ಸ್ವಾಮಿ ಭಕ್ತಿ
ಮೂಲ:ವಿಲಿಯಂ ವರ್ಡ್ ವರ್ತ್ ಕನ್ನಡಕ್ಕೆ: ವಿ.ಗಣೇಶ್
ಬೊಗಳುವ ಸಪ್ಪಳವು ಕುರುಬನಿಗೆ ಕೇಳಿಸಿತು
ನರಿಯದೋ ನಾಯಿಯದೋ ಕೂಗಿರಬೇಕೆಂದು
ಅರೆ ಕ್ಷಣ ನಿಂತು ಹುಡುಕಾಡಿದನು ದಶದಿಕ್ಕುಗಳಲಿ.
ಹರಿದು ಹಾಸಿದ್ದ ಕಲ್ಲುಬಂಡೆಗಳ sಸುತ್ತಲೂ
ಹುಡುಕಾಡಿದಾಗ ತುದಿಯ ಗಿಡಗಂಟೆಗಳ ಮಡಿಲಲ್ಲಿ
ಅಲುಗಾಡುತ್ತಿರುವ ಹಸಿರು ಪೆÇದೆಯೊಂದು ಕಾಣಿಸಿತು.
ಅದರ ಅಡಿಯಲಿ ಕಣ್ಣೀರಿಡುತಿರುವ ಶುನಕವೊಂದು
ಪೊದೆಯ ಕಡೆಗೇ ವೀಕ್ಷಿಸುತ ಅಳುವುದ ಕಾಣಿಸಿತು.
ಅತಿ ಸೂಕ್ಷ್ಮಮತಿಯಾದ ಆ ಶುನಕವ ನೋಡಿದರೆ
ಕಾಡಿನಲಿ ಹುಟ್ಟಿ ಬೆಳೆದ ಶುನಕವಲ್ಲವೆನಿಸಿತು.
ಅದರ ಅಳುವಿನಲೇನೋ ಘೋರ ದುಃಖವಿಹುದೆಂದು
ಭಾವಿಸಿದ ಕುರುಬನದರ ಚಲನವ ಗಮನಿಸಿದಾಗ
ಅದರ ಸನಿಯದಲಾರ ಸುಳಿವು ಗೋಚರಿಸಲಿಲ್ಲ.
‘ಕಲ್ಲುಬಂಡೆಗಳಿಂದಾವರಿಸಿದ ಆ ಭಯಾನಕ ಸ್ಥಳದಲಿ
ಸದ್ದುಗದ್ದಲಗಳಿನಿತು ಕಿವಿಗೆ ಅಪ್ಪಳಿಸದಿರುವಾಗ
ಆ ಮೂಕ ಪ್ರಾಣಿ ಕುಳಿತೇನು ಮಾಡತಿದೆಯಲ್ಲಿ?
ಎಂದು ಚಿಂತಿಸುತಿದ್ದನು ಆ ಕುರುಬನಲ್ಲಿ
ಸುತ್ತಲೂ ಜಲಾವೃತವಾದ ಆ ಏಕಾಂತ ಸ್ಥಳವು
ಜೂನ್ ಮಾಹೆಯಲೂ ಮಂಜಿನಿಂದಲಿ ಮಸುಕಾಗಿತ್ತು
ಎದುರಿನಲಿ ದೊಡ್ಡ ಇಳಿಜಾರು ಬಂಡೆ ಜೊತೆ
ಕೆಳಗೆ ಕಾಣುತಿದೆ ತುಂಬಿದ ಕೆರೆಯೊಂದು.
ಬೆಟ್ಟದ ತಳದಲ್ಲಿ ಅನತಿ ದೂರದ ಅಂಚಿನಲಿ
ಹೆದ್ದಾರಿಯೊಂದು ಹಾದು ಹೋಗುತಲಿದೆ.
ಅಲ್ಲೊಂದು ಇಲ್ಲೊಂದು ಗುಡಿಸಿಲುಗಳ ನಡುವೆ
ಬಿತ್ತಿ ಬೆಳೆದಂತ ಹಸಿರಾದ ಹೊಲಗಳ ಜೊತೆ
ಕಾಲು ಹಾದಿಗಳ ಕುರುಹು ಕಾಣುತಿವೆ ಸುತ್ತಲು.
ನೆಗೆ ನೆಗೆದು ಈಜಾಡುತಿರುವ ಕೊಳದ ಮೀನುಗಳು
ಚೀತ್ಕರಿಸುವ ಕೂಗು ಎಲ್ಲೆಡೆಗು ಹರಡುತಿದೆ.
ಬಂಡೆಗಳ ತಳದಲಿ ವಟಗುಟ್ಟುವಾ ಕಪ್ಪೆಗಳ
ಗದ್ದಲವು ಇತ್ತ ತಾ ಕೇಳಿ ಬರುತಲಿದೆ.
ಆ ಬನದ ಸಿರಿಯನ್ನು ಹೆಚ್ಚಿಸಲೋ ಎಂಬಂತೆ
ಕಾಮನ ಬಿಲ್ಲು ಉದಯಿಸಿದೆ ಬಾನಿನಂಚಿನಲಿ.
