ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಮ್ಮೆಡೆಗೆ ಮುನ್ನುಗ್ಗಿಬರುತ್ತಿದ್ದ ದೈತ್ಯಸೇನೆಯಲ್ಲಿ ಅಪರಿಮಿತ ಬಲದ ರಾಕ್ಷಸಿಯರೂ ಇದ್ದರು. ಯುದ್ಧಕ್ಕೆ ಸಿದ್ಧನಾಗಿ ನಿಂತಿದ್ದ ನನ್ನ ರಥದಲ್ಲಿದ್ದ ಧ್ವಜವದು ಅವರ ಕ್ರೂರದೃಷ್ಟಿಗೆ ಬಿತ್ತು. ನಾನು ಹನುಮಧ್ವಜಧಾರಿ. ನನ್ನ ರಥದ ಬಾವುಟದಲ್ಲಿದ್ದವನು ಆ ಶ್ರೀರಾಮನ ಪ್ರಿಯಭಂಟ ಹನುಮಂತ. ರಕ್ಕಸಿಸಮೂಹವದು ಅಳುಕಿತು ಮಾರುತಸುತನನ್ನು ಕಂಡೊಡನೆಯೇ. ಅಂದು ಸಾಗರ ಉಲ್ಲಂಘನದ ಆ ಸಮಯದಲ್ಲಿ ತನ್ನನ್ನು ನುಂಗಿದ ರಾಕ್ಷಸಿಯ ದೇಹ ಸೀಳಿದವನು ಆಂಜನೇಯ. ಲಂಕೆಗೆ ಹೋದ ಬಳಿಕ ಅಲ್ಲಿ ಎದುರಾದ ರಕ್ಕಸಿ ಪಡೆಗೆ ರಾಕ್ಷಸ ರೂಪ ತೋರಿದವನು ವಾಯುಪುತ್ರ. ಆ ಭೀಕರ ನೆನಪು ಮೂಡಿತು ನನ್ನನ್ನು ಎದುರಿಸಲು ಬಂದಿದ್ದ ರಾಕ್ಷಸಿಯರಿಗೆ.
ಅಂದು ಲಂಕಿಣಿಯನ್ನು ಬಲವಾಗಿ ಒದೆದ ಬಲಶಾಲಿ ಹನುಮಂತ ಇಂದಿಲ್ಲಿಗೆ ಮತ್ತೆ ಬಂದಿದ್ದಾನೆ ಎಂಬ ಭ್ರಮೆಗೆ ಒಳಗಾದ ರಕ್ಕಸಿಯೊಬ್ಬಳು ದೂರದೂರಕ್ಕೆ ಓಡಿದಳು, ರಣದ ಆಸಕ್ತಿಯನ್ನೇ ತೊರೆದವಳಂತೆ, ಮರಣ ಭಯಕ್ಕೆ ಒಳಗಾದವಳಂತೆ.
ಬಾಲಕ್ಕೆ ಬಿದ್ದ ಬೆಂಕಿಯಿAದ ಲಂಕೆಗೆ ಬೆಂಕಿಯಿತ್ತ ಹನುಮ ಸಾಹಸ ನೆನಪಾಯಿತು ಇನ್ನೊಬ್ಬ ರಕ್ಕಸಿಗೆ. “ಮೊದಲೇನಿದ್ದರೂ ನನ್ನ ಮನೆಯನ್ನು ಉಳಿಸಿಕೊಳ್ಳುತ್ತೇನೆ. ಆಮೇಲೆ ಯುದ್ಧದ ಮಾತು” ಎಂದು ಬೊಬ್ಬೆ ಹೊಡೆದವಳು ತನ್ನ ಮನೆಗೆ ಓಡಿದಳು. ಮನೆಯೊಳಗಿದ್ದ ಸರಕನ್ನೆಲ್ಲಾ ಹೊರಗೆಸೆಯಲು ಶುರುಮಾಡಿದಳು.
