವರು ಅಲ್ಲಿಂದ ಹೋಗಿ ಸ್ನಾನ ಪೂಜೆಯನ್ನು ಮುಗಿಸಿದರು . ಅವರಿಗೆ ಪ್ರಸಾದ ಸೇರಲೇ ಇಲ್ಲ ಅಂದೆಕೋ ಏನೋ ಕಳೆದು ಹೋಗುವ ತಳಮಳ ಅವರಲ್ಲಿ ಇತ್ತು . “ಗಂಡನನ್ನು ನೀನು ನೋಡಿಕೊಳ್ಳುವುದು ಹೇಗೆ ಸಾಧ್ಯ ಹೀಗೆ ಉಪವಾಸ ಇದ್ದರೆ “ಅಂತ ಅತ್ತಿಯಂದಿರ ಆಗ್ರಹಿಸಿದ್ದಕ್ಕೆ ಒಲ್ಲದ ಮನಸ್ಸಿನಿಂದ ಒಂದು ಬಟ್ಟಲು ಹಾಲನ್ನು ಕುಡಿದು…. ಸಿದ್ದರಾಮನ ಹಣೆಯ ಅಂಗಾರ ತೆಗೆದುಕೊಂಡು ಪತಿಯ ಹತ್ತಿರ ಬಂದರು. ಅವರ ಹತ್ತಿರವಿದ ಆಳ ಶಂಕರವನ್ನು ” ಇನ್ನು ನೀನು ಹೋಗಿ ಪ್ರಸಾದ ತೆಗೆದುಕೊಂಡು ಬಾ, ನಾನು ಇರುತ್ತೇನೆ ಅಂದರು ಎಂಥ ಪರಿಸ್ಥಿತಿಯಲಿಯೂ ಎಲ್ಲರ ಕಾಳಜಿಯನ್ನು ಮಾಡುವುದನ್ನು ಮಾತ್ರ ಜಯದೇವಿ ತಾಯಿಯವರು ಮರೆಯುತ್ತಿರಲಿಲ್ಲ .ಗಂಡ ಚನ್ಮಲ್ಲಪ್ಪನವರು ದೀರ್ಘವಾಗಿ ತಾಯಿಯವರನ್ನು ಒಮ್ಮೆ ನೋಡಿ ಮಂತ್ರ ಪಠಣ ಮಾಡಲು ಮತ್ತೇ ಹೇಳಿದರು *ಸಾವಿಗೆ ಅಂಜದಿರು |ನೋವಿಗೆ ಕುಗ್ಗದಿರುಭವ ಮಾಲೆಯಲ್ಲಿ ಸಿಗದಿರು- ಸುದೈವದೇವನ ಸ್ಮರಣೆಯ ಮರೆಯದಿರು !!* ಎನ್ನುವಂತೆ ಅಂತಿಮ ಕ್ಷಣಗಳು ಹತ್ತಿರವಾಗುತ್ತಿವೆ ಎಂಬುದನ್ನು ತಿಳಿಯಲು ತಡವಾಗಲಿಲ್ಲಮನೆಯಲ್ಲಿ ಒಂದು ವಿಚಿತ್ರ ವಾತಾವರಣ. ವಿದಾಯದ ಮುನ್ನದ ಭಾರವಾದ ನಿಶ್ಶಬ್ದ.ಮಂತ್ರ ಹೇಳುತ್ತಾ ಹೇಳುತ್ತಲೇ ತಾಯಿಯವರ ಸ್ವಲ್ಪ ಕಣ್ಣು ಕುಳಿತಲ್ಲಿಯೇ ಕಣ್ಣು ರೆಪ್ಪೆಗಳು ಮುಚ್ಚಿದ್ದವು…..ಪತಿ ತಾಯಿಯವರ ಹೆಸರನ್ನು ಜೋರಾಗಿ ಕೂಗಿ ಕರೆದರು ಗಡಿಬಿಡಿಸಿಕೊಂಡು ….. ಜಯದೇವಿ ತಾಯಿಯವರು” ಏನಾಯಿತು…. !!??ಅಂತ ಕೇಳಿದರು.ಪತಿ ನಿಧಾನವಾಗಿ ತಾಯಿಯವರ ಕೈ ಹಿಡಿದರು…, ಕಣ್ಣಲ್ಲಿ ಅನೇಕ ಕೇಳಬೇಕಾದ ಪ್ರಶ್ನೆಗಳಿಗೆ ಉತ್ತರವಿಲ್ಲದೆ ಸುಮ್ಮನೆ ನೋಡಿದರು.“ಮಂತ್ರ ಪಠಿಸು…”ಅಂದರುಆ ಮಾತು ಕೇಳುತ್ತಿದ್ದಂತೆ ತಾಯಿಯವರ ಹೃದಯ ನಡುಗಿತು…!!!ಆದರೂ ಅವರು ಕುಗ್ಗಲಿಲ್ಲ.ಕಣ್ಣೀರನ್ನು ಒಳಗೇ ನುಂಗಿ, ದೈರ್ಯವನ್ನು ಧರಿಸಿ ಮಂತ್ರಗಳನ್ನು ಜಪಿಸಲು ಆರಂಭಿಸಿದರು.“ಓಂ… ”ಅವರ ಧ್ವನಿ ಮೊದಲು ಸ್ವಲ್ಪ ನಡುಗಿತು…ಆದರೆ ನಂತರ ನಿಧಾನವಾಗಿ ಗಟ್ಟಿಯಾಗತೊಡಗಿತು.ವಚನಗಳನ್ನು ಹೇಳಲಾರಂಭಿಸಿದರು. ಒಂದು ಕಡೆ ದೇವರ ಸ್ಮರಣೆ, ಮತ್ತೊಂದು ಕಡೆ ಜೀವದ ಕೊನೆಯ ಹಂತ…ಆದರೆ ಅಚ್ಚರಿಯ ಸಂಗತಿಗಂಡನ ಧ್ವನಿಯೇ ಹೆಚ್ಚು ಜೋರಾಗಿ ಕೇಳಿಸತೊಡಗಿತಹಾಸಿಗೆಯ ಮೇಲೆ ನಿಶಕ್ತನಾಗಿ ಮಲಗಿದವರು, ತನ್ನ ಉಳಿದ ಶಕ್ತಿಯನ್ನೆಲ್ಲಾ ಸೇರಿಸಿಕೊಂಡು ತಾಯಿಯವರಿಗಿಂತಲೂ ಜೋರಾಗಿ ಮಂತ್ರಗಳನ್ನು ಉಚ್ಚರಿಸಲಾರಂಭಿಸಿದರು…… ಮಂತ್ರಪಠನವು..ಜೀವನದ ಅಂತಿಮ ಘೋಷಣೆಯಾಗಿತ್ತು….!!!!! ಒಂದು ಆತ್ಮ ತನ್ನ ಪಯಣವನ್ನು ಮುಗಿಸುವ ಮುನ್ನದ ಶುದ್ಧ ಸಂಕಲ್ಪ…ತಾಯಿಯವರ ಕಣ್ಣೀರು ತಡೆಯಲಾಗದೆ ಹರಿಯಲಾರಂಭೀಸಿದ್ದವು…ಆದರೂ ಜಪ ನಿಲ್ಲಿಸಲಿಲ್ಲ. *ಅತ್ತತ್ತು ಕಣ್ಣಿರು |ಬತ್ತಿ ಹೋಗಿವು ಇಂದುಹೊತ್ತಿಸಿದ ಒಲಿ ಆರುವದು-ನಿನಗಾಗಿಹೋತ್ತಿದ ಎದೆಯು ಆರದು||* ಪ್ರತಿ ಪದವೂ ಹೃದಯವನ್ನು ಕೀಳುತ್ತಿದ್ದರೂ, ಪಠಣ ನಿಲ್ಲಿಸಲಿಲ್ಲ ಅಂತಿಮ ಕ್ಷಣಗಳು ಸಮಿಪಿಸುತಿದ್ದಂತೆಗಂಡನ ಧ್ವನಿ ನಿಧಾನವಾಗಿ ಕುಂದುತ್ತಾ ಹೋಯಿತು…ಆದರೆ ಕೊನೆಯ ಉಸಿರಿನವರೆಗೂ ಮಂತ್ರವನ್ನು ಬಿಟ್ಟಿರಲಿಲ್ಲ…ಒಂದು ದೀರ್ಘ ಶ್ವಾಸ… ಶಾಂತ ಮುಖ…ಮತ್ತೊಂದು ಕ್ಷಣ…..ಎಲ್ಲವೂ ನಿಶ್ಶಬ್ದ… ಧ್ವನಿ ನಿಂತಿತು…ಆತ್ಮ ಶಾಂತವಾಗಿತ್ತು …!!!!! *ಕಣ್ಣೊಳಗಿನ ತೇಜ| ಬಣ್ಣಿಸಲಾಗುವುದುಹುಣ್ಣಿಮೆಯ ಚಂದ್ರನ ತಂಡವ -ಬೀರುತ್ತಾಕಣ್ಣು ಚಲಿಸದೆ ನಿಶ್ಚಲ||* ತಾಯಿಯವರ ಕೈಯಲ್ಲೇ ಅವರ ಜೀವ ಕೊನೆಯ ಬಾರಿ ನಡುಗಿ, ಶಾಂತವಾಗಿ ನಿಂತುಹೋಯಿತು… ಜೀವನದ ಅಂತ್ಯ… ಆತ್ಮದ ಪವಿತ್ರ ಮುಕ್ತಿಯ ಕ್ಷಣ…ತಾಯಿಯವರು ಕಣ್ಣೀರಿನಲ್ಲಿ ಮುಳುಗಿದರು . *ಸಮಾಧಾನವ ಹೇಳಿ| ರವಿಸುವ ಮಾತಿಲ್ಲ ಮಮತೆಯ ಬೀರುವ ನೋಟಿಲ್ಲ- ಓ ತಂದೆಆತುಮಕೆ ಶಾಂತಿ ಹೇಳವರ ಇನ್ನು ಇಲ್ಲ|| ಎಂದು ಅನ್ನಿಸಿದರೂ *ಆಯಾಸವಿಲ್ಲದೆ |ಕಾಯ ಬಯಲಾಯಿತು ಹಾಯಗೊಂಡಿತ್ತು ಎನಮನ- ಸಿದ್ದನ ಕರುಣೆಯಛಾಯೆ ಇದಂತೆ ತೋರಿತ್ತು||* ತಮ್ಮ ಜೀವನ ಸಂಗಾತಿ ದೇವರ ನಾಮಸ್ಮರಣೆಯಲ್ಲೇ ಕೊನೆಯ ಉಸಿರೆಳೆದಿದ್ದರು.ಅದು ದೇವರಲ್ಲಿ ಒಂದಾದ ಕ್ಷಣ ಶಾಂತಿಯಲಿ ಶಾಶ್ವತ ವಿದಾಯದ ಕ್ಷಣ…!!! ಮನಸ್ಸಿಗೆ ತುಸು ನೆಮ್ಮದಿ ತಂದಿತ್ತು. *ನೆನೆಯಲಿನ್ಯಾರಿಗೆ |ಮನ ಮಂದಿರದೊಳುಮನವೇ ಸಜ್ಜೆಯಾಗಿ ಪರಿಣಮಿಸಿ- ಎನ್ನಯ್ಯಮನವಿ ಲಿಂಗವಾಗಿ ಬೆಳಗಿತ್ತು||* ಪತಿಯ ವಿಯೋಗದಿಂದ ಪೂರ್ತಿಯಾಗಿ ಅವರು ಸಿದ್ದರಾಮನ ಭಕ್ತಿಯಲಿ ಲೀನವಾದರು. ಲಿಂಗಪತಿ ಶರಣಸತಿಯನ್ನಾಗಿಸಿ ಬಾಳಲಾರಂಭಿಸಿದರು . *ಹುಟ್ಟಿದ ಗುಣ ಕಳೆದು| ಕೊಟ್ಟರು ಲಿಂಗವನಟ್ಟಿತು ಎನ ಮನ ಪ್ರಾಣ -ಭಾವವಮುಟ್ಟಿ ಲಿಂಗ ಧ್ಯಾನ ಮಾಡುವದಕ||* ಸಂಸಾರದ ವ್ಯಾಮೋಹವನ್ನೆಲ್ಲ ಕಳಚಿ… ಶರಣರ ಆಣತಿಯಂತೆ ಇಂದು ಸಂಸಾರವನ್ನು ಮಾಡಿ ಜಗವ ಗೆದ್ದು ಲಿಂಗಯ್ಯನ ಪತಿಯಾಗಿ ಸ್ವೀಕರಿಸಿ ಬಾಳಹತ್ತಿದ್ದರು… ಈಗ ಪೂರ್ತಿಯಾಗಿ ಗುರು ಸಿದ್ದರಾಮನ ಕೂಸಾಗಿ ಬಾಳಲು ಪ್ರಾರಂಭಿಸಿದರು. *ಕರುಣೆಯ ಕಂಗಳ |ಅರುಣೋದಯವಾಯಿತು ಗುರುವಿನ ಗುರು ಸಿದ್ದರಾಮನ-ದಯೆಯಿಂದದುರಿತ ಕರ್ಮವು ಹರಿಯಿತು||*ಎನ್ನುವಂತೆಸೊನ್ನಲಿಗೆಯಗುರು ಸಿದ್ದರಾಮನಲಿ ಒಂದಾಗಿ ನಿಂದರು.ಚೆನ್ನ ಮಲ್ಲಪ್ಪನವರು ಹೀಗೆ ಐದು ಮಕ್ಕಳು ಐದು ಅತ್ತಿಯಂದಿರು ತಮ್ಮ- ತಮ್ಮನ ಹೆಂಡತಿ ಮಕ್ಕಳು ಹಾಗೂ ಅಪಾರವಾದ ಆಸ್ತಿಯ ಜವಾಬ್ದಾರಿ ಬಿಟ್ಟು ಭೂಲೋಕ ತೇಜಿಸಿದ್ದರು. ಚೆನ್ನ ಮಲ್ಲಪ್ಪನವರಿಗೆ ತಾಯಿಯವರ ಮೇಲೆ ಅಪಾರವಾದ ವಿಶ್ವಾಸವಿತ್ತು ,ಅಭಿಮಾನವಿತ್ತು “ಎಂತಹ ಕಷ್ಟಗಳು ಬಂದರೂ ನಿಭಾಯಿಸಿಕೊಂಡು ಹೋಗುವ,ಎಲ್ಲರ ಉದ್ಧಾರ ಮಾಡುವ ಕೈಗಳು ನಿನ್ನವು ನಾನು ನಿಶ್ಚಿತವಾಗಿ ಎಲ್ಲವನ್ನು ಬಿಟ್ಟು ಹೋಗುತ್ತಿದ್ದೇನೆ” ಅಂತ ಹೇಳಿದ್ದರು .ಹಾಗೆ ಮುಂದೆ ತಾಯಿಯವರು ಇಡೀ ಆಸ್ತಿಯ ಜವಾಬ್ದಾರಿಯನ್ನು ಹೊತ್ತು ಅದನ್ನು ಒಂದು ಇಂಚನ್ನು ಕೂಡ ಮಾರದೇ ಎಲ್ಲವನ್ನು ಉಳಿಸಿಕೊಂಡು ಬೆಳೆಸಿಕೊಂಡು ಬಂದರು.(ಮುಂದುವರೆಯುವುದು) ಸವಿತಾ ದೇಶಮುಖ
ಶರಣ ಸಂಗಾತಿ ಸಾವಿಲ್ಲದ ಶರಣರು ಶಿವಯೋಗಿನಿ ಸಜ್ಜಲ ಗುಡ್ಡದ ಶರಣಮ್ಮ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ 12ನೇ ಶತಮಾನದ ಮಹಾನ್ ಸಮಾಜ ಸುಧಾರಕ ಬಸವಣ್ಣನವರು ಸಾರಿದ ಬಸವ ತತ್ವವು ಮಾನವೀಯತೆ, ಸಮಾನತೆ ಮತ್ತು ಕಾಯಕ ನಿಷ್ಠೆಯ ಮೇಲೆ ನಿಂತಿದೆ. ಇದು ಕೇವಲ ಒಂದು ಧರ್ಮಕ್ಕೆ ಸೀಮಿತವಾಗದೆ, ಇಡೀ ಮನುಕುಲಕ್ಕೆ ಅನ್ವಯಿಸುವ ಜೀವನ ಮಾರ್ಗವಾಗಿದೆ. ಇಂತಹ ಅಪೂರ್ವವಾದ ಸಮಾನತೆಯ ಆಂದೋಲನವನ್ನು ಮುಂದಿನ ಜನಾಂಗಕ್ಕೆ ಒಯ್ದ ಕೆಲವೇ ಕೆಲವು ಶಿವಯೋಗ ಸಾಧಕರಲ್ಲಿ ಸಜ್ಜಲ ಗುಡ್ಡದ ಶರಣಮ್ಮ. ಸಜ್ಜಲಗುಡ್ಡದ ಶರಣಮ್ಮನವರು (ಕ್ರಿ.ಶ. 1878- 1981) ಉತ್ತರ ಕರ್ನಾಟಕದ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಸಜ್ಜಲಗುಡ್ಡದಲ್ಲಿ ನೆಲೆಸಿದ್ದ ಒಬ್ಬ ಶ್ರೇಷ್ಠ ಶಿವಶರಣೆ ಮತ್ತು ಮಹಿಳಾ ಸಂತರು. ಇವರನ್ನು ಭಕ್ತರು ಶ್ರದ್ಧಾಭಕ್ತಿಯಿಂದ “ಸಜ್ಜಲಶ್ರೀ ಶರಣಮ್ಮ ತಾಯಿ” ಎಂದು ಕರೆಯುತ್ತಾರೆ. *ಜೀವನದ ಹಿನ್ನೆಲೆ* ಜನ್ಮ: ಇವರು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಮುದೇನೂರು ಗ್ರಾಮದಲ್ಲಿ ಲಿಂಗಣ್ಣ ಮತ್ತು ಲಿಂಗಮ್ಮ ಹಾಲುಮತದ ದಂಪತಿಗಳ ಮಗಳಾಗಿ ಜನಿಸಿದರು. ಮೂಲ ಹೆಸರು: ಇವರ ಬಾಲ್ಯದ ಹೆಸರು ಯಮುನಮ್ಮ. ವೈರಾಗ್ಯ: ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಇವರು, ಬಡತನ ಮತ್ತು ಬರಗಾಲದ ಕಷ್ಟಗಳನ್ನು ಅನುಭವಿಸಿ ಲೌಕಿಕ ಜೀವನದ ಮೇಲೆ ವೈರಾಗ್ಯ ತಳೆದರು. ದೀಕ್ಷೆ: ಗುಡದೂರಿನ ದೊಡ್ಡಬಸವಾರ್ಯ ಶರಣರಿಂದ ಲಿಂಗದೀಕ್ಷೆ ಪಡೆದು, ಬಳ್ಳಾರಿಯ ಸಕ್ಕರಿ ಕರಡೆಪ್ಪನವರು ಸ್ಥಾಪಿಸಿದ ಶ್ರೀ ಗುರು ಬಸವ ಶಾಲೆಯಲ್ಲಿ ಬಸವ ತತ್ವದ ಶಿಕ್ಷಣವನ್ನು ಪಡೆದು ಮುಂದೆ ಸಜ್ಜಲಗುಡ್ಡದಲ್ಲಿ ನೆಲೆಸಿ ಕಠಿಣ ತಪಸ್ಸು ಮತ್ತು ಶಿವಯೋಗವನ್ನು ಆಚರಿಸಿದರು. ಸಮಾಜ ಸೇವೆ ಮತ್ತು ಆಧ್ಯಾತ್ಮ ಬಸವ ತತ್ವ: 12ನೇ ಶತಮಾನದ ಬಸವಾದಿ ಶರಣರ ತತ್ವಗಳಾದ ಕಾಯಕ ಮತ್ತು ದಾಸೋಹವನ್ನು ಪಾಲಿಸಿ ಜನರಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸಿದರು. ಸಮಾನತೆ: ಜಾತಿ, ಮತ, ಪಂಥಗಳ ಬೇಧವಿಲ್ಲದೆ ದೀನ-ದಲಿತರ ಕಲ್ಯಾಣಕ್ಕಾಗಿ ಶ್ರಮಿಸಿದರು. ಬಾಲ್ಯ ಮತ್ತು ಆಧ್ಯಾತ್ಮಿಕ ಪಯಣ ಬಾಲ್ಯದ ಕಷ್ಟಗಳು: 1878ರ ಸುಮಾರಿಗೆ ಜನಿಸಿದ ಯಮುನಮ್ಮನವರು (ಶರಣಮ್ಮ) ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡರು. ಕುಟುಂಬವು ತೀವ್ರ ಬಡತನ ಮತ್ತು ಬರಗಾಲವನ್ನು ಎದುರಿಸಿದಾಗ, ಅವರು ಬಳ್ಳಾರಿ ಜಿಲ್ಲೆಯ ಕಂಪ್ಲಿಗೆ ಕೆಲಸಕ್ಕಾಗಿ ವಲಸೆ ಹೋಗಬೇಕಾಯಿತು. ವಚನಗಳ ಪ್ರಭಾವ: ಇವರು ಮೂರು ವರ್ಷಗಳ ಕಾಲ ಅತ್ಯಂತ ನಿಷ್ಠೆಯಿಂದ ವಚನಗಳನ್ನು ಅಧ್ಯಯನ ಮಾಡಿದ್ದರು. ಸಮಗ್ರ ವಚನ ಸಂಪುಟವೇ ಅವರ ಮನದಲ್ಲಿತ್ತು ಮತ್ತು ಅವರ ಪ್ರತಿಯೊಂದು ಮಾತಿನಲ್ಲೂ ವಚನಗಳೇ ಇರುತ್ತಿದ್ದವು. ಗುರುಗಳು: ಗುಡದೂರು ಗ್ರಾಮದ ಶ್ರೀ ದೊಡ್ಡಬಸವಾರ್ಯ ಶರಣರು ಇವರ ಆಧ್ಯಾತ್ಮಿಕ ಗುರುಗಳು. ಅವರಿಂದ ಲಿಂಗದೀಕ್ಷೆ ಪಡೆದ ನಂತರ ಇವರು ಶಿವಯೋಗಿನಿಯಾದರು. ಸಮಾಜ ಸೇವೆ ಮತ್ತು ಶಿಕ್ಷಣಕ್ಕೆ ಕೊಡುಗೆ ಕೇವಲ ಆಧ್ಯಾತ್ಮಕ್ಕೆ ಸೀಮಿತವಾಗದೆ, ಶರಣಮ್ಮನವರು ಸಮಾಜದ ಏಳಿಗೆಗಾಗಿ ಶ್ರಮಿಸಿದರು: ಶಿಕ್ಷಣ ಸಂಸ್ಥೆಗಳು: ಮಠದ ಮೂಲಕ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗಾಗಿ ಅನೇಕ ಶಾಲೆ ಮತ್ತು ಕಾಲೇಜುಗಳನ್ನು ಸ್ಥಾಪಿಸಿದ್ದಾರೆ. ವಿಜಯಪುರ, ಬಾಗಲಕೋಟೆ ಜಿಲ್ಲೆಯ ಕಂಬಳಿಹಾಳ, ಮತ್ತು ಕಂದಗಲ್ ಗ್ರಾಮಗಳಲ್ಲಿ ಇವರ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳು ಇಂದಿಗೂ ಜ್ಞಾನದಾಸೋಹ ಮಾಡುತ್ತಿವೆ. ದಾಸೋಹ ಪರಂಪರೆ: ಸಜ್ಜಲಗುಡ್ಡದ ಮಠವು ಆಧ್ಯಾತ್ಮಿಕ ಚಿಂತನೆ ಮಾತ್ರವಲ್ಲದೆ, ಸಂಸ್ಕೃತ, ವಚನ ಪಾಠಗಳ ಉಚಿತ ಬೋಧನೆ ಮತ್ತು ಉಚಿತ ಅನ್ನದಾಸೋಹಕ್ಕೆ ಹೆಸರಾಗಿದೆ. ಅಧ್ಯಯನ ಪೀಠ: ಶರಣಮ್ಮ ತಾಯಿಯವರ ಹೆಸರಿನಲ್ಲಿ ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕೆಂಬ ಮನವಿಯನ್ನು ಶ್ರೀಮಠದ ಹಳೆಯ ವಿದ್ಯಾರ್ಥಿಗಳ ಒಕ್ಕೂಟವು ಸಲ್ಲಿಸಿದೆ. ಲಿಂಗೈಕ್ಯ: ಇವರು 102 ವರ್ಷಗಳ ಕಾಲ ಸಾರ್ಥಕ ಜೀವನ ನಡೆಸಿ, 1981ರ ಏಪ್ರಿಲ್ 24ರಂದು ಸಜ್ಜಲಗುಡ್ಡದಲ್ಲೇ ಲಿಂಗೈಕ್ಯರಾದರು. ಜಾತ್ರೆ: ಪ್ರತಿ ವರ್ಷ ಏಪ್ರಿಲ್ ತಿಂಗಳಿನಲ್ಲಿ ಶರಣಮ್ಮ ತಾಯಿಯವರ ದೊಡ್ಡ ಮಟ್ಟದ ಜಾತ್ರೆ ಮತ್ತು ರಥೋತ್ಸವ ಜರುಗುತ್ತದೆ. ಸಜ್ಜಲಗುಡ್ಡ ಮಠ: ಇವರು ಸ್ಥಾಪಿಸಿದ ಸಜ್ಜಲಗುಡ್ಡದ ಮಠವು ಇಂದಿಗೂ ಶಿಕ್ಷಣ, ಉಚಿತ ಅನ್ನದಾಸೋಹ ಮತ್ತು ಆಧ್ಯಾತ್ಮಿಕ ಚಿಂತನೆಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಆರಾಧನೆ ಮತ್ತು ಮಹಿಮೆ ಶರಣಮ್ಮನವರು ಅನೇಕ ಪವಾಡಗಳನ್ನು ಮಾಡಿದ್ದಾರೆಂಬ ನಂಬಿಕೆ ಭಕ್ತರಲ್ಲಿದೆ. ಇವರನ್ನು ಈ ಭಾಗದ ಆರಾಧ್ಯ ದೈವವೆಂದು ಪರಿಗಣಿಸಲಾಗುತ್ತದೆ. ನಡೆದಾಡುವ ದೈವಿ ಶಕ್ತಿ ಎಂದು ಜನರ ಭಾವನೆ. ಕರ್ಮಠಗಳನ್ನು ಕಳೆದು ಸ್ವಚ್ಛ ಸುಂದರ ಬಸವ ತತ್ವ ಪ್ರಸಾರ ಮಾಡಿದ ಅಧಿದೇವತೆ ಸಜ್ಜಲ ಗುಡ್ಡದ ಶರಣಮ್ಮ. ________________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
ಅಂಕಣ ಸಂಗಾತಿ ವೀಣಾ ವಾಣಿ ವೀಣಾ ಹೇಮಂತ್ ಗೌಡಪಾಟೀಲ್ ಸುಡುವ ಸೂರ್ಯನಿಗೊಂದು ಪತ್ರ ಅಪ್ಪ ಜಗತ್ಪಾಲಕ ಸೂರ್ಯದೇವನೇ,ನಿನಗೆ ಹೀಗೊಂದು ಪತ್ರ ಬರೆಯುವ ಪ್ರಮೇಯ ಬದುಕಿನಲ್ಲಿ ಬರುತ್ತದೆ ಎಂದು ಖಂಡಿತವಾಗಿಯೂ ಅಂದುಕೊಂಡಿರಲಿಲ್ಲ ಆದರೇನು ಮಾಡುವುದು ?ಇದೀಗ ನಿನಗೆ ಪತ್ರ ಬರೆಯಲೇಬೇಕಾದ, ಬರೆದು ಕ್ಷಮೆ ಕೇಳಿಕೊಳ್ಳಲೇಬೇಕಾದ ಕಾಲ ಕೂಡಿ ಬಂದಿದೆ.ನೀನು ನಮ್ಮನ್ನು ಕ್ಷಮಿಸುವೆ ಎಂಬ ಭರವಸೆ ನನಗಿಲ್ಲ. ಆದರೆ ನಮ್ಮ ಸ್ವಯಂಕೃತ ಅಪರಾಧದ ತಪ್ಪೊಪ್ಪಿಗೆಯನ್ನು ನಿನ್ನ ಮುಂದೆ ಹೇಳಿಕೊಂಡು ನನ್ನ ಮನದ ಭಾರವನ್ನು ಹಗುರವಾಗಿಸಿಕೊಳ್ಳುವ ಆಶಯ ನನ್ನದು.ನಮ್ಮ ಬದುಕನ್ನು ಬೆಳಗುವ ನಮ್ಮೆಲ್ಲ ದೈನಂದಿನ ಕೃತ್ಯಗಳಿಗೆ ಸಾಕ್ಷಿಯಾಗುವ ನಮಗೆ ಆಹಾರ ತಯಾರಿಸಿಕೊಳ್ಳಲು ಬೇಕಾಗುವ ಸಸ್ಯಗಳಿಗೆ ಸಂಜೀವಿನಿಯಾಗಿರುವ, ನಿನ್ನ ಅಸ್ತಿತ್ವವಿಲ್ಲದೆ ನಾವ್ಯಾರು ಇಲ್ಲ ಎಂಬ ಅರಿವನ್ನು ಹೊಂದಿದ್ದರೂ ಕೂಡ, ತಿಳಿದು ಕೂಡ ಅಜ್ಞರಂತೆ ವರ್ತಿಸುತ್ತಿರುವ ನಿನ್ನ ಮಕ್ಕಳ ತಪ್ಪು ಕ್ಷಮಿಸಲಾರದ ಮಹಾಪರಾಧ… ನಿಜ.ಕೇವಲ ನಾಲ್ಕೈದು ದಶಕಗಳ ಹಿಂದೆ ಉದ್ಯಮಗಳು ತೆವಳುತ್ತಿರುವ ಕಾಲದಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅವಶ್ಯಕತೆ ಇತ್ತು…. ಇದೀಗ ಸರ್ಕಾರದ ಕಟ್ಟುನಿಟ್ಟಿನ ನಿಯಮಾವಳಿಗಳ ಚಾಪೆಯ ಕೆಳಗೆ ನುಸುಳುವ ಕಲೆ ಜನರಿಗೆ ಗೊತ್ತಾಗಿದೆ. ಮತ್ತೆ ಕೆಲವರು ರಂಗೋಲಿಯ ಕೆಳಗೆ ನುಸುಳುವ ಚಾಣಾಕ್ಷತೆಯನ್ನು ಕೂಡ ಹೊಂದಿದ್ದಾರೆ….. ಎಲ್ಲೋ ಒಬ್ಬಿಬ್ಬರು ಹೀಗೆ ಮಾಡಿದ್ದರೆ ನೀನು ಕೂಡ ಹೋಗಲಿ ಬಿಡು ಎಂದು ಕ್ಷಮಿಸಿ ಬಿಡುತ್ತಿದ್ದೆ ಅಲ್ವೇ?ಆದರೆ ಉದ್ಯಮಗಳು ಉಗುಳುವ ಹೊಗೆಯನ್ನು ನಿನ್ನ ಅತಿ ನೇರಳೆ ಕಿರಣಗಳ ತಾಪವನ್ನು ತಡೆಯಲೆಂದು ಇರುವ ರಕ್ಷಾ ಕವಚ ಓಜೋನನ್ನು ಒಂದು ಇಡೀ ಆಸ್ಟ್ರೇಲಿಯಾ ಖಂಡದಷ್ಟು ಛಿದ್ರಗೊಳಿಸಿದ ಮೇಲೆ ನಿನಗೆ ಕೋಪ ಬರದಿದ್ದರೆ ಹೇಗೆ ?ಉಣ್ಣುವ ತಟ್ಟೆಯನ್ನು ಛೇದ ಮಾಡುವಂತಹ ವಿಸ್ಮೃತಿ ನಮಗೇಕೆ ಬಂತು ಎಂದು ನಿನಗೆ ಕೋಪ ಬಂದಿದ್ದರೆ ಖಂಡಿತವಾಗಿಯೂ ಅದು ನಿನ್ನ ತಪ್ಪಲ್ಲ.ಹಾಗೆಂದು ಎಲ್ಲ ತಪ್ಪನ್ನು ಉದ್ಯಮಗಳ ಮೇಲೆ, ಅವುಗಳು ಕಾರುವ ಕರಿ ಹೊಗೆಗಳ ಮೇಲೆ ಹಾಕಿ ನಾವು ಸಾಚಾ ಸಿದ್ದಪ್ಪಗಳು ಎಂದುಕೊಂಡರೆ ಅದು ನಮ್ಮ ಮೂರ್ಖತನವಾದೀತು. ನಿನ್ನ ಈ ಪ್ರಕೋಪಕ್ಕೆ ನಾವು ಮನುಷ್ಯರು ಕೂಡ ನಮ್ಮ ತಪ್ಪಿನ ಸಿಂಹಪಾಲನ್ನು ಸಲ್ಲಿಸಿದ್ದೇವೆ.