ಪುಸ್ತಕ ವಿಮರ್ಶೆ
ನಾಗರಾಜಹರಪನಹಳ್ಳಿ
ಬಹಳ ದಿನಗಳಿಂದ ನನ್ನ ಕಾಡುತ್ತಿರುವ ವಿಷಯವನ್ನು ಇಲ್ಲಿ ಪ್ರಸ್ತಾಪಿಸುವೆ. ಒಂದು ದೇವನೂರು ಮಹಾದೇವ ಅವರ `ಎದೆಗೆ ಬಿದ್ದ ಅಕ್ಷರ’ ಕೃತಿ ಹಾಗೂ ಇನ್ನೊಂದು ಸಾರ್ವಜನಿಕರ ಕವಿ ಎಂದೇ ಹೆಸರಾಗಿದ್ದ ಡಾ.ಸಿದ್ದಲಿಂಗಯ್ಯ ಅವರ `ನನ್ನ ಜನಗಳು ಮತ್ತು ಇತರೆ ಕವಿತೆಗಳು’. ಕನ್ನಡದಲ್ಲಿ ಬಹಳ ಮಹತ್ವದ ಎರಡು ಕೃತಿಗಳ ಹೆಸರು ಹೇಳಿ ಅಂತ ಯಾರಾದರೂ ನನ್ನ ಪ್ರಶ್ನಿಸಿದರೆ ನಾನು ಮೊದಲು ಹೇಳುವ ಕೃತಿಗಳ ಹೆಸರು `ಎದೆಗೆ ಬಿದ್ದ ಅಕ್ಷರ’, `ನನ್ನ ಜನಗಳು’ ಕವಿತಾ ಸಂಕಲನ. ಯಾಕೆ ಈ ಎರಡು ಕೃತಿಗಳು ಮಹತ್ವದವು ? ಯಾಕೆ ಈ ಕೃತಿಗಳನ್ನು ಓದಬೇಕು ? ಎಂಬುದಕ್ಕೆ ಒಂದಿಷ್ಟು ಹಿನ್ನೆಲೆ ಕಾರಣಗಳನ್ನು ನೋಡಬೇಕಾಗುತ್ತದೆ. ಹಾಗೆಯೇ ದೇವನೂರು ಮತ್ತು ಡಾ.ಸಿದ್ದಲಿಂಗಯ್ಯ ಇಬ್ಬರಲ್ಲಿ ಯಾರು ಇಷ್ಟ ಎಂದು ಪ್ರಶ್ನಿಸಿದರೆ, ದೇವನೂರು ನನ್ನ ಮೊದಲ ಉತ್ತರ. ಕಾರಣ ಇದೆ. ವಿವರಿಸುವೆ. ಇಬ್ಬರದೂ ಒಂದೊಂದು ದಾರಿ. ಇಬ್ಬರೂ ಬದುಕಿರುವಾಗಲೇ ಇತಿಹಾಸ ಸೃಷ್ಟಿಸಿದವರು. ಇಬ್ಬರಲ್ಲೂ ಅಗಾಧ ಪ್ರತಿಭೆ ಇದೆ. ಇಬ್ಬರೂ ಕರ್ನಾಟಕದ ಜನ ಜೀವನದ ಮೇಲೆ, ಶೋಷಿತರ ಮೇಲೆ, ದುಡಿಯುವ ಜನರ, ದಲಿತ ಸಮುದಾಯದ ಅಕ್ಷರಸ್ಥರ ಆಲೋಚನೆಗಳ ಮೇಲೆ ಪ್ರಭಾವ ಬೀರಿದವರು. ಒಬ್ಬರು ಅಧಿಕಾರದ ಬೆನ್ನು ಹತ್ತಿದವರು. ಇನ್ನೊಬ್ಬರು ಅಧಿಕಾರ ಕೇಂದ್ರವೇ ತಮ್ಮ ಮನೆಯ ಬಳಿಗೆ ಬರುವಂತೆ ಬದುಕಿದವರು. ಮುಖ್ಯಮಂತ್ರಿಯೇ ಮನೆಬಾಗಿಲಿಗೆ ಬಂದು ಮಾತಾಡಿಕೊಂಡು, ಸಲಹೆ ಕೇಳಿಕೊಂಡು ಹೋಗುವಂತೆ ಬದುಕಿದವರು. ಒಬ್ಬರು ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ತಾತ್ವಿಕ ಕಾರಣಕ್ಕೆ ನಿರಾಕರಿಸಿದವರು. ಮತ್ತೊಬ್ಬರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ಅಪ್ಪಿಕೊಂಡವರು. ಒಬ್ಬರು ಸಮಾಜದ ಮತ್ತು ಸರ್ಕಾರದ ನಡೆಗಳಿಗೆ ಪ್ರತಿಕ್ರಿಯಿಸುತ್ತಾ ಸಾಗಿದವರು. ಮತ್ತೊಬ್ಬರು ಎಲ್ಲಾ ಘಟನೆಗಳಿಗೂ ಪ್ರತಿಕ್ರಿಯಿಸಿದೇ ಮೌನಿಯಾದವರು.
