ಐದನೇ ವಾರ್ಷಿಕೋತ್ಸವ ವಿಶೇಷ

   ಕಾರಂತರು ಎಂದಾಕ್ಷಣ ನಮ್ಮ ನೆನಪಿನಾಳಕ್ಕೆ ಇಳಿಯುವುದು ಅವರ ಜೀವನೋತ್ಸಾಹ ಹಾಗೂ ಜೀವನ ಶ್ರದ್ಧೆ ಅವರ ಜೀವಿತದ ಅವಧಿಯ ಅವರ ಅಮೋಘವಾದ ಬಾಳು ಅರ್ಥಪೂರ್ಣವಾದ ಸಾಧನೆ. ಇಷ್ಟೆಲ್ಲಾ ಕೇವಲ ಒಬ್ಬ ವ್ಯಕ್ತಿಯಿಂದ ಸಾಧ್ಯವೇ ಎನ್ನುವಷ್ಟರ ಮಟ್ಟಿಗೆ ವಿಸ್ಮಯವನ್ನು ಹುಟ್ಟಿಸಿದ ಸಾಧಕರು. ದಕ್ಷಿಣ ಕನ್ನಡ ಜಿಲ್ಲೆ ಕೋಟಾದಲ್ಲಿ ಜನಿಸಿದ ಇವರು “ಒಬ್ಬ ವ್ಯಕ್ತಿ ಆಗಿರದೆ ಒಂದು ಸಂಸ್ಥೆಯಂತೆ” “ನಡೆದಾಡುವ ವಿಶ್ವಕೋಶ”,  “ಕಡಲತಡಿಯ ಭಾರ್ಗವ”, “ ಆಡು ಮುಟ್ಟದ ಸೊಪ್ಪಿಲ್ಲ”,  ಎಂಬಂತೆ ಅವರ ಜೀವನವೇ ಒಂದು ವಿಶ್ವವಿದ್ಯಾಲಯ ಇಂತಹ ಹಲವಾರು ಸಜ್ಜನಿಕೆಯ ಮಾತುಗಳು ಸಾಹಿತ್ಯ ಕ್ಷೇತ್ರದಲ್ಲಿ ಪ್ರಚಲಿತ ಇರುವಂತಹದ್ದು.

       ನವೋದಯ ಕಾಲಘಟ್ಟದಲ್ಲಿ ವಿಭಿನ್ನ ಪ್ರಯೋಗಗಳಿಗೆ ತಮ್ಮನ್ನು ತೊಡಗಿಸಿಕೊಂಡ ಮಹಾದರ್ಶನದಂತ ಬದುಕು ಅವರದು. ಇವರ ವಿಚಿತ್ರಕೂಟ,  ದೇವದೂತರು, ಸೋಮನ ದುಡಿ, ಮರಳಿ ಮಣ್ಣಿಗೆ, ಬೆಟ್ಟದ ಜೀವ, ಸರಸಮ್ಮನ ಸಮಾಧಿ, ಔಧಾರ್ಯದ ಉರುಳಲ್ಲಿ, ಮೂಕಜ್ಜಿಯ ಕನಸುಗಳು, ಅಳಿದ ಮೇಲೆ, ಮೈಮನಗಳ ಸುಳಿಯಲ್ಲಿ,‌ ಇಂತಹ ಹಲವಾರು ಪ್ರಾತಿನಿಧಿಕವಾದಂತಹ ಅತ್ಯುತ್ತಮ ಕೃತಿಗಳನ್ನು ,ಹಾಗೂ ಶಿಶು ಸಾಹಿತ್ಯ, ನಾಟಕ, ಪ್ರಬಂಧ, ಆತ್ಮಕಥೆ, ಕೋಶಗಳು, ಸಣ್ಣ ಕಥೆಗಳು, ಕವಿತೆಗಳು, ಬಿಡಿ ಲೇಖನಗಳು, ಒಟ್ಟಾರೆ ಎಲ್ಲಾ ಪ್ರಕಾರಗಳಲ್ಲೂ ಸಹ ತಮ್ಮ ಕೈಚಳಕ ತೋರಿಸುವುದರ ಮೂಲಕ ‘ಅಪ್ಪ ಹಾಕಿದ ಆಲದ ಮರ’ ಕೆ ಜೋತು ಬಿದ್ದವರಲ್ಲ ಕಾರಂತರು. 