ಐದನೇ ವಾರ್ಷಿಕೋತ್ಸವದ ವಿಶೇಷ

 ನನ್ನ ಮೊದಮೊದಲ ಕವನ ರಚನೆ, ಕಾಲೇಜು ದಿನಗಳಲ್ಲಿ ನಾಲ್ಕು ಸಾಲುಗಳಲ್ಲಿ ಹಾಡಿನ ರೂಪದಲ್ಲಿ ಹೊರಬಂದಿತ್ತು. ಮತ್ತದು ಯಾವುದೇ ಬಾಯ್‌ಪ್ರೆಂಡ್‌‌ಗಾಗಿ ಹಾಡಿದಲ್ಲ!ಆ ರಚನೆ ನನ್ನ ಮಾತೃಭಾಷೆ ಕೊಡವ ಭಾಷೆಯಲ್ಲಿತ್ತು. ಕವನವನ್ನು ನಾನು ಪೋಣಿಸಿದ್ದು, ಹಾಡಿದ್ದು ಎಲ್ಲವು ನನ್ನ ಪ್ರೀತಿಯ ಗಂಗಮ್ಮಜ್ಜಿಗಾಗಿ. ಅವರು ಈಗ ನಮ್ಮೊಂದಿಗಿಲ್ಲ. ಅವರು ಕೊನೆಯುಸಿರು ಎಳೆದಾಗ 98 ವರ್ಷ ವಯಸ್ಸಾಗಿತ್ತು. ನನ್ನ ಮಗ ಅಂದರೆ ಅವರ ಮರಿಗನನ್ನೂ ಕಂಡು ಎತ್ತಾಡಿಸಿದ್ದವರು ನನ್ನ ಅಜ್ಜಿ. ನಾನು ಅವರಿಗೆ ಆ ಕವನ ರಚಿಸಿ ಹಾಡಿದಾಗ ನನಗೆ ಇಪ್ಪತ್ತರ ಹರೆಯ. ಆಗ ನಾನು ರಾಷ್ಟ್ರ ಮಟ್ಟದ ಕ್ರೀಡಾ ಪಟುವೂ ಆಗಿದ್ದೆ. ಆ ನನ್ನ ಕಾಲೇಜು ದಿನಗಳಲ್ಲೇ ನನ್ನ ಅಜ್ಜಿಯ ಬಾಯಿಯಲ್ಲಿ ಹಲ್ಲುಗಳಿರಲಿಲ್ಲ. ಹಲ್ಲು ಕಟ್ಟಿಸಿಕೊಳ್ಳಲೂ ಅವರು ತಯಾರಿರಲಿಲ್ಲ. “ಹಲ್ಲಿದೆ ಅಂತ ಮಿತಿ ಮೀರಿ ಊಟ ಮಾಡಿಬಿಡುತ್ತೇನೆ, ನಂತರ ಜೀರ್ಣಿಸಿಕೊಳ್ಳುವುದಕ್ಕೆ ನಿಮ್ಮ ಜೊತೆ ಮೈದಾನದಲ್ಲಿ ಓಡುವುದಕ್ಕೂ ನನ್ನ ಕೈಯಲ್ಲಿ ಆಗುವುದಿಲ್ಲ” ಎಂದು ನೆಪ ಹೇಳುತ್ತಿದ್ದರು. ಹಾಗಾಗಿ ಅವರು ನಗುತ್ತಿದ್ದುದೇ ಅಪರೂಪವಾಗಿತ್ತು. ಅವರನ್ನು ನಗಿಸಲೆಂದೇ ನಾನು ನನ್ನ ತಂಗಿ ಮತ್ತು ತಮ್ಮ ಆಗಾಗ ಏನಾದರೊಂದು ಚೇಷ್ಟೆ ಮಾಡುತ್ತಿರುತ್ತಿದ್ದೆವು. ಈ ಸಾಹಸಕ್ಕೆ ಇಳಿಯುತ್ತಿದ್ದ ನನ್ನ ತಂಗಿ ಮತ್ತು ತಮ್ಮ ಕೊನೆಗೆ  ದೈಹಿಕವಾಗಿ ರಣ ಹೋರಾಟ ನಡೆಸಿ ಬಿಡುತ್ತಿದ್ದರು. ಇದರಿಂದ ಅಜ್ಜಿಯ ಪಿತ್ತ ನೆತ್ತಿಗೇರಿ ಕತ್ತಿ, ಕೋಲೆನ್ನದೆ ಸಿಕ್ಕಿದನ್ನು ಕೈಗೆತ್ತಿ ಅವರ ಕಡೆ ಎಸೆಯುತ್ತಿದ್ದರು. ಹಾಗೆಂದು ಅವರು ನಮ್ಮನ್ಯಾರನ್ನು ದ್ವೇಷಿಸುತ್ತಿರಲಿಲ್ಲ. ಬದಲಾಗಿ ತುಂಬ ಪ್ರೀತಿ ಮತ್ತು ಕಾಳಜಿ ತೋರಿಸುತ್ತಿದ್ದರು. ಹಾಗಾಗಿ  ಸಂದರ್ಭಕ್ಕೆ ತಕ್ಕಂತೆ ಸಿಟ್ಟು ವ್ಯಕ್ತಪಡಿಸುತ್ತಿದ್ದರು ಅಷ್ಟೆ. ನಾನು ಅವರಿಬ್ಬರ ರಾದ್ಧಾಂತ ನೋಡಿಯೇ ಅರ್ಧ ಸುಮ್ಮನಿದ್ದು ಬಿಡುವುದನ್ನು ಕರಗತ ಮಾಡಿಕೊಂಡೆ ಎನ್ನಬೇಕು. ಇದರಿಂದಾಗಿ ಅಜ್ಜಿ ತಾನಾಗಿಯೇ ನನ್ನನ್ನು ಮಾತನಾಡಿಸುತ್ತ ಬರುತ್ತಿದ್ದರು‌. ಅದು ನನ್ನನ್ನು  ನಾನು ಗೆದ್ದೆ ಎಂದು ಬೀಗುವಂತೆ ಮಾಡಿಸುತ್ತಿತ್ತು. ಆ ಕುಶಿ ಅಜ್ಜಿ ಹೇಳಿದ ಕೆಲಸವನ್ನೆಲ್ಲ ನನ್ನಿಂದ ಮಾಡಿಸುತ್ತಲೂ ಇತ್ತು, ಕೆಲಸ ಆದ ನಂತರ ಅವರ ಮೊಗದ ಮಂದಹಾಸವನ್ನೂ ನನ್ನ ಮನಸ್ಸು ನಿರೀಕ್ಷಿಸುತ್ತಿತ್ತು. ಆದರೆ ಅಜ್ಜಿಯ ಮೊಗ ಸಿಡುಕು ಮುಕ್ತವಾಗಿರುತ್ತಿತ್ತಲ್ಲದೆ‌ ಮಂದಹಾಸ, ನಸುನಗು, ಮುಗುಳು ನಗು ಇದ್ಯಾವುದರ ಅಡ್ರಸ್ಸೇ ತೋರಿಸುತ್ತಿರಲಿಲ್ಲ. ಅದಕ್ಕೆಂದೆ ಹರಟೆಗಿಂತ ಭಜನೆ ಇಷ್ಟ ಪಡುತ್ತಿದ್ದ ಅಜ್ಜಿಗೆ ನಾನೊಂದು ಹಾಡೇಳಿದರೆನೆ ಸರಿಯೇನೋ ಎಂದುಕೊಂಡು ಮೊದಲ ಬಾರಿಗೆ …

