ಅಂಕಣ ಬರಹ
ಅರಿವಿನ ಹರಿವು
ಶಿವಲೀಲಾ ಶಂಕರ
“ಗುರುವೆಂಬ ಅಂಬಿಗ”
ಗುರು ಬ್ರಹ್ಮ ಗುರು ವಿಷ್ಣು
ಗುರು ದೆವೋ ಮಹೇಶ್ವರ
ಗುರು ಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಗುರುವೇ ನಮಃ
“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’”ಎಂಬುದನ್ನು ದಾರ್ಶನಿಕರೊಬ್ಬರು ಹೇಳಿದ್ದಾರೆ. ಅಂದರೆ ಒಂದು ಒರಟಾದ ಕಲ್ಲನ್ನು ಕೆತ್ತಿ ಅಥವಾ ಉಳಿ ಪೆಟ್ಟಿನಿಂದ ಸುಂದರ ಕಲಾಕೃತಿ ಸೃಷ್ಟಿಸಿ ಪೂಜಿಸುವಂತೆ ಮಾಡುವ ಶಕ್ತಿ ಇರುವುದು ಆ ಶಿಲ್ಪಗೆ ಮಾತ್ರ. “ಅರಿಯದ ಜೀವನದ ಮೌಲ್ಯಗಳು,ಅರ್ಥ, ಗುರಿ ಆ ಗುರಿಯನ್ನು ಸಾಧಿಸಲು ಇರುವ ಮಾರ್ಗ ಮುಂತಾದವುಗಳನ್ನು ಗುರುವಿನ ಮಾರ್ಗದರ್ಶನವಿಲ್ಲದೆ ತಿಳಿಯಲು ಸಾಧ್ಯವಿಲ್ಲ!.ಪ್ರಪಂಚದ ಎಲ್ಲ ಮಹಾನ್ ವ್ಯಕ್ತಿಗಳು, ದಾರ್ಶನಿಕರು, ಸಂತರ ಜೀವನದ ವೃತ್ತಾಂತದ ಹಂತಗಳನ್ನು ಗಮನಿಸಿದಾಗ ಅವರ ಜೀವನದ ಪ್ರತಿ ಹಂತದಲ್ಲಿ ಮಾರ್ಗದರ್ಶಕರಾಗಿ ಒಬ್ಬ ಗುರು ಜೊತೆಗಿದ್ದರೆಂಬುದು ತಿಳಿಯುತ್ತದೆ.ಜಗತ್ತಿನ ಎಲ್ಲ ಜೀವಿಗಳಿಗೆ ತಮ್ಮದೆ ಆದ ಜೈವಿಕ ಪ್ರಪಂಚ ವಿರುತ್ತದೆ.ಹೀಗಾಗಿ ಮನಸ್ಸು ಎಲ್ಲ ದಿಕ್ಕಿಗೂ ಓಡುತ್ತಿರುತ್ತದೆ, ಆದರೆ ಚಂಚಲ ಮನಸ್ಸಿಗೆ ಸರಿಯಾದ ದಾರಿ ತೋರುವ ಹಾಗೂ ಬುದ್ದಿಶಕ್ತಿ ಬಳಸಿ,ಸಮಾಜಕ್ಕೆ ಒಳಿತನ್ನು ಬಯಸುವತ್ತ ಮಾರ್ಗದರ್ಶನ ನೀಡುವವ ಕೇವಲ ಗುರು ಮಾತ್ರ.
