ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕ ಮಹಾದೇವಿಯ
ವಚನ ವಿಶ್ಲೇಷಣೆ -10
ಗುರುವೆಂಬ ತೆತ್ತಿಗನೆನಗೆ
*ಲಿಂಗವೆಂಬಲಗನು ಮನ ನಿಷ್ಠೆಯೆಂಬ ಕೈಯಲ್ಲಿ ಕೊಡಲು
ಕಾದುವೆನು ಗೆಲುವೆನು ಕಾಮನೆಂಬವನ
ಕ್ರೋಧಾಧಿಗಳ ಕೆಟ್ಟು ವಿಷಯಂಗಳೋಡಿದವು
ಅಲಗು ಎನ್ನೊಳಗೆ ನಟ್ಟು ಆನಳಿದ ಕಾರಣ
ಚೆನ್ನಮಲ್ಲಿಕಾರ್ಜುನ ಲಿಂಗವ ಕರದಲ್ಲಿ ಹಿಡಿದೆ
______
12 ನೇ ಶತಮಾನದ ಶ್ರೇಷ್ಠ ಶರಣೆಯವರಾದ ಅಕ್ಕಮಹಾದೇವಿಯವರು,ತಮ್ಮ ಪತಿಯಾದ ಅರುವಿನ ಗಂಡನಾದ ಚೆನ್ನಮಲ್ಲಿಕಾರ್ಜುನನನ್ನು ತನ್ನ ಕರಕಮಲದಲ್ಲಿ ,ಪ್ರತಿಷ್ಠಾಪಿಸಿಕೊಂಡು
ಲಿಂಗ ಜ್ಞಾನದಲ್ಲಿ ತಲ್ಲೀನರಾದ ಬಗೆಯನ್ನು ಈ ಒಂದು ವಚನದಲ್ಲಿ ಕಂಡುಕೊಂಡಿರುವೆ .
ಶರಣರ ಪ್ರಕಾರ .
ಅರಿವೇ ಗುರು
ಆಚಾರವೇ ಲಿಂಗ
ಅನುಭಾವವೇ ಜಂಗಮ ವೆಂದು ನಂಬಿದ ಶರಣರು .
ಇಂದಿನ ತಮ್ಮ ತಮ್ಮ ಆಚಾರಕ್ಕೆ ಮಸಿ ಬಳಿಯುವ ಕೆಲಸವನ್ನು ಮಾಡುತ್ತಿದ್ದಾರೆ .
ನುಡಿಗೆ ತಕ್ಕ ನಡೆ ಕಾಣದ ಇಂದಿನ ಸಮಾಜದಲ್ಲಿ ಅಕ್ಕಮಹಾದೇವಿಯ ವರ ಈ ಒಂದು ವಚನಗಳ ಅನುಭಾವ ನಿಮಿತ್ತವಾಗಿ
,ನಾವು ಬದಲಾಗುವ ಜೊತೆಗೆ ಸಮಾಜವನ್ನು ಬದಲಾಯಿಸುವ ಜವಾಬ್ದಾರಿಯು ಪ್ರತಿಯೊಬ್ಬ ಶರಣ ಶರಣೆಯರಲ್ಲಿ ಕಂಡು ಬರುವ ವಿಷಯ.
ಗುರುವೆಂಬ ತೆತ್ತಿಗನೆನಗೆ
ಲಿಂಗವೆಂಬಲಗನು ಮನ ನಿಷ್ಠೆಯೆಂಬ ಕೈಯಲ್ಲಿ ಕೊಡಲು
ಇಲ್ಲಿ ಗುರು ಎನ್ನುವ ತೆತ್ತಿಗ ಅಂದರೆ ಸಖ, ಆಪ್ತ ,ಗೆಳೆಯ ಎನ್ನುವ ಅರ್ಥವನ್ನು ತಿಳಿದುಕೊಳ್ಳಬಹುದಾಗಿದೆ.
