ಉದಯಿಸುತ್ತಿರುವ ಸೂರ್ಯನೊಂದಿಗೆ ಹೆಜ್ಜೆಯಿಡುವ ತವಕದಲ್ಲಿ.

ತೇರೂವೋ

ಮೂಲ ಗೌರಿ ದೇಶಪಾಂಡೆ

ಕನ್ನಡಕ್ಕೆ- ಚಂದ್ರಕಾಂತ ಪೋಲಳೆ

ಬೆಲೆ-೮೦

  ನನಗೆ ಬೇರೆ ಭಾಷೆಗಳಿಂದ ಅನುವಾದಗೊಂಡ ಕಾದಂಬರಿಗಳ ಹುಚ್ಚು ಹಿಡಿಸಿದ್ದು ಸೃಷ್ಟಿ ನಾಗೇಶರವರು. ಅವರ ಸೃಷ್ಟಿ ಪ್ರಕಾಶನ ಎಂದರೆ ಅನುವಾದಗಳಿಗಾಗಿಯೇ ಮೀಸಲಾಗಿರುವ ಪ್ರಕಾಶನ. ಜಗತ್ತಿನ ಅದ್ಭುತ ಕಾದಂಬರಿಗಳ ಅನುವಾದಗಳನ್ನು ನಾನು ಓದಿದ್ದು ಸೃಷ್ಟಿ ಪ್ರಕಾಶನದ ಪುಸ್ತಕಗಳಿಂದಾಗಿಯೇ. ತಮ್ಮ ಪ್ರಕಾಶನದ ಪುಸ್ತಕಗಳನ್ನು ತಲುಪಿಸುವ ಸೃಷ್ಟಿ ನಾಗೇಶ ಇದನ್ನು ಮೊದಲು ಓದಿ, ಈ ಪುಸ್ತಕ ಅದ್ಭುತವಾಗಿದೆ ಓದಿ ಎಂದೆಲ್ಲ ಸಲಹೆ ಮಾಡಿಯೇ ಕಳುಹಿಸುತ್ತಾರೆ. ಅವರ ಸಲಹೆ ಯಾವತ್ತೂ ತಪ್ಪಾಗಿದೆ ಎನಿಸಿದ್ದೇ ಇಲ್ಲ ನನಗೆ. ತೆರೂವೋ ಕಳಿಸಿದಾಗಲೂ ಅಷ್ಟೇ. ಅದರ ಜೊತೆ ಇನ್ನೂ ನಾಲ್ಕೈದು ಪುಸ್ತಕಗಳನ್ನು ಕಳುಹಿಸಿದ್ದರೂ ‘ಮೊದಲು ತೆರೂವೋ ಓದಿ ನಂತರ ಬೇರೆಯದ್ದನ್ನು ಓದಿ’ ಎಂದೇ ಕಳುಹಿಸಿದ್ದರು. ಅವರು ಹೇಳಿರುವ ಕಾರಣಕ್ಕಾಗಿಯೇ ಮೊದಲು ತೆರೂವೋ ತೆರೆದವಳು ಕಕ್ಕಾಬಿಕ್ಕಿಯಾಗಿದ್ದೆ. ನಾಗೇಶ್ ಯಾಕೆ ಈ ಪುಸ್ತಕ ಸಜೆಸ್ಟ್ ಮಾಡಿದ್ದಾರೆ ಎಂಬುದೇ ಅರ್ಥವಾಗದೇ ಅದೆಷ್ಟು ಕಂಗಾಲಾಗಿದ್ದೆ ಎಂದರೆ ನಾನೇನು ಓದುತ್ತಿದ್ದೇನೆ ಎಂಬುದೇ ನನಗೆ ಅರ್ಥವಾಗುವಂತಿರಲಿಲ್ಲ. ಅದೇನು ‘ಜಿ’? ಅದೇನು ತಿಂಗಳುಗಳ ಹೆಸರುಗಳು? ಅದ್ಯಾಕೆ ತೆರೂವೋಗೆ ಪತ್ರ ಬರೆಯಬೇಕು? ಮಧ್ಯೆ ಬರುವ ಈ ಜಿ ಆಕೆಗೆ ಏನಾಗಬೇಕು? ಯಾವುದೂ ಅರ್ಥವಾಗದೆ ಅಯೋಮಯದ ಓದಾಯ್ತಲ್ಲ ಇದು ಎಂದುಕೊಂಡಿದ್ದೆ. ಆದರೂ ನಾಗೇಶ್ ಓದಲು ಹೇಳಿದ್ದಾರೆ ಎಂದರೆ ಅದಕ್ಕೇನೋ ಅರ್ಥವಿದ್ದಿರಲೇಬಹುದು  ಎಂದುಕೊಳ್ಳುತ್ತ ಮತ್ತೊಮ್ಮೆ ಓದಿದೆ, ಬರೀ ತೇರೂವೋಗೆ ಬರೆದ ಪತ್ರಗಳನ್ನು, ನಂತರ ಪ್ರಿಯ ಜೆ ಎಂದಿದ್ದದ್ದನ್ನು, ಮತ್ತೊಮ್ಮೆ ಬರಿದೇ ತಿಂಗಳುಗಳ ಹೆಸರಿರುವುದನ್ನು, ಇನ್ನೊಮ್ಮೆ ಅವಳ ಮಾತುಗಳನ್ನು ಓದಿಕೊಂಡೆ. ಆಗ ಶುರುವಾಯ್ತು ನೋಡಿ ಕ್ರಶ್. ಕಾದಂಬರಿಯ ಮೇಲಲ್ಲ, ಕಥಾನಾಯಕಿ ಹೇಳುವ ತೆರೂವೊ ಎಂಬ ಜಪಾನಿನ ಐವತ್ತು ವರ್ಷದ ವ್ಯಕ್ತಿಯ ಮೇಲೆ, ಅದರ ಜೊತೆಜೊತೆಗೇ ಕಥಾನಾಯಕಿಯ ನೇರವಾದ ಮಾತುಗಳ ಮೇಲೆ, ಪ್ರೀತಿಸಿದ್ದನ್ನು ಹಪಾಹಪಿಯಿಂದ ಪಡೆದುಕೊಳ್ಳುವುದರ ಮೇಲೆ, ಮತ್ತು ಪ್ರೀತಿಸಿದ್ದರೂ ಆ ಪ್ರೀತಿ ತನ್ನದಲ್ಲ ಎಂದು ಆಕೆ ಎಚ್ಚರಿಕೆ ವಹಿಸಿದ ರೀತಿಯ ಮೇಲೆ.

