ಅಂಕಣ ಬರಹ
ಪೋಷಕರಿಗೊಂದು ಪತ್ರ–02
ಇಂದಿರಾ ಪ್ರಕಾಶ್
ಪತ್ರ-ಎರಡು
ಆತ್ಮೀಯರೆ,
ಪೋಷಕರಿಗಾಗಿ ಒಂದು ಪತ್ರ:-
ಮುಂದುವರೆದ ಭಾಗ,
ಮಗುವಿಗೆ ಪ್ರಾರ್ಥನೆ, ಧ್ಯಾನ, ದೈವದಲ್ಲಿ ಭಕ್ತಿ, ತನ್ನಲ್ಲಿ ತನಗೆ ಭರವಸೆ ಮೂಡುವಂತಹ ಅನೇಕ ಮಹಾತ್ಮರ ಕಥೆಗಳನ್ನು ಹೇಳಿ. ಓದುವುದರೊಂದಿಗೆ ಸಣ್ಣವರಿದ್ದಾಗಲೇ ಒಳ್ಳೆಯ ಗುಣಗಳನ್ನು ಕಲಿಯುವಂತಹ ವಾತಾವರಣ ಮನೆಯಲ್ಲಿರಲಿ. ಏಕೆಂದರೆ ಎಷ್ಟೋ ಮಕ್ಕಳು ಚಿಕ್ಕವಯಸಿನಲ್ಲಿ ಅವಾಚ್ಯ ಶಬ್ದಗಳನ್ನು ಮಾತನಾಡಿದಾಗ, ತಂದೆ ತಾಯಿಯರಾಗಲಿ, ಮನೆಯ ಹಿರಿಯರಾಗಲಿ ಪುಟ್ಟ ಮಗು ಹೇಗೆ ಹೇಳುತ್ತಿದೆ ಎಂದು ಹಾಸ್ಯಾಸ್ಪದವಾಗಿ
ತೆಗೆದುಕೊಳ್ಳದೆ ಆಗಲೇ ಈ ರೀತಿ ಮಾತನಾಡಬಾರದು.
ಅದು ತಪ್ಪು ಎಂಬ ಅರ್ಥ ಮಗುವಿಗೆ ಅರಿವಾಗುವಂತೆ ತಿಳಿಸಿ ಹೇಳಿದರೆ ಮತ್ತೆ ಆ ಕಂದ ಆ ತಪ್ಪನ್ನು ಮಾಡಲಾರದು.
ಏಕೆಂದರೆ ಆ ತಪ್ಪಿನ ನಿಮ್ಮ ತಿದ್ದುವಿಕೆಯ ರೀತಿಯು ಮಗುವಿನ ಮನಸ್ಸಿನ ಮೇಲೆ ಪರಿಣಾಮ ಬೀರಿರುತ್ತದೆ. ಶಿಸ್ತಿನ ಬಗ್ಗೆ ಹೇಳಬೇಕೆಂದರೆ, ಶಾಲೆಗೆ ಸೇರಿಸಿದ ನಂತರವೇ ಕಲಿಸಬೇಕೆಂದೇನಿಲ್ಲ. ಸಣ್ಣ ಮಗುವಾದರೂ ತಿಳುವಳಿಕೆ ಇರುತ್ತದೆ. ತನ್ನ ಆಟದ ಸಾಮಾನುಗಳನ್ನು ಆಡಿದ ನಂತರ ಅದರ ಪ್ರತ್ಯೇಕ ಸ್ಥಳದಲ್ಲೇ ಇಡುವುದು. ಮನೆಯಲ್ಲಿ ಜೋಡಿಸಿದ ಅಲಂಕಾರಿಕ ವಸ್ತುಗಳನ್ನು ಛಿದ್ರ ಮಾಡದಿರುವುದು, ಹೀಗೆ ಅನೇಕ ವಿಷಯಗಳಿಗೆ ಪುಟ್ಟ ಉದಾಹರಣೆ ಅಥವಾ ಪುಟ್ಟ ಕಥೆಗಳೊಂದಿಗೆ ಮಗುವಿನ ಮನಸ್ಸನ್ನು ನಿಯಂತ್ರಣಕ್ಕೆ ತರಬಹುದು. ಆಗ ನೀವು ಯಾವ ಸಮಾರಂಭಗಳಿಗಾಗಲಿ ಅಥವಾ ಯಾರ ಮನೆಗಾಗಲಿ ಹೋದಾಗ ಅಯ್ಯೋ ನಿಮ್ಮ ಮಗು ಎಷ್ಟು ಸೌಮ್ಯವಾಗಿದೆ ಇತರೆ ಮಕ್ಕಳಂತೆ ತಲೆ ಹರಟೆ ಮಾಡೋದಿಲ್ಲ ಎಂದಾಗ ನಿಮಗಾಗುವ ಆನಂದ ಯಾರಿಗೂ ಆಗಲು ಸಾಧ್ಯವಿಲ್ಲ .ಇಲ್ಲಿಂದಲೇ ಮಗು ಸಭ್ಯತೆಯನ್ನು ಕಲಿತುಬಿಡುತ್ತದೆ.