ಇದೆಲ್ಲಾ ಸಿದ್ಧಲಿಂಗಯ್ಯ ಮತ್ತು ದೇವನೂರು ಸಮಕಾಲೀನರಿಗೆ ಗೊತ್ತಿದೆ. ಆದರೆ ಅವರ ನಂತರದ ತಲೆಮಾರಿಗೆ, ಇವತ್ತಿನ ಯುವ ಜನಾಂಗಕ್ಕೆ ಈ ಇಬ್ಬರು ಬರಹದ ಬಗ್ಗೆ ಸ್ವಲ್ಪವಾದರೂ ಗೊತ್ತಿರಬಹುದು, ಆದರೆ ಅವರ ಬದುಕಿನ ದಾರಿಯ ಬಗ್ಗೆ, ನಿಲಯವುಗಳ ಬಗ್ಗೆ, ಸವೆಸಿದ ಬದುಕಿನ ವಿವರಗಳು ಗೊತ್ತಿರಲಿಕ್ಕಿಲ್ಲ.ಜೊತೆಗೆ
ಕೆಲ ಸಂಗತಿಗಳು ಮರೆತು ಹೋಗಬಾರದು ಎಂಬ ಕಾರಣಕ್ಕೆ ಇಲ್ಲಿ ಪ್ರಸ್ತಾಪಿಸುವೆ. ಕಾರಣ ನಮ್ಮ ಕಣ್ಣ ಮುಂದಿರುವ ಎರಡು ಭಿನ್ನ ದಾರಿಗಳ ಆಯ್ಕೆಯಲ್ಲಿ ಯಾವ ಹಾದಿಯಲ್ಲಿ ಸಾಗಬೇಕು ಎಂಬ ಸ್ಪಷ್ಟತೆ ಇದ್ದರೆ ಒಳಿತು. ಇವತ್ತಿನ ಆಧುನಿಕ ಯುಗದಲ್ಲಿ ವೇಗವಾಗಿ ಪ್ರಸಿದ್ಧಿ ಪಡೆವ ಮನಸ್ಥಿತಿಯಲ್ಲಿ ಕಠಿಣ ಹಾದಿಯನ್ನು, ಆದರ್ಶದ ಮೌಲ್ಯದ ಹಾದಿಯನ್ನು ಹಿಡಿಯುವವರು ಎಷ್ಟು ಜನ ಇದ್ದಾರೆ ? ಯಾರಿಗೆ ಬೇಕಾಗಿದೆ ಕಠಿಣ ಹಾದಿ ? ಈಗ ಕಠಿಣ ಹಾದಿ ಬೇಕೋ, ಅವಕಾಶವಾದಿ ದಾರಿ ಬೇಕೋ ಎಂಬ ನಿರ್ಣಯ ಹೊಸ ತಲೆಮಾರಿಗೆ ಬಿಟ್ಟದ್ದು. ದೇವನೂರು ಮಹಾದೇವ ಅವರ ಹೆಸರನ್ನು ನಾನು ಮೊದಲು ಕೇಳಿದ್ದು ೧೯೯೧ರಲ್ಲಿ. ಅವರ ನೀಳ್ಗತೆ ಒಡಲಾಳ ಎಂ.ಎ.