ಕಬ್ಬಿಗರ ಅಬ್ಬಿ – ಸಂಚಿಕೆ ೩

ಶ್ರಾವಣ ಗೀತ

ಮಹಾದೇವ ಕಾನತ್ತಿಲ

ಸಂಕ್ರಮಣ!

ಹೌದು, ಸಂಕ್ರಮಣ, ಒಂದು ಸ್ಥಿತಿಯಿಂದ ಇನ್ನೊಂದಕ್ಕೆ, ಮತ್ತೆ ಮತ್ತೊಂದಕ್ಕೆ!.  ಅಂಗಳದಲ್ಲಿ ಲಂಗದಾವಣಿ ಹಾಕಿ ಕುಣಿದು ಹಾರುತ್ತಿದ್ದ ಹುಡುಗಿ, ಪುಷ್ಪವತಿಯಾಗಿ, ಗಾಂಭೀರ್ಯ ತುಂಬಿ, ಗಜಗಾಮಿನಿಯಾದಾಗ ಸಂಕ್ರಮಣ. ಒಂದು ಮುಂಜಾನೆ, ಕಪ್ಪುಹಸಿರು ಜಡ ಎಲೆಗಳ ಮಾಮರದಲ್ಲಿ, ನಸುಗೆಂಪು ತಳಿರು ಚಿಗುರೊಡೆದಾಗ ಮರಕ್ಕೆ ಸಂಕ್ರಮಣ. ನಲವತ್ತರ ನಸುಕಲ್ಲಿ, ಕಣ್ಣು ಮಬ್ಬಾಗಿ ನೆಟ್ಟ ನೇರ ನೋಟಕ್ಕೆ, ಚಾಳೀಸು ಬಂದಾಗ ಸಂಕ್ರಮಣ. ಅರುವತ್ತಕ್ಕೆ ವೃತ್ತಿಯಿಂದ ನಿವೃತ್ತಿ ಸಂಕ್ರಮಣ.

ಹೆಚ್ಚೇನು! ಸೂರ್ಯೋದಯ,ಸೂರ್ಯಾಸ್ತಮಾನ ದಿನ ರಾತ್ರೆಗಳ ಅದಲು ಬದಲು ಸಂಕ್ರಮಣ!.

 ಪ್ರಕೃತಿಯಲ್ಲಿ, ಬದುಕಿನ ಘಟನೆಗಳಲ್ಲಿ, ಅರ್ಥವ್ಯವಸ್ಥೆಯ ಸಾಧ್ಯತೆಗಳಲ್ಲಿ, ನೇರವಾಗಿ ಚಲಿಸುವ ನಮ್ಮ ಕಾರು, ಅಚಾನಕ್ ಆಗಿ ರಸ್ತೆ ಬಲಕ್ಕೋ, ಎಡಕ್ಕೋ  ತಿರುಗಿದರೆ ಒಂದು ಬಿಂದುವಿನಲ್ಲಿ ದಾರಿ ಸಂಕ್ರಮಿಸುತ್ತದೆ. ಹೌದು ಅಲ್ಲೊಂದು ಸಂಧಿಬಿಂದುವಿದೆ.

ಇಂತಹ ಸಂಕ್ರಮಣಕ್ಕೆ, ಕವಿಮನಸ್ಸನ್ನು ಹೇಗೆ ಸ್ಪಂದಿಸಬಹುದು ಎನ್ನುವುದು ಕೌತುಕವೇನಲ್ಲ. ಕವಿಮನಸ್ಸು ಅತ್ಯಂತ ಸೂಕ್ಷ್ಮ. ಸುತ್ತುಮುತ್ತಲಿನ ಅತಿ ಚಿಕ್ಕ ಬದಲಾವಣೆಗಳನ್ನೂ, ಗಮನಿಸಿ ಸ್ಪಂದಿಸುವ, ಅನುಭವಿಸಿ, ಸೃಜಿಸುವ ಮನಸ್ಸದು.

