ದೈನಂದಿನ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
ವೀಣಾ ವಾಣಿ
ನಮ್ಮೊಳಗಿನ
ಮಹಾಭಾರತದ ಪಾತ್ರಗಳು
ಕುರುವಂಶದ ಧೃತರಾಷ್ಟ್ರನ ಮಕ್ಕಳು 100 ಜನ ಕೌರವರು ಮತ್ತು ಪಾಂಡು ಮಹಾರಾಜನ ಐದು ಜನ ಮಕ್ಕಳಾದ ಪಾಂಡವರ ನಡುವೆ ನಡೆದ ಕುರುಕ್ಷೇತ್ರ ಯುದ್ಧ, ಮಹಾಭಾರತದ ಕಥೆ ನಮಗೆಲ್ಲಾ ಗೊತ್ತಿದೆಯಷ್ಟೇ.ಇದರಲ್ಲಿ ಬರುವ ಹಲವಾರು ಪಾತ್ರಗಳು ನಮ್ಮಲ್ಲಿಯೂ ಮನೆ ಮಾಡಿವೆ ಎಂದರೆ ನಾವು ನಂಬಲೇಬೇಕು. ಅದು ಹೇಗೆ ಅಂತೀರಾ?
ನೂರು ಜನ ಕೌರವ ಪುತ್ರರು ನಮ್ಮಲ್ಲಿರುವ ನೂರಾರು ಋಣಾತ್ಮಕ ವಿಷಯಗಳ ಚಿಂತನೆಗಳು. ಸಿಟ್ಟು, ಸೆಡವು, ಕಷ್ಟ,ಅಸಹನೆ, ಅಸಮಾಧಾನ, ಅತೃಪ್ತಿ,ಅವಿಶ್ವಾಸ,ಅಸಂತೋಷ, ಕುಹಕತೆ ವಿದ್ರೋಹ ಹೀಗೆ ಹತ್ತು ಹಲವು ಋಣಾತ್ಮಕ ವಿಷಯಗಳನ್ನು ನಾವು ಹೊಂದಿರುತ್ತೇವೆ.
ನಮ್ಮ ದೇಹದಲ್ಲಿರುವ ಮೆದುಳು ಅಂಧ ಕುರು ಮಹಾರಾಜ ದೃತರಾಷ್ಟ್ರನಿದ್ದಂತೆ.ಅದಕ್ಕೆ ಕಣ್ಣು ಕಿವಿ ಸ್ಪರ್ಶ ಯಾವುದು ಇರುವುದಿಲ್ಲ… ಕೇವಲ ಗ್ರಹಿಕೆಯನ್ನು ಮಾತ್ರ ಹೊಂದಿರುವ ದೃತರಾಷ್ಟ್ರ ನಂತಹ ಮೆದುಳನ್ನು ಈ ನೂರಾರು ಋಣಾತ್ಮಕ ವಿಷಯಗಳು ನಮ್ಮಲ್ಲಿನ ಶಕ್ತಿಯನ್ನು ಬಸಿದು ಹೋಗುವಂತೆ ಹಿಂಡಿ ಹಿಪ್ಪೆ ಮಾಡುತ್ತವೆ, ಮಾನಸಿಕವಾಗಿ ದೈಹಿಕವಾಗಿ ನಮ್ಮನ್ನು ಕುಗ್ಗಿಸುತ್ತವೆ. ಋಣಾತ್ಮಕ ವಿಷಯಗಳ ನೂರಾರು ಕೌರವರು ನಮ್ಮ ಮೆದುಳೆಂಬ ದೃತರಾಷ್ಟ್ರನ ಮೇಲೆ ದಾಳಿ ಮಾಡಿ ನಮ್ಮ ಮೆದುಳಿನ ಗ್ರಹಿಕೆಯನ್ನು ತಪ್ಪು ದಾರಿಗೀಡು ಮಾಡುತ್ತವೆ.