ಕನ್ನಡ ವಿದ್ಯಾರ್ಥಿಗಳಿಗೆ ಪಠ್ಯವಾಗಿತ್ತು. ಹಸಿವು ಮತ್ತು ಆಸ್ತಿತ್ವದ ಪ್ರಶ್ನೆಯನ್ನು ಕಟ್ಟಿಕೊಡುವ ಹಾಗೂ ದಲಿತರ ಹಸಿವಿನ ಹೋರಾಟವನ್ನು ಒಡಲಾಳದ ಸಾಕವ್ವನ ಧ್ವನಿಯ ಮೂಲಕ ಕಟ್ಟಿಕೊಡುವ ಲೇಖಕ ಹೊಸ ಲೋಕವನ್ನು ಕನ್ನಡಿಗರ ಮುಂದೆ ಇಟ್ಟಿದ್ದರು. ಇದಕ್ಕೂ ಮುನ್ನ ದ್ಯಾವನೂರು ಕಥಾ ಸಂಕಲನ ಕನ್ನಡ ಸಾಹಿತ್ಯದಲ್ಲಿ ಸಂಚಲನ ಮೂಡಿಸಿತ್ತು. ಕುಂಬಾರ ವೀರಭದ್ರಪ್ಪನವರು ಆ ಹೊತ್ತಿಗಾಗಲೇ ದಲಿತರ ಹಸಿವಿನ ಕತೆಯನ್ನು ಠೊಣ್ಣಿ ಮತ್ತು ಕತ್ತಲನು ತ್ರಿಶೂಲ ಹಿಡಿದ ಕತೆ ಹಾಗೂ ಇತರ ಕತೆಗಳಲ್ಲಿ ಕಟ್ಟಿಕೊಟ್ಟಿದ್ದರು. ಕುಂವೀ ಕತೆಗಳಲ್ಲಿ ಬರುವ ಆಕ್ರೋಶ, ದೇವನೂರು ಕತೆಗಳಲ್ಲಿ ಭಿನ್ನವಾಗಿದ್ದರೂ, ಭಾಷಾ ಬಳಕೆ ಮತ್ತು ಕತೆ ಕಟ್ಟುವ ಮತ್ತು ಪ್ರಾಮಾಣಿಕ ಅಭಿವ್ಯಕ್ತಿಯಿಂದ ದ್ಯಾವನೂರು ಕತೆಗಳು ಕನ್ನಡದಲ್ಲಿ ಮೈಲಿಗಲ್ಲಾದವು. ದೇವನೂರು ಅವರ “ಎದೆಗೆ ಬಿದ್ದ ಅಕ್ಷರ” ಕೃತಿಯಂತೂ ಕನ್ನಡ ಬರುವವರೆಲ್ಲಾ ಓದಲೇ ಬೇಕಾದ ಕೃತಿ. ಎದೆಗೆ ಬಿದ್ದ ಅಕ್ಷರದಲ್ಲಿ ಬರುವ ಆರಂಭದ ಲೇಖನಗಳಾದ ನಾನು ಚಿತ್ರಿಸಿದಂತೆ ನನ್ನ ದೇವರು, ನನ್ನ ದೇವರು, ಮನವ ಕಾಡುತಿದೆ, ದಯೆಗಾಗಿ ನೆಲ ಒಣಗಿದೆ, ಮೂರ್ಛಾವಸ್ಥೆಯಲ್ಲಿ ಕಾರುಣ್ಯ, ಕೇವಲ ಮನುಷ್ಯನಾಗುವುದೆಂದರೆ, ಅಸ್ಪೃಶ್ಯತೆ ನಿನ್ನ ಮೂಲ ಎಲ್ಲಿ? ಎಂಬ ಪುಟ್ಟ ಪುಟ್ಟ ಬರಹಗಳನ್ನು ಓದಲೇ ಬೇಕು. ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವುದು…ಎಂಬ ಆಶಾವಾದ ದೇವನೂರು ಅವರದು. ನನ್ನದು ಕೂಡಾ.