ಉದಾಹರಣೆಗೆ, ನಿನ್ನೆಯವರೆಗೆ ರಣರಣ ಬಿಸಿಲು, ಸಾಯಂಕಾಲ ಗಾಳಿಬೀಸಿದರೂ, ಒಲೆಯಿಂದ ಹೊರಟ ತಿದಿಯ ಹಾಗೆ ಬೇಯಿಸುವ ಗಾಳಿ. ಧೂಳನ್ನೆಬ್ಬಿಸುವ, ಸುಳಿ ಸುಳಿಯಾಗಿ ತಿರುಗಿಸುವ ಸುಂಟರಗಾಳಿ. ಆಕಾಶದಲ್ಲಿ ಬಿಳೀ ಮೋಡಗಳು ನಿರಾಶೆಯ ಹೆಣವನ್ನು ಹೊತ್ತು ಸ್ಮಶಾನ ಹುಡುಕುವಂತೆ ಸುತ್ತುವಾಗ, ಮಳೆಯೆಲ್ಲಿಯದು! ಎಲ್ಲೋ ಮರೀಚಿಕೆಯಂತೆ ಒಂದೋ ಎರಡೋ ಹನಿ ಉದುರಿಸಿ ವಾತಾವರಣವನ್ನು, ಇಡ್ಲಿ ಬೇಯಿಸುವ ಕುಕ್ಕರ್ ನೊಳಗಿನ ಹಬೆಯಂತೆ ಬೆವರಿಳಿಸುವ ಹವೆ.

 ಹಾಗಿದ್ದಾಗ ಅಚಾನಕ್ ಆಗಿ ಮಳೆ ಬಂದರೆ! ಅದೆಂಥಾ ಮಳೆ!. ಇಳೆ ತಣಿಸುವ, ನೊಂದು ಬಿಕ್ಕಳಿಸುವ ಮನಸ್ಸಿಗೆ ಬೆನ್ನು ಸವರಿ ಸಾಂತ್ವನ ಹೇಳುವ ಅಮ್ಮನ ಸ್ಪರ್ಶದಂತಹಾ ಮಳೆ!. ಮಳೆಯೋ ಮಳೆ.

ಹ್ಞಾ! ಇದೊಂದು ಮೈನವಿರೇಳಿಸುವ ಸಂಕ್ರಮಣವೇ!. ಹೀಗೆ ಉತ್ತರ ಕರ್ನಾಟಕಕ್ಕೆ ಹಾಜರು ಹಾಕುವುದು ಶ್ರಾವಣ!

(ಇವಿಷ್ಟೂ ಮಲೆನಾಡು ಮತ್ತು, ಕರಾವಳಿಗೆ ಅನ್ವಯವಾಗಲ್ಲ. ಅಲ್ಲಿ, ಆಷಾಢ ಪೂರ್ತಿ ಮಳೆಸುರಿದು,ಶ್ರಾವಣದಲ್ಲಿ ಸೋನೆಮಳೆ.)

ಶ್ರಾವಣ ಬಂತೆಂದರೆ, ಬೇಂದ್ರೆಯಂತಹ ಬೇಂದ್ರೆ, ಕರಗಿ ಹರಿಯುತ್ತಾರೆ..

“ಶ್ರಾವಣ ಬಂತು ಕಾಡಿಗೆ ಬಂತು

ನಾಡಿಗೆ ಬಂತು ಬೀಡಿಗೆ

ಬಂತು ಶ್ರಾವಣ ಓ! ಬಂತು ಶ್ರಾವಣ”

ಸಮ ದೃಷ್ಟಿ, ಬೇಂದ್ರೆಯವರ ಶ್ರಾವಣಕ್ಕೆ!.  ಈ ಶ್ರಾವಣ, ಎಲ್ಲರಿಗೂ, ಎಲ್ಲಾ ನೆಲಕ್ಕೂ, ತಾರತಮ್ಯವಿಲ್ಲದೆ ಕದ ತಟ್ಟಿ, ಎಲ್ಲವನ್ನೂ ಹೊಸತಾಗಿಸುವ ಸಂಕ್ರಮಣ ಕ್ರಿಯೆ.

ಶ್ರಾವಣದ ಅಗಾಧತೆ,  ಮನಷ್ಯನ ಯೋಚನೆಗೂ ಮೀರಿದ ಅದರ ಶಕ್ತಿಯನ್ನು, ವ್ಯಾಪ್ತಿಯನ್ನು ಬೇಂದ್ರೆಯವರು ಈ ಕೆಳಗಿನ ಸಾಲುಗಳಲ್ಲಿ ಅನುಭವಿಸುತ್ತಾರೆ.