1968ರಲ್ಲಿ ಪ್ರಕಟಗೊಂಡ ಮೂಕಜ್ಜಿಯ ಕನಸುಗಳಿಗೆ “ಜ್ಞಾನಪೀಠ ಪ್ರಶಸ್ತಿ” ಯನ್ನು ಪಡೆದುಕೊಂಡು ಕನ್ನಡದ ಹೆಗ್ಗಳಿಕೆಗೆ ಪಾತ್ರರಾದವರು. ಬದುಕನ್ನು ಬಹಳ ಕುತೂಹಲ ವಿಸ್ಮಯತೆಯಿಂದ ನೋಡುತ್ತಾ, ಇಡೀ ಬ್ರಹ್ಮಾಂಡದೊಂದಿಗೆ ತಮ್ಮನು ಸಮೀಕರಿಸಿಕೊಳ್ಳುತ್ತಾ, ಬದುಕನ್ನು ಮತ್ತಷ್ಟು ಸುಂದರ ವಿನೀತ ಭಾವದಿಂದ ತೆಗಳಿಕೆಗೆ ಹೊಗಳಿಕೆಗೆ ಕುಗ್ಗದೆ ಹಿಗ್ಗದೆ ಸಮಚಿತ್ತ ಭಾವ ಹೊಂದಿದ ಇವರು ‘ತಾನು ಬದುಕಿಗೆ ನೀಡುವುದಕ್ಕಿಂತ ಬದುಕು ತನಗೆ ನೀಡಿದ್ದೆ ಹೆಚ್ಚು’ ಎಂಬ ಆಶಯದಿಂದ ಜೀವನೋತ್ಸಹ ಕಂಡುಕೊಂಡವರು.

       ಇವರ “ಚೋಮನ ದುಡಿ” ಕಾದಂಬರಿಯೂ ಇಡೀ ದಲಿತ ವರ್ಗದ ಚಿತ್ರಣವನ್ನು ಪ್ರತಿನಿಧಿಸುವಂಥದ್ದು. ಅವರ ಸಾಮಾಜಿಕ ಸ್ತರ ವಿನ್ಯಾಸ, ಸಾಮಾಜಿಕ ಸಂಘರ್ಷದ ಸುತ್ತ ಹೆಣೆಯಲ್ಪಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹೊಲೆಯರ ಸಂಸ್ಕೃತಿ ಜೀವನದ ಚಿತ್ರಣವಿರುವ ಈ ಕಾದಂಬರಿ ಅಸ್ಪೃಶ್ಯರಾದ ಅವರ ಪಂಗಡಗಳಲ್ಲೇ ಮೇರ, ಬೈರಾ, ಅಜೀಲ,ಮಾರಿ, ಎಂಬ ನಾಲ್ಕಾರು ಬೇರೆ ಬೇರೆ ವಿಭಾಗಗಳಿರುತ್ತವೆ. ಇವರಲ್ಲಿ ಮೇರರು ಭೂಮಿ ಸಾಗುವಳಿ ಮಾಡಿಕೊಳ್ಳಲು ಅವಕಾಶವಿದೆ. ಆದರೆ ತೀರ ಕೆಳಸ್ಥಾನದಲ್ಲಿರುವ “ಮಾರಿ” ಎಂಬ ತಂಡದವರು ಮಾತ್ರ ಉಚ್ಚಿಷ್ಟವನ್ನು ತಿಂದು ಅಥವಾ ಸತ್ತ ದನಗಳನ್ನೊ ತಿಂದು ಬದುಕುವಂತಹ ಹೀನಾಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕರುಣಾಜನಕ ಚಿತ್ರಣವನ್ನು ತೆರೆದಿಡುವ ಕಾದಂಬರಿಯೇ ಚೋಮನ ದುಡಿ.

       ಚೋಮನ ಹಲವು ವರ್ಷಗಳ ಕನಸು ಭೂಮಿಯನ್ನು ಸಾಗುವಳಿ ಮಾಡಬೇಕೆಂಬುದು.