ಪುರಾಣ,ಪುಣ್ಯ ಕಥೆಗಳಲ್ಲಿ ನಾವು ಮಕ್ಕಳಿಗೆ ನೀತಿ ಬೋಧನೆಯನ್ನು ಮಾಡುವಾಗ, ನಮ್ಮ ಪ್ರಾಚೀನರು ಗುರುಗಳಿಗೆ ಎಂತಹ ಮಹತ್ವವನ್ನು ನೀಡಿದ್ದರು ಎಂಬುದು ಅರಿವಾಗುತ್ತದೆ.ಉದಾ.. ಮಹಾಕಾವ್ಯಗಳಾದ
ರಾಮಾಯಣ,ಮಹಾಭಾರತದಲ್ಲಿ, ನಮ್ಮ ಪೂರ್ವಜರ ಜೀವನಕ್ರಮ, ಸಂಸ್ಕೃತಿ,ಅವರು ನಂಬಿದ್ದ ಮತ್ತು ಗೌರವಿಸುತ್ತಿದ್ದ ಮೌಲ್ಯಗಳನ್ನು ಬಹು ಸುಂದರವಾಗಿ ಮನದಟ್ಟಾಗುವಂತೆ ವಿವಿಧ ಉದಾ.ಮೂಲಕ ತಿಳಿಸುತ್ತವೆ. ಶ್ರೀರಾಮನು ಮರ್ಯಾದಾ ಪುರುಷೋತ್ತಮ ಎಂಬ ಬಿರುದು ಬರಲು,ಶ್ರೀ ರಾಮನ ಜೀವನದ ವಿವಿಧ ಹಂತಗಳಲ್ಲಿ ದೊರೆತ ಗುರುಗಳು, ಅವರ ಮಾರ್ಗದರ್ಶನವೇ ಆದರ್ಶ ಪುರುಷನನ್ನಾಗಿ ರೂಪಿಸಿದವು ಎಂದರೆ ಅತಿಶಯೋಕ್ತಿಯಾಗಲಾರದು.
ಮಹಾಭಾರತದಲ್ಲಿ ಅರ್ಜುನ ಒಬ್ಬ ಜಗದ್ವಿಖ್ಯಾತ ಬಿಲ್ಲುಗಾರನಾಗಿ ಹೊರಹೊಮ್ಮಲು ಅಥವಾ ವಿದ್ಯಾಪ್ರವೀಣನಾಗಲು ದ್ರೋಣಾಚಾರ್ಯರಂತಹ ಮಹಾನ್ ಗುರುಗಳೇ ಕಾರಣಿಭೂತರು. ಅಲ್ಲೊಂದು ಕಹಿ ಘಟನೆಗೆ ಗುರುವಿನ ಅನಿವಾರ್ಯ ಪರಿಸ್ಥಿತಿ ಕಾರಣವಾಗಿದ್ದನ್ನು,’ಏಕಲವ್ಯ’ ಗುರುದಕ್ಷಿಣೆಯನ್ನು ಬಲಗೈ ಹೆಬ್ಬೆರಳು ನೀಡಿದ್ದು ಕೂಡ ಶಿಷ್ಯನಾದವನು ಗುರುವಿನ ಆಜ್ಞೆಯನ್ನು ಶಿರಸಾಪಾಲಿಸುವ ವಿಧೇಯತೆ ಪ್ರದರ್ಶಿಸಿದ ‘ಏಕಲವ್ಯ’ ಶ್ರೇಷ್ಠ ಶಿಷ್ಯನಾಗಿ ಜಗತ್ತಿಗೆ ಪರಿಚಯಿಸ್ಪಡುತ್ತಾನೆ.ಗುರು ಸಾರ್ವಕಾಲಿಕ ದೈವ!.