“ಕಡಲಿಗೆ ಬಂತು ಶ್ರಾವಣಾ| ಕುಣಿಧ್ಹಾಂಗ ರಾವಣಾ|

ಕುಣಿದಾವ ಗಾಳಿ| ಭೈರವನ ರೂಪತಾಳಿ”

ಇಲ್ಲಿ, ಕಡಲು, ಗಾಳಿ ಇತ್ಯಾದಿಗಳು, ಬೇಂದ್ರೆಯವರ ಕಾವ್ಯ ಕುಸುರಿಯ ಹಲವು ಅರ್ಥಸಾಧ್ಯತೆಗಳು.

photo of dara bendre के लिए इमेज परिणाम

ಅವರು ಮುಂದುವರೆದು, “ಶ್ರಾವಣ ಬಂತು ಘಟ್ಟಕ್ಕ ರಾಜ್ಯ ಪಟ್ಟಕ್ಕ, ಬಾಣ ಮಟ್ಟಕ್ಕ” ಅನ್ನುತ್ತಾರೆ. ಶ್ರಾವಣ ಎಂಬ ಪ್ರತಿಮೆಯನ್ನು, ಮಳೆಯಿಂದ, ಎತ್ತರಕ್ಕೆ ಬೆಳೆಸಿ, ಅದಕ್ಕೆ ರಾಜ್ಯಭಾರದ ಹವಾಮಾನದ ಪ್ರತಿಮೆ, ವಿವಿಧ ಬದುಕಿನ ಸ್ತರಗಳನ್ನು ಅದು ಆವರಿಸುವ ಪ್ರತಿಮೆ, ಅದರ ಅಗಾಧತೆ ಇತ್ಯಾದಿ ಆಯಾಮಗಳಿಂದ ಅರ್ಥವರ್ಷವಾಗಿಸುತ್ತಾರೆ.

ಆಷಾಢ ಮಾಸದ ಅಗಂತುಕ, ಅಪರೂಪದ ಅತಿಥಿ ಮಳೆ. ನೆಲ ಹಸನು ಮಾಡಿ, ಬಿತ್ತಿ, ಮಳೆಗಾಗಿ ಕಾಯುವಾಗ, ಅದೋ ನೋಡಿ, ಆಗಸ ತುಂಬಾ ದಟ್ಟ ಮೋಡಗಳು.ಮೋಡಗಳು ಜೀವಜಾಲಕ್ಕೆ ಹೊಸ ಭರವಸೆಯ ಮೋಡ.‌ ಬರೇ ಮೋಡವಲ್ಲ, ಆಗಸದ ತುಂಬಾ ತೂತು ಬಿದ್ದು ಸೋರಿ ಬೀಳುವ ತುಂತುರು ನಿರಂತರ ಮಳೆ, ಆಶೆ ಆಶೋತ್ತರಗಳ ಸಂಕೇತ.

“ಬನಬನ ನೋಡು ಈಗ ಹ್ಯಾಂಗ|

ಮದುವಿ ಮಗನ್ಹಾಂಗ

ತಲಿಗೆ ಬಾಸಿಂಗ|

ಕಟ್ಟಿಕೊಂಡೂ| ನಿಂತಾವ ಹರ್ಷಗೊಂಡು”

ಶ್ರಾವಣ ಎಂದರೆ ಬೇಂದ್ರೆಯವರಿಗೆ ಸೃಷ್ಟಿಯ ಮುಖಬಾಗಿಲು.

 ಅಸಂಖ್ಯ ಬೀಜಗಳು ತಂತಾನೇ ಮೊಳೆತು ಜೀವಸಂಕುಲಗಳ ಚಿಲಿಪಿಲಿ ಎಷ್ಟು ಅಗಾಧ ಎಂದರೆ  ಬೆಟ್ಟಗಳೆಲ್ಲಾ ಹಸಿರಿನ ಅಂಗಿ ತೊಡುತ್ತವೆ. ಶ್ರಾವಣ ಎಂದರೆ ಅದು ಸೃಷ್ಟಿಕ್ರಿಯೆಯ ಉತ್ಸವವೂ ಹೌದು.  ಬನಬನಗಳೂ ಬಾಸಿಂಗ ಕಟ್ಟಿ ಮದುಮಗ, ಮದುಮಗಳಾಗಿ ಸಂಭ್ರಮಿಸುವದನ್ನು ಬೇಂದ್ರೆಯವರು, ಶ್ರಾವಣದ ಮೂಲಕ ಕಾಣುತ್ತಾರೆ.

