ವಿಧಿಯಿಲ್ಲದೇ ಪತಿಗೆ ಹೆದರಿ ಅವರು ಹೇಳಿದಂತೆ ಕ್ವಾರಿಯಲ್ಲಿ ಕೆಲಸ ಮಾಡಲು ಪತಿಯೊಂದಿಗೆ ಹೋಗಲು ಪ್ರಾರಂಭಿಸಿದಳು. ಹಿರಿಯ ಮಗಳು ಶಾಲೆಗೆ ಹೋಗುತ್ತಿದ್ದಳು. ಆದರೆ ಸಣ್ಣ ಮಗುವನ್ನು ಮನೆಯಲ್ಲಿ ಬಿಡಲು ಸಾಧ್ಯವಿರುತ್ತಿರಲಿಲ್ಲ. ಹಾಗಾಗಿ ಕೆಲಸ ಮಾಡುವ ಕ್ವಾರಿಯ ಬಳಿ ಇದ್ದ ಒಂದು ಮರದ ರೆಂಬೆಗೆ ಜೋಲಿಯನ್ನು ಕಟ್ಟಲು ಹೇಳಿ, ಕೆಲಸದ ವೇಳೆಯಲ್ಲಿ ಮಗವನ್ನು ಮಲಗಿಸಿ ಕೂಲಿ ಆಳಿನಂತೆ ಕೆಲಸ ಮಾಡುತ್ತಿದ್ದಳು. ನಡುವೆ ಮಗು ಎದ್ದು ಹಾಲಿಗಾಗಿ ಅಳುವಾಗ ಸ್ವಲ್ಪ ಹೊತ್ತು ಮಗುವಿಗೆ ಹಾಲು ಕುಡಿಸಿ, ತಟ್ಟಿ ಮಲಗಿಸುವಳು. ಕೆಲವೊಮ್ಮೆ ಮಗು ರಚ್ಚೆ ಹಿಡಿದು ಅತ್ತರೆ ಅದನ್ನು ತೂಗಿ ನಿದ್ರೆ ಮಾಡಿಸಲು ತಡವಾಗುತ್ತಿತ್ತು. ಆಗೆಲ್ಲಾ ಜೊತೆಗೆ ಬೇರೆ ಕೆಲಸಗಾರರು ಇರುವರು ಎಂದು ಕೂಡಾ ಯೋಚಿಸದೇ ವೇಲಾಯುಧನ್ ಪತ್ನಿಗೆ ಬಯ್ದು ಹೊಡೆಯಲು ಕೈ ಎತ್ತುತ್ತಿದ್ದರು. ಆಗ ಅಲ್ಲಿಯೇ ಕೆಲಸ ಮಾಡುತ್ತಿದ್ದ ಗಂಡಾಳುಗಳು ಪತ್ನಿಗೆ ಹೊಡೆಯದಂತೆ ವೇಲಾಯುಧನ್ ರನ್ನು ತಡೆಯುತ್ತಿದ್ದರು.

ಎಲ್ಲರ ಮುಂದೆ ಆಗುವ ಈ ಅವಮಾನಕ್ಕೆ ಸುಮತಿ ತಲೆ ತಗ್ಗಿಸಿ ಮೌನವಾಗಿ ಕಣ್ಣೀರಿಡುತ್ತಾ ಕೆಲಸದಲ್ಲಿ ತೊಡಗುವಳು. ಮಗು ಅತ್ತರೂ ಅದನ್ನು ಸಮಾಧಾನ ಪಡಿಸುವಂತೆ ಇರಲಿಲ್ಲ. ಅತ್ತು ಸುಸ್ತಾಗಿ ಮಗು ಅದರ ಪಾಡಿಗೆ ನಿದ್ರಿಸಿ ಬಿಡುತ್ತಿತ್ತು. ಆಗ ಸುಮತಿಗೆ ಕರುಳು ಕಿತ್ತು ಬರುವಷ್ಟು ಯಾತನೆ ಆಗುತ್ತಿತ್ತು. ಸಂಜೆ ಶಾಲೆಗೆ ಹೋದ ಹಿರಿಯ ಮಗಳು ಬಂದರೆ ಮಾತ್ರ ಸುಮತಿಗೆ ಸಮಾಧಾನ. ಏಕೆಂದರೆ ತಂಗಿಯನ್ನು ಅವಳು ನೋಡಿಕೊಳ್ಳುತ್ತಿದ್ದಳು.