ನಮ್ಮದೇ ಸಂತಾನವನ್ನು ಹೆಚ್ಚಿಸಿಕೊಳ್ಳುವ ನಮ್ಮದೇ ಬದುಕನ್ನು ಮತ್ತಷ್ಟು ಮಗದಷ್ಟು ಚೆನ್ನಾಗಿ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಕಾಡನ್ನು ಕಡಿದು ನಾಡಾಗಿಸಿದ್ದೇವೆ…. ಕಾಡಿನ ಪ್ರಾಣಿಗಳು ಅವು ಕೂಡ ನಿನ್ನ ಮಕ್ಕಳಲ್ಲವೇ ? ಅವುಗಳ ಮನೆಗೆ ಬೆಂಕಿ ಇಟ್ಟು ಅವರನ್ನು ನೆಲೆಗೇಡಿಯನ್ನಾಗಿಸಿ ನಾವು ಬೆಚ್ಚಗಿನ ಗೂಡಿನಲ್ಲಿ ಇರಲು ಸಾಧ್ಯವೇ ? ಧಗೆಯ ಒಡಲೇ ನಮ್ಮ ಬದುಕುಆಗುತ್ತದೆ ಎಂಬ ಅರಿವಿಲ್ಲದೆ ಅಭಿವೃದ್ಧಿಯ ಹೆಸರಿನಲ್ಲಿ, ಮೂಲ ಸೌಕರ್ಯಗಳನ್ನು ಹೆಚ್ಚಿಸುವ ನೆವದಲ್ಲಿ ಕಾಡನ್ನು ನಾಶ ಮಾಡಿರುವುದು, ಗಿಡ ಮರಗಳಿಗೆ ಕೊಡಲಿಯ ಪ್ರಹಾರ ಮಾಡಿ ಅವುಗಳನ್ನು ಧರಾಶಾಹಿಯಾಗಿಸಿರುವುದು ನಮ್ಮದೇ ಸ್ವಯಂಕೃತ ಅಪರಾಧವಲ್ಲವೇ ?ಒಳ್ಳೆಯ ಬೆಳೆ ಬೇಕು ಎಂಬ ಆಶಯ ತಪ್ಪಲ್ಲ ಆದರೆ ಕಿಸೀ ಬಿ ಕೀಮತ್ ಪರ್ ಎಂಬ ಹಿಂದಿಯ ಹೇಳಿಕೆಯಂತೆ ಖಂಡಿತವಾಗಿಯೂ ಅಲ್ಲ. ನಮ್ಮ ಹೆಚ್ಚಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಅದೆಷ್ಟೇ ಕೆಳಮಟ್ಟಕ್ಕೆ ಇಳಿಯಲು ಮನುಷ್ಯ ಸಿದ್ದನಾಗಿದ್ದಾನೆ. ಉಳಿವಿಗಾಗಿನ ಈ ಹೋರಾಟದಲ್ಲಿ ಕೇವಲ ತನ್ನ ಉಳಿವಿನ ಕುರಿತು ಮಾತ್ರ ಯೋಚಿಸುತ್ತಿರುವ ಆತ ಅತಿಯಾದ ದುರಾಸೆಯಿಂದ ಭೂಮಿ ತಾಯಿಯ ಒಡಲಿಗೆ ವಿಷ ಹಾಕುತ್ತಿದ್ದಾನೆ. ಏನನ್ನಾದರೂ ತೆರುವ, ಎಷ್ಟನ್ನಾದರೂ ತೆರುವ ಮೂಲಕ ನಾವು ಫಲವತ್ತಾದ ಭೂಮಿ ತಾಯಿಯ ಮಡಿಲಿಗೆ ಹಾಲಾಹಲದಂತಹ ರಾಸಾಯನಿಕಗಳನ್ನು ಬೆರೆಸಿದರೆ ಆಕೆಯಾದರೂ ಹೇಗೆ ಸುಮ್ಮನಿದ್ದಾಳು ? ಅಮೃತದಂತಹ ಬದುಕನ್ನು ನಮಗೆ ಕೊಡಮಾಡಿರುವ ಭೂಮಿತಾಯಿಯ ಮಡಿಲಿನಲ್ಲಿ ಗರಿಕೆ ಹುಲ್ಲು ಕೂಡ ಬೆಳೆಯದಂತೆ ಬಂಜರು ಮಾಡಿ ಇದೀಗ ಗೋಳಿಟ್ಟರೆ ಏನು ಪ್ರಯೋಜನ ?ಸಹಿಸಿ ಸಾಕಾದ ಆಕೆ ಕೂಡ ಧಗೆಯ ಒಡಲಾಗಿ ನಮಗೆ ಶಿಕ್ಷೆ ನೀಡುತ್ತಿದ್ದಾಳೆ…. ಇನ್ನು ಆಪೋಷನ ತೆಗೆದುಕೊಳ್ಳುವುದಷ್ಟೇ ಬಾಕಿ.ಇನ್ನು ಭೂಮಿ ತಾಯಿಯ ಒಡಲಿಗೆ ನಾವು ಹಾಕಿದ ವಿಷ, ಕಾರ್ಖಾನೆಗಳ ರಾಸಾಯನಿಕಗಳು ನಾವು ಕುಡಿಯುವ ಗಂಗೆಯನ್ನು ಕಲುಷಿತಗೊಳಿಸಿದೆ. ತನ್ನ ಒಡಲಲ್ಲಿರುವ ಆಮ್ಲಜನಕವನ್ನು, ಲವಣ ಮತ್ತು ಖನಿಜಗಳನ್ನು ಪೋಷಕಾಂಶಗಳ ರೂಪದಲ್ಲಿ ನಮಗೆ ನೀರಿನ ಮೂಲಕ ನೀಡುವ, ನಾವೆಲ್ಲರೂ ಗಂಗಾಮಾತೆ ಎಂದು ಪೂಜಿಸುವ ಜಲವನ್ನು ಕಲುಷಿತಗೊಳಿಸಿದ ಮಹಾಪರಾಧ ಕೂಡ ನಮ್ಮದೇ. ನಾವು ಹುಲು ಮಾನವರಂತೆಯೇ ಜಲಚರಗಳು ಕೂಡ ನಿನ್ನ ಮಕ್ಕಳು.ನಿನ್ನ ಒಡಲಿಗೆ ನಮ್ಮೆಲ್ಲ ಕಲ್ಮಶಗಳನ್ನು ಎಸೆಯುವ, ರಾಸಾಯನಿಕಗಳನ್ನು ಬೆರೆಸುವ, ನಿನ್ನೊಡಲನ್ನು ಮಲಿನಗೊಳಿಸುವ ನಿನ್ನಲ್ಲಿಯೇ ತಮ್ಮ ಬದುಕನ್ನು ಕಂಡುಕೊಂಡಿರುವ ನಿನ್ನ ಮಕ್ಕಳಾದ ಜಲಚರ ವಾಸಿಗಳಿಗೆ ಕೇಡು ಬಗೆಯುವ ನಮ್ಮ ಕುರಿತು ನಿನಗೆ ಪ್ರೀತಿಯಾದರೂ ಹೇಗೆ ಹುಟ್ಟೀತು ? ನಿನ್ನ ದ್ವೇಷಕ್ಕೂ ನಾವು ಅನರ್ಹರು ಎಂದು ಮಾತ್ರ ಹೇಳಬಲ್ಲೆ. ತಿಳಿಯದೆ ಮಾಡುವುದು ಮೂಢತನ ಎಂದಾದರೆ ತಿಳಿದು ಕೂಡ ಮಾಡುವ ನಮ್ಮ ಅಜ್ಞಾನಕ್ಕೆ ಬೆಲೆ ತೆರಬೇಕಾದವರು ನಾವೇ ಅಲ್ಲವೇ !ಈ ಹಿಂದೆ ಪ್ರತಿಯೊಬ್ಬರ ಮನೆಗಳಲ್ಲಿ ಹಿತ್ತಲಿರುತ್ತಿತ್ತು ಅಲ್ಲಿ ದಿನಬಳಕೆಯ ತರಕಾರಿಗಳ ಜೊತೆಗೆ ಹೂವು ಹಣ್ಣು ಗಳ ಗಿಡಮರಗಳ ಜೊತೆಗೆ ದೊಡ್ಡದಾದ ಹುಣಸೆ ಮರಗಳು ಕೂಡ ಇರುತ್ತಿದ್ದವು . ನಮ್ಮ ದೈನಂದಿನ ಅವಶ್ಯಕತೆಗಳನ್ನು ಪೂರೈಸಿ ಇತರರಿಗೆ ಕೊಡುವಷ್ಟು ಕೂಡ ವಿಶಾಲತೆ ನಮ್ಮದಾಗಿತ್ತು. ಆದರೆ ಆಧುನಿಕತೆಯ ಹೆಸರಿನಲ್ಲಿ ಅಲಂಕಾರಿಕ ಗಿಡಗಳನ್ನು ಮಾತ್ರ ನೆಟ್ಟು ನೀರು ದೊರೆಯುವುದಿಲ್ಲ ಎಂಬ ನೆಪ ವಡ್ಡಿ ಗಿಡ ಮರಗಳಿಗೆ ಕೊಡಲಿ ಹಾಕಿರುವ ನಮ್ಮ ಬುದ್ಧಿಗೇಡಿತನಕ್ಕೆ ನೀನಾದರೂ ಏನು ಮಾಡುತ್ತಿ ?ಆಗಲೂ ಕೂಡ ಬೇಸಿಗೆ ಇತ್ತು ಆದರೆ ದಿನದ ಕೆಲಸಗಳನ್ನು ಮಾಡಿ ಪೂರೈಸಿ ದಣಿದ ದೇಹ ಮನೆಯ ಹಿತ್ತಲಿನಲ್ಲಿ ಕಟ್ಟೆಯ ಮೇಲೆ ಮರದ ಕೆಳಗೆ ಬರಿ ನೆಲದ ಮೇಲೆ ಮಲಗಿದರು ಕೂಡ ಬೀಸುವ ಮರಗಳ ತಂಗಾಳಿ ನಮಗೆ ವಿಶ್ರಾಂತಿಯ ಜೊತೆಗೆ ನೆಮ್ಮದಿಯನ್ನು ಕೂಡ ನೀಡುತ್ತಿದ್ದವು.ಈಗ ಮನೆ ಮನೆಗಳಲ್ಲಿ ಫ್ಯಾನ್‌ಗಳು, ಏರ್ ಕೂಲರ್ ಗಳು ಎಸಿಗಳ ಭರಾಟೆ ಇದೆ, ನಿಜ! ಆದರೆ ಭೂಮಿ ತಾಯಿಯ ಮಡಿಲಲ್ಲಿ ಬೆಳೆದ ಮರಗಳು ಕೊಡುವ ನೆರಳು ಮತ್ತು ಗಾಳಿಯನ್ನು ನೀಡಲು ಯಾರಿಂದಲೂ ಸಾಧ್ಯವಿಲ್ಲ. ನಮಗೆ ಶುದ್ಧ ಆಮ್ಲಜನಕವನ್ನು, ನೆರಳನ್ನು ಫಲ ಪುಷ್ಪಗಳನ್ನು ನೀಡುವ ಅಂತಹ ಮರಗಳನ್ನು ಬೇರು ಬಿಟ್ಟು ಕಾಂಪೌಂಡ್ ನಾಶ ಮಾಡುತ್ತವೆ ಎಂಬ ಕಾರಣಕ್ಕಾಗಿ ಕಡಿದೊಗೆದಿರುವ ನಾವು ಮನೆಯ ಯಾವ ಮೂಲೆಯಲ್ಲಿ ಹೋದರೂ ನೆಮ್ಮದಿಯ ನೆಳಲು ಕಾಣದೆ ನಿಟ್ಟುಸಿರು ಬಿಡುವಂತಹ ಪರಿಸ್ಥಿತಿ ನಮ್ಮದಾಗಿದೆ.ಇನ್ನು ನಾವು ಬಳಸುವ ಎ.ಸಿ ಗಳು ವಾತಾವರಣದಲ್ಲಿ ಮೀಥೇನ್ ಅನಿಲವನ್ನು ಬಿಡುಗಡೆ ಮಾಡಿ ವಾಯು ಮಾಲಿನ್ಯವನ್ನು ಉಂಟು ಮಾಡುತ್ತವೆ. ಇದರ ಪ್ರಮಾಣ ಹೆಚ್ಚಿದಷ್ಟು ನಾವು ಮನುಷ್ಯರಿಗೆ ಅಪಾಯ ತಪ್ಪಿದ್ದಲ್ಲ.ಭೂಮಿಯನ್ನು ಮಾತ್ರವಲ್ಲ ಆಕಾಶವನ್ನು ಕೂಡ ನಮ್ಮ ಅತಿಯಾದ ದಾಹಕ್ಕೆ ಆಪೋಷಣೆ ತೆಗೆದುಕೊಂಡು ಅಲ್ಲೂ ಕೂಡ ವಾಯು ಮಾಲಿನ್ಯದ ಮೂಲಕ ಹಾಳು ಮಾಡಿರುವ ನಮ್ಮ ಮೌಡ್ಯತೆಯನ್ನು ಸಹಿಸುವುದು ನಿನಗೆ ಕೂಡ ಅಸಾಧ್ಯ ಅಲ್ಲವೇ ?ಹೀಗೆ ನೆಲ,ಜಲ, ವಾಯುವನ್ನು ಹಾಳು ಮಾಡಿರುವ ನಾವು ಗಿಡ ಮರಗಳನ್ನು ಕಡಿದೊಗೆದು ಪರಿಸರವನ್ನು ನಾಶ ಮಾಡಿದ್ದೇವೆ. ಪರಿಣಾಮವಾಗಿ ವಾತಾವರಣದ ತಾಪಮಾನ ಹೆಚ್ಚಾಗಿದೆ. ಸಹಸ್ರಾರು ವರ್ಷಗಳಿಂದ ಒಂದು ಸೆಂಟಿಮೀಟರ್ ಇನ್ನಷ್ಟು ಕರಗದ ಬೃಹದಾಕಾರದ ಹಿಮದ ನೀರ್ಗಲ್ಲುಗಳು ಇನ್ನಿಲ್ಲದಂತೆ ಕರಗಿ ಹರಿಯುತ್ತಿವೆ ಪರಿಣಾಮವಾಗಿ ವಿಪರೀತ ಬಿಸಿಲು ಚಳಿ ಮಳೆಗಳ ತೊಂದರೆಗಳಿಂದ ನಾವು ನಲುಗುತ್ತಿದ್ದೇವೆ.ನಮ್ಮ ಪೂರ್ವಜರು ನಮಗೆ ಸ್ವಚ್ಚ,ಶುದ್ಧವಾದ ಹಾಗೂ ಬದುಕಲು ಯೋಗ್ಯವಾದ ಪರಿಸರವನ್ನು ನೀಡಿದ್ದರು ಅದು ಅವರ ಕರ್ತವ್ಯವಾಗಿತ್ತು. ಈ ಭೂಮಿಯ ಪ್ರಜೆಗಳಾದ ನಾವುಗಳು ನಮ್ಮ ಮುಂದಿನ ಪೀಳಿಗೆಗೆ ಅಷ್ಟೇ ಬದುಕಲು ಯೋಗ್ಯವಾದ ವಾತಾವರಣವನ್ನು ಹೊಂದಿರುವ ಪರಿಸರವನ್ನು ಬಿಟ್ಟು ಕೊಡಬೇಕಾದ ಜವಾಬ್ದಾರಿ ಹೊತ್ತಿದ್ದು ಆ ನಿಟ್ಟಿನಲ್ಲಿ ಇನ್ನು ಮುಂದೆ ಯಾದರೂ ಕಾರ್ಯನಿರ್ವಹಿಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಈಗಾಗಲೇ ಆಗಿ ಹೋಗಿರುವ ಪ್ರಮಾದವನ್ನು ಸರಿಪಡಿಸಲು ಇಂದಿನಿಂದಲೇ ಕಾರ್ಯ ನಿರ್ವಹಿಸುತ್ತೇವೆ ಎಂಬ ಭರವಸೆಯನ್ನು ಭೂಮಿಯ ವಾಸಿಗಳಾದ ನಾವು ನಿನಗೆ ನೀಡುತ್ತೇವೆ. ಇನ್ನಾದರೂ ನಿನ್ನ ಕೋಪ ತಾಪವನ್ನು ಬದಿಗಿಟ್ಟು ಎಳೆಯ ಹದವಾದ ಬಿಸಿಲನ್ನು ಮಾತ್ರ ನಮಗೆ ನೀಡು. ನಿನ್ನ ಮಕ್ಕಳನ್ನು ಕಾಪಾಡು ಎಂದು ಕೇಳಿಕೊಳ್ಳುವನಿನ್ನ ಮಕ್ಕಳು ವೀಣಾ ಹೇಮಂತ್ ಗೌಡ ಪಾಟೀಲ್