ರೈತರಿಗೆಲ್ಲ, ಬಿತ್ತಿದ,ಬೀಜ, ಮೊಳಕೆ ಹಸಿರು ಚಿಗುರೊಡೆಯುವ ಸಂತಸ. ಪ್ರಕೃತಿ ಹಸಿರುಮನೆಯಾಗಿ ಹೊಸ ಹಕ್ಕಿಗಳನ್ನು ಕರೆಯುತ್ತೆ, ಬಳ್ಳಿಗಳು ಬಳುಕಿ ಮರವೇರಿ ಹೂಗಳ ಬಾವುಟ ಹಾರಿಸುತ್ತವೆ.

ಇಂತಹಾ ಶ್ರಾವಣ, ಪ್ರಕೃತಿಯ ಸಂಭ್ರಮದ ಬಾಗಿಲು ತೆರೆದಂತೆ,  ಜೀವಸಂಕುಲಕ್ಕೆ ಚೇತನ ಮೂಡಿಸಿದಂತೆ,  ಹಬ್ಬಗಳೂ ಜನಮಾನಸಕ್ಕೆ ಬಣ್ಣ ತುಂಬುತ್ತವೆ.

ಮದುವೆಯಾಗಿ ಗಂಡನಮನೆ ಸೇರಿದ ಹೆಣ್ಣು ಮಗಳನ್ನು ಹೊಕ್ಕುಳಬಳ್ಳಿ ಸೆಳೆಯುತ್ತೆ,ಆಷಾಢ ಮಾಸದ ಕೊನೆಯಲ್ಲಿ. ಅಣ್ಣ ಬಂದು ತವರುಮನೆಗೆ ಕರೆದೊಯ್ಯುವ, ಹಬ್ಬದ ಸಡಗರ ಶ್ರಾವಣದ ಚೌತಿ ಮತ್ತು ಪಂಚಮಿ.

ಜಾನಪದ ಸಂಗೀತಕ್ಕೂ ಮತ್ತು ಶ್ರಾವಣಕ್ಕೂ ಬಿಟ್ಟಿರದ ಸಂಬಂಧ. ‘ಆನಂದ ಕಂದ’ ( ಬೆಟಗೇರಿ ಕೃಷ್ಣಶರ್ಮ) ಅವರು ಜಾನಪದ ಶೈಲಿಯಲ್ಲಿ ಬರೆದ ಹಾಡು..

“ಪಂಚಮಿ ಹಬ್ಬ ಉಳಿದಿದೆ ದಿನ ನಾಕs..

ಅಣ್ಣ ಬರಲಿಲ್ಲ ಯಾಕs ಕರಿಯಾಕs..”

ಅಂತ ಆರ್ತದನಿಯಲ್ಲಿ ಅಣ್ಣನಿಗಾಗಿ ಕಾಯುವ ತಂಗಿಯ ಹಾಡು.  ಈ ಹಾಡು ಮನಮನವನ್ನೂ ಹೊಕ್ಕು, ಪ್ರತಿಯೊಂದು ಮನೆಯಲ್ಲೂ ಗುನುಗುನಿಸಿ, ಬರೆದವರ ಹೆಸರೇ ಮರೆತಷ್ಟು ಜಾನಪದ ಹಾಡಿನ ಸ್ವರೂಪ ಪಡೆದಿದೆ.

ಈ ಶ್ರಾವಣವೇ ಹೀಗೆ. ಇದರ ಮಳೆ, ಇದರ ಮೋಡ, ಮೊಳಕೆಯೊಡೆಯುವ ಹೊಲ, ಎಲ್ಲವೂ ಆಶೆ ಆಶೋತ್ತರಗಳನ್ನು, ಭರವಸೆಗಳನ್ನು ಸೋನೆಮಳೆಯಾಗಿ ಸುರಿಸುತ್ತೆ.

photo of dara bendre के लिए इमेज परिणाम

ಈ ಹಾಡಿನ ಕೆಳಗಿನ ಸಾಲುಗಳನ್ನು ನೋಡಿ..

