ಗುಂಡಪ್ಪೆಯ ಮಳೆಗಾಲ

ಈ ಮಾವಿನಹಣ್ಣಿಗೂ ಮಳೆಗಾಲಕ್ಕೂ ಒಂಥರಾ ಅವಿನಾಭಾವ ಎನ್ನುವಂಥ ಸಂಬಂಧ. ಮೊದಲಮಳೆಯೆನ್ನುವ ಸಂಭ್ರಮ ನಮ್ಮೊಳಗೊಂದು ಹೊಸ ಚೈತನ್ಯ ತುಂಬುವ ಸಮಯದಲ್ಲಿ, ಸಕಲ ಸೊಬಗಿನ ದೇವಕನ್ಯೆಯೊಬ್ಬಳು ಭುವಿಗಿಳಿದಂತೆ ಮಾವಿನಹಣ್ಣೊಂದು ನೆಲಕ್ಕುರುಳುತ್ತದೆ. ಹೀಗೆ ಕಳಚಿಬಿದ್ದ ಮಾವಿನಹಣ್ಣಿನ ಮೇಲೆ ಮಳೆಹನಿಗಳೆಲ್ಲ ಮುತ್ತಿನಂತೆ ಹೊಳೆದು, ಗೌಜು-ಗದ್ದಲವಿಲ್ಲದ ಹೊಸ ಲೋಕವೊಂದು ಸೃಷ್ಟಿಯಾಗುತ್ತದೆ. ಹೀಗೆ ಗದ್ದೆಬಯಲಿನಲ್ಲೋ, ಬೆಟ್ಟದ ತುದಿಯಲ್ಲೋ ನಿರಾತಂಕವಾಗಿ ಹುಟ್ಟಿಕೊಳ್ಳುವ ಈ ಸೊಬಗಿನ ಪ್ರಪಂಚಕ್ಕೆ ಮಳೆಯೊಂದು ಜೀವ ತುಂಬುವ ಪರಿ ಅನನ್ಯ.


ಮಳೆ ಆಗೊಮ್ಮೆ ಈಗೊಮ್ಮೆ ಅವಾಂತರಗಳನ್ನು ಸೃಷ್ಟಿಸಿದರೂ ಅದೊಂದು ಮಾಯೆಯಾಗಿ ಮೈ-ಮನಗಳನ್ನು ಆವರಿಸಿಕೊಂಡು ಹೃದಯವನ್ನು ಹಗುರಾಗಿಸುವ ಕ್ಷಣವೊಂದು ಎಲ್ಲರ ಜೀವನದಲ್ಲೂ ಇರುತ್ತದೆ. ಮುಂಗಾರು ನಮ್ಮೊಳಗೆ ಹುಟ್ಟಿಸುವ ಸಂಚಲನ ಎಷ್ಟೋ ಸಲ ಅದೆಷ್ಟು ತೀವ್ರವಾಗಿರುತ್ತದೆಯೆಂದರೆ ಹವಾಮಾನದ ವರದಿಗಳನ್ನೆಲ್ಲ ನಿರುಮ್ಮಳವಾಗಿ ಬದಿಗೊತ್ತಿ ಮೊದಲಮಳೆಗೆ ಕಾಯತೊಡಗುತ್ತೇವೆ. ಅಂಗೈಯನ್ನೋ, ಮುಖವನ್ನೋ ಅಥವಾ ಕೊನೆಪಕ್ಷ ದೃಷ್ಟಿಯನ್ನೋ ಮಳೆಗೊಡ್ಡಿ ನಿಲ್ಲುವ ಬಯಕೆಯೊಂದು ಎಲ್ಲರ ಎದೆಯೊಳಗೂ ಸದಾ ಜೀವಂತ. ಈಗಿನ್ನೂ ಪ್ರಪಂಚ ನೋಡುತ್ತಿರುವ ಮಗುವಿಗೆ ಮಳೆಯೊಂದು ವಿಸ್ಮಯವೆನ್ನಿಸಿದರೆ, ಪ್ರೀತಿ ತುಂಬಿದ ಹೃದಯವೊಂದು ಮಳೆಗೆ ಕವಿತೆಯಾಗಿ ಅರಳುತ್ತದೆ; ರೈತನೊಬ್ಬ ಭತ್ತವೊಂದು ಮೊಳಕೆಯೊಡೆವ ಕನಸ ಕಾಣತೊಡಗಿದರೆ, ಹಪ್ಪಳ-ಸಂಡಿಗೆಗಳೆಲ್ಲ ಸರತಿಯಲ್ಲಿ ಅಟ್ಟ ಹತ್ತಿ ಬೆಚ್ಚಗೆ ಕೂರುತ್ತವೆ; ಹಳೆಯ ಪಾರ್ಕೊಂದರಿಂದ ತೇಲಿಬಂದ ನೇರಳೆಹಣ್ಣಿನ ಬೀಜವೊಂದು ಬೇರುಬಿಡಲು ತವಕಿಸುತ್ತಿರುವಾಗ, ಪಾರ್ಕಿನ ಪಕ್ಕದ ಶಾಲೆಯೊಂದರಲ್ಲಿ ಕನಸುಗಳು ಅರಳುತ್ತವೆ.