ಧಾರಾವಾಹಿ ಸಂಗಾತಿ-24 ಅರ್ಜುನ ಉವಾಚ ವಿಶ್ವನಾಥ್ ಎನ್ ನೇರಳೆಕಟ್ಟೆ ಸುಧನ್ವ ಗೆದ್ದ…ಕೃಷ್ಹೃ ಹೃದಯವನು ಸುಧನ್ವ ಅಷ್ಟು ಬಲಯುತನಾದದ್ದು ಹೇಗೆ ಎನ್ನುವ ರಹಸ್ಯವನ್ನು ನನಗೆ ತಿಳಿಸಿದ ಶ್ರೀಕೃಷ್ಣ. ಸುಧನ್ವ ಏಕಪತ್ನೀವ್ರತಸ್ಥನಾಗಿದ್ದ. ತಂದೆಯ ಆಜ್ಞೆಯನ್ನು ಅವಗಣಿಸಿದವನಲ್ಲ. ಕೃಷ್ಣಪೂಜೆಗೆ ಉದಾಸೀನ ತೋರಿದವನಲ್ಲ. ಆತನ ಅಂತಃಸ್ಸತ್ವವೇ ಅವನಿಗೆ ಅಂತಹ ಶಕ್ತಿಯನ್ನು ಒದಗಿಸಿತ್ತು. ಇಂದ್ರ ಬ್ರಹ್ಮ ಶಿವಾದಿಗಳಿಗೂ ಯುದ್ಧದಲ್ಲಿ ಮಣಿವವನಲ್ಲ ಇವ ಎಂದ ಶ್ರೀಕೃಷ್ಣ. ಮೂರೂ ಲೋಕಗಳನ್ನು ಅಂಜಿಸುವ ಇವನ ಶೌರ್ಯವನ್ನು ಕಾಣುತ್ತಾ ಇರುವುದಷ್ಟೇ ಇನ್ನು ನಮ್ಮ ಕೆಲಸ ಎಂದ.ಆಗ ಸುಧನ್ವ ಕೃಷ್ಣನನ್ನು ದಿಟ್ಟತನದಿಂದ ಪ್ರಶ್ನಿಸಿದ. “ಅಂದು ಗೋವರ್ಧನ ಗಿರಿಯನ್ನೆತ್ತಿ ಗೋವುಗಳನ್ನು ಕಾಪಾಡಿದ ಹಾಗೆ ಇಂದು ಈ ಪಾರ್ಥನನ್ನು ರಕ್ಷಿಸುವ ತೆರದಲ್ಲಿ ಬಂದೆ. ನಾನೂ ನಿನ್ನ ಭಕ್ತನೇ. ನನ್ನ ಮೇಲೇಕೆ ನೀನು ಕೃಪೆದೋರದಿರುವೆ. ಇರಲಿ. ನಾನಂತೂ ಅನವರತ ನಿನ್ನ ಭಕ್ತನೇ. ಅದರಲ್ಲಿ ಸಂದೇಹವಿಲ್ಲ. ಈ ಯುದ್ಧದಲ್ಲಿ ನನ್ನ ಈ ದೇಹವನ್ನು ನಿನಗೊಪ್ಪಿಸದೆ ಬಿಡೆನು” ಅಂದ.ಸುಧನ್ವ ಎತ್ತಿದ ಆ ಪ್ರಶ್ನೆ ನನ್ನೊಳಗೆ ಯೋಚನೆಯನ್ನು ಮೂಡಿಸಿತು. ನಾನೂ ಕೃಷ್ಣನ ಭಕ್ತ. ಸುಧನ್ವನೂ ಹರಿಭಕ್ತ. ಹಾಗಿರುವಾಗ ಕೃಷ್ಣ ನನ್ನ ಪರವಾಗಿ ಮಾತ್ರವೇ ನಿಂತಿದ್ದಾನೇಕೆ?! ಸಂದರ್ಭಕ್ಕೆ ಹೊಂದುವ ರೀತಿಯಲ್ಲಿ ಕೃಷ್ಣವರ್ತನೆಯಿದೆ ಎನಿಸಿತು ನನಗೆ. ಈಗ ಕೃಷ್ಣ ನನ್ನ ಪರವಾಗಿರದೆ ಸುಧನ್ವನ ಪಕ್ಷ ವಹಿಸಿದರೆ ಯುದ್ಧದ ಗೆಲುವು ನನ್ನದಾಗುವುದಿಲ್ಲ. ಕುದುರೆ ಮುಂದಕ್ಕೆ ಚಲಿಸುವುದಿಲ್ಲ. ನಮ್ಮ ಅಶ್ವಮೇಧ ಯಾಗವದು ಸಂಪೂರ್ಣವಾಗುವುದಿಲ್ಲ. ಈ ಬಗೆಯ ದೂರಾಲೋಚನೆಯನ್ನು ಇರಿಸಿಕೊಂಡೇ ಆ ಕೃಷ್ಣದೇವ ನನಗೆ ನೆರವಾಗಿ ನಿಂತಿರಬೇಕು. ಔಚಿತ್ಯಪೂರ್ಣನಾಗಿದ್ದಾನೆ ಅಚ್ಯುತ ಎನಿಸಿತು ನನಗೆ ಆ ಕ್ಷಣದಲ್ಲಿ.ಆಗಲೇ ಸುಧನ್ವ ಬಿಟ್ಟ ಬಾಣ ನನ್ನ ರಥವನ್ನು ತಾಡಿಸಿತು. ಅದೆಂತಹ ಭೀಕರ ಹೊಡೆತ! ತಿರುಗಿ ತಿರುಗಿತು ರಥ. ಭಯದ ದನಿಯನ್ನೆಬ್ಬಿಸಿದವು ಕುದುರೆಗಳು. ನನಗೂ ಕೃಷ್ಣನಿಗೂ ಕಣ್ಣಿಗೆ ಕತ್ತಲೆ ಕವಿದಂತಾಯಿತು. ತಲೆ ತಿರುಗಿತು. ರಥದ ಚಕ್ರಗಳು ಕಳಚಿ ಬಿದ್ದ ಅನುಭವ. ಹಿಂದುಹಿಂದಕ್ಕೆ ಸರಿದುಹೋಯಿತು ನನ್ನ ರಥ.ನನ್ನ ಕೋಪವೀಗ ಮೇರೆಮೀರಿತು. ಇನ್ನಿವನ ಶೌರ್ಯವನ್ನು ಕೊನೆಗಾಣಿಸದಿದ್ದರೆ ನಮಗೆ ಉಳಿಗಾಲವಿಲ್ಲ ಎಂದು ತೋರಿತು. ಮೂರು ಬಾಣಗಳೊಳಗೆ ಅವನ ಪ್ರಾಣಹರಣ ಮಾಡುವ ಪ್ರತಿಜ್ಞೆಯನ್ನು ನೆನಪಿಸಿಕೊಂಡೆ. ಅತಿಶಕ್ತಿಯುತ ಬಾಣವನ್ನು ಬಿಲ್ಲಿಗೆ ಹೂಡಿದೆ. “ಸುಧನ್ವ ಮರಣವನು ನಿರ್ಣಯಿಸುವ ಬಾಣವಿದು” ಎಂದೆ ಅಸುರಾರಿಯಲ್ಲಿ. ಗೋವರ್ಧನ ಗಿರಿಯನ್ನೆತ್ತಿ ಗೋವುಗಳನ್ನು ಕಾಪಾಡಿ ಸಂಪಾದಿಸಿದ ಪುಣ್ಯವನ್ನು ಆ ಬಾಣಕ್ಕೆ ತುಂಬಿದ ಶ್ರೀಕೃಷ್ಣ. “ಈಗಲೇ ಅವನ ಶಿರವನ್ನು ಗುರಿಮಾಡಿ ಬಾಣ ಪ್ರಯೋಗಿಸು” ಎಂಬ ಸೂಚನೆ ಬಂತು ಕೃಷ್ಣನ ಕಡೆಯಿಂದ. ಬಾಣ ಬಿಟ್ಟೆ. ಅದೆಂತಹ ವೇಗದಲ್ಲಿ ಬಾಣ ಚಲಿಸುತ್ತಾ ಹೋಯಿತೋ ಅದೇ ವೇಗದಲ್ಲಿ ಅದು ತುಂಡಾಗಿ ಕೆಳಗೆ ಬಿತ್ತು. ಪ್ರತಿಬಾಣ ಪ್ರಯೋಗಿಸಿ ಗೆಲುವು ಪಡೆದಿದ್ದ ಸುಧನ್ವನ ಮುಖದಲ್ಲಿ ವೀರಭಾವದ ನಗುವಿತ್ತು.ಮೂರು ಬಾಣಗಳಲ್ಲಿ ಸುಧನ್ವನನ್ನು ಇನ್ನಿಲ್ಲವಾಗಿಸುತ್ತೇನೆ ಎಂದಿದ್ದವ ನಾನು. ಮೊದಲ ಬಾಣವದು ಇನ್ನಿಲ್ಲವಾಗಿತ್ತು. ಇನ್ನೆರಡು ಬಾಣಗಳಲ್ಲಿ ನಾನು ನನ್ನ ಪ್ರತಿಜ್ಞೆಯನ್ನು ಪೂರೈಸಬೇಕಿತ್ತು. ಅಮೋಘ ಶರವನ್ನು ತೆಗೆದೆ ಬತ್ತಳಿಕೆಯಿಂದ. ಹೆದೆಗೆ ಅದನ್ನು ಹೊಂದಿಸಿದೆ. ಆಗಲೇ ಶ್ರೀಕೃಷ್ಣ ಭೂಮಿಯನ್ನು ಕಾಯ್ದ ಪುಣ್ಯಫಲವನ್ನು ನನ್ನ ಆ ಶರದಲ್ಲಿ ತುಂಬಿದ. “ಕೃಷ್ಣ ಪರಮಾತ್ಮ, ನಿನ್ನ ಪುಣ್ಯವನ್ನು ಆ ಬಾಣದಲ್ಲಿ ತುಂಬಿರುವೆ. ಅದನ್ನು ಅರ್ಧಮಾರ್ಗದಲ್ಲಿಯೇ ಪತನಗೊಳಿಸದಿದ್ದರೆ ಪಾತಕಿಗೊದಗುವ ಹೀನಸ್ಥಿತಿ ನನಗೆ ಒದಗಲಿ” ಎಂದು ಪರಾಕ್ರಮದಿಂದ ಆರ್ಭಟಿಸಿದ ಸುಧನ್ವ. ಅವನ ಮಾತು ನಿಜವಾಯಿತು. ಅವನ ಸೇನೆಯಲ್ಲಿ ವಿಜಯದ ನಾದ ಮೊಳಗಿತು. ಗೆಲುವಿನ ಕೇಕೆ ಕೇಳಿಬಂತು.ನಿಷ್ಫಲಗೊಂಡ ಎರಡು ಬಾಣಗಳು ನನ್ನನ್ನು ಚುಚ್ಚತೊಡಗಿದವು. ಇನ್ನೊಂದೇ ಒಂದು ಬಾಣದಲ್ಲಿ ನಾನು ಸುಧನ್ವನ ಶಿರವನ್ನು ಕತ್ತರಿಸಬೇಕಿತ್ತು. ಕೃಷ್ಣ ಧೈರ್ಯ ತುಂಬಿದ. ‘ನನ್ನ ಶಕ್ತಿಯನ್ನೂ, ಯುದ್ಧ ಬದ್ಧತೆಯನ್ನೂ ನಿರ್ಧರಿಸುವ ಬಾಣವಿದು’ ಎಂದುಕೊಳ್ಳುತ್ತಲೇ ಬತ್ತಳಿಕೆಯಿಂದ ಶರವನ್ನು ತೆಗೆದೆ. ಈಗ ಶ್ರೀಕೃಷ್ಣ ಹಿಂದಿಗಿಂತಲೂ ಹೆಚ್ಚಿನ ಶಕ್ತಿಯನ್ನು ಆ ಬಾಣಕ್ಕೆ ತುಂಬುವ ಉಪಾಯ ಹೂಡಿದ. ಬ್ರಹ್ಮದೇವನನ್ನು ಆಹ್ವಾನಿಸಿ ಆ ಬಾಣದ ಒಂದು ತುದಿಯಲ್ಲಿ ಕೂರಿಸಿದ. ಇನ್ನೊಂದು ತುದಿಯಲ್ಲಿ ಶಿವ ಕುಳಿತುಕೊಳ್ಳುವಂತೆ ಮಾಡಿದ. ಬಾಣದ ಮಧ್ಯಭಾಗದಲ್ಲಿ ತಾನೇ ಕುಳಿತ ಶ್ರೀಕೃಷ್ಣ. ತ್ರಿಮೂರ್ತಿಗಳ ಅಸ್ತಿತ್ವದ ಸತ್ವವದು ದೊರಕಿತು ಆ ಬಾಣಕ್ಕೆ. ರಾಮಾವತಾರದಲ್ಲಿ ತಾನು ಸಂಪಾದಿಸಿದ ಪುಣ್ಯವನ್ನು ಆ ಬಾಣದಲ್ಲಿ ತುಂಬಿದ.ಕೃಷ್ಣನ ಪಾಂಚಜನ್ಯ ಮೊಳಗಿತು, ಕೋಟಿ ಕೋಟಿ ಸಿಡಿಲುಗಳು ಒಮ್ಮೆಯೇ ಸಿಡಿದಂತೆ. ಭೂಮಿಯೇ ಅಲ್ಲೋಲಕಲ್ಲೋಲವಾಯಿತು ಕೃಷ್ಣನೂದಿದ ರಣ ಶಂಖಧ್ವನಿಗೆ.ಆ ಕ್ಷಣವೇ ನನ್ನ ಕರ ಅರಳಿತು. ಶರ ಕೆರಳಿತು. ಶತ್ರುವಿನ ಶಿರವನ್ನು ಗುರಿಯಾಗಿರಿಸಿಕೊಂಡು ಉರಿಉರಿಯಿಂದ ಹೊರಟಿತದೋ ಘನಶರ!ಬಾಣದ ಭೀಕರತೆಯನ್ನು ಕಂಡು ಅಂಜಿದರು, ಅಳುಕಿದರು ಸುಧನ್ವನ ಸಕಲ ಸೈನಿಕರು. ಹಂಸಧ್ವಜಸುತನ ಮುಂಡವದು ರುಂಡದಿಂದ ಬೇರ್ಪಟ್ಟಿತು. ಕತ್ತರಿಸಲ್ಪಟ್ಟ ಶಿರ ಆಕಾಶಮಾರ್ಗದಲ್ಲಿ ಜಿಗಿದು, ಪರಪೀಡೆಯದು ತನ್ನದಲ್ಲ ಎಂಬ ಭಾವದಲ್ಲಿ ಬರುವ ಕಲೆಗಳಿಂದ ಕೂಡಿದ ಚಂದ್ರನಂತೆ ಬಂದುಬಿದ್ದಿತು ಕೃಷ್ಣನ ಪಾದಪದ್ಮಗಳಲ್ಲಿ. ಸಾವನ್ನಪ್ಪಿದ ಆ ಕ್ಷಣದಲ್ಲಿಯೂ ಸುಧನ್ವ ಶಿರವದು ಹರಿನಾಮಸ್ಮರಣೆಯನ್ನು ತೊರೆದಿರಲಿಲ್ಲ.ಸುಧನ್ವನ ತಲೆಯನ್ನು ಹಾಗೆಯೇ ಒಮ್ಮೆ ಎತ್ತಿಕೊಂಡ ಕೃಷ್ಣ ತನ್ನ ಮೂಗಿನ ಬಳಿಗೆ ಒಯ್ದು ಒಮ್ಮೆ ಆಘ್ರಾಣಿಸಿದ. “ನನ್ನ ಹೃದಯವನ್ನು ಗೆದ್ದ ಬಲ್ಮೆಗಾರ ನೀನು” ಎಂಬ ಗುಟ್ಟನ್ನು ಸುಧನ್ವನ ಕಿವಿಯಲ್ಲಿ ಕೃಷ್ಣ ಹೇಳಿದಂತೆ ತೋರಿತೆನಗೆ ಆ ದೃಶ್ಯ. ‘ಈ ವೀರ ಶಿರವದು ಸಂದಿತೆನಗೆ ಇಂದು’ ಎಂಬ ಕೃಷ್ಣಭಾವವೂ ಆ ನಡೆಯಲ್ಲಿ ಇದ್ದಂತೆ ತೋರಿತು.ಮಗನ ಸಾವನ್ನು ಸಹಿಸದಾದ ಹಂಸಧ್ವಜ ಬಗೆಬಗೆಯಲ್ಲಿ ಪ್ರಲಾಪಿಸಿದ. ಹೀಗಿದ್ದಾಗಲೇ ಸುಧನ್ವ ಸಹೋದರ ಎನಿಸಿಕೊಂಡ ಸುರಥ ತಮ್ಮವನ ಸಾವಿಗೆ ಸೇಡನ್ನು ತೀರಿಸಿಕೊಳ್ಳದಿರಲಾರೆ ಎಂಬ ಛಲವನ್ನು ಹೊತ್ತುನಿಂತಿದ್ದ. ಅವನೊಡನೆ ಹೋರಾಡದೆ ನಮ್ಮ ಗೆಲುವು ಪೂರ್ಣಗೊಳ್ಳದು ಎಂಬ ವಿಷಯ ನನಗೆ ಸ್ಪಷ್ಟವಾಯಿತು. ಡಾ. ವಿಶ್ವನಾಥ ಎನ್ ನೇರಳಕಟ್ಟೆ