“ನಮ್ಮ ತವರೀಲಿ ಪಂಚಮಿ ಭಾರಿ

ಮಣದ ತುಂಬಾ ಬಟ್ಟಲ ಕೊಬ್ಬರೀ

ಎಳ್ಳು ಅವಲಕ್ಕಿ ತಂಬಿಟ್ಟು ಸೂರಿ

ನಾನೂ ತಿನುವಾಕಿ ಬಂದ್‌ ಹಾಂಗ ಮನಕ-

ಅಣ್ಣ ಬರಲಿಲ್ಲ ಯಾಕೋ ಕರಿಲಾಕ …”

ಪಂಚಮಿ ಹಬ್ಬದ ಸಿಹಿ ತಿಂಡಿಗಳು, ಮನೆ ಮುಂದೆ ಚಿತ್ರಿಸುವ ರಂಗೋಲಿಗಳು, ಹೆಣ್ಮಕ್ಕಳೆಲ್ಲಾ ಮಕ್ಕಳೆಲ್ಲಾ ಸಪ್ತವರ್ಣದ ಬಳೆ ತೊಟ್ಟು ಗಲಗಲಿಸಬೇಕು, ಹೊಸ ಅಂಗಿ ತೊಟ್ಟು,ಜೋಕಾಲಿ ಆಡಬೇಕು, ಎಷ್ಟೆಂದರೆ, ಈ ಹಬ್ಬವನ್ನೇ, ಜೋಕಾಲಿ ಹಬ್ಬ ಎನ್ನುವಷ್ಟು!.

ಶ್ರಾವಣ ಅಂದರೆ ಬರೇ ಮಳೆಯಲ್ಲ, ಇದೊಂದು ಸಮಾಜದಿಂದ ಸಮಾಜಕ್ಕೇ ಕಳೆಕಟ್ಟುವ ಹಬ್ಬಗಳ ತೋರಣ.

ಶ್ರಾವಣದ ಪಂಚಮಿಯಂದು ಮದುವೆಯಾದ ಹೆಣ್ಣುಮಗಳು ತನ್ನ ತವರಿಗೆ ಬಂದು,  ನಾಗನಿಗೆ ಹಾಲೆರೆದು ತಮ್ನ ಬೆನ್ನು, ಬಸಿರು ತಣ್ಣಗಿರಿಸಬೇಕೆಂದು ನಾಗನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ.

ತನ್ನ ಬೆನ್ನು ಎಂದರೆ ತವರು, ಅಣ್ಣ ತಮ್ಮಂದಿರು, ಬಸಿರು ಎಂದರೆ ಮುಂದಿನ ಪೀಳಿಗೆ. ಹೀಗೆ ತವರಿಗಾಗಿ ಮತ್ತು ತನ್ನ ಪೀಳಿಗೆಗಾಗಿ ಪ್ರಾರ್ಥನೆ ಮಾಡುವಾಗ,ಆಕೆ, ಎರಡು ಮನೆಗಳನ್ನು ತನ್ನ ಮೂಲಕ ಜೋಡಿಸುತ್ತಾಳೆ. ಶ್ರಾವಣ ಕಳೆಯುವ ಕಾಲವಲ್ಲ, ಕೂಡುವ ಕೂಡಿ ಚಿಗುರುವ ಸಮೃಧ್ಧಿಯ ಕಾಲ.

ಹೀಗೆ ಶ್ರಾವಣ, ಕವಿಮನಸ್ಸಿನೊಳಗೆ ಹೇಗೆ ಹಲವಾರು ಪ್ರತಿಮೆಗಳ ರೂಪತಳೆದು ಜನ್ಮಿಸುತ್ತದೋ,ಹಾಗೆಯೇ ಜಾನಪದದಲ್ಲೂ ಹಲವು ಆಯಾಮಗಳಿಗೆ ರೂಪಕವಾಗಿ, ಹಳತನ್ನು ಮರೆಯದೆ ಹೊಸತಿಗೆ ತೆರೆಯುವ, ಸ್ವಸ್ಥ ಸಮಾಜದ ನಿರ್ಮಾಣದ, ಸಂಕ್ರಮಣ, ಜೀವಸಂಭ್ರಮ.