ಆದರೆ ಚೋಮನ ಹಿರಿಕರಲ್ಲಿ ಇದುವರೆಗೂ ಯಾರು ಕೂಡ ಭೂಮಿಯ ಒಡೆತನವನ್ನು ಹಾಗೂ ಭೂಮಿ ಸಾಗುವಳಿ ಮಾಡಿದವರಿಲ್ಲ. ಸೋಮನ ಮಗಳು ಬೆಳ್ಳಿ ಮನೆಯ ಸಂಪೂರ್ಣ ಜವಾಬ್ದಾರಿ ಹೊತ್ತವಳೆಂದರೆ ಅತಿಶಯೋಕ್ತಿಯಾಗಲಾರದು. ಗುರುವ ಚಿನಿಯ ನೀಲ ಕಾಳ ಇವರೆಲ್ಲ ಸಹೋದರರಾಗಿದ್ದರೂ, ಹೇಡಿಗಳಂತೆ ಚಟಕ್ಕೆ ದಾಸರಾಗಿರುವಂತಹದ್ದು ಒಂದೆಡೆಯಾದರೆ, ಚೋಮ ಎಂದೋ ಮಾಡಿದ ಸಾಲಕ್ಕೆ ಬೆಳ್ಳಿ ತನ್ನನ್ನು ಕಳೆದುಕೊಂಡು ಚೋಮನ ಕಣ್ಣಲ್ಲಿ ನಿರೂಪಯುಕ್ತ ಪ್ರಕೃತಿಯಂತೆ ಕಂಡುಬರುವ ಶೋಚನೆಯ ಚಿತ್ರಣ, ಹಾಗೂ ತನ್ನ ಕನಸನ್ನು ಈಡೇರಿಸಿಕೊಳ್ಳಲಾರದೆ ಎದೆಯೊಳಗೆ ಬೇಗುದಿಯನ್ನಿರಿಸಿ ಉಸಿರು ಚೆಲ್ಲುವ ಚೋಮ ನಮಗೆ ಒಂದು ಕಥಾನಕ ರೂಪವಾಗಿ ಕಾಣುತ್ತಾನೆ.

     ಕಾರಂತರ ಕಲ್ಪನಾ ಶಕ್ತಿಗಿಂತ ವಾಸ್ತವ ಬದುಕಿನತ್ತ ಅವರ ಚಿತ್ತ ತೆರೆದಿರುವುದು ಮತ್ತು ಅನುಭವ ಗಮ್ಯವಾದ ಬಾಳಿನ ಚಿತ್ರಣವು ಕಟ್ಟಿಕೊಡುವಂಥದ್ದು ಅವರ ಕಾದಂಬರಿಯಲ್ಲಿ ಕಾಣುವ ಪ್ರಮುಖ ಅಂಶ. ಚೋಮ ನಮಗಿಲ್ಲಿ ಕೇವಲ ಪ್ರಾತಿನಿಧಿಕವಾಗಿ ಸಂಘರ್ಷಕ್ಕೆ ಎದ್ದು ನಿಲ್ಲುವ ಒಂದು ಪ್ರತಿಮೆ. ಕಾರಂತರು ಚೋಮನ ಗಂಡು ಮಕ್ಕಳನ್ನೂ ದಾಸ್ಯಕ್ಕೆ ಒಳಗಾದ ಚೋಮನಂತೆ ಚಟಕೆ ಅಂಟಿಕೊಂಡು ಬದುಕಿನ ಸ್ಥಿರತೆಯನ್ನೇ ಮರೆತ ಅನಿಶ್ಚಿತೆಯುಳ್ಳವರು. ದಲಿತರಲ್ಲಿ ಬಹುಪಾಲು ತುಳಿತ ಶೋಷಣೆ ಸಂಘರ್ಷದ ಹೊಡೆತ ಎದುರಿಸಲಾರದೆ ಪಲಾಯನವಾಕ್ಕೆ  ಜೋತು ಕೆಟ್ಟ ಚಟಕ್ಕೆ ದಾಸರಾಗುವ ಸಹಜ ಪ್ರಕ್ರಿಯೆಗಳನ್ನು ಎತ್ತಿ ಹಿಡಿದಿದ್ದಾರೆ. ಗುರುವನಂತವನು ಕ್ರಿಶ್ಚಿನಟಿಗೆ ಮತಾಂತರಗೊಂಡು ಅಲ್ಲಿಯ ಹೆಣ್ಣನ್ನೇ ಮದುವೆ ಮಾಡಿಕೊಳ್ಳುವುದು ಚೋಮನ ಕುಡಿತ ಆತನ ನೀಗದ ಸಾಗುವಳಿ ಆಸೆ ಇದಕ್ಕೆಲ್ಲ ಬಲಿಪಶು ಮಾತ್ರ ಅಮಾಯಕ ಬೆಳ್ಳಿ.  