ಶಾಲೆ ಎನ್ನುವ ಜಾಗವೊಂದು ಜೀವನಕ್ಕೆ ಕಟ್ಟಿಕೊಡುವ ಮೌಲ್ಯಗಳು, ನೆನಪುಗಳು ಅಗಾಧ. ಜಗತ್ತನೆಲ್ಲ ಸುತ್ತಿ ಬಂದರೂ ಬಾಲ್ಯದ ನೆನಪುಗಳಿಗಾಗಿ ಹಂಬಲಿಸಿದಾಗಲೋ, ಹಳೆಯ ಕಾದಂಬರಿಯೊಂದನ್ನು ಓದಿದಾಗಲೋ ಅಥವಾ ಫೇಸ್ ಬುಕ್ ನಲ್ಲೆಲ್ಲೋ ಬಾಲ್ಯದ ಗೆಳತಿಯೊಬ್ಬಳು ಅಚಾನಕ್ಕಾಗಿ ಮಾತಿಗೆ ಸಿಕ್ಕಾಗಲೋ ಶಾಲೆ ಎನ್ನುವ ನಮ್ಮದೇ ಮುಗ್ಧ ಪ್ರಪಂಚವೊಂದನ್ನು ಆವಾಹಿಸಿಕೊಳ್ಳುತ್ತೇವೆ. ಆ ಪ್ರಪಂಚದಲ್ಲೊಂದಿಷ್ಟು ಬೆಟ್ಟದ ನೆಲ್ಲಿಕಾಯಿಗಳು ಬಾಯಲ್ಲಿ ನೀರೂರಿಸಿದರೆ, ಬಣ್ಣದ ರಿಬ್ಬನ್ನುಗಳು ಹೂವುಗಳಾಗಿ ಅರಳುತ್ತವೆ; ಬಾವಿಯ ಸಿಹಿನೀರು ತೆಂಗಿನಬುಡವನ್ನು ತಂಪಾಗಿಸಿದರೆ, ಮೇ ಫ್ಲವರ್ ಗಿಡವೊಂದು ಹೂವಿನ ಭಾರಕ್ಕೆ ಬಳುಕುತ್ತಿರುತ್ತದೆ; ಮಳೆಗಾಲವೊಂದು ಪಠಾಣ್ಸಿನ ಜೊತೆ ಕೊಡೆಯೊಂದಿಗೆ ಅಂಗಳಕ್ಕಿಳಿಯುತ್ತದೆ. ಮೊದಲಮಳೆಯೊಂದು ಮೊದಲಪ್ರೇಮದಂತೆ ಹೃದಯವನ್ನು ಅರಳಿಸಿದರೆ, ಮಳೆಗಾಲವೊಂದು ಮರೆತೂ ಮರೆಯದಂತಿರುವ ನೆನಪುಗಳನ್ನೆಲ್ಲ ತಂದು ಮಡಿಲಿಗೆ ಸುರಿಯುತ್ತದೆ.