ನಮ್ಮ ಇತಿಹಾಸದ ಪುಟಗಳನ್ನು ಮೆಲುಕು ಹಾಕುವಾಗ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದ,ಸುಪ್ರಸಿದ್ದ ದೊರೆಗಳಾದ ಹಕ್ಕ-ಬುಕ್ಕರು ಶತ್ರುಗಳ ದಾಳಿಯಿಂದ ಕೈತಪ್ಪಿದ ವಿಜಯನಗರ ಸಾಮ್ರಾಜ್ಯವನ್ನು ಹಿಂಪಡೆಯಲು ಸಾಧ್ಯವಾಗಿದ್ದು, ವಿದ್ಯಾರಣ್ಯರಂತಹ ಗುರುವಿನ ಮಾರ್ಗದರ್ಶನದ ಪ್ರತಿಫಲವೆಂದರೆ ಅಲ್ಲಗಳೆಯುವಂತಿಲ್ಲ.”ಛತ್ರಪತಿ ಶಿವಾಜಿಯ ಮೊದಲ ಗುರು ಅವರ ತಾಯಿ ಜೀಜಾಬಾಯಿ”.. ಆತ್ಮಸ್ಥೈರ್ಯ, ತಾಳ್ಮೆ, ದೈವಭಕ್ತಿ,ಸಂಯಮ ಒಂದೆಡೆ ಕಾರಣವಾದರೆ,ಇನ್ನೊಂದೆಡೆ ಶಿವಾಜಿ ಯುದ್ದದಲ್ಲಿ ಸೋತು ಬಸವಳಿದು ಕಂಗೆಟ್ಟು ಕುಳಿತಿದ್ದಾಗ,ಶಿವಾಜಿಗೆ ಸರಿಯಾದ ಕ್ರಮದಲ್ಲಿ ದಾರಿ ತೋರುವ ಸಮರ್ಥ “ರಾಮದಾಸರಂತಹ” ಗುರುಗಳು ಶಿವಾಜಿಗೆ ಉಪದೇಶಗಳ ಮೂಲಕ ಶಿವಾಜಿಯಲ್ಲಿ ಆತ್ಮವಿಶ್ವಾಸ ತುಂಬುವ ಮೂಲಕ, ಪುನಃ ತನ್ನ ಸಾಮ್ರಾಜ್ಯವನ್ನು ಪಡೆಯುವಲ್ಲಿ ಯಶಸ್ವಿಯಾಗಲು ಕಾರಣರಾಗುತ್ತಾರೆ. ಅಜ್ಞಾನ ಹಾಗೂ ಅಂಧಕಾರದಲ್ಲಿರುವ ಪ್ರತಿಯೊಬ್ಬರಿಗೂ ಬೆಳಕ ನೀಡುವ “ಗುರು” ಸೂರ್ಯನಂತೆ ಜೊತೆಗಿದ್ದರೆ ಎಂತಹ ಸಮಸ್ಯೆಯನ್ನು ಬಗೆಹರಿಸಬಹುದೆಂಬುದನ್ನು ಇತಿಹಾಸ ಸಾಕ್ಷಿ ಸಮೇತ ವಿವರಿಸುತ್ತದೆ.
“ಸಂವಿಧಾನ ಶಿಲ್ಪಿ”ಡಾ.ಅಂಬೇಡ್ಕರ್ ಬರೆದ ಸಂವಿಧಾನ ಇಂದು ದೇಶದ ಹಣೆಬರಹವನ್ನು ನಿರ್ಧರಿಸುವ ಒಂದು ಸಂಹಿತೆಯಾಗಿದೆ. ಅವರಿಗೆ ಸಿಕ್ಕಂತಹ ಗುರುಗಳು ನೀಡಿದ ಮಾರ್ಗದರ್ಶನ ಅಂಬೇಡ್ಕರ್ ಓದು ಮುಂದುವರೆಸಲು ಸಾಧ್ಯವಾಗಿದ್ದು.ವಿಶ್ವ ಕಂಡ ಓದುವಿಕೆಯ ಗುರುವೆಂದರೆ ತಪ್ಪಾಗದು.ದಾರಿ ತಪ್ಪಿಸುವ ಅನೇಕ ಘಟನೆಗಳು ಜೀವನದಲ್ಲಿ ನಡೆದರೂ ತನ್ನ ಸಂಕಲ್ಪವನ್ನು ಬಿಡದೆ ಯಾರು ಕಂಡರಿಯದ ಜ್ಞಾನದ ಕಣಜವಾಗಿ ಬೆಳೆದು ನಿಂತ ಜ್ಞಾನದ ಸಾಗರವೆನ್ನಬಹುದು..ಗುರುವಿಲ್ಲದೆ ಮುಕ್ತಿ ಸಿಗಲು ಸಾಧ್ಯವಿಲ್ಲ!
ಅಕ್ಷರ ಜ್ಞಾನ ಜಗತ್ತಿನ ಅಜ್ಞಾನ ಕಳೆಯಲು ಮಹಾ ಅಸ್ತ್ರವಾಗಿ ಬದಲಾಯಿಸಿಕೊಂಡ ಮಹಾನ್ ಚೇತನ ನಮಗೆಲ್ಲ ಮಾದರಿ.