ಬೆಳ್ಳಿಯು ಈ ಕಾದಂಬರಿಯಲ್ಲಿ “ಭೂಗರ್ಭದೊಳಗೆ ಕೂತು ಹೋಗಿ ಕಲ್ಲಿದ್ದಲು  ತೈಲವಾಗಿ ಮತ್ತೆ ಮರುಬಳಕೆಯಾಗುವ ತನ್ನನ್ನು ತಾನು ಕರಗಿಸಿ ಸಮಾಜಕ್ಕೆ ಬೆಳಕಾಗುವ ಬೆಳಕಿಗೆ ಎಣ್ಣೆಯಾಗುವ ರೂಪಕದಂತೆ ಕಾಣುತ್ತಾಳೆ”. ಅನಾದಿ ಕಾಲದಿಂದಲೂ ಹೆಣ್ಣು ಶೋಷಣೆಗೆ ಒಳಪಟ್ಟವಳೆ, ಅದರಲ್ಲಿ ದಲಿತರು ಮೇಲ್ವರ್ಗದವರು ಅವರು ಇವರು ಎಂಬ ಎರಡು ಮಾತಿಲ್ಲ. ಹೆಣ್ಣು ಕೇವಲ ಹೆಣ್ಣಷ್ಟೇ. ಆಕೆ ಭೋಗದ ವಸ್ತು, ಜಾತಿ ಯಾವುದಾದರೇನು? ಮತ ಯಾವುದಾದರೇನು? ಹೆಣ್ಣು ಕುಲ ಒಂದೇ ತಾನೇ!.

         ಅಸಹಾಯಕ ಅಪ್ಪ ಜವಾಬ್ದಾರಿಗಳಿಲ್ಲದ ಸಹೋದರರು ತಲತಲಾಂತರದಿಂದ ಬಂದ ಪರಂಪರೆ ಇವುಗಳ ತುಳಿತಕ್ಕೆ ಕೇವಲ ಚೋಮ ಒಬ್ಬನೇ ದಹಿಸಿ ಹೋಗಲಿಲ್ಲ.  ಚೋಮನಿಗಿಂತ ಮೊದಲೇ ಆ ತುಳಿತಕ್ಕೆ ಆ ನೋವಿಗೆ ಆ ಸಂಘರ್ಷಕ್ಕೆ ಶೋಷಣೆಗೆ ಒಳಗಾದವಳು ಬೆಳ್ಳಿ. ಚೋಮನ ಕನಸಿಗೆ ಆಹುತಿಯಾದವಳು ಬೆಳ್ಳಿ. “ಚೋಮನ ದುಡಿಯಲ್ಲಿ ಚೋಮನ ಮೂಕ ವೇದನೆಯು ಸಂಕೇತವಾಗುತ್ತದೆ, ಆದರೆ ಜೀವವಿಲ್ಲದ ಕಾದಂಬರಿಯಲ್ಲಿ ಜೀವಂತವಾಗಿರುವುದು ದುಡಿ”.( ಎಲ್ ಎಸ್ ಶೇಷಗಿರಿ ರಾವ್ ಕನ್ನಡ ಹೊಸಗನ್ನಡ ಸಾಹಿತ್ಯ ಚರಿತ್ರೆ) ಈ ಕಾದಂಬರಿಯಲ್ಲಿ ಯಜಮಾನ ಸಂಕಪ್ಪಯ್ಯ, ಮನ್ವೇಲಾ, ಮಿಂಗೇಲ ಈ ಎಲ್ಲ ಪಾತ್ರಗಳು ಕಾದಂಬರಿಯುದ್ದಕ್ಕೂ ಚೋಮನನ್ನು ತುಳಿತಕ್ಕೊಳಪಡಿಸಿ ಸ್ವಾರ್ಥಪರತೆ ಮೆರೆದವರೆ. ಈ ಕಾದಂಬರಿಯಲ್ಲಿ ಕಂಡುಬರುವ ಮುಖ್ಯವಾದ ಅಂಶ  ‘ಬಾಡು’ ಇಲ್ಲಿ ನಾಯಿಯ ಹೆಸರು ಸಹ ಬಾಡು ಹಾಗೂ ಮಾಂಸಕ್ಕೂ ಕೂಡ ಬಾಡು ಎಂಬುದು. ಜನಪದರ ಬದುಕಿನ ದಲಿತರ ಜೀವನ ಕ್ರಮ ಅವರ ಸಾಂಸ್ಕೃತಿಕ ಚಿತ್ರಣದ ಇಡೀ ಒಳನೋಟವನ್ನು  ಕಾರಂತರು ಅವಲೋಕಿಸಿದ್ದಾರೆ. ತೋಟಕ್ಕೆ ಹೋಗಿ ಸಾಲ ತೀರಿಸಿ ಬಂದ ಬೆಳ್ಳಿಗೆ ಮದುವೆ ಮಾಡುವ ಯೋಚನೆ ಬಂದರೂ ಸಹ ಮನೆಯ ಅಳಿಯ ತನ್ನನ್ನು ತಿರಸ್ಕರಿಸಬಹುದು ವಯಸ್ಸಾದ ಮುದುಕನೆಂಬ ಮನಸ್ಥಿತಿಯ ಹಿನ್ನೆಲೆಯಲ್ಲಿ  ಎಂಬುದು ಚೋಮನಲ್ಲಿ ಮೂಡುವುದು ಬಹುಶಃ ಆತನ ಅಸಹಾಯಕತೆಯ ವ್ಯಕ್ತಿತ್ವ ಎನಿಸದಿರದು.

      ಸಂಪ್ರದಾಯಬದ್ಧ ಕಟ್ಟಳೆಗಳನ್ನು ಮುರಿದು ಸಲೀಸಾಗಿ ಇನ್ನೊಂದು ಧರ್ಮಕ್ಕೆ ತೆರಳುವುದು ಚೋಮನಿಂದಾಗದ ಕೆಲಸ. ಇರುವುದರಲ್ಲೇ ಇದ್ದು ಗೆದ್ದು ತೋರಿಸುವ ಹಂಬಲಿಕೆಯೇನೊ  ಚೋಮನಿಗುಂಟು; ಆದರೆ ಅವನನ್ನು ಅಂಟಿಕೊಂಡ ಕುಡಿತಕ್ಕಿಲ್ಲ.. ಯಾವುದೇ ಕಟ್ಟುಪಾಡುಗಳ ವಿರುದ್ಧ ತಿರುಗಿ ಬೀಳುವ ಎದೆಗಾರಿಕೆ ಬಹುಶಃ ಆ ಸಂದರ್ಭದಲ್ಲಿ ಪರಿಸ್ಥಿತಿಗೆ ಇರಲಿಕ್ಕಿಲ್ಲ. ಆದರೆ ಬೆಳ್ಳಿ ಎಂಬ ತನ್ನ ಮಗಳು ಮನ್ವೇಲನ ಜೊತೆಯಲ್ಲಿ ಚಾಪೆಯ ಮೇಲೆ ಕುಳಿತು ಮಾತನಾಡುತ್ತಿದ್ದನ್ನು ಕಂಡ ಚೋಮ ಆವರೆಗೂ ನಿರಾಶ್ರಿತನಾಗಿ ನಿಶ್ಚೇತನಾಗಿದ್ದ ಅವನಲ್ಲೂ ಸಹ  ಪುರುಷತ್ವವು ಬೆಳ್ಳಿಯ ಮೇಲೆ ದಬ್ಬಾಳಿಕೆಯನ್ನು ಮಾಡುವಂತೆ ಎಚ್ಚರಿಸಿತು. ಈ ಒಂದು ಸಂದರ್ಭದಲ್ಲಿ ಸನ್ನಿವೇಶವನ್ನು ಸ್ತ್ರೀವಾದಿ ಹಿನ್ನೆಲೆಯಿಂದ ಅವಲೋಕಿಸಿದಾಗ ಪುರುಷ ರಾಜಕಾರಣದ ಎಲ್ಲಾ ಮುಖಗಳು ಅನಾವರಣಗೊಳ್ಳುತ್ತವೆ. ಪ್ರಕೃತಿ ಎಂದಾಕ್ಷಣ ಬೋಗಿಸಲೆಂದೇ ಇರುವುದು ದಬ್ಬಾಳಿಕೆಗೆ ಒಳಪಡಿಸಲೆಂದೆ ಇರುವುದು ಎಂಬ ಅಂಶ ಜಾಗೃತಗೊಳ್ಳುವುದು ವಿಪರ್ಯಾಸ.  