      ಇಡಿ ಕಾದಂಬರಿ ಮೊದಲ ಓದಿಗೆ ತಲೆಬುಡವೂ ಅರ್ಥವಾಗುವುದಿಲ್ಲ ಎಂಬುದು ನಿಜವಾದರೂ ಎರಡನೆಯ ಓದಿನ ನಂತರ ಆ ಪುಸ್ತಕ ಇಷ್ಟವಾಗುವುದರ ಜೊತೆಗೆ ತೆರೂವೋ ಮೇಲೆ ಪ್ರೀತಿ ಹುಟ್ಟದಿರಲು ಸಾಧ್ಯವೇ ಇಲ್ಲ. ಯಾಕೋ ನನಗೆ ಜಪಾನಿಯರ ಮೇಲೆ ಮೊದಲಿನಿಂದಲೂ ಪೂರ್ವಾಗ್ರಹ. ಬಹುಶಃ ಎರಡನೇ ಮಹಾಯುದ್ಧದ ಸಮಯದಲ್ಲಿ ಅವರು ಬಾಂಗ್ಲಾ ದೇಶದ ಮೇಲೆ ಹಾಗೂ ಆಗಿನ ಬರ್ಮಾ ಎಂಬ ಹೆಸರಿನ ಈಗ ಮಾಯನ್ಮಾರ್ ಎಂದು ಕರೆಯಿಸಿಕೊಳ್ಳುವ ಭೂಭಾಗದ ಮೇಲೆ  ನಡೆಸಿದ ಪೈಶಾಚಿಕ ಕೃತ್ಯ ಯಾಕೋ ಮತ್ತೆ ಮತ್ತೆ ಕಣ್ಣೆದುರಿಗೆ ರುದ್ರನರ್ತನವನ್ನಾಡಿದಂತಾಗುತ್ತದೆ. ಇತಿಹಾಸದ ಓದು ಜಾಸ್ತಿಯಾದರೆ ಇಂತಹುದ್ದೊಂದು ಪೂರ್ವಾಗ್ರಹ ತಾನಾಗಿಯೇ ಮೂಡುತ್ತದೆಯೇ? ಕೆಲವು ದಿನಗಳ ಹಿಂದೆ ವಿಕಿ ಕ್ರುಕ್ ಬರೆದ ‘ಎಲಿಫಂಟ್ ಕಂಪನಿ’ ಓದುತ್ತಿದ್ದೆ. ಅಲ್ಲಿ ಜಪಾನಿಯರು ಯುದ್ಧ ಕೈದಿಗಳನ್ನು ನಡೆಸಿಕೊಳ್ಳುತ್ತಿದ್ದ ಭೀಕರ ಅನುಭವ ದಾಖಲಾಗಿತ್ತು. ಯುದ್ಧ ಕೈದಿಗಳನ್ನು ಮರಕ್ಕೆ ಕಟ್ಟಿಹಾಕಿ ಹರಿತವಾದ ಕತ್ತಿಯಿಂದ ಉದ್ದಕ್ಕೆ ಸೀಳಿಬಿಡುತ್ತಿದ್ದರಂತೆ. ನೆತ್ತಿಯಿಂದ ನಡುವೆ ಎರಡು ಭಾಗ ಮಾಡಿ ಎಸೆಯುತ್ತಿದರಂತೆ. ಸೆರೆ ಸಿಕ್ಕ ವಿರೋಧಿ ಸೈನ್ಯದ ಆನೆಗಳನ್ನು ಕೂಡ ಬಿಡದೆ ಕ್ರೂರವಾಗಿ ಹಿಂಸಿಸಿ ಕೊಲ್ಲುವ ಚಿತ್ರ ಈ ಪುಸ್ತಕ ಓದಿದ ನಂತರ ನನ್ನ ಮನದಲ್ಲಿ ಅಚ್ಚೊತ್ತಿಬಿಟ್ಟಿದೆ. ಹೀಗಾಗಿ ಜಪಾನಿಗಳು ಎಂದ ತಕ್ಷಣ ಪುಟ್ಟ ಕಣ್ಣಿನ, ಚಂದದ ನಗುವಿನ, ಕುಳ್ಳಗಿನ ಜನ ನೆನಪಾಗುವಂತೆಯೇ ಈ ಕ್ರೂರತನದ ಚಿತ್ರಣವೂ ಅದರ ಜೊತೆ ಜೊತೆಗೇ ನೆನಪಾಗಿ ಬಿಡುತ್ತದೆ. ಆದರೆ ತೆರೂವೋ ಓದಿದ ನಂತರ ನನ್ನ ಮನದೊಳಗೆ ಮೂಡಿದ್ದ ಜಪಾನಿಯರ ಚಿತ್ರ ಒಂದಿಷ್ಟು ಪಲ್ಲಟವಾಗಿ ಒಂದಿಷ್ಟು ಅಲ್ಲಲ್ಲ ತುಸು ಹೆಚ್ಚೇ ಎನ್ನಿಸುವಷ್ಟು ಪ್ರೇಮಮಯವಾದ ಒಂದು ಚಿತ್ರ ಕಾಣಿಸಿಕೊಂಡಿದ್ದಂತೂ ಸುಳ್ಳಲ್ಲ.