ಧಾರಾವಾಹಿ ಸಂಗಾತಿ-117 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಸುಮತಿಯ ಪರಿಸ್ಥಿತಿಯನ್ನು ಮಗಳಿಗೆ ಹೇಳಿದ ವೈದ್ಯರು ಫಿಸೀಷಿಯನ್ ಹಾಗೆ ಹೇಳಿದಾಗ ಬಹಳ ಮುಖ್ಯವಾದ ವಿಷಯವಿರಬೇಕೆಂದು ಮಗಳಿಗೆ ತಿಳಿಯಿತು… ಅದೇನೇ ಇದ್ದರೂ ನನಗೆ ಹೇಳಿ ಸರ್…. ನನ್ನ ಅಮ್ಮನಿಗೆ ಏನಾಗಿದೆ? ಎಂದು ಕೇಳಿದಾಗ, ವೈದ್ಯರು ಆ ಹುಡುಗಿಯ ಮುಖವನ್ನೇ ತದೇಕಚಿತ್ತವಾಗಿ ನೋಡುತ್ತಾ… ನಿನ್ನ ವಯಸ್ಸೆಷ್ಟು ಮಗು?… ನೀನು ಏನು ಓದುತ್ತಿರುವೆ? ಎಂದು ಕೇಳಿದರು.ವೈದ್ಯರ ಪ್ರಶ್ನೆಗೆ… ನನಗೀಗ ಹದಿನೆಂಟು ವರ್ಷ ವಯಸ್ಸು…. ನಾನು ಬಿ.ಎ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವೆ…. ಎಂದು ಹೇಳಿದಳು. ಆ ಹುಡುಗಿಯ ಮಾತನ್ನು ಆಲಿಸಿದ ವೈದ್ಯರು…. “ಮಗೂ ನಿನ್ನನ್ನು ನೋಡಿದರೆ ತಿಳುವಳಿಕೆ ಇರುವ ಹಾಗೂ ವಯಸ್ಸಿಗಿಂತ ಹೆಚ್ಚು ಪ್ರಬುದ್ಧತೆ ಹೊಂದಿರುವ ಹುಡುಗಿಯ ಹಾಗೆ ತೋರುತ್ತೀಯ… ನಾನು ಹೇಳುವ ವಿಷಯವು ಬಹಳ ಗಂಭೀರವಾದದ್ದು…. ಅದನ್ನು ನೀನು ಹೇಗೆ ತೆಗೆದುಕೊಳ್ಳುತ್ತೀಯ ಎನ್ನುವುದು ನನಗೆ ತಿಳಿಯದು…. ಆದರೂ ಹೇಳಲೇಬೇಕಾದ ಅನಿವಾರ್ಯತೆ ಇದೆ…. ನೀನು ಹೇಳಿದೆ ಮನೆಯಲ್ಲಿ ದೊಡ್ಡವರು ಯಾರು ಇಲ್ಲ ಎಂದು…. ಸುಮತಿಯ ಯೋಗ ಕ್ಷೇಮವನ್ನು ನೀನು ಮತ್ತು ನಿನ್ನ ತಂಗಿ ಈಗ ನೋಡಿಕೊಳ್ಳುತ್ತಿರುವಿರಿ ಎನ್ನುವುದು ನನಗೆ ಅರ್ಥವಾಯಿತು…. ನೋಡು ಮಗು… ನಿನ್ನ ತಾಯಿಯ ಸ್ಥಿತಿ ಸ್ವಲ್ಪ ಹೆಚ್ಚೇ ಗಂಭೀರವಾಗಿದೆ….. ಆಕೆಯ ಹೃದಯ, ಶ್ವಾಸಕೋಶ, ಯಕೃತ್ತು, ಮೂತ್ರಕೋಶ, ಹೇಳಬೇಕೆಂದರೆ ನಿನ್ನ ತಾಯಿಯ ಶರೀರದ ಅಂತರಿಕ ಅಂಗಗಳಲ್ಲಿ ಊತ ಕಾಣಿಸಿಕೊಂಡಿದೆ…. ಬಹುತೇಕ ಎಲ್ಲಾ ಆಂತರಿಕ ಅಂಗಗಳು ವೈಫಲ್ಯವಾಗಿವೆ…. ತೀವ್ರವಾದ ಸಕ್ಕರೆ ಕಾಯಿಲೆಯ ಪರಿಣಾಮ ಹಾಗೂ ರಕ್ತದ ಒತ್ತಡಕ್ಕೆ ಚಿಕಿತ್ಸೆ ಪಡೆಯದೆ ಇರುವ ಕಾರಣದಿಂದ ನಿನ್ನ ತಾಯಿಯು ಈ ಸ್ಥಿತಿಗೆ ತಲುಪಿದ್ದಾರೆ…. ಇನ್ನು ನಾವು ಯಾವುದೇ ಚಿಕಿತ್ಸೆ ಕೊಟ್ಟರೂ ಅದು ಫಲಕಾರಿಯಾಗದು…. ಇಲ್ಲಿ ಈ ತಾಲ್ಲೂಕು ಆರೋಗ್ಯ ಕೇಂದ್ರದಲ್ಲಿ ಹೆಚ್ಚಿನ ಚಿಕಿತ್ಸೆ ದೊರಕಲಾರದು…. ಸ್ವಲ್ಪ ದಿನ ನಾವು ನಿನ್ನ ತಾಯಿಯ ಆರೈಕೆಯನ್ನು ಈ ಆಸ್ಪತ್ರೆಯಲ್ಲಿ ಮಾಡಬಹುದು…. ಹೆಚ್ಚಿನ ಚಿಕಿತ್ಸೆ ಬೇಕೆಂದರೆ ನೀನು ನಿನ್ನ ತಾಯಿಯನ್ನು ಬೆಂಗಳೂರಿನಲ್ಲಿರುವ ಕಿಡ್ನಿ ಫೌಂಡೇಶನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವಾರಕ್ಕೊಮ್ಮೆ ಡಯಾಲಿಸಿಸ್ ಮಾಡಿಸಿದರೆ ಇನ್ನೂ ಸ್ವಲ್ಪ ಕಾಲ ನಿನ್ನ ತಾಯಿ ಬದುಕುಳಿಯಬಹುದು…. ಈಕೆ ಇದೇ ಸ್ಥಿತಿಯಲ್ಲಿದ್ದರೆ ಇನ್ನಾರು ತಿಂಗಳಷ್ಟೇ ಜೀವಂತವಾಗಿ ಬದುಕಿರಲು ಸಾಧ್ಯ…. ಆದರೆ ಮೊದಲಿನಂತೆ ಲವಲವಿಕೆಯಿಂದ ಎದ್ದು ಓಡಾಡಲು ಅವರಿಂದ ಸಾಧ್ಯವಿಲ್ಲ…. ಹಾಸಿಗೆಯಲ್ಲಿಯೇ ದಿನ ಕಳೆಯಬೇಕಾದ ಪರಿಸ್ಥಿತಿ…. ಅವರಿಂದ ಶಿಕ್ಷಕ ವೃತ್ತಿಯನ್ನು ಮುಂದುವರಿಸಲು ಸಾಧ್ಯವಿಲ್ಲ…. ನೀನು ಮತ್ತು ನಿನ್ನ ತಂಗಿ ಸುಮತಿಯ ಆರೈಕೆಯನ್ನು ಮಾಡಬೇಕಾಗುತ್ತದೆ…. ದಿನೇ ದಿನೇ ಅವರ ಆರೋಗ್ಯ ಸ್ಥಿತಿಯು ಗಂಭೀರವಾಗುತ್ತಲೇ ಹೋಗುತ್ತದೆ…. ಯಾವುದೇ ಆಹಾರ ಪಥ್ಯದಿಂದಲೂ ಸುಮತಿಯ ಆರೋಗ್ಯ ಸುಧಾರಿಸುವುದಿಲ್ಲ…. ಆದರೂ ಅವರ ಆರೋಗ್ಯ ಸ್ಥಿತಿ ಇನ್ನೂ ಹದಗೆಡದಂತೆ ನೋಡಿಕೊಳ್ಳಲು ಪಥ್ಯದ ಆಹಾರವನ್ನು ಕೊಡುವುದು ಕೂಡ ಅನಿವಾರ್ಯ…. ನಾನು ಕೊಡುವ ವೈದ್ಯಕೀಯ ಚಿಕಿತ್ಸೆಯಿಂದ ಅವರ ಆರೋಗ್ಯ ಮೊದಲಿನಂತಾಗಲು ಸಾಧ್ಯವಿಲ್ಲ…. ಆದರೆ ತಾತ್ಕಾಲಿಕವಾಗಿ ಉಪಶಮನದ ಚಿಕಿತ್ಸೆಯನ್ನಷ್ಟೇ ನಾವು ಕೊಡಬಹುದು…. ನಿನ್ನ ತಾಯಿಯ ವಯಸ್ಸು ಕೂಡ ಬಹಳ ಚಿಕ್ಕದು…. ಕೇವಲ 54 ವರ್ಷವಷ್ಟೇ! …. ಜೀವನದಲ್ಲಿ ಬಹಳಷ್ಟು ನೋವುಗಳನ್ನು ಉಂಡವಳು, ಏಳುಬೀಳುಗಳನ್ನು ಕಂಡವಳು ನಿನ್ನ ಅಮ್ಮ…. ಬಹಳ ಮಾನಸಿಕ ಸ್ಥೈರ್ಯ ಉಳ್ಳವಳು ಕೂಡಾ…. ಆದರೆ ಈ ಸಕ್ಕರೆ ಕಾಯಿಲೆ ಅವಳನ್ನು ಬಹಳಷ್ಟು ಹೈರಾಣಾಗಿ ಮಾಡಿದ್ದು ಸುಳ್ಳಲ್ಲ…. ಇನ್ನೊಂದು ಮುಖ್ಯವಾದ ವಿಷಯವನ್ನು ನಿನಗೆ ಹೇಳಬೇಕಿದೆ ಮಗು…. ವಯಸ್ಸಿನಲ್ಲಿ ಬಹಳ ಚಿಕ್ಕವಳಾದ ನಿನಗೆ ಈ ವಿಷಯವನ್ನು ಹೇಗೆ ಹೇಳಬೇಕೆಂಬುದು ನನಗೆ ತಿಳಿಯುತ್ತಿಲ್ಲ…. ಆದರೆ ನಾನು ಹೇಳಲೇಬೇಕಾಗಿದೆ”…. ಎಂದು ಅವಳ ಮುಖವನ್ನೇ ಸೂಕ್ಷ್ಮವಾಗಿ ಗಮನಿಸುತ್ತಾ ವೈದ್ಯರು ನುಡಿದರು. ವೈದ್ಯರು ಹೇಳಿದ ಎಲ್ಲಾ ಸಂಗತಿಗಳನ್ನು ಕೇಳಿ ಈಗಾಗಲೇ ಆಘಾತಕ್ಕೆ ಒಳಗಾಗಿದ್ದ ಹುಡುಗಿ ಇನ್ನೂ ಏನು ಹೇಳುವರೋ ಎನ್ನುವ ಭಯ ಹಾಗೂ ಆತಂಕದಿಂದ ವೈದ್ಯರಡೆಗೆ ನೋಡಿದಳು. ಅವಳ ಆ ನೋಟವನ್ನು ಕಂಡು ವೈದ್ಯರ ಮನಸ್ಸು ಮರುಗಿತು. ಆದರೆ ಹೇಳದೆ ಬೇರೆ ಮಾರ್ಗವಿರಲಿಲ್ಲ….. “ಮಗೂ ನಿನ್ನ ಅಮ್ಮ ಮರಣ ಹೊಂದಿದ ಬಳಿಕ ಆಕೆಯ ಶವ ಶರೀರವನ್ನು ಹೆಚ್ಚು ಹೊತ್ತು ಇಟ್ಟುಕೊಳ್ಳುವಂತೆ ಇಲ್ಲ…. ಆಂತರಿಕ ಅಂಗಗಳ ವೈಫಲ್ಯದಿಂದಾಗಿ ಸುಮತಿಯ ಶರೀರದಲ್ಲಿ ದಿನೇ ದಿನೇ ನೀರು ತುಂಬಿಕೊಂಡು ಊತಕ್ಕೆ ಒಳಗಾಗುತ್ತದೆ…. ಕೆಲವೊಮ್ಮೆ ಆಕೆ ಬದುಕಿರುವಾಗಲೇ ಶರೀರದ ಕೆಲವು ಭಾಗಗಳು ಒಡೆದು ನೀರು ಜಿನುಗುವ ಸಾಧ್ಯತೆ ಇರುತ್ತದೆ…. ಅದನ್ನು ತಡೆಯಲು ಕೆಲವು ಮಾತ್ರೆಗಳನ್ನು ನಾನು ಬರೆದುಕೊಡುತ್ತೇನೆ…. ಆದರೆ ಮರಣ ಹೊಂದಿದ ಕೆಲವು ಗಂಟೆಗಳ ಬಳಿಕ ಶರೀರವು ಪೂರ್ತಿ ಊದಿಕೊಂಡು ಅಲ್ಲಲ್ಲಿ ಒಡೆಯುವ ಸಾಧ್ಯತೆಗಳು ಇರುತ್ತದೆ…. ಸೂಕ್ಷ್ಮಾಣುಗಳು ದೇಹದ ಒಳಗೆ ಸೇರಿಕೊಂಡು ದೇಹವು ಬೇಗ ಕೊಳೆಯಲು ಶುರುವಾಗುತ್ತದೆ…. ದುರ್ವಾಸನೆ ಬರುತ್ತದೆ… ಹಾಗಾಗಿ ಸಾಧ್ಯವಾದಷ್ಟು ಬೇಗ ಶವಸಂಸ್ಕಾರ ಮಾಡಬೇಕಾಗುತ್ತದೆ…. ಎಂದರು. ವೈದ್ಯರ ಮಾತನ್ನು ಕೇಳುತ್ತಾ ಕುಳಿತ ಹುಡುಗಿಯು ಕಣ್ಣಾಲಿಗಳು ತುಂಬಿ ಕೊಳಗಳಾದವು. ಗಂಟಲು ಬಿಗಿಯಿತು. ಕೇವಲ ಬಿಕ್ಕುಗಳಲ್ಲದೆ ಅವಳ ಬಾಯಿಂದ ಒಂದು ಪದವೂ ಆಚೆ ಬರಲಿಲ್ಲ. ಅಳುವನ್ನು ತಡೆದುಕೊಳ್ಳುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಳು. ಅವಳನ್ನು ಕಂಡ ವೈದ್ಯರ ಮನಸ್ಸು ಕರಗಿತು. ಕುಳಿತಲ್ಲಿಂದ ಎದ್ದು ಬಂದು ಅವಳ ತಲೆ ನೇವರಿಸುತ್ತಾ…. ನಿನಗೆ ಯಾವ ರೀತಿಯಲ್ಲಿ ಹೇಗೆ ಸಮಾಧಾನ ಮಾಡಬೇಕು ಎಂದು ನನಗೆ ತಿಳಿಯುತ್ತಿಲ್ಲ ಮಗುವೇ…. ವಿಧಿ ಎನ್ನುವುದು ಬಹಳ ಕ್ರೂರ…. ಇಂತಹಾ ಚಿಕ್ಕ ವಯಸ್ಸಿಗೇ ಅದೆಷ್ಟು ಘೋರವಾದ ಸಂಗತಿಗಳನ್ನು ನೀನು ಕೇಳಬೇಕಾಗಿ ಬಂತು…. ಸಮಾಧಾನ ಮಾಡಿಕೋ…. ನೀನು ಈ ಸ್ಥಿತಿಯಲ್ಲಿ ಸುಮತಿಯ ಬಳಿಗೆ ಹೋದರೆ ಅವಳು ಅಧೀರಳಾಗುವಳು…. ಧೈರ್ಯ ತಂದುಕೋ…. ಈ ಜಟಿಲ ಪರಿಸ್ಥಿತಿಯನ್ನು ಹೇಗಿದ್ದರೂ ನೀನು ಎದುರಿಸಲೇ ಬೇಕಾಗಿದೆ…. ಏನು ಹೇಳಬೇಕೆಂದು ನನಗೆ ತಿಳಿಯುತ್ತಿಲ್ಲ ಮಗುವೇ”…. ಎಂದು ಆ ಹುಡುಗಿಯ ತಲೆ ಸವರುತ್ತಾ ಸಮಾಧಾನ ಮಾಡಿ…. “ಆದಷ್ಟು ಬೇಗ ನಿನ್ನ ತಾಯಿಯ ಸಂಬಂಧಿಕರಿಗೆ ವಿಷಯ ತಿಳಿಸು….. ಬರುವವರು ಯಾರಾದರೂ ಇದ್ದರೆ ಬಂದು ನೋಡಿಕೊಂಡು ಹೋಗಲಿ…. ಈಗ ಕೆಲವು ಔಷಧಿಗಳನ್ನು ಬರೆದುಕೊಡುತ್ತೇನೆ ಅದನ್ನು ಆದಷ್ಟು ಬೇಗ ತಂದು ವಾರ್ಡಿನ ನರ್ಸಿಗೆ ಕೊಡು”…ಎಂದು ಹೇಳಿ, ಸುಮತಿಗೆ ಕೊಡಬೇಕಾದ ಒಂದಿಷ್ಟು ಔಷಧಿಗಳ ಹೆಸರುಗಳನ್ನು ಚೀಟಿಯಲ್ಲಿ ಬರೆದು ಅವಳ ಕೈಗಿತ್ತರು. ಆ ಹುಡುಗಿ ಯಾಂತ್ರಿಕವಾಗಿ ಕುಳಿತಲ್ಲಿಂದ ಎದ್ದು ವೈದ್ಯರು ಕೊಟ್ಟ ಚೀಟಿಯನ್ನು ಪಡೆದುಕೊಂಡು ಅವರಿಗೆ ನಮಸ್ಕರಿಸಿ, ಕೊಠಡಿಯಿಂದ ಆಚೆ ಬಂದಳು. ತನ್ನ ಸುತ್ತಲಿರುವ ಪ್ರತಿಯೊಂದು ವಸ್ತುಗಳು ಅಪರಿಚಿತವಾಗಿ ಅವಳಿಗೆ ಕಂಡಿತು. ಸ್ವಲ್ಪ ಹೊತ್ತು ಅಲ್ಲಿಯೇ ಇದ್ದ ಬೆಂಚಿನ ಮೇಲೆ ಕುಳಿತುಕೊಂಡು ತನ್ನನ್ನು ತಾನು ಸಮಾಧಾನ ಪಡಿಸಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡಿದಳು.