ಆ ಕ್ಷಣವನ್ನು ಕಂಡ ಚೋಮ “ಆವಳ ಕತ್ತನ್ನು ಅವುಕಿ  ಹಿಡಿದು ಮರುಳನಂತೆ ಅವಳನ್ನು ತುಂಬಿಸಿದ”,  ಆತ ವಿಕಟವಾಗಿ ನಗುತ್ತಾ ಆಕೆಯನ್ನು ಹೊರಗೆ ತಳ್ಳುತ್ತಾನೆ. ಈತ ಮಾಡಿದ ಸಾಲ ತೀರಿಸುವಾಗ ಬೆಳ್ಳಿ ಮನೆಗೆ ಬೆಳಕಾಗಿದ್ದಳು. ಮನೆಯಲ್ಲಿದ್ದ ಅಷ್ಟು ಪುರುಷರನ್ನು ತಾಯಿಯಂತೆ ಮಮತೆಯ ಮಡಿಲಾಗಿ ಸಲುಹಿದ ಬೆಳ್ಳಿ ಮನ್ವೇಲನ ಜೊತೆಗಿರುವುದನ್ನು ಕಂಡ ಅವಳ ಅಪ್ಪ ಬೆಳ್ಳಿಯನ್ನು ವಿಕೃತವಾಗಿ ಚುಂಬಿಸಿ ಹೊರ ಹಾಕುವ ಆತನ ಹೇಸಿಗೆಯುತವಾದ ನಡುವಳಿಕೆ ಪುರುಷತ್ವದ ಮೇಲುಗೈ ಹೆಣ್ಣಿನ ಮೇಲೆ ತಾನು ಯಾವ ಬಗೆಯ ಅಧಿಪತ್ಯ ಸಾಧಿಸಲು ತನಗಿರುವ ಏಕೈಕ ಆಧಾರವೇ ಲಿಂಗರಾಜಕಾರಣ ಎಂಬ ನೆಲೆಯನ್ನು ನಾವು ಸ್ತ್ರೀವಾದಿ ಚಿಂತನೆಯಡಿಯಲ್ಲಿ ವೀಕ್ಷಿಸಬಹುದು.

     ಗಂಡಸು ಆದವನು ಒಂದು ಹೆಣ್ಣು ತಾಯಿಯಾಗಲಿ, ಮಗಳು, ಹೆಂಡತಿ, ಹೀಗೆ ಅನೇಕ ಪಾತ್ರಗಳ ರೂಪಾಂತರದಲ್ಲಿಯೂ ಕೂಡ ಪುರುಷ ವಿಜೃಂಭಿಸಬಹುದು ಎಂಬುದರ ಒಂದು ಮಗ್ಗಲನ್ನು ಈ ಕಾದಂಬರಿ ಅನಾವರಣಗೊಳಿಸುತ್ತದೆ. ದುರಂತ ಎಂದರೆ ಬೆಳ್ಳಿ ಎಲ್ಲರ ಬದುಕಿಗೆ ಬೆಳಕಾಗಿದ್ದು ಚೋಮನ ಅವಸಾನದ ನಂತರವೂ ಕಾಣುವುದಿಲ್ಲ. ಚೋಮ ಇಲ್ಲಿ ದಲಿತ ವರ್ಗದವರ ಪ್ರತಿಮೆಯ ದ್ಯೋತಕವಾಗಿ ಉಳಿದು ಬಿಡುತ್ತಾನೆ. ಆದರೆ ಬೆಳ್ಳಿ ಸ್ತ್ರೀ ಕುಲದ ಶೋಷಣೆಯ ರೂಪಕವಾಗಿ ಚಿತ್ರಿತ ಗೊಳ್ಳುವುದೇ ಇಲ್ಲ. ಅನಾದಿ ಸಮಯದಿಂದ ಕಾಲ ಗರ್ಭದಲ್ಲಿ ಹೂತ ಬೆಳ್ಳಿಯಂತವರು ಮತ್ತೆ ಮತ್ತೆ ದಮನಗೊಳ್ಳುತ್ತಲೇ ಇರುವುದು ದುರ್ದೈವ.