“ರಕ್ಕಸಿಯ ನೆರಳನ್ನು ಸಹಿಸುವುದಿಲ್ಲ ಈ ಕಪಿ” ಎಂದ ಇನ್ನೊಬ್ಬ ರಾಕ್ಷಸಿ ತನ್ನ ನೆರಳದು ಭೂಮಿಯ ಮೇಲೆ ಬೀಳದಂತಹ ತಾಣವನ್ನು ಹುಡುಕಿ ಅಲ್ಲಿ ಹೋಗಿ ನಿಂತಳು.
ಹೀಗೆ ಯುದ್ಧಾಸಕ್ತರಾಗಿ ಬಂದ ರಕ್ಕಸಿಯರಿಗೆ ಭೀತಿ ಮೂಡಲು ನನ್ನ ಧ್ವಜದಲ್ಲಿದ್ದ ಹನುಮ ಕಾರಣನಾದ. ಹೀಗಿದ್ದಾಗಲೇ ಹನುಮನಿಗೆ ಹೆದರುವವಳು ತಾನಲ್ಲ ಎಂದು ಗತ್ತು ಗಾಂಭೀರ್ಯದಿAದ ಮುಂದೆ ಬಂದಳು ಒಬ್ಬ ರಕ್ಕಸಿ. ತನ್ನ ದೈತ್ಯ ಮೊಲೆಗಳಿಂದಲೇ ಶತ್ರು ಸೈನ್ಯವನ್ನು ಪುಡಿಗಟ್ಟುತ್ತೇನೆ ಎಂದು ಅಬ್ಬರಿಸಿದಳು. ಹಾಗೆ ಹೇಳಿದವಳು ಯೋಜನಸ್ತನಿಯೆಂಬ ರಾಕ್ಷಸಿ. ಅರ್ಜುನ ಸೇನೆಯನ್ನು ನಾಶಮಾಡಲು ನನ್ನ ಹೊಟ್ಟೆಯಿದು ಸಾಕು ಎಂದು ಆರ್ಭಟಿಸಿದಳು ಲಂಬೋದರಿ ಎಂಬ ನಿಶಾಚರಿ ದೈತ್ಯೆ. ಹೀಗೆ ಇವರಿಬ್ಬರೂ ಹೊಟ್ಟೆ, ಮೊಲೆಗಳನ್ನು ಮುಂದುಮಾಡಿಕೊAಡು, ಉಳಿದ ಅಸುರ ಪಡೆಯೊಡನೆ ನಮ್ಮ ಸೇನೆಯನ್ನು ನಾಶಪಡಿಸುವ ಉತ್ಸಾಹ ತೋರಿದರು.
ಆಗಲೇ ಭೀಕರ ರೂಪದಲ್ಲಿ ಬಂದ ಭೀಷಣ ಮಹಾಸ್ತçಗಳ ಮಳೆಯನ್ನೇ ಕರೆದ, ನನ್ನ ಮೇಲೆ. ಬಗೆಬಗೆಯ ಮೃಗಗಳ ರೂಪವನ್ನು ತಾಳಿ ಬೆದರಿಸುವ ಯತ್ನ ಮಾಡಿದ. “ನನಗೆ ಜನ್ಮ ಕೊಟ್ಟವನಿಗೆ ಮರಣವನ್ನು ತಂದಿಟ್ಟವನು ನಿನ್ನ ಅಣ್ಣ ಭೀಮ. ನೀನೆಂತು ಪ್ರಾಣ ಉಳಿಸಿಕೊಳ್ಳುವೆಯೋ ನೋಡುತ್ತೇನೆ. ನಿನ್ನನ್ನು ಹಿಡಿದು ನರಮೇಧ ಯಾಗಕ್ಕೆ ಬಲಿಪಶುವಾಗಿಸದೆ ಬಿಡುವುದಿಲ್ಲ” ಎಂದು ಭೂಮಿ ನಡುಗುವಂತೆ ಬೊಬ್ಬಿರಿದ ಭೀಷಣ.
