ಐದನೆ ವಾರ್ಷಿಕೋತ್ಸವದ ವಿಶೇಷ

ಅರವತ್ತು ನಿವೃತ್ತಿಯ ಅಂಚು. ಜವಾಬ್ದಾರಿ ಕಳೆದುಕೊಳ್ಳುವ ಸಮಯ, ಕೆಲವರಿಗೆ ಅರಳುಮರಳು,  ಲೇಖಕರಾದರೆ  ವಾಯುವಿಹಾರ ಮಾಡುತ್ತಾ, ಗತವೈಭವ ನೆನೆಯುತ್ತಾ ಯುವ ಲೇಖಕರಿಗೆ ಬೆನ್ನುಡಿ ಬರೆವ ಹೊತ್ತು. ಹೀಗೆ ಅವರವರು ಅವರವರ ಮನೆಯಲ್ಲಿ ವಿಷಾದ, ವಿನೋದಗಳ ಚಿಂತನ ಮಂಥನ ಮಾಡುತ್ತಾ ವಿಶ್ರಾಂತಿ ಪಡೆಯುವ ಕಾಲದಲ್ಲಿ ತಮ್ಮ ಅರವತ್ತೆರಡರ ವಯೋಮಾನದಲ್ಲಿ ಜಗತ್ತಿನ ಶ್ರೇಷ್ಠ ಲೇಖಕರೊಬ್ಬರು ಮಹಾನ್ ಕಾದಂಬರಿ ಬರೆಯತೊಡಗುತ್ತಾರೆ. ಈಗಾಗಲೇ ಮಹಾಕಾವ್ಯ ರಚಿಸಿ ತಮ್ಮ ಪ್ರಕೃತಿಪ್ರೇಮ, ಜೀವನದೃಷ್ಠಿ, ಆಧ್ಯಾತ್ಮದ ದಾಹ ತಣಿಸಿ ಮಹಾಕಾವ್ಯಗಳ ಕಾಲ ಮುಗಿಯಿತು ಎನ್ನುವ ಸಂದರ್ಭದಲ್ಲಿ ಜಗತ್ತಿಗೆ ಮಾದರಿ ಕಾವ್ಯವೊಂದನ್ನು ರಚಿಸಿ ನೀಡಿದ ಆ ಮಹಾನ್ ಚೇತನ ತನ್ನಲ್ಲಿನ್ನೂ ಕಸುವು ಮುಗಿದಿಲ್ಲ ಎಂಬುದನ್ನು  ಜಾಹೀರುಪಡಿಸುವಂತೆ ಮಹಾನ್ ಕಾದಂಬರಿಯನ್ನು  1967ರಲ್ಲಿ ತಮ್ಮ 63ರ ಪ್ರಾಯದಲ್ಲಿ ನೀಡುತ್ತಾರೆ. ಅದುವೆ ಮಲೆಗಳಲ್ಲಿ ಮದುಮಗಳು ಮಹಾ ಕಾದಂಬರಿ. ಕೃತಿಗೀಗ 57ನೇ ವರ್ಷಕ್ಕೆ ಕಾಲಿಡುವ ಸಂಭ್ರಮ.