ಅತ್ಯಂತ ಕಡಿಮೆ ಬರೆದು ಅಂತರಾಷ್ಟ್ರೀಯ ಮಟ್ಟದಲ್ಲಿ ದೇವನೂರು ಭಾರತೀಯ ಸಾಹಿತ್ಯಕ್ಕೆ ಹೆಸರು ತಂದು ಕೊಟ್ಟಿದ್ದರು. ಮೈಸೂರಿನ ಸಿಐಐಎಲ್ ನಲ್ಲಿ ಕೆಲಸ ಮಾಡುತ್ತಿದ್ದ ದೇವನೂರು ಕೆಲಸಕ್ಕೆ ರಾಜೀನಾಮೆ ನೀಡಿ ಕೃಷಿಯನ್ನು ಆಯ್ಕೆ ಮಾಡಿಕೊಂಡರು. ಶ್ರವಣಬೆಳಗೋಳದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಅವರು ಆಯ್ಕೆಯಾಗಿದ್ದರು. ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳನ್ನು ಸರ್ಕಾರ ಅನುಷ್ಠಾನಕ್ಕೆ ತರುವುದಿಲ್ಲವಾದರೆ, ಅಧ್ಯಕ್ಷತೆ ವಹಿಸಿ ಮಾತನಾಡುವುದು ವ್ಯರ್ಥ ಎಂದು ಅವರು ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವಹಿಸಲು ನಿರಾಕರಿಸಿದರು. ಹೀಗೆ ಆದರ್ಶದ ಹಾದಿಯನ್ನು ದೇವನೂರು ಆಯ್ಕೆ ಮಾಡಿಕೊಂಡರು. ದಲಿತ ಚಳುವಳಿಯನ್ನು ಪ್ರಭಾವಿಸಿದರು. ನಾಡಿನ ಪ್ರಗತಿಪರ ಸಂಘಟನೆಗಳನ್ನು ಒಗ್ಗೂಡಿಸಲು ಯತ್ನಿಸಿದರು. ಈಗಲೂ ಚಲನಶೀಲ ರಾಜಕೀಯ ಪಕ್ಷ ಕಟ್ಟಲು ಅವರ ಪ್ರಯತ್ನ ನಿಂತಿಲ್ಲ.
ಇನ್ನು ಸಿದ್ಧಲಿಂಗಯ್ಯ ೧೯೭೫ ರಲ್ಲಿ ಹೊಲೆ ಮಾದಿಗರ ಹಾಡು ಬರೆದರು. ೧೯೭೯ರಲ್ಲಿ ಸಾವಿರಾರು ನದಿಗಳು ಕಾವ್ಯವನ್ನು ಕನ್ನಡಕ್ಕೆ, ಕರ್ನಾಟಕಕ್ಕೆ ನೀಡಿದರು. ಆಗ ಸಿದ್ದಲಿಂಗಯ್ಯ
ಕರ್ನಾಟಕದ ಸಾರ್ವಜನಿಕ ಕವಿ ಎಂದೇ ಹೆಸರಾಗಿದ್ದರು. “ಹಸಿವಿನಿಂದ ಸತ್ತೋರು ಸೈಜುಗಲ್ಲು ಹೊತ್ತವರು,ವದೆಸಿಕೊಂಡು ವರಗಿದವರು ನನ್ನ ಜನಗಳು.ಹೊವಲನುತ್ತು ಬಿತ್ತೋರು ಬೆಳೆಯ ಕುಯ್ದು ಬೆವರೋರು, ಬಿಸಿಲಿನಲ್ಲಿ ಬೇಯೋರು ನನ್ನ ಜನಗಳು”.