             ಬಹಳಷ್ಟು ಸಲ ನನ್ನನ್ನು ನಾನೇ ಕೇಳಿಕೊಳ್ಳುವುದಿದೆ. ಈ ಪ್ರೀತಿ ಪ್ರೇಮವೆಲ್ಲ ಯಾವತ್ತಾದರೂ ಹೇಳಿಕೇಳಿ ಹುಟ್ಟುತ್ತವೆಯೇ? ‘ಒಬ್ಬ ಇಷ್ಟವಾದ’ ಎಂದು ಹೆಣ್ಣು ಹೇಳುವುದಕ್ಕೆ ಅದೆಷ್ಟು ಒದ್ದಾಡಬೇಕು ಎಂದರೆ ಭಾರತೀಯ ಸಂಸ್ಕೃತಿಯಲ್ಲಿ ಈಗಲೂ, ಈ ಕ್ಷಣಕ್ಕೂ ಅದು ಅಸಾಧ್ಯವೇ.  ನಾವು ತೀರಾ ಮುಂದುವರಿದಿದ್ದೇವೆ ಎಂದುಕೊಂಡ ಈ ಜಮಾನಾದಲ್ಲೂ ‘ಆತ ಇಷ್ಟವಾದ’ ಎಂದು ಬಾಯಿ ಮಾತಿಗೂ ಹೇಳುವುದು ಅಪರಾಧವೇ ಆಗಿದೆ. ಹಾಗೇನಾದರೂ ಹೆಣ್ಣೊಬ್ಬಳು ಹೇಳಿ ಬಿಟ್ಟರೆ ಈ ಸಮಾಜ ಅವಳನ್ನು ನೋಡುವ ದೃಷ್ಟಿಕೋನವೇ ಬೇರೆ. ನನ್ನ ಗೆಳತಿಯೊಬ್ಬಳು ಒಬ್ಬನನ್ನು ಇಷ್ಟಪಟ್ಟು, ಅದನ್ನು ಆತನ ಬಳಿ ಮುಚ್ಚುಮರೆ ಇಲ್ಲದೇ ಹೇಳಿಕೊಂಡು ಒದ್ದಾಡಿದ ಪರಿಯನ್ನು ತೀರಾ ಹತ್ತಿರದಿಂದ ನೊಡಿದ್ದೇನೆ. ಈ ಸಮಾಜ ರೀತಿ ರಿವಾಜುಗಳಿಂದಷ್ಟೇ ಅಲ್ಲ, ಅದು ಕಟ್ಟಳೆಗಳಿಂದ ತನ್ನನ್ನು ತಾನೇ ಬಿಗಿದುಕೊಂಡ ಬಂಧನ. ಹೀಗಾಗಿ ಯಾವ ಕಾರಣಕ್ಕೂ ಹೆಣ್ಣು ತನ್ನೊಳಗಣ ಪ್ರೇಮವನ್ನು ಬಿಚ್ಚಿಡುವಂತೆಯೇ ಇಲ್ಲ ಎಂಬುದು ಹಲವಾರು ಸಲ ಸಾಬೀತಾಗಿದೆ. ಹೆಣ್ಣು ಪ್ರೀತಿಸುವುದನ್ನು ಸಮಾಜ ಒಪ್ಪಿಕೊಳ್ಳಬಹುದು. ಆದರೆ ತಾನಾಗಿಯೇ ಮುಂದುವರೆದು ಪ್ರೀತಿಸುತ್ತೇನೆ ಎಂದರೆ ಅದನ್ನು ಯಾರಿಗಾಗಿ ಹೇಳಿದ್ದಳೋ ಆ ಹುಡುಗನೂ ಆಡಿಕೊಳ್ಳುವುದೆಂದರೆ ಅದೊಂದು ಹಿಂಸಾರತಿಯೆಂದೇ ನನಗೆ ಭಾಸವಾಗುತ್ತದೆ. ಪ್ರೀತಿಸಿ ಮದುವೆಯಾದವರನ್ನು ಕೇಳಿ ನೋಡಿ. ಅದರಲ್ಲೂ ಹುಡುಗಿಯೇ ಮುಂದುವರೆದು ಪ್ರೀತಿಸುತ್ತೇನೆ ಅಂದುಬಿಟ್ಟರಂತೂ ಮುಗಿದೇ ಹೋಯಿತು. ಪ್ರೀತಿಸುವಾಗೇನೋ ಖುಷಿಯಿಂದಲೇ ಪ್ರೀತಿಸುತ್ತಾರೆ. ಮದುವೆಯಾಗಲೂ ಅಂಂತಹುದ್ದೇನೂ ತಕರಾರು ಕಾಡುವುದಿಲ್ಲ. ಆದರೆ ಸಂಸಾರ ನಡೆಸುವಾಗ ಏನಾದರೂ ಮಾತಿಗೆ ಮಾತು ಬೆಳೆದರೆ ‘ನಂಗೊತ್ತಿಲ್ವಾ ನೀನೇನು ಅಂತ? ಯಾವ ಹೆಣ್ಣು ನಾಚಿಕೆ ಬಿಟ್ಟು ಪ್ರೀತಿಸ್ತೇನೆ ಅಂತಾ ಬರ್‍ತಾಳೆ? ನೀನಾಗೇ ಮೊದಲು ಪ್ರಪೋಸ್ ಮಾಡಿದಾಗಲೇ ನಾನು ಎಚ್ಚರಿಕೆ ವಹಿಸಬೇಕಾಗಿತ್ತು.’ ಎನ್ನುವ ತರಹದ ಮಾತುಗಳು ಬರುವ ಬಗ್ಗೆ ಹಲವಾರು ಸ್ನೇಹಿತೆಯರು ಅಂತರಂಗದಲ್ಲಿ ತೋಡಿಕೊಂಡಿದ್ದಾರೆ. ಅಂದರೆ ಪ್ರೀತಿಯನ್ನು ಹೇಳಿಕೊಳ್ಳುವುದಕ್ಕೂ ಈ ಸಮಾಜದಲ್ಲಿ ಹೆಣ್ಣಿಗೆ ಸ್ವಾತಂತ್ರ್ಯ ಇಲ್ಲದಿರುವಾಗ ಲೈಂಗಿಕತೆಯ ಬಗ್ಗೆ ಮಾತನಾಡಲು ಕನಿಷ್ಟ ಅವಕಾಶವೂ ಇಲ್ಲ ಎಂದರ್ಥ. ಆದರೆ ಅಚ್ಚರಿಯೆಂದರೆ ಅದು ಭಾರತವಿರಲಿ ಅಥವಾ ಜಪಾನ್ ಇರಲಿ, ಬಹುಶಃ ಪೌರಾತ್ಯ ದೇಶಗಳಲ್ಲಿ ಅಂತಹ ವ್ಯತ್ಯಾಸ ಕಂಡು ಬರುವುದಿಲ್ಲ. ಪಾಶ್ಚಾತ್ಯ ದೇಶಗಳಲ್ಲಿ ಅಲ್ಪಸ್ವಲ್ಪವಾದರೂ ಧಾರಾಳತನ ದೊರಕಬಹುದೇನೋ. ಯಾಕೆಂದರೆ ಜಪಾನಿನಲ್ಲಿರುವಾಗ ನಮ್ಮ ಕಥಾ ನಾಯಕಿ ತನ್ನ ಗಂಡ ಜನಕನೊಡನೆ ಮೊದಲ ಸಲ ಪಾರ್ಟಿಗೆಂದು ಬಾರಿಗೆ ಹೋದಾಗ ಅಲ್ಲಿ ನೆರೆದಿದ್ದ ಗಂಡಸರಿಗೆಲ್ಲ ಅಚ್ಚರಿ. ಅಲ್ಲಿ ಪ್ರತಿಯೊಬ್ಬ ಗಂಡಸಿಗೂ ತನ್ನದೇ ಫೆವರಿಟ್ ಬಾರ್ ಇರುತ್ತದೆ. ಅದರ ಜೊತೆಗೇ ಕಂಪನಿ ಕೊಡಲು ಮಾಮಾಸಾನ ಮತ್ತು ಪ್ರತಿಯೊಬ್ಬರಿಗೂ ಕುಡಿತದ ಖುಷಿ ಅನುಭವಿಸಲು, ಖಾಲಿಯಾದ ಮಧು ಸೀಸೆಯನ್ನು ತುಂಬಿಸಲು, ಅಪ್ಪಲು, ಮುದ್ದಿಸಲು ಪೆವರಿಟ್ ಕಂಪಾನಿಯನ್ ಕೂಡ ಇರುತ್ತಾಳೆ. ಆದರೆ ಅವರೇ ನೇರವಾಗಿ ಹೇಳುವಂತೆ ಹೆಂಡತಿಯನ್ನು ಜೊತೆಗೆ ಕರೆದುಕೊಂಡು ಹೋಗುವ ಪದ್ದತಿ ಅಲ್ಲಿಲ್ಲ. ಹೆಣ್ಣೊಬ್ಬಳು ಬಾರಿಗೆ ಬರುವುದೇ ಅವರಿಗೆ ಹೊಸ ಆಲೋಚನೆ. ಆದರೆ ಅಲ್ಲಿಯ ಗಂಡಸೊಬ್ಬ ನಿಮ್ಮೊಂದಿಗೆ ಹರಟೆ ಹೊಡೆಯಲು ತುಂಬಾ ಉತ್ಸಾಹ ಬರುತ್ತದೆ. ಆದರೆ ನಾನು ಲಗ್ನವಾದರೆ ನಿಮ್ಮಂಥವರನ್ನು ಅಲ್ಲಪ್ಪ. ಹೆಂಡತಿ ಹೇಗಿರಬೇಕೆಂದರೆ, ಸಂತೋಷದಿಂದ ಮನೆಯಲ್ಲೇ ಕುಳಿತಿರಬೇಕು. ಎನ್ನುತ್ತಾನೆ. ಅಂದರೆ ಜಗತ್ತಿನ ಸುಖಗಳೆಲ್ಲವನ್ನೂ ಸೂರೆ ಹೊಡೆಯುವುದು ಗಂಡಸರ ಕೆಲಸ. ಆದರೆ ಹೆಣ್ಣು ಮಾತ್ರ ಮನೆಯೊಳಗೇ ಜಗದ ಸುಖವನ್ನೆಲ್ಲ ಕಲ್ಪಿಸಿಕೊಂಡು ಸಂತೃಪ್ತರಾಗಬೇಕು.