‘ಪಾಪಿಗುದ್ಧಾರಮಿಹುದೌ ಸೃಷ್ಠಿಯ ಮಹದ್‍ವ್ಯೂಹ ರಚನೆಯೊಳ್’ ದರ್ಶನವನ್ನು ಮಹಾಕಾವ್ಯ ರಾಮಾಯಾಣದರ್ಶನಂನಲ್ಲಿ ಸಾದರಪಡಿಸಿದ ಕುವೆಂಪುರವರಿಗೆ ಹಾಗೂ ಕನ್ನಡಕ್ಕೆ ಮೊದಲ ಜ್ಞಾನಪೀಠ ಪಡೆದ ಐವತ್ತ ಆರನೇ ವರ್ಷವೂ ಕೂಡ ಇದೆ (1968) ಆಗಿರುವುದು ಮತ್ತಷ್ಟು ಸಂಭ್ರಮದ ಸಂಗತಿ. ಆ ಮಹಾಕಾವ್ಯದ ಮಹಾಪುರುಷ ರಾಮನ ರಾಮಯಾನದಂತೆ ಇದು ಸಮಾಜದ ಉಪೇಕ್ಷಿತ ವಲಯದ ಜೀತದಾಳು ನಾಯಿ ಗುತ್ತಿಯ ಯಾನವಾಗಿದೆ. ಪುರುಷೋತ್ತಮನ ದಿವ್ಯಯಾನವನ್ನು ಚಿತ್ರೀಕರಿಸುವ ಅದೇ ಮನ ನಾಯಿ ಗುತ್ತಿಯ ಅನನ್ಯ ಯಾನವನ್ನು ರಚಿಸಿದೆ. ಇಲ್ಲಿ ಯಾರು ಮುಖ್ಯರಲ್ಲ, ಯಾರು ಅಮುಖ್ಯರಲ್ಲ. ಯಾವುದು ಅಲ್ಲ ವ್ಯರ್ಥ, ನೀರೆಲ್ಲ ಊ ತೀರ್ಥ ವೆಂಬುದನ್ನೂ ಸಾಕ್ಷಾತ್ಕಾರಗೊಳಿಸಿದ್ದಾರೆ. ಶ್ರೇಷ್ಠ ಪ್ರತಿಭೆಯೊಂದು ಸೃಜನಶೀಲತೆಯ ಸದಾ ಕಾಪಿಟ್ಟುಕೊಳ್ಳುವುದರ ಪ್ರತೀಕವಾಗಿ ಕೃತಿ ಮೂಡಿಬಂದಿದೆ. ತೀರ್ಥಹಳ್ಳಿ ತಾಲ್ಲೂಕಿನ ಮೇಗರಹಳ್ಳಿ ಸೀಮೆಯ ದುರ್ಗಮದ ಪರ್ವತಾರಣ್ಯಗಳ ಮಡಿಲಿನಲ್ಲಿರುವ ಸಿಂಬಾವಿ, ಲಕ್ಕುಂದ, ಮೇಗರವಳ್ಳಿ, ಹಳೆಮನೆ, ಕೋಣೂರು ಬೆಟ್ಟಳ್ಳಿ ಮುಂತಾದ ಹಳ್ಳಿಗಳು. “ಊರಲ್ಲ ನಮ್ಮ ಮನೆ, ನಮ್ಮ ಕಡೆ ಊರೆಂದರೊಂದೆ ಮನೆ” ಎಂಬುದರ ಪ್ರತೀಕವಾದ ಊರುಗಳವು. ಅಲ್ಲಿನ ಮುಕ್ಕುಂದಯ್ಯ ಚಿನ್ನಮ್ಮ, ಐತ-ಪಿಂಚಲು, ನಾಯಿಗುತ್ತಿ-ತಿಮ್ಮಮ್ಮ, ಹಳೆಮನೆದೊಡ್ಡಣ್ಣಹೆಗಡೆ-ರಂಗಮ್ಮ, ಭರಮೈಹೆಗ್ಗಡೆ-ಜಟ್ಟಮ್ಮ, ಸಣ್ಣಮನೆ ಶಂಕರಹೆಗಡೆ-ಸೀತಮ್ಮ, ದೊಡ್ಡಮನೆಸುಬ್ಬಣ್ಣಹೆಗಡೆ, ಮೇಘರವಳ್ಳ ಕಣ್ವಾಪಂಡಿತ, ಕರಿಮೀನು ಸಾಬು, ಪಿಂಜಣಿ-ಅಕ್ಕಮ್ಮ ಮುಂತಾದ ಶ್ರೀಸಾಮಾನ್ಯರ ಕ್ಷುದ್ರ, ಅಲ್ಪ, ರಾಗದ್ವೇಷಮಯ, ಜೀವನ ಈ ಕಾದಂಬರಿಯ ವಸ್ತು . ಇಲ್ಲಿ ಬರುವ ನೂರಾರು ಪಾತ್ರಗಳ ಜೊತೆಗೆ  ಕಾಡಿನ  ಪ್ರಾಣಿ ಪಕ್ಷಿಗಳು,  ಬೇಟೆ ವಿಧಾನಗಳು, ಮರಗಿಡಗಳ ಪರಿಚಯವು ಪರಿಣಾತ್ಮಾಕವಾಗಿ  ಸಾಗಿ ಬರುತ್ತದೆ.