ಸಂಜೆ ಸೂರ್ಯ ಮುಳುಗುವವರೆಗೂ ಕೆಲಸ ಮಾಡಿ ದಣಿದು ಮನೆಗೆ ಬಂದರೆ ಅಡುಗೆ ಮಾಡುವ ಕೆಲಸ ಇರುತ್ತಿತ್ತು. ಗುರುವಾರ ಸಕಲೇಶಪುರದ ಸಂತೆಯ ದಿನವಾದ ಕಾರಣ ಅವಳಿಗೆ ಬಿಡುವು ಸಿಗುತ್ತಿತ್ತು.

ಕೆಲವು ದಿನಗಳು ಕಳೆದ ನಂತರ ಇದ್ದಕ್ಕಿದ್ದ ಹಾಗೆ ಒಂದು ದಿನ  ಸುಮತಿಯ ಸಂಸಾರ ವಾಸವಿದ್ದ ಮನೆ ಹಾಗೂ ಜಮೀನನ್ನು ಜಪ್ತಿ ಮಾಡಲು ಸರಕಾರದಿಂದ ನೋಟೀಸು ಬಂದಿತು. ಏಕೆ ಹೀಗೆ ಆಯ್ತು ಎಂಬುದು ಸುಮತಿಗೆ ತಿಳಿದಿರದ ವಿಷಯವಾಗಿತ್ತು. ಕೊನೆಗೆ ಕರ ಕಟ್ಟದೇ ಇದ್ದುದಕ್ಕಾಗಿ ಮನೆ ಹಾಗೂ ಜಮೀನನ್ನು ಸರಕಾರ ಮುಟ್ಟುಗೋಲು ಹಾಕುತ್ತಿರುವುದಾಗಿ ಅಧಿಕಾರಿಗಳು ಹೇಳಿದಾಗ ವಿಧಿಯಿಲ್ಲದೇ, ಇದ್ದ ಮನೆಯನ್ನು ಬಿಟ್ಟು ಸುಮತಿಯ ಕುಟುಂಬವು ತಂದೆಯ ಮನೆಗೆ ಹೋಗಬೇಕಾಗಿ ಬಂತು. ಕೆಲಕಾಲ ಅಲ್ಲಿಯೇ ಇದ್ದು, ನಂತರ ಒಂದು ಕಾಫೀ ತೋಟದಲ್ಲಿ ಕೆಲಸಕ್ಕೆ ಸೇರಿಕೊಂಡರು. ಸುಮತಿಯ ಕುಟುಂಬವು ತನ್ನ ಮನೆಯಿಂದ ಬೇರೆಡೆಗೆ ವಾಸ್ತವ್ಯ ಹೂಡುವ ಮೊದಲು ಹೇಮಾವತಿ ನದಿ ದಂಡೆಯ ಬಳಿ ಇದ್ದ ಫಲವತ್ತಾದ ಹಾಗೂ ಉತ್ತಮ ಇಳುವರಿ ಕೊಡುತ್ತಿದ್ದ ಐದು ಎಕರೆ ಭತ್ತದ ಗದ್ದೆಯನ್ನು ಸುಮತಿ ಮುತ್ತು ವೇಲಾಯುಧನ್ ಹೆಸರಿಗೆ ಮಾಡಿ ಕೊಡುತ್ತೇನೆ ಇಲ್ಲಿಯೇ ತಮ್ಮ ಜೊತೆ ಇದ್ದು ವ್ಯವಸಾಯ ಮಾಡುವಂತೆ ಮಾವನವರು ಹೇಳಿದಾಗ ವೇಲಾಯುಧನ್ ಹುಸಿ ಸ್ವಾಭಿಮಾನ ತೋರಿಸುತ್ತಾ… “ಸುಮತೀ…ನಿನ್ನ ಅಪ್ಪ ಕೊಡುವ ಈ ಐದು ಎಕರೆ ಭತ್ತದ ಗದ್ದೆಯಿಂದ ನಾವೇನೂ ಬದುಕಬೇಕಾಗಿಲ್ಲ…. ಈ ಔದಾರ್ಯ ನನಗೆ ಬೇಕಾಗಿಲ್ಲ”… ಎಂದು ಹೇಳಿ ಅವಮಾನಿಸಿ ತಿರಸ್ಕರಿಸಿದರು.