         ಆದರೆ ತೆರೂವೋದಲ್ಲಿ ಕಾದಂಬರಿಕಾರ್ತಿ ತುಂಬಾ ಮುಕ್ತವಾಗಿ ಹೆಣ್ಣಿನ ಬಾಯಿಂದ ಲೈಂಗಿಕ ಸ್ವಾತಂತ್ರ್ಯದ ಕುರಿತು ಹೇಳಿಸುತ್ತಾರೆ. ಕಾದಂಬರಿಯ ನಾಯಕಿಗೆ ಓಡಾಡುವ ಹೊಸ ಹೊಸ ದೇಶಗಳಿಗೆ ಪಯಣಿಸುವ ಮಹತ್ವಾಕಾಂಕ್ಷೆ. ಎಲ್ಲಿಗಾದರೂ ಪ್ರವಾಸ ಹೋಗುವುದನ್ನು ನಿರಾಕರಿಸುವುದೆಂದರೆ ಅದು ಮುದಿತನ ಆವರಿಸಿದಂತೆ ಎಂದೇ ಭಾವಿಸುವ ಸ್ವಚ್ಛಂದ ಮನಸ್ಸಿನ ಹೆಣ್ಣು. ಸ್ವತಃ ಆಕೆಯ ಗಂಡ ಒಂದೆಡೆ ತಮಾಷೆಯಿಂದ ‘ಅವಳು ಯಾರ ಯಾರ  ಪ್ರೇಮದಲ್ಲಿ ಬಿದ್ದಿದ್ದಾಳೆ ಎಂಬ ಪಟ್ಟಿಯ ಆಧಾರದಿಂದ  ಅವಳು ಯಾವ ಯಾವ ಸ್ಥಳ ನೋಡಿದ್ದಾಳೆಂದು ಪರೀಕ್ಷಿಸಬೇಕಾಗುತ್ತದೆ! ಟೋನಿ, ಯೊಹಾನ್, ಯೆಆಕಿಮ್ ಕುರ್ಟ, ಎಂಜೆಲೋ, ಪಾವುಲೋ, ನಿಕೋಣ, ಇವಾನ್. ಅಸಂಖ್ಯ ಪ್ರಾಣಿಗಳು ಅವರ ಜೊತೆಗೆ ಹಿಂದುಸ್ಥಾನದ ಜನರನ್ನು ಸೇರಿಸಿದರಂತೂ ನೋಡುವುದೇ ಬೇಡ! ಸಿಕ್ಕ ಸಿಕ್ಕವರನ್ನು ಪ್ರೀತಿಸುವ ಚಟವೇ ಬಿದ್ದಿದೆ ಅವಳಿಗೆ.’ ಎನ್ನುತ್ತಾನೆ. ಭಾರತೀಯ ಗಂಡನೊಬ್ಬ ಹೀಗೆ ಮುಕ್ತವಾಗಿ ಹೇಳಿಕೊಳ್ಳುವುದು ಅಸಂಭವವೇ ಆಗಿದ್ದಾಗಲೂ ಕೂಡ ಇದೊಂದು ತಮಾಷೆಯ ದಾಖಲಾತಿಯಾಗಿದ್ದರಿರಬಹುದೆಂದು ಕೊಂಡರೂ ಸ್ವತಃ ಕಥಾನಾಯಕಿ ಕೂಡ ಬೇರೆ ಬೇರೆ ದೇಶಗಳ ಗಂಡಸರ ಬಗ್ಗೆ ಮಾತನಾಡುತ್ತಾಳೆ. ಅದರಲ್ಲೂ ಆಕೆ ಜಪಾನಿನ ತೆರೂವೋ ಎನ್ನುವ ಯಾಮಾಹಾಸಾನನ ಪ್ರೀತಿಯಲ್ಲಿ ತೊಡಗಿಸಿ ಕೊಂಡಿದ್ದರ ಚಿತ್ರಣವಂತೂ ಅತ್ಯಪೂರ್ವ. ಅದಷ್ಟೇ ಆಗಿದ್ದರೆ ಅದೊಂದು ಅಪೂರ್ಣ ಚಿತ್ರಣವಾಗುತ್ತಿತ್ತು. ಅವಳು ಪ್ರೀತಿಸಿದ್ದಕ್ಕಿಂತ ಹೆಚ್ಚಾಗಿ ತೆರೂವೋ ಪ್ರೀತಿಸುವುದಿದೆಯಲ್ಲ ಅದು ಅತ್ಯದ್ಭುತ.  ತೆರೂವೋ ಎನ್ನುವ ನಲವತ್ತೈದು ಐವತ್ತು ವರ್ಷದ ಮಧ್ಯವಯಸ್ಸನ್ನೂ ದಾಟಿದ ಪುರುಷನೊಂದಿಗೆ ನಲವತ್ತೈದರ ಕಥಾನಾಯಕಿಯ ಪ್ರೇಮ ನಮ್ಮೆಲ್ಲ ಹೊಸ ಪ್ರೇಮಕಥೆಗಳನ್ನೂ ನಾಚಿಸುವಂತಿದೆ. ತೆರೂವೊನ ದೇಹದ ಕಣಕಣವನ್ನೂ ಹೀರಿ ಒಂದು ತುತ್ತನ್ನು ಮಾಡಿ ನುಂಗಿ ಬಿಡಬೇಕು ಎನ್ನುವ ಆಕೆಯ ಮಾತು ಒಂದು ಕ್ಷಣ ಓದುಗನನ್ನು ಪ್ರೇಮದ ಕಡಲಲ್ಲಿ ಮುಳುಗಿ ಹೋಗುವಂತೆ ಮಾಡದಿರಲು ಸಾಧ್ಯವೇ ಇಲ್ಲ.  ಹೀಗಾಗಿಯೇ