ಮತ್ತೆ ಸುಮ್ಮನೆ ಕುಳಿತುಕೊಳ್ಳುವುದು, ಎಂದರೆ ಐದುನಿಮಿಷ ಸಮಯ ಕೊಟ್ಟು ಈಗ ಕಣ್ಮುಚ್ಚಿ ಸುಮ್ಮನೆ ಕುಳಿತುಕೋ, ಆಗ ನಿನಗೆ ಬೇಕಾದುದು ಸಿಗುತ್ತದೆ ಎಂದು ಹೇಳಿದಾಗ ಆ ಮಗು ತನ್ನ ಆಸೆಯು ಪೂರೈಸುತ್ತದೆಂದುಸುಮ್ಮನೆ ಕುಳಿತುಕೊಳ್ಳುವುದನ್ನುಕಲಿಯುತ್ತದೆ. ಹೀಗೆ ಅವಧಿಯನ್ನು ಹೆಚ್ಚಿಸುತ್ತಾ ಹೋದಂತೆ ತಾನಾಗಿ ತಾನೇ ಧ್ಯಾನ ಮಾಡುವುದನ್ನು ಕಲಿತುಬಿಡುತ್ತದೆ. ಹೀಗೆ ಹೇಳುವಾಗ ಮತ್ತೊಂದು ಉದಾಹರಣೆಯನ್ನು ಕೊಡಲಿಚ್ಚಿಸುತ್ತೇನೆ.
ಒಬ್ಬಾತ ಒಂದು ಹಸುವನ್ನು ಸಾಕಿದ್ದ ಅದು ಕರು ಹಾಕಿತು. ಅವನಿಗೆ ಕರುವೆಂದರೆ ತುಂಬಾ ಪ್ರೀತಿ. ಹಸುವನ್ನು ಮೇಯಿಸಲು ಕರೆದುಕೊಂಡು ಹೋಗುವಾಗಲೆಲ್ಲಾ ಆ ಕರುವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿದ್ದ. ಬರ ಬರುತ್ತಾ ಕರು ದೊಡ್ಡದಾದರೂ ಅವನಿಗೆ ಅದು ಭಾರವೆನಿಸಲಿಲ್ಲ. ಅದು ಅಭ್ಯಾಸವಾಗಿ ಬಾರದ ಅರಿವೇ ಆಗಲಿಲ್ಲ. ಹಾಗೆ ಚಿಕ್ಕಂದಿನಿಂದ ಧ್ಯಾನದ ಅಭ್ಯಾಸವಾಗಿ ಹೋದರೆ ಮುಂದೆ ಅದು ಮಾಡದೆ ಇರಲು ಸಾಧ್ಯವಿಲ್ಲವೆಂಬಮನ ಸ್ಥಿತಿಯನ್ನು ತಲುಪುತ್ತದೆ.