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರನ್ನು ಇಡೀ ವಿಶ್ವ ಕೊಂಡಾಡುತ್ತದೆ.ಅವರ ಅಹಿಂಸೆಯ ತತ್ವಗಳನ್ನು ಬಹಳಷ್ಟು ಮಂದಿಗೆ ದಾರಿದೀಪವಿದ್ದಂತೆ.ಒಬ್ಬ ಸಾಮಾನ್ಯ ಪ್ರಜೆ ಮೋಹನದಾಸ ಕರಮಚಂದ ಗಾಂಧಿ ಮಹಾತ್ಮಾ ಗಾಂಧಿಯಾಗಿ ಬೆಳೆದಿದ್ದು ಅವಿಸ್ಮರಣೀಯ!.”ಗಾಂಧಿ”ಯ ಮನೆಯ ಪರಿಸರ,ತಂದೆಯ ಮೌನ ಪ್ರಭಾವ ,ಗುರುಗಳ ಮಾರ್ಗದರ್ಶನ, ಸತ್ಯ ಹರಿಶ್ಚಂದ್ರ ನಾಟಕಗಳ ಪ್ರಭಾವ ಬೀರಿದ ಗುರುಗಳು ಅನೇಕರು. ಅವರ ತತ್ವೋಪದೇಶಗಳು ಮಹಾತ್ಮಾ ಗಾಂಧಿಯವರ ಮನಸ್ಸನ್ನು ಹೊಕ್ಕು ಅಹಿಂಸೆ ಸತ್ಯದ ಬಗೆಗಿನ ನಂಬಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸಿದವು. ಆದ್ದರಿಂದ ನಮ್ಮ ದೇಶ ಸ್ವಾತಂತ್ರ್ಯ ಹೋರಾಟದ ದಿಕ್ಕೇ ಬದಲಾಗಿ ಅಹಿಂಸೆಯಿಂದ ಸ್ವರಾಜ್ಯವನ್ನು ಪಡೆದ ಪ್ರಪಂಚದ ಮೊದಲ ರಾಷ್ಟ್ರವಾಯಿತು.ದೇಶದ ಒಳಿತಿಗೆ ಚುಕ್ಕಾಣಿ ಹಿಡಿದ ನಿಸ್ವಾರ್ಥ ಮನೋಭಾವದ ಅಸಂಖ್ಯಾತ ಭಾರತೀಯರ ಜೀವನದ ಗುರಿಯನ್ನು ನಿರ್ಧರಿಸಲು ಇದೊಂದು ಮುನ್ನುಡಿ.ತಪ್ಪು ಎಲ್ಲರಿಂದಲೂ ಆಗುತ್ತದೆ ಆದರೆ ಅದೇ ತಪ್ಪು ತಿಳಿದ ಮೇಲೂ ಆದರೆ ಅದಕ್ಕಾವ ಬೆಲೆಯಿದೆ.ಗುರುವಾದವನು ದಾರಿಹೋಕನಲ್ಲ! ಅವನೊಬ್ಬ ದಿವ್ಯ ಚೇತನ.
ನಾನು ಒಬ್ಬ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಹೆಮ್ಮೆಯಿಂದ ಹಾಗೂ ದೇಶದ ಭಾವಿಪ್ರಜೆ ನಿರ್ಮಿಸುವಲ್ಲಿ ನನ್ನ ಕೊಡೆಗೆಯಿದೆ ಎಂಬ ಸಂಗತಿಯೇ ಆತ್ಮಭಿಮಾನಕ್ಕೆ ಕಾರಣವಾಗಿದೆ. ಅಂತಹ ಸಾರ್ಥಕ ಬದುಕನ್ನು ಶಿಕ್ಷಕರಿಗೆ ಸಮರ್ಪಿಸಿದ ಒಬ್ಬ ಸಾಮಾನ್ಯ, ಶಿಕ್ಷಕ ತನ್ನ ವೃತ್ತಿಜೀವನದಿಂದ ರಾಷ್ಟ್ರಪತಿ ಹುದ್ದೆಗೆರಿದ ನಮ್ಮೆಲ್ಲರ ನೆಚ್ಚಿನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜೀವನದ ಯಶೋಗಾಥೆಯನ್ನು ಸಮಸ್ತ ಶಿಕ್ಷಕ ಬಂಧುಗಳು ಮರೆಯುವಂತಿಲ್ಲ.ಮಗುವಿನ ಬುದ್ದಿ ಶಕ್ತಿಗನುಗುಣವಾಗಿ ಕಲಿಸುವ ಚಾಕಚಕ್ಯತೆ ಪ್ರತಿ ಶಿಕ್ಷಕರ ಮಾನದಂಡವಾಗಿ ನಿಲ್ಲುವುದರಿಂದ,ಕಲಿಕಾರ್ಥಿಯ ಮನೋಚಂಚಲತೆಗೆ ಕಡಿವಾಣ ಹಾಕುವುದು ಶಿಕ್ಷಕರಿಂದ ಮಾತ್ರ ಸಾಧ್ಯ.