ಅವನ ಭೀಕರ ಬೊಬ್ಬೆಯದು ನನ್ನಲ್ಲಿ ನಗು ಮೂಡಿಸಿತು. ನನ್ನ ರಕ್ಷೆಗಾಗಿ ಉಗ್ರವಾದ ಬಾಣವೊಂದನ್ನು ಹೂಡಿದೆ. ನನ್ನ ಒಂಟಿ ಬಾಣದ ಏಟಿಗೆ ಜಂಟಿ ಜಂಟಿಯಾಗಿ ತತ್ತರಿಸಿಹೋದರು ಅಸುರರು. ಒಂದರ ಹಿಂದೊAದರAತೆ ಶರಗಳನ್ನು ಪ್ರಯೋಗಿಸುತ್ತಲೇ ಹೋದೆ ಅಸುರರ ಮೇಲೆ.
ಬಿರುಗಾಳಿ ಬೀಸಿದಾಗ ಮೋಡಗಳೆಲ್ಲಾ ಚದುರಿಹೋಗುವಂತೆ ದಿಕ್ಕುದಿಕ್ಕಿಗೆ ಹೋಗಿಬಿದ್ದರು ಅಸುರರು. ಕೆಲವರ ಅಂಗಾAಗಗಳು ಮುರಿದುಹೋದವು. ಕೈಕಾಲುಗಳನ್ನು ಕಳೆದುಕೊಂಡರು ಕೆಲವರು. ಕೆಲವರ ದೇಹದಲ್ಲಿ ನಾನು ಪ್ರಯೋಗಿಸಿದ ಬಾಣಗಳು ನೆಟ್ಟಿದ್ದವು. ವೇದನೆಗಳನ್ನು ತಾಳಲಾರದೆ ಕೆಲವರು ಪ್ರಾಣಬಿಟ್ಟರು. ಜೀವ ಉಳಿಸಿಕೊಳ್ಳುವುದಕ್ಕಾಗಿ ಗಿಡಮರಗಳ ಆಶ್ರಯ ಪಡೆದರು ಕೆಲವರು. ಯುದ್ಧರಂಗದಿAದಲೇ ಓಡಿಹೋಗಿ ಉಳಿದೆವು ತಾವು ಎಂದು ಬೀಗಿದರು ಕೆಲವರು.
ಈಗ ನನಗೆ ನನ್ನ ಧ್ವಜದಲ್ಲಿ ಕುಳಿತಿದ್ದ ಹನುಮನ ನಿಜ ನೆರವು ದೊರಕಿತು. ಸ್ತನ, ಉದರಗಳಿಂದ ಸೈನಿಕರನ್ನು ಬಡಿಬಡಿದು ಕೊಲ್ಲುತ್ತಿದ್ದ ಯೋಜನಾಸ್ತನಿ, ಲಂಬೋದರಿಯರೆAಬ ರಕ್ಕಸಿಯರನ್ನು ಕಂಡು ಅಚ್ಚರಿಪಟ್ಟ ಅಂಜನಾಸುತ. ಹಿಂದಿನ ನೆನಪೆಲ್ಲವೂ ಬಂತು ಅವನಿಗೆ. ನಸುನಕ್ಕ. ತನ್ನ ಬಾಲವನ್ನು ಅಸುರರಿದ್ದ ದಿಕ್ಕುದಿಕ್ಕಿಗೆ ಬಡಿದ. ಹನುಮಂತನ ಬಾಲದ ಬಲವಾದ ಏಟಿಗೆ ಇನ್ನೂ ಶಕ್ತಿ ಮೂಡದ ಬಾಲರಂತಾಗಿಹೋದರು ರಕ್ಕಸರು. ಜೋರುಜೋರಾಗಿ ಚೀರುತ್ತಾ ಪ್ರಾಣ ಕಳೆದುಕೊಂಡರು. ಎಲ್ಲೆಡೆಯೂ ಅಸುರರ ಉಗ್ರರೂಪವನ್ನು ತೋರುತ್ತಿದ್ದ ರಣರಂಗವೀಗ ಜೀವಂತ ಅಸುರರಿಲ್ಲದೆಯೇ ಶೂನ್ಯವಾಗಿ ತೋರುತ್ತಿತ್ತು. ಅಸುರರನ್ನು ಕೊಲ್ಲುವ ಬಯಲಾಟದೆಡೆಗೆ ಮನಸ್ಸು ಮಾಡಿದ್ದ ಹನುಮಂತ ಈಗ ಅಸುರ ತಾಣವನ್ನು ಬಯಲು ಬಯಲಾಗಿಸಿದ್ದ.