ಧಾರಾವಾಹಿ ಸಂಗಾತಿ-17 ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ಸಲ್ಲಿಸಿದ ಮಹಾನ್ ಚೇತನ ಸವಿತಾ ದೇಶಮುಖ ರಜಾಕರರ ಹಾವಳಿಯಿಂದ ಮನೆಬಿಟ್ಟು ಓಡಿಬಂದ ನಿರಾಶ್ರಿತರ ದುಃಖವ ನೋಡಿ.,.., ತಾಯಿಯವರ ಹೃದಯದಲ್ಲಿ ಮೂಡಿದ ಕರುಣೆ.. ತಾಯಿತನದ ಕರೆಯಾಗಿ ಮೂಡಿದ ತ್ರಿಪದಿ…. *ಬಡ ಮಕ್ಕಳಿಗೆ ಹಾಲು|ತಾಯಿಗೆ ಸೀರೆಒಡಲ ತುಂಬ ಅನ್ನ ನೀಡುತ-ರೋಗಗಳಓಡಿಸ ಬೇಕಯ್ಯಾ ಸಿದ್ದೇಶ|| ಈ ಕವನದಲ್ಲಿ ಹಾಲಿಲ್ಲದೆ ಅಳುವ ಮಕ್ಕಳನ್ನು ನೋಡಿ ಅವರ ಮನಸು ಕರಗುತ್ತದೆ.ಬಟ್ಟೆಯಿಲ್ಲದೆ ನಾಚಿಕೆಪಡುವ ತಾಯಂದಿರ ನೋವ ಕಂಡು ಕಳವಳ ಗೊಂಡರು.ಹಸಿವಿನಿಂದ ಕಂಗೆಟ್ಟ ಜನರಿಗೆ ಅನ್ನ ಕೊಡಬೇಕೆಂಬ ಹಂಬಲ……“ಸೀರೆ ಒಡಲ ತುಂಬ” …. ತಾಯಂದಿರ ಗೌರವ, ಮಾನವನ್ನು ಕಾಪಾಡುವ ಕಾಳಜಿ.“ಅನ್ನ ನೀಡುತ” “ರೋಗಗಳ ಓಡಿಸಬೇಕಯ್ಯಾ” ಆರೋಗ್ಯ ಮತ್ತು ಸುರಕ್ಷತೆ ಕೂಡ ಅಗತ್ಯವೆಂಬ ಅರಿವು.ಕೊನೆಯಲ್ಲಿ “ಸಿದ್ದೇಶ” ಎಂದು ಕರೆಯುವ ತಾಯಿಯವರು, ತಮ್ಮ ಕರ್ತವ್ಯವನ್ನು ದೈವಿಕ ಶಕ್ತಿಗೆ ಅರ್ಪಿಸುತ್ತಿದ್ದಾರೆ. ಇದು ಅವರ ಭಕ್ತಿ, ವಿಶ್ವಾಸ ಮತ್ತು ಮಾನವೀಯತೆಯ ಸಂಕಲನ. ಈ ಕವನದ ಹಿನ್ನಲೆಯಲ್ಲಿ ಇರುವ ದೃಶ್ಯ ತುಂಬ ಹೃದಯವಿದ್ರಾವಕ….!!!ರಜಾಕರರ ಹಿಂಸೆಯಿಂದ ಓಡಿಬಂದ ಜನರು… ಭಯ, ಹಸಿವು, ನಿರಾಶ್ರಿತ ಜೀವನಕ್ಕೆ ತಾಯಿಯವರಂತಹ ಮಹಾನ್ ಹೃದಯಿ ಆಶ್ರಯ, ಆಹಾರ ಮತ್ತು ಆಶೆಯನ್ನು ನೀಡಿದರು. *ಸಿದ್ದನ ಛತ್ತರಕ್ಕ ಬೆಂದು ಬಂದ ಮಕ್ಕಳಎದ್ದು ಕಂಣ್ಣೀರ ಒರೆಸುವ ,ಭಾಗ್ಯವಸಿದ್ದ ನನಗೆ ನೀಡಿ ದುಡಿಸಿದಿ* ತಾಯಿಯವರಲಿದ್ದ ದಯೆ, ಕರುಣೆ ಮತ್ತು ಸೇವಾಭಾವ ತುಂಬ ಸ್ಪಷ್ಟವಾಗಿ ಕಾಣಿಸುತ್ತದೆ.ನಿಜಾಮನ ದಬ್ಬಾಳಿಕೆಯಿಂದ ಸಂಕಷ್ಟಕ್ಕೊಳಗಾದ ನಿರಾಶ್ರಿತರು ತಮ್ಮ ಊರುಗಳನ್ನು ಬಿಟ್ಟು, ಕಣ್ಣೀರನ್ನು ಹೊತ್ತುಕೊಂಡು ಸೊಲ್ಲಾಪುರಕ್ಕೆ ಬಂದಾಗ, ಅವರ ಪರಿಸ್ಥಿತಿ ತುಂಬ ದಯನೀಯವಾಗಿತ್ತು. ಮನೆ ಇಲ್ಲ, ಊರು ಇಲ್ಲ, ಬದುಕಿನ ಭರವಸೆ ಇಲ್ಲ….!! “ಬೆಂದು ಬಂದ ಮಕ್ಕಳ” ಎನ್ನುವ ಪದ ಬಹಳ ಗಂಭೀರ. ಇದು ಅವರ ನೋವನ್ನು ತಾಯಿಯವರು ಎಷ್ಟು ಆಳವಾಗಿ ಅನುಭವಿಸಿದ್ದಾರೆ ಎಂಬುದನ್ನು ತೋರಿಸುತ್ತದೆ. ತಾಯಿಗೆ ಮಕ್ಕಳಂತೆ ಅವರು…..“ಎದ್ದು ಕಣ್ಣೀರ ಒರೆಸುವ ಭಾಗ್ಯ” — ಇಲ್ಲಿ ತಾಯಿಯವರು ಸೇವೆಯನ್ನು ಕರ್ತವ್ಯವಾಗಿ ಮಾತ್ರ ನೋಡುತ್ತಿಲ್ಲ. ಅದನ್ನು “ಭಾಗ್ಯ” ಎಂದುಕೊಂಡಿದ್ದಾರೆ. “ಸಿದ್ದ ನನಗೆ ನೀಡಿ ದುಡಿಸಿದಿ” ದೇವರು ನನಗೆ ಈ ಕೆಲಸ ಕೊಟ್ಟಿದ್ದಾನೆ, ಈ ಜನರ ಸೇವೆ ಮಾಡುವ ಅವಕಾಶ ನೀಡಿದ್ದಾನೆ ಎಂದು ತಾಯಿಯವರು ಕೃತಜ್ಞತೆಯಿಂದ ಹೇಳುತ್ತಾರ. ತಾಯಿಯವರಲ್ಲಿ ಇರುವ ಮಾನವೀಯತೆ ಮತ್ತು ದೈವಭಕ್ತಿ ತೊರುವದು. ಅವರ ಸೇವೆಯನ್ನು ತಮ್ಮ ಕರ್ತವ್ಯ ತಮ್ಮ ಧರ್ಮದಂತೆ ಸ್ವೀಕರಿಸಿದ್ದು ಇಲ್ಲಿ ಗೋಚರಿಸುತ್ತದೆ. ಆಗಿನ ಕಾಲದಲ್ಲಿಶ್ರೀ ಚಂಡರಕಿ (ಬೆನಕೊಪ್ಪ) ಉರ್ದು ಭಾಷೆಯ ಕವಿಯೊಬ್ಬನು ವೀರಗಾಸೆ ಕುಣಿತದಲ್ಲಿ ಪ್ರಸಿದ್ಧರಾದವರು. ಸೊಲ್ಲಾಪುರಕ್ಕೆ ಬಂದ ನಿರಾಶ್ರಿತರಿಗೆ ಆಶ್ರಿತರಾಗಿ ನಿಂತ ತಾಯಿಯವರ ಬಗ್ಗೆ ಉರ್ದುನಲ್ಲಿ ಕವಿತೆ ಬರ್ತಾನೆ ಅದನ್ನು ಕನ್ನಡಕ್ಕೆ ತರ್ಜುಮೆ ಮಾಡಿದವರು ಡಾ. ಶಂಕರ. ಮೂಗಿ(ನನ್ನ ತಂದೆ)*ತಾಯಿ ನಿನಗೆ ಸಲಾಮು ನಿನಗೆ ಸಲಾಮು * ಅಟ್ಟಿ ಜಡಿಸಿದ ಕಾಸೀಮ ಗಜನಿಕಟ್ಟಿಕೊಂಡು ರಜಾಕಾರರ ದಂಡುಓಡಿ ಬಂದೆವು ನಾವಂದುತೋಳ ಕಂಡ ಕುರಿಯ ಹಿಂಡು ಉಟ್ಟಿದ ಸೀರೆ ತೊಟ್ಟಿದ್ದವಲ್ಲಬೆನ್ನು ಬಿರಿವ ಬಿಸಿಲಿನಲ್ಲಿಸೊನ್ನಲಿಗೆ ಭೂಮಿಗೆ ಬಂದುನಿಂದೆವು ಸಿದ್ದನ ಛತ್ರದಲ್ಲಿ….., ಅಂತ ತಾಯಿಯವರ ಬಗ್ಗೆ ಬರಿತಾನೆ…… ಸೊಲ್ಲಾಪುರ ರೈಲ್ವೆ ನಿಲ್ದಾಣಕ್ಕೆ ಒಲಸಿ ಬಂದ ಜನರ ಜಾತಿಭೇದ ಲೆಕ್ಕಿಸದೆ ಜಯದೇವಿ ತಾಯಿಯವರು ವಸತಿ ವ್ಯವಸ್ಥೆ ,ಆಹಾರ ಸೌಲಭ್ಯ ,ಮೂಲ ಸೌಕರ್ಯಗಳ ವ್ಯವಸ್ಥೆಯನ್ನು ಸಿದ್ಧ ಮಾಡಿದರು. ಇದರಿಂದ ಸ್ಥಳೀಯ ಸಂಘ-ಸಂಸ್ಥೆಗಳು ಅದರಲ್ಲೂ ಮಹಿಳಾ ಜ್ಞಾನ ಮಂದಿರ ,ಶ್ರಾವಿಕಾಶ್ರಮ, ಸರಸ್ವತಿ ಸದನಗಳ ಕಾರ್ಯಕರ್ತರು ಸೇರಿ ನಿರಾಶ್ರಿತರಿಗೆ ಊಟದ ಪಟ್ಟಣಗಳನ್ನು, ನೀರು, ಹಾಲು,. ನಿತ್ಯ ಉಪಯೋಗವಾಗುವ ವಸ್ತುಗಳನ್ನು ವಿತರಿಸಲಾರಂಭಿಸಿದರು .ಇಡೀ ಸೊಲ್ಲಾಪುರದ ಜನತೆ ಅವರ ಸಹಾಯಕ್ಕೆ ನಿಂತರು.ಇಲ್ಲಿ ವಾರದ ಬಾಬಾ ಸಾಹೇಬರು, ಕಾಡಾದಿ ನಾಗಪ್ಪನವರು ,ಜಯದೇವಿ ತಾಯಿಯವರು ನಿರಾಶ್ರಿತರಿಗೆ ಆಶ್ರಯ ಕೊಟ್ಟರು. ಹಾಗೂ ಭಾಲ್ಕಿ ಪಟ್ಟ ದೇವರನ್ನು ಕಂಡು ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು. ನಿರಾಶ್ರಿತ ಮಕ್ಕಳ ಜೊತೆ ಎಲ್ಲರನ್ನೂ ನೋಡಿಕೊಳ್ಳುವಂತೆ ಭರವಸೆ ಕೊಟ್ಟು ವಸತಿ ವ್ಯವಸ್ಥೆಯನ್ನು ಮಾಡಿದರು. *ಹೊಲದಲ್ಲಿ ಮನೆ ಕಟ್ಟಿಕೊಟ್ಟೀರಿಕೊಯ್ದಿರಿ ನಿಂತ ಫಸಲುಆ ವರುಷ ನಿಮಗಾಗಲಿಲ್ಲಬೆಳೆಯಲ್ಲಿ ಏನು ಅಸಲು ಕೂಸು ಕಂಡಿರಲಿಲ್ಲ ನೆತ್ತಿಗೆಣ್ಣೆಹೊಟ್ಟೆಗಿರಲಿಲ್ಲ ಹಾಲು ತೊಟ್ಟುಹೊದಿಕೆ ಹಾಸಿ, ಹಾಸು ಇರಲಿಲ್ಲತಂದು ಒಗಿಸಿದಿರಿ ಚಾದರದ ಕಟ್ಟು* ತಾಯಿಯವರು ತಮ್ಮ ನಲವತ್ತು ಎಕರೆ ಭೂಮಿಯಲ್ಲಿ ಬೆಳೆದು ನಿಂತ ಬೆಳೆಯನ್ನು ತೆಗೆಸಿ…ಸೆಡ್ ಹಾಕಿ ನಿರಾಶ್ರಿತರಿಗೆ ಇರಲು ಹೊಸ ವೆವ್ಯಸ್ತೆಯನ್ನು ಮಾಡಿದರು. ತಮ್ಮ ಮನೆಯಾದ ಜೈನಿಕೇತನದಿಂದಲೇ ನಿರಾಶ್ರಿತ ಜನರಿಗೆ ಬಟ್ಟೆಯನ್ನು ದಾನ ಮಾಡುತ್ತಿದ್ದರು ಇಷ್ಟೇ ಅಲ್ಲದೆ ಜಯದೇವಿ ತಾಯಿಯವರು ಶಿಬಿರಕ್ಕೆ ಆಗಾಗ ಭೇಟಿ ಕೊಟ್ಟು ಅವರ ಸಮಸ್ಯೆಗಳನ್ನು ಕೇಳುತ್ತಿದ್ದರು … ಬಡವರು ದಲಿತರು ನಿರಾಶ್ರಿತರು ಅದು ಯಾವುದೇ ಮತ ಕುಲಕ್ಕೆ ಸಂಬಂಧಿಸಿದ್ದರು ಎಲ್ಲರಿಗೂ ತಾಯಿ ಮಕ್ಕಳನ್ನು ನೋಡುವಂತೆ ನೋಡಿಕೊಂಡರು. *ಹಡೆದ ನಾರಿಯರ ಕರೆದುತಂದು ಮಾಡಿದಿರಿ ಆರೈಕೆತವರಿಗೆ ಕಡಿಮೆ ಅಲ್ಲದಂತೆಪಡೆದೆವು ಅಮ್ಮ ನಿನ್ನ ಹರಿಕೆ * ನಿರಾಶ್ರಿತ್ರಿರಗೆ ಆಶ್ರಯ ಕೊಡುವದು ಅಂಥ ಸುಲಭದ ಕೆಲಸವೇನು ಆಗಿರಲಿಲ್ಲ ಅದರಲ್ಲಿ ಬಾಣಂತಿಯರು ಗರ್ಭಿಣಿಯರಂಥ ಸ್ತ್ರೀಯರು ಕೂಡ ಇದ್ದರು ಅವರೆಲ್ಲರಿಗೂ ಕರೆದು ಬಾಣಂತನವನ್ನು ಮಾಡಿಸಿ ನವಜಾತ ಶಿಶುಗಳ ಆರೈಕೆ ಮಾಡಿಸಿದರು. ಗರ್ಭಿಣಿಯರಿಗೆ ವೈದ್ಯಕೀಯ ವ್ಯವಸ್ಥೆಯನ್ನು ಒದಗಿಸಿದರು.