“ಶಿಕ್ಷಕರಾಗುವುದು ದೈವ ಸಂಕಲ್ಪ” ತನ್ನ ನಂಬಿ ಬಂದ ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಧಾರೆಯೆರೆದು ದೇಶದ ಭಾವಿಪ್ರಜೆಯನ್ನು ಸಿದ್ದಮಾಡುವ ಹೊಣೆ ಹೊತ್ತಿರುವುದು ಶಿಕ್ಷಕಸಮುದಾಯ!… ಅಂತಹ ಶಿಕ್ಷಕರಿಗೆ ತಮ್ಮ ಜನ್ಮದಿನವನ್ನು “ಸಪ್ಟೆಂಬರ್ ೫ “ರಂದು ಸಮಸ್ತ ಗುರುವೃಂದಕ್ಕೆ ಸಮರ್ಪಿಸಿದ್ದಾರೆ.ನಾವೆಲ್ಲ ಶಿಕ್ಷಕರು ಎಂಬ ಸಮರ್ಪಣಾ ಮನೋಭಾವ ಹೊರಹೊಮ್ಮುತ್ತದೆ.ಗುರುವೆಂಬ ಮಾಂತ್ರಿಕ ಜಗತ್ತಿಗೆ ಬೇಕು. ಜೀವನ ಸೂರ್ಯನಿಲ್ಲದ ಬಾನಿನಂತೆ!
ಇಷ್ಟೆಲ್ಲಾ ಆದಾಗ್ಯೂ,ಸಮಾಜದ ವಿಚಿತ್ರ ನಡವಳಿಕೆಗಳು, ಸಮಾಜದ ಅಸ್ತಿತ್ವವನ್ನು ಒಂದು ಕ್ಷಣ ಅಲ್ಲೋಲ,ಕಲ್ಲೋಲ ಮಾಡುವತ್ತ ಬದಲಾಗುತ್ತಿದೆಯೆಂಬುದು ಆತಂಕಕಾರಿ..ಶಿಕ್ಷಕರ ಸ್ಥಾನಮಾನಗಳು ಪಲ್ಲಟವಾಗುತ್ತಿವೆ,ಗುರುಗಳ ಮೇಲಿನ ಗೌರವಗಳು ಮೊದಲಿನಂತಿಲ್ಲ, ಗುರುಗಳನ್ನು ಕಂಡಾಕ್ಷಣ ಕಂಡು ಕಾಣದಂತೆ ಮರೆಯಾಗುವ ದಿನಗಳಿಗೆ ಸಾಕ್ಷಿಯಾಗುತ್ತಿದ್ದೆವೆ.ಗುರುನಿಂದೆ ಮಹಾಪಾಪ ಎಂಬುದನ್ನು ಮರೆತಿದ್ದೆವೆ.ತರಗತಿಯಲ್ಲಿ ಮಗುವಿಗೆ ಒಂದು ಮಾತು ಹೇಳು ಹಾಗಿಲ್ಲ,ದಂಡಿಸುವಂತಿಲ್ಲ! ಪಾಲಕರ ಕೆಂಗಣ್ಣಿಗೆ ಗುರಿಯಾಗಿ ನಲುಗುವ ಶಿಕ್ಷಕರ ಸಂಖ್ಯೆಗೆ ಕೊರತೆಯಿಲ್ಲ.