ಸಹೋದರ ವಾತ್ಸಲ್ಯ, ಪರಸ್ಪರ ಗೌರವ, ನಂಬಿಕೆ, ವಿಶ್ವಾಸ ಮತ್ತು ಸ್ನೇಹ ಭಾವವನ್ನು ಹೊಂದಿರುವ ಪಾಂಡವರಂತೆಯೇ ನಮ್ಮ ದೇಹದಲ್ಲಿರುವ ಪಂಚೇಂದ್ರಿಯಗಳು.ಯಾವ ರೀತಿ ಕಣ್ಣು, ಕಿವಿ, ಮೂಗು, ಬಾಯಿ ಮತ್ತು ಚರ್ಮ ಎಂಬ ಐದು ಪಂಚೇಂದ್ರಿಯಗಳು ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸುತ್ತವೆಯೋ ಹಾಗೆಯೇ ದೇಹ ಐದು, ಆತ್ಮ ಒಂದು ಎಂಬಂತೆ ಜೀವಿಸುತ್ತಿದ್ದರು. ಯಾವ ರೀತಿ ಪಾಂಡವರೆಲ್ಲರ ಏಕತೆಗೆ ದ್ರೌಪದಿ ಉದ್ದೇಶವಾಗಿದ್ದಳು, ಆಕೆಯ ಜನನದ ಏಕಮಾತ್ರ ಉದ್ದೇಶ ಋಣಾತ್ಮಕ ಚಿಂತನೆಗಳನ್ನು ನಾಶ ಮಾಡಿ ನಮ್ಮ ಬಾಳಿನಲ್ಲಿ ಧನಾತ್ಮಕತೆಯನ್ನು ತುಂಬುವುದು ಮತ್ತು ಸಂತೃಪ್ತಿಯ ಜೀವನವನ್ನು ಸಾಗಿಸುವುದಾಗಿತ್ತು,ಹಾಗೆಯೇ ನಮ್ಮ ಜೀವನದ ಏಕ ಮಾತ್ರ ಉದ್ದೇಶ ನೆಮ್ಮದಿ ಮತ್ತು ಸಂತೃಪ್ತಿಯ ಜೀವನ ಆಗಿರಬೇಕು. ಜೀವನದಲ್ಲಿ ಬರುವ ಎಲ್ಲ ಎಡರು ತೊಡರುಗಳನ್ನು ಸಮನಾಗಿ ಎದುರಿಸಿ, ನಿರ್ವಹಿಸಿ, ಗಟ್ಟಿಯಾಗಿ ಬಾಳಿ ಬದುಕುವ ಛಾತಿ ಮತ್ತು ಛಲ ಎಂಬ ದ್ರೌಪದಿಯ ಉದ್ದೇಶ ನಮ್ಮ ಬದುಕಿನಲ್ಲಿ ಬೇಕೇ ಬೇಕು.
ಭೀಷ್ಮ ಎಂಬ ಅಸಹಾಯಕತೆ ನಮ್ಮನ್ನು ಹಲವಾರು ಬಾರಿ ಕಾಡಬಹುದು.ನಿರ್ಧಾರವನ್ನು ತೆಗೆದುಕೊಳ್ಳುವ
ಸಮಯದಲ್ಲಿ ಅಸಹಾಯಕತೆಯಿಂದ ಬಳಲಿದ ಭೀಷ್ಮ ಪಿತಾಮಹ ಮತ್ತು ಗುರುವಾಗಿ ಶಿಷ್ಯರ ಅಂತಃಪ್ರಜ್ಞೆಯನ್ನು ಎಚ್ಚರಿಸುವಲ್ಲಿ ವಿಫಲರಾದ ದ್ರೋಣಾಚಾರ್ಯರು ಮತ್ತು ರಾಜನನ್ನು ಸನ್ಮಾರ್ಗದಲ್ಲಿ ನಡೆಯಲು ಸಲಹೆ ಸೂಚನೆಗಳನ್ನು ನೀಡಲು ಕೃಪಾಚಾರ್ಯರು ಬುದ್ಧಿ ಮತ್ತು ವಿವೇಕಗಳು ಸಂಕೇತವಾಗಿದ್ದಾರೆ. ಎಷ್ಟೋ ಬಾರಿ ನಮ್ಮ ಬುದ್ಧಿ ಮತ್ತು ವಿವೇಕಗಳು ಸಾಂಸಾರಿಕ ತೊಂದರೆ ಎಂಬ ಅಸಹಾಯಕತೆಯಿಂದ ಬಳಲಿದರೂ ತಪ್ಪು ನಿರ್ಧಾರ ಕೈಗೊಳ್ಳಲು ಅವಕಾಶ ಮಾಡಿಕೊಡಬಾರದು…. ಭೀಷ್ಮರ ಅಸಹಾಯಕತೆ ಮತ್ತು ಆಚಾರ್ಯದ್ವಯರಾದ ದ್ರೋಣ ಮತ್ತು ಕೃಪರ ಬುದ್ಧಿ ಮತ್ತು ವಿವೇಕಗಳನ್ನು ನೂರಾರು ಋಣಾತ್ಮಕ ವಿಚಾರಗಳು ಕಬಳಿಸಿ ಹಾಕಿದ್ದರ ಪರಿಣಾಮವೇ ಕುರುಕ್ಷೇತ್ರ ಯುದ್ಧ, ಅಂತೆಯೇ ಬುದ್ದಿ ಮತ್ತು ವಿವೇಕವನ್ನು ಅಸಹಾಯಕತೆಯ ಕೈಯಲ್ಲಿ ಕೊಟ್ಟರೆ ನಾವು ಕೂಡ ಬದುಕಿನ ಕುರುಕ್ಷೇತ್ರದಲ್ಲಿ ಸೋಲುಣ್ಣಬೇಕಾಗುವುದು.