ತನ್ನವರನ್ನು ಕಳೆದುಕೊಂಡ ಭೀಷಣ ಭೀತಿಗೆ ಒಳಗಾದ. ತಾನು ಹೀಗೆಯೇ ಇದ್ದರೆ ತನ್ನ ಪ್ರಾಣವೂ ಉಳಿಯಲಾರದು ಎನ್ನುವುದು ದೃಢವಾಯಿತು ಅವನಿಗೆ. ಮಾಯಾವಿಯಾಗಿ ಕೈಚಳಕ ತೋರಿಸಲು ನಿರ್ಧಾರ ಮಾಡಿದ.
ತಕ್ಷಣವೇ ಅಲ್ಲೊಂದು ಪುಣ್ಯಾಶ್ರಮ ಕಾಣಿಸಿಕೊಂಡಿತು. ಅಸುರ ರೂಪವನ್ನು ಕಳಚಿಕೊಂಡ ಭೀಷಣ ಮುನಿರೂಪದಲ್ಲಿ ಕಾಣಿಸಿಕೊಂಡ. ಅದೀಗ ಯುದ್ಧರಂಗವಾಗಿರಲಿಲ್ಲ. ಅಸುರ ಪಟ್ಟಣವಾಗಿರಲಿಲ್ಲ. ಎಲ್ಲೆಡೆಯೂ ಗಂಗಾನದಿಯ ನೀರಿನ ಹರಿವು. ಮುನಿಗಳ ಕುಟೀರಗಳು. ಯಜ್ಞಕುಂಡದಿದೆದ್ದ ಹೊಗೆ. ಹೂವಿನ ಗಿಡಗಳು. ಹಣ್ಣಿನ ಮರಗಳು. ಭೀಷಣನ ಭೀಕರತೆಯನ್ನು ಕಣ್ಣಾರೆ ಕಂಡಿದ್ದ ನನ್ನ ಕಣ್ಣಿಗೂ ಭ್ರಾಂತಿ ಮೂಡುವಂತಹ ವಾತಾವರಣವಲ್ಲಿ ನಿರ್ಮಾಣಗೊಂಡಿತ್ತು.
ಮುನಿಯ ವೇಷದಲ್ಲಿ ನನ್ನೆದುರು ಬಂದ ಭೀಷಣ “ಅಸುರರನ್ನು ಕೊಲ್ಲುವುದು ಸರಿಯಲ್ಲ. ಹಿಂಸೆಯನ್ನು ಮಾಡದಿರು. ದೇವರ ಅರ್ಚನೆಯ ಮೂಲಕ ಸನ್ಮಾರ್ಗದಲ್ಲಿ ಸಾಗು” ಎಂದು ಕಪಟ ಬೋಧನೆ ಮಾಡಿದ.
ತಕ್ಷಣವೇ ಅವನನ್ನು ಗಟ್ಟಿಯಾಗಿ ಹಿಡಿದುಕೊಂಡೆ. ಅವನ ಮೂಲರೂಪವೇ ಒದಗಿಬಂತು. ಮುನಿಯಾಗಿದ್ದವ ಮತ್ತೆ ಅಸುರನಾದ. ಒಡನೆಯೇ ಆಕ್ರಮಿಸಿ ಅವನ ಪಟ್ಟಣದಲ್ಲಿದ್ದ ಸಂಪತ್ತೆಲ್ಲವನ್ನೂ ಸೂರೆಗೊಂಡೆ. ಅದನ್ನು ಹಸ್ತಿನಾವತಿಗೆ ಕಳುಹಿಸಿಕೊಟ್ಟೆ. ಕುದುರೆಯ ಜೊತೆಗೆ ಮುಂದಕ್ಕೆ ಸಾಗಿದ ನಮ್ಮನ್ನು ಕರಬೀಸಿ ಕರೆಯುತ್ತಿತ್ತು ಮಣಿಪುರ…


About The Author

Leave a Reply

You cannot copy content of this page

Scroll to Top