ಕ್ವಾರಿಯಲ್ಲಿ ಕಲ್ಲು ಓಡಿಯುತ್ತಿದ್ದಾಗ ವೇಲಾಯುಧನ್ ರವರ ನೈಪುಣ್ಯತೆ ಕಂಡು ಇದಕ್ಕೂ ಮೊದಲು ಒಂದು ದೊಡ್ಡ ಹಿಡುವಳಿ ಇರುವ ಕಾಫೀ ತೋಟದ ಮಾಲೀಕರೊಬ್ಬರು ತಮ್ಮ ತೋಟದ ಕೆಲವೆಡೆ ಹೆಬ್ಬಂಡೆಗಳು ಇವೆ, ಅದನ್ನು ಒಡೆಯುವ ಗುತ್ತಿಗೆ ತೆಗೆದುಕೊಳ್ಳಿ, ನಿಮಗೆ ವಾಸಕ್ಕೆ ಯೋಗ್ಯವಾಗುವಂತಹ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಡುವುದಾಗಿ ಹೇಳಿದ್ದರು. 

ಆದರೆ ವೇಲಾಯುಧನ್ ನಿರಾಕರಿಸಿದ್ದರು. 

ಹಾಗಾಗಿ ಆ ತೋಟಕ್ಕೆ ಹೋಗಲು ಮನಸ್ಸು ಬಾರದೇ ಬೇರೊಂದು ತೋಟಕ್ಕೆ ಹೋದರು. ಅಲ್ಲಿ ವಾಸವಿದ್ದು ಎಂದಿನಂತೆ ಕೆಲಸಕ್ಕೆ ಹೋಗಲು ಪ್ರಾರಂಭಿಸಿದರು. ಎರಡನೇ ಮಗಳಿಗೆ ಎರಡು ವರ್ಷ ತುಂಬುವ ಮೊದಲೇ ಸುಮತಿ ಮತ್ತೊಮ್ಮೆ ಗರ್ಭ ಧರಿಸಿದಳು. ಸಕಲೇಶಪುರದ ಸರ್ಕಾರಿ ಆಸ್ಪತ್ರೆ ಅವರು ವಾಸವಿದ್ದೆಡೆಯಿಂದ ಸ್ವಲ್ಪ ಹೆಚ್ಚು ದೂರವಿದ್ದ ಕಾರಣ ಆಸ್ಪತ್ರೆಗೆ ಹೋಗದೇ ಸೂಲಗಿತ್ತಿಯ ಸಹಾಯದಿಂದ ಮನೆಯಲ್ಲಿಯೇ ಮಗುವಿಗೆ ಜನ್ಮ ನೀಡಬೇಕಾಯಿತು. ಈ ಮಗುವಾದರೂ ಗಂಡಾಗಿ ಹುಟ್ಟಬಹುದೆಂದು ನಿರೀಕ್ಷೆಯಿಂದ ಕಾಯುತ್ತಿದ್ದ ವೇಲಾಯುಧನ್ ರವರಿಗೆ ನಿರಾಸೆ ಕಾದಿತ್ತು. 