**********

14 thoughts on “ಕಬ್ಬಿಗರ ಅಬ್ಬಿ – ಸಂಚಿಕೆ ೩

    1. ನಿಮಗೆ ಇಷ್ಟವಾದರೆ, ನಾನು ಬರೆದದ್ದಕ್ಕೆ ಅರ್ಥ ತುಂಬಿದ ಹಾಗೆ, ಜಯಶ್ರೀ ಅವರೇ. ತುಂಬಾ ಧನ್ಯವಾದಗಳು

      1. ನೀವು ಓದಿ ಸಂತೋಷಪಟ್ಟರೆ, ಬರೆದ ಅಕ್ಷರಗಳಿಂದ ಧನ್ಯ.

  1. ಬೆಚ್ಚನೆಯ ಅಡುಗೆಯಟ್ಟದ ಮೇಲೆ, ತಂಪಾಗಿ ಮಡಿಸಿಟ್ಟ ತರಕಾರಿ ಬೀಜಗಳು ಕೆಳಗಿಳಿದು, ಇಳೆಯ ಒಡಗಿಲಿಗೆ ಹೊಕ್ಕು ಬಸಿರಾಗಿ, ಚಿಕ್ಕ ಎಲೆಗಳೊಂದಿಗೆ ಮತ್ತೆ ಹುಟ್ಟಿ ಬರುವ ಕಾಲ ಶ್ರಾವಣ. ನಾಗರ ಪಂಚಮಿಗೆರದ ತಂಪಾದ ಹಾಲು ,ಅರಶಿನ ,ನಾರೀಕೇಳದ ನೀರಿನೊಂದಿಗೆ ಕಡಲು ಸೇರಿದಾಗ, ಸಾತ್ವಿಕ ಜನರಿಗಾಗಿ ತನ್ನ ನೆಲ ಬಿಟ್ಟಕೊಟ್ಟ ನಾಗನಿಗೊಂದು ಸನ್ಮಾನ . ಮುಂಬರುವ ಹಬ್ಬ ಹರಿದಿನಗಳ ಸಂಭ್ರಮದ ನಾಡಿನರಮನೆಗೆ ಹೆಬ್ಬಾಗಿಲೇ.. ಮಾಸ ಶ್ರಾವಣ. ಕಾನತ್ತಿಲದ ಕವಿಹೃದಯ ಮಿಡಿಯಿತು ವರಕವಿಗಾಗಿ ..ಅದಕೊಂದು ನುಡಿನಮನ.

    1. ಎಷ್ಟು ಅದ್ಭುತವಾಗಿ ಬರೆಯುತ್ತೀರಿ, ನೀವು!
      ಶ್ರಾವಣದ ಮೊಳಕೆಯ ಬೀಜ ಅಡುಗೆಯಟ್ಟದಲ್ಲಿ ಮಡಚಿಟ್ಟದ್ದು ಕಾವ್ಯಪ್ರತಿಮೆ.
      ಕಬ್ಬಿಗರ ಅಬ್ಬಿಗೆ, ನಿಮ್ಮ ಸೃಜನಶೀಲ ಪ್ರತಿಕ್ರಿಯೆ, ಯಾವ ಕಾವ್ಯದ ಅಬ್ಬಿಗೂ ಕಡಿಮೆಯಲ್ಲ.
      ಶ್ರಾವಣದ ಶುಭಾಶಯಗಳು

  2. ತುಂಬಾ ಸುಂದರವಾಗಿ ಮೂಡಿದೆ ಶ್ರಾವಣಗೀತ. ಸಾಲು ಸಾಲುಗಳಲ್ಲಿಯೂ ರೂಪಕ,ಪ್ರತಿಮೆಗಳು ತುಂಬಿ ತುಳುಕುತ್ತಿವೆ. ಬದುಕಿನ ಮಜಲುಗಳಲ್ಲಿ, ಪ್ರಕೃತಿಯ ಸೌಂದರ್ಯದಲ್ಲಿ, ಚಿಕ್ಕ ಚಿಕ್ಕ ಘಟನೆಗಳಲ್ಲಿ ಸಂಕ್ರಮಣ ಹೇಗೆ ಹಾಸು ಹೊಕ್ಕಾಗಿದೆ ಎಂಬುದನ್ನು ಅದ್ಭುತವಾಗಿ ವಿವರಿಸಿರುವಿರಿ ಸರ್. ಜೊತೆಗೆ ಬೇಂದ್ರೆಯವರ ಕವಿತೆಗಳ ಸಾಲುಗಳ ಅಂದದ ಚಿತ್ತಾರ ಹೆಣೆದಿರುವಿರಿ. ಮತ್ತೆ ಮತ್ತೆ ಓದಬೇಕೆನ್ನಿಸುವ ಬರಹ.