ಒಂದು ಮಳೆಗಾಲದ ಆರಂಭದಲ್ಲಿ ಸಿಂಭಾವಿ ಭರಮೈ ಹೆಗ್ಗಡೆಯವರ ದೊಡ್ಡ ಚೌಕಿ ಮನೆಯಿಂದ ಹೊರಟ ನಾಯಿಗುತ್ತಿ, ಅವನ ಆ ಹೆಸರಿಗೆ ಕಾರಣವಾದ ಹುಲಿಯ ಎಂಬ ನಾಯಿ,  ಲಕ್ಕುಂದದಲ್ಲಿ ತಂಗಿ, ಮರುದಿನ ಬೆಳಗಿನಲ್ಲಿ ಹುಲಿಕಲ್ಲನ್ನು ದಾಟಿ ಕೋಣೂರಿನ ಹತ್ತಿರ ನಾಗತ್ತೆ-ನಾಗಕ್ಕರನ್ನು ಬಿಟ್ಟು ಹಳೆ ಮನೆ ಕಡೆಗೆ ಸಾಗುತ್ತಾನೆ. ಸಾಗುತ್ತಿದ್ದ ಹಾಗೇ ಮುಕುಂದಯ್ಯನಿಗೆ ಸಿಡಿಲಬ್ಬರದ ಸುದ್ದಿ ತಿಳಿಸುತ್ತಾನೆ. ಹಳೆಮನೆಗೆ ಕಾಗದವನ್ನು ತಲುಪಿಸಿ ಸಾಯಂಕಾಲ ಬೆಟ್ಟಳ್ಳಿಯ ‘ಬೀಸೆಕಲ್ಲು’ ಸವಾರಿ ನೋಡಿಕೊಂಡು ಕೇರಿಗೆ ಹೋಗಿ ಅದೇ ರಾತ್ರಿ ತಿಮ್ಮಿಯನ್ನು ಹಾರಿಸಿಕೊಂಡು ಹುಲಿಕಲ್ಲು ನೆತ್ತಿಯ ಮಂಟಪಕ್ಕೆ ಬರುತ್ತಾನೆ. ಮರುದಿನ ಮಧ್ಯಾಹ್ನ ಸಿಂಬಾವಿಗೆ ಹಿಂತಿರುಗುತ್ತಾನೆ. ಗುತ್ತಿಯ ಕಥೆ ಜೊತೆ ಜೊತೆಗೆ ಅವನೆದುರಾಗುವ ಪಾತ್ರಗಳ ವಿಸ್ತರಾಣಾತ್ಮಕ ಪರಿಚಯದ ಜೊತೆಗೆ ಪ್ರಕೃತಿಯ ವರ್ಣನೆಯು ಸಾಗುತ್ತದೆ. ನಾಟಕದ ಸೂತ್ರಧಾರಿಯಂತೆ ನಿಧಾನವಾಗಿ ಎಲ್ಲಾ ಪಾತ್ರಗಳನ್ನು ಪರಿಚಯಿಸಿ ಕ್ರಮೇಣ ಮರೆಯಾಗುತ್ತಾನೆ. ಆದರೆ ಗುತ್ತಿಗಿಂತ ಓದುಗನ ಮನೋವಲಯದಲ್ಲಿ ಸ್ಥಾಪಿತವಾಗುವ ಪಾತ್ರ ನಾಯಿ, ಹುಲಿಯ. ಪ್ರಾಣಿ ಸಹಜವಾದ ಮುಗ್ಧತೆಯಲ್ಲಿ, ಧೀರತೆಯಲ್ಲಿ, ಸೂಕ್ಷ್ಮತೆಯಲ್ಲಿ ಗುತ್ತಿಗೂ ಹುಲಿಯನಿಗೂ ಇರುವ ಸಂಬಂಧ ವ್ಯತ್ಯಾಸವಿಲ್ಲದ್ದು. ತುಂಗಾ ನದಿಯ ಪ್ರವಾಹದಲ್ಲಿ ಕೊಚ್ಚಿ ಹೋಗುವ  ಹುಲಿಯನ ಪಾತ್ರ ಓದುಗನ ಮನದಲ್ಲಿ ಗುತ್ತಿಯ ಜೊತೆಗೆ ಸ್ಥಿರವಾಗಿ ನಿಲ್ಲುತ್ತದೆ.

ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ. ಎಂಬ ಮಾತುಗಳು ಮಲೆನಾಡಿನ ನಿರುದ್ವಿಗ್ನಮಯ ಜನ ಜೀವನದ ನಿರೂಪಣೆಯಾಗಿದೆ. ಆದರೆ ಕಾದಂಬರಿಯ ಪರಿಧಿಯೊಳಗೆ ಬರುವ ವಸ್ತು ಅನುಭವಗಳು ಮಾತ್ರ ಅಪರಿಮಿತ ಜೀವನವನ್ನು ಯಥಾವತ್ತಾಗಿ ನೋಡುವ ಅನುಭವಿಸುವ ಮತ್ತು ರೂಪಿಸುವ ಪ್ರಾಮಾಣಿಕ ಪ್ರಯತ್ನ ಕಾದಂಬರಿಯಾಗಿದೆ. ಇಲ್ಲಿ ಬರುವ ಪಾತ್ರಗಳು ಬದುಕನ್ನು ಇದ್ದಂತೆಯೆ ಸ್ವೀಕರಿಸುವ ಹಾಗೂ ಬದುಕಿನ ನಿಜವಾದ ಅನುಭವಗಳಿಂದ ವಂಚಿತರಾಗದೆ, ವಂಚನೆ ಮಾಡಿಕೊಳ್ಳದೆ ಬದುಕುತ್ತವೆ. ಅನ್ಯಮತ, ಅನ್ಯ ಸಂಸ್ಕøತಿ, ನಾಗರಿಕತೆ ತನ್ನ ಪರಿಸರದಲ್ಲಿ ನುಸುಳಿ ಬಂದಾಗ ಒಂದು ಪರಿಸರಕ್ಕೆ ಒಗ್ಗಿಕೊಂಡಿರುವ ಪರಿಸರಕ್ಕನುಗುಣವಾದ ಸಂಸ್ಕøತಿಯನ್ನು ರೂಡಿಸಿಕೊಂಡಿರುವ ಜನರ ಪ್ರತಿಕ್ರಿಯೆಯೂ ಕಾದಂಬರಿಯ ಭಾಗವಾಗಿದೆ.