ಚಲಿಸುತಿಹ ಮೋಡಗಳ ಗುಡುಗು ಸಿಡಿಲಿನಾರ್ಭಟವ
ತಡೆಯಲೆಂಬಂತೆ ತಿಳಿಯಾದ ರವಿಕಿರಣಗಳು
ಅವುಗಳ ಮಾರ್ಗದಿ ಬಂದು ಬೆಳಕ ಚೆಲ್ಲುತಿವೆ.
ಈ ಎಲ್ಲ ಯೋಚನೆಗಳಿಂದ ಹೊರಬರಲಾಗದೆ
ಕುರುಬ ನಿಂತಿದ್ದ ಮಾರ್ಗ ಮಧ್ಯದಿ ಅಂದು
ಬೆಟ್ಟದ ಮೇಲಿರುವ ಕಲ್ಲುಬಂಡೆಗಳ ದಾಟಿದವ
ಶುನಕವನು ಅನುಸರಿಸಿ ಹುಡುಕಾಡುತಿರುವಾಗ
ಭಯಭೀತನಾಗಿ ಬೆದರಿ ನಿಂತನಾ ಕಣಿವೆಯಲಿ.
ಬಿದ್ದ ಮಾನವ ಅಸ್ಥಿಪಂಜರವೊಂದನು ಕಂಡು.
ಆಶ್ಚರ್ಯಚಕಿತನಾಗಿ ಬೆದರಿದ ಕುರುಬನು
ಅದರ ಚರಿತೆಯನರಿಯಲು ಸುತ್ತಲೂ ದಿಟ್ಟಿಸಿದ.
ಆ ಭಯಾನಕವಾದ ಬಂಡೆಗಳ ಮೇಲಿಂದ
ಭಯದಿಂದ ಆ ವ್ಯಕ್ತಿ ಉರುಳಿ ಬಿದ್ದಿರಬಹುದು
ಮೇಲಕೇರಲಾಗದೆಯೆ ಉಸಿರು ನಿಂತಿರಬಹುದು
ನಡೆದ ಘಟನೆಯ ಬಗ್ಗೆ ಹೀಗೆ ಊಹಿಸಿದನು.
ಅವನ ಹೆಸರೇನು? ಎಲ್ಲಿಂದ ಬಂದಿಹನು?
ಅಲ್ಲಿಗೆ ಬರುವ ಕಾರಣವೇನಿರಬಹುದೆನ್ನುತ
ಮನದೊಳಗೇ ಯೋಚಿಸುತ ನಿಂತ ಬೆರಗಾಗಿ
ದಟ್ಟ ಕಾನನದ ಕಲ್ಲು ಬಂಡೆಗಳ ನಡುವಿಂದ
ಶುನಕ ಪರಿತಪಿಸುತಿರಬೇಕು ಬಹುದಿನಗಳಿಂದ
ಅಳುವಿನ ಮೂಲಕವೇ ತರ್ಪಣವ ಕೊಡುತಿರುವ
ಅದರ ನೋವಿನ ಆಳವನು ಬಣ್ಣಿಸಲಸದಳವು
ಆ ದುಃಖದ ಕಡಲಿಂದ ಹೊರಬರಲಾಗದೆಲೆ
ರೋದಿಸುತಿದೆ ಈ ಶುನಕ ಮೂರು ತಿಂಗಳುಗಳಿಂದ
ದಿಕ್ಕುಕಾಣದ ಆ ದಟ್ಟ ಅಡವಿಯ ಗರ್ಭಭಾಗದಲಿ,
ಆದರ ಮಾರ್ಮಿಕ ಕತೆಯ ಊಹಿಸಿದನಿಂತು.
ನತದೃಷ್ಟ ಪಯಣಿಗನು ಮರಣಿಸಿದ ದಿನದಿಂದ
ಆ ಸ್ಥಳವನು ಕಾಯುತಿದೆ ಹಗಲು ರಾತ್ರಿಯೆುನ್ನದೆಲೆ
ಅಳುತಲಿದೆ ಸನಿಹದಿ ಕುಳಿತು ಅವನನೇ ನೋಡುತ
ಮೂರು ತಿಂಗಳ ಕಾಲ ಹೇಗೆ ಕಳೆಯಿತೋ ಸಮಯವ
ಅನ್ನಾಹಾರಗಳಿಲ್ಲದೆ ಹಸಿವಿನಲಿ ಬಳಲುತ
ಮಾನವನ ಮನಕಿಂತ ಮಿಗಿಲಾದ ಹೃದಯವನು
ದಯಪಾಲಿಸಿದವನಾರೋ ಆ ಮುಗ್ದ ಪ್ರಾಣಿಗೆ?
ಎನುತ ಚಿಂತಿಸುತಲಿದ್ದ ಆ ಮೂಕಪ್ರಾಣಿಯ ನೋಡುತ.
******
Fedility By William Wordsworth
Great sir, very nice translation