ಇದಕ್ಕೆ ಕೇವಲ ವಿದ್ಯಾರ್ಥಿಗಳಷ್ಟೇ ಕಾರಣರಲ್ಲ.ಪೋಷಕರು, ನಮ್ಮ ಸಾಮಾಜಿಕ ವ್ಯವಸ್ಥೆ, ಮಾದ್ಯಮಗಳೂ ಸಹ ಕಾರಣವಾಗಿವೆ. ಶಿಕ್ಷಕರನ್ನು ಗೌರವಿಸುವಂತಹ ಸಮಯವನ್ನು ನಮ್ಮ ಕರ್ತವ್ಯ ನಿಷ್ಠೆಯಿಂದ ಬೆಳೆಸಿಕೊಳ್ಳಬೇಕಿದೆ.ಶಿಕ್ಷಕ ಸಾಮಾನ್ಯನಾಗಿ ಸ್ವಯಂ ಪ್ರತಿಭೆಯಿಂದ ಅಸಾಮಾನ್ಯನಾಗಿ ಬೆಳೆಯುವತ್ತ ಚಿಂತಿಸಬೇಕಿದೆ.ಬೆರಳೆಣಿಕೆಯಷ್ಟು ಗುರುಗಳು ಮಾತ್ರ ನಮ್ಮ ಸ್ಮೃತಿ ಪಟಲದಲ್ಲಿ ಉಳಿದಷ್ಟು….ಇಂದಿನ ಪೀಳಿಗೆಗೆ ವರ್ಗಾಯಿಸುವ ಕೆಲಸ ಆದಷ್ಟು ಒಳಿತೆಂಬ ಭಾವ!.
ಶಿಕ್ಷಕ ಇಂದು ಸುಗಮಕಾರನಾಗಿ ಬದಲಾಗಿದ್ದಾನೆ.ಶಿಕ್ಷಕನಿಗಿರಬೇಕಾದ ಅರ್ಹತೆ, ಸಿದ್ದತೆ,ಕರ್ತವ್ಯ ಹೀಗೆ ಶಿಕ್ಷಕ ಮಗುವಿನ ಮಾನಸಿಕ ಆರೋಗ್ಯವನ್ನು ಸ್ವಸ್ಥ ಇರಿಸುವಲ್ಲಿ ಹಾಗೂ ಭೌದ್ಧಿಕ ಅಂಶಗಳನ್ನು ಹೆಚ್ಚಿಸುವಲ್ಲಿ ಸಕ್ರಿಯಪಾತ್ರ ವಹಿಸುವ ಮಾರ್ಗದರ್ಶಿ.ಇಂತಹ ಸಾಂಸ್ಕೃತಿಕ ಮೌಲ್ಯ, ಆದರ್ಶಗಳನ್ನು ಸಮಾಜದಲ್ಲಿ ಬಿತ್ತುವ ಜ್ಞಾನದ ರೈತನೆಂದರೆ ತಪ್ಪಾಗದು.ಪ್ರಾಮಾಣಿಕತೆ,ಸತ್ಯ, ನಂಬಿಕೆಗಳ ಮೌಲ್ಯ ಹಂಚುವ ಜ್ಞಾನದ ಗಣಿ.ಇಂದು ಶಿಕ್ಷಕರು ತಮ್ಮನ್ನು ತಾವು ಅವಲೋಕ ಮಾಡಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕಿದೆ.