“ನಿನ್ನೆ ದಿನ
ನನ್ನ ಜನ
ಬೆಟ್ಟದಂತೆ ಬಂದರು
ಕಪ್ಪು ಮುಖದ ಬೆಳ್ಳಿಗಡ್ಡ ಉರಿಯುತಿರುವ ಕಣ್ಣುಗಳು
ಹಗಲ ರಾತ್ರಿಗಳನು ಸೀಳಿ ನಿದ್ದೆಯನ್ನು ಒದ್ದರು
ಕ್ರಾಂತಿಯ ಬಿರುಗಾಳಿಯಲ್ಲಿ ಕೈ ಬೀಸಿದ ನನ್ನ ಜನ
ಛಡಿಯ ಏಟು ಹೊಡೆದವರ
ಕುತತಿಗೆಗಳ ಹಿಡಿದರು
ಪೊಲೀಸರ ದೊಣ್ಣೆಗಳು ಏಜೆಂಟರ ಕತ್ತಿಗಳು
ವೇದಶಾಸ್ತ್ರ ಪುರಾಣ ಬಂದೂಕದ ಗುಡಾಣ,
ತರಗೆಲೆ ಕಸಕಡ್ಡಿಯಾಗಿ ತೇಲಿ ತೇಲಿ ಹರಿದವು
ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು…
ಹೀಗೆ… ಸಿದ್ಧಲಿಂಗಯ್ಯನವರ ಕವಿತೆಯನ್ನು ದಲಿತರ ಹೋರಾಟಕ್ಕೆ ಬಳಸಿದರು. ರೈತ ಹೋರಾಟಗಳಿಗೆ, ಕಾರ್ಮಿಕರ ಹೋರಾಟಗಳಿಗೆ ಸಹ ಸಿದ್ಧಲಿಂಗಯ್ಯನವರ ಕಾವ್ಯ ಬಳಕೆಯಾಯಿತು. ಯಾರಿಗೆ ಬಂತು, ಎಲ್ಲಿಗೆ ಬಂತು, ನಾಲ್ವತ್ತೇಳರ ಸ್ವಾತಂತ್ರ್ಯ ಕವಿತೆಯಂತೂ ಹೋರಾಟಗಾರರ ನಾಲಿಗೆಯ ಶಕ್ತಿಯಾಗಿತ್ತು. ೧೯೭೫ ರಿಂದಾಚೆಗೆ ದಲಿತರು ಹೊಸ ಪ್ರಜ್ಞಾವಂತ ಜನಾಂಗವಾಗಿ ಕರ್ನಾಟಕದಲ್ಲಿ ಸಿದ್ಧಲಿಂಗಯ್ಯನವರ ಕವಿತೆಗಳ ಎರಕದಲ್ಲಿ ರೂಪುಗೊಂಡರು. ಅದಕ್ಕಾಗಿಯೇ ದಲಿತರ ಮೆರವಣಿಗೆ ಬೀದರ್ ನಿಂದ ಕೋಲಾರದತನಕ ಯಾವುದೇ ಮೂಲೆಯಲ್ಲಿ ನಡೆದರೂ ಅಲ್ಲಿ ಕವಿಯ ಹಾಡುಗಳನ್ನು ಹಾಡುತ್ತಿದ್ದರು. ಅದಕ್ಕಾಗಿಯೇ ಇದು ಸಾರ್ವಜನಿಕ ಕಾವ್ಯದ ಅಂತಿಮ ಯಶಸ್ಸು ಎನ್ನುತ್ತಾರೆ ಕನ್ನಡದ ಖ್ಯಾತ ವಿಮರ್ಶಕ ಡಿ.ಆರ್.ನಾಗರಾಜ್. ಕುತೂಹಲದ ಸಂಗತಿಯೆಂದರೆ ಕವಿ ಸಿದ್ಧಲಿಂಗಯ್ಯನವರ ಮೊದಲ ಕವಿತೆಗಳಲ್ಲಿ ಅಂಬೇಡ್ಕರ್,ಮಾರ್ಕ್ಸವಾದ ಕಾಣುವ ಭಾವನೆಗಳ ಖಾಚಿತ್ಯ ಅವರ ಎರಡನೇಯ ಹಂತದ ಕಾವ್ಯದಲ್ಲಿಲ್ಲ ಎಂದು ಡಿ.ಆರ್.ನಾಗರಾಜ್ ಗುರುತಿಸಿದ್ದಾರೆ.