ವಿದುರ ಎಂಬ ಮಂತ್ರಿಯು ಕುರು ವಂಶಕ್ಕೆ ಸೇರಿದ್ದರೂ ಕೂಡ ತನ್ನ ಮಿತಿಗಳನ್ನು ಅರಿತು ಕೆಸರಿನೊಳಗಿನ ಕಮಲದಂತೆ ರಾಜಕುಟುಂಬಕ್ಕೆ ಆಂಟಿಯೂ ಅಂಟದಂತಿದ್ದನು.ಎಲ್ಲೂ ಅತಿಯಾಗಿ ವರ್ತಿಸದೆ ಜ್ಞಾನ, ಬುದ್ಧಿ ಮತ್ತು ವೈರಾಗ್ಯಗಳನ್ನು ಹತೋಟಿಯಲ್ಲಿಟ್ಟುಕೊಂಡು ಸಮಚಿತ್ತತೆಯನ್ನು ಹೊಂದಿದ್ದನು. ನಮ್ಮ ಜೀವನದಲ್ಲಿ ತಿಳುವಳಿಕೆ ಎಂಬ ವಿದುರನಿದ್ದು ಸುಖ ಸಂತೋಷಗಳಿಗೆ ಹಿಗ್ಗದೆ ಕಷ್ಟಕಾರ್ಪಣ್ಯಗಳಿಗೆ ಕುಗ್ಗದೆ ಸಮಚಿತ್ತತೆಯನ್ನು ಸಾಧಿಸಬೇಕು.
ತನ್ನ ಗಂಡನಿಗೆ ಕಾಣದ ಜಗತ್ತು ತನಗೂ ಬೇಡ ಎಂಬ ಹುಚ್ಚು ಆದರ್ಶದಲ್ಲಿ ಬದುಕಿದ ಗಾಂಧಾರಿ ತನ್ನ ಮಕ್ಕಳಾದ ನೂರು ಜನ ಕೌರವರ ತಪ್ಪುಗಳನ್ನು ಮಾತೃ ಪ್ರೇಮ ಎಂಬ ಕುರುಡುತನದಲ್ಲಿ ಬಳಲಿ ತಪ್ಪು ಮಾಡಿದ ಮಕ್ಕಳಿಗೆ ತಿಳಿ ಹೇಳದೆ, ಶಿಕ್ಷಿಸದೆ ಹೋಗಿ ಅಂತಿಮವಾಗಿ ಅಸಹಾಯಕತೆಯಿಂದ ಬಳಲಿದಳು. ಅಂತೆಯೇ ನಮ್ಮ ಅಜ್ಞಾನ ಮತ್ತು ಅಂಧ ಶ್ರದ್ದೆಗಳಿಂದ ಬದುಕಿನಲ್ಲಿ ತಲೆದೋರುವ ನೂರಾರು ಋಣಾತ್ಮಕ ವಿಚಾರಗಳನ್ನು, ತೊಂದರೆಗಳನ್ನು ಆಯಾ ಕಾಲಕ್ಕೆ ಸೂಕ್ತವಾಗಿ ನಿರ್ವಹಿಸದೆ ಹೋದರೆ ಅಂತಿಮವಾಗಿ ಏನನ್ನು ಮಾಡಲಾಗದ ಅಸಹಾಯಕತೆಯಿಂದ ಎಲ್ಲವನ್ನು ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚು.
ಇನ್ನು ಮಹಾಭಾರತದ ಮತ್ತೊಬ್ಬ ಪ್ರಮುಖ ವ್ಯಕ್ತಿ ಕರ್ಣ ನಮ್ಮಲ್ಲಿರುವ ಅಹಮ್ಮಿನ ಸಂಕೇತ. ಯಾವ ರೀತಿ ಶೌರ್ಯ, ತೇಜಸ್ಸು ಮತ್ತು ಉದಾತ್ತ ಚಿಂತನೆಗಳನ್ನು ಹೊಂದಿದ್ದರೂ ಕೆಟ್ಟವರ ಸಹವಾಸ ಮತ್ತು ಬದಲು ಹೇಳದೆ ಅವರ ಮಾತುಗಳನ್ನು ಒಪ್ಪಿಕೊಳ್ಳುವ ಮೂಲಕ ತನ್ನತನವನ್ನು ಕಳೆದುಕೊಂಡ ಕರ್ಣ ನಮ್ಮಲ್ಲಿರುವ ಅಹಮಿಕೆಗೆ ಒಳಗಾಗಿ ನಾವು ತೆಗೆದುಕೊಳ್ಳುವ ತಪ್ಪು ನಿರ್ಧಾರಗಳು ನಮ್ಮ ಜೀವನವನ್ನೇ ಸರ್ವನಾಶ ಮಾಡುತ್ತದೆ ಎಂಬುದಕ್ಕೆ ಉದಾಹರಣೆಯಾಗಿ ತೋರುತ್ತವೆ.