ಕುವೆಂಪುರವರು ಬರೆದ ಕಾದಂಬರಿ ಕಾನೂರು ಹೆಗ್ಗಡತಿ ಕಾದಂಬರಿಯ ಶ್ರೇಣಿಯಲ್ಲಿ  ಮೊದಲನೆಯದು. ಎರಡನೆಯ ಕಾದಂಬರಿ ಮಲೆಗಳಲ್ಲಿ ಮದುಮಗಳು. ಆದರೆ ಇಲ್ಲಿನ ವಸ್ತು ವಿಷಯ ಕಾನೂನು ಹೆಗ್ಗಡತಿಗಿಂತ ಹಿಂದಿನದು. ಕಾದಂಬರಿಯಲ್ಲಿ  ಮಲೆನಾಡಿನ ಕೆಳವರ್ಗದವರ ಬ್ಯಾರಿ, ತುಳು, ಹವ್ಯಕರ ಭಾಷೆಯೂ ಇಲ್ಲಿನ ಸಂಭಾಷಣೆಯಲ್ಲಿ ಬಳಕೆಯಾಗಿದೆ. ಭಾವಶ್ರೀಮಂತಿಕೆ, ಅರ್ಥ ಶ್ರೀಮಂತಿಕೆ  ಮತ್ತೆ ಶಬ್ದ ಶ್ರೀಮಂತಿಕೆಯಿಂದಲೂ ಇದೊಂದು ಅನನ್ಯ ಕೃತಿಯಾಗಿದೆ. ಕಾಲಘಟ್ಟವು ಹತ್ತೊಂಬತ್ತನೆಯ ಶತಮಾ£ದÀ ಅಂತ್ಯವಾಗಿದ್ದು, ವಿವೇಕಾನಂದರು ಚಿಕಾಗೋದಲ್ಲಿ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಹಿಂದೂ ಧರ್ಮದ ಶ್ರೀಮಂತಿಕೆಯನ್ನು ವಿಷದಿಕರಿಸುವ ದಿನವೆ ಪಾದ್ರಿ ದೇವಯ್ಯನ ಮನೆ ಪ್ರವೇಶಿಸಿ ಮತಾಂತರಕ್ಕೇಳಿಸುವ ಪ್ರಯತ್ನದ ವಿಪರ್ಯಾಸವು ಇಲ್ಲಿದೆ.

ಹಿಂದೂಧರ್ಮದಲ್ಲಿರುವ ಸಾವಿರಾರು ಜಾತಿಗಳು ಪ್ರಜ್ಞಾಪೂರ್ವಕವಾಗಿ ತಮ್ಮ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಕೆಲವು ಜಾತಿಗಳನ್ನು ಮೇಲಸ್ಥರದಲ್ಲಿಟ್ಟು ಕೆಲವನ್ನು ಕೆಳಸ್ತರದಲ್ಲಿಟ್ಟು ಅವರ ನಡುಮನೆಗೆ ಇವರು, ಇವರ ನಡುಮನೆಗೆ ಅವರು ಪ್ರವೇಶಿಸದಂತೆ ಕಟ್ಟಳೆಗಳನ್ನು ಹೇರಿದ ಜಾತಿ ವ್ಯವಸ್ಥೆ ಕಾದಂಬರಿಯ ಪ್ರಧಾನ ಅಂಶವಾಗಿದೆ. ಎಲ್ಲಾ ವರ್ಗದಲ್ಲೂ ಮನೆ ಮಾಡಿಕೊಂಡಿದ್ದ, ದಯ್ಯ ಭೂತ, ಗಳು ಅವುಗಳಿಂದ ರಕ್ಷಿಸಿಕೊಳ್ಳಲು ತಮ್ಮದೆ ಮಾರಿ ಮಸಣಿಗಳ ಪೂಜೆ, ಅವುಗಳಿಗೆ ಪ್ರಾಣಿ ಬಲಿ, ಹರಕೆಗಳ ನಂಬಿಕೆಯ ಜಾಗಕ್ಕೆ ಶಿಷ್ಟದೇವರುಗಳ ಪ್ರವೇಶವೂ ಆಗಿ ಅದಕ್ಕಾಗಿ ವಿಶಿಷ್ಟ ಪೂಜಾಕ್ರಮ, ಮುಟ್ಟು-ತಟ್ಟುಗಳಿಂದ ರಕ್ಷಣಾ ಕ್ರಮಗಳು ಹಿಂದುಳಿದ ಮೇಲಸ್ತರದ ಜಾತಿಯಲ್ಲಿ ಪ್ರವೇಶವಾಗಿರುವುದು ಕೃತಿಯ ಭಾಗವಾಗಿ ಮೂಡಿಬಂದಿದೆ.

