ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ ಗಡಿನಾಡ ಸೊಲ್ಲಾಪುರ- ಕನ್ನಡದ ಬೇರುಗಳು ಗಡಿನಾಡ ಸೊಲ್ಲಾಪುರ-ಕನ್ನಡದ ಬೇರುಗಳು ಸೊಲ್ಲಾಪುರದೊಳಗೆ ಸೊಲ್ಲ ಅಡಗಿಸಬ್ಯಾಡೋನಿಲ್ಲೆಂದು ತಾಯಿನುಡು ನಿಲ್ಲಿಸಿದರು-ಸಿದ್ದರಾಮ ಅಲ್ಲಗಳಿದವರಿಗೆ ತಿಳಿಹೇಳು || ಕನ್ನಡ ತಾಯಿನುಡಿ‌ |ಮನ್ನಿಸಿ ಮಾತನಾಡುಅನ್ಯಕ್ಕೆ ಮರುಳಾಗದಿರು ಮರುಳೇ-ನೀ ಕನ್ನಡಿಗನೆಂದು ಮರೆಯಬೇಡ|| ಎಂದು ಜಯದೇವಿ ತಾಯಿಯವರು ಗಡಿನಾಡ ಕನ್ನಡಿಗರಿಗೆ ತಿಳಿಹೇಳಿದರು. ಅನ್ಯ ಬಗೆದವರಿಗೆ ತಿಳಿಹಳೆಂದು  ಆರಾಧ್ಯ ದೈವನಾದ ಸೊನ್ನಲಿಗಿ ಸಿದ್ದರಾಮನಲ್ಲಿ ಬೇಡಿಕೊಂಡರು. ೧೯೫೬ರಲ್ಲಿ ವಿಶಾಲ ಮೈಸೂರು ರಾಜ್ಯ ಉದಯವಾದರೂ, ಅವರ ಮನಸ್ಸಿನ ಕರ್ನಾಟಕದ ಗಡಿ ಅಲ್ಲಿ ನಿಲ್ಲಲಿಲ್ಲ. ಗಡಿಭಾಗದ ಕನ್ನಡಿಗರಿಗೆ ನೋವಾಗಿತ್ತು….  ಸೊಲ್ಲಾಪುರ, ಅಕ್ಕಲಕೋಟೆ, ಜತ್ತ, ಬೆಳಗಾವಿ ಮತ್ತು ಇತರ ಗಡಿಪ್ರದೇಶಗಳ ಕನ್ನಡಿಗರ ಹಕ್ಕಿನ ಪ್ರಶ್ನೆಗಳನ್ನು ಎತ್ತುತ್ತ ಜಯದೇವಿತಾಯಿಯವರ ಹೋರಾಟ ಜನರ ಮಧ್ಯೆ ಮುಂದುವರಿಯುತ್ತಿತ್ತು.  ಹಾಗೇ ಜೀವನದ ಕೊನೆಯವರೆಗೂ ಜೀವಂತವಾಗಿಟ್ಟರು. ಸೊಲ್ಲಾಪುರವೆಂಬುದು ಕನ್ನಡ ನಾಡಿನ ಐತಿಹಾಸಿಕ ನೆನಪುಗಳನ್ನು, ಸಾಂಸ್ಕೃತಿಕ ಪರಂಪರೆಯನ್ನು ಹಾಗೂ ಭಾಷಿಕ ಅಸ್ಮಿತೆಯನ್ನು ತನ್ನ ಒಡಲಲ್ಲಿ ಹುದುಗಿಸಿಕೊಂಡಿರುವ ನೆಲ. ಕರ್ನಾಟಕದ ಇತಿಹಾಸವನ್ನು ಅವಲೋಕಿಸಿದಾಗ ಸೊಲ್ಲಾಪುರದೊಂದಿಗೆ ಕನ್ನಡ ನಾಡಿಗಿದ್ದ ಸಂಬಂಧವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.  ಶತಮಾನಗಳ ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗಳ ಮೂಲಕ ಈ ಪ್ರದೇಶವು ದಕ್ಷಿಣ ಭಾರತದ ವಿವಿಧ ರಾಜಮನೆತನಗಳ ಆಳ್ವಿಕೆಗೆ ಒಳಪಟ್ಟಿತ್ತು. ಅವುಗಳಲ್ಲಿ ಕನ್ನಡ ನಾಡಿನ ಇತಿಹಾಸದೊಂದಿಗೆ ನಿಕಟ ಸಂಬಂಧ ಹೊಂದಿದ್ದ ಅನೇಕ ರಾಜಮನೆತನಗಳೂ ಸೇರಿದ್ದವು. ಶಾತವಾಹನರಿಂದ ಆರಂಭಿಸಿ ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಕಲಚೂರಿಗಳು, ದೇವಗಿರಿಯ ಯಾದವರು ಹಾಗೂ ವಿಜಯಪುರದ ಆದಿಲಶಾಹಿಗಳವರೆಗೆ ವಿವಿಧ ಅರಸು ಮನೆತನಗಳು ಈ ವಿಶಾಲ ಪ್ರದೇಶದ ಇತಿಹಾಸದ ಮೇಲೆ ತಮ್ಮ ಛಾಪು ಮೂಡಿಸಿವೆ. ಈ ರಾಜಮನೆತನಗಳ ಆಳ್ವಿಕೆಯ ಕಾಲದಲ್ಲಿ ಆಡಳಿತ, ಧರ್ಮ, ಸಾಹಿತ್ಯ, ಕಲೆ ಮತ್ತು ಜನಜೀವನದ ಹಲವು ಆಯಾಮಗಳಲ್ಲಿ ಪರಸ್ಪರ ಸಾಂಸ್ಕೃತಿಕ ವಿನಿಮಯಗಳು ಹುನ್ನಾರದಲ್ಲಿ ನಡೆದವು. ಎಲ್ಲ ಐತಿಹಾಸಿಕ ಬೆಳವಣಿಗೆಗಳನ್ನು ಗಮನಿಸಿದಾಗ ಸೊಲ್ಲಾಪುರ ಮತ್ತು ಕನ್ನಡ ನಾಡಿನ ನಡುವಿನ ಸಂಬಂಧವು ಕೇವಲ ಭಾಷೆಯ ಮಟ್ಟಕ್ಕೆ ಸೀಮಿತವಾಗಿರದೆ, ವಿಶಾಲವಾದ ಐತಿಹಾಸಿಕ ಹಾಗೂ ಸಂಸ್ಕೃತಿಕ ಹಿನ್ನೆಲೆಯನ್ನು ಹೊಂದಿತ್ತು ಎಂಬುದು ಸ್ಪಷ್ಟವಾಗುತ್ತದೆ. ಈ ಪ್ರದೇಶದ ಕನ್ನಡದ ಬೇರುಗಳನ್ನು ಅರಿಯಲು ರಾಜಮನೆತನಗಳ ಇತಿಹಾಸ…..ಅಲ್ಲಿನ ಜನಸಾಮಾನ್ಯರ ಬದುಕು, ಆಡಳಿತ ವ್ಯವಸ್ಥೆ, ಧಾರ್ಮಿಕ ಸಂಸ್ಥೆಗಳು, ಜಾತ್ರೆಗಳು, ಆಚರಣೆಗಳು ಮತ್ತು ಶಾಸನಗಳೂ ಅಷ್ಟೇ ಮಹತ್ವದ ಆಧಾರಗಳಾಗಿವೆ.ಸೊಲ್ಲಾಪುರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದೊರೆತಿರುವ ಶಾಸನಗಳು, ದೇವಾಲಯಗಳ ಪರಂಪರೆ ಮತ್ತು ಸ್ಥಳೀಯ ಧಾರ್ಮಿಕ ಆಚರಣೆಗಳು ಈ ನೆಲದ ಬಹುಮುಖ ಇತಿಹಾಸವನ್ನು ಪರಿಚಯಿಸುತ್ತವೆ. ಅವುಗಳಲ್ಲಿನ ಭಾಷೆ, ಕಾಲಮಾನ ಮತ್ತು ವಿಷಯವಸ್ತುವಿನ ಅಧ್ಯಯನವು ಕನ್ನಡದ ಐತಿಹಾಸಿಕ ಪ್ರಭಾವವನ್ನು ಗುರುತಿಸಲು ನೆರವಾಗುತ್ತದೆ. ಒಂದು ಕಾಲದಲ್ಲಿ ಈ ಭಾಗದ ಆಡಳಿತಭಾಷೆಗಳ ಅಧ್ಯಯನ ಮಾಡಿದಾಗ, ಕನ್ನಡಿಗರ ಉಪಸ್ಥಿತಿ ಮತ್ತು ಕನ್ನಡ ಸಂಸ್ಕೃತಿಯ ಪ್ರಭಾವವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ  ಸೊಲ್ಲಾಪುರದ ಕನ್ನಡ ಸಂಸ್ಕೃತ ಪ್ರತಿಬಿಂಬಿಸುವ ಧಾರ್ಮಿಕ ಆಚರಣೆಗಳಲ್ಲಿಯೂ ಕನ್ನಡದ ಪರಂಪರೆಯ ಛಾಯೆಯನ್ನು ಕಾಣಬಹುದು. ಹನ್ನೆರಡನೇ ಶತಮಾನದ ಸಿದ್ಧರಾಮೇಶ್ವರರ ಪರಂಪರೆ ಮತ್ತು ಅವರ ಹೆಸರಿನಲ್ಲಿ ನಡೆಯುವ ಜಾತ್ರೆಯು ಈ ಪ್ರದೇಶದ ಧಾರ್ಮಿಕ ಹಾಗೂ ಸಾಮಾಜಿಕ ಬದುಕಿನಲ್ಲಿ ಮಹತ್ವದ ಸ್ಥಾನವನ್ನು ಹೊಂದಿವೆ. ಸಿದ್ಧರಾಮೇಶ್ವರರು  ಶರಣ ಪರಂಪರೆಯ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು.   ಕನ್ನಡದ ಶರಣ ಸಂಸ್ಕೃತಿಯೊಂದಿಗೆ ಆಳವಾದ ಸಂಬಂಧ ಹೊಂದಿದೆ. ಸೊಲ್ಲಾಪುರದ ಸಿದ್ಧರಾಮೇಶ್ವರರ ಅಂದರೆ ಈ ನೆಲದ ಧಾರ್ಮಿಕ ಇತಿಹಾಸದ ಜೊತೆಗೆ ಕನ್ನಡದ ಶರಣ ಚಳವಳಿಯ ಪ್ರಭಾವವನ್ನೂ ಅರಿಯುವುದಾಗಿದೆ.ಜಾತ್ರೆಗಳು  ಒಂದು ಸಮಾಜದ ಸಾಮೂಹಿಕ ಸ್ಮೃತಿ, ಪರಂಪರೆ ಮತ್ತು ಸಾಂಸ್ಕೃತಿಕ ಒಗ್ಗಟ್ಟಿನ ಸಂಕೇತಗಳಾಗಿವೆ. ತಲೆಮಾರುಗಳಿಂದ ಮುಂದುವರಿದು ಬಂದ ಆಚರಣೆಗಳು, ಜನರ ನಂಬಿಕೆಗಳು, ಶರಣರ ಬಗೆಗಿನ ಭಕ್ತಿ ಮತ್ತು ಸ್ಥಳೀಯ ಸಂಪ್ರದಾಯಗಳು ಒಂದು ಪ್ರದೇಶದ ಸಾಂಸ್ಕೃತಿಕ ವ್ಯಕ್ತಿತ್ವವನ್ನು ರೂಪಿಸುತ್ತವೆ. ಸೊಲ್ಲಾಪುರದ ಸಿದ್ಧರಾಮೇಶ್ವರರ ಪರಂಪರೆಯೂ ಅಂತಹ ಮಹತ್ವವನ್ನು ಹೊಂದಿದೆ. ಈ ಪರಂಪರೆಯ ಐತಿಹಾಸಿಕ ಬೇರುಗಳನ್ನು ಪರಿಶೀಲಿಸಿದಾಗ, ಕನ್ನಡದ ಶರಣ ಸಂಸ್ಕೃತಿ ಈ ಪ್ರದೇಶದ ಜನಜೀವನದೊಂದಿಗೆ ಹೊಂದಿದ್ದ ಸಂಬಂಧದ ಹಲವು ಆಯಾಮಗಳು ತೆರೆದುಕೊಳ್ಳುತ್ತವೆ. ಮುಂದೆ ಸೊಲ್ಲಾಪುರ ೧೩ನೇ ಶತಮಾನದಲ್ಲಿ ಉದ್ಯಮ ಕ್ಷೇತ್ರಕ್ಕೆ ವಲಸೆದಾರರು ಬಂದು ಮರಾಠಿಗರಿಂದ ಯಂತ್ರೋದ್ಯಮ ಕಲಿತ ಕನ್ನಡಿಗರು ಮರಾಠಿ ಪ್ರಭಾವಕ್ಕೆ ಒಳಗಾಗಿ ಕನ್ನಡವನ್ನು ಹಿಂದಕ್ಕೆ ಸೇರಿಸಲಾಯಿತು .ಆ ಸ್ಥಾನದಲ್ಲಿ ಮರಾಠಿ ಕಲಿತರು ತಾಯಿನುಡಿಯ ಅಭಿಮಾನಿಗಳಾದ ಮರಾಠಿಗರು ಕನ್ನಡವನ್ನು ಬಳಸಲು ಪ್ರಯತ್ನಿಸಲಿಲ್ಲ. ಬ್ರಿಟಿಷರ ವಿರುದ್ಧದ ಹೋರಾಟದ ಸಂಬಂಧದಲ್ಲಿ ತಿಲಕರು ಸೊಲ್ಲಾಪುರಕ್ಕೆ ಬಹಳ ಬಂದು ಹೋಗುತ್ತಿದ್ದರು. ಹೀಗಾಗಿ ಅವರ ಪ್ರಚಾರ ಮರಾಠಿಯಲೇ ಇರುತಿತ್ತು . ಇದು ಕೂಡ ಪ್ರಬಲವಾದ ಕಾರಣ ಅಂತ ಹೇಳಬಹುದು.ಅಧಿಕಾರದ ಪ್ರಭಾವದಿಂದ ಮರಾಠಿ ತನ್ನ ನೆಲೆಯನ್ನು ಕಂಡು ಕೊಂಡು ಭದ್ರವಾಗಿತ್ತು.  ಕನ್ನಡವು ಅನ್ಯ ನುಡಿಗಳಿಂದ ಹತ್ತಿಕಲ್ಪಟ್ಟಿತು.  ಈ ಮಧ್ಯದಲ್ಲಿ ಕನ್ನಡಪರ ಪ್ರಬಲ ಶಕ್ತಿಗಳಾಗಿ ಕೆಲವು ಕನ್ನಡ ಮನೆತನಗಳು ಇವೆ ಅಖಂಡ ಕರ್ನಾಟಕ ಸಾಹಿತ್ಯ ಪರಿಷತ್ತು, ಅಖಂಡ ಕರ್ನಾಟಕ ಏಕೀಕರಣ ಪರಿಷತ್ತು, ಅಖಂಡ ಕರ್ನಾಟಕ ಆಯುರ್ವೇದ ಪರಿಷತ್ತು ,ಮೊದಲಾದ ಕನ್ನಡ ಪರ ಸಂಸ್ಥೆಗಳು ಇಲ್ಲಿ ಕೆಲಸ ಮಾಡುತ್ತಿದ್ದವು .ಮುಂಬೈ ಹೈಕೋರ್ಟಿನ ಚೀಫ್ ಜಸ್ಟಿಸ್ ಸೊಲ್ಲಾಪುರಕ್ಕೆ ಬೆಟ್ಟಿ ಕೊಟ್ಟಾಗ ಅಲ್ಲಿಯ ಕೋರ್ಟಿನಲ್ಲಿಯು ಸಹ ಕನ್ನಡ ಮಾಧ್ಯಮವಿರಬೇಕೆಂದು ಕೇಳಿಕೊಳ್ಳಲಾಯಿತು.  ಸೊಲ್ಲಾಪುರ 12 ಶತಮಾನಕ್ಕಿಂತ ಮೊದಲನೇ ಕನ್ನಡ ಭಾಷೆಯು ಅವಿಭಾಜ್ಯ ಅಂಗವಾಗಿತ್ತು ಅಲ್ಲಿ ನೂರು ವರ್ಷಗಳಿಂದಲೂ ಕಾಗದ ಪತ್ರಗಳು ಕನ್ನಡದಲ್ಲಿ ಇರುವುದು ಗಮನಾರ್ಹವಾಗಿದೆ.ಹೀಗಾಗಿ ಸೊಲ್ಲಾಪುರ ಪಟ್ಟಣವು ತನ್ನ ಪ್ರಭಾವವನ್ನು ಕನ್ನಡಿಗರ ಮೇಲೆ ಹೊಂದಿರುವುದು ಇಂದಿಗೂ ಕಾಣಬಹುದಾಗಿದೆ.  ಕನ್ನಡ ಪಟ್ಟಣವಾದ ಸೋಲಾಪುರ ಮರಾಠಿ ಸ್ಥಳವಾಗಿ ಮಾರ್ಪಟ್ಟಿದ್ದು ಒಂದು ಆಕಸ್ಮಿಕ ಈ ಪಟ್ಟಣದ ಒಂದೇ ಒಂದು ಸಣ್ಣ ಭಾಗ ಮರಾಠಿ ಹಳ್ಳಿಗಳ ಜೊತೆಗೆ ಸಂಪರ್ಕ ಹೊಂದಿದ್ದು ಉಳಿದೆಲ್ಲ ಭಾಗ ಅಂದರೆ ತಾಲೂಕು ಹಳ್ಳಿಗಳು ಕನ್ನಡ ಪ್ರದೇಶಗಳಾಗಿವೆ. ಕನ್ನಡ ಜನತೆಯ ಕುಲ ಕಸುಬುಗಳು ಇಂದಿಗೂ ಕನ್ನಡ ಮಾಧ್ಯಮಿಕ ಪ್ರಾಥಮಿಕ ಮತ್ತು ಶಾಲೆಗಳು ನಡೆಯುತ್ತಿವೆ . ಕನ್ನಡ ಗಡಿ ಭಾಗವೆಂದು ಕೊಳ್ಳುವ ಸೊಲ್ಲಾಪುರ ಅಕ್ಕಲಕೋಟ ಜತ್ತ ಕಾಸರಗೋಳ ತಾಳವಾಡಿ ಆದೂನಿ ,ಆಲೂರ ,ರಾಯದುರ್ಗ ,ಹೊಸೂರ ನೀಲಗಿರಿ, ಇಲ್ಲಿ ವಾಸಿಸುವ ಕನ್ನಡದ ಮಕ್ಕಳಿಗೆ ಶಾಲೆಗಳು  ಈಗಲೂ ಇವೆ. ಕರ್ನಾಟಕದಿಂದ ಹೊರಗುಳಿದ ಕನ್ನಡ ನಾಡುಗಳ ಅಂಕಿ..ಅಂಶಗಳ ವಿವರ ಹೀಗಿದೆ….೧೯೫೬ ರಲ್ಲಿ ಭಾಷಾವಾರು ಪ್ರಾಂತ್ಯ ರಚನೆಯಾದಾಗ, ದ್ವಿಭಾಷಾ ಮುಂಬೈ ಪ್ರಾಂತ್ಯದಲ್ಲಿ ಸುಮಾರು *೧೩ ಲಕ್ಷ ಕನ್ನಡಿಗರು* ಕರ್ನಾಟಕಕ್ಕೆ ಸೇರದೆ ಹೊರಗೆ ಉಳಿದರು.  ಕೊಲ್ಲಾಪುರ ಮತ್ತು ಸತಾರಾ ಭಾಗ….ಗಡಹಿಂಗ್ಲಜ ತಾಲೂಕು..ಜನಸಂಖ್ಯೆ ೧,೧೧,೨೪೨, ವಿಸ್ತೀರ್ಣ ೧೫೧ ಚದರ ಮೈಲುಗಳಷ್ಟಾದರೆ, ಶಿರೋಳ ತಾಲೂಕಿನ…. ಜನಸಂಖ್ಯೆ ೧,೨೧,೯೧೨, ವಿಸ್ತೀರ್ಣ ೨೧೨ ಚದರ ಮೈಲುಗಳು,  ಇನ್ನು ಹತ್ಕಣಂಗಲೆ ತಾಲೂಕು… ಜನಸಂಖ್ಯೆ ೧,೬೫,೨೦೦,ಮಿರಜ್ ತಾಲೂಕು… ಜನಸಂಖ್ಯೆ ೨,೮೫,೫೨೯, ವಿಸ್ತೀರ್ಣ ೨೧೧ ಚದರ ಮೈಲುಗಳು,ಜತ ತಾಲೂಕು… ಜನಸಂಖ್ಯೆ ೧,೦೯,೫೨೦, ವಿಸ್ತೀರ್ಣ ೯೨ ಚದರ ಮೈಲುಗಳು,ಇದರ ಜೊತೆಗೆ ತಾಸಗಾಂವ್ ಮತ್ತು ಏಳವಾ ತಾಲೂಕಿನ ಅನೇಕ ಕನ್ನಡ ಹಳ್ಳಿಗಳು ಕೂಡ ಸೇರಿವೆ. ಸೊಲ್ಲಾಪುರ ಭಾಗ…..ದಕ್ಷಿಣ ಸೊಲ್ಲಾಪುರ ಅಂದರೆ ಸೊಲ್ಲಾಪುರ ನಗರ ಸೇರಿ…ಜನಸಂಖ್ಯೆ ೩,೨೦,೫೯೦ಮಂಗಳವೇಡೆ ಮತ್ತು ಉತ್ತರ ಸೊಲ್ಲಾಪುರ… ಸುಮಾರು ೨೦ ಕನ್ನಡ ಹಳ್ಳಿಗಳು,ಸಾಂಗೋಲಾ ತಾಲೂಕು….ಕೆಲವು ಕನ್ನಡ ಹಳ್ಳಿಗಳುಅಕ್ಕಲಕೋಟೆ ಪೂರ್ಣ ತಾಲೂಕು… ಜನಸಂಖ್ಯೆ ೧,೪೭,೭೪೫, ವಿಸ್ತೀರ್ಣ ೪೫೪ ಚದರ ಮೈಲು ಇನ್ನು ಮರಾಠವಾಡದ ಭಾಗಗಳತ್ತ ಬಂದರೆ…..ಉಸ್ಮಾನಾಬಾದ ಜಿಲ್ಲೆಯ ಉಮರ್ಗಾ ಮತ್ತು ನಳದುರ್ಗ ತಾಲೂಕುಗಳ ಅರ್ಧದಷ್ಟು ಭಾಗ,ಲಾತೂರು ತಾಲೂಕಿನ ಕನ್ನಡ ಹಳ್ಳಿಗಳು, ನಾಂದೇಡ ಜಿಲ್ಲೆಯ ದೇಗಲೂರು ತಾಲೂಕು … ಇಲ್ಲಿ ಗೋದಾವರಿ ನದಿ ಹರಿಯುತ್ತದೆ, ಅದರ ತೀರದವರೆಗೆ ಇಂದಿಗೂ ಅಚ್ಚ ಕನ್ನಡ ಮಾತನಾಡುವ ಜನರಿದ್ದಾರೆಭೀಡ ಮತ್ತು ಪರಭಣಿ ಜಿಲ್ಲೆಗಳಲ್ಲಿ ಸುಮಾರು ಎರಡು ತಾಲೂಕುಗಳಷ್ಟು ವಿಸ್ತೀರ್ಣದ ಕನ್ನಡ ಹಳ್ಳಿಗಳು ಇವೆ. ಈ ಪಟ್ಟಿಯಲ್ಲಿಯೇ ಸುಮಾರು ೧೨ ರಿಂದ ೧೩ ಲಕ್ಷ ಜನಸಂಖ್ಯೆ ಮತ್ತು ೧೫೦೦ ಚದರ ಮೈಲುಗಿಂತ ಹೆಚ್ಚು ವಿಸ್ತೀರ್ಣದ ಕನ್ನಡ ನಾಡು ಹೊರಗೆ ಉಳಿದಿದೆ. (೧೯೫೧ ರ ಜನಗಣತಿಯ ಆಧಾರದ ಮೇಲೆಯೇ ಈ ಲೆಕ್ಕವನ್ನು ನೀಡಲಾಗಿದೆ.) ೯೨ ಚದರ ಮೈಲಿ ವಿಸ್ತೀರ್ಣ ಮತ್ತು ೧,೦೯,೫೨೦ ಜನಸಂಖ್ಯೆ ಹೊಂದಿರುವ ಈ ಪ್ರದೇಶ ಇಂದಿಗೂ ಕರ್ನಾಟಕದ ಗಡಿಯಿಂದ ಹೊರಗೆ ಉಳಿದುಹೋಯಿತು ಅನ್ನುವ ನಿರಾಸೆ ಜಯದೇವಿ ತಾಯಿಯವರಲಿತ್ತು…. ಅಕ್ಕಲಕೋಟೆ ಇಡೀ ತಾಲೂಕು …೪೫೪ ಚದರ ಮೈಲು ವಿಸ್ತೀರ್ಣ ಮತ್ತು ೧,೪೭,೭೪೫ ಜನಸಂಖ್ಯೆ ಹೊಂದಿದ್ದರೂ ಕರ್ನಾಟಕಕ್ಕೆ ಸೇರಿಲ್ಲ. ಇದೇ ರೀತಿ ಉಸ್ಮಾನಾಬಾದ ಜಿಲ್ಲೆಯ ಉಮರ್ಗಾ ಮತ್ತು ನಳದುರ್ಗ ತಾಲೂಕುಗಳ ಅರ್ಧ ಭಾಗ, ಲಾತೂರು ತಾಲೂಕಿನ ಕನ್ನಡ ಹಳ್ಳಿಗಳು, ನಾಂದೇಡ ಜಿಲ್ಲೆಯ ದೇಗಲೂರು ತಾಲೂಕು ….ಈ ತಾಲೂಕಿನ ಮಧ್ಯದಲ್ಲಿಯೇ ಗೋದಾವರಿ ನದಿ ಹರಿಯುತ್ತದೆ, ಆ ನದಿಯ ತೀರದವರೆಗೂ ಇಂದಿಗೂ ಶುದ್ಧ ಕನ್ನಡ ಮಾತನಾಡುವ ಜನ ವಾಸಿಸುತ್ತಿದ್ದಾರೆ. ಅದಲ್ಲದೆ ಬೀಡ ಮತ್ತು ಪರಭಣಿ ಜಿಲ್ಲೆಗಳಲ್ಲಿ ಸುಮಾರು ಎರಡು ತಾಲೂಕುಗಳಷ್ಟು ಕನ್ನಡ ಹಳ್ಳಿಗಳು ಕರ್ನಾಟಕದಿಂದ ಹೊರಗುಳಿದಿವೆ. *ಕನ್ನಡ ನಾಡಿನ ಸ್ಥಳದಲ್ಲಿ ಮತ್ತೊಂದು ಭಾಷೆವನ್ನು ತನ್ನ ಪ್ರಾಬಲ್ಯವನ್ನು ಸಾಧಿಸುವುದೆಂದರೆ ಅದರ ಪ್ರಭಾವಕ್ಕೆ ಒಳಗಾಗಿ ತನ್ನತನವನ್ನು ಕಳೆದುಕೊಂಡಿದೆ ಅನ್ನುವುದಕ್ಕೆ ಉದಾಹರಣೆ ಎಂದರೆ ಮುಂಬೈ ಅಂತ ನಗರದಲ್ಲಿ ಮೊಟ್ಟಮೊದಲ ಆಂಗ್ಲ ಗೌರ್ನರ್ ಗೆ ಕೊಡಮಾಡಿದ ನಾಗರಿಕ ಸನ್ಮಾನ ಪತ್ರ ಕನ್ನಡ ಭಾಷೆ ಕನ್ನಡ ಲಿಪಿಯಲ್ಲಿ ಇತ್ತು ಎನ್ನುವುದನ್ನು ನೆನೆಸಿಕೊಂಡು ಅಂದಿನಿಂದ ಇಂದಿನವರೆಗೂ ಪರಿಸ್ಥಿತಿಯನ್ನು ವೀಕ್ಷಿಸಿದರೆ ಕಾಲದ ಬದಲಾವಣೆಗೆ ತಕ್ಕಂತೆ ಕನ್ನಡಿಗರು ಹೊಂದುಕೊಂಡು ಬಂದಿರುವುದು ಸ್ಪಷ್ಟವಾಗುವದು.* ಸೊಲ್ಲಾಪುರದ ಇತಿಹಾಸವನ್ನು ಈ ದೃಷ್ಟಿಕೋನದಿಂದ ಅಧ್ಯಯನ ಮಾಡಿದಾಗ, ಕರ್ನಾಟಕ ಏಕೀಕರಣದ ಹೋರಾಟದ ಹಿಂದೆ ಇದ್ದ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಕನ್ನಡದ ಬೇರುಗಳು ಎಷ್ಟೇ ಆಳವಾಗಿದ್ದರೂ….