ಗೆಳೆಯನಂತೆ ಆಪ್ತ ನಾದ ಗುರುವು
ಲಿಂಗ ಎನ್ನುವ ಅಲಗು ಅಂದರೆ ಖಡ್ಗ ಅಥವಾ ಕತ್ತಿಯನ್ನು,
ಮನ ನಿಷ್ಠೆಯೆಂಬ ಕೈಯಲ್ಲಿ ಕೊಟ್ಟಾಗ.
ಆ ಆಚಾರದ ಲಿಂಗ ಕ್ಕೆ ಅತ್ಯಂತ ಶ್ರದ್ಧಾ ಭಕ್ತಿಯಿಂದ ಗುರು ,ಮತ್ತು ಲಿಂಗ ವನ್ನು ವಲಿಸಿಕೊಳ್ಳುವ ಪರಿಯನ್ನು ಅತ್ಯಂತ ಸೊಗಸಾಗಿ ಅಕ್ಕಮಹಾದೇವಿಯವರು ಹೇಳಿದ್ದು ಕಂಡು ಬರುತ್ತಿದೆ .ಲಿಂಗ ವನ್ನು ವಲಿಸಿಕೊಳ್ಳಲು ಇಲ್ಲಿ ಗುರುವೇ ತೆತ್ತಿಗನಾಗಿ ನಿಲ್ಲುವ ಭಾವ ತೀವ್ರತೆಯು ಕಂಡು ಬರುತ್ತಿದೆ .
ನಮ್ಮ ಭಕ್ತಿಯು ಕತ್ತಿಯ ಮೊನೆಯಷ್ಟೇ ಹರಿತವಾದುದು .ಒಂದು ಗುಂಜಿಯಷ್ಟೂ ಕೂಡಾ ನಮ್ಮ ಭಕ್ತಿಯು ಕೆಡಬಾರದು. ಅಂಥಹ ಗುರುಭಕ್ತಿಯನ್ನು ಲಿಂಗ ಭಕ್ತಿಯನ್ನು ಅಕ್ಕಮಹಾದೇವಿಯವರು ಹೊಂದಿದ್ದರು .
ಕಾದುವೆನು ಗೆಲುವೆನು ಕಾಮನೆಂಬವನ ಕ್ರೋಧಾಧಿಗಳ ಕೆಟ್ಟು ವಿಷಯಂಗಳೋಡಿದವು.
ಗುರುವು ನನ್ನಲ್ಲಿ ಲಿಂಗ ವನ್ನು ಕೊಟ್ಟಾಗ, ಕಾಮನೆಂಬವನ ಕೂಡೆ ನಾನು ಯುದ್ಧ ಮಾಡಿದೆನು .ಈ ಯುದ್ಧದಲ್ಲಿ ಜಯಿಸಿದೆನು. ಇದರಿಂದ ನನ್ನೊಳಗೆ ಇರುವ ಕ್ರೋಧ ,ಲೋಭ, ಮೋಹ, ಎನ್ನುವ ಅರಿಷಡ್ವರ್ಗಗಳು ಬಿಟ್ಟು ಓಡಿದವು .ಎಂದು ಅಕ್ಕನವರು ಹೇಳುವ ಈ ವಚನದ ಅರ್ಥ ತುಂಬಾ ಅರ್ಥ ಪೂರ್ಣ.
ಅಲಗು ಎನ್ನೊಳಗೆ ನಟ್ಟು ಆನಳಿದ ಕಾರಣ ಚೆನ್ನಮಲ್ಲಿಕಾರ್ಜುನ ಲಿಂಗವ ಕರದಲ್ಲಿ ಹಿಡಿದೆ
ಅಲಗು ಅಂದರೆ ಈ ಕತ್ತಿಯು ನನ್ನ ಲ್ಲಿ ನಟ್ಟಿತು. ಇದರಿಂದ ನನ್ನಲ್ಲಿರುವ ಅಹಂಕಾರದ ಮದವು ಅಳಿದು ಹೋಯಿತು .