Drink to me only with thine

Eyes and I will pledge with mine

Or leave a kiss within the cup

And I’ll not look for wine

ಎನ್ನುವ ಸಾಲುಗಳು ಅವಳಿಗಿಷ್ಟ. ಮತ್ತು ಅದನ್ನೆಲ್ಲ ತಿಳಿದ ನಂತರವೂ ತೆರೂವೋ ಅವಳನ್ನೆಷ್ಟು ಪ್ರೀತಿಸುತ್ತಾನೆಂದರೆ ಜಪಾನಿ ಕೌಟುಂಬಿಕ ನಿಯಮಗಳಿಗೆ ವಿರುದ್ಧವಾಗಿ ಅವಳನ್ನು ಪ್ರೀತಿಸುತ್ತಾನೆ, ಜಪಾನಿನ ಸಾಮಾಜಿಕ ನಿಯಮಗಳನ್ನು ಮೀರಿ ನಡುಮಧ್ಯಾಹ್ನವೇ ಕುಡಿದು ಮತ್ತೇರುವಷ್ಟು ಅವಳನ್ನು ಪ್ರೇಮಿಸುತ್ತಾನೆ. ಅಂತಹ ಪ್ರೇಮದಲ್ಲಿ ದೇಹ ಸಂಪರ್ಕವೆಂಬುದು ಅಷ್ಟೊಂದು ಪ್ರಧಾನವಾದ ವಿಷಯವೇ ಆಗುವುದಿಲ್ಲ. ಹಾಗೆಂದು ದೇಹದ ಮಿಲನವಾಗದೇ ಪ್ರೇಮ ಫಲಿಸುವುದೂ ಇಲ್ಲ. ಹೀಗಾಗಿಯೇ ಕಥಾನಾಯಕಿ ‘ಪರಸ್ಪರರ ಬಗೆಗಿನ ಭಾವವು ಅದೆಷ್ಟು ಸಂಪೂರ್ಣ ಮತ್ತು ಸರ್ವವ್ಯಾಪಿಯಾಗಿರುತ್ತದೆ ಎಂದರೆ  ಪ್ರಣಯಕ್ರಿಯೆಯೂ ಸಹ ಅದರದ್ದೇ ಒಂದು ಭಾಗವಾಗಿ ಬಿಡುತ್ತದೆ. ಅದನ್ನು ಮಾಡುವುದಾಗಲಿ ಮಾಡದೇ ಇರುವುದಾಗಲಿ ಅಷ್ಟೊಂದು ಮಹತ್ವದ್ದಾಗಿ ಉಳಿಯುವುದಿಲ್ಲ. ಒಬ್ಬರು ಮತ್ತೊಬ್ಬರಿಂದ ಪಡೆಯುವುದು ಒಂದು ಬಗೆಯ ಅನುಭವವಾದರೆ, ಒಬ್ಬರು ಮತ್ತೊಬ್ಬರಿಗೆ ನೀಡುವುದು ಮತ್ತೊಂದು ಬಗೆಯ ಸುಖ.’ ಎನ್ನುತ್ತಾಳೆ. ಹೀಗೆಂದೆ ತನ್ನ ಮತ್ತು ಅವಳ ಪ್ರೇಮದ ಕುರಿತಾಗಿ ಅವಳ ಗಂಡನಿಗೆ ತಿಳಿದರೆ ಏನಾಗಬಹುದು ಎಂದು ತೆರೂವೋ ಕೇಳಿದಾಗ ‘ಅದಕ್ಕೂ ಜನಕನಿಗೂ ಏನು ಸಂಬಂಧ?’ ಎನ್ನುತ್ತಾಳೆ. ‘ಮದುವೆ ಮಾಡಿಕೊಂಡಿಲ್ಲವೇ?’ ಎಂದರೆ ‘ಮಾಡಿಕೊಂಡರೇನಾಯಿತು? ಇಂಥ ಭಾವನೆ, ಇಂಥ ಅನುಭವ, ಇಂಥ ಕೃತಿಯು ಅವನ ಮಾಲಿಕತ್ವದ್ದು ಆಗಿ ಬಿಡುತ್ತದೆಯೇ?’ ಎನ್ನುವ ಮಾತುಗಳು ಅವಳೆಷ್ಟು ಸ್ವತಂತ್ರ ಮನೋಭಾವದವಳು ಎಂಬುದನ್ನು ತೋರಿಸುತ್ತದೆ. ತನ್ನ ಪ್ರೇಮ, ತನ್ನ ಕಾಮ ತನ್ನ ವೈಯಕ್ತಿಕ ಮಾತ್ರ ಎನ್ನುವ ಅವಳ ಭಾವನೆ ನಿಜಕ್ಕೂ ಒಮ್ಮೆ ನಿಟ್ಟುಸಿರಿಡುವಂತೆ ಮಾಡುತ್ತದೆ.