    1. ಸುಧಾ ಅವರೇ
      ನಿಮ್ಮ ಪ್ರತಿಕ್ರಿಯೆ, ತುಂಬಾ ಖುಷಿ ಕೊಟ್ಟಿತು. ನೀವೂ ಎಷ್ಟು ಚಂದ ಬರೀತೀರಿ. ಶ್ರಾವಣದ ಹಬ್ಬ ಬರೆಯುವ ಹಬ್ಬ, ಅಕ್ಷರ ಹಬ್ಬ ಆಗಲಿ!.
      ಧನ್ಯವಾದಗಳು

      1. ಸುಂದರವಾದ ಸ್ಪಂದನೆಗೆ ಮನದಾಳದ ಧನ್ಯವಾದಗಳು ಮಹಾದೇವ ಕಾನತ್ತಿಲರವರೇ.

  3. ನಾನು ಇದನ್ನು ಓದುವಷ್ಟರಲ್ಲಿ ಶ್ರಾವಣ ನಾಡಿಗೆ ಬಂದು ಹೋಗಿ ಆಗಿದೆ ಮತ್ತೆ ಶ್ರಾವಣದ ಸೊಬಗನ್ನು ನೆನಪ ಮೆಲುಕಿಗೆ ತಂದಿಟ್ಟ ಅದ್ಭುತ ಚಿತ್ರಣ.
    ನನಗೂ ಪಂಚಮಿ ಹಬ್ಬ ಹಾಡು ಆನಂದ ಕಂದ ರದು ಎಂದು ತಿಳಿದಿದ್ದು ಈಗಲೇ. ಜಾನಪದ ಗೀತೆ ಎಂದೇ ಭಾವಿಸಿದ್ದರು .
    ಧನ್ಯವಾದಗಳು ಸರ್ .

    1. ಓಹ್! ಸುಜಾತಾ ಅವರೇ.
      ಶ್ರಾವಣ ನಿಮಗೆ ಸದಾ ಸಿದ್ಧಿಸಲಿ!. ಶ್ರಾವಣದ ಹಸಿರಿನ ಉಸಿರು ಕ್ಷಣ ಕ್ಷಣಕ್ಕೂ ಉಸಿರಾಗಲಿ!
      ಪಂಚಮಿ ಹಬ್ಬ ಹಾಡು ಜಾನಪದದ ದೇಹಾತ ಹೊತ್ತು ಮೂಡಿದೆ. ಆನಂದಕಂದರ ಕಾವ್ಯ ದರ್ಶನವೇ ಅದಾಗಿತ್ತು ಅನಿಸುತ್ತೆ.

      ನಿಮ್ಮ ಪ್ರೇರಣಾದಾಯಕ ಮಾತುಗಳಿಗೆ ತುಂಬಾ ಧನ್ಯವಾದಗಳು

  4. ಶ್ರಾವಣದ ಪ್ರತಿಮೆಗಳ ಅನಾವರಣ ಚನ್ನಾಗಿ ಮೂಡಿದೆ.ಹಲವು ಅರ್ಥ ಸಾಧ್ಯತೆಗಳನ್ನು ತೆರೆದಿಡುವ ಮೂಲಕ ಶ್ರಾವಣದ ವಿವರಣೆ ಸೆಳೆಯುತ್ತದೆ.

    1. ಸುಜಾತಾ ಲಕ್ಷ್ಮೀಪುರ ಅವರೇ,
      ಶ್ರಾವಣ ಎಂಬ ಪ್ರಕೃತಿಯ ಅದ್ಭುತ ವಿದ್ಯಮಾನ ಅನೇಕ ಕವಿಗಳಿಗೆ ಪ್ರೇರಣೆಯಾಗಲು, ಅದರ ಬಣ್ಣ, ಅದರ ಚಿಗುರು ಮತ್ತು ಅದರ ಸಂಭ್ರಮವೇ ಕಾರಣ.
      ತುಂಬಾ ಧನ್ಯವಾದಗಳು

Leave a Reply

Back To Top