ಈ ಪಠಾಣ್ಸಿನ ಕಥೆ ಶುರುವಾಗುವುದು ಹೀಗೆ. ನಾನು ನಾಲ್ಕನೇ ಕ್ಲಾಸು ಮುಗಿಸಿ ಐದನೇ ಕ್ಲಾಸಿಗೆ ಕಾಲಿಟ್ಟ ಗರ್ವದ ಜೂನ್ ತಿಂಗಳು ಅದು. ಐದನೇ ಕ್ಲಾಸು ಎಂದರೆ ಅದರ ಗತ್ತು-ಗೈರತ್ತುಗಳೇ ಬೇರೆ. ಒಂದರಿಂದ ನಾಲ್ಕನೇ ಕ್ಲಾಸಿನ ಮಕ್ಕಳ ಎದುರಿಗೆ ಹೀರೋಗಳ ಚಮಕ್ಕನ್ನು ತೋರಿಸುತ್ತ, ಆರು ಮತ್ತು ಏಳನೇ ಕ್ಲಾಸಿನವರೆದುರಿಗೆ ಚಿಕ್ಕವರಂತೆ ಪೋಸ್ ಕೊಡುತ್ತ ಒಳ್ಳೆಯವರಾಗಿಬಿಡುವ ಜಾಣತನ ಐದನೇ ಕ್ಲಾಸಿಗೆ ಸಿದ್ಧಿಸಿರುತ್ತಿತ್ತು. ಗಾರ್ಡನ್ನಿಗೆಂದು ಅಂಗಳ ಹದಗೊಳಿಸುವ, ಬೆಳಿಗ್ಗೆ ಬೇಗ ಬಂದು ಕಸ ಗುಡಿಸಿ ಒರಸುವಂತಹ ಕೆಲಸವನ್ನೆಲ್ಲ ಆರು-ಏಳನೇ ಕ್ಲಾಸಿನವರು ವಹಿಸಿಕೊಳ್ಳುತ್ತಿದ್ದರು. ಗಾರ್ಡನ್ನಿನ ಕಳೆ ತೆಗೆಯುವುದು, ಕ್ಲಾಸ್ ರೂಮಿನ ಹೊರಗೆ ಚಲ್ಲಾಪಿಲ್ಲಿಯಾಗಿ ಬಿದ್ದಿರುತ್ತಿದ್ದ ಚಪ್ಪಲಿಗಳನ್ನು ಜೋಡಿಸುವುದು ಇಂತಹ ಕೆಲಸಗಳೆಲ್ಲ ಮೂರು-ನಾಲ್ಕನೇ ಕ್ಲಾಸಿನ ಮಕ್ಕಳ ಜವಾಬ್ದಾರಿಗಳಾಗುತ್ತಿದ್ದವು. ಐದನೇ ಕ್ಲಾಸು ಮಾತ್ರ ಕ್ಲಾಸು ತಪ್ಪಿದರೆ ಆಟದ ಮೈದಾನಕ್ಕೆ ಇಳಿಯುತ್ತಿತ್ತು. ಇಂಥ ಸೌಕರ್ಯಕರ ಐದನೇ ಕ್ಲಾಸು ಶುರುವಾದ ಜೂನ್ ನಲ್ಲಿ ಮಳೆಗಾಲವೂ ಶುರುವಾಗಿತ್ತು. ಪುಟ್ಟಪುಟ್ಟ ಮಕ್ಕಳ ಬಣ್ಣದ ರೇನ್ ಕೋಟ್ ಗಳು, ಹೊಸಹೊಸ ಹಸಿರು-ನೀಲಿ ಸ್ಕರ್ಟ್ ಗಳು, ಆಗಷ್ಟೇ ಹಳ್ಳಿಗಳಿಗೆ ಕಾಲಿಟ್ಟಿದ್ದ ಬಟನ್ ಛತ್ರಿಗಳು ಎಲ್ಲದರ ಮಧ್ಯೆ ಇಡೀ ಶಾಲೆಯ ಗಮನ ಸೆಳೆದದ್ದು ಏಳನೇ ಕ್ಲಾಸಿನ ಹುಡುಗಿಯೊಬ್ಬಳ ಪಠಾಣ್ಸು. ಕಪ್ಪು ಬಣ್ಣದಲ್ಲಿ ಮಿರಮಿರ ಮಿಂಚುತ್ತಿದ್ದ ಆ ರಬ್ಬರಿನ ಚಪ್ಪಲಿಯೊಳಗೆ ಅವಳ ಇಡೀ ಪಾದ ಮುಳುಗಿಹೋಗಿ ನಾಲ್ಕು ಬೆರಳುಗಳು ಮಾತ್ರ ಒಂದಕ್ಕೊಂದು ಅಂಟಿಕೊಂಡು, ಹೊರಗಿನಿಂದ ನೋಡುವವರಿಗೆ ಉಸಿರುಗಟ್ಟಿ ಒದ್ದಾಡುತ್ತಿರುವಂತೆ ಕಾಣಿಸುತ್ತಿದ್ದವು. ಮಳೆಗಾಲಕ್ಕೆಂದೇ ವಿಶೇಷವಾಗಿ ತಯಾರಾಗಿದ್ದ ಆ ಚಪ್ಪಲಿಯಿಂದ ಒಂದೇ ಒಂದು ಹನಿ ನೀರು ಕೂಡಾ ಅವಳ ಸ್ಕರ್ಟಿಗೆ ಸಿಡಿದಿರಲಿಲ್ಲ. ಬೆನ್ನಿನವರೆಗೂ ಮಳೆಯ ನೀರು ಸಿಡಿದು ಸ್ಕರ್ಟಿನ ತುಂಬಾ ರಂಗೋಲಿಯ ಚುಕ್ಕಿಯಂತಹ ಮಣ್ಣಿನ ಕಲೆಗಳಾಗಿ ನೊಂದಿರುತ್ತಿದ್ದ ನಮಗೆಲ್ಲ ಪಠಾಣ್ಸಿನ ಮೇಲೆ ವಿಪರೀತ ಪ್ರೇಮ ಹುಟ್ಟಿಕೊಂಡಿತು. ಆ ಪ್ರೇಮದ ತೀವ್ರತೆ ಎಷ್ಟಿತ್ತೆಂದರೆ ಮಳೆಗಾಲ ಮುಗಿಯುವುದರೊಳಗೆ ನನ್ನ ಹಠಕ್ಕೆ ಮಣಿದು ಅಪ್ಪ ನನಗೂ ಒಂದು ಮಣ್ಣಿನ ಬಣ್ಣದ ಪಠಾಣ್ಸು ತಂದುಕೊಟ್ಟ. ಹೀಗೆ ಪಠಾಣಿ ಚಪ್ಪಲಿಯೊಂದು ಪಠಾಣ್ಸಾಗಿ ಮನೆಗೆ ಆಗಮಿಸಿ ಮಳೆಗಾಲದ ಮಜಾ ಇನ್ನಷ್ಟು ಹೆಚ್ಚಿತು; ನೀಲಿ, ಹಸಿರು ಸ್ಕರ್ಟುಗಳೆಲ್ಲ ಖುಷಿಯಿಂದ ಕುಣಿದಾಡಿದಂತೆನ್ನಿಸಿತು. ಪ್ರತೀವರ್ಷ ಮಳೆಗಾಲ ಮುಗಿದೊಡನೆ ಪ್ಲಾಸ್ಟಿಕ್ ಕವರಿನೊಳಗೆ ಸೇರಿದ ಪಠಾಣ್ಸು ಭದ್ರವಾಗಿ ಜಗಲಿಯ ಮೇಲಿನ ಗೂಡೊಂದನ್ನು ಸೇರಿಕೊಳ್ಳುತ್ತಿತ್ತು. ಹೀಗೆ ಹೈಸ್ಕೂಲು ಮುಗಿಯುವವರೆಗೂ ಪಾದದ ಬೆಳವಣಿಗೆಗನುಗುಣವಾಗಿ ಹಿಗ್ಗುತ್ತಾ, ನನ್ನ ಮಳೆಗಾಲದ ಚಟುವಟಿಕೆಗಳನ್ನೆಲ್ಲ ತಕರಾರಿಲ್ಲದೇ ಸಹಿಸಿಕೊಂಡ ಪಠಾಣ್ಸು ನೆನಪಿನ ಶೂ ರ‍್ಯಾಕ್‌ ನಲ್ಲಿ ಈಗಲೂ ಭದ್ರವಾಗಿದೆ.