ಈಗ ಶರೀರವನ್ನು ಸದೃಢವಾಗಿ ಇಡಲು ಅನೇಕ ಯೋಗಗಳನ್ನು ಮಾಡುತ್ತೇವೆ. ಹಾಗೂ ಅನೇಕ ಕಸರತ್ತುಗಳನ್ನು ಮಾಡುತ್ತೇವೆ. ಆದರೆ ಮನಸ್ಸನ್ನು ಸ್ತಿಮಿತವಾಗಿಟ್ಟುಕೊಳ್ಳಲು ಯಾವ ಕಸರತ್ತುಗಳು ಇಲ್ಲ. ಅದು ಧ್ಯಾನದಿಂದ ಮಾತ್ರ ಸಾಧ್ಯ. ಧ್ಯಾನದಿಂದ ಧ್ಯಾನದ ಸಮಯ ಹೆಚ್ಚಾಗುತ್ತದೆ ಎಂಬುದಲ್ಲ,ಧ್ಯಾನದಿಂದ ಜೀವನವೇ ಬದಲಾಗುತ್ತದೆ. ದಯಮಾಡಿ ನಿಮ್ಮ ಮಕ್ಕಳಲ್ಲಿ ಈ ಅಭ್ಯಾಸಗಳನ್ನು ಮೂಡಿಸಿ ಮುಂದೆ ಆಗುವ ಬದಲಾವಣೆಗಳನ್ನ ನೋಡಿ ಅದು ಬಹಳ ಗಮನಾರ್ಹವಾಗಿರುತ್ತದೆ.
ಮನೆಯ ವಾತಾವರಣವೂ ಸಹ ಮಗುವಿನ ಮನಸ್ಸಿನ ಮೇಲೆ ಪ್ರಭಾವವನ್ನು ಬೀರುತ್ತದೆ. ಒಳ್ಳೆಯ ವಾತಾವರಣವು ಮಗುವಿಗೆ ಸಾತ್ವಿಕತೆಯ ಕಡೆಯತ್ತ ಕೊಂಡೊಯ್ಯುತ್ತದೆ. ಕೆಲವೊಮ್ಮೆ ತಂದೆ ತಾಯಿಗಳ ಮನಸ್ತಾಪದ ಜಗಳಗಳು ಮಕ್ಕಳ ಮನಸ್ಸನ್ನು ದಿಗ್ಭ್ರಮೆಗೊಳಿಸಿಬಿಡುತ್ತವೆ. ದಯಮಾಡಿ ಮಕ್ಕಳ ಎದುರಲ್ಲಿ ಕಿರುಚಾಟ, ಜಗಳವನ್ನು ಮಾಡಬೇಡಿ.ಎಲ್ಲರ ಮನೆಯಲ್ಲೂ ಇದು ಇದ್ದೇ ಇರುತ್ತದೆ. ಆದರೆ ಮಕ್ಕಳ ಎದುರಿಗೆ ನಡೆಯದಿರಲಿ ಎನ್ನುವ ಹೇಳಿಕೆ ಅಷ್ಟೇ.
ಹಿರಿಯರು ಅಂದರೆ ಅತ್ತೆ ,ಮಾವಂದಿರು, ಸೊಸೆ ಅಥವಾ ಮಗನಿಗೆ ಅವರಿಗನಿಸಿದ ಕೆಲ ತಿಳುವಳಿಕೆಯ ಮಾತುಗಳನ್ನು ಹೇಳುವುದು ಸಹಜ. ಅಲ್ಲದೆ ನಿನ್ನ ಮಗ ಅಥವಾ ಮಗಳೇನು? ದೊಡ್ಡ ಡಾಕ್ಟರ್ ಆಗಿ ಬಿಡುವನೇ/ಬಿಡುವಳೆ. ನಮಗಿರುವುದೇ ಸಾಲದೇ?ಓದಿ ಉದ್ಧಾರವಾಗುವುದೇನು ಬೇಡ. ಮನೆ ಕಡೆ ನೋಡಿಕೊಂಡಿರಲಿ, ಓದೇನು ಹೆಚ್ಚು ಬೇಡ ಅಂತಲೋಹೇಳಿದಾಗ,ತಾಯಿಗೆ ಬೇಸರವಾಗುವುದು ಸಹಜ. ಈ ಎಲ್ಲಾ ಕಾರಣಗಳಿಂದಲೂ ಸಹ ಅವರೆಲ್ಲರ ಕೋಪವ ದಯಮಾಡಿ ಮಗುವಿನ ಮೇಲೆ ತೋರಿಸಬೇಡಿ. ಮಗುವಿಗೆ ನಿಧಾನವಾಗಿ ಬಿಡಿಸಿ ಹೇಳಿ, ನನಗೇನು ಅವರ ಮಾತುಗಳಿಂದ ಬೇಸರವಿಲ್ಲ. ಅವರು ಹಿರಿಯರು, ಅವರಿಗನಿಸಿದ್ದು ಒಳ್ಳೆಯದೆಂದು ಹೇಳಿರುತ್ತಾರೆ. ಆದರೆ ಓದು ಜ್ಞಾನವನ್ನು ಪಡೆಯಲು ಬಹು ಮುಖ್ಯ. ಆದ್ದರಿಂದ ಮನಸ್ಸಿಗೆ ಹಚ್ಚಿಕೊಳ್ಳದೆ ಸಂತೋಷವಾಗಿ ತಿಳುವಳಿಕೆಯತ್ತಗಮನಕೊಟ್ಟು ಜ್ಞಾನದ ದಾಹವನ್ನು ಬೆಳೆಸಿಕೊ ಎಂದು ಮನದಟ್ಟು ಮಾಡಿಸಿ.
ಅದು ಬಿಟ್ಟು ಅವರು ಹೀಗೇ ನಮ್ಮನ್ನು ಕಂಡರೆ ಅವರಿಗಾಗದು . ನೀನು ಉದ್ದಾರ ಆಗುವುದು ಅವರಿಗೆ ಇಷ್ಟ ಇಲ್ಲ. ಬೇರೆಯವರ ಉದ್ಧಾರವನ್ನು ನೋಡಿ ಖುಷಿಪಡುತ್ತಾರೆ. ಮನೆಯ ಮಕ್ಕಳು ಮುಂದೆ ಬರುವುದು ಅವರಿಗೆ ಇಷ್ಟವಿಲ್ಲ ಎಂದೆಲ್ಲಾ ಹೇಳಿಮಕ್ಕಳ ಮನಸ್ಸನ್ನು ಘಾಸಿಗೊಳಿಸಿ, ಅವರು ಸಹ ಋಣಾತ್ಮಕ ಯೋಚನೆಗಳನ್ನ ಮಾಡುವಂತೆ ಮಾಡಬೇಡಿ.