ಕೊನೆಯಲ್ಲಿ ನಾನು ನನ್ನ ಕರದಲ್ಲಿ ಶ್ರೀ ಚೆನ್ನಮಲ್ಲಿಕಾರ್ಜುನನನ್ನು ಹಿಡಿದುಕೊಂಡೆನು. ಎನ್ನುವ ಅಕ್ಕಮಹಾದೇವಿಯವರ ಭಾವ ವನ್ನು ಈ ಒಂದು ವಚನದಲ್ಲಿ ತಿಳಿದುಕೊಳ್ಳಬಹುದಾಗಿದೆ .
ಒಟ್ಟಿನಲ್ಲಿ ಅಂಗದ ಮೇಲೆ ಲಿಂಗ ಧರಿಸಿದಾಗ ಲಿಂಗ ಜ್ಞಾನದ ಅರಿವು ಸಮ್ಮೀಳಿತಗೊಂಡು ಒಳಗಿರುವ ಅಂತರಾತ್ಮವೂ ಕೂಡ ಶುದ್ಧಗೊಂಡು ಕಾಮ, ಕ್ರೋಧ,ಲೋಭ, ಮೋಹ ಎಂಬ ಅರಿಷಡ್ವರ್ಗಗಳು ಅಂಜಿ ಓಡುವ ಪರಿಯನ್ನು ಅಕ್ಕಮಹಾದೇವಿಯವರ ಈ ಒಂದು ವಚನದಲ್ಲಿ ಕಾಣಸಿಗುತ್ತದೆ .
——————————————–
ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ
ಸರ್ಕಾರಿ ಪದವಿಪೂರ್ವ ಕಾಲೇಜು ಖನಗಾಂವ
ಪ್ರಾಚಾರ್ಯರು
ಇವರು ಮೂಲತ:ಬೆಳಗಾವಿ ಜಿಲ್ಲೆಯ ಮುರಗೋಡದವರಾಗಿದ್ದು, ಸರಕಾರಿಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಇವರ ಪ್ರಕಟಿತ ಕೃತಿಗಳು ನಾಲ್ಕು:
1ಮೌನಗಳೇ ಮಾತನಾಡಿ
2ಕನಸುಗಳ ಜಾತ್ರೆ
3ಸಂತೆಯೊಳಗಿನ ಅಜ್ಜಿ
4ಬದುಕೇ ಒಂದು ಹೊತ್ತಿಗೆ
ಪ್ರಕಟಣೆಗೆ ಸಿದ್ಧವಾಗಿರುವ ಕೃತಿಗಳು ಇರುವ ಕೃತಿಗಳು
1ನನಗೆ ಇಂದು ಒಂದು ಕನಸಿದೆ
2 ಕೆಸರೊಳಗಿನ ಕಮಲ
3ಕಾವಲುಗಾರ
5 ಸವಿ ಮನ
6 ಅಭಿಮಾನಿ
7 ಗಾಯತ್ರಿ ಸಣ್ಣ ಕಥೆ
8 ಸಂಗ್ರಹ ಗ್ರಂಥ ರವಿಶಂಕರ ಗುರೂಜಿ ಯವರ ನುಡಿಗಳು ಅಮೃತ ಬಿಂದು
9 ಬದುಕು ಭಾರವಲ್ಲ ಲೇಖನ ಕೃತಿ
10 ಶರಣರ ವಚನಗಳ ವಿಶ್ಲೇಷಣೆ ಕೃತಿ
ಪ್ರಶಸ್ತಿಗಳು
1ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ
2ಗೌರವ ಡಾ.ಲಿಟ್ ಪ್ರಶಸ್ತಿ
3ಕಾವ್ಯಚೇತನ ಪ್ರಶಸ್ತಿ
ಅಕ್ಕಮಹಾದೇವಿಯವರ ವಚನ ವಿಶ್ಲೇಷಣೆ ಚೆನ್ನಾಗಿ ಮೂಡಿ ಬಂದಿದೆ