   ಇದೆಲ್ಲದರ ನಡುವೆಯೂ ಅವಳ ಅಪ್ಪನ ಸ್ನೇಹಿತನಾದ ‘ಜಿ’ ಯನ್ನು ಆಕೆ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾಳೆ. ಅವರಿಬ್ಬರ ನಡುವಿನ ಸಂಬಂಧವೇ ಅಚ್ಚರಿ ಹುಟ್ಟಿಸುವಂತಹುದ್ದು. ಅವಳ ಎಲ್ಲ ಪ್ರೇಮ ಸಂಬಂಧಗಳ ಬಗೆಗೆ ಅರಿವಿರುವ ಜಿ ಕೂಡ ಅವಳನ್ನು ಆಳವಾಗಿ ಪ್ರೀತಿಸುವುದು ಅವಳ ಮಾತುಗಳಿಂದಲೇ ಅರಿವಾಗುತ್ತದೆ. ‘ನಾನೇನಾದರೂ ದೂರದ ದೇಶಕ್ಕೆ  ಹೋದರೆ ಅದರಿಂದ ಕಂದಕವುಂಟಾಗುವುದು ಜಿ ಜೀವನದಲ್ಲಿ ಮಾತ್ರ’ ಎನ್ನುವ ಅವಳ ಮಾತುಗಳು ಈ ಸತ್ಯವನ್ನೇ ಹೇಳುತ್ತದೆಯಾದರೂ ಜಪಾನಿಗೆ ಹೋದ ಮೇಲೆ ಆಕೆ ತೆರೂವೋನ ಕುರಿತಾಗಿ ‘ಜಿ’ಯಲ್ಲಿ ಹೇಳಿಕೊಳ್ಳುವುದನ್ನು ಇಷ್ಟಪಡುವುದಿಲ್ಲ. ತೆರೂವೋ ಜೊತೆಗಿನ ಪ್ರೇಮವನ್ನು ಎದೆಯೊಳಗೇ ಮುಚ್ಚಿಟ್ಟುಕೊಂಡು, ಜೀವನಪೂರ್ತಿ ಒಬ್ಬಳೇ ಆಸ್ವಾದಿಸುವ ಆಸೆ ಅವಳಿಗೆ. ಹೀಗಾಗಿ ಜಪಾನಿನಿಂದ ಹಿಂದಿರುಗಿದ ನಂತರ ‘ಜಪಾನಿನಲ್ಲಿ ಏನೋ ಮಹತ್ತರವಾದುದು ಘಟಿಸಿದೆ’ ಎಂಬ ಜಿ ಯ ಮಾತಿಗೆ ಏನೂ ಇಲ್ಲ ಎಂದೇ ಸಾಧಿಸುತ್ತಾಳೆ. ‘ಹತ್ತು- ಹದಿನೈದು ವರ್ಷ ಚಿಕ್ಕವಳಂತೆ ಭಾಸವಾಗುತ್ತದೆ’ ಎಂದು ಜಿ ಕುತೂಹಲ ತೋರಿದರೂ ಆಕೆ ನಿರುತ್ತರೆ, ‘ಜಪಾನಿನ ಹೊಸ ಪ್ರೇಮದ ಕುರಿತು ಹೇಳು ಎಂದು ನೇರವಾಗಿ ಹೇಳಿದರೂ ಆಕೆ ತೆರೂವೋನನ್ನು ಎದೆಯ ಕೋಟೆಯಿಂದ ಹೊರ ತೆಗೆದು ಜಗದೆದುರು ಬಿಚ್ಚಿಡಲು ಬಯಸುವುದಿಲ್ಲ. ಹಾಗೆಂದು ಆಕೆ ಮತ್ತೆಂದೂ ತೆರೂವೊನನ್ನು ಭೇಟಿಯಾಗಲು ಬಯಸುವುದಿಲ್ಲ. ಆಕೆಯ ಎದೆಯೊಳಗೆ ಸ್ಥಾಪಿತನಾಗಿರುವ ಆ ಮೂರ್ತಿ ಹಾಗೇ ಇರಲಿ ಎನ್ನುವುದು ಆಕೆಯ ಅಭಿಲಾಷೆ.