ಪಠಾಣ್ಸಿನ ಸಂಭ್ರಮದೊಂದಿಗೆ ಮಳೆಗಾಲದ ಇನ್ನೊಂದು ಮಜವೆಂದರೆ ಮಾವಿನಹಣ್ಣಿನದು. ಕೇರಿಯ ತುದಿಯಿಂದ ಶುರುವಾಗುವ ವಿಸ್ತಾರವಾದ ಗದ್ದೆಬಯಲಿನ ತುದಿಯಲ್ಲಿ ಮಾವಿನಮರಗಳ ಸಾಲೊಂದಿತ್ತು. ಆ ಮಾವಿನಮರಗಳ ವಿಶೇಷತೆಯೆಂದರೆ ಅವು ಮಳೆಗಾಲದಲ್ಲಿ ಉದುರಿಸುತ್ತಿದ್ದ ಅಪ್ಪೆಹಣ್ಣುಗಳು. ಅತ್ತ ಹುಳಿಯೂ ಅಲ್ಲದ, ಪೂರ್ತಿ ಸಿಹಿಯೂ ಅಲ್ಲದ ಪುಟ್ಟಪುಟ್ಟ ಮಾವಿನಹಣ್ಣುಗಳಿಗೆ ವಿಶಿಷ್ಟವಾದ ರುಚಿಯಿರುತ್ತಿತ್ತು. ಸಂಜೆ ಶಾಲೆಯಿಂದ ಬರುತ್ತಿದ್ದಂತೆಯೇ ಕೇರಿಯ ಮಕ್ಕಳ ಗ್ಯಾಂಗೊಂದು ಮಾವಿನಮರದ ಬುಡವನ್ನು ತಲುಪುತ್ತಿತ್ತು. ಆ ಮರಗಳ ಸಾಲಿನಲ್ಲಿ ನಮ್ಮೆಲ್ಲರ ಪ್ರೀತಿಯ ಗುಂಡಪ್ಪೆಯ ಮರವಿತ್ತು. ನೋಡಲು ಗುಂಡುಗುಂಡಾಗಿ ಅಚ್ಚಹಸಿರು ಬಣ್ಣದಲ್ಲಿ ಹೊಳೆಯುತ್ತಿದ್ದ ಗುಂಡಪ್ಪೆಯನ್ನು ಹುಲ್ಲುಗಳ ಮಧ್ಯದಿಂದ ಹೆಕ್ಕಿ ಸ್ಕರ್ಟಿನ ಜೇಬಿಗೆ ಸೇರಿಸುವುದೆಂದರೆ ಎಲ್ಲಿಲ್ಲದ ಸಂಭ್ರಮ. ಉಳಿದ ಹಣ್ಣುಗಳೆಲ್ಲ ಮಾವಿನಹಣ್ಣು ಹೆಕ್ಕಲೆಂದೇ ಸ್ಕರ್ಟಿನ ಜೇಬಿನಲ್ಲಿರುತ್ತಿದ್ದ ಪ್ಲಾಸ್ಟಿಕ್ ಕವರನ್ನು ಸೇರಿದರೆ, ಗುಂಡಪ್ಪೆ ಮಾತ್ರ ವಿಶೇಷ ಅಕ್ಕರೆಯಿಂದ ಜೇಬನ್ನು ಸೇರುತ್ತಿತ್ತು. ಮನೆಗೆ ಬಂದು ಪಠಾಣ್ಸನ್ನು ಉಜ್ಜಿ ತೊಳೆದು ಜಗಲಿಯ ಮೂಲೆಯಲ್ಲಿಟ್ಟು, ಅಪ್ಪೆಹಣ್ಣುಗಳನ್ನು ತೊಳೆಯುವ ಕಾಯಕ ಶುರುವಾಗುತ್ತಿತ್ತು. ಯಾರ ಅಪ್ಪಣೆಗೂ ಕಾಯದೇ ಗುಂಡಪ್ಪೆಗಳೆಲ್ಲ ನಿರಾತಂಕವಾಗಿ ಹೊಟ್ಟೆ ಸೇರಿದರೆ, ಉಳಿದವು ಅಡುಗೆಮನೆಯಲ್ಲಿ ಜಾಗ ಕಂಡುಕೊಳ್ಳುತ್ತಿದ್ದವು. ಹೀಗೆ ಪಠಾಣ್ಸೆನ್ನುವ ಸಂಭ್ರಮದಿಂದ ಶುರುವಾಗುವ ಮಳೆಗಾಲವೊಂದು ಗುಂಡಪ್ಪೆಯನ್ನು ಜೀರ್ಣಿಸಿಕೊಳ್ಳುವ ಸಮಾರಂಭದಲ್ಲಿ ಮುಗಿಯುತ್ತಿತ್ತು.