ಅವುಗಳನ್ನು , ಸಂರಕ್ಷಿಸಿ, ಮುಂದಿನ ತಲೆಮಾರಿಗೆ ತಲುಪಿಸುವುದು ಕೂಡ ಇತಿಹಾಸದ ಅಧ್ಯಯನದ ಉದ್ದೇಶವಾಗ ಬೇಕೆನ್ನುತ್ತಿದ್ದರು ಜಯದೇವಿ ತಾಯಿಯವರು. ಹೊರನಾಡ ಮತ್ತು ಗಡಿನಾಡ ಕನ್ನಡಿಗರಲ್ಲೂ ಕನ್ನಡದ ಕಿಚ್ಚು ಕನ್ನಡದ ಧರ್ಮ ಉಳಿದುಕೊಂಡು ಬೆಳೆದುಕೊಂಡು ಬರುವಂತೆ ನಮ್ಮ ರಾಜ್ಯ ಸರ್ಕಾರ ಎಲ್ಲ ಪ್ರಯತ್ನಗಳನ್ನು ಕೈಗೊಳ್ಳಬೇಕು ಎನ್ನುತ್ತಿದ್ದರು. ಜಯದೇವಿ ತಾಯಿಯವರು ಕನ್ನಡ ಪ್ರಚಾರಕ್ಕೆ ರಾಜ್ಯಾದ್ಯಂತ ಸಂಚರಿಸಲು ತಯಾರಿಸಿದರು. ತಮ್ಮ ಸ್ವಹಿತಾಸಕ್ತಿಗಳನ್ನು ಬದಿಗಿಟ್ಟು ಕುಟುಂಬದ ಸಮಸ್ಯೆಗಳ ಮಧ್ಯದಲ್ಲೂ ಮನೆಯವರ ಮನ ಒಲಿಸಿಕೊಂಡು ಅಡುಗೆ ಕೆಲಸದವರನ್ನು ಕರೆದುಕೊಂಡು, ಮನೆಯಲ್ಲಿ ಕಾಳು ಕಡಿಗಳನ್ನು ಅಡುಗೆ ಸಾಮಾಗ್ರಿಗಳನ್ನು ಕಟ್ಟಿಕೊಂಡು ಕಾರಿನಲ್ಲಿ ಪ್ರಚಾರಕ್ಕೆ ಹೊರಡುವರು .ಕಾರುಹೋಗದ ಊರುಗಳಿಗೆ ಎತ್ತಿನ ಬಂಡಿಯಲ್ಲಿ ಸಂಚರಿಸಿದರು. ಅಕ್ಕನ ಬಳಗ, ಬಸವ ಜಯಂತಿ,ನಾಡಹಬ್ಬ, ಅನೇಕ ಸಭೀ ಸಮಾರಂಭಗಳ ವೇದಿಕೆಗಳ ಮೂಲಕ ಕನ್ನಡ ಪ್ರಚಾರ ಕೈಗೊಂಡರು. ಹೋದ ವೇದಿಕೆಯಲ್ಲಿ ಪ್ರಯಾಣದ ಭತ್ತಿ ತೆಗೆದುಕೊಳ್ಳುತ್ತಿರಲಿಲ್ಲ .ಇರಲು ಅವಕಾಶಕೊಟ್ಟರೆ ಅಲ್ಲಿ ಕನ್ನಡತನವನ್ನು ಬೆಳೆಸಲು ಉಪಯೋಗಿಸುತ್ತಿದ್ದರು. “ಇಂತಹ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯುಳ್ಳ ಸೊಲ್ಲಾಪುರದ ನೆಲದಲ್ಲಿಯೇ ಕನ್ನಡದ ಅಸ್ಮಿತೆಯನ್ನು ಕಾಪಾಡಿಕೊಂಡು ಮುಂದುವರಿಸಿಕೊಂಡು ಹೋಗುವ ಪ್ರಶ್ನೆ ಜಯದೇವಿತಾಯಿಯವರ ಬದುಕಿನ ಮಹತ್ವದ ಧ್ಯೇಯವಾಗಿ ರೂಪುಗೊಂಡಿತು. ತಮ್ಮ ಬದುಕನ್ನೇ ಹೋರಾಟದ ಹಾದಿಯಲ್ಲಿ ಮುಡಿಪಾಗಿಟ್ಟರು.ಅದೇ ರೀತಿಯಾಗಿ….ಅಲ್ಲಿ ನೆಲೆಸಿರುವ ಪ್ರತಿಯೊಬ್ಬ ಕನ್ನಡಿಗನು ಅನ್ಯ ಭಾಷೆಕರೊಂದಿಗೆ ಬೆಲೆಯೂ ಅವರೊಂದಿಗೆ ಸೌಹಾರ್ದತೆಯಿಂದ ಬಾಳ ಬದುಕಬೇಕು ಅನ್ನುವನ ಕರೆ ಕೊಟ್ಟರು. ಹಾಗೇಯೇ  ಗಡಿನಾಡ ಕನ್ನಡಿಗರು ಅನ್ಯಭಾಷಿಕರೊಂದಿಗೆ ಅನುಸರಿಸಿಕೊಂಡು ಬದುಕುತ್ತಿದ್ದರೂ ಕೂಡ. ಸವಿತಾ ದೇಶಮುಖ

Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಶರಣ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಅಪ್ರತಿಮ ಶರಣ ಘಟ್ಟಿವಾಳಯ್ಯ ಕರ್ನಾಟಕದಲ್ಲಿ ಹನ್ನೆರಡನೆಯ ಶತಮಾನದ ವಚನ ಚಳುವಳಿಯ ಘಟ್ಟಿವಾಳಯ್ಯ  ಅಗ್ರ ಪ್ರಸಿದ್ಧ ಶರಣ ಮತ್ತು ವಚನಕಾರರು. ಇವರ ಮೂಲ ಹೆಸರು ಮುದ್ದಣ. ಶರಣ ಘಟ್ಟಿವಾಳಯ್ಯನವರ ಹುಟ್ಟೂರು ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವೆ. ಬಳ್ಳಿಗಾವೆಯು ೧೨ನೆಯ ಶತಮಾನದಲ್ಲಿ ಸಾಂಸ್ಕೃತಿಕ ಮತ್ತು ಧಾರ್ಮಿಕ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿತ್ತು. ಘಟ್ಟಿವಾಳಯ್ಯನವರು ಯೌವನದಲ್ಲಿದ್ದಾಗ ಬಳ್ಳಿಗಾವೆಯ ಸಮೀಪದ ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿ ಶಿವನ ಧ್ಯಾನದಲ್ಲಿ ತೊಡಗುತ್ತಾ, ಮದ್ದಳೆಯನ್ನು ಬಾರಿಸುವ ಸೇವೆ (ಕಾಯಕ) ಮಾಡುತ್ತಿದ್ದರು.  ನಂತರದ ದಿನಗಳಲ್ಲಿ ಬೇರೆ ಕಾರಣಗಳಿಂದ ಇವರು ಕಲ್ಯಾಣಕ್ಕೆ ತೆರಳಿ ಬಸವಣ್ಣನವರ ಒಡನಾಡಿಯಾದರು. ವೈವಾಹಿಕ ಜೀವನ ಮತ್ತು ವೈರಾಗ್ಯ ಘಟ್ಟಿವಾಳಯ್ಯನವರು ಆರಂಭದಲ್ಲಿ ಮದುವೆಯಾಗಿ ಸಂಸಾರ ಹೂಡಿದ್ದರು. ಆದರೆ ಇವರ ಹೆಂಡತಿಗೆ ಇವರ ಆಧ್ಯಾತ್ಮಿಕ ಒಲವು ಮತ್ತು ಭಕ್ತಿಯ ತೀವ್ರತೆ ಇಷ್ಟವಾಗಲಿಲ್ಲ. ಅವಳು ಲೌಕಿಕ ಸುಖ ಮತ್ತು ಸಂಪತ್ತಿಗೆ ಆಸೆಪಟ್ಟು ಅನ್ಯ ಪುರುಷನ ಸಂಗ ಬೆಳೆಸಿದಳು ಎಂದು ಮೈಸೂರು ವಿಶ್ವವಿದ್ಯಾನಿಲಯದ ವಿಶ್ವಕೋಶದ ಆಕರಗಳು ಉಲ್ಲೇಖಿಸುತ್ತವೆ. • ವೈರಾಗ್ಯದ ಹಾದಿ:  ಹೆಂಡತಿಯ ಈ ವಿಷಮ ನಡವಳಿಕೆ ಮತ್ತು ಕೌಟುಂಬಿಕ ಕ್ಲೇಶಗಳಿಂದ ಸಂಪೂರ್ಣವಾಗಿ ಬೇಸತ್ತ ಮುದ್ದಣನು ಲೌಕಿಕ ಸಂಸಾರವನ್ನು ತೊರೆದು ತೀವ್ರ ವೈರಾಗ್ಯ ತಳೆದರು. ನಂತರ ಕಲ್ಯಾಣಕ್ಕೆ ಬಂದು ‘ಘಟ್ಟಿವಾಳಯ್ಯ’ ಎಂಬ ಹೆಸರಿನಿಂದ ಪ್ರಸಿದ್ಧ ಶರಣರಾದರು.  ಸಂಸಾರದ ವಿಷಮ ಪರಿಸ್ಥಿತಿಯಿಂದ ಬೇಸತ್ತು ಸಂಪೂರ್ಣ ವೈರಾಗ್ಯ ತಳೆದ ಇವರು ಕಲ್ಯಾಣದ ಶಿವಶರಣರ ಒಡನಾಡಿಯಾದರು. ಇವರ ಜೀವನ ಮತ್ತು ವ್ಯಕ್ತಿತ್ವದ ಪ್ರಮುಖ ವಿವರಗಳು ಇಲ್ಲಿವೆ: • ಕಾಯಕ:  ಭಕ್ತನಾಗಿ ಮದ್ದಳೆಯನ್ನು ಬಾರಿಸುತ್ತಾ, ಶಿವಾನುಭವವನ್ನು ಸಾರುವ ನರ್ತನ ಕಾಯಕವನ್ನು ಮಾಡುತ್ತಿದ್ದರು. ನರ್ತನ ಕಾಯಕದಲ್ಲಿ ತೊಡಗಿರುವಾಗಲೇ ಇವರು ಕೊನೆಯುಸಿರೆಳೆದರು ಎಂದು ಹೇಳಲಾಗುತ್ತದೆ. ಕೆಲವೊಂದು ಆಕರಗಳ ಪ್ರಕಾರ ಗಂಧ ತೇಯುವುದು ಕೂಡ ಇವರ ಕಾಯಕವಾಗಿತ್ತು. • ಅಂಕಿತನಾಮ: ಇವರ ವಚನಗಳ ಅಂಕಿತನಾಮ “ಚಿಕ್ಕಯ್ಯಪ್ರಿಯ ಸಿದ್ದಲಿಂಗ” ಅಥವಾ “ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು”. • ವಚನ ಸಾಹಿತ್ಯ: ಕನ್ನಡದಲ್ಲಿ ಇವರ ಸುಮಾರು ೧೪೭ ರಿಂದ ೧೫೦ ವಚನಗಳು ಲಭ್ಯವಾಗಿವೆ. ಇವರ ವಚನಗಳಲ್ಲಿ ತತ್ವನಿಷ್ಠೆ, ಸತ್ಯನಿಷ್ಠುರತೆ ಮತ್ತು ಸಮಾಜದ ಡೋಂಗುತನವನ್ನು ತಿದ್ದುವ ವೈರಾಗ್ಯದ ಭಾವನೆಗಳು ಎದ್ದು ಕಾಣುತ್ತವೆ. • ಪ್ರಶಂಸೆ: ಘಟ್ಟಿವಾಳಯ್ಯನವರ ಘನ ವ್ಯಕ್ತಿತ್ವವನ್ನು ಅಲ್ಲಮಪ್ರಭು, ಬಸವಣ್ಣ, ಮೋಳಿಗೆ ಮಾರಯ್ಯ ಮುಂತಾದ ಶ್ರೇಷ್ಠ ಶರಣರು ಕೊಂಡಾಡಿದ್ದಾರೆ. ಶರಣ  ಧರ್ಮದ ಪ್ರಮುಖ ಗ್ರಂಥವಾದ ‘ಶೂನ್ಯ ಸಂಪಾದನೆಯಲ್ಲಿ ಇವರಿಗಾಗಿಯೇ ಒಂದು ಪ್ರತ್ಯೇಕ ಅಧ್ಯಾಯವನ್ನು ಮೀಸಲಿಡಲಾಗಿದೆ. ಘಟ್ಟಿವಾಳಯ್ಯನವರ ಎರಡು ಪ್ರಮುಖ ವಚನಗಳು ಮತ್ತು ಅವುಗಳ ಸರಳ ವಿಶ್ಲೇಷಣೆ ಇಲ್ಲಿದೆ: ವಚನ ೧ ಅಟ್ಟು ಉಣ್ಣಬಲ್ಲವಂಗೆ ಅಡಿಗೆಯ ಹಂಗೇಕೆ? ಬೆಟ್ಟಿ ಬೆಳಗಬಲ್ಲವಂಗೆ ಕತ್ತಲೆಯ ಹಂಗೇಕೆ? ದಿಟ್ಟನಾದ ಭಕ್ತಂಗೆ ಭವದ ಹಂಗೇಕೆ? ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು. ವಿಶ್ಲೇಷಣೆ ಚಿಂತನೆ ಈ ವಚನದಲ್ಲಿ ಘಟ್ಟಿವಾಳಯ್ಯನವರು ಸ್ವಾವಲಂಬನೆ ಮತ್ತು ಆಧ್ಯಾತ್ಮಿಕ ದೃಢತೆಯನ್ನು ಸುಂದರವಾದ ಉಪಮೆಗಳ ಮೂಲಕ ವಿವರಿಸಿದ್ದಾರೆ. • ಸ್ವಾವಲಂಬನೆ: ತಾನೇ ಸ್ವತಃ ಅಡುಗೆ ಮಾಡಿ ಉಣ್ಣಲು ತಿಳಿದಿರುವವನಿಗೆ ಮತ್ತೊಬ್ಬರ ಅಡುಗೆಯ ಹಂಗು (ಆಶ್ರಯ) ಇರುವುದಿಲ್ಲ. ತಾನೇ ದೀಪವನ್ನು ಹಚ್ಚಿ ಬೆಳಕನ್ನು ಮೂಡಿಸಬಲ್ಲವನಿಗೆ ಕತ್ತಲೆಯ ಭಯವಾಗಲಿ ಅಥವಾ ಕತ್ತಲೆಯನ್ನು ಓಡಿಸಲು ಬೇರೆಯವರ ಸಹಾಯವಾಗಲಿ ಬೇಕಿರುವುದಿಲ್ಲ. • ಆಧ್ಯಾತ್ಮಿಕಸಂದೇಶ:  ಅದೇ ರೀತಿ, ಭಕ್ತಿಯ ಮಾರ್ಗದಲ್ಲಿ “ದಿಟ್ಟ” (ದೃಢವಾದ ನಿಷ್ಠೆ ಉಳ್ಳವನು) ಆದವನಿಗೆ ಸಂಸಾರದ ಮಾಯೆ ಅಥವಾ ಭವಬಂಧನಗಳ ಭಯವಿರುವುದಿಲ್ಲ. ತಾನೇ ಸ್ವತಃ ಅರಿವನ್ನು ಪಡೆದ ಭಕ್ತನು ಲೌಕಿಕ ಜಗತ್ತಿನ ಹಂಗಿಲ್ಲದೆ ಮುಕ್ತಿಯನ್ನು ಹೊಂದುತ್ತಾನೆ ಎಂಬುದನ್ನು ವಚನಕಾರರು ಇಲ್ಲಿ ಸ್ಪಷ್ಟಪಡಿಸಿದ್ದಾರೆ. ವಚನ ೨ ಜ್ಞಾನಿಯೆಂಬೆನೆ ಕರ್ಮ ಬಿಡದು, ಭಕ್ತನೆಂಬೆನೆ ಆಶೆ ಬಿಡದು, ಯೋಗಿಯೆಂಬೆನೆ ಅಂಗ ಬಿಡದು, ಈ ಮೂವರ ನಡಾವಳಿ ಒಂದೂ ಕಾಣೆ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು. ವಿಶ್ಲೇಷಣೆ ಸಾರ. ಈ ವಚನದಲ್ಲಿ ಘಟ್ಟಿವಾಳಯ್ಯನವರು ಸಮಾಜದಲ್ಲಿ ಕಾಣಸಿಗುವ ಡೋಂಗುತನ ಮತ್ತು ವೈಚಾರಿಕ ಅಸ್ಥಿರತೆಯನ್ನು ತೀಕ್ಷ್ಣವಾಗಿ ವಿಮರ್ಶಿಸಿದ್ದಾರೆ. • ನಕಲಿ ವೇಷಧಾರಣೆ: ಜಗತ್ತಿನಲ್ಲಿ ತಾವೇ ‘ಜ್ಞಾನಿಗಳು’ ಎಂದು ಬೀಗುವವರನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವರು ಇನ್ನೂ ಲೌಕಿಕ ಕರ್ಮಗಳಲ್ಲಿಯೇ ಮುಳುಗಿರುತ್ತಾರೆ. ತಾವು ದೊಡ್ಡ ‘ಭಕ್ತರು’ ಎಂದು ತೋರ್ಪಡಿಸಿಕೊಳ್ಳುವವರ ಮನಸ್ಸಿನಲ್ಲಿ ಆಶೆ, ಆಕಾಂಕ್ಷೆಗಳು ತುಂಬಿರುತ್ತವೆ. ಇನ್ನು ತಾವೇ ‘ಯೋಗಿಗಳು’ ಎಂದು ಕರೆಯಿಸಿಕೊಳ್ಳುವವರಿಗೆ ದೇಹದ ಮೇಲಿನ ಮೋಹ (ಅಂಗಸುಖ) ಹೋಗಿರುವುದಿಲ್ಲ. • ಅಂತರಂಗದ ಶುದ್ಧಿ:  ಕೇವಲ ಬಾಹ್ಯ ವೇಷದಿಂದ ಜ್ಞಾನಿ, ಭಕ್ತ ಅಥವಾ ಯೋಗಿಯಾಗಲು ಸಾಧ್ಯವಿಲ್ಲ. ನುಡಿದಂತೆ ನಡೆಯದ ಈ ಮೂವರ ನಡವಳಿಕೆಯೂ ವ್ಯರ್ಥ ಎಂದು ಮಾರ್ಮಿಕವಾಗಿ ಹೇಳುತ್ತಾ, ಅಂತರಂಗ ಮತ್ತು ಬಹಿರಂಗದ ಶುದ್ಧಿಯೇ ನಿಜವಾದ ಧರ್ಮ ಎಂಬುದನ್ನು ಇಲ್ಲಿ ಪ್ರತಿಪಾದಿಸಿದ್ದಾರೆ. ಕಲ್ಯಾಣ ಕ್ರಾಂತಿಯ ನಂತರ ಶರಣರು ಅಲ್ಲಮ ಬಸವಣ್ಣ ಚೆನ್ನಬಸವಣ್ಣ ಯಾವ ಯಾವ ಊರಿನಲ್ಲಿ ಐಕ್ಯವಾದರು ಎಂಬುದನ್ನು ತಮ್ಮ ವಚನಗಳಲ್ಲಿ ದಾಖಲಿಸಿದ್ದಾರೆ. ತಾನು ಕೈಕೊಂಡ ನೃತ್ಯ ಕಾಯಕದಲ್ಲಿ ನಿರತನಾಗಿದ್ದಾಗಲೇ ಬಯಲಾದನು ಎಂದು ತಿಳಿದು ಬರುತ್ತದೆ. ______________________ ಡಾ ಶಶಿಕಾಂತ ಪಟ್ಟಣ ಅಧ್ಯಕ್ಷರು ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ರಾಮದುರ್ಗ ಪುಣೆ ೯೫೫೨೦೦೨೩೩೮

Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತುಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಗಣನೀಯ ಕೊಡುಗೆ ಸಲ್ಲಿಸಿದ ಮಹಾನ್‌ ಚೇತನ ಆಯೋಗಗಳ ಮುಂದೆ ನಿಂತ ಕನ್ನಡದ ಕಾವಲುಗಾರ್ತಿ ಕರ್ನಾಟಕ ಪ್ರಾಂತ್ಯ ನಿರ್ಮಾಣ ಮತ್ತು ಕನ್ನಡನಾಡಿನ ಏಕೀಕರಣದ ಹೋರಾಟ ಒಂದೇ ದಿನದಲ್ಲಿ, ಒಂದೇ ವೇದಿಕೆಯಲ್ಲಿ ಮುಗಿದ ಹೋರಾಟವಾಗಿರಲಿಲ್ಲ. ಕಾಲ ಬದಲಾದಂತೆ ಪ್ರಶ್ನೆಗಳು ಬದಲಾದವು ಪ್ರಶ್ನೆಗಳು ಬದಲಾದಂತೆ ಸರ್ಕಾರದ ಮುಂದೆ ಹೊಸ ಆಯೋಗಗಳು, ಸಮಿತಿಗಳು ಹುಟ್ಟಿಕೊಂಡವು. ಆದರೆ ಜಯದೇವಿತಾಯಿಯವರ ಗುರಿ ಮಾತ್ರ ಬದಲಾಗಲಿಲ್ಲ…!!. ಪ್ರತಿ ಆಯೋಗವೂ ಕನ್ನಡಿಗರ ಅಸ್ತಿತ್ವವನ್ನು ಪರೀಕ್ಷಿಸುವ ಮತ್ತೊಂದು ಹಂತವಾಗಿತ್ತು. ಒಂದು ಕಡೆ ದಾಖಲೆಗಳು, ಅಂಕಿ-ಅಂಶಗಳು, ಆಡಳಿತದ ವಾದಗಳು…ಮತ್ತೊಂದು ಕಡೆ ಭಾಷೆ, ನೆಲ, ಸಂಸ್ಕೃತಿ ಮತ್ತು ಜನರ ಬದುಕಿನ ಪ್ರಶ್ನೆಗಳು. ಆಯೋಗಗಳು ಬದಲಾಗುತ್ತಿದ್ದವು,ಕಾಲ ಬದಲಾಗುತ್ತಿತ್ತು, ಹೋರಾಟದ ವಿಧಾನ ಬದಲಾಗುತ್ತಿತ್ತು…. ಆದರೆ ಜಯದೇವಿತಾಯಿಯವರ ಸಂಕಲ್ಪ ಮಾತ್ರ ಅಚಲವಾಗಿತ್ತು. ಎಲ್ಲೆಡೆ ಅವರ ಧ್ವನಿ ವಿಭಿನ್ನವಾಗಿದ್ದರೂ, ಅದರ ಅಂತರಾಳದಲ್ಲಿ ಮೊಳಗುತ್ತಿದ್ದ ಮಾತು ಒಂದೇ… “ಕನ್ನಡಿಗರಿಗೆ ಕನ್ನಡ ನಾಡು ಬೇಕು. ಕನ್ನಡಿಗರೆಲ್ಲರೂ ಒಂದಾಗಬೇಕು.ಚದುರಿಹೋಗಿದ್ದ ಕನ್ನಡಿಗರನ್ನು ಒಂದೇ ನಾಡಿನ ಅಡಿಯಲ್ಲಿ ಒಗ್ಗೂಡಿಸುವುದಾಗಿತ್ತು” ೧೯೨೮ರ ನೆಹರು ಸಮಿತಿ, ಸೈಮನ್ ಆಯೋಗ, ೧೯೨೯ರ ವಿಶ್ವನಾಥ್ ಜೋಗೂರ ಗೊತ್ತುವಳಿ, ವರದಿ,೧೯೪೮ರ ಧಾರಾ ಆಯೋಗ,೧೯೪೯ ಜೆ.ವಿ.ಪಿ ಸಮಿತಿಗೆ , ೧೯೪೬, ೧೯೫೧, ೧೯೫೨ರ ಪ್ರಾಂತ್ಯ ರಚನೆ ಆಯೋಗ, ೨೯೫೪ರಂದು ಕೆಪಿಸಿಸಿ ಉಚ್ಛಾಧಿಕಾರಿ ನಿಯೋಗದ ಉಪಸಮಿತಿ, ಫಜಲ್ ಅಲಿ ಆಯೋಗ,೧೯೫೫ರ ತ್ರಿಮೂರ್ತಿ ಆಯೋಗ, ೧೯೫೬ರ ರಾಜ್ಯ ವಿಧಾನ ಮಂಡಳಿಯ ವಿಧೇಯಕ ಸುಕೃತಿ, …೦೧-೧೧-೧೯೫೬ರಂದು ಕನ್ನಡಿಗರಿಗೆ ಪ್ರತ್ಯೇಕ ಮೈಸೂರು ರಾಜ್ಯ ದೊರಕಿದ್ದು…ಈ ಎಲ್ಲ ಹೋರಾಟಗಳಲ್ಲಿ ಜಯದೇವಿ ತಾಯಿಯವರ ಪ್ರಮುಖ ಪಾತ್ರವನ್ನು ವಹಿಸಿದ್ದರು ಧಾರಾ ಆಯೋಗ… ಸ್ವಾತಂತ್ರ ದೊರೆತ ಮೇಲೆ ಆಂಧ್ರ ಕೇರಳ ಕರ್ನಾಟಕಕ್ಕೆ ಮಹಾರಾಷ್ಟ್ರ ಭಾಷಾ ಅನುಗುಣ ಪ್ರಾಂತ ರಚನೆ ಗೆ ಧಾರ ಆಯೋಗ ನಿರ್ಮಿಸಲ್ಪಟ್ಟಿತು. ಗಡಿನಾಡ ಪ್ರದೇಶಗಳು ತಮ್ಮದೇ ಆದ ಅವಶ್ಯಕತೆಗಳನ್ನು ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ತಮಗೆ ಅನುಕೂಲಸಿದಂತೆ ಹೊಂದಿಕೊಂಡು ಬಾಳುತ್ತಿದ್ದರು… ಅವರಿಗೆ ಒಡೆಯದೆ ಅವರವರಿಗೆ ಬಿಡಬೇಕೆಂದು ೨೦- ೧೨-೪೮ ರಂದು ವರದಿಯಲ್ಲಿ ತಿಳಿಸಿತ್ತು. ಜಯದೇವಿ ತಾಯಿಯವರು ಧಾರಾ ಆಯೋಗವು ಕೊಟ್ಟ ಪರಿಹಾರವನ್ನು ಹೀಗೆ ಖಡಾ ಖಂಡಿತವಾಗಿ ಖಂಡಿಸಿದರು “ರೊಟ್ಟಿ ಬೇಡಿದ ಹೊಟ್ಟೆಗೆ ಕಲ್ಲು ಕೊಟ್ಟಂತಾಯಿತು. …ಮೊಲೆ ಕುಡಿಯುವ ಕರು ಅಟ್ಟದ ಮೇಲೆ ಹಾಲು ಕುಡಿಸುವ ಆಕಳು ಬೆಟ್ಟದ ಮೇಲೆ ಇದ್ದಂತೆ ಹಾಶ್ಯಾಸ್ಪದವಾದದ್ದು,ಅವಾಸ್ತವಿಕವೂ…ಆಗಿದೆ ಪ್ರಾಂತೀಕರಣವೇ ಎಲ್ಲಕ್ಕೂ ಅತ್ಯುತ್ತಮ ಉಪಾಯವೆಂಬ ಸರಳ ವಿಚಾರವೂ ಮೇಧಾವಿಗಳಿಗೆ ತಿಳಿಯದಿದ್ದದ್ದು ವಿಷಾದನೀಯ, ಯಾರಿಗೂ ಇದು ಒಪ್ಪಿದರು…. ಕನ್ನಡಿಗರಿಗೆ ಮಾತ್ರ ಪ್ರಾಂತೀಕರಣವಿಲ್ಲದ ಸ್ವಾತಂತ್ರ್ಯವು ಕೇವಲ ಕನಸಿನ ಗಂಟು ಅದನ್ನು ದೊರಕಿಸುವುದು ನಮ್ಮ ಜನ್ಮ ಸಿದ್ಧ ಹಕ್ಕು ಇಂತಹ ಸಂದಿಗ್ಧ ಸಂದರ್ಭದಲ್ಲಿ ಕನ್ನಡಿಗರು ಮುಂದಾಳುಗಳಾಗಿ ದಾರಿ ಹುಡುಕಬೇಕು “ಎಂದು ಕರೆಕೊಟ್ಟರು .