  ತೆರೂವೋ…. ಓದಿ ಮುಗಿಸಿದಾಗ ನನ್ನ ಮನಸ್ಸೂ ಆಕೆಯಂತೆಯೇ ಹಲವಾರು ಸಲ ಹೇಳಿಕೊಳ್ಳತೊಡಗಿತು. ಹೆಣ್ಣಿನ ಬಾಳಿಗೆ ಇಂತಹುದ್ದೊಂದು ತೆರೂವೋ ಬೇಕು. ಗುಟ್ಟಾಗಿ ಆಸ್ವಾದಿಸಲು, ಮನದಲ್ಲೇ ಮೈಮರೆಯಲು. ಅಂದಹಾಗೆ ಜಪಾನಿ ಭಾಷೆಯಲ್ಲಿ ತೆರೂವೋ ಅಂದರೆ ಉದಯಿಸುತ್ತಿರುವ ಸೂರ್ಯ ಎಂಬ ಅರ್ಥ ಇದೆಯಂತೆ. ಸೂರ್ಯನ ಹೊಂಬಣ್ಣವನ್ನು ಎದೆಯೊಳಗೆ ತುಂಬಿಕೊಂಡು ಒಮ್ಮೆ ಪ್ರೇಮದಲ್ಲಿ ಮುಳುಗಿ ಹೋಗುವ ಮನಸ್ಸು ನಿಮ್ಮಲ್ಲಿದ್ದರೆ ನೀವು ತೆರೂವೋ ಕಾದಂಬರಿಯನ್ನು ಓದಿ ಎದೆಗಿಳಿಸಿಕೊಳ್ಳಲೇ ಬೇಕು, ಗೊತ್ತಲ್ಲ? ಎದೆಗಿಳಿಸಿಕೊಳ್ಳುವ ಮನಸ್ಸಿದ್ದರೆ ತೆರೂವೊ ಎಂದು ಮನದಲ್ಲೇ ಪಿಸುಗುಟ್ಟಿಕೊಳ್ಳುತ್ತ ಕನಿಷ್ಟ ಎರಡು ಸಲವಾದರೂ ಓದಲೇ ಬೇಕು.

*******


ಲೇಖಕರ ಬಗ್ಗೆ ಎರಡು ಮಾತು:
ಕವಯತ್ರಿ ಶ್ರೀದೇವಿ ಕೆರೆಮನೆ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ  ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಇವರ ಹವ್ಯಾಸಗಳು

                

One thought on “

  1. ಒಳ್ಳೆಯ ವಿಶ್ಲೇಷಣೆ. ಅಭಿನಂದನೆಗಳು.

Leave a Reply

Back To Top