“ಪಾಟ್‌ಕರ್ತಿ‌ ಚೀತೆ ನಾನ್‌
ನಾಕೋರ್ ಜೋಡಿ‌ ನೀನ್
ನೀ ಕೂಡಿ ಬಾ ಅವ್ಯ ಪಾಡನಾ
ನಂಗ‌ ದಂಡಾಳೇ ಆಡನಾ”

“ಓ ಅವಯ್ಯ ದಿನ್ದಿನಕದಿನ್
ದಿನಕ‌ದಿನ್ ದಿನ್ದಿನಕದಿನ್
ದಿನಕದಿನ್ ದಿನ್ದಿನಕದಿನ್”

ಎಂಬ ಕವನಕ್ಕೆ ಹಿಂದಿ ಹಾಡೊಂದರ ರಾಗಕ್ಕೆ ಸಾಲು ಪೋಣಿಸಿ ಅಜ್ಜಿಯ ಕೈ ಹಿಡಿದು ಕುಣಿದಿದ್ದೆ. ಆ ಕ್ಷಣ ಅಜ್ಜಿಯ ಮುಖದಲ್ಲಿ ಸಾವಿರ ವೋಲ್ಟೇಜ್ ಬಲ್ಬ್ ಅಂತು ಉರಿದಿತ್ತು. ಬೊಚ್ಚು ಬಾಯಿಯ ತುಟಿಯಲ್ಲಿ ನಗು ನೋಡಿದಾಗ ನನ್ನ ಕುಶಿಗೆ ಪಾರವೇ ಇರಲಿಲ್ಲ.
ಆದರೆ! ಈ ಕುಶಿ ಹೆಚ್ಚು ಹೊತ್ತು ಉಳಿಯಲಿಲ್ಲ? ನಮ್ಮ ಪಿ ಟಿ ಮಾಸ್ಟರ್, ಅಜ್ಜಿಯ ಮಗ, ನಮ್ಮಪ್ಪ ಸಂಜೆ ಕೆಲಸದಿಂದ ಮನೆಯೊಳಗೆ ಬಂದವರೇ “ಅಜ್ಜಿನ ಏನು ಹುಡುಗಿ ಅಂದುಕೊಂಡಿದ್ದೀಯಾ” ಎಂದು ನನಗೆ ಅಂದಿದ್ದೇ ಅಂದಿದ್ದು. ಅಜ್ಜಿಯ ನಗು ಉಲ್ಕೆ ಜಾರಿದಂತೆ ಕಂಡಿದ್ದಷ್ಟೆ ಮತ್ತೆ ಹಾಗೆಯೇ ಮಾಯವಾಗಿತ್ತು. ತಂದೆ ಏನೋ ಹಾಗೆ‌ ಹೇಳುತ್ತಾ ಮನೆಯಿಂದ ಮತ್ತೆ ಹೊರ ನಡೆದಿದ್ದರು. ಅವರು ಹೊರನಡೆದಿದನ್ನೆ ಕಾಯುತ್ತಿದ್ದವನಂತೆ ಮುಂದಿನ ಹಾಡಿನ ಸರದಿ ತನ್ನದೇ ಎಂಬಂತೆ ಶುರುವಾಗಿತ್ತು ತಮ್ಮನ ರಾಕ್ ಸಾಂಗ್‌. ಅವನ ಕರ್ಕಶ ಧ್ವನಿ ಕೇಳಿದ ಕೂಡಲೇ ಅಜ್ಜಿಗೆ ಅದೇನನಿಸಿತೋ‌ ಭಜನೆ “ಹಾಡಲಿಕ್ಕೆ ಬಾಯಿಯೇ ಬರಲ್ಲ ಅಣಗಿಸಲಿಕ್ಕೆ ಈ ವಯಸ್ಸಿಗೆ ದೊಡ್ಡ ದೊಡ್ಡ ಪದಗಳೇ ಉದುರುತ್ತವೆ ಅಲ್ವಾ” ಎನ್ನುತ್ತಾ ತಮ್ಮನನ್ನು ಅಟ್ಟಾಡಿಸಿಕೊಂಡು ಇನ್ನೇನು‌ ಮೆರಥಾನ್‌ ಓಡುತ್ತಾರೇನೋ‌ ಎನ್ನುವಷ್ಟು‌ ರಭಸವಾಗಿ ಮುಂದೆ ಹೆಜ್ಜೆ ಇಟ್ಟಿದ್ದರು ಆದರೆ ವಯಸ್ಸು ಅದಕ್ಕೆ ಸಹಕರಿಸಲಿಲ್ಲ. ತಮ್ಮ ತಿರುಗಿ ಕೀಟ್ಲೆ ಮಾತುಗಳನ್ನಾಡುತ್ತಾ ಅಜ್ಜಿ ಬೀಳುತ್ತಾರೇನೋ ಎಂದು ಮುಂದೆ ಬಂದು ಹಿಡಿದುಕೊಂಡಾಗ  ಅಜ್ಜಿಯ ಗುದ್ದು ಅವನ ಬೆನ್ನಿಗೆ ತಮಟೆ ಬಾರಿಸಿದಂತೆ ಬಿದ್ದಿದ್ದು ಕೇಳಿಸಿತು. ಮಗನ ಮೇಲಿನ ಕೋಪ ಮೊಮ್ಮಗನ ಬೆನ್ನಿಗೆ ಎಂಬಂತಿತ್ತು ಆ ಸಂದರ್ಭ. ಆಗ ನಗುತ್ತ ಅವರನ್ನು ನೋಡಿ ಅಣುಕು ಕವನ ವಾಚಿಸುವ ಸರದಿ ತಂಗಿ, ಅಮ್ಮ ಮತ್ತು ನನ್ನದಾಗಿತ್ತು.


9 thoughts on “ಐದನೇ ವಾರ್ಷಿಕೋತ್ಸವದ ವಿಶೇಷ

  1. ತುಂಬಾ ಚೆನ್ನಾಗಿದೆ ಮೇಡಮ್ ನಿಮ್ಮ ಸಾಹಿತ್ಯ ಕಲೆ ಯಿಂದ ಮತ್ತಷ್ಟು ಕವನ ಕೃಷಿ ನಡೆಯಲಿ all the best. ಒಳ್ಳೆಯ ಪ್ರಯತ್ನಕ್ಕೆ ಅಭಿನಂದನೆಗಳು ಮೇಡಮ್

Leave a Reply

Back To Top