ವಿವಿಧ ಸಂಸ್ಥಾನಗಳ ವಿಲೀನಿಕರಣ ಸಂದರ್ಭದಲ್ಲಿ ದೇಶದ ಏಕೀಕರಣಕ್ಕಾಗಿ ಶಕ್ತಿಯಾಗಿ ನಿಂತ ನಾಯಕ ಸರ್ದಾರ್ ವಲ್ಲಭಾಯಿ ಪಟೇಲರು.ಸ್ಥಿತಿ ಹಿಡಿತದಿಂದ ತಪ್ಪುತ್ತಿರುವುದು ಕಂಡಾಗ, ಪಟೇಲರು ತಕ್ಷಣವೇ ಶೀಘ್ರ ಹಾಗೂ ದೃಢ ಕ್ರಮ ಕೈಗೊಂಡರು. ಅವರ ದೃಷ್ಟಿಯಲ್ಲಿ ದೇಶದ ಏಕತೆ ಮತ್ತು ಭದ್ರತೆ ಅತ್ಯಂತ ಮುಖ್ಯವಾಗಿತ್ತು.ಶೀಘ್ರ ಕಾರ್ಯಾಚರಣೆಯಲಿ(ಕ್ವಕ ಆಕ್ಷನ್)ಪಟೇಲರ ದೃಢ ನಿಲುವು ತೆಗೆದುಕೊಂಡರು.ಈ ಸಂದರ್ಭದಲ್ಲಿ ಪಟೇಲರು ಮಾತುಕತೆ ಜೊತೆಗೆ ಅಗತ್ಯವಾದರೆ ಶಕ್ತಿಯನ್ನೂ ಬಳಸಬೇಕು ಎಂಬ ನಿಲುವನ್ನು ತಾಳಿದರು.ಹೈದರಾಬಾದ್ ಸಂಸ್ಥಾನದಲ್ಲಿ ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ, ಅವರು “ಪೊಲೀಸ್ ಆಕ್ಷನ್” ಸೈನಿಕ ಕ್ರಮವನ್ನು ಜಾರಿಗೊಳಿಸಿದರು. ಇದನ್ನು *ಆಪರೇಷನ್ ಪೋಲೋ*ಎಂದು ಕರೆಯಲಾಗುತ್ತದೆ. ಈ ಕಾರ್ಯಾಚರಣೆಯ ಮೂಲಕ ಕೇವಲ ಐದು ದಿನಗಳಲ್ಲಿ ಹೈದರಾಬಾದ್ ಸಂಸ್ಥಾನವನ್ನು ಭಾರತದ ಭಾಗವನ್ನಾಗಿ ಮಾಡಲಾಯಿತು.ಪಟೇಲರ ನಾಯಕತ್ವದ ವೈಶಿಷ್ಟ್ಯದೃಢ ನಿರ್ಧಾರ ಶಕ್ತಿ,ತ್ವರಿತ ಕಾರ್ಯಾಚರಣೆ,ದೇಶದ ಏಕತೆಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧತೆಯಲಿ ಇದ್ದರು ಪಟೇಲರು….. ಈ ಶೀಘ್ರ ಮತ್ತು ದೃಢ ಕ್ರಮಗಳ ಫಲವಾಗಿ, ಭಾರತ ಒಂದು ಏಕೀಕೃತ ರಾಷ್ಟ್ರವಾಗಿ ರೂಪುಗೊಂಡಿತು. *” ದೇಶದ ಏಕತೆಯ ಕಗ್ಗತ್ತಲಲ್ಲಿ ಬೆಳಕಾಗಿ ಕಾಣಿಸಿಕೊಂಡವರು ಸರ್ದಾರ್ ವಲ್ಲಭಾಯಿ ಪಟೇಲರು…..“ಭಾರತದ ಕಬ್ಬಿಣ ಮನುಷ್ಯನು” ಎಂದು ಜಯದೇವಿ ತಾಯಿಯವರು ಬಹಳ ಹೆಮ್ಮೆಯಿಂದ ಎಲ್ಲ ಭಾಷಣಗಳಲ್ಲಿ ಹೇಳಿಕೊಳ್ಳುತ್ತಿದ್ದರು. ಕೊನೆಗೊಮ್ಮೆ… ಅನುಭವಿಸಿದ ನೋವು, ನಿರಾಶೆ, ಅಲೆಮಾರಿ ಜೀವನದ ನಂತರ, ನಿರಾಶ್ರಿತರು ಮತ್ತೆ ತಮ್ಮ ಆಶ್ರಯದ ನೆಲೆಗೆ ಹಿಂದಿರುಗುವ ಕ್ಷಣ ಬಂದಾಗ, ಅದು ಅವರ ಬದುಕಿನ ಪುನರ್ಜನ್ಮದಂತಿತ್ತು. ಆ ಸಂತಸದ ದಿನ ಬಂದು ಒದಗಿದ್ದು ೩೦-೯-೪೮ ರಂದು. ನಿರಾಶ್ರಿತರು ತಮ್ಮ ಆಶ್ರಿತ ಸ್ಥಾನಕ್ಕೆ ಹೊರಟು ನಿಂತರು….. ಸ್ವಸ್ಥಾನಕ್ಕೆ ಹಿಂದುತ್ತಿರುವಾಗ ಅವರಲ್ಲಿ ಇದ್ದ ಆನಂದ ಉತ್ಸಾಹ ಹೇಳುತೀರದಾಗಿತ್ತು ….. ಅವರಿಗೆ ನಿಜವಾದ ಸ್ವಾತಂತ್ರ ಈಗ ಬಂದಾಗಿತ್ತು ..,!!!.ಎಲ್ಲರೂ ತಾಯಿಯವರಿಗೆ ತುಂಬು ಹೃದಯದ ಧನ್ಯವಾದಗಳು ತಿಳಿಸ್ತಾ ಹಾಡಿ ಹರಿಸಿ ಹೊಗಳಿ ಅಲ್ಲಿಂದ ತೆರಳಿದರು. ತಮ್ಮ ಮನೆಗಳ ಬಾಗಿಲುಗಳನ್ನು ಮತ್ತೆ ತೆರೆಯುವ ತವಕ …ಕಣ್ಣಲ್ಲಿ ಆನಂದದ ಕಣ್ಣೀರು ತುಂಬಿಕೊಂಡವು…. ಆಸರೆ ಕೊಟ್ಟ ನೆಲವನ್ನು ಬಿಟ್ಟು ಹೋಗುವಾಗ. ..ಆ ಮಣ್ಣನ್ನು ಸ್ಪರ್ಶಿಸಿದಾಗ ಅವರ ಹೃದಯ ತುಂಬ ಒಂದು ಶಾಂತಿಯ ಅಲೆ ಹರಡಿತು.ಭೂಮಿಗೆ ನಮಿಸಿದರು.ಮಕ್ಕಳು ಸಂತೋಷದಿಂದ ಓಡಾಡುತ್ತಿದ್ದರು, .ಪ್ರತಿ ಹೆಜ್ಜೆ ಪ್ರತಿ ಉಸಿರು ಒಂದು ಕಥೆ ಹೇಳುವಂತೆ ಇತ್ತು…..ಆ ಕ್ಷಣದಲ್ಲಿ ಅವರು ತಮ್ಮ ಕಷ್ಟಕಾಲದಲ್ಲಿ ತಾಯಿಯಂತೆ ನೆರವಾದ ಆ ಮಹಾನ್ ವ್ಯಕ್ತಿಯ ಜಯದೇವಿ ತಾಯಿಯವರನ್ನು ನೆನೆಸಿಕೊಂಡರು“ತಾಯಿ… ನಮ್ಮ ಜೀವ ಉಳಿಸಿದವಳು ನೀವು… ನಾವು ಕಳೆದುಕೊಂಡ ವಿಶ್ವಾಸವನ್ನು ಮತ್ತೆ ನಮ್ಮೊಳಗೆ ತುಂಬಿದವಳು ನೀವು… ನಮ್ಮ ನೆರಳಿಲ್ಲದ ಬದುಕಿಗೆ ಆಶ್ರಯವಾದವಳು ನೀವು… ಇಂದು ನಾವು ಮತ್ತೆ ನಮ್ಮ ನೆಲಕ್ಕಹಿಂದಿರುಗುತ್ತಿದ್ದೇವೆಆದರೆ ಈ ಸಂತೋಷದ ಪ್ರತಿಯೊಂದು ಹನಿ ನಿಮ್ಮ ಆಶೀರ್ವಾದವೇ…ನಾವು ನಿಮ್ಮ ಋಣವನ್ನು ಯಾವತ್ತೂ ತೀರಿಸಲಾರೆವು… ನಮ್ಮ ಹೃದಯದ ತುಂಬು ಕೃತಜ್ಞತೆಗಳನ್ನು ನಿಮಗೆ ಅರ್ಪಿಸುತ್ತೇವೆ ಎನ್ನುತ ಹಾಡಿ ಹರಸಿದರು……. *ಹೇಗೆ ತೀರಿಸಬೇಕು ತಾಯಿನಿನ್ನ ಋಣವ ಒಟ್ಟುನೆನೆವೆವು ಹಡೆದ ಮಕ್ಕಳಿಗೆ*ನಿನ್ನ ಹೆಸರು ಇಟ್ಟು,*….!!! ಜಯಭೇರಿ ಕೇಳಿ ಕುಣಿದೆವುಆಯಿತು ರಜಾಕರರ ಹೋಮಮಕ್ಕಳು ಮರಿ ಹೋಗಿ ಬರುವೆವುತಾಯಿ ನಿನಗೆ ಸಲಾಂ.. ನಿನಗೆ ಸಲಾಮ* (ಚಂಡರಕಿ ಉರ್ದು ಕವಿ) ಅವರ ಮುಖದಲ್ಲಿ ಕಂಡ ಆ ಸಂತಸ ಅವರ ಹೃದಯದಲ್ಲಿ ಮೂಡಿದ ಆ ಶಾಂತಿ—ಅದು ತಾಯಿಯ ಸೇವೆಗೆ ದೊರಕಿದ ಅತ್ಯಂತ ಮಹತ್ತರ ಗೌರವ.ಈ ದೃಶ್ಯ… ನೋವಿನಿಂದ ಆರಂಭವಾಗಿ, ಕೃತಜ್ಞತೆಯಲ್ಲಿ ಮುಗಿಯುವ ಒಂದು ಬದುಕಿನ ಪಯಣ.ಮುಂದುವರಿಯುವುದು ಸವಿತಾ ದೇಶಮುಖ
ಅಂಕಣ ಸಂಗಾತಿ ಮನದ ಮಾತುಗಳು ಜ್ಯೋತಿ ಡಿ ಬೊಮ್ಮಾ ತಮ್ಮ ತಾನರಿಯದವರು ನಿಮ್ಮನ್ನೆತ್ತ ಬಲ್ಲರಯ್ಯ…. ನಾಳಿಗಿ ಬಸೋಜಂತಿ ಅದರೀ ಮನಿ ತೊಳಿಬೇಕು , ಅಂತ ಬಾಜು ಮನಿ ಅಕ್ಕೋರು ಅಂದಾಗ ನಮ್ಮ ಜಗಜ್ಯೋತಿ ಬಸವಣ್ಣನೂ ಒಬ್ಬ ದೇವರಾಗಿ ಕುಂತ ಅಂತನಸ್ತು.ಅವನೆಲ್ಲಿ ದೇವರಾದ , ನಾವು ದೇವ್ರು ಮಾಡಿಬಿಟ್ಟೆವು.ಅವನಿಗೊಂದು ಗುಡಿ ಕಟ್ಟಿ ಅದರೊಳಗ ಕೂಡ್ಸಿ ಕುಂಕುಮ ಅರಶಿಣದಿಂದ ಪೂಜಾ ಮಾಡಿ ಹೋಳಿಗಿ ನೌದಿ ತೋರಿಸಿ ಹಬ್ಬ ಮುಗಸತೀವಿ. ಬ್ಯಾಸಗಿದಾಗ ಬರೊ ಈ ಬಸೊಜಂತಿ ನಾವು ಸಣ್ಣವರಿದ್ದಾಗ ಹೋಳಗಿ ಮಾನಕಾಯಿ ರಸ ನೆನಪಿಸತಿತ್ತು.ಅವತ್ತು ಎಲ್ಲರ ಮನ್ಯಾಗ ಹೂರಣದ ಹೋಳಗಿ ಮಾನಕಾಯಿ ಸಿಕರಣಿ. ಬಸವಜಯಂತಿ ಅಂದ್ರ ಇದರ ಹೊರತಾಗಿ ಮತ್ತಾವದೂ ತಿಳಿದಿರಲಿಲ್ಲ.ವಚನ ಸಾಹಿತ್ಯ ಓದಿ ತಿಳಿದ ಮ್ಯಾಲ ಗೊತ್ತಾಗಿದ್ದು ಬಸವಣ್ಣ ನಮ್ಮಂಗ ಒಬ್ಬ ಮನುಷ್ಯ, ಆದ್ರಾ ಅವನ ವಿಚಾರಗಳಿಂದ ಅವನೊಬ್ಬ ಅಸಾಮಾನ್ಯ ಮಾನವನೆನೆಸಿಕೊಂಡ.ಅವನಂತೆ ಅವನ ಜೊತೆಗೆ ಎಳನೂರರ ಮ್ಯಾಲ ಶರಣರು ಇದ್ದರು , ಎಲ್ಲರೂ ಮನುಷ್ಯ ರೆ. ಆದ್ರ ಈಗ ಅವ್ರೆಲ್ಲರಿಗೂ ನಮ್ಮ ಸಮಾಜ ದೇವ್ರು ಮಾಡಿ ಕೂಡಿಸಿ ಬಿಟ್ಟಾರ.ಒಂದೊಂದು ಕಾಯಕಕ್ಕ ಒಂದೊಂದು ಜಾತಿ ಹೆಸರು ಕೊಟ್ಟು ಆಯಾ ಕಾಯಕದ ಒಬ್ಬೊಬ್ಬ ಶರಣರನ್ನ ತಮ್ಮ ಜಾತಿಯ ರಾಯಭಾರಿ ಮಾಡಿಕೊಂಡು ವರ್ಷಕ್ಕೊಮ್ಮೆ ಜಯಂತಿ ಮಾಡ್ತಾರ. ಜಯಂತಿ ಆಚರಣೆ ಮಾಡೋದು ತಪ್ಪಂತ ಹೇಳಲ್ಲ.ಅವರ ಜೀವನ ಚರಿತ್ರೆ , ಅವರ ಸಾಧನೆ , ಅವರು ಸಮಾಜಕ್ಕೆ ಕೊಟ್ಟ ಮಾರ್ಗದರ್ಶನ , ಇವೆಲ್ಲ ಮುಂದಿನ ಪಿಳಿಗಿಗಿ ನೆನಪಿರಬೇಕಾದ್ರ ಮಾಹಾ ನಾಯಕರ ಹುಟ್ಟು ಸಾವಿನ ಕುರಿತು ಪ್ರತಿಯೊಬ್ಬರಿಗೂ ತಿಳದಿರಬೇಕು , ಮತ್ತೊಬ್ಬರಿಗೆ ತಿಳಿಸಿ ಹೇಳಬೇಕು. ಇಂತಹ ಜಯಂತಿಗಳ ಆಚರಣೆಯಿಂದ ಮುಂದಿನ ಪೀಳಿಗೆ ಗಳಿಗೆ ನಾವು ಅವರು ಸಮಾಜದ ಉದ್ದಾರಕ್ಕಾಗಿ ಎನೇನು ಮಾಡಿದರು ಅನ್ನೊದು ತಿಳಿಸಿ ಹೆಳತಿಬೇಕು. ಆದ್ರ ಈಗೀನ ಮಹಾನಾಯಕರ ಜಯಂತಿ ಗಳೆಲ್ಲ ಆಯಾ ಜನಾಂಗಗಳ ಜನಬಲ ತೋರಿಸಿಕೊಳ್ಳಕ್ಕೆ ಸೀಮಿತ ಆಗತಿದ್ದಾವ.