ಹೌದು. ಮುಂದೆ ರಾಮಕೃಷ್ಣ ಹೆಗಡೆ ಅವರ ಸ್ನೇಹದಿಂದ ವಿಧಾನ ಪರಿಷತ್ತನ್ನು ಸಹ ಸಿದ್ಧಲಿಂಗಯ್ಯ ಪ್ರವೇಶಿಸಿದರು. ಬಿಜೆಪಿ ಅಧಿಕಾರದ ಅವಧಿಯಲ್ಲಿ ಸಹ ವಿಧಾನಪರಿಷತ್ ಸದಸ್ಯರಾಗಿ ಕೆಲಸ ಮಾಡಿದರು. ಅನೇಕ ಪ್ರಚಲಿತ ವಿದ್ಯಮಾನಗಳಿಗೆ ಮೌನಿಯಾದರು. ಪಂಪ ಪ್ರಶಸ್ತಿ ಸಹ ಪಡೆದರು. ೨೦೨೦ ಫೆಬ್ರುವರಿಯಲ್ಲಿ ಬನವಾಸಿಯಲ್ಲಿ ಪಂಪ ಪ್ರಶಸ್ತಿ ಸ್ವೀಕರಿಸಿದ ಸಿದ್ಧಲಿಂಗಯ್ಯ ಪ್ರಭುತ್ವವನ್ನು ಹೊಗಳಿದರು. ಮುಖ್ಯಮಂತ್ರಿಯ ಕಾರ್ಯವೈಖರಿ ಪ್ರಶಂಸಿದರು. ಪ್ರಭುತ್ವದ ಜೊತೆಗಿದ್ದೇ, “ಅರಸರನ್ನು ಒಲೈಸಿ ಬಾಳುವುದು ಕಡು ಕಷ್ಟ” ಎಂದ ಪಂಪನ ಹೆಸರೆತ್ತಲಿಲ್ಲ ನಮ್ಮ ಸಿದ್ಧಲಿಂಗಯ್ಯನವರು. ಪಂಪನ ಕಾವ್ಯದ ಒಂದೇ ಒಂದು ಸಾಲನ್ನು ಅವರ ಪ್ರಸ್ತಾಪಿಸಲಿಲ್ಲ. ಸಾಹಿತ್ಯದ ಕುರಿತು ಮಾತೇ ಆಡಲಿಲ್ಲ. ದಲಿತ ಚಳುವಳಿಗೆ ದಿಕ್ಕು ತೋರಿಸಿಬೇಕಿದ್ದ ಕ್ರಾಂತಿಕಾರಿ ಕವಿ ಮೌನಕ್ಕೆ ಜಾರಿದರು. ಇದೇ ಕಾಲದ ವಿಪರ್ಯಾಸ.
ಎರಡು ಧ್ರುವಗಳು :
ಈಗಲೂ ಸರ್ಕಾರಗಳು ಎಡವಿದಾಗ ಅದಕ್ಕೆ ಪ್ರತಿಕ್ರಿಯಿಸುತ್ತಾ ಪ್ರತಿರೋಧವನ್ನು ಕಾಲ ಕಾಲಕ್ಕೆ ದೇವನೂರು ಮಹಾದೇವ ಎತ್ತುತ್ತಲೇ ಬಂದಿದ್ದಾರೆ. ತಾವು ನಡೆದ ದಾರಿಯಲ್ಲಿ ಉತ್ತರ ಧ್ರುವ, ದಕ್ಷಿಣ ಧ್ರುವಗಳಿಂತಿರುವ ದೇವನೂರು ಮತ್ತು ಸಿದ್ಧಲಿಂಗಯ್ಯ ನಾಡಿನ ಯುವ ಜನತೆಗೆ ಏನು ಸಂದೇಶವನ್ನು ತಮ್ಮ ಬದುಕಿನ ಮೂಲಕ ಹೇಳಿದ್ದಾರೆ ಎಂಬುದು ನಮ್ಮ ಕಣ್ಣಮುಂದಿದೆ. ಆಯ್ಕೆ ಮಾತ್ರ ನಮ್ಮದು…
******************
ಉತ್ತಮ ಬರಹ ಸರ್..
ಇದು ದೆವನೂರರ ಸಾಹಿತ್ಯ ಮತ್ತು ಬದುಕು ಮಾದರಿ..ಆದರೆ ಸಿದ್ದಲಿಂಗಯ್ಯರ ಸಾಹಿತ್ಯವಷ್ಟೇ ಪ್ರಶಂಸನೀಯ..
ಇಬ್ಬರಲ್ಲಿ ಮೊದಲಾರೆಂದರೆ ದೇವನೂರು. ನಮ್ಮ ನಡುವಿನ ಸಾಕ್ಷಿ ಪ್ರಜ್ಞೆ.
-ನೂರುಲ್ಲಾ
ನಿಜ
ಸೂಪರ್….