ಮತ್ತೊಂದು ವಿಷಯ ನೆನಪಿಗೆ ಬರುತ್ತಿದೆ, ಅದೇನೆಂದರೆ ಅವರು ಹಾಗೆ ಇವರು ಹೀಗೆ ಎಂಬ ಧೋರಣೆಗಳನ್ನು ಹಾಗೂಹೋಲಿಕೆಗಳನ್ನು ಮಕ್ಕಳೊಂದಿಗೆ ಮಾಡಬೇಡಿ. ಹೋಲಿಕೆ ಮಾಡುವುದುತುಂಬಾ ತಪ್ಪು ಮತ್ತು ಅವರವರು ಬೆಳೆದ ಪರಿಸರಕ್ಕೆ ತಕ್ಕಂತೆ ಮಕ್ಕಳ ಪ್ರತಿಕ್ರಿಯೆ ಇರುತ್ತದೆ. ಅಲ್ಲದೆ ಬೇರೆಯವರ ಮಕ್ಕಳನ್ನು ನೋಡಿದರೆ ಕೆಲವರು ಅವನು ಸರಿ ಇಲ್ಲ ಅಥವಾ ಅವಳು ಸರಿ ಇಲ್ಲ ಸರಿಯಾಗಿ ಬೆಳೆಯುತ್ತಿಲ್ಲ, ಅವರ ಅಪ್ಪ ಅಮ್ಮನಿಗೆ ಬೆಳೆಸಲಾಗದಿದ್ದರೆ ಮಗು ಏಕೆ ಬೇಕಿತ್ತು ಎಂಬ ಅನೇಕ ಅಸಮಂಜಸ ಮಾತುಗಳನ್ನಾಡಿ ಯಾವ ಆತಂಕಕ್ಕೂ ಒಳಗಾಗದಿರಿ. ಏಕೆಂದರೆ ಅವರವರ ಮಕ್ಕಳ ಬಗ್ಗೆ ಅನೇಕ ಆಶಾ ಗೋಪುರಗಳು ಅವರ ಪೋಷಕರಿಗೆ ಇದ್ದೇ ಇರುತ್ತದೆ. ನೀವು ಬೇರೆಯವರ ಬಗ್ಗೆ ಋಣಾತ್ಮಕವಾಗಿ ಮಾತನಾಡುವುದನ್ನು ಮೊದಲು ಬಿಡಿ. ನೀವು ಮಾತನಾಡಿದ ಮಾತುಗಳು ನಿಮ್ಮನ್ನೇ ಕೊನೆಗೆ ಬಂಧಿಸಬಹುದು, ಎಚ್ಚರವಿರಲಿ ಮಾತಿನಲ್ಲಿ ಹಿಡಿತವನ್ನು ಕಾಪಾಡಿಕೊಳ್ಳಿ.
ಇಲ್ಲಿ ನನಗೊಂದು ಕಥೆ ನೆನಪಾಗುತ್ತಿದೆ. ಅದಿಲ್ಲಿ ಅವಶ್ಯಕವು ಎನಿಸಿದೆ.
ಒಂದು ಊರಿನಲ್ಲಿ ಒಬ್ಬ ಯೋಗಿ ಇದ್ದನಂತೆ. ಅವನು ಪ್ರತಿದಿನ ನದಿಯನ್ನು ದಾಟಿ ದೋಣಿಯಲ್ಲಿ ಹೋಗಬೇಕಿತ್ತು.ಆ ಸಮಯದಲ್ಲಿ ಅವನಿಗೆ ಒಬ್ಬ ಮಾಂಸ ಕಡಿಯುವವನು(Butcher)ಸ್ನೇಹಿತನಾದನಂತೆ. ಹೀಗೆ ಪರಿಚಯವಾದ ನಂತರ ಸಾದುವು ಏನು ನೀನು ಪ್ರತಿದಿನವೂ ಕುರಿ, ಮೇಕೆ ,ಕೋಳಿ ಇವುಗಳನ್ನು ಕೊಂದು ಹಣ ಸಂಪಾದಿಸುವೆ. ಇದು ಸರಿಯಲ್ಲ ಅದನ್ನು ಬಿಟ್ಟು ಬಿಡು ಎಂದು ಹೇಳುತ್ತಿದ್ದನಂತೆ. ಅದಕ್ಕೆ ಆತ ಏನು ಮಾಡುವುದು ಸ್ವಾಮಿ ನನ್ನ ವೃತ್ತಿಯೇ ಅದು, ಮತ್ತೇನು ಮಾಡಲು ನನ್ನಿಂದ ಆಗದು ಎಂದು ಉತ್ತರಿಸಿದನು.