ಧಾರಾ ಆಯೋಗವು ವರದಿ ಒಪ್ಪಿಸಿದ ಮೇಲೆ ಸೊಲ್ಲಾಪುರ ಎರಡು ತಾಲೂಕುಗಳಲ್ಲಿ ಒಡೆಯಲ್ಪಟ್ಟಿತು ಜಯದೇವಿ ತಾಯಿಯವರು ಎಷ್ಟೇ ವಿರೋಧಿಸಿದರು ಸೊಲ್ಲಾಪುರ ಮುಂದೆ ಒಂದಾಗಲಿಲ್ಲ. ಜೆ.ವಿ ಪಿ ಆಯೋಗವು…ಜೆ ವಿ ಪಿ ಆಯೋಗವು ೧-೪-೧೯೪೯ರಲ್ಲಿ ಒಪ್ಪಿಸಿದ ವರದಿಯಿಂದಲೂ ಕರ್ನಾಟಕ ನಿರಾಸೆಯಾಯಿತು. ಆಗ ಜಯದೇವಿ ತಾಯಿಯವರು ಸುಮ್ಮನಿರಲಿಲ್ಲ ಸಭೆ ಸಮಾರಂಭಗಳನ್ನು ಕರೆದು ಗೋತ್ತುವಳಿ ಪಾಸು ಮಾಡಿಸಿ ಕನ್ನಡಿಗರನು ಕೂಡ್ರಿಕರಸಿ ಮನವಿ ಅರ್ಪಿಸಿದರು. ಮಹಿಳಾ ಪರಿಷತ್ತನ್ನು ಕರೆದು ಒಂದು ಮಹತ್ವದ ಹೊತ್ತುವಳಿ ತೆಗೆದುಕೊಂಡರು.ಜೆವಿಪಿ ಆಯೋಗದ ವರದಿಯನ್ನು ವಿರೋಧಿಸಿ ಕರ್ನಾಟಕದ ಪ್ರತಿನಿಧಿಗಳು ಕೇಂದ್ರ ಮತ್ತು ಶಾಸನಸಭೆಗಳಿಗೆ ರಾಜೀನಾಮೆ ಕೊಡಬೇಕೆಂಬ ಬೇಡಿಕೆ ಇಟ್ಟರು….ಈ ಗೊತ್ತುವಳಿಂದ ಕರ್ನಾಟಕದ ಜನತೆಯಲ್ಲಿ ಮಿಂಚು ಸಂಚಾರವಾಯಿತು . ಎಲ್ಲ ಭಾಗಗಳಿಂದ ಬೆಂಬಲ ಬರಲು ಪ್ರಾರಂಭಿಸಿತು ಸ್ವತಂತ್ರ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿದ್ದ ನಾಗಪ್ಪಣ್ಣ ಕಾಡಾದಿವರನ್ನು ಅಭಿನಂದಿಸಲಾಯಿತು. ” ಕನ್ನಡಿಗರ ಪ್ರಾಣ ಮರಣಗಳಂಥ ಅಗ್ನಿ ಪರೀಕ್ಷೆಯ ಕಾಲದಲ್ಲಿ ಜಾತಿ ಪಂಥ ಮತ ಭೇದಗಳನ್ನು ಕಡೆಗಣಿಸಿ ಅಖಿಲ ಕನ್ನಡಿಗರ ಕುಲವೊಂದು ಎಂಬ ಭವ್ಯ ಭಾವ ನರನಾಡಿಗಳಲ್ಲಿ ಹರಿಯಲಿ…..ಭವ್ಯ ಕರ್ನಾಟಕ ಕಟ್ಟಲು ಸಿದ್ಧರಾಗಿ ಎಂದರು…ಮೈಸೂರು ಮಹಾರಾಜರು ವಂಶ ಪಾರಂಪರದಿಂದ ಜನಾನುರಾಗಿಗಳೆಂಬುದನ್ನು ಯಾರು ಮರೆಯುವಂತಿಲ್ಲ ಆದರೆ ಕನ್ನಡಿಗರು ಉಸಿರಾಡಲು ಕಷ್ಟವಾಗಿರುವ ಈ ಸಂದರ್ಭದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅಖಿಲ ಕನ್ನಡಿಗರ ಸಭೆಗೆ ಸೋಪಾನವಾದ ಮಹಾ ಕರ್ನಾಟಕದ ರಚನೆಯಲ್ಲಿ ತಮ್ಮ ಕೈ ಮೊದಲನೆಯದೆಂದು ಮುಂದೆ ಬಂದು ಅವರ ಕೀರ್ತಿ ಸಂಪಾದಿಸಬೇಕು” ಎಂದು ಸಭೆಯಲ್ಲಿ ವಿನಂತಿಸಿಕೊಂಡರು.ಈ ಗೊತ್ತುಗಳಿಗೆ ಅವಶ್ಯವಾದ ಆಂದೋಲನ ನಡೆಸಲು ಸಿದ್ಧರಾಗಬೇಕೆಂದು ಮೈಸೂರಿನ ಭಗಿನಿಯರಲ್ಲಿಯೂ ಕೇಳಿಕೊಳ್ಳುತ್ತಾರೆ .ಬಳ್ಳಾರಿ ಜಿಲ್ಲೆಯ ವಿಭಜನೆಯನ್ನು ವಿರೋಧಿಸಿ ಕರ್ನಾಟಕದಲ್ಲಿ ಅದನ್ನು ಇಡಿಯಾಗಿ ಸೇರಿಸಲು ಆಗ್ರಹ ಪಡಿಸುತ್ತಾರೆ. ಸೊಲ್ಲಾಪುರದಲ್ಲಿ ಕನ್ನಡ ಮಾತನಾಡುವುದೇ ಅಪರಾಧವೆಂದು ಕಡೆಗಣಿಸಲ್ಪಡುತ್ತಿದ್ದ ಹೆದರುತ್ತಿದ ಕಾಲದಲ್ಲಿ ಜಯದೇವಿ ತಾಯಿಯವರ ಜಯನಿಕೇತನದಲ್ಲಿ (ಸ್ವಂತ ಮನೆಯಲ್ಲಿ)ಇಂತಹ ಸಮ್ಮೇಳನಗಳನ್ನು ಹಮ್ಮಿಕೊಂಡು ಗಂಭೀರ ವಿಷಯಗಳಿಂದ ಎಲ್ಲರ ಮನ ಸೆಳೆಯುತ್ತಿದ್ದರು. ಈ ವಿಷಯವನ್ನು ಇಲ್ಲಿಗೆ ಬಿಡದೆ ಹುಬ್ಬಳ್ಳಿಯ ಅಖಿಲ ಕರ್ನಾಟಕ ರಾಜ್ಯ ನಿರ್ಮಾಣ ಸಮಿತಿ ನಿರ್ಮಿಸಿದರು. ಏಕೀಕರಣ ಸಪ್ತಾಹ ಸಹಿ ಸಂಗ್ರಹ ಮೆರವಣಿಗೆಗೆ ನಡೆದು ಮುಂದಾಳುಗಳು ರಾಜೀನಾಮೆ ಕೊಡುವಂತೆ ಒತ್ತಾಯಿಸಬೇಕೆಂದು ಜಯದೇವಿ ತಾಯಿಯವರು ತಿಳಿಸಿದರು. ಅವರು ನಡೆಸಿದ ಮಹಿಳಾಪಷತ್ತಿನ ಗೊತ್ತುವಳಿಯಲ್ಲಿ ನಿಜಲಿಂಗಪ್ಪನವರು ಮುಂದಾಗಿ ಶಾಸನಸಭೆಗಳಿಗೆ ರಾಜೀನಾಮೆ ಕೊಟ್ಟರು ಇದು ಸೊಲ್ಲಾಪುರದ ಮಹಿಳಾ ವರ್ಗಕ್ಕೆ ಉತ್ಸಾಹ ಉಕ್ಕಿ ಹರಿಯಿತು ಆದರೂ ಯಾವ ಪ್ರಯತ್ನ ಯಶಸ್ವಿಯಾಗಲಿಲ್ಲ.ಕರ್ನಾಟಕ ನಾಡ ದೇವಿಯ ಒಲುಮೆಗಾಗಿ ರಾಜೀನಾಮೆಗಳನ್ನು ಕೊಟ್ಟವರಿಗೆ ಧನ್ಯವಾದಗಳು ನಿಮ್ಮ ತ್ಯಾಗ ಮಾರ್ಗದರ್ಶನವಾಗಿದೆ ನೀವೆಲ್ಲ ಹಾಕಿಕೊಟ್ಟ ಕಾರ್ಯಕ್ಕೆ ಸೋಲಾಪುರದ ಮಹಿಳೆಯರೆಲ್ಲ ಕಂಕಣಬದ್ಧರಾಗಿ ಸಿದ್ದರಿದ್ದೇವೆ ಎಂದು ಜಯದೇವಿ ತಾಯಿಯವರು ಪತ್ರಿಕೆಗಳಿಗೆ ವರದಿ ನೀಡಿದರು ಕರ್ನಾಟಕ ಏಕೀಕರಣದ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದ ಸಂದರ್ಭದಲ್ಲಿ, ಜಯದೇವಿತಾಯಿಯವರ ಹೋರಾಟದ ತೀವ್ರತೆಯನ್ನು ತೋರಿಸುವ ಒಂದು ಮಹತ್ವದ ಘಟನೆ ಉಲ್ಲೇಖಿತವಾಗಿದೆ. ಅಖಂಡ ಕರ್ನಾಟಕದ ಕನಸಿಗಾಗಿ ಅವರು ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ರಕ್ತದಲ್ಲಿ ಪತ್ರ ಬರೆದರು ಎಂದು ಲಭ್ಯವಿರುವ ಸಂಶೋಧನಾ ದಾಖಲೆಯೊಂದು ತಿಳಿಸುತ್ತದೆ.ಕನ್ನಡಿಗರ ಚದುರಿದ ಬದುಕನ್ನು ಒಂದೇ ಆಡಳಿತದ ಅಡಿಯಲ್ಲಿ ತರಬೇಕು, ಕನ್ನಡದ ನೆಲನುಡಿಗೆ ನ್ಯಾಯ ದೊರೆಯಬೇಕು ಎಂಬ ಒತ್ತಾಯದ ಪ್ರತೀಕವಾಗಿತ್ತು. ತಮ್ಮ ರಕ್ತವನ್ನೇ ಮಸಿಯಾಗಿ ಮಾಡಿಕೊಂಡು ದೇಶದ ಪ್ರಧಾನಿಗೆ ಮನವಿ ಸಲ್ಲಿಸುವ ಮಟ್ಟಿಗೆ ಅವರ ಏಕೀಕರಣದ ಬದ್ಧತೆ ಗಾಢವಾಗಿತ್ತು. ಎಂದು ಜಯದೇವಿ ತಾಯಿಯವರು ಪತ್ರಿಕೆಗಳಿಗೆ ವರದಿ ಸಲ್ಲಿಸಿದರು.ಜೆ.ವಿ.ಪಿ ವರದಿಯ ಪರಿಣಾಮದಿಂದ ಗಡಿನಾಡಿನಲ್ಲಿ ಕನ್ನಡಿಗರ ಜಾಗೃತಿ ಅವಶ್ಯವಿತ್ತು .ಈ ಕಾಲದಲ್ಲಿ ಜಯದೇವಿಯ ಅವರು ಹೋರಾಟ ಮುಂದುವರಿಸಿದರು 3,00,000 ಜನಸಂಖ್ಯೆ ಇದ್ದ ಸೊಲ್ಲಾಪುರದಲ್ಲಿ ಕನ್ನಡದ ಅಸ್ತಿತ್ವ ಪ್ರಶ್ನಿಸುವಂತಹ ಪರಿಸ್ಥಿತಿ ಇತ್ತು ಜಯದೇವಿತಾಯಿಯವರ ಈ ನಡೆ ಅವರ ಹೋರಾಟದ ಸ್ವರೂಪವನ್ನು ನಮಗೆ ಪರಿಚಯಿಸುತ್ತದೆ. , ಏಕೀಕರಣವು ಅವರಿಗೆ ಕನ್ನಡಿಗರ ಅಸ್ತಿತ್ವಭಾಷೆ ಮತ್ತು ಸ್ವಾಭಿಮಾನದ ಪ್ರಶ್ನೆಯಾಗಿತ್ತು.(ಮೂಲಾಧಾರನಲ್ಲಿ ಲಭ್ಯವಿರುವ ಸಂಶೋಧನಾ ದಾಖಲೆಯ ಪ್ರಕಾರ…” “ಕರ್ನಾಟಕ ಏಕೀಕರಣ ಚಳವಳಿ”ಗೆ ಸಂಬಂಧಿಸಿದ ಸಂಶೋಧನಾ ಲೇಖನದಲ್ಲಿ ಜಯದೇವಿತಾಯಿಯವರು ನೆಹರು ಅವರಿಗೆ ರಕ್ತದಲ್ಲಿ ಪತ್ರ ಬರೆದ ಘಟನೆಯ ಉಲ್ಲೇಖವಿದೆ.) ಶಂಕರಗೌಡ ಪಾಟೀಲ್, ನಾರಾಯಣಪ್ಪ, ತಲ್ಲೂರು ರಾಯನಗೌಡ ಪಾಟೀಲರು ದೊಡ್ಡ ಮೀಟಿ ಅಂದಾನಪ್ಪ ಇವರೆಲ್ಲರೂ ಉಪವಾಸ ಕುಳಿತಿದ್ದ ಸತ್ಯಾಗ್ರಹ ನೋಡಿ ತಾಯಿಯವರು ನೊಂದು ನಾವೆಲ್ಲರೂ ಸೇರಿ ಹೋರಾಡೋಣ ಎಂದು ತಿಳಿಸಿ ಹೆಬ್ಬೆರಳಿನಳಿ ರಕ್ತ ಚಿಹ್ನಾಂಕೀತ ಪತ್ರ ಕಳಿಸಿದರು .ಈ ರೀತಿಯ ಘಟನೆ ಗಂಧದ ವಾತಾವರಣ ಉಂಟಾಯಿತು.ಈ ರೀತಿಯಾಗಿ ಕರ್ನಾಟಕಕ್ಕೆ ಉಳಿಯಲು ಬಿ.ಎಂ.ಶ್ರೀ, ಬೆನಗಲ್ ರಾಮರಾಯ, ಜಿನರಾಜ ಹೆಗಡೆ ಮಾಸ್ತಿ ,ಆರ.ನಾಗನಗೌಡ, ದೇವಡು ನರಸಿಂಹ ಶಾಸ್ತ್ರಿ, ಎಚ್. ಸಿದ್ದಯ್ಯ, ಬಿ.ಎಂ. ದಾತರ, ಡಿ.ಪಿ ಕರಮಕರ, ಎಸ್. ಎಸ್. ಬಸವನಾಳ, ಪಂಜೇ ಮಂಗೇಶರಾಯರು, ಗೋವಿಂದ ಪೈ, ರಾಮಕೃಷ್ಣ ಕಾರಂತ,ಎಂ.ಎಸ.ಕೃಷ್ಣ, ಬಿ. ಶಿವಮೂರ್ತಿ ಶಾಸ್ತ್ರಿ,ಎಂ. ಎಸ. ಸರ್ದಾರ್ ,ಮೋದಿ ಮೊದಲಾದವರೊಂದಿಗೆ ಹೋರಾಟದಲ್ಲಿ ಜಯದೇವಿ ತಾಯಿಯವರು ಪ್ರಮುಖರಾಗಿದ್ದರು. ೧೯೫೩ಫಜಲ್ ಅಲಿ ಆಯೋಗ… ೨೨-೧೨-೧೯೫೩-ರಂದು ಭಾರತ ಸರ್ಕಾರ ಸೈಯದ ಫಜಲ್ ಅಲಿ ಅವರ ಅಧ್ಯಕ್ಷತೆ ಪಂಡಿತ ಹೃದಯನಾಥ್ ಕುಂಜರು ಹಾಗೂ ಸರ್ದಾರ್ ಅವರ ಸದಸ್ಯತ್ವದಲ್ಲಿ ರಾಜ್ಯ ಪುನರ ರಚನಾ ಆಯೋಗ ರಚಿಸಿದರು 33 ವರ್ಷಗಳಿಂದ ಬಳ್ಳಾರಿಯ ಬಗ್ಗೆನಡೆದ ವಿವಾದ ಆರು ಸಲ ವಿಚಾರಣೆ ನಡೆದಿತ್ತು. ಮೂರು ತಾಲೂಕು ಸೇರಿಸುವ ಹಿಂದಿನ ನಿರ್ಣಯವನ್ನು ಈ ವರದಿ ಒಪ್ಪದಿದ್ದದ್ದು ಜನತೆಯಲ್ಲಿ ತೀವ್ರ ಅಸಮಾಧಾಮನ ಉಂಟು ಮಾಡಿತ್ತು. ಕಮ್ಯುನಿಸ್ಟ್ ಏಕೀಕರಣದ ಕುರಿತು ಕಾಂಗ್ರೆಸ್ ವಿಳಂಬ ನೀತಿಯನ್ನು ವಿರೋಧಿಸಿಫಜಲ್ ಅಲಿ ಕಮಿಷನ್ ಗೆ ಮನವಿ ಸಲ್ಲಿಸುವ ಕುರಿತು ಚರ್ಚಿಸಲು ದಾವಣಗೆರೆಯಲ್ಲಿ ಕನ್ನಡಿಗರ ಸರ್ವ ಪಕ್ಷಿಯ ಸಭೆಯನ್ನು ಕೈಗೊಳ್ಳಲಾಯಿತು. ಅಖಂಡ ಕರ್ನಾಟಕ ರಚನೆಯ ಕುರಿತು ಸಲ್ಲಿಸಬೇಕಾದ ಆ ಕರಡಿನ ಮನವಿಯಲ್ಲಿ ಸೊಲ್ಲಾಪುರದ ಹೆಸರನ್ನು ಕೈ ಬಿಡಲಾಗಿತ್ತು .ಈ ವಿಷಯವು ಜಯದೇವಿಯವರಿಗೆ ತಿಳಿದು ಈ ಸಭೆಗೆ ಬಂದಿದ್ದರು ಅಲ್ಲಿ ಅವರು ಮುಂದಾಳು ಕಾರ್ಯಕರ್ತರರಿಗೆ ಸೊಲ್ಲಾಪುರ ಸೇರಿಸುವಂತೆ ತಿಳಿಸಿದ ನಂತರ ಮನವಿಯಲ್ಲಿ ಸೇರಿಸಲಾಯಿತು. ಅಲ್ಲಿ ಜಯದೇವಿ ಅವರು ನೀವು ಇಂದು ಸೊಲ್ಲಾಪುರವನ್ನು ಬೇಡದೆ ಹೋದರೆ ಸೊಲ್ಲಾಪುರದಲ್ಲಿ ನಡೆಯುವ ಕನ್ನಡ ಚಳುವಳಿಯನ್ನು ಜೀವಂತವಿಡಲು ನೆರವಾಗದೆ ಹೋದರೆ ನಮಗೆ ಬೆಳಗಾವಿ ಉಳಿಯಲಾರದು ಸೊಲ್ಲಾಪುರ ಬೆಳಗಾವಿ ಕಳೆದುಕೊಂಡ ಮೇಲೆ ಅದರ ದಾಳಿ ದಾವಣಗೆರೆಗೂ ಬರಬಹುದು ನಾನೆಂದು ಇಲ್ಲಿ ಬಂದಿರುವುದು ಸೊಲ್ಲಾಪುರವನ್ನು ಉಳಿಸಿಕೊಳ್ಳಿ ಎಂದು ಹೇಳಲು ಅಲ್ಲ ಇಂದು ಸೋಲಾಪುರಕ್ಕೆ ಬಂದ ದುರ್ದಶೇ‌‌ ನಾಳೆ ದಾವಣಗೆರೆ ವರೆಗೂ ಬಾರದಿರುವಂತೆ ಜಾಗೃತವಾಗಿ ಇರುವಂತೆ ತಮ್ಮನ್ನು ಎಚ್ಚರಿಸಲು ಬಂದಿದ್ದೇನೆ ಸ್ವಾತಂತ್ರ ನಂತರ ಭಾಷಾವಾರು ಪ್ರಾಂತ ರಚನೆಗೆ ನೇಮಕವಾದ ಧರ ಮತ್ತು ಫಜಲ್ ಅಲಿ ಕಮಿಷನ್ ಎದುರು ಸೊಲ್ಲಾಪುರ ನಗರ ಅಧ್ಯಕ್ಷ ಮತ್ತು ವಿಧಾನಸಭಾ ಸದಸ್ಯರೊಡಗೊಂಡು 45 ಜನರ ಸಿಸ್ಟಮಂಡಳಿ ಹುಬ್ಬಳ್ಳಿ ಮಕ್ಕ ಮದಲಿ ಭೇಟಿಯಾಗಿ ಮನವಿ ಸಲ್ಲಿಸಿದರು ಈ ಮನವಿಯಲ್ಲಿ ಅಖಂಡ ಕರ್ನಾಟಕದಲ್ಲಿ ಸೊಲ್ಲಾಪುರ, ಬೆಳಗಾವಿ, ಕಾಸರಗೋಡ, ಮಡಕಶಿರ ,ತಾಳವಾಡ ,ಹೊಸೂರ,ಆದವಾನಿ, ಆಲೂರ, ರಾಮದುರ್ಗ, ಜತ್ತ ,ಅಕ್ಕಲಕೋಟೆ ,ದಕ್ಷಿಣ ಉಮೆರ್ಗಾಂ ಮೊದಲಾದ ಪ್ರದೇಶಗಳನ್ನು ಸೇರಿಸಿ ಅಖಂಡ ಕರ್ನಾಟಕ ರಚನೆಯಾಗಬೇಕೆಂಬ ಮನವಿ ಸಲ್ಲಿಸಲ್ಪಟ್ಟಿತು. ದೆಹಲಿಯಲ್ಲಿ ಜಯದೇವಿ ತಾಯಿಯವರ ಸಾಕ್ಷಿ ನುಡಿಯು ಸಂದರ್ಭ ಒದಗಿತು. ಈ ಸಂದರ್ಭದಲ್ಲಿ ಕೇಂದ್ರ ಗೃಹ ಮಂತ್ರಿಯಾದ ಗೋವಿಂದ್ ವಲ್ಲಭ ಪಂಥರು ಜಯದೇವಿ ತಾಯಿಯವರನ್ನು ನೋಡಿ ಪ್ರತಿ ಸಿಸ್ಟಮಂಡಳಿಯಲ್ಲಿಯೂ ನೀವು ಇರುವಿರಲ್ಲ ಎಂದು ನಗುತ್ತಾ ಕೇಳಿದಾಗ … ತಾಯಿ ಯವರು…”ಕರ್ನಾಟಕಕ್ಕೆ ಬರಬೇಕಾದ ಪ್ರತಿ ಹಳ್ಳಿಯೂ ನಮಗೆ ಸಂಬಂಧಪಟ್ಟದ್ದು ಅದರ ಪರ ವಾದಿಸುವುದು ನನ್ನ ಪ್ರಥಮ ಕರ್ತವ್ಯ” ಎಂದು ಹೇಳಿದರು. ಅವರ ಕನ್ನಡ ಪ್ರೇಮಕ್ಕೆ ,ಅವರ ವರ್ಚಸ್ಸಿಗೆ ಪಂಥರು ತಲೆಬಾಗಿದರು. ಕರ್ನಾಟಕ ಏಕೀಕರಣದ ಹೋರಾಟದಲ್ಲಿ ತಾಯಿ ನಿರಂತರವಾಗಿ ಪ್ರತಿಯೊಂದು ಸಭೆ, ಸಮಿತಿ, ಚರ್ಚೆ ಹಾಗೂ ಹೋರಾಟದ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದುದನ್ನು ಗಮನಿಸಿದ್ದ ಅವರು, ನಗುತ್ತಲೇ,“ಪ್ರತಿ ಸಮಿತಿಯಲ್ಲಿಯೂ ನೀವು ಇದ್ದೀರಲ್ಲ!” ಎಂದು ಕೇಳಿದರು.ಆ ಪ್ರಶ್ನೆಯಲ್ಲಿ ತುಸು ಆಶ್ಚರ್ಯವಿತ್ತು….ಆದರೆ ಜಯದೇವಿತಾಯಿಯವರ ಉತ್ತರದಲ್ಲಿ ಇಡೀ ಕರ್ನಾಟಕದ ನೋವು, ಕನಸು ಮತ್ತು ಹಕ್ಕಿನ ಧ್ವನಿ ಮೊಳಗಿತು.“ಕರ್ನಾಟಕಕ್ಕೆ ಬರಬೇಕಾದ ಪ್ರತಿಯೊಂದು ಹಳ್ಳಿಯೂ ನಮಗೆ ಸಂಬಂಧಪಟ್ಟದ್ದು. ಅದರ ಪರವಾಗಿ ವಾದಿಸುವುದು ನನ್ನ ಪ್ರಥಮ ಕರ್ತವ್ಯ.”ಅದು ತಾಯಿಯವರ ಬದುಕಿನ ಧ್ಯೇಯವಾಕ್ಯವಾಗಿತ್ತು.ಅವರಿಗೆ ಕರ್ನಾಟಕವೆಂದರೆ ಗಡಿಯಾಚೆ ಉಳಿದ ಪ್ರತಿಯೊಂದು ಕನ್ನಡಿಗನ ನೋವೂ ತಮ್ಮದೇ ನೋವು, ಕನ್ನಡದ ನೆಲದಿಂದ ದೂರವಾಗುವ ಪ್ರತಿಯೊಂದು ಹಳ್ಳಿಯೂ ತಮ್ಮ ಮನೆಯ ಒಂದು ಭಾಗ ಕಳೆದುಹೋದಂತೆಯೇ ಅವರಿಗೆ ಭಾಸವಾಗುತ್ತಿತ್ತು.ಅವರ ವಾದದಲ್ಲಿ ತೀಕ್ಷ್ಣತೆಯಿತ್ತು.ಕನ್ನಡಿಗರ ಹಕ್ಕನ್ನು ಗೆಲ್ಲಿಸುವ ಉದ್ದೇಶವಿತ್ತು…ತಾಯಿಯವರ ಕನ್ನಡ ಪ್ರೇಮದ ಆ

Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಶರಣರ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಕಾಯಕಯೋಗಿ ಒಕ್ಕಲಿಗ ಮುದ್ದಣ್ಣ ಹನ್ನೆರಡನೆಯ ಶತಮಾನದ ಶರಣರು ಬಸವಣ್ಣನವರ ನೇತೃತ್ವದಲ್ಲಿ ಸಮ ಸಮಾಜದ ಪರಿಕಲ್ಪನೆಯ ಅಡಿಯಲ್ಲಿ ಸಾರ್ವಕಾಲಿಕ ಸಮಾನತೆಯನ್ನು ತಂದು ಜಗತ್ತಿನಲ್ಲಿ ಸಾಮಾಜಿಕ ಧಾರ್ಮಿಕ ಸಾಹಿತಿಕ ಸಾಂಸ್ಕೃತಿಕ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ಕಾರಣ ಇಂದು ಇಡಿ ವಿಶ್ವವೆ ಬಸವಣ್ಣನವರ ತತ್ವಗಳನ್ನು ಹೆಮ್ಮೆಯಿಂದ ತಮ್ಮದಾಗಿಸಿಕೊಂಡಿದ್ದಾರೆ. ಒಕ್ಕಲಿಗ ಮುದ್ದಣ್ಣ ಅವರು 12ನೇ ಶತಮಾನದ ಬಸವಣ್ಣನವರ ಸಮಕಾಲೀನರಾದ ಒಬ್ಬ ಶ್ರೇಷ್ಠ ವಚನಕಾರರು ಮತ್ತು ಶಿವಶರಣರು. ಇವರು ಕೃಷಿ ಅಥವಾ ಬೇಸಾಯವನ್ನು ತಮ್ಮ ಮುಖ್ಯ ಕಾಯಕವನ್ನಾಗಿಸಿಕೊಂಡು ಬದುಕಿದವರು. ಒಕ್ಕಲಿಗ ಮುದ್ದಣ್ಣನವರ ಪ್ರಮುಖ ಜೀವನ ಮತ್ತು ಸಾಹಿತ್ಯದ ಪರಿಚಯದ ಒಂದು ನೋಟ: • ಕಾಲ ಮತ್ತು ಸ್ಥಳ: ಇವರು ಬಸವಾದಿ ಶರಣರ ಅವಧಿಯಲ್ಲಿ ಜೀವಿಸಿದ್ದರು ಹಾಗೂ ಇವರ ಜನ್ಮಸ್ಥಳ ಈಗಿನ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿಗೆ ಸೇರಿದ ಜೋಳದಹಾಳು ಗ್ರಾಮ. ಇವರ ತಂದೆ ತಾಯಿ ಮತ್ತು ಮಡದಿ ಮಕ್ಕಳ ಯಾವುದೇ ಉಲ್ಲೇಖ ಕಂಡು ಬಂದಿಲ್ಲ. • ಅಂಕಿತ ನಾಮ: ಮುದ್ದಣ್ಣನವರ ವಚನಗಳ ಅಂಕಿತ ನಾಮ ‘ಕಾಮಭೀಮ ಜೀವಧನದೊಡೆಯ’. • ಕಾಯಕ ಮತ್ತು ದಾಸೋಹ: ಬೇಸಾಯ ವೃತ್ತಿಯನ್ನು ಶ್ರೇಷ್ಠವೆಂದು ನಂಬಿದ್ದ ಇವರು, ನಿತ್ಯವೂ ಜಂಗಮ ದಾಸೋಹ (ಅನ್ನದಾನ) ನಡೆಸುತ್ತಿದ್ದರು. ರಾಜನು ಕೇಳಿದ ಹೆಚ್ಚಿನ ತೆರಿಗೆಯನ್ನು ನೀಡದೆ, ಆ ಹಣವನ್ನು ಶರಣರ ದಾಸೋಹಕ್ಕಾಗಿ ಬಳಸಿದ ಧೀಮಂತ ಶರಣ ಇವರಾಗಿದ್ದಾರೆ. • ವಚನ ಸಾಹಿತ್ಯ: ಪ್ರಸ್ತುತ ಇವರ ಕೇವಲ 12 ವಚನಗಳು ಮಾತ್ರ ದೊರೆತಿವೆ. ಇವರ ವಚನಗಳಲ್ಲಿ ಒಕ್ಕಲುತನದ (ವ್ಯವಸಾಯದ) ಪರಿಭಾಷೆ, ಮುಗ್ಧ ಭಕ್ತಿ ಹಾಗೂ ಸರಳ ಶೈಲಿಯನ್ನು ಕಾಣಬಹುದು. ಪ್ರಸಿದ್ಧ ವಚನದ ಸಾಲುಗಳು: “ಅಂಗವೆ ಭೂಮಿಯಾಗಿ, ಲಿಂಗವೆ ಬೆಳೆಯಾಗಿ, ವಿಶ್ವಾಸವೆಂಬ ಬತ್ತ ಒಲಿದು ಉಂಡು ಸುಖಿಯಾಗಿರಬೇಕೆಂದ ಕಾಮಭೀಮ ಜೀವಧನದೊಡೆಯ.” ಇವರ ವಚನಗಳು ಇಂದಿನ ಕೃಷಿಕರಿಗೂ ಬದುಕಿನ ಸಾರ ಮತ್ತು ಮಾರ್ಗದರ್ಶನವನ್ನು ನೀಡುತ್ತವೆ.  ಒಕ್ಕಲಿಗ ಮುದ್ದಣ್ಣ ಮತ್ತು ಅವರ ವಚನ ತಾತ್ಪರ್ಯ ಒಕ್ಕಲಿಗ ಮುದ್ದಣ್ಣನವರ ಕಾಯಕ ನಿಷ್ಠೆ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ತೋರ್ಪಡಿಸುವ ಪ್ರಮುಖ ವಚನಗಳು ಹಾಗೂ ಅವುಗಳ ಸರಳ ವಿಶ್ಲೇಷಣೆ ಕಾಣಬಹುದು: 1. ಕೃಷಿ ಮತ್ತು ಆಧ್ಯಾತ್ಮದ ಸಮ್ಮಿಲನ (ವಚನ ವಿಶ್ಲೇಷಣೆ – ) ಅಂಗವೆ ಭೂಮಿಯಾಗಿ, ಲಿಂಗವೆ ಬೆಳೆಯಾಗಿ, ವಿಶ್ವಾಸವೆಂಬ ಬತ್ತ ಒಲಿದು ಉಂಡು ಸುಖಿಯಾಗಿರಬೇಕೆಂದ ಕಾಮಭೀಮ ಜೀವಧನದೊಡೆಯ. • ವಿಶ್ಲೇಷಣೆ:  ಈ ವಚನದಲ್ಲಿ ಮುದ್ದಣ್ಣನವರು ಬೇಸಾಯದ ಪರಿಭಾಷೆಯ ಮೂಲಕವೇ ಆತ್ಮಸಾಕ್ಷಾತ್ಕಾರದ ಹಾದಿಯನ್ನು ವಿವರಿಸಿದ್ದಾರೆ. ನಮ್ಮ ಈ ಭೌತಿಕ ಶರೀರವೇ (ಅಂಗ) ಒಂದು ಕೃಷಿ ಭೂಮಿ. ಅದರಲ್ಲಿ ಬಿತ್ತಿ ಬೆಳೆಯಬೇಕಾದ ಬೆಳೆಯೇ ದೈವತ್ವ ಅಥವಾ ‘ಲಿಂಗ’. ಈ ಬೆಳೆಯನ್ನು ಬೆಳೆಸಲು ಬೇಕಾದ ಮುಖ್ಯ ಶಕ್ತಿ ‘ವಿಶ್ವಾಸ’ ಅಥವಾ ಅಚಲವಾದ ನಂಬಿಕೆ. ಮಾನವನು ತನ್ನ ಶರೀರವೆಂಬ ಭೂಮಿಯಲ್ಲಿ ಭಕ್ತಿಯಿಂದ ಲಿಂಗ ತತ್ವವನ್ನು ಬೆಳೆಸಿ, ಆ ಅರಿವಿನ ಸವಿಯನ್ನುಂಡು ಸುಖಿಯಾಗಿರಬೇಕು ಎಂದು ಅವರು ಸಂದೇಶ ನೀಡುತ್ತಾರೆ. 2. ಕಾಯಕದ ಮುಗ್ಧತೆ ಮತ್ತು ಸಮರ್ಪಣಾ ಭಾವ (ವಚನ ವಿಶ್ಲೇಷಣೆ – ) ವೇದ ಶಾಸ್ತ್ರವನೋದುವುದಕ್ಕೆ ಹಾರುವನಲ್ಲ; ಇರಿದು ಮೆರೆವುದಕ್ಕೆ ಕ್ಷತ್ರಿಯನಲ್ಲ; ಬೆರಸಿ ವ್ಯವಹಾರವ ಮಾಡುವುದಕ್ಕೆ ವೈಶ್ಯನಲ್ಲ; ಉಳುವ ಒಕ್ಕಲ ಮಗನ ತಪ್ಪ ನೋಡದೆ ಒಪ್ಪುಗೊಳ್ಳಯ್ಯಾ ಕಾಮಭೀಮ ಜೀವಧನದೊಡೆಯ. • ವಿಶ್ಲೇಷಣೆ: ಶರಣರು ಚಾತುರ್ವರ್ಣ್ಯ ಪದ್ಧತಿಯನ್ನು ಮೀರಿ ನಿಂತವರು. ಮುದ್ದಣ್ಣನವರು ಇಲ್ಲಿ ತಮ್ಮನ್ನು ತಾವು ಮುಗ್ಧ ಕೃಷಿಕನೆಂದು ಗುರುತಿಸಿಕೊಳ್ಳುತ್ತಾರೆ. “ನಾನು ವೇದ ಓದುವ ಬ್ರಾಹ್ಮಣನಲ್ಲ (ಹಾರುವ), ಯುದ್ಧ ಮಾಡುವ ಕ್ಷತ್ರಿಯನಲ್ಲ, ಅಥವಾ ಲಾಭಕ್ಕಾಗಿ ವ್ಯಾಪಾರ ಮಾಡುವ ವೈಶ್ಯನಲ್ಲ. ನಾನು ಕೇವಲ ಕರಗಷ್ಟ ಪಟ್ಟು ದುಡಿಯುವ ಉಳುವ ಒಕ್ಕಲ ಮಗ” ಎಂದು ಹೆಮ್ಮೆಯಿಂದ ಹೇಳುತ್ತಾರೆ. “ಹೊಲ ಉಳುವಾಗ ನನ್ನಿಂದ ತಿಳಿಯದೇ ತಪ್ಪುಗಳಾಗಿದ್ದರೆ (ಉದಾಹರಣೆಗೆ ಮಣ್ಣಿನಲ್ಲಿರುವ ಕ್ರಿಮಿಕೀಟಗಳಿಗೆ ನೋವಾಗುವುದು), ನನ್ನ ಮುಗ್ಧತೆಯನ್ನು ಕಂಡು ನನ್ನನ್ನು ಒಪ್ಪಿಕೋ ಪ್ರಭುವೇ” ಎಂದು ದೇವರಲ್ಲಿ ಅನನ್ಯವಾಗಿ ಪ್ರಾರ್ಥಿಸುತ್ತಾರೆ. 3. ಕೃಷಿ ಪ್ರಜ್ಞೆ ಮತ್ತು ಜ್ಞಾನದ ಅರಿವು (ವಚನ ವಿಶ್ಲೇಷಣೆ – ) ಪೈರಿಗೆ ನೀರು ಬೇಕೆಂಬಲ್ಲಿ ಉಚಿತವನರಿದು ಬಿಡಬೇಕು ಕ್ರೀಗೆ ಅರಿವು ಬೇಕೆಂಬಲ್ಲಿ ಉಭಯನರಿದು ಘಟಿಸಬೇಕು… ಬೆಳೆಯ ಕೊಯಿದ ಮತ್ತೆ ಹೊಲಕ್ಕೆ ಕಾವಲುಂಟೆ ಕಾಮಭೀಮ ಜೀವಧನದೊಡೆಯ. • ವಿಶ್ಲೇಷಣೆ: ಒಬ್ಬ ಚತುರ ರೈತನಿಗೆ ತನ್ನ ಹೊಲದ ಪೈರಿಗೆ ಯಾವಾಗ, ಎಷ್ಟು ನೀರು ಹಾಯಿಸಬೇಕು ಎಂಬ ‘ಉಚಿತ’ (ಸದಸದ್ವಿವೇಕ) ಜ್ಞಾನವಿರಬೇಕು. ಅತಿಯಾದರೆ ಬೆಳೆ ಕೊಳೆಯುತ್ತದೆ, ಕಡಿಮೆಯಾದರೆ ಒಣಗುತ್ತದೆ. ಹಾಗೆಯೇ ಮನುಷ್ಯ ಮಾಡುವ ಕಾಯಕಕ್ಕೆ (ಕ್ರಿಯೆಗೆ) ಜ್ಞಾನದ (ಅರಿವಿನ) ಬೆಂಬಲವಿರಬೇಕು. ಒಮ್ಮೆ ಸಾಧಕನು ಆಧ್ಯಾತ್ಮಿಕ ಸಾಧನೆಯೆಂಬ ‘ಬೆಳೆಯನ್ನು’ ಕೊಯ್ದು ಜೀವನ್ಮುಕ್ತನಾದ ಮೇಲೆ, ಅವನಿಗೆ ಲೌಕಿಕ ಬಂಧನಗಳಾಗಲಿ ಅಥವಾ ಶರೀರದ ಕಾವಲಿನ ಹಂಗಾಗಲಿ ಇರುವುದಿಲ್ಲ ಎಂಬುದನ್ನು ಕೃಷಿಯ ಉದಾಹರಣೆಯೊಂದಿಗೆ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಒಕ್ಕಲಿಗ ಮುದ್ದಣ್ಣನವರ ಹೆಚ್ಚಿನ ಐತಿಹಾಸಿಕ ಮಾಹಿತಿ: • ಕಾಯಕವೇ ಕೈಲಾಸ ತತ್ವ: ಅವರು ಕೇವಲ ಹೊಲದಲ್ಲಿ ದುಡಿಯುತ್ತಿರಲಿಲ್ಲ, ಆ ದುಡಿಮೆಯ ಆದಾಯದಿಂದ ನಿತ್ಯವೂ ಮನೆಗೆ ಬರುವ ಶರಣರಿಗೆ, ದಾಸೋಹಿಗಳಿಗೆ ಅನ್ನದಾನ (ಜಂಗಮ ದಾಸೋಹ) ಮಾಡುತ್ತಿದ್ದರು. • ವಚನಗಳ ವಿಶೇಷತೆ: ಇವರ ವಚನಗಳಲ್ಲಿ ನೇಗಿಲು, ಕುಂಟೆ, ಎತ್ತು, ಮಳೆ, ಹೊಲ, ಕಾವಲು ಮುಂತಾದ ಕೃಷಿ ಪರಿಭಾಷೆಗಳೇ ಆಧ್ಯಾತ್ಮಿಕ ರೂಪಕಗಳಾಗಿ ಬಳಕೆಯಾಗಿವೆ. 12ನೇ ಶತಮಾನದ ಶರಣ ಚಳವಳಿಯು ಸಮಾಜದ ಕೆಳಸ್ತರದ ಕಾಯಕಜೀವಿಗಳಿಗೆ ಹೇಗೆ ಆತ್ಮಗೌರವ ಮತ್ತು ಸಾಹಿತ್ಯದ ಅಭಿವ್ಯಕ್ತಿಯನ್ನು ನೀಡಿತು ಎಂಬುದಕ್ಕೆ ಒಕ್ಕಲಿಗ ಮುದ್ದಣ್ಣನವರೇ ಸಾಕ್ಷಿ. ಶರಣ ಸಂಸ್ಕೃತಿಗೆ ಶ್ರಮವನ್ನು ಶಿವಯೋಗವನ್ನಾಗಿಸಿದ ಶ್ರೇಷ್ಠ ಶರಣ ವಚನಕಾರ ಒಕ್ಕಲಿಗ ಮುದ್ದಣ್ಣ. ಇವರ ಬದುಕೆ ಒಂದು ಮಾದರಿಯ ಪಾಠ. ಇವರು ಜಗದ ಇತಿಹಾಸದಲ್ಲಿ ಸಾವಿಲ್ಲದ ಶರಣರು. ಡಾಶಶಿಕಾಂತ ಪಟ್ಟಣ ರಾಮದುರ್ಗ ಪುಣೆ  

Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-46 ಡಾ.ವಿಶ್ವನಾಥ್‌ ಎನ್‌ ನೇರಳೆಕಟ್ಟೆ ಅರ್ಜುನ ಉವಾಚ ಬಭ್ರುವಾಹನ ಬಲದೆದುರು ಅನುಸಾಲ್ವನ ಆಕ್ರೋಶ ಯುದ್ಧರಥವನ್ನೇ ವಾಹನವನ್ನಾಗಿಸಿಕೊಂಡು ನನ್ನೆದುರಿನ ಕದನಕ್ಕೆ ಕೆರಳಿ ಕೆರಳುತ್ತಾ ಬಂದ ಬಭ್ರುವಾಹನ. ಅವನ ನೇತೃತ್ವದ ಚತುರ್ಬಲವದು ಸಮಸ್ತ ಭೂಮಿಯನ್ನು ವ್ಯಾಪಿಸಿದಂತೆ ತೋರುತ್ತಿತ್ತು. ಧ್ವಜ ಛತ್ರ ಚಾಮರಗಳು ದೇವಲೋಕವನ್ನೇ ಆವರಿಸಿಕೊಂಡAತೆ ಕಾಣುತ್ತಿದ್ದವು. ಎದ್ದ ಧೂಳು ಸೂರ್ಯಮಂಡಲವನ್ನು ಸೂರೆಗೊಂಡAತೆ ತೋರುತ್ತಿತ್ತು.ಈಗ ನನ್ನೆದುರಿಗೆ ಬಂದುನಿAತ ಬಭ್ರುವಾಹನ ದೊಡ್ಡ ಸೈನ್ಯವನ್ನೇ ಜೊತೆಗೂಡಿಸಿಕೊಂಡು ಬಂದಿದ್ದ. ಆನೆಗಳಿದ್ದವು ಕೋಟಿಯೆಣಿಕೆಯಲ್ಲಿ. ರಥಗಳ ಸಂಖ್ಯೆಯದು ಹತ್ತು ಕೋಟಿ. ಎರಡು ಕೋಟಿಗಳಷ್ಟು ಕುದುರೆಗಳು. ಸೈನಿಕರಿದ್ದರು ಮೂರು ಕೋಟಿಗಳಷ್ಟು. ಬ್ರಹ್ಮನ ಸೃಷ್ಟಿಯಲ್ಲಿಯೇ ಅದ್ಭುತವಿದು ಎನ್ನುವಂತೆ ಬಭ್ರುವಾಹನ ಪಡೆ ಗೋಚರಿಸುತ್ತಿದ್ದದ್ದಂತೂ ನಿಜ.ಚಿತ್ರಾಂಗದೆಯ ಮಗ ಕುಳಿತಿದ್ದ ಚಿತ್ರಾಲಂಕಾರಗಳಿAದ ಶೋಭಿಸುವ ರಥದಲ್ಲಿ. ಮಣಿಮಯವಾದ ತೇರಿನಲ್ಲಿ ಕುಳಿತಿದ್ದ ಮಣಿಪುರದ ಅರಸ.ಎರಡೂ ಕಡೆಯ ಸೈನಿಕರು ಯುದ್ಧಮುಖಿಗಳಾದರು. ಶತ್ರುಭಾವವನ್ನು ತೋರಿಸುತ್ತಾ ಯುದ್ಧ ಹೂಡಿದರು ಅತಿಶಯವಾಗಿ. ರಥದ ಗಾಲಿಗಳ ಸದ್ದು, ಕುದುರೆ- ಆನೆಗಳ ಕೂಗಿನ ಧ್ವನಿ, ಸೈನಿಕರ ಅಬ್ಬರದ ಬೊಬ್ಬೆ, ಯುದ್ಧವಾದ್ಯಗಳ ಘನರವ ಇವೆಲ್ಲವೂ ಸೇರಿಕೊಂಡು ಕರ್ಣಕಠೋರವೆನಿಸುವ ಶಬ್ದ ಹೊಮ್ಮತೊಡಗಿತು.ಬಭ್ರುವಾಹನನ ಬಿಲ್ಲಿನ ಠೇಂಕಾರವದು ಸಿಡಿಲ ಆರ್ಭಟದಂತೆ ಕೇಳಿಸಿತು. ಅವನ ಚಿನ್ನದ ರಥವದು ಹೊಳೆಯುತ್ತಿತ್ತು ಮಿಂಚಿನAತೆ. ಬಾಣಗಳ ಮಳೆಯನ್ನೇ ಸುರಿಸುತ್ತಾ ನನ್ನ ಸನಿಹಕ್ಕೆ ಬಂದ ಬಭ್ರುವಾಹನ. ತಂದೆಯೆAದು ಪ್ರೀತಿಯಿಂದ ನನ್ನ ಬಳಿಗೆ ಅವನು ಮಣಿದುಬಂದಾಗ ನಾನವನನ್ನು ಮಗನೆಂದು ಒಪ್ಪಿಕೊಳ್ಳಲಿಲ್ಲ ಎಂಬ ಆಕ್ರೋಶ ಕಾಣಿಸುತ್ತಿದ್ದದ್ದು ಅವನ ಕಣ್ಣುಗಳಲ್ಲಿ.“ತಂದೆಯೊಡನೆ ಯುದ್ಧ ಬೇಡವೆಂದು ನಾನು ಒಲವಿನಿಂದ ನಿನ್ನ ಬಳಿಗೆ ಬಂದು ಪಾದಕ್ಕೆ ಎರಗಿದೆ. ಆದರೆ ನೀನು ನನ್ನನ್ನು ನಿಂದಿಸಿದೆ ಹೀನಾಯವಾಗಿ. ಏನೇ ಆದರೂ ನಿನ್ನನ್ನು ನಾನು ಜಯಿಸದೇ ಹೋದರೆ ನಾನು ನಿನ್ನ ಮಗನೇ ಅಲ್ಲ” ಎಂದು ಘರ್ಜಿಸಿದ.ಅಂದರೆ, ಅವನಿಗೆ ಯುದ್ಧ ಬೇಕಾಗಿದ್ದದ್ದು ನನ್ನ ಮಗ ಎನ್ನುವುದನ್ನು ಸಾಬೀತುಪಡಿಸಲಿಕ್ಕಾಗಿ. ಅವನು ಕದನದ ಗೆಲುವನ್ನು ಬಯಸುತ್ತಿದ್ದದ್ದು ನಾನವನ ತಂದೆ ಎನ್ನುವುದನ್ನು ರುಜುವಾತುಪಡಿಸಿಕೊಳ್ಳುವುದಕ್ಕಾಗಿ. ಈ ಯುದ್ಧ ಎನ್ನುವುದು ತನಗೆ ಅರ್ಜುನನ ಮಗ ಎಂಬ ಗುರುತಿಸುವಿಕೆಯೊಂದನ್ನು ತಂದುಕೊಡಲಿ ಎಂಬ ಭಾವ ಅವನಲ್ಲಿ ಬಲವಾಗಿದ್ದಂತೆ ತೋರಿತು. ಏನೆಂದರೂ ಅದಕ್ಕೆ ಅವಕಾಶ ಕೊಡಲಾರೆ ಎಂಬ ಹಠ ಮೂಡಿತು ನನ್ನಲ್ಲಿ.ಅಷ್ಟರಲ್ಲಿಯೇ ಬಭ್ರುವಾಹನನನ್ನು ಎದುರುಹಾಕಿಕೊಳ್ಳುವ ದಿಟ್ಟತನವನ್ನು ತೋರಿಸಿದ ಅನುಸಾಲ್ವ. “ಸತ್ತವರ ಪಂಥ ಇದಲ್ಲವೆಂದು ನಿರೂಪಿಸಲು ನೀನು ವೃಥಾ ಪುರುಷಾರ್ಥವನ್ನು ತೋರಿಸುತ್ತಿರುವಂತಿದೆ. ನಿನ್ನ ಪೌರುಷಕ್ಕೆ ಅಂಜುವವನು ನಾನಲ್ಲ. ನಿನ್ನೊಡನೆ ಹೋರಾಡಿದರೆ ಎದುರಾಗುವ ಅಪಕೀರ್ತಿಗೆ ಅಳುಕುವವನು ನಾನಲ್ಲ. ತಂದೆಯನ್ನೇ ಹೀಯಾಳಿಸುವ ಧೂರ್ತ ನೀನು” ಎಂದು ನಸುನಗೆಯಿಂದಲೇ ಖಾರನುಡಿಯನ್ನಾಡಿದ ಅನುಸಾಲ್ವ.ಒಂಭತ್ತು ಬಾಣಗಳು ಒಮ್ಮೆಲೇ ಚಿಮ್ಮಿದವು ಬಭ್ರುವಾಹನನೆಡೆಗೆ, ಅನುಸಾಲ್ವನ ಕಡೆಯಿಂದ. ಪ್ರತ್ಯುತ್ತರವಾಗಿ ನೂರು ಬಾಣಗಳನ್ನು ಸಿಡಿಸಿದ ಬಭ್ರುವಾಹನ. ಬಾಣಗಳು ಚಿಮ್ಮುತ್ತಲೇ ಹೋದವು. ಅಂತೆಯೇ ಚಿಮ್ಮಿತು ಕೆನ್ನೆತ್ತರು ಇಬ್ಬರ ಶರೀರದಿಂದಲೂ. ದೇಹದ ಅಲ್ಲಲ್ಲಿ ಗಾಯ. ಬಾಣಗಳು ಇಬ್ಬರ ಶರೀರದ ಒಳಹೋಗಿದ್ದವು. ಬಿಲ್ಲು ಬಾಣಗಳ ಪ್ರಯೋಗದಲ್ಲಿ, ಪರಾಕ್ರಮದ ಪ್ರದರ್ಶನದಲ್ಲಿ ಸಮನಾರಿಲ್ಲ ತಮಗೆ ಎಂಬAತೆ ಹೋರಾಡಿದರು ಅವರಿಬ್ಬರು.ತನಗೆ ಸಮನಾಗಿ ಸಾಹಸ ತೋರುವ ಬಭ್ರುವಾಹನನ ರೀತಿಯದು ಕ್ರೋಧ ಹುಟ್ಟಿಸಿತು ಅನುಸಾಲ್ವನಿಗೆ. ಏಳು ಬಾಣಗಳಿಂದ ಬಭ್ರುವಾಹನನ ಬತ್ತಳಿಕೆಯನ್ನು ನಾಶಮಾಡಿದ. ಎಂಟನೆಯ ಬಾಣದ ಏಟಿಗೆ ಅವನ ಧ್ವಜ ಹರಿದುಹೋಯಿತು. ಇನ್ನೊಂದು ಬಾಣದಿಂದ ಅವನ ಬಿಲ್ಲನ್ನೇ ಪುಡಿಗಟ್ಟಿದ. ಬಭ್ರುವಾಹನ ಆಘಾತಕ್ಕೆ ಒಳಗಾದವನಂತೆ ನೋಡುತ್ತಿದ್ದಾಗಲೇ ಅವನ ಕವಚವನ್ನು ಸೀಳಿ ಕೆಳಕ್ಕೆ ಬೀಳಿಸಿತು ಅನುಸಾಲ್ವ ಪ್ರಯೋಗಿತ ಅಮೋಘ ಬಾಣ. ಸಾವಿರ ಬಾಣಗಳನ್ನು ಒಂದೇ ಸಲಕ್ಕೆ ಚಿಮ್ಮಿಸಿದ ಅನುಸಾಲ್ವ. ಬಭ್ರುವಾಹನನ ರಥದ ಕುದುರೆಗಳು ಪ್ರಾಣ ಕಳೆದುಕೊಂಡವು. ರಥ ಛಿದ್ರವಾಯಿತು. ಸಾರಥಿ ಸಾವನ್ನಪ್ಪಿದ.ಅನುಸಾಲ್ವನ ಅಮಿತ ಸಾಮರ್ಥ್ಯ ನನಗೆ ಮೆಚ್ಚುಗೆಯಾಯಿತು. ಇನ್ನೇನು ಬಭ್ರುವಾಹನನೂ ಪ್ರಾಣ ಕಳೆದುಕೊಳ್ಳುತ್ತಾನೆ ಎಂದುಕೊAಡೆ.ಆದರೆ ಬಡಪೆಟ್ಟಿಗೆ ಬಸವಳಿಯುವವನಾಗಿರಲಿಲ್ಲ ಮಣಿಪುರದ ಒಡೆಯ. ತಕ್ಷಣವೇ ಇನ್ನೊಂದು ರಥವನ್ನು ಏರಿನಿಂತ. ತನ್ನ ರಥವನ್ನು ಪುಡಿಗಟ್ಟಿದ್ದ ಅನುಸಾಲ್ವನ ರಥವನ್ನೇ ಇನ್ನಿಲ್ಲವಾಗಿಸಿದ.ರಥವಿಲ್ಲದವನಾದ ಅನುಸಾಲ್ವ ಈಗ ಬಭ್ರುವಾಹನನ ಮೇಲೆ ಬಾಣ ಪ್ರಯೋಗಿಸುವುದು ಕಷ್ಟವಿತ್ತು. ತಕ್ಷಣವೇ ಅನುಸಾಲ್ವ ಕೈಗೆತ್ತಿಕೊಂಡದ್ದು ದೈತ್ಯ ಗದೆಯನ್ನು. ಬಭ್ರುವಾಹನನ ಕಡೆಗೆ ಮುನ್ನುಗ್ಗಿಹೋದ. ಇನ್ನೇನು ಅಪ್ಪಳಿಸಿಯೇ ಬಿಡುತ್ತಾನೆ ಅನುಸಾಲ್ವ ಆ ವಿಸ್ತೃತ ಗದೆಯನ್ನು ಬಭ್ರುವಾಹನನ ಮುಖದ ಮೇಲೆ ಎಂದು ತೋರಿತು ನನಗೆ. ಆ ಬಗೆಯಲ್ಲಿತ್ತು ಅನುಸಾಲ್ವನ ಆಕ್ರೋಶ.ಬಭ್ರುವಾಹನ ಬಾಣಗಳನ್ನು ಸತತವಾಗಿ ಪ್ರಯೋಗಿಸಿದ. ಅವನ ಗುರಿ ತಪ್ಪಲಿಲ್ಲ. ಬಾಣಗಳೆಲ್ಲವೂ ಅನುಸಾಲ್ವನ ಶರೀರಕ್ಕೆ ಆಳವಾದ ಆಘಾತವನ್ನು ಉಂಟುಮಾಡಿದವು. ಅನುಸಾಲ್ವ ಅತೀವ ಆಯಾಸಕ್ಕೆ ಒಳಗಾದಂತೆ ಕಂಡುಬAದ. ಅವನ ದೇಹಶಕ್ತಿ ಅಳಿದುಹೋಗಿತ್ತು. ನೋಡನೋಡುತ್ತಲೇ ನೆಲದ ಮೇಲೆ ಬಿದ್ದ ಅನುಸಾಲ್ವ. ಅವನೀಗ ಪ್ರಜ್ಞೆ ಕಳೆದುಕೊಂಡಿದ್ದ.ಆ ಕ್ಷಣದಲ್ಲಿ ಬಭ್ರುವಾಹನನನ್ನು ಸಮರ್ಥವಾಗಿ ಎದುರಿಸುವವರೊಬ್ಬರು ಬೇಕಿತ್ತು. ಯಾರವರು ನನ್ನ ಕಡೆಯವರು, ಬಭ್ರುವಾಹನನ ಶೌರ್ಯವನ್ನು ಮೆಟ್ಟಿ ನಿಲ್ಲುವವರು ಎಂದು ಸುತ್ತಮುತ್ತ ಕಣ್ಣಾಡಿಸತೊಡಗಿದೆ ನಾನು. ಅಷ್ಟರಲ್ಲಿಯೇ ಶ್ರೀಕೃಷ್ಣಸುತ ಪ್ರದ್ಯುಮ್ನ ಬಭ್ರುವಾಹನನ ಎದುರು ಹೋಗಿ ನಿಂತಾಗಿತ್ತು. ಡಾ.ವಿಶ್ವನಾಥ್‌ ಎನ್‌ ನೇರಳೆಕಟ್ಟೆ

Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ-41 ವೃತ್ತಿ ವೃತ್ತಾಂತ ಸುಜಾತಾ ರವೀಶ್ ಹೀಗಿರುವಾಗಲೇ ನಮ್ಮ ನಿಗಮದಲ್ಲಿ ಚೆಕ್ ಕೊಡುವ ಸಂಪ್ರದಾಯವನ್ನು ಕೈ ಬಿಟ್ಟು ಇನ್ನು ಮುಂದೆ ನೇರ ಬ್ಯಾಂಕ್ ಗೆ ಹಣ ವರ್ಗಾಯಿಸುವ ಪದ್ಧತಿ ಬರಲಿದೆ ಎಂಬ ವಿಷಯ ತಿಳಿಯಿತು ಅದು ಸರ್ಕಾರದ ಆಜ್ಞಾನುಸಾರ ಕ್ರಿಯೆಗೆ ಏನ್ ಈ ಎಫ್ ಟಿ(NEFT) ಎಂದು ಕರೆಯುತ್ತಿದ್ದರು. ಏನಿದು ತಿಳಿಯೋಣ ಬನ್ನಿ ಎಲ್‌ಐಸಿಯಲ್ಲಿ (LIC of India) ನೆಫ್ಟ್ (NEFT – National Electronic Funds Transfer) ಸೌಲಭ್ಯವನ್ನು 2011ರಲ್ಲಿ ಅನುಷ್ಠಾನಗೊಳಿಸಲಾಯಿತು.​ಇದರ ಮೂಲಕ ಪಾಲಿಸಿದಾರರ ಮೆಚುರಿಟಿ (Maturity), ಸರೆಂಡರ್ (Surrender), ಸಾಲ (Loan), ಹಾಗೂ ಪೆನ್ಷನ್ ಅಥವಾ ಕ್ಲೈಮ್ ಮೊತ್ತವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.​ಎಲ್‌ಐಸಿಯಲ್ಲಿ NEFT ನೋಂದಾಯಿಸುವ ಪ್ರಕ್ರಿಯೆಯ ಹಂತಗಳು:​೧. ಅಗತ್ಯ ದಾಖಲೆಗಳನ್ನು ಒಟ್ಟುಗೂಡಿಸುವುದು​NEFT ಮ್ಯಾಂಡೇಟ್ ಫಾರ್ಮ್ (NEFT Mandate Form): ಎಲ್‌ಐಸಿ ಶಾಖೆಯಲ್ಲಿ ಉಚಿತವಾಗಿ ಸಿಗುತ್ತದೆ ಅಥವಾ ಎಲ್‌ಐಸಿ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.​ರದ್ದಾದ ಚೆಕ್ (Cancelled Cheque): ಪಾಲಿಸಿದಾರರ ಹೆಸರು ಮುದ್ರಿತವಾಗಿರುವ ರದ್ದಾದ ಚೆಕ್ ಎಲೆ.(ಹೆಸರು ಮುದ್ರಿತವಿಲ್ಲದಿದ್ದರೆ, ಬ್ಯಾಂಕ್ ಪಾಸ್‌ಬುಕ್‌ನ ಮೊದಲ ಪುಟದ ಪ್ರತಿ ಅಥವಾ ಇತ್ತೀಚಿನ ಬ್ಯಾಂಕ್ સ્ટેಟ್‌ಮೆಂಟ್ ಪ್ರತಿಯನ್ನು ಸ್ವಯಂ ದೃಢೀಕರಿಸಿ ಸಲ್ಲಿಸಬೇಕು).​ಪಾನ್ ಕಾರ್ಡ್ (PAN Card): ಪ್ರತಿಯನ್ನು ಸ್ವಯಂ ದೃಢೀಕರಿಸಿ (Self-attested) ನೀಡಬೇಕು.​೨. ಫಾರ್ಮ್ ಭರ್ತಿ ಮಾಡುವುದು​ಫಾರ್ಮ್‌ನಲ್ಲಿ ಕೆಳಗಿನ ವಿವರಗಳನ್ನು ನಿಖರವಾಗಿ ಭರ್ತಿ ಮಾಡಬೇಕು:​ಪಾಲಿಸಿ ಸಂಖ್ಯೆ (Policy Number)​ಪಾಲಿಸಿದಾರರ ಹೆಸರು (Policyholder Name)​ಬ್ಯಾಂಕ್ ಹೆಸರು ಮತ್ತು ಶಾಖೆ (Bank Name & Branch)​ಬ್ಯಾಂಕ್ ಖಾತೆ ಸಂಖ್ಯೆ (Account Number)​ಖಾತೆಯ ಪ್ರಕಾರ (Savings / Current)​ಬ್ಯಾಂಕ್‌ ಐಎಫ್‌ಎಸ್‌ಸಿ ಕೋಡ್ (IFSC Code – 11 ಅಕ್ಷರಗಳ ಕೋಡ್)​ಇಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆ​೩. ದಾಖಲೆಗಳನ್ನು ಸಲ್ಲಿಸುವುದು​ಭರ್ತಿ ಮಾಡಿದ NEFT ಫಾರ್ಮ್ ಹಾಗೂ ಲಗತ್ತಿಸಿದ ದಾಖಲೆಗಳಿಗೆ (ರದ್ದಾದ ಚೆಕ್ / ಪಾಸ್‌ಬುಕ್ ಪ್ರತಿ) ಸಹಿ ಮಾಡಿ, ನಿಮ್ಮ ಪಾಲಿಸಿ ಇರುವ ಎಲ್‌ಐಸಿ ಸೇವಾ ಶಾಖೆಗೆ (Home Branch) ಅಥವಾ ಯಾವುದೇ ಸಮೀಪದ ಎಲ್‌ಐಸಿ ಶಾಖೆಗೆ ಸಲ್ಲಿಸಬೇಕು.​೪. ದೃಢೀಕರಣ ಮತ್ತು ಸಕ್ರಿಯಗೊಳಿಸುವಿಕೆ (Verification & Activation)​ಎಲ್‌ಐಸಿ ಸಿಬ್ಬಂದಿ ನಿಮ್ಮ ಬ್ಯಾಂಕ್ ವಿವರಗಳನ್ನು ಸಿಸ್ಟಮ್‌ನಲ್ಲಿ ಅಪ್‌ಡೇಟ್ ಮಾಡುತ್ತಾರೆ.​ವಿವರಗಳು ಯಶಸ್ವಿಯಾಗಿ ನೋಂದಣಿಯಾದ ನಂತರ ನಿಮ್ಮ ಮೊಬೈಲ್‌ಗೆ/ಇಮೇಲ್‌‌ಗೆ ಮೆಸೇಜ್ ಬರುತ್ತದೆ.​ಗಮನಿಸಿ: ಆನ್‌ಲೈನ್ ಮೂಲಕ (LIC Customer Portal/App) ಕೂಡ ಪಾಲಿಸಿದಾರರು ಲಾಗಿನ್ হৈ ತಮ್ಮ ಪಾಲಿಸಿಗೆ NEFT ವಿವರಗಳನ್ನು ನೇರವಾಗಿ ಅಪ್‌ಲೋಡ್ ಮಾಡಬಹುದು. ಆದರೆ ಅದು ಇನ್ನೂ ಆರಂಭದ ದಿನಗಳಾಗಿದ್ದರಿಂದ ಬ್ಯಾಂಕಿಗೆ ನೇರವಾಗಿ ಪಾವತಿ ಮಾಡಬೇಕಾಗಿದ್ದು ಫಾಲಿಸಿದಾರರ ಐಚ್ಚಿಕ ಆಪ್ಷನ್ ಆಗಿದ್ದು ಚೆಕ್ ಮೂಲಕ ಸಹ ಪಾವತಿ ಮಾಡುತ್ತಿದ್ದವು. ಆದರೆ ಪಾಲಿಸಿದಾರರ ಬ್ಯಾಂಕ್ ಖಾತೆ ವಿವರಗಳನ್ನು ತೆಗೆದುಕೊಂಡು ರಿಜಿಸ್ಟರ್ ಮಾಡುವ ಕೆಲಸ ನೂರು ಪ್ರತಿಶತ ಆಗಲೇಬೇಕಿತ್ತು. ಆದರೆ ಬಹಳ ಜನ ಇನ್ನೂ ಬ್ಯಾಂಕ್ ವಿವರಗಳನ್ನು ಕೊಡಲು ಇಷ್ಟಪಡುತ್ತಿರಲಿಲ್ಲ. ಇದರಿಂದ ಮತ್ತೊಂದು ಅನುಕೂಲ ಆದದೆಂದರೆ ಆಗ ತಾನೇ ಹೆಚ್ಚಾಗಿ ಜನಪ್ರಿಯವಾಗುತ್ತಿದ್ದ ಮೊಬೈಲ್ ನಂಬರ್ ಗಳನ್ನು ನಮ್ಮ ದಾಖಲೆಗಳಲ್ಲಿ ಅಳವಡಿಸುವುದು ಇದರಿಂದಾಗಿ ನಾವು ಪಾಲಿಸಿದಾರರನ್ನು ಸಂಪರ್ಕಿಸಬೇಕಾದಾಗ ತುಂಬಾ ಅನುಕೂಲ ಆಗುತ್ತಿತ್ತು. ಇದರ ಜೊತೆಗೆ ಇ-ಮೇಲ್ ತೆಗೆದುಕೊಳ್ಳಬೇಕು ಎಂದು ಇದ್ದರೂ ಆಗ ಬಹಳಷ್ಟು ಜನ ಈಮೇಲ್ ಉಪಯೋಗ ಮಾಡದೆ ಇದುದರಿಂದ ಅದು ಬರಿ ನಾಮಕಾವಸ್ತೆ ಕಾಲಂ ಆಗಿದ್ದಂತೂ  ಸುಳ್ಳಲ್ಲ.  ಈ ಮಧ್ಯೆ ಶಾಖೆಯಲ್ಲಿ ಎಲ್ಲರ ವಿಭಾಗದ ಬದಲಾವಣೆಯ ವಿಷಯ ಕೇಳಿ ಬರತೊಡಗಿತ್ತು ಈಗಾಗಲೇ ನಾನು ಪಾಲಿಸಿ ಸೇವಾ ವಿಭಾಗಕ್ಕೆ ಬಂದು ಮೂರು ವರ್ಷಗಳು ಉರುಳಿ ಹೋಗಿದ್ದರಿಂದ ಮತ್ತೆ ಬೇರೆಯ ವಿಭಾಗದಲ್ಲಿ ಕೆಲಸ ಮಾಡಲು ಸಿದ್ದಳಾಗಬೇಕಿತ್ತು. ಆಗಿದ್ದ ಶಾಖಾಧಿಕಾರಿ ಅನುರಾಧ ಅವರು ಸಹ ಇನ್ನೇನು ವರ್ಗವಾಗಿ ಹೋಗುವುದರಿಂದ ಅದಕ್ಕೆ ಮೊದಲು ಶಾಖೆಗಳ ವರ್ಗಾವಣೆ ಮಾಡಿ ಹೋಗಲು ನಿರ್ಧರಿಸಿದ್ದರು.  ನಮಗೆಲ್ಲ ಮೂರು ವಿಭಾಗಗಳನ್ನು ಆಯ್ಕೆ ಮಾಡಿ ಅರ್ಜಿ ಕೊಡಲು ಹೇಳಲಾಯಿತು ಅದರಲ್ಲಿ ನಾನು ವಿಕ್ರಯ ವಿಭಾಗವನ್ನು ಸಹ ಸೇರಿಸಿದೆ ಈಗಾಗಲೇ ಚಿಕ್ಕಬಳ್ಳಾಪುರದಲ್ಲಿ ಮಾತ್ರ ನಾನು ವಿಕ್ರಯ ವಿಭಾಗದಲ್ಲಿ ಕೆಲಸ ಮಾಡಿದ್ದು ಈಗ ಕಂಪ್ಯೂಟರಿಕರಣವಾದ ನಂತರ ಅಲ್ಲಿನ ಕೆಲಸ ಮಾಡಲು ಉತ್ಸುಕಳಾಗಿದ್ದೆ. ಅಲ್ಲಿಗೆ ಬೇರೆ ಯಾರು ಹೋಗಲು ಇಷ್ಟಪಡದೆ ಇದ್ದುದರಿಂದ ನನಗೆ ಅಲ್ಲಿಗೆ ವರ್ಗಾವಣೆ ಮಾಡಲು ಒಪ್ಪಿ ಆದೇಶವನ್ನು ಸಹ ಹಾಕಿ ಆಯಿತು. ಆ ಸಮಯಕ್ಕೆ ಶಾಖಾಧಿಕಾರಿಗಳ ವರ್ಗಾವಣೆ ಆದೇಶಗಳು ಆಗಿ ಅನುರಾಧರಿಗೆ ವರ್ಗಾವಣೆ ಸಿಕ್ಕಿತು. ಆದರೆ ನಮ್ಮ ಶಾಖೆಗೆ ವರ್ಗಾವಣೆ ಆಗಿಬಂದದ್ದು ನನ್ನ ತಂಗಿಯ ಪತಿ ಪ್ರಸನ್ನ ಅವರು. ವಿಕ್ರಯ ವಿಭಾಗ ನೇರವಾಗಿ ಶಾಖಾಧಿಕಾರಿಗಳ ಆಡಳಿತಕ್ಕೆ ಒಳಪಡುತ್ತದೆ ಮತ್ತು ಬೇರೆ ಯಾವ ಅಧಿಕಾರಿಗಳು ಅಲ್ಲಿ ಇರುವುದಿಲ್ಲ.‌ ಹಾಗಾಗಿ ನಾವು ಸಂಬಂಧಿಗಳು ಮಾತ್ರ ಆ ವಿಭಾಗದಲ್ಲಿ ಜವಾಬ್ದಾರರಾಗುವುದು ಸರಿ ಹೋಗುವುದಿಲ್ಲ ಎಂದು ಹೇಳಿ ಇನ್ನು ರಿಲೀವ್ ಆಗಿರದ ಅನುರಾಧ ಅವರೊಂದಿಗೆ ಮಾತನಾಡಿದರೆ, ಅವರು ಆ ವಿಷಯಕ್ಕೆ ಸ್ವಲ್ಪವೂ ಪ್ರಾಮುಖ್ಯತೆ ಕೊಡದೆ ಏನು ಆಗುವುದಿಲ್ಲ ಕೊಟ್ಟಿರುವುದನ್ನು ಮಾಡಿ ಎಂದು ಕಟುವಾಗಿ ಹೇಳಿದರು ಮತ್ತು ನಾನು ಬಲವಂತಿಸಿದಾಗ ಬೇರೆ ಯಾರಾದರೂ ಅಲ್ಲಿಗೆ ಬರುವುದಿದ್ದರೆ ಅವರೊಂದಿಗೆ ವಿನಿಮಯ ಮಾಡಿಕೊಳ್ಳಿ ಎಂದರು. ಆದರೆ ಜವಾಬ್ದಾರಿ ಹೆಚ್ಚು ಇರುತ್ತಿದ್ದ ಈ ವಿಭಾಗಕ್ಕೆ ಬಂದು ತಲೆ ಕೊಡಲು ಬೇರೆ ಯಾರು ಸಿದ್ದರಿರಲಿಲ್ಲ. ಹಾಗಾಗಿ ನಾನು ತೆಪ್ಪಗೆ ಅಲ್ಲಿಯೇ ಮುಂದುವರೆಯುವ ನಿರ್ಧಾರ ಮಾಡಬೇಕಾಯಿತು. ಈ ವೇಳೆಗೆ ನನ್ನ ತಂಗಿ ಗರ್ಭಿಣಿಯಾಗಿದ್ದು ಪೂರ ಬೆಡ್ ರೆಸ್ಟ್ ಹೇಳಿದ್ದರಿಂದ ಅವಳು ಕಚೇರಿಗೆ ಹೋಗುತ್ತಿರಲಿಲ್ಲ. ನಮ್ಮ ಶಾಖೆಯ ಬಳಿ ಸರಸ್ವತಿಪುರಂನಲ್ಲೇ ಅವರು ಮನೆ ಮಾಡಿದ್ದಾಯಿತು .ನನಗೂ ಆಫೀಸಿನಿಂದ ವಾಪಸ್ ಹೋಗುತ್ತಾ ಅವಳನ್ನು ಮಾತನಾಡಿಸಿಕೊಂಡು ಹೋಗಲು ಅಥವಾ ಅವರಲ್ಲಿಗೆ ಅವಶ್ಯಕತೆ ಇದ್ದಾಗ ಹೋಗಲು ಅನುಕೂಲ ಆಯಿತು. ಆಗ ಅಲ್ಲಿ ನನ್ನ ಜೊತೆ ಇದ್ದವರು ವೀಣಾ ಮತ್ತು ರಾಧಿಕಾ.  ಅದುವರೆಗೆ ಇದ್ದ ಪ್ರೋಗ್ರಾಮರ್ ರಾಮಚಂದ್ರ ಅವರು ವರ್ಗವಾಗಿ ರಾಜಲಕ್ಷ್ಮಿ ಅಲ್ಲಿಗೆ ಬಂದಿದ್ದಳು. ಅವಳು ಸಹ ತಮ್ಮದೇ ಯೂನಿಯನ್ ನವಳಾಗಿದ್ದು ಮೊದಲಿನಿಂದಲೂ ಗೆಳತಿ ಆದ್ದರಿಂದ ಕಂಪ್ಯೂಟರ್ಗೆ ಸಂಬಂಧಿಸಿದ ಕೆಲಸಗಳನ್ನು ಕಲಿಯಲು ಹಾಗೂ ಅವರಿಂದ ಮಾಡಿಸಿಕೊಳ್ಳಲು ತುಂಬಾ ಅನುಕೂಲವಾಗಿತ್ತು. ಈ ಮೊದಲೇ ಹೇಳಿದ ಬ್ಯಾಂಕ್ ದಾಖಲೆಗಳ ವಿವರ ಆಗ ಎಲ್ಲಾ ಪ್ರತಿನಿಧಿಗಳಿಗೂ ಕಡ್ಡಾಯ ಎಂದಾಗಿದ್ದರಿಂದ ಆಗ ಇದ್ದ ಎಲ್ಲಾ ಪ್ರತಿನಿಧಿಗಳ ಬ್ಯಾಂಕ್ ವಿವರಗಳನ್ನು ತೆಗೆದುಕೊಂಡು ಕಂಪ್ಯೂಟರ್ಗೆ ತುಂಬಿಸುವ ಒಂದು ದೊಡ್ಡ ಪ್ರಾಜೆಕ್ಟ್ ಆಗಿ ಅದನ್ನು ಒಂದೇ ಸಮ ಕುಳಿತು ಮಾಡಿದ್ದು ನನಗೆ ಈಗಲೂ ತೃಪ್ತಿ ಕೊಡುವ ವಿಷಯ. ಹಾಗೆಯೇ ಪ್ರತಿನಿಧಿಗಳಿಗೆ ಸಂಬಂಧಿಸಿದ ಕ್ಲಬ್ ರೋಸ್ಟರ್ ಕೆಲಸವು ಅಷ್ಟೇ, ಅದೇ ಮೊದಲ ಬಾರಿಗೆ ಸಂಪೂರ್ಣ ಕಂಪ್ಯೂಟರಿ ಕೃತ ಆಗಿದ್ದು ಅದನ್ನು ತುಂಬಾ ಯಶಸ್ವಿಯಾಗಿ ನಮ್ಮ ಶಾಖೆಯಲ್ಲಿಯೇ ಪ್ರಥಮ ಬಾರಿಗೆ ಮಾಡಿದ್ದು ತುಂಬಾ ಖುಷಿ ಕೊಟ್ಟಿತು. ನಾನು ಅಲ್ಲಿ ಕೆಲಸ ಮಾಡಿದ ಮೂರು ವರ್ಷಗಳಲ್ಲೂ ನಮ್ಮ ಶಾಖೆಯೇ ಮೊತ್ತ ಮೊದಲು ಈ ರೀತಿಯ ಕ್ಲಬ್ ರೋಸ್ಟರ್ ಗಳನ್ನು ಸಲ್ಲಿಸಿದ್ದು .‌ನಮ್ಮ ದೂರದ ಸಂಬಂಧಿ ಸ್ವಾಮಿ ಅವರು ಸಹ ವಿಭಾಗಿಯ ಕಚೇರಿಯ ವಿಕ್ರಯ ವಿಭಾಗದಲ್ಲೇ ಆಗ ಕೆಲಸ ಮಾಡುತ್ತಿದ್ದು ನಮಗೆ ಬೇಕಾದಾಗ ಮಾರ್ಗದರ್ಶನ ಹಾಗೂ ಸಹಕಾರ ನೀಡುತ್ತಿದ್ದರು. ಆಡಿಟ್ ಇನ್ಸ್ಪೆಕ್ಷನ್ ಎಲ್ಲದರಲ್ಲೂ ನಮ್ಮ ವಿಭಾಗ ತುಂಬಾ ಹೆಚ್ಚಿನ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ಮತ್ತೊಂದು ವಿಶೇಷ. ವಿಭಾಗಿಯ ಮಟ್ಟದ ಕ್ಲಬ್ ಸಮಾವೇಶಗಳನ್ನು ಮೈಸೂರಿನಲ್ಲಿಯೇ  ದಾಸ ಪ್ರಕಾಶ್ ಹೋಟೆಲ್ನಲ್ಲಿಯೇ ಮಾಡುತ್ತಿದ್ದು ಆ ಮೂರು ವರುಷಗಳು ಅದನ್ನು ನಿರೂಪಿಸಿ ಅಲ್ಲಿ ಭಾಗವಹಿಸುವ ಅವಕಾಶ ದೊರೆತಿತ್ತು. ಇನ್ನೊಂದು ಮುಖ್ಯವಾದ ಕೆಲಸ ಅಂದರೆ ಪ್ರತಿನಿಧಿಗಳ ಆದಾಯ ತೆರಿಗೆ ವಿಷಯ. ಎಲ್ಲಾ ಪ್ರತಿನಿಧಿಗಳು ಪ್ಯಾನ್ ಕಾರ್ಡ್ ಹೊಂದಿರದಿದ್ದ ಕಾರಣ ಅವರಿಗೆ ಕಮಿಷನ್ ಬಟವಾಡೆಗೆ ನಿಲುಗಡೆ ಆಗಿತ್ತು ಅವರಿಗೆ ಹೇಳಿ ಪ್ಯಾನ್ ಕಾರ್ಡ್ ಮಾಡಿಸಿ ಆ ವಿವರಗಳನ್ನು ಕಂಪ್ಯೂಟರ್ನಲ್ಲಿ ದಾಖಲಿಸುವ ಕೆಲಸವು ನಾವಿದ್ದ ಸಮಯದಲ್ಲೇ ಆಗಿದ್ದು ಎಂದು ಹೇಳಿಕೊಳ್ಳಲು ಹೆಮ್ಮೆ. ಅಲ್ಲದೆ ಪ್ರತಿನಿಧಿಗಳ ತೆರಿಗೆ ಸಲ್ಲಿಸುವ ಹಾಗೂ ಅವರಿಗೆ ಫಾರ್ಮ್ 21 ಅನ್ನು ಕೊಡುವ ಈ ಎಲ್ಲಾ ಕೆಲಸಗಳನ್ನೂ ಕಲಿತು ಮಾಡಿದ್ದು ಖುಷಿ ಕೊಟ್ಟಿತ್ತು.  ಈ ಹಿಂದೆ ಸರಿಯಾದ ಪ್ಯಾನ್ಗಳು ಇಲ್ಲದೆ ಆದಾಯ ತೆರಿಗೆ ವಿಭಾಗದಿಂದ ಕೆಲವೊಂದು ನೋಟಿಸ್ ಗಳು ಜಾರಿಯಾಗಿತ್ತು . ಅಂತಹ ನೋಟಿಸ್ ಗಳನ್ನು ನೋಡಿ ಅವುಗಳಿಗೆ ಬೇಕಾದ ವಿವರಗಳನ್ನು ಹೊಂದಿಸಿ ಅದನ್ನು ಆದಾಯ ತೆರಿಗೆ ರಿಟರ್ನಸ್ ಮಾಡಿ ಕೊಡುವಂತಹ ಕಠಿಣತರ ಕೆಲಸವನ್ನು ಸಹ ಒಂದು ಏಜೆನ್ಸಿಯ ಮೂಲಕ ತುಂಬಾ ತೃಪ್ತಿಕರವಾಗಿ ಮಾಡಿ ಯಾವುದೇ ನೋಟಿಸ್ ರಾಕಿ ಇಲ್ಲದಂತೆ ನೋಡಿಕೊಂಡಿದ್ದೆ .ಹಾಗಾಗಿ ವಿಭಾಗಿಯ ಕಚೇರಿಯವರು ಸಹ ಬೇರೆ ಯಾವುದಾದರೂ ಶಾಖೆಗೆ ನೋಟಿಸ್ ಬಂದರೆ ನನ್ನ ಮಾರ್ಗದರ್ಶನ ತೆಗೆದುಕೊಳ್ಳಲು ಹೇಳುತ್ತಿದ್ದರು. ಆ ನಾನಿದ್ದ ಸಮಯದ ಅವಧಿಯಲ್ಲಿ ವೀಣಾ ಅವರಿಗೆ ಬೇರೆ ವಿಭಾಗಕ್ಕೆ ಬದಲಾವಣೆ ದೊರಕಿ ನಾಗಮ್ಮ ಅಲ್ಲಿಗೆ ಬಂದರು. ನಾನು ರಾಧಿಕಾ ಮತ್ತು ನಾಗಮ್ಮ ತುಂಬಾ ಒಳ್ಳೆಯ ಟೀಮ್ ಆಗಿ ವರ್ಕ್ ಮಾಡಿದೆವು. ಅಲ್ಲಿ ಏನೆಲ್ಲಾ ವಿಶೇಷ ಸಾಧನೆಗಳು ಆಯಿತು ಅದೆಲ್ಲ ಈ ಟೀಮ್ ವರ್ಕ್ ನ ಫಲವೇ. ನಾನು ಹೋದ ಸ್ವಲ್ಪ ದಿನ ಒಬ್ಬ ಉಪ  ಶಾಖಾಧಿಕಾರಿಗಳು ಇದ್ದಾರಾದರೂ ಅವರಿಗೆ ಬೆಂಗಳೂರಿಗೆ ವರ್ಗ ಸಿಕ್ಕಿದ ನಂತರ ಮತ್ತೆ ಯಾವ ಉಪಶಾಖಾಧಿಕಾರಿಗಳನ್ನು ನಮ್ಮ ಶಾಖೆಗೆ ಪೋಸ್ಟ್ ಮಾಡಲಿಲ್ಲ . ಹಾಗಾಗಿ ವಿಕ್ರಯ ವಿಭಾಗದ ಮುಖ್ಯಸ್ಥೆ ಆಗಿದ್ದ ನನ್ನ ಮೇಲೆ ಸ್ವಲ್ಪ ಹೆಚ್ಚಿನ ಜವಾಬ್ದಾರಿಯೇ ಎಂದು ಹೇಳಬಹುದು. ಆದರೆ ಎಲ್ಲರ ನೆರವು ಹಾಗೂ ಶಾಖಾಧಿಕಾರಿಗಳಾಗಿದ್ದ ನಮ್ಮ ಭಾವ ಪ್ರಸನ್ನ ಅವರ ಸಹಕಾರದಿಂದಾಗಿ ತೃಪ್ತಿಕರ ಸೇವೆ ಸಲ್ಲಿಸುವ ಅವಕಾಶ ದೊರೆಯಿತು. ಆ ವೇಳೆಗೆ ನಮ್ಮ ಎಲ್ಐಸಿನಲ್ಲಿ ಎರಡನೇ ಬಾರಿಗೆ ಮನೆ ಸಾಲ ತೆಗೆದುಕೊಳ್ಳುವ ಯೋಜನೆ ಬಂದಿತ್ತು. ಹಾಗಾಗಿ ನಾನು ಮೊದಲು ಇದ್ದ ಚಿಕ್ಕ ಸೈಟಿನ ಮನೆಯನ್ನು ಮಾರಿ ಆ ಹಣದೊಂದಿಗೆ ಎರಡನೆಯ ಬಾರಿಯ ಸಾಲ ಉಪಯೋಗಿಸಿಕೊಂಡು ಈಗಿರುವ ಮನೆಯನ್ನು ಕೊಂಡುಕೊಂಡಿದ್ದು. ಹೀಗೆ ಇದೇ ಸಮಯದಲ್ಲಿ ನನ್ನ ತಂಗಿಯ ಮಗ ಸುಧನ್ವ ಸಹ ಹುಟ್ಟಿದ್ದು. ನಂತರ ನನ್ನ ತಂಗಿಗೆ ಹುಣಸೂರು ಶಾಖೆಯಿಂದ ಮೈಸೂರಿನ ಶಾಖೆ 4ಕ್ಕೆ ವರ್ಗವಾಯಿತು. ಮೂರು ವರ್ಷ ನಮ್ಮ ಶಾಖೆಯಲ್ಲಿ ಕಾರ್ಯ ನಿರ್ವಹಿಸಿದ ನಂತರ ನನ್ನ ಭಾವ ಪ್ರಸನ್ನ ಅವರಿಗೆ ನಾಗಮಂಗಲ ಶಾಖೆಗೆ ವರ್ಗವಾಗಿತ್ತು.  ಆನಂತರ ಬಂದ ಶಾಖಾಧಿಕಾರಿಗಳೇ ರಾಜಶೇಖರ ಅವರು. ನಮ್ಮ ಶಾಖೆಯ ಪದ್ಧತಿಯಂತೆ ಮೂರು ವರ್ಷ ಮುಗಿದಿದ್ದರಿಂದ ವಿಕ್ರಯ ವಿಭಾಗದಿಂದ ನನಗೆ ಮತ್ತೆ ಪಾಲಿಸಿ ಸೇವಾ ವಿಭಾಗಕ್ಕೆ ಬದಲಾವಣೆ ದೊರಕಿತು. ಈ ಬಾರಿ ಮೊದಲು ಕೆಲಸ ಮಾಡುತ್ತಿದ್ದ ಸಿಂಗಲ್ ವಿಂಡೋ ದ ಬದಲು ಪಿ ಎಸ್ ಜನರಲ್ ಎಂದು ಬೇರೆ ಎಲ್ಲಾ ಇತರೆ ಕೆಲಸಗಳು ಇದ್ದ ವಿಭಾಗ ಅಲ್ಲಿ ನಾನು ಮುಖ್ಯವಾಗಿ ನೋಡಿಕೊಳ್ಳುತ್ತಿದ್ದು ಅಸೈನ್ಮೆಂಟ್ ನಾಮಿನೇಷನ್ ರಿವೈವಲ್ ಆಲ್ಟರೇಷನ್ ಬಾಂಡ್ ರಿಲೀಸ್ ಇತ್ಯಾದಿ ಕೆಲಸಗಳು.   ಈ ವೇಳೆಗೆ ಬ್ಯಾಂಕ್ ವಿವರಗಳ್ನ ಸಲ್ಲಿಸುವಿಕೆ ಕಡ್ಡಾಯವಾಗಿದ್ದು ಚೆಕ್ ನಲ್ಲಿ ಪಾವತಿ ಮಾಡುವುದು ಪೂರ್ತಿ ನಿಂತುಹೋಗಿತ್ತು ಹಾಗಾಗಿ ಬ್ಯಾಂಕ್ ವಿವರಗಳನ್ನು ಎಲ್ಲರೂ ಸಲ್ಲಿಸುತ್ತಿದ್ದರು ಹಾಗೂ ಅದು ಒಂದು ದೊಡ್ಡ ಪ್ರಮುಖ ಕೆಲಸವಾಗಿ ಬಿಟ್ಟಿತ್ತು ಆ ವೇಳೆಗೆ

Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಭಾಷಾವಾರ ಪ್ರಾಂತ್ಯ ರಚನೆ ಭಾರತದ ಭಾಷಾ ಮತ್ತು ಸಾಂಸ್ಕೃತಿಕ ಇತಿಹಾಸವನ್ನು ಅವಲೋಕಿಸಿದಾಗ, ಸಂಸ್ಕೃತವು ದೀರ್ಘಕಾಲಿಕ ಜ್ಞಾನ, ಧರ್ಮ, ಸಾಹಿತ್ಯ ಮತ್ತು ಆಡಳಿತದ ಪ್ರಮುಖ ಭಾಷೆಯಾಗಿ ಪ್ರಭಾವ ಬೀರಿರುವುದು ಕಂಡುಬರುತ್ತದೆ.ಆದರೆ ಭಾರತದ ವಿಶಾಲ ಜನಸಮುದಾಯದ ಬದುಕು ಒಂದೇ ಭಾಷೆಯೊಳಗೆ ಸೀಮಿತವಾಗಿರಲಿಲ್ಲ. ದೇಶದ ವಿವಿಧ ಭೂಭಾಗಗಳಲ್ಲಿ ಜನರು ತಮ್ಮ ತಮ್ಮ ಸ್ಥಳೀಯ ಭಾಷೆಗಳ ಮೂಲಕ ತಮ್ಮ ಜೀವನಾನುಭವ, ಸಂಸ್ಕೃತಿ, ಪರಂಪರೆ, ಜನಪದ ಜ್ಞಾನ ಮತ್ತು ಸಾಮಾಜಿಕ ಅಸ್ತಿತ್ವವನ್ನು ಶತಮಾನಗಳಿಂದಲೂ ಉಳಿಸಿಕೊಂಡು ಬಂದಿದ್ದರು. ಬ್ರಿಟಿಷರ ಆಗಮನದ ನಂತರ ಭಾರತದ ವಿವಿಧ ಪ್ರದೇಶಗಳು ವಸಾಹತುಶಾಹಿ ಆಡಳಿತದ ಅಡಿಯಲ್ಲಿ ಬಂದವು. ರಾಜಕೀಯವಾಗಿ ಮತ್ತು ಆಡಳಿತಾತ್ಮಕವಾಗಿ ವಿಭಜಿಸಲ್ಪಟ್ಟಿದ್ದ ಈ ಪ್ರದೇಶಗಳಲ್ಲಿ ಸ್ವಾತಂತ್ರ್ಯದ ಆಶಯ ಕ್ರಮೇಣ ಬಲಗೊಳ್ಳತೊಡಗಿತು. ಪರಕೀಯ ಆಡಳಿತದಿಂದ ವಿಮೋಚನೆ ಪಡೆಯುವ ರಾಷ್ಟ್ರೀಯ ಹೋರಾಟದ ಜೊತೆಯಲ್ಲೇ, ತಮ್ಮ ನೆಲ, ನುಡಿ ಮತ್ತು ಸಂಸ್ಕೃತಿಯ ಅಸ್ತಿತ್ವವನ್ನು ಉಳಿಸಿಕೊಳ್ಳುವ ಹೋರಾಟವೂ ರೂಪುಗೊಳ್ಳತೊಡಗಿತು.  ಕನ್ನಡಿಗರ ಪಾಲಿಗೂ ಇದೇ ಭಾವನೆ ಕ್ರಮೇಣ ಒಂದು ದೊಡ್ಡ ಚಳುವಳಿಯ ರೂಪ ಪಡೆದುಕೊಂಡಿತು.ಆ ಕಾಲದಲ್ಲಿ ಕನ್ನಡ ಮಾತನಾಡುವ ಪ್ರದೇಶಗಳು  ನೆಲೆಯನ್ನು ಹೊಂದಿದ್ದ ಕನ್ನಡಿಗರು ಆಡಳಿತಾತ್ಮಕವಾಗಿ ಬೇರೆ ಬೇರೆ ಭಾಗಗಳಲ್ಲಿ ವಿಭಜಿತರಾಗಿದ್ದರು. ಈ ವಿಭಜನೆಯಿಂದ ಕನ್ನಡ ಭಾಷೆಯ ಬೆಳವಣಿಗೆಗೂ, ಕನ್ನಡಿಗರ ಒಗ್ಗಟ್ಟಿನ ಭಾವನೆಗೂ ಹಲವು ಅಡಚಣೆಗಳು ಎದುರಾದವು. ಆರಂಭದಲ್ಲಿ ಕೆಲವೇ ಚಿಂತಕರು, ಸಾಹಿತಿಗಳು ಮತ್ತು ಹೋರಾಟಗಾರರ ಮನಸ್ಸಿನಲ್ಲಿ ಮೂಡಿದ ಈ ಆಶಯ ಕ್ರಮೇಣ ಜನಮನದ ಆಶಯವಾಗಿ ಪರಿವರ್ತಿತವಾಯಿತು. ವಿವಿಧ ಸಂಘ-ಸಂಸ್ಥೆಗಳು ಸ್ಥಾಪನೆಯಾದವು. ಕನ್ನಡ ಸಾಹಿತ್ಯ ಸಮ್ಮೇಳನಗಳು, ಸಭೆಗಳು, ಉಪನ್ಯಾಸಗಳು, ಪತ್ರಿಕೆಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳ ಮೂಲಕ ಕನ್ನಡಿಗರಲ್ಲಿ ಏಕತೆಯ ಭಾವನೆ ಮೂಡಿಸಲಾಯಿತು. “ಕನ್ನಡನಾಡು ಒಂದಾಗಬೇಕು” ಎಂಬ ಕನಸು ನಿಧಾನವಾಗಿ ಸಾಮೂಹಿಕ ಸಂಕಲ್ಪವಾಗಿ ಬೆಳೆದಿತು. ಹೀಗೆ ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದ ವಿಶಾಲ ಹಿನ್ನೆಲೆಯೊಳಗೆ ಹುಟ್ಟಿಕೊಂಡ ಕನ್ನಡ ನಾಡಿನ ಏಕತೆಯ ಹೋರಾಟವು ಕಾಲಕ್ರಮೇಣ ತನ್ನದೇ ಆದ ವಿಶಿಷ್ಟ ರೂಪ ಪಡೆದುಕೊಂಡಿತು.    ಕರ್ನಾಟಕದ ಭೂಭಾಗವು ಸುಮಾರು ಇಪ್ಪತ್ತೆರಡು(೨೨) ಆಡಳಿತಾತ್ಮಕ ವಿಭಾಗಗಳಲ್ಲಿ ಚದುರಿಹೋಗಿತ್ತು. ಮೈಸೂರು ಸಂಸ್ಥಾನ, ಕೊಡಗು ಮದ್ರಾಸ್ ಪ್ರಾಂತ್ಯದಲ್ಲಿ ಬಳ್ಳಾರಿ ದಕ್ಷಿಣ ಕನ್ನಡ ಕೊಳ್ಳೇಗಾಲ, ಮುಂಬೈ ಪ್ರಾಂತ್ಯದಲ್ಲಿ ಬೆಳಗಾವಿ ಬಿಜಾಪುರ ಧಾರವಾಡ ಉತ್ತರ ಕನ್ನಡ ಜಿಲ್ಲೆಗಳಾದರೆ…. ಹೈದರಾಬಾದ ಸಂಸ್ಥಾನದಲ್ಲಿ ಗುಲ್ಬರ್ಗಾ, ಬೀದರ,ರಾಯಚೂರು ಜಿಲ್ಲೆಗಳು ಇವಅಲ್ಲದೆ ಕೇಂದ್ರ ಸರ್ಕಾರದ ನೇರ ಆಡಳಿತದಲ್ಲಿ ಬೆಂಗಳೂರು, ಬೆಳಗಾವಿ, ಬಳ್ಳಾರಿ ಪ್ರದೇಶಗಳು ಜತ್ತ, ಮುಧೋಳ, ಸೊಂಡೂರ, ಸವಣೂರ, ಸಾಂಗ್ಲಿ, ಮಿರಜ, ಜಮಖಂಡಿ, ರಾಮದುರ್ಗ ಮುಂತಾದವು ಸಂಸ್ಥಾನಿಕರ ಆಡಳಿತಕ್ಕೆ ಒಳಪಟ್ಟಿದ್ದವು. . ರಾಜಕೀಯ ಗಡಿಗಳು ಕನ್ನಡಿಗರನ್ನು ಬೇರ್ಪಡಿಸಿದ್ದರೂ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಂಧ ಮಾತ್ರ ಅವರನ್ನು ಒಳಗಿನಿಂದ ಒಂದಾಗಿಸುತ್ತಲೇ ಇತ್ತು.   ಚಳುವಳಿಗೆ ಸುಮಾರು ಒಂದೂವರೆ ಶತಮಾನದಷ್ಟು ದೀರ್ಘ ಇತಿಹಾಸವಿದೆ.ಹಲವು ತಲೆಮಾರುಗಳ ಚಿಂತನೆ, ಪರಿಶ್ರಮ, ತ್ಯಾಗ ಮತ್ತು ನಿರಂತರ ಹೋರಾಟದ ಫಲವಾಗಿ ಬೆಳೆದ ಮಹತ್ತರ ಜನಚಳುವಳಿಯಾಗಿದೆ. ಚಳುವಳಿಯ ಹಾದಿ ಸುಗಮವಾಗಿರಲಿಲ್ಲ.  ನಾಡು ನುಡಿಯ ಮೇಲಿನ ಅಭಿಮಾನ ಅವರ ಹೋರಾಟಕ್ಕೆ ನಿರಂತರ ಶಕ್ತಿಯನ್ನು ನೀಡಿತು. ಚಳುವಳಿಗೆ ಕೈಜೋಡಿಸಿದವರ ಆಶಯವು…. ಕೆಲವರ ಕನಸಾಗಿ ಉಳಿಯದೆ, ನಿಧಾನವಾಗಿ ಜನಸಾಮಾನ್ಯರ ಹಕ್ಕಿನ ಧ್ವನಿಯಾಗಿ ಮಾರ್ಪಟ್ಟಿತು.ಈ ಹೋರಾಟವು ಒಂದೇ ಹಂತದಲ್ಲಿ ತನ್ನ ಗುರಿಯನ್ನು ಸಾಧಿಸಲಿಲ್ಲ.  ಗಡಿಗಳ ಪುನರ್ವ್ಯವಸ್ಥೆಯು….. ಕನ್ನಡಿಗರ ಒಗ್ಗಟ್ಟಿನ ಪ್ರಜ್ಞೆಯ ದ್ಯೋತಕವಾಯಿತು.ಜನಮನದ ಶಕ್ತಿಯಾಗಿ ಪರಿವರ್ತಿತವಾದ ಇತಿಹಾಸವಾಯಿತು.ಕರ್ನಾಟಕ ಏಕೀಕರಣದ ಈ ದೀರ್ಘ ಹೋರಾಟವು   ಕನ್ನಡದ ನೆಲ ನುಡಿಯೊಂದಿಗೆ ಬೆಸೆದುಕೊಂಡು, ಕನ್ನಡಿಗರಲ್ಲಿ ಜಾಗೃತಿ ಮತ್ತು ಒಗ್ಗಟ್ಟಿನ ಭಾವನೆಯನ್ನು ಬೆಳೆಸಲು ಶ್ರಮಿಸಿಲು  ಜಯದೇವಿತಾಯಿಯವರು ಕರೆಕೊಡುತಿದ್ದರು.    ಒಂದೇ ರಾಜ್ಯದ ಅಡಿಯಲ್ಲಿ ಕನ್ನಡ ಮಾತನಾಡುವ ಪ್ರದೇಶಗಳು ಸೇರಿದರೂ, ಗಡಿಭಾಗಗಳ ಪ್ರಶ್ನೆ ಹೊಸ ಸವಾಲಾಗಿ ಎದುರಾಯಿತು. ಹಲವು ಕನ್ನಡ ಪ್ರದೇಶಗಳು ದೀರ್ಘಕಾಲ ಅನ್ಯಭಾಷಿಕ ಆಡಳಿತಗಳ ಅಡಿಯಲ್ಲಿ ಉಳಿದಿದ್ದರಿಂದ, ಅಲ್ಲಿ ಕನ್ನಡ ಭಾಷೆ ಮತ್ತು ಕನ್ನಡಿಗರ ಹಕ್ಕುಗಳು ಕ್ರಮೇಣ ದುರ್ಬಲಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡಕ್ಕೆ ಅಗತ್ಯವಾದ ಸ್ಥಾನ ದೊರೆಯದಿರುವುದು ಕನ್ನಡಪರ ಚಿಂತಕರಲ್ಲಿ ಆತಂಕ ಮೂಡಿಸಿತ್ತು. ಭಾಷೆಯೊಂದಿಗೆ ಜನರ ಸಂಸ್ಕೃತಿ, ಪರಂಪರೆ, ಸಾಮಾಜಿಕ ಬದುಕು ಮತ್ತು ಅಸ್ತಿತ್ವವೂ ಬೆಸೆದುಕೊಂಡಿತ್ತು. ಹೀಗಾಗಿ ಗಡಿಭಾಗದ ಕನ್ನಡಿಗರ ಹಕ್ಕುಗಳನ್ನು ರಕ್ಷಿಸುವುದು ಮತ್ತೊಂದು ಮಹತ್ವದ ಕರ್ತವ್ಯವಾಗಿ ಪರಿಣಮಿಸಿತು. ಇದೇ ಸಂದರ್ಭದಲ್ಲಿ ಸೋಲಾಪುರದಂತಹ ಕನ್ನಡಿಗರ ಬಾಂಧವ್ಯ ಹೊಂದಿದ್ದ ಪ್ರದೇಶಗಳ ಕುರಿತೂ ರಾಜಕೀಯ ಚರ್ಚೆಗಳು ನಡೆದವು. ಗಡಿಭಾಗಗಳ ಭವಿಷ್ಯವನ್ನು ನಿರ್ಧರಿಸುವ ಪ್ರಶ್ನೆ ಕೇವಲ ರಾಜಕೀಯ ನಾಯಕರ ಮಟ್ಟದಲ್ಲೇ ಉಳಿಯದೆ, ಜನಸಾಮಾನ್ಯರ ಮನಸ್ಸಿನಲ್ಲಿಯೂ ತೀವ್ರ ಆತಂಕವನ್ನು ಹುಟ್ಟಿಸಿತು.ಈ ಸಂದರ್ಭದಲ್ಲಿ ಜಯದೇವಿತಾಯಿಯವರ ಧ್ವನಿ ಮತ್ತೊಮ್ಮೆ ಸ್ಪಷ್ಟವಾಗಿ ಮೊಳಗಿತು. ಗಡಿಭಾಗದ ಜನರ ಅಭಿಪ್ರಾಯವನ್ನು ಕಡೆಗಣಿಸಿ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂಬುದು ಅವರ ದೃಢ ನಿಲುವಾಗಿತ್ತು. ಜನರ ಸಮ್ಮತಿಯಿಲ್ಲದೆ, ಅವರ ಬದುಕು ಮತ್ತು ಭಾಷೆಯ ಭವಿಷ್ಯವನ್ನು ನಿರ್ಧರಿಸುವ ಯಾವುದೇ ಒಪ್ಪಂದಕ್ಕೆ ಸರ್ಕಾರ ಮುಂದಾಗಬಾರದು ಎಂದು ಅವರು ಎಚ್ಚರಿಸಿದರು. ವಿಶೇಷವಾಗಿ ನಿಜಲಿಂಗಪ್ಪನವರಂತಹ ನಾಯಕರ ಮೇಲೆ ಕನ್ನಡಿಗರು ಇಟ್ಟಿದ್ದ ನಿರೀಕ್ಷೆಯನ್ನು ಉಲ್ಲೇಖಿಸುತ್ತಾ, ಕನ್ನಡಿಗರ ಹಿತವನ್ನು ರಕ್ಷಿಸುವ ಜವಾಬ್ದಾರಿ ನಾಯಕತ್ವದ ಮೇಲಿದೆ ಎಂಬ ಸಂದೇಶವನ್ನು ಅವರು ಸ್ಪಷ್ಟಪಡಿಸಿದರು.ಅವರ ಎಚ್ಚರಿಕೆಯ ಧ್ವನಿಯಲ್ಲಿ ಯಾವುದೇ ಒಂದು ಪ್ರದೇಶದ ಪರವಾದ ಸಂಕುಚಿತ ಮನೋಭಾವನೆಯ ಬದಲಾಗಿ, ಕರ್ನಾಟಕದ ಅಖಂಡತೆ ರಾಜಕೀಯ ಏರುಪೇರುಗಳಿಗೆ, ಜಾತಿ ಮತಗಳ ವಿಭಜನೆಗೆ ಅಥವಾ ಕ್ಷಣಿಕ ರಾಜಕೀಯ ಒತ್ತಡಗಳಿಗೆ ಬಲಿಯಾಗಬಾರದು ಎಂಬ ವಿಶಾಲ ಚಿಂತನೆ ಇತ್ತು. ೧೯೫೪-೫೫ ಮೈಸೂರು ಸಂಸ್ಥಾನದ ಶಾಸನ ಸಭೆಯ ಮುಂಗಡ ಪತ್ರದ ಅಧಿವೇಶನದಲ್ಲಿ ಕೆಂಗಲರು ಐತಿಹಾಸಿಕ ಕಾರಣಗಳು ಮೈಸೂರು ಸಂಸ್ಥಾನವನ್ನು ವಿಶಾಲ ಗೊಳಿಸುತ್ತ ಮಗ್ಗಲು ಪ್ರದೇಶದಲ್ಲಿಯೇ ಜನರು ಸ್ವಯಂ ಪ್ರೇರಣೆಯಿಂದ ಈ ಸಂಸ್ಥಾನದಲ್ಲಿ ಸೇರ್ಪಡೆ ಹೊಂದಲು ಆತುರರಾಗಿದ್ದಾಗ ಅವರೆಲ್ಲರನ್ನು ನಾವು ಅವರಾಡುವ ಭಾಷೆಯನ್ನು ಗಮನಿಸದೇ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ಹೀಗಿದ್ದರೂ ನಾವೆಲ್ಲಾ ಭಾರತೀಯರೆಂಬ ಒಂದೇ ಮಾತೃಭೂಮಿಯ ನಾಗರಿಕರಿಗೆ ಅವರನ್ನು ಸ್ವಾಗತಿಸದಿರುವುದು ಸಾಧ್ಯವಿಲ್ಲ ,ನಮ್ಮ ದೇಶ ಬಾಂಧವರು ಒಳಕ್ಕೆ ಬಾರದಂತೆ ಬಾಗಿಲನ್ನು ನಾವು ಮುಚ್ಚಿಕೊಳ್ಳುವುದೆಂದರೆ ದೇಶಪ್ರೇಮ ಮತ್ತು ಭಾತೃ ಪ್ರೇಮಿಗಳಿಗೆ ಮಿತಿಯನ್ನು ಹಾಕಿಕೊಂಡಂತೆ ಎಂದು ಹೇಳಬಹುದು ನಮ್ಮ ಧೋರಣೆಯು ರಾಜ್ಯವನ್ನು ವಿಸ್ತರಿಸುವುದಲ್ಲ, ನಮ್ಮಲ್ಲಿ ಬಂದು ಸೇರಬೇಕೆನ್ನುವವರನ್ನು ಸ್ವಾಗತಿಸುತ್ತೇವೆ. ಮುಂಬೈ ಕರ್ನಾಟಕ ಹೈದರಾಬಾದ ಕರ್ನಾಟಕವೆಂದೇ ಇಂಗ್ಲೀಷರಿಂದ ಕರೆಯಲ್ಪಟ್ಟು ಭೂ ಪ್ರದೇಶದ ಜನತೆಯ ಭಾಷೆ ಕನ್ನಡವೆನ್ನುವುದನ್ನು  ಮೈಸೂರುವನ್ನು ಬಿಟ್ಟರೆ ಉಳಿದೆಲ್ಲರೂ ಆಂಧ್ರಪ್ರದೇಶ ಮಹಾರಾಷ್ಟ್ರದವರಂತೆ ಅನ್ಯಭಾಷಿಕ ಭಿನ್ನತೆಯನ್ನು ಬಿಟ್ಟರೆ ಆ ಭಾಗದವರೆಲ್ಲರ ಭಾಷೆ ಕನ್ನಡವೆಂದು ಇಂಗ್ಲೀಷರ ಅಧ್ಯಯನ ಮಾಡಿ ಹೇಳಿದ್ದನ್ನು ಒಪ್ಪದೆ ತಿರಸ್ಕಾರದ ಭಾವನೆ ಸ್ವ ಪ್ರತಿಷ್ಠತೆಯಿಂದ ಮೈಸೂರಿನ ಜನರು ಉಳಿದಿರುವುದನ್ನು ಪರಿಕೀಯರಂತೆ ನಟಿಸುವದ ಖಂಡಿಸಿದರು.   ದೇಶಪ್ರೇಮ ಮಾತೃ ಪ್ರೇಮದ ಹೆಸರಿನಲ್ಲಿ ತಮ್ಮ ಹೆಗ್ಗಳಿಕೆಯನ್ನು ಮೆರೆಯುವ ಪ್ರಯತ್ನ ಮಾಡಿದ್ದಾರೆ ಇದಕ್ಕೆ ಹಿಂದೆ ಎರಡು ಕರ್ನಾಟಕಗಳಾಗಲಿ ಎಂದು ಅವರ ಪ್ರಯತ್ನವಿತ್ತು ಇಂಥ ಮೈಸೂರಿನವರಿಗೆ ಜಯದೇವಿ ತಾಯಿಯವರು ಖಂಡಿಸಿದ್ದಾರೆ. ಕನ್ನಡಿಗರ ಸಂದಿಗ್ಧ ಮನೋಭಾವವನ್ನು ಪ್ರಕಟಿಸಿದ ಕೆಂಗಲರು ಕನ್ನಡಿಗರ ಬಹುದಿನಗಳ ಕನಸು ನನಸಾಗದಿದ್ದಲ್ಲಿ ಅಖಿಲ ಕನ್ನಡ ಕುಲಕ್ಕೆ ಕೇಡು ಬಗೆದಂತೆ ಕನ್ನಡ ಸರ್ಕಾರವು ನಿಮ್ಮೆಲ್ಲರನ್ನು ಕ್ಷಮಿಸದು ಎಂದಿದ್ದಾರೆ . ಜಯದೇವಿ ತಾಯಿಯವರಂತ ಉದಾರಿ ನಿಸ್ವಾರ್ಥಿ ಅಧಿಕಾರದ ವ್ಯಾಮೋಹವಿಲ್ಲದ ಮಹಿಳೆಯರ ಒತ್ತಾಯಕ್ಕಾಗಿಯಾದರೂ ಮೈಸೂರಿನವರು ಅಖಂಡ ಕರ್ನಾಟಕ ನಿರ್ಮಾಣಕ್ಕೆ ಒಪ್ಪಿದರು. ಯಾವುದೇ ರಾಜಕೀಯ ಪಕ್ಷಕ್ಕೆ ಸೇರದೆ ವೈಯಕ್ತಿಕ ಹಿತಾಸಕ್ತಿಗಳಿಗೆ ಮಣಿಯದ ವೀರ ಕನ್ನಡತಿಯ ಸ್ಥಾನ ಉಳಿಸಿಕೊಂಡು ಬಂದ ಜಯದೇವಿಯವರ ನಿಶ್ಚಲ ನಿಷ್ಠೆಯೇ ಮೈಸೂರಿನವರ ಮನ ಒಲಿಸಿತು .ಅವರ ಸರಳ ಸ್ವಾಭಾವಿಕ ಸೋದರಿಕೆಯ ಅಧಿಕಾರದ ಒತ್ತಾಯವನ್ನು ಒಪ್ಪಿದರು ಎನ್ನಬಹುದಾಗಿದೆ.  ಇದೇ ಹೊತ್ತಿಗೆ ಕರ್ನಾಟಕ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾದ ಅಂಬಲಿಯವರ ನೇತೃತ್ವದ ಸದಿಚ್ಚಾ ಮಂಡಳಿಯು ಮೈಸೂರಿನಲ್ಲಿ ಪ್ರವಾಸ ತೆಗೆದುಕೊಂಡು ಜನತೆಯ ಮನವಣಿಸಲು ಪ್ರಾರಂಭಿಸಿತು. “ನೊಂದವರ ನೋವು, ನೋವೇಅರಿಯದವರಿಗೇನು ಬಲ್ಲರು?”ಎಂದು ಹೇಳುತ್ತಿದ್ದ ಜಯದೇವಿತಾಯಿಯವರ ಮನಸ್ಸಿನ ತಳಮಳ ತೊರುತಿತ್ತು. ಪರಭಾಷೆಯ ಒತ್ತಡದಲ್ಲಿ ಬದುಕುತ್ತಿರುವವನಿಗೆ ಮಾತ್ರ ತನ್ನ ಭಾಷೆಯನ್ನು ಕಳೆದುಕೊಳ್ಳುವ ನೋವು ಎಷ್ಟು ಆಳವಾದುದು ಎಂಬುದು ತಿಳಿಯುತ್ತದೆ. ತನ್ನ ಮಗುವಿನ ಶಿಕ್ಷಣದಲ್ಲಿ ತನ್ನದೇ ಮಾತೃಭಾಷೆಗೆ ಸ್ಥಾನ ದೊರೆಯದಾಗ ತಾಯಿಯ ಮನಸ್ಸಿಗೆ ಆಗುವ ನೋವು, ಆಡಳಿತ ಕಚೇರಿಯಲ್ಲಿ ತನ್ನ ಭಾಷೆಯಲ್ಲಿ ಮಾತನಾಡಲು ಸಾಧ್ಯವಾಗದಾಗ ಸಾಮಾನ್ಯ ಕನ್ನಡಿಗ ಅನುಭವಿಸುವ ಅಸಹಾಯಕತೆ….ಇವುಗಳನ್ನು ದೂರದಿಂದ ನೋಡುವವರಿಗೆ ಅರ್ಥವಾಗುವುದು ಸುಲಭವಲ್ಲ.ಎಂದು… ಹೀಗೆ ಜಯದೇವಿತಾಯಿಯವರ ಹೋರಾಟಕ್ಕೆ ಹೊಸ ಅರ್ಥ ದೊರೆಯಿತು. ಸವಿತಾ ದೇಶಮುಖ

Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಶರಣ ಸಂಗಾತಿ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ದಿಟ್ಟ ಗಣಾಚಾರಿ ಶರಣೆ ಅಮುಗೆ ರಾಯಮ್ಮ ಅಮುಗೆ ರಾಯಮ್ಮ ಸೊನ್ನಲಿಗೆ(ಈಗಿನ ಸೊಲ್ಲಾಪುರ) ಜಿಲ್ಲೆಯ ಪುಳಜೆ ಊರಿನವಳು, ನೇಕಾರ ಕುಲದವಳು, ಅಮುಗೆ ದೇವಯ್ಯನ ಧರ್ಮಪತ್ನಿ. ಇವಳ ಮೊದಲ ಹೆಸರು ವರದಾನಿಯಮ್ಮ. ಶರಣೆ ಅಕ್ಕಮ್ಮಳಂತೆ ಈಕೆಯೂ ಆಚಾರ ಶೀಲ ವ್ರತ ನೇಮ ಶೀಲ ಮತ್ತು ಸಮಾಜದ ಓರೆಕೋರೆಗಳ ಬಗ್ಗೆ ತೀಕ್ಷ್ಣವಾಗಿ ವಿಮರ್ಶಿಸಿದ್ದಾಳೆ.  ಒಬ್ಬ ದಿಟ್ಟ ಹೆಣ್ಣು ಮಗಳು ಗಣಾಚಾರಿ ಹಲವಾರು ವಚನಗಳಲ್ಲಿ ಆತ್ಮನಿರೀಕ್ಷೆಯೂ ಕಂಡುಬರುತ್ತದೆ. ಅಲ್ಲದೆ ಕೆಚ್ಚು, ಧ್ಯೆರ್ಯ,ಛಲ, ನಿಷ್ಟುರತೆ, ಆಧ್ಯಾತ್ಮ ಅಭಿಮಾನ, ವಿಡಂಬನೆ, ವಿರಾಗಿಗಳ ಕಟುಟೀಕೆ ಇತ್ಯಾದಿ ಮೂಡಿ ಬಂದಿವೆ. ಇವಳ ಲಿಂಗನಿಷ್ಠೆ ಗಾಢವಾದುದು. ಈಕೆಯ ಪಾಲಿಗೆ ಗುರು, ಲಿಂಗ, ಪತಿ ಮೂರು ಒಂದೇ. • ಪತಿ: ಶಿವಶರಣರಾದ ಅಮುಗೆ ದೇವಯ್ಯ. • ಕಾಯಕ:  ಇವರ ಕುಟುಂಬವು ನೆಯ್ಗೆಯ (ನೇಕಾರ) ಕಾಯಕದಲ್ಲಿ ತೊಡಗಿತ್ತು. • ಜೀವನ : ಬಸವಣ್ಣನವರ ಕಾಯಕ ದಾಸೋಹ ಮತ್ತು ಸಮ ಸಮಾಜದ ಪರಿಕಲ್ಪನೆಯ ಪ್ರಭಾವಕ್ಕೆ ಒಳಗಾಗಿ  ಪತಿಯೊಂದಿಗೆ ಕಲ್ಯಾಣಕ್ಕೆ ತೆರಳಿ, ಅಲ್ಲಿನ ಕ್ರಾಂತಿಯ ನಂತರ ಪುಳುಜೆಗೆ (ಪುಳಜೆ) ಬಂದು ಅಲ್ಲಿಯೇ ಐಕ್ಯರಾದರು ಎಂದು ಇತಿಹಾಸ ಹೇಳುತ್ತದೆ. ವಚನ ಸಾಹಿತ್ಯಕ್ಕೆ ಕೊಡುಗೆ • ವಚನಗಳ ಸಂಖ್ಯೆ: ಇವರ ಸುಮಾರು ೧೧೬ ವಚನಗಳು ಲಭ್ಯವಾಗಿವೆ.ಅಕ್ಕ ಮಹಾದೇವಿ ಅಕ್ಕಮ್ಮ ನೀಲಮ್ಮರ ನಂತರ ಅತಿ ಹೆಚ್ಚು ವಚನಗಳನ್ನು ಬರೆದ ಶರಣೆಯರಲ್ಲಿ ಇವರೂ ಒಬ್ಬರು. • ವಚನಾಂಕಿತ: ಇವರ ವಚನಗಳ ಅಂಕಿತನಾಮ “ಅಮುಗೇಶ್ವರಲಿಂಗ” ಅಥವಾ “ಮಹಾಲಿಂಗ ಅಮುಗೇಶ್ವರಲಿಂಗ”. • ವಚನಗಳ ಶೈಲಿ: ರಾಯಮ್ಮನವರ ವಚನಗಳಲ್ಲಿ ಗಾಢವಾದ ಲಿಂಗನಿಷ್ಠೆ, ಆತ್ಮನಿರೀಕ್ಷೆ, ಕೆಚ್ಚು ಮತ್ತು ಧೈರ್ಯ ಎದ್ದು ಕಾಣುತ್ತವೆ. ಕೇವಲ ಬಾಹ್ಯ ಆಚಾರಗಳನ್ನು ಪಾಲಿಸುತ್ತಾ ಅಧರ್ಮವಾಗಿ ನಡೆಯುವವರನ್ನು, ಕಾಷಾಯ ವಸ್ತ್ರ ತೊಟ್ಟು ಕಾಮವಿಕಾರಗಳಲ್ಲಿ ಮುಳುಗುವ ಕಪಟ ವೇಷಧಾರಿಗಳನ್ನು ತಮ್ಮ ವಚನಗಳಲ್ಲಿ ಕಟುವಾಗಿ ಟೀಕಿಸಿದ್ದಾರೆ. ಅಮುಗೆದೇವಯ್ಯ ‘ಎನ್ನ ಕಣ್ಣೊಳಗಿನ ಕಟ್ಟಿಗೆಯ ಮುರಿದವರಾರನೂ ಕಾಣೆ ಎನ್ನ ಕಾಲೊಳಗಿನ ಮುಳ್ಳ ತೆಗೆದವರಾರನೂ ಕಾಣೆ ಎನ್ನ ಅಂಗದಲ್ಲಿಪ್ಪ ಅಹಂಕಾರವ ಸುಡುವವರಾರನೂ ಕಾಣೆ ಎನ್ನ ಮನದಲ್ಲಿಪ್ಪ ಮಾಯ ಪ್ರಪಂಚವ ಕೆಡಿಸುವರಾರನೂ ಕಾಣೆನಯ್ಯಾ ಆದ್ಯರ-ವೇದ್ಯರ ವಚನಗಳಿಂದ ಅರಿದೆವೆಂಬುವರು ಅರಿಯಲಾರರು ನೋಡಾ! ಎನ್ನ ಕಣ್ಣೊಳಗಿನ ಕಟ್ಟಿಗೆಯ ನಾನೇ ಮುರಿಯಬೇಕು ಎನ್ನ ಕಾಲೊಳಗಿನ ಮುಳ್ಳ ನಾನೇ ತೆಗೆಯಬೇಕು ಎನ್ನ ಅಂಗದಲ್ಲಿಪ್ಪ ಅಹಂಕಾರವ ನಾನೇ ಸುಡಬೇಕು ಎನ್ನ ಮನದಲ್ಲಿಪ್ಪ ಮಾಯ ಪ್ರಪಂಚವ ನಾನೇ ಕಳೆಯಬೇಕು ಅಮುಗೇಶ್ವರಲಿಂಗವ ನಾನೇ ಅರಿಯಬೇಕು’. ಇನ್ನೊಂದು ವಚನವನ್ನು ನೋಡೋಣ  ಕಾಗೆಯ ಮರಿಯು ಕೋಗಿಲೆಯಾಗಬಲ್ಲುದೆ ? ಆಡಿನ ಮರಿಯು ಆನೆಯಾಗಬಲ್ಲುದೆ ? ಸೀಳನಾಯಿ ಸಿಂಹದ ಮರಿಯಾಗಬಲ್ಲುದೆ ? ಅರಿವು ಆಚಾರ ಸಮ್ಯಜ್ಞಾನವನರಿಯದೆ ನಾಮವ ಹೊತ್ತುಕೊಂಡು ತಿರುಗುವ ಗಾವಿಲರ ಮುಖವ ನೋಡಲಾಗದು ಅಮುಗೇಶ್ವರಾ. ವಚನ ವಿಶ್ಲೇಷಣೆ : ಈ ವಚನದಲ್ಲಿ ಅಮುಗೆ ರಾಯಮ್ಮನವರು ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ, ವೇಷಭೂಷಣಗಳ ಮೂಲಕ ಜನರನ್ನು ವಂಚಿಸುವ ಡಾಂಭಿಕ ಭಕ್ತರನ್ನು ಅತ್ಯಂತ ಕಠೋರವಾದ ಉಪಮೆಗಳ ಮೂಲಕ ಟೀಕಿಸಿದ್ದಾರೆ. ೧. ಬಾಹ್ಯ ಬದಲಾವಣೆ ಆಂತರಿಕ ಸತ್ಯವಾಗಲಾರದು (ಮೊದಲ ಮೂರು ಸಾಲುಗಳು): • “ಕಾಗೆಯ ಮರಿಯು ಕೋಗಿಲೆಯಾಗಬಲ್ಲುದೆ?”: ಕಾಗೆ ಮತ್ತು ಕೋಗಿಲೆ ಎರಡೂ ಕಪ್ಪಗಿದ್ದರೂ, ಕಾಗೆಯು ಕೋಗಿಲೆಯಂತೆ ಮಧುರವಾಗಿ ಹಾಡಲು ಸಾಧ್ಯವಿಲ್ಲ. • “ಆಡಿನ ಮರಿಯು ಆನೆಯಾಗಬಲ್ಲುದೆ?”: ಸಣ್ಣದಾದ ಆಡಿನ ಮರಿ ಎಂದಿಗೂ ಆನೆಯಷ್ಟು ಭವ್ಯ ಹಾಗೂ ಬಲಿಷ್ಠವಾಗಲು ಸಾಧ್ಯವಿಲ್ಲ. • “ಸೀಳನಾಯಿ ಸಿಂಹದ ಮರಿಯಾಗಬಲ್ಲುದೆ?”: ಸೀಳನಾಯಿಯು ಸಿಂಹದ ಚರ್ಮ ಹೊದ್ದರೂ ಸಿಂಹದ ಗಾಂಭೀರ್ಯ ಮತ್ತು ಶೌರ್ಯವನ್ನು ಹೊಂದಲು ಸಾಧ್ಯವಿಲ್ಲ. • ಈ ಮೂರು ನಿಸರ್ಗದ ಉದಾಹರಣೆಗಳ ಮೂಲಕ ರಾಯಮ್ಮನವರು ಹೇಳುವುದೇನೆಂದರೆ, ಕೇವಲ ವೇಷ ಬದಲಾಯಿಸಿದ ತಕ್ಷಣ ಒಬ್ಬ ವ್ಯಕ್ತಿಯ ಮೂಲ ಗುಣ ಅಥವಾ ಯೋಗ್ಯತೆ ಬದಲಾಗುವುದಿಲ್ಲ. ೨. ಡಾಂಭಿಕತೆಯ ಖಂಡನೆ  • “ಅರಿವು ಆಚಾರ ಸಮ್ಯಜ್ಞಾನವನರಿಯದೆ ನಾಮವ ಹೊತ್ತುಕೊಂಡು ತಿರುಗುವ”: ನಿಜವಾದ ಭಕ್ತನಿಗೆ ಮೂರು ಗುಣಗಳು ಮುಖ್ಯ – ಅರಿವು (ಆತ್ಮಜ್ಞಾನ), ಆಚಾರ (ಶುದ್ಧ ನಡೆ), ಮತ್ತು ಸಮ್ಯಜ್ಞಾನ (ಸದಸದ್ವಿವೇಕ ಬುದ್ಧಿ). ಆದರೆ, ಇವು ಯಾವುದನ್ನೂ ಅರಿಯದೆ ಕೇವಲ ಹಣೆಗೆ ವಿಭೂತಿ ಧರಿಸಿ, ಕೊರಳಿಗೆ ಲಿಂಗ ಅಥವಾ ರುದ್ರಾಕ್ಷಿ ನೇತುಹಾಕಿಕೊಂಡು ತಾನು ದೊಡ್ಡ ಭಕ್ತನೆಂದು “ನಾಮ” (ವೇಷ) ಹೊತ್ತು ತಿರುಗುವವರನ್ನು ರಾಯಮ್ಮ ಇಲ್ಲಿ ಪ್ರಶ್ನಿಸುತ್ತಾರೆ. ೩. ಕಟು ನಿಷ್ಠುರತೆ  • “ಗಾವಿಲರ ಮುಖವ ನೋಡಲಾಗದು ಅಮುಗೇಶ್ವರಾ”: ಅಂತರಂಗ ಶುದ್ಧಿ ಇಲ್ಲದೆ ಕೇವಲ ಬಹಿರಂಗದ ಪ್ರದರ್ಶನ ಮಾಡುವ ಅಂತಹ ಮೂರ್ಖರ (ಗಾವಿಲರ) ಮುಖವನ್ನು ನೋಡುವುದು ಕೂಡ ಪಾಪ ಎಂದು ರಾಯಮ್ಮನವರು ಅತ್ಯಂತ ನಿಷ್ಠುರತೆಯಿಂದ ಹೇಳುತ್ತಾರೆ. ಅಂತಹವರ ಭಕ್ತಿಯನ್ನು ತಮ್ಮ ಆರಾಧ್ಯದೈವ “ಅಮುಗೇಶ್ವರ” ಎಂದಿಗೂ ಒಪ್ಪಲಾರ ಎಂಬುದನ್ನು ಸ್ಪಷ್ಟಪಡಿಸುತ್ತಾರೆ. ಈ ವಚನದ ಮೂಲಕ ಅಮುಗೆ ರಾಯಮ್ಮನವರು “ನುಡಿದಂತೆ ನಡೆ, ನಡೆದಂತೆ ನುಡಿ” ಎಂಬ ಶರಣ ತತ್ವವನ್ನು ಎತ್ತಿಹಿಡಿಯುತ್ತಾರೆ. ಭಕ್ತಿ ಎಂಬುದು ಪ್ರದರ್ಶನದ ವಸ್ತುವಲ್ಲ; ಅದು ಅಂತರಂಗದ ಶುದ್ಧಿ ಮತ್ತು ಜ್ಞಾನದ ಸಂಕೇತವಾಗಿರಬೇಕು ಎಂಬ ವೈಚಾರಿಕ ಸಂದೇಶವನ್ನು ಈ ವಚನ ನಮಗೆ ನೀಡುತ್ತದೆ. ಆಯ್ದಕ್ಕಿ ಲಕ್ಕಮ್ಮನಂತೆ ದಿಟ್ಟ ವಚನಕಾರ್ತೆ ತನ್ನ ಗಂಡನೊಂದಿದೆ ಕಾಯಕ ದಾಸೋಹ ಮಾಡಿ ಕೊನೆಗೆ ನಡೆದ ಕಲ್ಯಾಣ ಕ್ರಾಂತಿಯ ನಂತರ ವಚನ ಸಾಹಿತ್ಯ ಸಂರಕ್ಷಣೆಗೆ ನಿಂತು ಸಿದ್ಧರಾಮ ಚೆನ್ನ ಬಸವಣ್ಣ ಅಕ್ಕನಾಗಮ್ಮನವರ ಜೊತೆಗೂಡಿ ವಚನಗಳ ಕಟ್ಟನ್ನು ಹೊತ್ತುಕೊಂಡು  ಸೋಮಿದೇವನ ಸೈನಿಕರನ್ನು ಎದುರಿಸುತ್ತಾ ಸೊಲ್ಲಾಪುರದ ಪುಳಜೆಗೆ ಬಂದು ಅಲ್ಲಿಯೇ ನೆಲೆಸಿ ಕೊನೆಗೆ ಅಲ್ಲಿಯೇ ಐಕ್ಯಳಾದ ಸಾವಿಲ್ಲದ ಮಹಾಶರಣೆ ಅಮುಗೆ ರಾಯಮ್ಮಳ ಜೀವನ ಸಂಘರ್ಷ ನಿಷ್ಠುರತೆ ನಮಗೆ ಇಂದಿಗೂ ಮಾದರಿಯಾಗಿವೆ. _______________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Read Post »

ಅಂಕಣ ಸಂಗಾತಿ, ಮನದ ಮಾತುಗಳು

ಅಂಕಣ ಸಂಗಾತಿ ಜ್ಯೋತಿ ಡಿ ಬೊಮ್ಮಾ ಮನದ ಮಾತುಗಳು ನಾ ನೀನೆಂಬ ಅಹಂಕಾರ ತಲೆದೂರಿದಲ್ಲಿ… ನಾ ನೀನೆಂಬ ಅಹಂಕಾರ ತಲೆದೂರಿದಲ್ಲಿ… ಎನ್ಮಾಡಲತಿರೀ ಅಕ್ಕೋರೇ ಅಂತ ಬಾಜು ಮನಿ ಅಕ್ಕೋರು ಬಾಗಿಲು ಬಡಿದರು. ಬರ್ರಿ ಒಳಗ ಅಂದೆ , ಇಲ್ರಿ ..ಬಾಳ ಕೆಲಸದ.ನಾಳಿಗಿ ನಮ್ಮನಿಗಿ ಅಪ್ಪೋರು ಹೊಂಟಾರ , ಪಾದಪೂಜಾ ಅದ.ಬರ್ರಿ.ಊಟ ಅಲ್ಲೆ ಮಾಡಬೇಕು ನೋಡ್ರಿ ಅಂದು ಗಡಿಬಿಡಿದಾಗ ಹೋದ್ರು. ಈಗ ಕೆಲ ದಿವ್ಸದಿಂದ ನನ್ನ ಪೋನ್ ದಾಗ ಬರಿ ಅಪ್ಪಗೋಳ  ( ಮಠಾಧಿಶರ ) ಮಾರಿನೆ ಕಾಣಲತದ.ಯಾಕಂದ್ರ ಮೊನ್ನೆ ಕಲ್ಬುರ್ಗಿ ದಾಗ ಬಸವಾದಿ ಶರಣರ ಹಿಂದೂ ಸಮಾವೇಶ ಮಾಡಿದ್ರು.ಭಾಳ ಜನಗಳನ್ನ ಸೇರಿಸಿದ್ರು.ಅದರ ಪ್ರಮುಖ ಸ್ವಾಮಿಯೊಬ್ರು ಕಮ್ಯೂನಿಸ್ಟ್‌ ವಿಚಾರಧಾರೆಯುಳ್ಳವ್ರಿಗೆ ಬೈದಿದ್ದೆ ಬೈದದ್ದು. ಹಿಂದೂಗಳಂದ್ರ ಅವರ ಮಾತಿಗಿ ವಿರುದ್ದ ಆಗಿದ್ದವ್ರಿಗಿ  ಬೈಯೋದು ಅಂತ ನನಗ ಆ ಸಮಾವೇಶದಿಂದ ತಿಳಿತು.ವಿರುದ್ದ ಅಂದ್ರ ಬಸವಾದಿ ಶರಣರು ಸನಾತನ ಹಿಂದೂ ಪದ್ದತಿಗಳಾದ ಹೋಮ , ಹವನ , ಗುಡಿ ಕಟ್ಟೋದು , ದೇವರ‌ಮೂರ್ತಿ ಮೆರೆಸಿ ನೀರಾಗ ಬಿಸಾಡೋದು ಇನ್ನೂ ಅನೇಕ ಆಚರಣೆಗಳನ್ನ ನಿರಾಕರಿಸಿದ್ರೂ.ಸಮಾಜದಾಗಿನ ಮೂಢ ನಂಬಿಕೆ ಹೋಗಲಾಡಿಸುವದಕ್ಕ ಪ್ರಯತ್ನಿಸಿದ್ರು.ಅದಕ್ಕೆ ಈ ಹೋಮ ಹವನ ಪೂಜಾ ಗುಡಿ ಇಂತವಕ್ಕೆಲ್ಲ ನಿಮ್ಮ ಸಮಯ ವಿನಿಯೋಗಿಸಬ್ಯಾಡ್ರಿ , ಅದೇ ಸಮಯ ದುಡಿಲಕ್ಕ ಮಿಸಲಾಗಿಡ್ರಿ , ದುಡಿರಿ , ಉಣ್ರಿ , ಬದುಕ್ರಿ ಅಂತ ಸರಳವಾಗಿ ಹೇಳಿದ್ರು. ಆದ್ರ ಇವೆಲ್ಲ ನಮ್ಮ ದೇಶದ ಸಂಪ್ರದಾಯ , ಸಂಸ್ಕೃತಿ  ಅಂತ ಮುಂದುವರೆಸಿಕೊಂಡು ಬಂದವ್ರು‌ ,  ಶರಣರ ಆಶಯಗಳಿಗಿ ವಿರುಧ್ದವಾದ ಧೋರಣೆ ಹೊಂದಿದವ್ರು. ಪ್ರಶ್ನಿಸಿದ್ರ ,   ಬಸವಾದಿ ಶರಣರು ಎಲ್ಲರಿಗೂ ಬೆರಕಾದವ್ರು . ಬರೀ ನೀವೇ ಅವರ ಪೆಟೆಂಟ್ ತಗೊಂಡಿರೇನ್ , ಅಂತ ಕೇಳತಾರ ಒಬ್ಬ ಕಟ್ಟಾ ಹಿಂದೂ ಸ್ವಾಮಿ ಗಳು. ಹೌದು ಬಸವಾದಿ ಶರಣರು ಸಮಾಜ ಸುಧಾರಕರು. ಎಲ್ಲರಿಗೂ ಆದರ್ಶ ಪ್ರಾಯರು.ಅವರ ವಿಚಾರಗಳನ್ನು ಪಾಲಿಸದ ನೀವು ಯಾಕ ಅವರ ಪೆಟೆಂಟ್ ತಗೋತಿರಿ.ನಿಮ್ಮ ವಿಚಾರಧಾರೆ ಬೆಂಬಲಿಸೋ ಇನ್ನೂ ಭಾಳ ಜನ ಸಮಾಜ ಸುಧಾರಕರಿದ್ದಾರ.ಅವರ ಪೆಟೆಂಟ್ ನೀವೇ ತಗೋರಿ ನಮಗ ಬ್ಯಾಡ. ಮೂಢ ನಂಬಿಕೆ ಅಂದರ , ದಬ್ಬಾಳಿಕೆಗೆ ಪ್ರಶ್ನಿಸಿದ್ರ , ಸಮಾನತೆ ಬೇಕು ಅಂದ್ರ ಕಮ್ಯೂನಿಸ್ಟ್‌ ಅಂತ್ರಿ. ಎಲ್ಲಾನೂ ಸುಲಭವಾಗಿ ಸಿಕ್ರ ಯಾರು ಯಾಕ ಕಮ್ಯೂನಿಸ್ಟ್‌ ಆಗತಾರ. ಹೋರಾಡಿದ್ರ ಮಾತ್ರ ಸಿಗತದ ಅಂದ್ರ ಕಮ್ಯೂನಿಸ್ಟ್‌ ಆಗ್ಲೇಬೇಕಾಗತದ. ನಾವೆಲ್ಲರೂ ಹಿಂದೂ ಒಂದು ಬಂಧು ಅಂತ ಹೆಳೊದು ಚಲೋ ಅನಿಸ್ತದ ನಮಗೂ . ಹಿಂದೂ ಅಂದ್ರ ಬರಿ  ಬ್ಯಾರೆ ಧರ್ಮದವ್ರಿಗಿ ಬೈಯೋದು , ಪಾಕಿಸ್ತಾನಕ್ಕೆ ಹೋಗಿ ಅನ್ನೊದು , ನಮ್ಮ ದೇಶದಾಗ ಬರೀ ಗುಡಿಗಳು ಮಾತ್ರ ಇರಬೇಕು ಅನ್ನೋದು ಹಿಂದುತ್ವಾನ. ಮತ್ತೊಂದು ಧರ್ಮದ ಬಗ್ಗೆ ಸಹಿಷ್ಣುತೆ ಇರದ ಯಾವ ಧರ್ಮವೂ ವ್ಯರ್ಥ. ನೀವು ಹೇಳಿದಂಗ ಎಲ್ಲರ ಆಚರಣೆ ಗೌರವಿಸೋಣ.ಪೂಜಾ ಮಾಡ್ಲಿ , ಗುಡಿಗೆ ಹೋಗ್ಲಿ , ಮಠಾಧಿಶರ ಕಾಲು ತೊಳ್ದು ನೀರು ಕುಡಿಲಿ..ಅವರವರ ಭಕುತಿಗೆ ಬಿಡೋಣ.ಆದ್ರ ಇವೆಲ್ಲ ಮಾಡದಿದ್ರ ಅವರನ್ನು ಹಿಂದುತ್ವದಿಂದ ದೂರ ಇಡಲು ನೀವು ಯಾರು..! ಒಂದು ವೇಳೆ ಈ ಎಲ್ಲಾ ಅಡಚಣೆಗಳು ಒಪ್ಪಿಕೊಳ್ಳೊಣ , ಇದರಿಂದ ಸಮಾಜಕ್ಕ ಆಗುವ ಉಪಯೋಗ ಎನು ಹೇಳ್ರಿ. ಬಾಜು ಮನಿ ಅಕ್ಕೋರು ಸ್ವಾಮಿಗಳಿಗಿ ಕರದು ಪಾದಪೂಜಿ ಮಾಡಿ , ತುಲಾಭಾರ ಮಾಡಿದ್ರು.ಇದರಿಂದ ಅವ್ರಿಗಿ ಮನಸ್ಸಿಗಿ ನೆಮ್ಮದಿ ಆಯ್ತು.ಸಮಾಜದಾ್ಗ ಅವ್ರ ಗೌರವ ಹೆಚ್ಚಾಯಿತ.ಮತ್ತ ಕೆಲ ಜನ್ರಿಗಿ ನಾವೂ ಗುರುಗಳಿಗಿ ನಮ್ಮ ಮನಿಗಿ ಕರದು ಪಾದಪೂಜಾ ಮಾಡಬೇಕು ಅನಿಸ್ತು.ಅಪ್ಪೋರ ಕೃಪೆಗೆ ಪಾತ್ರ ಆದೇವು ಅಂತ ಅಭಿಮಾನ ಆಯ್ತು.ಇನ್ನೂ ಎನೇನೋ ಆಯ್ತು. ಆದ್ರ ಇದರಿಂದ ಯಾರಿಗಿ ಏನು ಪ್ರಯೋಜನ ಆಯ್ತು.ಸಮಾಜದಲ್ಲಿ ಏನು ಸುಧಾರಣೆ ಆಯ್ತು.ಮುಂದಿನ ಮಕ್ಕಳಿಗಿ ಎನು ಸಂದೇಶ ಹೋಯ್ತು.    ಹಿಂದೂಗಳು ಸನಾತನ ಧರ್ಮದ ಆಚರಣೆ ಮಾಡಬೇಕು ಅಂತ ಒತ್ತಾಯ ಮಾಡುವವರಿಗೆ ಒಂದು ಪ್ರಶ್ನೆ  .ಇದರಿಂದ ಹೊಟ್ಟೆ ತುಂಬತದೇನು. ಯಾರಿಗಾದ್ರೂ ಉದ್ಯೋಗ ಸಿಗಬಹುದಾ.ಸಮಾಜದ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದಾ.. ಈಗ ಎಲ್ಲರ ಆರ್ಥಿಕ ಪರಿಸ್ಥಿತಿ ಉತ್ತಮ ಆಗ್ಯಾದ.ಯಾರೂ ಪೂಜಾ ಪಾಠಗಳಿಗಿ ಖರ್ಚ ಮಾಡ್ಲಿಕ್ಕ ಲೆಕ್ಕಹಾಕತಿಲ್ಲ ಬಿಡ್ರಿ.ಈಗ ಎಲ್ಲಾರ ಮನ್ಯಾಗೂ  ದೇವ್ರಿಗೆ ಒಂದು ಪ್ರತ್ಯೇಕ ರೂಂ ಇರತದ.ಅಲ್ಲಿ ದೇವರ ಅಲಂಕಾರ , ಬೆಳ್ಳಿ ಬಂಗಾರದ ಮೂರ್ತಿಗಳು ಭಕ್ತಿಯ ವಿವಿಧ ಭಾವಗಳೆಲ್ಲ ಅಲ್ಲಿಂದ ಅವರವರ ಪೋನ್ ಗಳ ಸ್ಟ್ಯಾಟಸ್ ಗಳ ಮೂಲಕ ಎಲ್ಲರಿಗೂ ತಲುಪ್ತಾವ. ಭಕ್ತಿ ಎಂಬುದು ತೊರುಂಬುವ ಲಾಭ ಎಂಬುದು ಎಷ್ಟು ನಿಜಾನೋ , ಇವೆಲ್ಲ ಮಾಡ್ಲಾರದವ್ರಿಗಿ ಸಮಾಜ ಎಷ್ಟು ಪ್ರತ್ಯಕವಾಗಿ ನೋಡತದ ಅನ್ನೊದು ಅಷ್ಟೆ ನಿಜ. ಈಗ ಹಿಂದೂ ಸಮಾಜದ ಆಚರಣೆಗಳನ್ನು ಆಚರಿಸೊದು ಬಿಡೊದು ಅವರವರ ಇಷ್ಟಕ್ಕೆ ಬಿಡಬೇಕು.