ನಿಮ್ಮ ಆಲೋಚನೆ, ವಿಶ್ಲೇಷಣೆ ತುಂಬಾ ಇಷ್ಟವಾಯಿತು. ಪ್ರಬುದ್ಧ ವೈಚಾರಿಕತೆ ಈ ಬರಹದಲ್ಲಿ ಕಂಡೆ.ದೇವನೂರರ ಆದರ್ಶ ದಲಿತ ಸಮುದಾಯಕ್ಕೆ ಒಂದು ಹೊಸ ವ್ಯಕ್ತಿತ್ವ ನೀಡಿದರೆ ಮತ್ತು ಸಿದ್ದಲಿಂಗಯ್ಯನವರ ಅಧಿಕಾರದ ಓಲೈಕೆ ದಲಿತ ಚಳುವಳಿಗೆ ದಂಗು ಬಡಿಸುವಂತದ್ದು.
ಸಿದ್ದಲಿಂಗಯ್ಯ ಅವರ ಕವಿತೆಗಳು ಚಳುವಳಿಯ ಆರಂಭದಲ್ಲಿ ಸಂಚಲನ ಮೂಡಿಸಿದ್ದು ಸುಳ್ಳಲ್ಲ..ನಂತರ ಅವರು ಭಿನ್ನ ದಾರಿ ಹಿಡಿದದ್ದು ಮಾತ್ರ ಆಕ್ಷೇಪಾರ್ಹ ಎಂಬಂತೆ ವಿಶ್ಲೇಶಿದ್ದೀರಿ…
ನೀವು ಒಬ್ಬ ಲಿಂಗಾಯತ ಆಗಿ ದಲಿತ ಸಂವೇದನೆ, ಬಂಡಾಯ ಸಂಘಟನೆಯ ಪರವಾಗಿ ದನಿ ಎತ್ತುತ್ತಿರುವುದು ನಿಮ್ಮ ಬಗ್ಗೆ ಅಭಿಮಾನ ಮೂಡಿಸುತ್ತದೆ..
ಇವರಿಬ್ಬರ ಕುರಿತಾಗಿನ ನಿಮ್ಮ ಗಂಭೀರ ಒದಿಗೆ ಸಲಾಂ..
ಇಂತಹ ಗಟ್ಸ್ ಇರುವುದರಿಂದಲೆ ಅವರು ಅಷ್ಟು ದೊಡ್ಡ ಲೇಖಕರಾಗಿರುವುದು…
ನಿಮ್ಮ ಬರಹದ ವೈರುಧ್ಯಗಳೇನೇ ಇದ್ದರೂ ಅ ಇಬ್ಬರೂ ಲೇಖಕರು ನನಗಿಷ್ಷ..ಸಾಹಿತ್ಯ ಪರಂಪರೆಯ ಗೌರವವನ್ನು ಹೆಚ್ಚಿಸಿದವರು..
ಸದ್ಯ ಜ್ಞಾನಪೀಟ ಪ್ರಶಸ್ತಿಯ ರೇಸ್ ನಲ್ಲಿ ಇರುವವರು ಇಬ್ಬರಲ್ಲಿ ಪ್ರೀತಿಯ ದೇವನೂರರು ಎನ್ನಬಹುದು..
ಅವರಿಗೆ ಪ್ರಶಸ್ತಿ ಸಿಗುವ ನಿರೀಕ್ಷೆಯಲ್ಲಿ ಇರುವೆ..
@ ಫಾಲ್ಗುಣ ಗೌಡ ಅಚವೆ
ಗೌಡ್ರೇ ..ಸಹೃದಯತೆಗೆ ಥ್ಯಾಂಕ್ಸ
ಕನ್ನಡ ಸಾಹಿತ್ಯದ ಎರಡು ಪ್ರತಿಮೆಗಳ ಬಗ್ಗೆ ಮಾಹಿತಿ ಮತ್ತು ನಿಮ್ಮ ವಿಚಾರಗಳನ್ನು ಓದಿ ತುಂಬಾ ಖುಷಿಯಾಯಿತು ಸರ
ನಮಸ್ಕಾರ
ಥ್ಯಾಂಕ್ಯೂ ಮೇಡಂ
ಖಂಡಿತ ನಿಜ ನಿಮ್ಮ ಅಭಿಪ್ರಾಯ.ಧನ್ಯವಾದಗಳು
ಸಾಹಿತ್ಯ ಸಂಚಲನೆಯನ್ನು ಸಾಮಾಜಿಕ ಸಂಚಲನವಾಗಿ ರೂಪಿಸಿದವರು..
ಒಳ್ಳೆಯ ಲೇಖನ