ಇನ್ನು ಮಹಾಭಾರತದ ಮತ್ತೊಂದು ಪ್ರಮುಖ ಪಾತ್ರ ಕೃಷ್ಣ ನಮ್ಮ ಅಂತಪ್ರಜ್ಞೆಯ ಸಂಕೇತ. ಮಹಾಭಾರತದ ಎಲ್ಲ ಘಟನೆಗಳನ್ನು ಕೃಷ್ಣ ಸ್ಥಿತಪ್ರಜ್ಞನಾಗಿ ಅವಲೋಕಿಸುತ್ತಿದ್ದನು.ತನ್ನ ಪಾತ್ರವಿರುವಲ್ಲಿ ಸಹಕಾರವನ್ನು ನೀಡುತ್ತಾ, ಸಮಯಾನುಸಮಯಕ್ಕೆ ಪಾಂಡವರಿಗೆ ಸಹಾಯ ಮಾಡುತ್ತಾ ಕೌರವರಿಗೆ ತಿಳಿ ಹೇಳುವ ಪ್ರಯತ್ನ ಮಾಡಿದನು ದ್ರೌಪದಿಯನ್ನು ತಂಗಿ ಸುಭದ್ರೆಗಿಂತಲೂ ಹೆಚ್ಚು ಕಾಳಜಿ ಮಾಡಿ ಕಾಪಾಡಿದ, ಸಂಧಾನಕಾರನಾಗಿ ಕಾರ್ಯನಿರ್ವಹಿಸಿದ ಕೃಷ್ಣ ನಮ್ಮ ಅಂತರ್ಮನದ ಸಂಕೇತವಾಗಿ ತೋರುತ್ತಾನೆ.
ವ್ಯಕ್ತಿಗತವಾಗಿ ಯಾವ ಮನುಷ್ಯನೂ ಕೆಟ್ಟವನಲ್ಲ… ಸಮಯ ಸಂದರ್ಭಗಳು ಆತನನ್ನು ಒಳ್ಳೆಯವರ ಇಲ್ಲವೇ ಕೆಟ್ಟವರ ಸಾಲಿನಲ್ಲಿ ನಿಲ್ಲಿಸುತ್ತವೆ. ಅಂತಹ ಸಂದರ್ಭದಲ್ಲಿ ಗಟ್ಟಿಯಾದ ಮತ್ತು ತಾರ್ಕಿಕ ನಿರ್ಧಾರವನ್ನು ತೆಗೆದುಕೊಳ್ಳಬಲ್ಲ ಸಮಷ್ಟಿ ಹಿತವನ್ನು ಕಾಯ್ದುಕೊಳ್ಳುವ ಮನಸ್ಥಿತಿಯ ಸಂಕೇತವಾಗಿ ಪ್ರಜ್ಞೆ ನಮ್ಮನ್ನು ಸದಾ ಕಾಯುತ್ತದೆ.
ಹೀಗೆ ಮಹಾಭಾರತದ ಪಾತ್ರಗಳು ನಮ್ಮ ಬದುಕನ್ನು ಆಳುತ್ತಿವೆ ಎಂದಾದರೆ
ನಮ್ಮ ನಮ್ಮ ಕರ್ಮಗಳನ್ನು ನಾವು ಮಾಡುತ್ತಾ ಸಾಗೋಣ ಫಲಾಫಲಗಳು ಆ ಭಗವಂತನವು ಎಂಬ ಕೃಷ್ಣನ ಗೀತಾ ವಾಣಿಯಂತೆ ಬದುಕನ್ನು ಉನ್ನತ ಆದರ್ಶಗಳ, ಧ್ಯೇಯಗಳ ಜೊತೆಗೆ ಶಾಂತಿ, ಸಮಾಧಾನ ಮತ್ತು ಸಂತೃಪ್ತಿಕರ ಜೀವನ ನಮ್ಮೆಲ್ಲರದು ಆಗಲಿ ಎಂಬ ಹಾರೈಕೆಯೊಂದಿಗೆ
ವೀಣಾ ಹೇಮಂತ್ ಗೌಡ ಪಾಟೀಲ್