ಹೀಗೆ ಕೆಲವು ದಿನಗಳು ಕಳೆದ ನಂತರ ಇಬ್ಬರು ಒಮ್ಮೆಲೇ ದೇಹವನ್ನು ತ್ಯಜಿಸಿದರು. ಆಗ ನರಕದಿಂದ ಧರ್ಮರಾಯ ಸಾಧುವಿನ ಬಳಿಗೆ ಬಂದನಂತೆ, ಕಟುಕನ ಬಳಿ ಸ್ವರ್ಗದಿಂದ ಹೂವಿನ ರಥ ಬಂದಿತಂತೆ. ಆಗ ಈ ಸಾಧುವು ಅಯ್ಯೋ ಇದು ಅದಲು ಬದಲಾಗಿದೆ, ನೀವು ಆ ಕಡೆ ಹೋಗಿ ಎಂದನಂತೆ. ಆಗ ಯಮಧರ್ಮ ರಾಜ ಹೇಳಿದರಂತೆ ಇಲ್ಲ ದೇವರೇ ನನಗೆ ಇಲ್ಲಿಗೆ ಹೋಗಲು ಆಜ್ಞೆ ಮಾಡಿದರು ಹಾಗಾಗಿ ಬಂದೆ ಎಂದು. ಆ ಕಟುಕನು ಪ್ರತಿದಿನ ರಾತ್ರಿ ಮಲಗುವಾಗ ನನ್ನ ವೃತ್ತಿ ಧರ್ಮವೇ ಇದು ದಯಮಾಡಿ ನನ್ನನ್ನು ಕ್ಷಮಿಸಿ, ಪರಮಾತ್ಮ ಎಂದು ಕ್ಷಮೆ ಯಾಚಿಸಿ ಮಲಗುತ್ತಿದ್ದನಂತೆ.
ಹಾಗಾಗಿ ಅವರು ಸ್ವರ್ಗಕ್ಕೆ ದಾರಿ ಮಾಡಿಕೊಂಡಿದ್ದಾರೆ. ನೀವು ಪ್ರತಿಕ್ಷಣವೂ ಆತನ ಬಗ್ಗೆ ಯೋಚಿಸಿ ಕ್ರೂರ ಕೃತ್ಯ ಎಂದು ಹೇಳಿ ಹೇಳಿ ಆ ಪಾಪವೆಲ್ಲ ನಿಮ್ಮನ್ನಾವರಿಸಿ ನರಕಕ್ಕೆ ಆಹ್ವಾನಿಸಿದೆ, ಎಂದಾಗ ಆ ಯೋಗಿಗೆ ಹೌದು ನನ್ನ ಕೆಲಸವೇನು ನಾನೇಕೆ ಆತನ ಕೃತ್ಯದ ನಡವಳಿಕೆ ಬಗ್ಗೆ ಚಿಂತಿಸಿದೆ ಎಂದು ಪಶ್ಚಾತಾಪ ಪಡುವ ಹೊತ್ತಿಗೆ ಕರ್ಮ ಬಿಡೋದಿಲ್ಲ ತಾನೆ, ಅದಕ್ಕಾಗಿ ಸುಮ್ಮನೆ ಹೇಳಿಲ್ಲ ನಮ್ಮ ಹಿರಿಯರು ಗಾದೆಯ ನುಡಿಗಳ”ಮಾಡಿದವರ ಪಾಪ ಆಡಿದವರ ಬಾಯಲ್ಲಿ” ಎಂದು. ಆದ್ದರಿಂದ ಯಾರ ಬಗ್ಗೆಯೂ ಯೋಚಿಸದೆ ನಮ್ಮ ನಮ್ಮ ಕಾಯಕವ ನಿಷ್ಠೆಯಿಂದ ಮಾಡುತ್ತಾ ಮಕ್ಕಳ ಅಭ್ಯುದಯವೇನಿಮ್ಮ ಏಕೈಕ ಗುರಿಯಾಗಿರಲಿ.
(ಮುಂದುವರೆಯುವುದು)
.
ಇಂದಿರಾ ಪ್ರಕಾಶ್
ಲೇಖಕರು ಡೆಕ್ಕನ್ ಸ್ಕೂಲ್ ಆಫ್ ಎಜುಕೇಶನ್ ಸಂಸ್ಥೆಯ ಪಾಲುದಾರರಾಗಿ, ಪ್ರಾಂಶುಪಾಲರಾಗಿ ಹಾಗೂ ಶಾಲೆಯ ಮುಖ್ಯ ಶಿಕ್ಷಕರಾಗಿ ಕಾರ್ಯವನ್ನು ನಿರ್ವಹಿಸಿದ್ದಾರೆ
ಹವ್ಯಾಸ ಕಥೆ ಕವನ ಲೇಖನಗಳನ್ನು ಬರೆಯುವುದು. ಪುಸ್ತಕಪ್ರೇಮಿ