     ಒಟ್ಟಾರೆ “ಚೋಮನ ದುಡಿ” ಮಾತ್ರ ಕರ್ಣಪಟದಲ್ಲಿ “ಡಮ ಡಮ್ಮ ಡಕಾ ಡಕ್ಕಾ” ಎಂಬ ಸಂಗೀತದ ನೀನಾದ ಮರುಕಳಿಸುತ್ತಲೇ ಇರುವುದು. ಈ ಕಥಾನಕ ಸಣ್ಣದಾದರೂ ಅದರ ಅರ್ಥ ವ್ಯಾಪ್ತಿ ಇಡೀ ದಲಿತ ಸಮುದಾಯಕ್ಕೆ ಅತ್ಯಂತ ಮಹತ್ವಪೂರ್ಣವಾದದ್ದು.” ಚೋಮನ ದುಡಿಯಲ್ಲಿ ಹೊಲೆಯರ ಜಾತಿಯಲ್ಲಿ ಹುಟ್ಟಿದ್ದರಿಂದ ಅನೇಕ ದುಃಖ ಪರಂಪರೆಗಳಿಗೆ ಈಡಾಗಬೇಕಾದ ಹೊಲಯನ ಜೀವನ ಚಿತ್ರವಿದೆ ಈ ಕೃತಿಯ ಕಥಾನಕದ ವೇಗವೇ ಬೆರಗುಗೊಳಿಸುವಂತದ್ದು; ಚೋಮನ ಜೀವನ ಇಳಿಜಾರಿಗೆ ಬಿದ್ದ ಬಂಡೆಯಂತೆ ದುರಂತದ ಕಡೆಗೆ ವೇಗವಾಗಿ ಸಾಗಿದೆ. ಅವನ ದುಡಿಯ ಬಡಿತ ಈ ವೇಗದ ಸಂಕೇತದಂತಿದೆ. ಆದರೆ ಚೋಮ ಇನ್ನು ಬದುಕಿದ್ದಾನೆ ಅವನ ದುಡಿ ಕತ್ತಲನ್ನು ಕೇಳುತ್ತಿದೆ”. ಎಂಬ ದರ್ಶನವೇ ಕಾರಂತರ ಬದುಕಿನ ಶ್ರದ್ದೆಗೆ ಸಾಕ್ಷಿಯಾಗಿದೆ.(ಕೀರ್ತಿನಾಥ ಕುರ್ತುಕೋಟಿ-ಯುಗ ಧರ್ಮ ಹಾಗೂ ಸಾಹಿತ್ಯ ದರ್ಶನ) ಇಂತಹ ಜೀವನ ದರ್ಶನ,ಶ್ರದ್ಧೆ, ಸಾಕ್ಷಾತ್ಕಾರ, ಕುತೂಹಲ,
ವಿಸ್ಮಯವನ್ನು ಮೂಡಿಸುವ ಕಾರಂತರು ನಮಗೆ ಭಿನ್ನ ನೆಲೆಯಲ್ಲಿ ಪ್ರಯೋಗ ಶಾಲೆಯ ದಕ್ಷ ಶಿಕ್ಷಕರಂತೆ ಕಾಣುವುದು ಅತಿಶಯೋಕ್ತಿಯೇನಲ್ಲ. ನಿರಂತರ ಕಲಿಕೆಯಲ್ಲಿ ಧ್ಯಾನಸ್ಥರಾಗುವ ಕಾರಂತರು ಬರೆದಂತೆ ಬದುಕಿ ಬಾಳನ್ನು ತಪಸ್ಸಂತೆ ಧ್ಯಾನಿಸಿ ಪ್ರಕೃತಿಯೊಂದಿಗೆ ಅವಿನಾಭವ ಹೊಂದಿದ ತಪಸ್ವಿಗಳು.


Leave a Reply

Back To Top