ಐದು ಬೆರಳು ಸಮನಾಗಿರಲು ಸಾಧ್ಯವಾ? ಅಪವಾದ ಎಂಬಂತೆ ಅಲ್ಲಲ್ಲಿ ಶಿಕ್ಷಕ ಸಮುದಾಯ ತಲೆತಗ್ಗಿಸುವಂತೆ ಮಾಡುವ ಕಹಿಘಟನೆಗಳು, ಒಂದು ಕ್ಷಣ ಮೌನಕ್ಕೆ ತಳ್ಳಿಬಿಡುತ್ತದೆ. ಕೆಲ ಶಿಕ್ಷಕರು ಹಲವೆಡೆ ಹಾದಿ ತಪ್ಪುತ್ತಿದ್ದಾರೆ,ಅವರ ವರ್ತನೆ,ನಡುವಳಿಕೆಗಳು ಅನುಕರಣೀಯವಾಗಿಲ್ಲ. ದುಶ್ಚಟಗಳ ದಾಸರಾಗಿ ಭಾವಿ ಭವಿಷ್ಯದ ಮುಂದೆ ತೂರಾಡುತ್ತ, ಬಿಡಿ,ಸಿಗರೇಟ್, ತಂಬಾಕು ಸೇವನೆಯಿಂದ; ನಮ್ಮ ಭವಿಷ್ಯದ ಸಾಮಾಜಿಕ ತಳಹದಿಯೇ ಕುಸಿದಂತೆ.ನಮ್ಮನ್ನು ಅನುಕರಣಿಸುವ ವಿದ್ಯಾರ್ಥಿಗಳು ನಮ್ಮ ಆದರ್ಶಗಳನ್ನು ಅಪ್ಪಿಕೊಂಡು ಬೆಳೆಯುವಂತಾಗುವಂತೆ ನಡೆ ನುಡಿಗಳು ಇದ್ದರೆ ಮಾತ್ರ ಗುರುವಾಗಿ ಮಾರ್ಗದರ್ಶನ ಮಾಡಲು ಸಾಧ್ಯ!.
ಸಮಾಜದಲ್ಲಿ ಅತ್ಯಾಚಾರ,ಮೋಸ,ವಂಚನೆ ಭ್ರಷ್ಟಾಚಾರದಂತ ಘಟನೆಗಳು ದಿನದಿಂದ ದಿನಕ್ಕೆ ಇಂದು ಹೆಚ್ಚಾಗುತ್ತಿವೆ. ಇದಕ್ಕೆಲ್ಲ ಕಾರಣ ನಮ್ಮ ಸಾಮಾಜಿಕ ಚಿಂತನೆಗಳು. ಮತ್ತು ಪಾಲಕ,ಪೋಷಕರು ಮಗುವಿಗೆ ಸರಿಯಾದ ಸಮಯದಲ್ಲಿ ಸರಿಯಾದ ದಾರಿ,ಮಾರ್ಗ ತೋರುವಲ್ಲಿ ಹಿಂದೇಟಾಗಿರುವುದು,ಹೆತ್ತವರಿಗೆ ಅವರ ಮಕ್ಕಳು ಶ್ರೇಷ್ಠ, ಒಳ್ಳೆಯವರು,
ಅವರ ವಿರುದ್ದ ಒಂದು ಮಾತು ಕೇಳಲು ಬಯಸದೆ ಅವರು ಮಾಡಿದ್ದೆಲ್ಲ ಸರಿಯೆಂದು ಬೆನ್ನು ಚಪ್ಪರಿಸಿದರೆ, ಮಕ್ಕಳು ಹೇಗೆತಾನೆ ಸುಧಾರಿಸಲು ಸಾಧ್ಯ! ಗುರುವಿನ ಮಾರ್ಗದರ್ಶನವನ್ನು ಗಾಳಿಗೆ ತೂರಿರುವುದೇ ಕಾರಣವೆನ್ನಬಹುದು.ಮತ್ತೊಂದು ದೃಷ್ಟಿಯಿಂದ ನೋಡುವುದಾದರೆ ಜ್ಞಾನವನ್ನು ಹಂಬಲಿಸಿ ಬರುವ ಸಮುದಾಯ,ಶಿಕ್ಷಣ ಪಡೆದ ನಂತರ ಸಮಾಜಿಕ ವ್ಯವಸ್ಥೆಗೆ ತಕ್ಕಂತೆ ಬದಲಾಗುವಂತಹುದಾದರೆ,ಮಾನವೀಯ ಮೌಲ್ಯಕ್ಕೆ ಬೆಲೆಯೆಲ್ಲಿದೆ? “ಹರ ಮುನಿದರೆ ಗುರುಕಾಯುವನೆಂಬ ಉಕ್ತಿ”ಗೆ ಬದ್ದರಾಗಲು ಸಾಧ್ಯವಾಗಿದೆಯಾ???? ಪ್ರಶ್ನೆಗಳು!.