ಸುಮತಿ ಜನ್ಮವಿತ್ತ ಎಲ್ಲಾ ಮಕ್ಕಳೂ ಹೆಣ್ಣೇ ಎಂದು ಅವಳ ಬಗ್ಗೆ ವೇಲಾಯುಧನ್ ಗೆ ಇನ್ನೂ ತಾತ್ಸಾರ ಹೆಚ್ಚಿತು. ಸುಮತಿಯ ಬಸಿರು ಬಾಣಂತಗಳ ನಡುವೆ ಹೊರಗಿನ ಹೆಣ್ಣುಗಳ ಜೊತೆ ವೇಲಾಯುಧನ್ ಗೆ ಸಂಬಂಧಗಳು ಹೆಚ್ಚಿದವು. ಈ ಸಂಗತಿಯು ಸುಮತಿಗೆ ಬಹಳ ತಡವಾಗಿ ಅರಿವಾಯ್ತು. ಬಹಳವಾಗಿ ನೊಂದುಕೊಂಡಳು. ಆದರೆ ಪತಿಗೆ ವಿರುದ್ಧವಾಗಿ ಯಾವ ಮಾತನ್ನೂ ಆಡುವಂತೆ ಇರಲಿಲ್ಲ ಅವಳು. ಹೃದಯ ಹಿಂಡುವ ನೋವಿನ ಜೊತೆಗೆ ಎಲ್ಲವನ್ನೂ ಸಹಿಸಿ ಬದುಕಬೇಕಾಯಿತು.

ಸುಮತಿಯ ಹಿರಿಯ ಮಗಳಿಗೆ ಈಗ ಜವಾಬ್ದಾರಿ ಹೆಚ್ಚಾಯಿತು. ತನ್ನ ತಂಗಿಯನ್ನು ನೋಡಿಕೊಳ್ಳುವ ಭಾರ ಅವಳ ಹೆಗಲ ಮೇಲೆ ಬಿದ್ದಿತು. ಅಮ್ಮ ಬಾಣಂತಿಯಾಗಿದ್ದ ಕಾರಣ,  ಜೊತೆಗೆ ಮನೆ ಕೆಲಸವೂ, ಆದರೆ ಆ ಪುಟ್ಟ ಹುಡುಗಿ ತನ್ನ ಶಕ್ತಿ ಮೀರಿ ಎಲ್ಲವನ್ನೂ ನಿಭಾಯಿಸುತ್ತಿದ್ದಳು. 

ಸುಮತಿಯು ಅಲ್ಪ ದಿನಗಳ ವಿಶ್ರಾಂತಿಯ ನಂತರ ಬಾಣಂತನದ ಅವಧಿಯಲ್ಲಿಯೇ ತಾನು ಸುಮ್ಮನೇ ಮಲಗಿರದೇ ಅಡುಗೆ ಹಾಗೂ ಇನ್ನಿತರ ಕೆಲಸಗಳನ್ನು ಮಗಳ ಸಹಾಯದಿಂದ ಮಾಡುತ್ತಿದ್ದಳು.

