ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಸುಜಾತಾ ಲಕ್ಮನೆ

ಇಲ್ಲಿ ಅಬ್ಬರದ ಬಿನ್ನಾಣ, ಮಾತಿನ ಸಂಚಲಿ ಮೌನ ಗೆಲ್ಲುವುದಿಲ್ಲ
ಸಭ್ಯ ನಡೆಗೆಲ್ಲ ನ್ಯಾಯದ ತಕ್ಕಡಿಯಲಿ ಮಾನ್ಯತೆ ಸಿಗುವುದಿಲ್ಲ

ತಾ ನಡೆವ ದಾರಿಯೆಲ್ಲವೂ ರಾಜಪಥವೆಂಬ ವಿಭ್ರಮೆ ತರವೇ
ಯಾವ ಪಯಣವೂ ಕವಲೊಡೆಯದೇ ಗುರಿ ತಲುಪುವುದಿಲ್ಲ

ಶಶಿ ಸೂಸುವ ಕಿರಣ ಪ್ರಭೆ ಇಳೆಯ ಕಣಕಣಕೂ ತಂಪನ್ನೆರಚದೇ
ಒಳತೋಟಿಗಳ ತೂರಿದಂತೆ ಎದೆಯ ತೊಳಲಾಟ ತಗ್ಗುವುದಿಲ್ಲ

ಅಂತರಂಗ ತೆರೆದಿಟ್ಟ ಭಾವಗಳು ಬೀದಿಗಳಲಿ ಬಿಕರಿಯಾಗುತ್ತವೆ
ಸುಳ್ಳಿನ ಜಗದಲಿ ಸತ್ಯದ ಕದಪಿಗಿಟ್ಟ ಮಸಿ ಬಿಳಿಯಾಗುವುದಿಲ್ಲ

ನೇರವಾಗಿ ನಿಂತಷ್ಟೂ ವಕ್ರರೇಖೆಯ ಬಣ್ಣ ಬೆನ್ನಿಗೆ ಮೆತ್ತುವರು
ಒಳದನಿಯ ಧಿಕ್ಕರಿಸಿ ನಡೆದಂತೆಲ್ಲ ಬಂಧ ಹಿತವಾಗುವುದಿಲ್ಲ

ಕೈ ಚೀಲ ಹಿಡಿದು ಹಲ್ಕಿರಿದು ಓಲೈಸುವವರಿಗಷ್ಟೇ ಮನ್ನಣೆಯಿಲ್ಲಿ
ನಲ್ನುಡಿಗಳಿಗೂ ಕೆಸರೆರಚುವವರ ಘನತೆ ಅಟ್ಟಕ್ಕೇರುವುದಿಲ್ಲ

ಒಲವು, ಆದರವಿಲ್ಲದ ಕಡೆ ಇದ್ದು ಸಾಧಿಸುವುದೇನು “ಸುಜೂ
ಅಸಲಿ, ನಕಲಿಯನೆ ಒರೆ ಹಚ್ಚಲು ಸೋತರೆ ಮೌಲ್ಯವಿರುವುದಿಲ್ಲ

**************************

About The Author

4 thoughts on “ಗಜಲ್”

Leave a Reply

You cannot copy content of this page

Scroll to Top