ಮಡಿವಾಳ ಮಾಚೀದೇವನ ಜಯಂತಿ ಕ್ಕಿಂತ ಅಂಬಿಗರ ಚೌಡಯ್ಯ ನ ಜಯಂತಿ ದೊಡ್ಡ ದಾಗಿ ಮಾಡಬೇಕು.ಬಸವಣ್ಣನ ಜಯಂತಿಗಿಂತ ಅಂಬೇಡ್ಕರ್ ಜಯಂತಿ ಭಾರಿ ಮಾಬೇಕು.ಅವ್ರು ಅಷ್ಟೇ ಜನ ಇದ್ರು.ನಾವು ಅವರಿಗಿಂತ ಹೆಚ್ಚು ಜನ ಸೇರಬೇಕು.ಅವರು ಹಾಕಿದ್ದ ಟೆಂಟ್ ಸಣ್ಣದಿತ್ತು.ನಾವು ಹಾಕೋ ಟೆಂಟ್ ನೋಡಿ ಜನ ದಂಗಾಗಬೇಕು. ಇದಕ್ಕೆಲ್ಲ ರೊಕ್ಕ ..! ಚಂದಾ ಎತ್ತಿದ್ರಾಯ್ತು.ತಮ್ಮ ತಮ್ಮ ಜಾತಿ ಬಲ ತೋರಸಿಕೊಳ್ಳಕ ಯಾರು ಹಿಂದ ಬಿಳಲ್ಲ.ಇನ್ನೂ ಸರ್ಕಾರಿ ಅಧಿಕಾರಿಗಳು ಯಾತಕ್ಕ ಇರತಾರ , ಅಂಜಿಸಿಯಾದ್ರೂ ಜಯಂತಿ ಗಳಿಗಿ ದುಡ್ಡು ವಸೂಲಿ ಮಾಡೋದೇ , ಇವೆಲ್ಲದರ ಮುಂದಾಳತ್ವ ವಹಿಸುವವರು ಎಷ್ಟು ಬಸವಣ್ಣನ ತತ್ವಗಳನ್ನು ಅರಿತಿರತಾರ…!ಎಷ್ಟು ಅಂಬೇಡ್ಕರ್ ಅವರ ಬಗ್ಗೆ ತಿಳಿದಿರತಾರ..! ಚಂದಾ ವಸೂಲಿ ಮಾಡಿ ಈ ಜಯಂತಿ ಗಳಲ್ಲಿ ಕುಣಿಯುವವರು ಹೆಚ್ಚಾಗಿ ಯುವಕರು.ಕುಡಿದು ಡಿ ಜೆ ಸದ್ದಿಗೆ ಎರ್ರಾಬಿರ್ರಿ ಕುಣಿಯುತ್ತ ಅದರ ಅವಾಜಕ್ಕ ಉರವರೆಲ್ಲ ಹೈರಾಣ ಆಗಬೇಕು. ಅದಕ್ಕ ಜಯಂತಿ ಅಂತಾರ.ನಮ್ಮ ನಡೆ ನುಡಿ ಆಚರಣೆಗಳಲ್ಲಿ ಶರಣರ ಮಹಾನಾಯಕರ ಆದರ್ಶ ಆಳವಡಿಸಿಕೊಳ್ಳುವದಕ್ಕ ಜಯಂತಿ ಅನ್ನಲ್ಲ ಅಂತ ಇಂತವರ ವಾದ ಇರಬಹುದು. ಅಷ್ಟಕ್ಕೂ ಸಾರ್ವಜನಿಕ ವಾಗಿ ಜಯಂತಿ ಆಚರಿಸುವ ಅವಶ್ಯಕತೆ ಅಷ್ಟು ಇದೆಯಾ..! ಸ್ಕೂಲ್ ಕಾಲೇಜ್ ಗಳಲ್ಲಿ ಆಚರಿಸಿದರೆ ಮಕ್ಕಳಿಗೆ ಅವರ ಬಗ್ಗೆ ತಿಳಿತದ.ಪಠ್ಯ ಪುಸ್ತಕಗಳದಾಗ ಅವ್ರ ಜೀವನ ಚರಿತ್ರೆಗಳು ಇರಲಿ. ಶಾಲಾ ಕಾಲೇಜುಗಳು ಮಕ್ಕಳಲ್ಲಿ ವೈಚಾರಿಕ ನಡೆಗಳ ಮಹತ್ವ ತಿಳಿಸಲಿ.ಎಲ್ಲರೂ ತಮ್ಮ ತಮ್ಮ ಜಾತಿಯ ನಾಯಕರ ಜಯಂತಿ ಆಚರಿಸ್ತಾರ , ಟಿಪ್ಪು ಸುಲ್ತಾನ ನ ಜಯಂತಿಗೆ ಯಾಕ ವಿರೋಧಿಸಬೇಕು..! ಇತಿಹಾಸ ತಮ್ಮ ಮನಸ್ಸಿಗಿ ಬಂದಂಗ ತಿರುಚಿ ತಮ್ಮ ವಾದಕ್ಕೆ ಕಟ್ಟುಬಿಳುವದರಿಂದ ಸತ್ಯ ಸುಳ್ಳಾಗಲ್ಲ , ಸುಳ್ಳು ಸತ್ಯ ಆಗಲ್ಲ.ಟಿಪ್ಪು ಸುಲ್ತಾನ್ ಕೂಡ ನಮ್ಮ ದೇಶದ ಸ್ವತಂತ್ರ ಕ್ಕಾಗಿ ಬ್ರಿಟಿಷ್ ರೊಂದಿಗೆ ಹೊರಾಡಿದವನೆ , ಇಷ್ಟು ಸಾಕು ಅವನನ್ನು ನೆನಪಿಸಿಕೊಳ್ಳುವದಕ್ಕ. ಬಸವಾದಿ ಶರಣರ ಆಶಯಗಳು , ಅಂಬೇಡ್ಕರ್ ಅವರ ವೈಚಾರಿಕ ನಿಲುವುಗಳು , ಇವೆಲ್ಲ ನಾವು ಅವ್ರ ಪೋಟಕ್ಕ ಹೂವಿನ ಹಾರ ಹಾಕಿ ತೆಂಗು ಒಡೆದು ಮೆರವಣಿಗೆ ಮಾಡ್ಕೊಂತ ಕುಣ್ಣಕೊಂತ ಹೋಗಿದ್ರಿಂದ ನಮ್ಮಲ್ಲಿ ಆಳವಡಿಸಿಕೊಳ್ಳಕ್ಕ ಆಗುವದಿಲ್ಲ.ತನು ಶುಧ , ಮನ ಶುಧ್ದ ಎಂಬ ನಿಲುವು ನಮ್ಮಲ್ಲಿ ಬರಬೇಕಾದ್ರ ಮೊದಲು ಶರಣರ ನ್ನು ಅರಿಬೇಕು.ಅವರ ನಿಲುವುಗಳನ್ನು ನಮ್ಮ ಜೀವನದಾಗ ಆಳವಡಿಸಿಕೊಳ್ಳಬೇಕು. ಮೈಕ್ ನಲ್ಲಿ ಜೋರಾಗಿ ಭಾಷಣ ಮಾಡ್ತ ಅವರು ನಮ್ಮ ಜಾತಿಗಿ ಹಂಗ ಮಾಡಿದ್ರು ಹಿಂಗ್ ಮಾಡುದ್ರೂ ಅಂತ ಅರಚಾಡುವದು ಬಿಟ್ಟು ಈಗ ಅವರು ಹಾಕಿದ ಮಾರ್ಗದರ್ಶನ ದಾಗ ನಾವು ಹ್ಯಾಂಗ್ ಬದುಕಬೇಕು ಅನ್ನೊದು ತಿಳಕೋಬೇಕು.ಅದು ನಮ್ಮ ಜೀವನದಾಗ ಅಳವಡಿಸಿಕೊಳ್ಳಬೇಕು. ಶಾಲೆಗಳಲ್ಲಿ ಮಕ್ಕಳಿಗೆ ವಚನಗಳ ಸಾರ , ಅಂಬೇಡ್ಕರ್ ಅವರ ವೈಚಾರಿಕ ನಿಲುವುಗಳು ತಿಳಿಸುವ ಪ್ರಯತ್ನಕ್ಕೆ ಶಿಕ್ಷಕರು ಹೆಚ್ಚಿನ ಮಹತ್ವ ಕೊಡಬೇಕು. ಬಸವಣ್ಣ ಲಿಂಗಾಯತರಿಗೆ ಮಾತ್ರ ಸೀಮಿತ , ಅಂಬೇಡ್ಕರ್ ದಲಿತರಿಗೆ ಮಾತ್ರ ಸೀಮಿತ ಎಂಬ ಸಿದ್ದಾಂತ ಕ್ಕೆ ಯುವಜನ ಒಳಪಡುತಿರೋದು ಶೋಚನೀಯ. ಇನ್ನೂ ಒಂದು ಮುಖ್ಯ ವಿಷಯ. ದಲಿತರು ಬಸವಣ್ಣ ನನ್ನು ಒಪ್ಪಿಕೊಂಡಷ್ಟು ದಲಿತೇತರು ಅಂಬೇಡ್ಕರ್ ಅವರನ್ನು ಒಪ್ಪಿಕೊಂಡಿದ್ದೆವಾ..! ದಲಿತರು ಅಂಬೇಡ್ಕರ್ ಭಾವ ಚಿತ್ರದ ಜೊತೆ ಬಸವಣ್ಣ ಬುದ್ಧನ ಭಾವಚಿತ್ರ ಗಳಿಗೆ ಪೂಜಿಸೋದು ನೋಡಿದ್ದೆವೆ.ಎಷ್ಟು ಜನ ದಲಿತೇತರು ಲಿಂಗಾಯತರು ಅಂಬೇಡ್ಕರ್ ಭಾವ ಚಿತ್ರಕ್ಕೆ ಪೂಜಿಸ್ತೆವೆ..!ಪೂಜೆ ಅನ್ನೊದು ಒಂದು ಆಚರಣೆ ಅಷ್ಟೆ. ಗೌರವದಿಂದ ಒಪ್ಪಿಕೊಳ್ಳುವದು ಮುಖ್ಯ. ಶರಣರ ತತ್ವ ಗಳು , ಅಂಬೇಡ್ಕರ್ ರ ಆಶಯಗಳು ಎಂದಿಗೂ ಪ್ರಸ್ತುತ. ಬಸವೇಶ್ವರ ಅಂಬೇಡ್ಕರ್ ಇನ್ನೂ ಅನೇಕ ಮಹಾನಾಯಕರು ಮನುಕುಲದ ಉದ್ದಾರಕ್ಕಾಗಿ ಜೀವ ತೇದವರು.ಅವರೂ ಮನುಷ್ಯರೆ.ಅವ್ರಲ್ಲೂ ಪರಿಪೂರ್ಣ ತೆ ಹುಡುಕುವ ಕೆಲಸ ನಾವು ಮಾಡಬಾರದು.ಆದ್ರ ಅವರ ಮಾರ್ಗದರ್ಶನ ನಮ್ಮ ಜೀವನ ಮಟ್ಟ ಎಷ್ಟು ಬದಲಾಯಿಸ್ತದ ಅನ್ನುವದು ಅವರ ದಾರಿಯಲ್ಲಿ ಸಾಗಿದಾಗ ಮಾತ್ರ ತಿಳಿತದ. ಶರಣರ ಮಹಾನಾಯಕರ ಜಯಂತಿ ಗಳು ಸರ್ಕಾರಿ ಕಚೇರಿಗಳಲ್ಲಿ ಕಾಟಾಚಾರಕ್ಕಾಗಿ ಆಚರಿಸುವದನ್ನು ನೋಡ್ತೆವೆ.ಒಂದು ಪೋಟೋ ಇಟ್ಟು ಹೂವಿನ ಸರ ಹಾಕಿ ತೆಂಗಿನ ಕಾಯಿ ಒಡೆದು ಇಟ್ರ ಜಯಂತಿ ಮುಗಿತು.ಕಚೇರಿ ಮುಚ್ಚಿ ಮನಿಗಿ ಹೋದ್ರ ಆಯ್ತು . ಇನ್ನೂ ಡಿ ಜೆ ಹಚ್ಚಿ ಕುಣಿಯುವವರು ಪಟಾಕಿ ಹಚ್ಚೊರು , ಉರಾಗೆಲ್ಲ ಮೆರವಣಿಗಿ ಮಾಡೊರ ಹಾವಳಿ ಶುರು ಆಗತದ. ಇದರಿಂದ ನಮ್ಮ ಮುಂದಿನ ಪೀಳಿಗೆ ಏನು ಕಲಿತಾರ..! ನಮ್ಮ ನಮ್ಮ ಜಾತಿ ಅಥವಾ ಜನ ಬೆಂಬಲ ತೊರಿಸಬೇಕಾದ್ರ ಅದ್ದೂರಿ ಜಯಂತಿಗಳು ಆಚರಿಸಬೇಕು.ಅಂತ.ಇದರಿಂದಾಗುವ ಉಪಯೋಗ ಅನುಪಯೋಗ ಯಾರಿಗೂ ಬೇಕಾಗಿಲ್ಲ.ವಚನ ಸಾಹಿತ್ಯ ವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಶರಣರ ಸಮಬಾಳು ಸಮಪಾಲು ಆಶಯಗಳು , ಕಾಯಕದ ಮಹಿಮೆ , ಬಹುತ್ವ ಆಚರಣೆಗಳನ್ನು ಗೌರವಿಸುವದು , ದಯೆ ಕರುಣೆಗಳ ಸಾರ , ಎಲ್ಲರನ್ನೂ ಒಳಗೊಂಡ ಸರ್ವಜನಾಂಗಗಳ ಸಾಮರಸ್ಯ..ಇವೆಲ್ಲವೂ ಬರಿ ಬಸವಣ್ಣಗ ಅಂಬೇಡ್ಕರ್ ಅವರಿಗೆ ಮೆರೆಸಿದರಾಗಲಿ , ವಚನ ಸಾಹಿತ್ಯ ತಲೆ ಮೇಲೆ ಹೊತ್ತು ತಿರುಗಿದರಾಗಲಿ ಸಿಗಬಹುದೇ..! ಇಲ್ಲ. ಆದರೂ ಮೆರವಣಿಗೆಯಂತ ಆಚರಣೆಗಳು ಅದ್ದೂರಿಯಾಗಿ ಯಾಕ ಜರುಗತಾವ.ಉತ್ತರ ಒಂದೇ , ಬರಿ ಪ್ರತಿಷ್ಟೆಗಾಗಿ ಮಾತ್ರ.ಪ್ರತಿಷ್ಟೆ ನಮಗ ವಿಕಾಸದ ದಾರಿಗೆ ಒಯ್ಯುವದಿಲ್ಲ.ಅಧಪತನದೆಡೆ ಒಯ್ಯುತ್ತದೆ.ಜಯಂತಿಯ ಆಚರಣೆಗಳು ಬರಿ ಪ್ರತಿಷ್ಟೆಗಳಾಗದೆ ಸರ್ವಜನರ ಮಾನಸಿಕ ವಿಕಾಸಕ್ಕಾಗಿ ಆಚರಿಸಲ್ಪಡಬೇಕು. ಜ್ಯೋತಿ , ಡಿ .ಬೊಮ್ಮಾ. ಜ್ಯೋತಿ ಡಿ ಬೊಮ್ಮಾ ಅವರು ಕಲಬುರಗಿ ಜಿಲ್ಲೆಯವರು.ಇವರು ಇದುವರೆಗುನಾಲ್ಕು ಕವನ ಸಂಕಲನಗಳನ್ನು,ಎರಡು ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಪ್ರತಿ ತಿಂಗಳೂ ಸಂಗಾತಿ ಪತ್ರಿಕೆಗಾಗಿ ದೇಸಿನುಡಿಗಟ್ಟಿನಲ್ಲಿ ವಿಶೇಷವಾದ ವಿಷಯಗಳ ಬಗ್ಗೆ ಬರೆಯುತ್ತಿದ್ದಾರೆ