ಆಸ್ತಿ, ಹಣ, ಅಂತಸ್ತು ಯಾವ ಹಂಗೂ ಇಲ್ಲದ ಮಳೆಗಾಲವೆಂಬ ಸೃಷ್ಟಿಯ ಸಡಗರ ನೆನಪುಗಳಿಗೆ ಹೊಸ ಜೀವ ತುಂಬಲಿ; ಬದುಕಿಗೊಂದಿಷ್ಟು ಕನಸು ದೊರಕಿ ಗುಂಡಪ್ಪೆಯಂತೆಯೇ ಹಸಿರಾಗಿ ಹೊಳೆಯುತ್ತಿರಲಿ.

*************

ಲೇಖಕರ ಬಗ್ಗೆ ಎರಡು ಮಾತು:

ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

6 thoughts on “

  1. ಒಂದ್ ಮೂವತ್ತ್ ವರ್ಷ ಹಿಂದಕ್ಕೆ ಹೋಗಿ ಬಂದೆ ಅಂಜನಾ. ಬ್ಯೂಟಿಫುಲ್ ನೆನಪುಗಳು!

  2. ಆಪ್ತವೆನಿಸುವಂಥ ಬರಹ…ಅಂಜನಾ..
    ಬಾಲ್ಯದ ಬಂಗಾರದ ದಿನಗಳನ್ನು ನೆನಪಿಸಿತು…

  3. ಮಲೆನಾಡಿನ ಮಳೆಗಾಲದ ಮೆಲುಕು ಚಿಕ್ಕ ಮಕ್ಕಳ ದೃಷ್ಟಿಯಲ್ಲಿ ತುಂಬಾ ಚೆನ್ನಾದ ನಿರೂಪಣೆ

Leave a Reply

Back To Top