‘ಮಲೆಗಳಲ್ಲಿ ಮದುಮಗಳು’ ಹೆಸರೇ ನಿರ್ದೇಶಿಸುವಂತೆ ಬೆಟ್ಟಸಾಲುಗಳಲ್ಲಿ ಸದ್ದು ನವವಧುವಿನಂತೆ ಕಂಗೊಳಿಸುವ ಪ್ರಕೃತಿಯಾದ ಆಕೆಯ ಮಡಿಲಿಗೆ ಬಂದು ಸಾಂಪ್ರಾದಾಯಿಕತೆಯ ವಿರುದ್ಧ ಬಂಡೆದ್ದು ಹಿರಿಯರ ನಿರ್ಧಾರಗಳಿಗೆ ವಿರುದ್ಧವಾಗಿ ಓಡಿ ಬಂದು ವಿವಾಹವಾಗುವ ಇಬ್ಬರು ಮಧುಮಕ್ಕಳು ತಿಮ್ಮಿ ಮತ್ತು ಚಿನ್ನಮ್ಮ ರವರ ಪ್ರಣಯದ ಕಥೆಯಾಗಿದೆ ಅವಕಾಶ ಸಿಕ್ಕಿದಂತಿಲ್ಲ ವಿವಶತೆಗೆ ಒಳಪಟ್ಟು ಪ್ರಕೃತಿಯ ಮಡಿಲ ಮಗುವಾಗಿ ವರ್ಣಿಸುತ್ತಾ ಸಾಗುವÀ ಕುವೆಂಪು ಕೃತಿರಚನೆಯ ಎಪ್ಪತ್ತೈದು ವರ್ಷಗಳ ಹಿಂದಿನ ಬಂಡಾಯದ ಮನೋಭಾವವನ್ನು ಪುರುಷರಲ್ಲದೆ ಸ್ತ್ರೀಯರಲ್ಲೂ ಪ್ರತಿಬಿಂಬಿಸಿ ತನಗೆ ಶರಣಾಗಿ ಬಂದವರ ತಲೆಕಾಯುವ ಪ್ರಕೃತಿಯೆಂಬ ಮಧುಮಗಳ ಕಾದಂಬರಿಯ ಶೀರ್ಷಿಕೆಯನ್ನು ಸಾಕಾರ ಗೊಳಿಸುತ್ತಾಳೆ.

‘ಮನುಷ್ಯ ನಾಗರಿಕತೆಗೆ ಹತ್ತಿರವಾದಂತೆ ಪ್ರಕೃತಿಯಿಂದ ದೂರವಾಗುತ್ತಾ ಹೋಗುತ್ತಾನೆ’ ಇದು ಕೃತಿಯನ್ನು ಕುರಿತು ಶ್ರೀ ಕೃಷ್ಣ ಆಲನಹಳ್ಳಿಯವರ ವಿಮರ್ಶಾ ಮಾತು ಪ್ರಕೃತಿಗೆ ಹತ್ತಿರವಾದ ಆದರೆ ಜಾತಿ ಶ್ರೇಣಿಯಲ್ಲಿ ಕೆಳಗಿರುವ ವ್ಯಕ್ತಿಗಳು ಜೀವನವನ್ನು ಅನುಭವಿಸುವಂತೆ ಮೇಲಸ್ತರದಲ್ಲಿರುವವರು ಅನುಭವಿಸಲಾರರು.