ಮಗಳ ಸಹಾಯದಿಂದ ಸುಮತಿ ಬೇಗನೇ ಚೀತರಿಸಿಕೊಂಡಳು. ಮತ್ತೆ ಯಥಾ ಪ್ರಕಾರ ಜೀವನದ ಬಂಡಿ ಸಾಗತೊಡಗಿತು. ಒಂದು ದಿನ ಸಂಜೆ ಅಲ್ಲಿಯೇ ತಂಗಿಯ ಜೊತೆ ಆಟವಾಡುತ್ತಿದ್ದ ಹಿರಿಯ ಮಗಳು ಬಿದಿರುಗಳ ಬುಡದಲ್ಲಿ ಅಣಬೆಗಳನ್ನು ಕಂಡಳು. ಹೇಗೋ ಅಲ್ಲಿ ನುಗ್ಗಿ ಬಿದಿರಿನ ಕೂಟಗಳ ನಡುವೆ ಇದ್ದ ಅಷ್ಟೂ ಅಣಬೆಗಳನ್ನು ಕಿತ್ತು ಲಂಗದ ತುಂಬಾ ತುಂಬಿಕೊಂಡು…”ಅಮ್ಮಾ…ಇಲ್ಲಿ ನೋಡು…ಏನು ತಂದಿದ್ದೇನೆ”… ಎಂದು ಹೇಳುತ್ತಾ ತನ್ನ ಉದ್ದನೆಯ ಲಂಗದಲ್ಲಿ ತುಂಬಿಕೊಂಡು ಬಂದಿದ್ದ ಅಣಬೆಯನ್ನು ಅಮ್ಮನಿಗೆ ಕೊಟ್ಟಳು. ಮಗಳು ತಂದಿದ್ದ ಬಿಳಿ ಅಣಬೆಗಳು ನೋಡಲು ಬಹಳ ಸುಂದರ ಹಾಗು ತಾಜಾ ಆಗಿದ್ದವು. ಸಂಜೆಗೆ ಅಣಬೆಯ ಸಾರು ಮಾಡಿದರೆ ಆಯ್ತು ಪತಿಯೂ ಖುಷಿಯಿಂದ ಊಟ ಮಾಡುವರು ಎಂದುಕೊಳ್ಳುತ್ತಾ ರುಚಿಯಾದ ಘಮಘಮಿಸುವ ಸಾರನ್ನು ಮಾಡಿದಳು. ವೇಲಾಯುಧನ್ ಅಂದು ಎಂದಿಗಿಂತ ಸ್ವಲ್ಪ ತಡವಾಗಿ ಮನೆಗೆ ಬಂದರು. ಬಂದ ಕೂಡಲೇ ಬಿಸಿ ನೀರಿನಲ್ಲಿ ಸ್ನಾನ ಮಾಡಿ…”ಹಸಿವಾಗುತ್ತಿದೆ ಸುಮತೀ…. ಬೇಗ ಊಟ ಬಡಿಸು”…. ಎಂದರು. ಮನೆ ಪ್ರವೇಶಿಸಿದ ಕೂಡಲೇ ಅಣಬೆ ಸಾರಿನ ಘಮಘಮ ಪರಿಮಳವು ಅವರ ಹಸಿವನ್ನು ಇನ್ನೂ ಹೆಚ್ಚಿಸಿತು. ಅವರು ಹೇಳಿದ್ದನ್ನು ಕೇಳಿದ್ದೇ ತಡ ಬೇಗನೇ ಪತಿ ಹಾಗೂ ಮಗಳಿಗೆ ಊಟವನ್ನು ಬಡಿಸಿ ತಾನು ಕೂಡಾ ಊಟ ಮಾಡಿದಳು. ಸಾರು ರುಚಿಯಾಗಿದ್ದ ಕಾರಣ ಎಲ್ಲರೂ ಸ್ವಲ್ಪ ಹೆಚ್ಚಾಗಿಯೇ ಊಟ ಮಾಡಿದರು. ಸ್ವಲ್ಪ ಹೊತ್ತು ಕಳೆಯಿತು. ಎಲ್ಲರಿಗೂ ಹೊಟ್ಟೆಯಲ್ಲಿ ಏನೋ ಸಂಕಟವಾಗಲು ಪ್ರಾರಂಭಿಸಿತು. ಅಡುಗೆ ಮನೆಯ ಉಳಿದ ಕೆಲಸಗಳನ್ನು ಮಾಡಿ ಇನ್ನೇನು ಮುಗಿಸಬೇಕು ಎನ್ನುವಷ್ಟರಲ್ಲಿ ಹಿರಿಯ ಮಗಳು ಹೊಟ್ಟೆ ಹಿಡಿದುಕೊಂಡು ಓಡೋಡಿ ಅಮ್ಮನ ಬಳಿಗೆ ಬಂದು….”ಅಮ್ಮಾ ಹೊಟ್ಟೆ ತುಂಬಾ ನೋಯಿತ್ತಿದೆ… ವಾಂತಿ ಬರುವ ಹಾಗೆ ಆಗುತ್ತಿದೆ”… ಎಂದಳು.


Leave a Reply

Back To Top