ಆದ್ರ ಈ ಎಲ್ಲಾ ಆಚರಣೆ ಮಾಡ್ಲೇಬೇಕು ಅನ್ನುವವರು ಬಸವಾದಿ ಶರಣರನ್ನು ಈ ಅಸಚರಣೆಗಳ ಭಾಗ ಮಾಡದಿರುವದು ಒಳ್ಳೆದು.ಯಾವ ಆಚರಣೆಗಳನ್ನು ಬಸವಾದಿ ಶರಣರು ಖಂಡಿಸಿದರೋ ಅವೆಲ್ಲ ಈಗ ಹಿಂದೂ ಆಚರಣೆಗಳು , ನಮ್ಮ ಸಂಪ್ರದಾಯ , ನಮ ಸಂಸ್ಕೃತಿ ಎಂದು ಹೇಳುವವರು , ನಮ್ಮ ದೇಶದ ಬಹುತ್ವದ ಸಂಸ್ಕೃತಿಗಳ ನ್ನು ಕೂಡ ಗೌರವಿಸಬೇಕು. ಈಗ ಹಿಂದೆಂದಿಗಿಂತಲೂ ಕಾವಿಧಾರಿಗಳು ಹೆಚ್ಚಾಗ್ತಿದ್ದಾರ.ಓಟ್ ಬ್ಯಾಂಕ್ ಗಾಗಿ ರಾಜಕಾರಣಿಗಳು ಅವ್ರನ್ನ ಪೋಷಿಸುತ್ತಾರೆ.ಸಮಾಜವನ್ನು ಜಾತಿಭೇಧ ಗಳಿಂದ ಮುಕ್ತ ಮಾಡುವ ಕಾರ್ಯ ಮಾಡ್ಬೇಕಾದ ಮಠಗಳು ಜಾತಿ ಧರ್ಮದ ಕಂದಕಗಳನ್ನು ಇನ್ನೂ ಹೆಚ್ಚು ಮಾಡ್ತಿರೋದು ವಿಪರ್ಯಾಸ. ಜಾತಿಗೊಬ್ಬರ ಮಠಗಳು ಅದಕ್ಕೊಬ್ಬರು ಮಠಾಧಿಶರು ಅವರನ್ನು ಒಲೈಸಿ ತಮ್ಮ ಕಡೆ ಎಳೆದುಕೊಳ್ಳೊ ರಾಜಕಾರಣಿಗಳು , ಇದೆಲ್ಲದರ ನಡುವೆ ಸಾಮಾನ್ಯರ ಸ್ಥಿತಿ ಅತಂತ್ರ. ಮೊನ್ನೆ ಕಲ್ಬುರ್ಗಿ ಯಲ್ಲಿ ನಡೆದ ಹಿಂದೂ ಸಮಾವೇಶದ ಮುಖ್ಯ ಉದ್ದೇಶ ಎನಿತ್ತೊ ಎನೋ‌, ಆದ್ರ ಸ್ಟೇಜ್ ಮ್ಯಾಲಿರೊ ಕಾವಿಧಾರಿಗಳನ್ನು ನೋಡಿ ನಮ್ಮ ದೇಶ ಎಷ್ಟು ಅಭಿವೃದ್ಧಿ ಆಗಲತದ ಅಂತ ಅರ್ಥ ಆಯ್ತು . ಅಲ್ಲಿ ಇರುವ ಯಾರೊಬ್ರು ನಮ್ಮ ದೇಶದ ಕುರಿತಾಗ್ಲಿ , ನಿರುದ್ಯೋಗ ಕುರಿತಾಗ್ಲಿ. ಶಿಕ್ಷಣದ ಕುರಿತಾಗ್ಲಿ , ಮಾತಾಡಿಲ್ಲ.ಮಾತಾಡಿದ್ದೆಲ್ಲ ಬರೀ ಕಮ್ಯೂನಿಸ್ಟ್‌ (ಪ್ರಶ್ನಿಸುವರನ್ನು) ರನ್ನು ಬೈದದ್ದು. ಕಮ್ಯೂನಿಸ್ಟ್ ರು ಸಾಮಾಜ ಒಡಿತಾರಂತ ಹೇಳತಾರ.ಆದ್ರ ಆ ಒಡೆಯುವ ಕೆಲಸ ಮಾಡ್ತಿರೋದು ನೀವು.ಆಚರಣೆಗಳ ಹೆಸರಲ್ಲಿ ಮುಗ್ದ ಜನರ ವ್ಯಕ್ತಿತ್ವ ಕುಂಠಿತ ವಾಗುವಂತೆ ಮಾಡ್ತಿದ್ಷಿರಿ.ನಿಮಗೆ ಹಿಂದೂ ಸಮಾಜದ ಮೇಲೆ ಅಷ್ಟೊಂದು ಅಭಿಮಾನ ಇರುವದೇ ಆದ್ರೆ ಯಾವೊಬ್ಬ ಹಿಂದೂ ಪ್ರಜೆಯು ಬಡವನಾಗಿರಬಾರದು‌, ಅವಿದ್ಯಾವಂತನಾಗಿರಬಾರದು , ನಿರುದ್ಯೋಗಿ ಆಗಿರಬಾರದು . ಕಲಬುರಗಿ ಯಲ್ಲಿ ನಡೆಗ ಹಿಂದೂ ಸಮಾವೇಶದಲ್ಲಿ  ಸ್ವಾಮಿಗಳು ಹೇಳತಿದ್ರು.ಬಸವಾದಿ ಶರಣರು ಕಾಯಕಕ್ಕ ಮಹತ್ವ ಕೊಟ್ಟವ್ರು.  ಕೆಲ ಕಮ್ಯೂನಿಸ್ಟ್‌ ಸ್ವಾಮಿಗಳು ಏನು ಕಾಯಕ ಮಾಡ್ಧ ಬರಿ ಸಮಾಜ ಒಡೆಯೋ ಕೆಲ್ಸ ಮಾಡ್ತಾರ ಅಂತ. ಅದಕ್ಕೆ ನೀವು ಹೊರತಾಗಿಲ್ಲ ಮಹಾಶಯರೆ , ಯಾವ ಮಠಾಧಿಶರು ಕಾಯಕ ಜೀವಿಗಳಲ್ಲ.ಕೆಲ ಮಠಗಳು ವಿದ್ಯಾ ಸಂಸ್ಥೆ ಮೂಲಕ ಜನಪರ ಆಗಿವೆ.ಉಳಿದ ಮಠಗಳು ನಮ್ಮ ದೇಶದ ಓಟ್ ಬ್ಯಾಂಕ್ ಸಲುವಾಗಿ ಇರುವಂಥವು. ನಮ್ಮ ರಾಜ್ಯದ ಮುಖ್ಯ ಮಂತ್ರಿಗಳು ಮೊನ್ನೆ ಒಂದು ಕಾರ್ಯಕ್ರಮ ದಲ್ಲಿ ಮಠಾಧಿಶರ ರಿಗೆ ಎಲ್ಲರ ಮುಂದೆ ಹೆಳಿದ್ರು. ನೀವು ನಮಗಾಗಿ ಸೇವೆ ಮಾಡಿ , ನಮ್ಮ ಕೃಪೆ ಗೆ ಪಾತ್ರರಾಗಿ ಆಗ ನೀವು ಉಳಿತಿರಿ ಬೆಳಿತಿರಿ ಸಂತ. ಇದರಿಂದ ಗೊತ್ತಗತದ ರಾಜಕಾರಣಿಗಳ ಮತ್ತು ಮಠಾಧಿಶರ ಸಂಭಂಧ.ಒಬ್ಬರಿಗಿ ಬಿಟ್ಟು ಇನ್ನೊಬ್ರರಿಲ್ಲ. ಮಂಡೆ ಬೋಳಾಗದೆ ಮನ ಬೋಳಾಗದು ಅಂತ ಹಿಂದಿನವರು ಹೇಳತಿದ್ರು.ಈಗೀಗ ಬಹುತೇಕ ಮಠಾಧಿಶರು ಸರ್ವ ಪರಿತ್ಯಾಗಿ ಅಂತ ಹೇಳಕ್ಕೊಂತ ಎಲ್ಲಾ ಮೋಹದಲ್ಲಿ ಬಂಧಿಸಲ್ಪಟ್ಟವ್ರು. ಚರ್ಚೆಗಳಿಗೆ ಕೊನೆ ಇಲ್ಲ ಬಿಡ್ರಿ.ಎಲ್ಲರೂ ಅವರವರ ವಾದಕ್ಕ ಕಟ್ಟುಬಿದ್ದವ್ರು.ನಮ್ಮ ದೇಶದಾಗ ಎಲ್ಲರಿಗೂ ಅವರವರ ಇಷ್ಟದಂಗ ಬದುಕೋ ಹಕ್ಕು ಅದಾ. ಮತ್ತೊಬ್ಬರ ಬದುಕುವ ರೀತಿ ಪ್ರಶ್ನಿಸುವದರಿಂದ ಏನು ಬದಲಾಗಲ್ಲ.ಉಪದೇಶಗಳು ಈಗ ಯಾರಿಗೂ ಬೇಕಾಗಿಲ್ಲ.ಬೇಕಾಗಿರುವದು ಸಹಾಯ. ನಮ್ಮ ದೇಶದ ಮಠಗಳು ಜನರ ಆರ್ಥಿಕ ಸ್ಥಿತಿ ಸುಧಾರಿಸುವದಕ್ಕ ಪ್ರಯತ್ನ ಮಾಡ್ಲಿ.ಮಠಕ್ಕ ಬಂದ ಅನುದಾನ ಜನರ ಸಹಾಯಕ್ಕ ಬಳಕೆ ಆಗ್ಲಿ. ಗುಡಿಗಳು ಕಟ್ಟುವದರಿಂದ ನಮ್ಮ ದೇಶ ಉದ್ದಾರ ಅಗ್ತದ ಅಂತ ಅವರಿಗೆ  ಅನುಸಿದ್ರ ಅದು ಅವರ ವಿಚಾರ.ಒಪ್ಪುವಂತೆ ಬಲವಂತ ಮಾಡ್ದೆ ಮತ್ತೊಬ್ಬರ ಅಭಿಪ್ರಾಯವನ್ನು ಗೌರವಿಸಬೇಕು. ಬಸವಾದಿ ಶರಣರ ಆಶಯಗಳನ್ನು ಪೂರ್ಣ ಜೀವನದಾಗ ಅಳವಡಿಸಿಕೊಳ್ಳೊದು ಕಷ್ಟ.ಯಾರೂ ಪರಿಪೂರ್ಣ ರಲ್ಲ.ಸಮಾಜದಾಗ ಇರಬೇಕಂದ್ರ ಕೆಲವೊಮ್ಮೆ ನಮ್ಮ ಮನಸ್ಸಿನ ವಿರುದ್ದವಾಗೂ ವರ್ತಿಸಬೇಕಾಗತದ.ಅದಕ್ಕ ಯಾರನ್ನೂ ತೀಕ್ಷವಾಗಿ ನಿಂದಿಸದೆ ಅವರವರ ಇಷ್ಟಕ್ಕ ಬಿಡಬೇಕು.ಆದ್ರ ಸಮಾಜಕ್ಕಾಗಲಿ ಅಥವಾ ವ್ಯಕ್ತಿಗಾಗಲಿ ಯಾವದೆ ವಿಷಯದಿಂದ ನಷ್ಟ ಅಥವಾ ತೊಂದರೆ ಆದ್ರ ಪ್ರಶ್ನಿಸಬೇಕು.  ಮಠಾಧಿಶರು ಗಳ ಬಗ್ಗೆ ನಮ್ಮ ದೇಶದ ಜನರಿಗೆ ನಂಬಿಕೆ ಭಕ್ತಿ ಅದ.ಅದನ್ನು ಉಳಿಸಿಕೊಂಡು ಜನಪರ ಕಾರ್ಯ ಮಾಡಲಿ.ಬರಿ ಪೂಜಾ ಪಾಠಗಳಿಗಿ ಮಾತ್ರ ಬಸವಾದಿ ಶರಣರನ್ನು ಬಳಸಿಕೊಳ್ಳದೆ , ಸಮಾನತೆ , ಪ್ರೀತಿ , ಕರುಣೆ ಮತ್ತು ಇವ ನಮ್ಮ ವ ಎಂಬ ಭಾವಗಳು ಜನರಲ್ಲಿ ಬಿತ್ತುವ ಪ್ರಯತ್ನ ಮಠ ಮಾನ್ಯ ಗಳು ಮಾಡ್ಬೇಕು. ಜ್ಯೋತಿ ಡಿ ಬೊಮ್ಮಾ ಜ್ಯೋತಿ ಡಿ ಬೊಮ್ಮಾ ಅವರು ಕಲಬುರ್ಗಿ ಜಿಲ್ಲೆಯವರು.ಇದುವರೆಗು ನಾಲ್ಕು ಕವನ ಸಂಕಲನಗಳನ್ನು,ಎರಡು ಪ್ರಬಂಧ ಸಂಕನಲಗಳನ್ನು ಪ್ರಕಟಿಸಿದ್ದಾರೆ.ಪ್ರತಿ ತಿಂಗಳ ಒಂದನೇ ತಾರೀಖು ಸಂಗಾತಿಪತ್ರಿಕೆಗಾಗಿ ಅವರ ದೇಸಿ ನುಡಿಕಟ್ಟಿನಲ್ಲಿ ಅಂಕಣಬರಹವನ್ನು ಬರೆಯುತ್ತಿದ್ದಾರೆ.

Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ ಡಾ.ವಿಶ್ವನಾಥ್‌ ಎನ್‌ ನೇರಳೆಕಟ್ಟೆ ಅರ್ಜುನ ಉವಾಚ ಕೌಸಲ್ಯಾಸುತನನ್ನೇ ಕರೆಸಿಕೊಂಡಿತು ಕದನಲತೆ; ಲವಕುಶರ ಕುಶಲತೆ ಭರತ ಮೂರ್ಛೆ ಹೊಂದಿದನೆಂಬ ಭಾರದ, ಸಂತಸವನ್ನು ತರದ ಸುದ್ದಿ ಶ್ರೀರಾಮನನ್ನು ಬಂದು ತಲುಪಿದಾಗ ಸಹಿಸದಂತಾಯಿತು ಅವನಿಗೆ. ಸಹೋದರರ ಸ್ಥಿತಿ ನೋವು ಮೂಡಿಸಿತು.ಸುಗ್ರೀವ, ವಿಭೀಷಣರ ಜೊತೆಗೆ ಯುದ್ಧರಂಗಕ್ಕೆ ಬಂದ, ಕುಶ ಲವರನ್ನು ಕಾಣಲು. ಮಡಿದ ಸೇನೆಯದು ಬಿದ್ದಿತು ರಾಮದೃಷ್ಟಿಗೆ. ಬೇನೆಯದು ಎದ್ದಿತು ರಾಮಹೃದಯದಲ್ಲಿ, ಮೈಮರೆತಿದ್ದ ಸಹೋದರರನ್ನು ಕಂಡಾಗ. ಬಿಲ್ಲು ಬಾಣ ಹಿಡಿದು ನಿಂತ ಲವ ಕುಶರ ಪರಿ ಸೋಜಿಗ ಹುಟ್ಟಿಸಿತು ಅವನಲ್ಲಿ. ಪುಳಕ ಹುಟ್ಟಿಸುವ ಪೋರರ ವೀರ ನಿಲುವನ್ನು ಕಂಡೊಡನೆಯೇ ರಾಮಧ್ವನಿ ಮೊಳಗಿತು ಮನೋಹರವಾಗಿ.“ಮಕ್ಕಳು ನೀವು. ನಿಮಗೆ ಬಿಲ್ವಿದ್ಯೆಯನ್ನು ಕಲಿಸಿದವರು ಯಾರು? ನಿಮ್ಮ ಮನೆಯದು ಇರುವುದೆಲ್ಲಿ? ತಂದೆ ಯಾರು? ಯಾರು ತಾಯಿ? ಕುದುರೆಯನ್ನು ಕಟ್ಟಿ ಕದನಕ್ಕಿಳಿಯುವ ಛಲವದು ನಿಮಗೇತಕೆ? ಸಂಪೂರ್ಣ ಸೇನೆಯನ್ನು ಜಯಿಸುವ ಶಕ್ತಿ ಬಂದದ್ದೆಲ್ಲಿಂದ?”ರಾಮನ ಪ್ರಶ್ನೆ ಬಾಣಗಳು ಮೃದುವಾಗಿ ಸೋಕಿದವು ಅವಳಿಗಳ ಮುದ್ದು ದೇಹವನ್ನು. ಕುದುರೆಯನ್ನು ಬಿಡಿಸಿಕೊಳ್ಳುವುದಕ್ಕೆಂದು ಬಂದವನು ಕದನಕ್ಕಿಳಿಯದೆ ಇಲ್ಲಸಲ್ಲದ ಮಾತುಕತೆಯೆಡೆಗೆ ಆಸಕ್ತಿ ತೋರುತ್ತಿದ್ದಾನಲ್ಲಾ! ಎನಿಸಿತು ಅವರಿಗೆ. ಕ್ಷಾತ್ರಪೌರುಷ ತೋರದೆ ಬರಿದು ಮಾತಿನಲ್ಲಿ ಏನಾಗುತ್ತದೆ ಸಾಧನೆ! ಎಂಬ ಭಾವನೆ ಮೂಡಿತು ಅವರಲ್ಲಿ.ಅದನ್ನೇ ಹೇಳಿದರು ರಘುಕುಲತಿಲಕನಿಗೆ; ತಮ್ಮ ಜನಕನಿಗೆ. “ಯುದ್ಧ ಮಾಡಿ ನೋಡು ನಮ್ಮ ಶೌರ್ಯವನ್ನು” ಎಂದರು ವೀರಭಾವದಿಂದ. ಶಿಶುಗಳಾಗಿರುವ ಅವರಲ್ಲಿ ಅದಾವ ಕದನ ಎಂದುಕೊಂಡ ಕೌಸಲ್ಯಾಸುತ. ಮತ್ತೆ ಕೇಳಿದ ಅವರ ಜನನಸ್ಥಿತಿಯನ್ನು.“ಈ ತಪೋವನದಲ್ಲಿ ನಮ್ಮಿಬ್ಬರನ್ನೂ ಅವಳಿ ಮಕ್ಕಳಾಗಿ ಪಡೆದವಳು ಸೀತೆ. ನಮ್ಮ ಜನನದಿಂದ ತೊಡಗಿ ಬಗೆಬಗೆಯ ಸಂಸ್ಕಾರಗಳನ್ನು ಒದಗಿಸಿಕೊಟ್ಟು, ವಿದ್ಯಾಭ್ಯಾಸವನ್ನು ಮಾಡಿಸಿ, ಶಸ್ತಾçಭ್ಯಾಸವನ್ನು ಕೊಡಿಸಿ, ನಮ್ಮನ್ನು ಬಲಯುತರಾಗಿಸಿದವರು ವಾಲ್ಮೀಕಿ ಮುನಿಗಳು” ಎಂಬ ನುಡಿ ಹೊರಬಂತು ಅವಳಿಗಳಿಂದ.ರಾಮನೊಡಲನ್ನು ಕೆಡಹುವ ಸಿಡಿನುಡಿಯಾಯಿತು ಕುಶಲವರಾಡಿದ ಆ ಸಹಜ ನುಡಿ. ‘ಸೀತೆ’ ಎಂಬ ಶಬ್ದವದು ರಾಮಕರ್ಣಗಳಿಗೆ ಕಠೋರವೆನಿಸಿತು. ರಾಮಹೃದಯವು ಸಹಿಸದಾಯಿತು ಭೂಮಿಜಾತೆಯ ಹೆಸರಿನ ಭಾರವನ್ನು. ರಾಮತ್ರಾಣವದು ಅಳಿದುಹೋಗಲು ‘ಸೀತೆ’ ಎಂಬ ನುಡಿಬಾಣವಷ್ಟೇ ಸಾಕಾಯಿತು. ಮೂರ್ಛೆಹೋದ ಶ್ರೀರಾಮ. ಮತ್ತೆ ಎಚ್ಚೆತ್ತ. ಕುಶಲವರ ಮಾತು ಅನುರಣಿಸಿತು ಕಿವಿಯಲ್ಲಿ. ಸೀತೆಯ ಮಕ್ಕಳು ತಾವು ಎಂಬ ಅವರ ಮಾತದು ನಿಜವೋ ಅಲ್ಲವೋ ಎಂಬ ಸಂಶಯ ಮೂಡಿತು. ತಾನು ತಪ್ಪಾಗಿ ಕೇಳಿಸಿಕೊಂಡೆನೇ ಎಂಬ ಸಂದೇಹ ಕಾಡಿತು. ಮತ್ತೊಮ್ಮೆ ಬಾಲಕರಲ್ಲಿ ಕೇಳುವಂತೆ ಹೇಳಿದ, ಬಳಿಯಿದ್ದ ಸುಗ್ರೀವನಲ್ಲಿ.ಅದಕ್ಕೆ ಸುಗ್ರೀವ ನಸುನಗುತ್ತಾ, “ನಿನ್ನ ರೂಪವನ್ನೇ ಹೊತ್ತ ಇವರು ನಿನ್ನ ಮಕ್ಕಳಲ್ಲದೇ ಇರಲು ಸಾಧ್ಯವಿಲ್ಲ. ನಿನ್ನ ತನುಜರಲ್ಲದಿದ್ದರೆ ಈ ಬಗೆಯ ಸತ್ವ ಇವರಲ್ಲಿ ಇರುತ್ತಿತ್ತೇ?!” ಎಂದ.ಆಗಲೇ ವಾನರ ಸೈನ್ಯವದು ಕುಶ ಲವರನ್ನು ಮುತ್ತಿತು. ಘೋರ ಕದನ ನಡೆಯಿತು. ಮಕ್ಕಳನ್ನು ಮತ್ತೆ ಮಾತನಾಡಿಸುವ ಪುರುಸೊತ್ತು ಸಿಗಲಿಲ್ಲ ಪುರುಷೋತ್ತಮನಿಗೆ. ಅವಳಿಗಳ ಬಾಣಾವಳಿಯ ಘಾತಕ್ಕೆ ತತ್ತರಿಸಿಹೋಯಿತು ರಾಮಸೈನ್ಯ.ತನ್ನವರೆಲ್ಲರೂ ನೆಲವನ್ನಪ್ಪಿರುವ ಆ ಸಮಯದಲ್ಲಿ ಏಕಾಂಗಿತನದ ಭಾವ ರಾಮನನ್ನು ಆವರಿಸಿತು. ಸೀತಾಸುತರ ವಿರುದ್ಧದ ಕದನಕ್ಕೆ ಮನಸ್ಸು ಮಾಡಿದ ಕೌಸಲ್ಯಾಸುತ. ತಂದೆ ಮಕ್ಕಳ ಕದನ ನೋಡಲು ಕಣ್ದೆರೆಯಿತು ಕದನರಂಗ. ರಾಮಬಾಣವದು ಗಮ್ಯವನ್ನು ಅರಸಿ ಹೊರಟಿತು. ರಾವಣ ಕುಂಭಕರ್ಣರ ಶಿರಗಳನ್ನು ಕತ್ತರಿಸಿಹಾಕಿದ ಶರಗಳನ್ನೇ ಪ್ರಯೋಗಿಸಿದ್ದ ಶ್ರೀರಾಮ. ಎರಡು ಭಾಗವಾಗಿ ನೆಲದಲ್ಲಿ ಬಿದ್ದದ್ದನ್ನು ಕಂಡು ವಿಸ್ಮಿತನಾದ.ಹಾಗೆ ಚಕಿತ ಭಾವದಲ್ಲಿ ರಾಮಚಿತ್ತ ಇದ್ದ ಸಮಯದಲ್ಲಿಯೇ ಕುಶ ಲವರ ಕರದಿಂದ ಸಿಡಿದೆದ್ದ ಬಾಣ ಬಂದಿತು ರಾಮನೆಡೆಗೆ. ಹೊಕ್ಕಿತು ಅವನ ದೇಹವನ್ನು. ಮಕ್ಕಳ ಬಗ್ಗೆ ಅಕ್ಕರೆ ಅವನಿಗಿದೆಯೋ ಇಲ್ಲವೋ ಎನ್ನುವುದನ್ನು ಒಳಹೊಕ್ಕು ನೋಡುವಂತೆ ರಾಮಶರೀರದ ಒಳಗೆ ಪ್ರವೇಶಿಸಿತ್ತು ಆ ಶರ. ರಾಮಪ್ರಜ್ಞೆ ರೂಪುಗಳೆದುಕೊಂಡಿತು. ಮೂರ್ಛೆತಪ್ಪಿದ ಶ್ರೀರಾಮ.ಬಳಿಗೆ ಬಂದ ಲವ ಕುಶರು ಶ್ರೀರಾಮ, ಲಕ್ಷö್ಮಣ, ಭರತ, ಶತ್ರುಘ್ನರ ವಸ್ತç, ಆಭರಣಗಳನ್ನು ಗಂಟುಕಟ್ಟಿದರು ಬಟ್ಟೆಯೊಂದರಲ್ಲಿ. ಯುದ್ಧದಲ್ಲಿ ಹೋರಾಡಿಯೂ ಎಚ್ಚರ ಇದ್ದ ಹನುಮಂತ ಜಾಂಬವAತರ ತಲೆಗೂದಲನ್ನು ಹಿಡಿದೆಳೆದುಕೊಂಡು ತಾಯಿಯ ಬಳಿಗೆ ಹೊರಟರು.ಭೀತಿ ಹುಟ್ಟಿಸುವ ರೀತಿಯಲ್ಲಿ ಬಂದುನಿAತ ಮಕ್ಕಳನ್ನು ಕಂಡು ಅಳುಕಿದಳು ಸೀತೆ. ಹನುಮಂತ ಜಾಂಬವAತರನ್ನು ಯುದ್ಧರಂಗದಲ್ಲಿಯೇ ಬಿಟ್ಟುಬರುವಂತೆ ಹೇಳಿದಳು. ಮಕ್ಕಳು ಅಂತೆಯೇ ಮಾಡಿ ಮರಳಿದರು.ಅದೇ ಸಮಯಕ್ಕೆ, ನಾರದರಿಂದ ಸಂಪೂರ್ಣ ವಿಷಯ ತಿಳಿದುಕೊಂಡ ವಾಲ್ಮೀಕಿ ಮಹರ್ಷಿ ಮರಳಿದ್ದರು ಆಶ್ರಮಕ್ಕೆ. ರಣರಂಗಕ್ಕೆ ಹೋದರು. ರಾಮಚಂದ್ರಾದಿಗಳನ್ನು ಕಂಡರು. ಉಪಚರಿಸಿದರು. ತಪ್ಪಿದ್ದರೆ ಕ್ಷಮಿಸಬೇಕು ಎಂದರು.ತನ್ನಿಂದ ಕಾಡುಪಾಲಾದ ಸೀತೆ ವಾಲ್ಮೀಕಿ ಮುನಿಗಳ ಆಶ್ರಮದಲ್ಲಿ ಮಕ್ಕಳಿಗೆ ಜನ್ಮವಿತ್ತ ವಿಚಾರ ಪೂರ್ಣವಾಗಿ ತಿಳಿಯಿತು ರಾವಣಾಂತಕನಿಗೆ. ಮಕ್ಕಳನ್ನು ಅಪ್ಪಿಕೊಂಡ. ಅವರು ಶ್ರೀರಾಮನ ಕಾಲಿಗೆರಗಿ ಕ್ಷಮೆ ಕೇಳಿದರು. ರಾಮಾಯಣವನ್ನು ಹಾಡಿ ತೋರಿಸಿದರು ಶ್ರೀರಾಮನಿಗೆ. ಕುಶ ಲವರನ್ನು ರಘುಕುಲತಿಲಕನ ಜೊತೆಗೆ ಅಯೋಧ್ಯೆಗೆ ಕಳುಹಿಸಿಕೊಟ್ಟರು ವಾಲ್ಮೀಕಿ ಮಹರ್ಷಿ.ಆಶ್ರಮಕ್ಕೆ ಮರಳಿದಾಗ ಅವರಿಗೆದುರಾದದ್ದು ಸೀತೆಯ ಸವಾಲು. “ಮಕ್ಕಳ ಒಡನಾಟದಲ್ಲಿ ಪತಿಯ ವಿರಹವನ್ನು ಮರೆತು ಬದುಕುತ್ತಿದ್ದವಳು ನಾನು. ಈಗ ಅವರನ್ನು ತೊರೆದು ಹೇಗಿರಲಿ?” ಎಂದು ಮುನಿಗಳ ಕಾಲಿಗೆ ಬಿದ್ದಳು.ಕರುಣೆಯುಕ್ಕಿತು ಮುನಿಗಳಲ್ಲಿ. “ನಿನ್ನ ಮಕ್ಕಳನ್ನು ಕರೆದೊಯ್ದವನು ನಿನ್ನ ಪತಿ. ನಿನ್ನನ್ನೂ ಆ ಶ್ರೀರಾಮನ ಬಳಿಗೆ ಬಿಟ್ಟುಬರುತ್ತೇನೆ” ಎಂದವರು ಅವಳನ್ನು ಕರೆದೊಯ್ದರು ಅಯೋಧ್ಯೆಗೆ. ಸೀತೆಯ ಚಿತ್ತವದು ಕೂಡಿತು ಶ್ರೀರಾಮ ಹೃದಯವನ್ನು.ಶ್ರೀರಾಮ ಕದನವದು ಕುಶ ಲವರ ಜೊತೆಗೆ ನಡೆದ ರಾಮ ಕಥಾನಕ ನನ್ನ ಮೆದುಳಿನಲ್ಲಿ ಮೆಲುದನಿಯನ್ನು ಎಬ್ಬಿಸುತ್ತಿದ್ದ ಆ ಸಮಯದಲ್ಲಿಯೇ ಕೇಳಿಬಂತದೋ ಯುದ್ಧನಾದ. ನನ್ನಿಂದ ಅವಮಾನಿತನಾಗಿ ಹೋಗಿದ್ದ ಆ ಬಭ್ರುವಾಹನ ಈಗ ಯುದ್ಧಸಿದ್ಧತೆಯನ್ನು ಪೂರೈಸಿಯಾಗಿತ್ತು. ಡಾ.ವಿಶ್ವನಾಥ್‌ ಎನ್‌ ನೇರಳೆಕಟ್ಟೆ

Read Post »

You cannot copy content of this page

Scroll to Top