ಪ್ರಕೃತಿಯೊಂದಿಗಿನ ಸಹಬಾಳ್ವೆಯಲ್ಲಿ ತಮ್ಮದೇ ಕಟ್ಟಳೆಗಳನ್ನು ರೂಪಿಸಿಕೊಳ್ಳುತ್ತಾ ಹೋದವರು ಜೀವನವನ್ನು ಸಹಜವಾಗಿ ಅನುಭವಿಸಲಾರರು ಎನ್ನುವುದು ಅದರ ಸಾರಾಂಶ. ಜೊತೆಗೆ ಪ್ರಕೃತಿಯ ಸಣ್ಣ ಸಣ್ಣ ಜೀವಿಗಳು ಅನುಭವ ಪಾಠವನ್ನು ಕಲಿಸುತ್ತವೆ. ಓಡುಹುಳುವೊಂದು ಸಗಣಿಉಂಡೆಯನ್ನು ಹಠ ಬಿಡದೆ ಮೇಲಕ್ಕೆ ಸಾಗಿಸಲು ನಡೆಸುತ್ತಿರುವ ಪ್ರಯತ್ನ, ನಾಯಿಗುತ್ತಿಗೆ ತನ್ನ ತಿಮ್ಮಿಯ ಅಪಹರಣದ ಕಾರ್ಯೋನ್ಮುಖವಾಗಲು ಸ್ಪೂರ್ತಿ ನೀಡುತ್ತದೆ.

ಕನ್ನಡದ ಪತ್ರಿಕೆಗಳು, ಬೇರೆ ಬೇರೆ, ಕಾಲ ಘಟ್ಟಗಳಲ್ಲಿ ನಡೆಸಿದ ಇದುವರೆಗಿನ ಸಮೀಕ್ಷೆಯಲ್ಲಿ ಬಹುತೇಕರು, ಮಲೆಗಳಲ್ಲಿ ಮದುಮಗಳು ಕಾದಂಬರಿಗೆ ಉನ್ನತ ಸ್ಥಾನ ನೀಡುತ್ತಾ ಬಂದಿದ್ದಾರೆ, ಬೃಹತ್ತಿನಲ್ಲಿ, ಮಹತ್ತಿನಲ್ಲಿ ಹಿರಿದಾದ ಈ ಕೃತಿಯದ್ದು ಸರ್ವರದು ಸಮಬಾಳು ಕಲ್ಪನೆ. ಕಾದಂಬರಿಯ ಕಾಲಘಟ್ಟ ನೂರಿಪ್ಪತೈದು ವರ್ಷಗಳು ಕಳೆದರೂ ಇಂದಿಗೂ ಅದೇ ರೀತಿಯ ಜಾತಿಯ ವ್ಯವಸ್ಥೆ, ಅದರ ತಳಹದಿಯ ಮೇಲಿನ ರಾಜಕಾರಣ, ಅರಣ್ಯ ನಾಶವಾಗಿ ಕಾಡು ಹಾಗೂ ಕಾಡು ಪ್ರಾಣಿಗಳು ಕಣ್ಮರೆಯಾಗುತ್ತಿರುವ ಅಂದಿಗಿಂತ ಹೆಚ್ಚೇ ಆಗಿರುವ ಇಂದಿನ ಮೌಡ್ಯ, ಮೂಡನಂಬಿಕೆಗಳು, ಕಾದಂಬರಿಯನ್ನು ಪ್ರಸ್ತುತವಾಗಿರಿಸಿದೆ. ಕಾದಂಬರಿಯ ಮರು ಓದಿನ ಜೊತೆಗೆ ಯುವಜನತೆ ವಿಶ್ವ ಮಾನವತ್ವದೆಡೆಗೆ ಸಾಗುವ ಹಾದಿಯಲ್ಲಿ ಸ್ಪೂರ್ತಿ ನೀಡಲು ಇದನ್ನು ಓದುವ, ವಿಮರ್ಶಿಸುವ ಕಾರ್ಯವನ್ನು ಕನ್ನಡ ಪುಸ್ತಕ ಪ್ರಾಧಿಕಾರ, ಪರಿಷತ್ತು ಮುಂತಾದ ಕನ್ನಡ ಅಭಿವೃದ್ಧಿಗಾಗಿ ಇರುವ ಸಂಸ್ಥೆಗಳು ಕಾದಂಬರಿಗೆ 55 ತುಂಬಿದ ಸಂದರ್ಭದಲ್ಲಿ ಅವಶ್ಯ ಮಾಡಬೇಕಾಗಿದೆ.


Leave a Reply

Back To Top