ಒಟ್ಟಾರೆ ಹೇಳುವುದಾದರೆ, “ಗುರುವೆಂಬ ಅಂಬಿಗ” ಬೇಕೆ ಬೇಕು! “ಪ್ರಕೃತಿ ಗುರುವಾಗಿ ನಮ್ಮನ್ನು ಸಲಹುತ್ತಿದೆ”. ಗುರುವಿನ ಅಸ್ತಿತ್ವ ಬದಲಾಗಿದೆ.ತಂತ್ರಜ್ಞಾನದ ಲೋಕದಿಂದ ಜ್ಞಾನದ ವಿಸ್ತಾರವಾದ ಪ್ರದೇಶವನ್ನು ವಿಸ್ತೃತಗೊಳಿಸುವ “ಗೈಡ್” ಆಗಿ ಬದಲಾಗಿದ್ದಾನೆ.ಟ್ರಾಫಿಕ್ ಸಿಗ್ನಲ್ ಇದ್ದಂತೆ! ಸೂಚನೆಗಳನ್ನು ನೋಡಿ ಸ್ವತಃ ಕಲಿಯುವ ಸಮಯ ಈಗ ನಮ್ಮ ಮುಂದಿದೆ.ಹೀಗಾಗಿ ಬೆತ್ತ ಹಿಡಿವ ಕೈ ಮಗುವಿನ ಬೆನ್ನು ತಟ್ಟುವ ಕೈಯಾಗಿ ಬದಲಾಗಿದೆ.ಉತ್ತಮ ಶಿಕ್ಷಕರು ಕೇವಲ ಪುಸ್ತಕದಲ್ಲಿನ ಪಾಠವನ್ನು ಮಾತ್ರ ಹೇಳುವುದಿಲ್ಲ. ತಮ್ಮ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣವನ್ನು ಹೇಳಿಕೊಡುತ್ತಾರೆ, ಕಲಿಯಲು ಬೆಂಬಲಿಸುತ್ತಾರೆ. ವಿದ್ಯಾರ್ಥಿಗಳು ತಪ್ಪು ಮಾಡಿದರೆ ಅದನ್ನು ಸೂಕ್ಷ್ಮವಾಗಿ ತಿದ್ದುತ್ತಾರೆ. ವಿದ್ಯಾರ್ಥಿಗಳಲ್ಲಿ ದೇಶದ ಉತ್ತಮ ಪ್ರಜೆ ಆಗಲು ಆತ್ಮ ವಿಶ್ವಾಸವನ್ನು ತುಂಬುತ್ತಾರೆ. ಜೀವನದಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವುದನ್ನು ಹೇಳಿಕೊಡುವ ಜವಾಬ್ದಾರಿ ನಿಭಾಯಿಸುವ ಸಾಮರ್ಥ್ಯ ಇರುವುದು ಗುರುವಿಗೆ ಮಾತ್ರ.”ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ” ಎಂಬುದನ್ನು ಸರ್ವಕಾಲಿಕ ಮಂತ್ರವಾಗಿಸಿದಷ್ಟು ವಿನಯ,ವಿಧೇಯತೆಯನ್ನು ಬೆಳೆಸಿದಂತಾಗುತ್ತದೆ.
ಶಿವಲೀಲಾ ಶಂಕರ್
ಶಿವಲೀಲಾ ಹುಣಸಗಿ ಶಿಕ್ಷಕಿಯಾಗಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಸ.ಹಿ.ಪ್ರಾ ಶಾಲೆ ಅರಬೈಲ್ ದಲ್ಲಿ ಪ್ರಸ್ತುತ ಕರ್ತವ್ಯ ನಿರ್ವಹಣೆ.ಪ್ರಕಟಿತ ಕೃತಿಗಳು,ಬಿಚ್ಚಿಟ್ಟಮನ (ಕವನಸಂಕಲನ)ಬದುಕಂದ್ರೆ ಹೀಗೆನಾ? (ಕವನಸಂಕಲನ)ಗೋರಿಯ ಸುತ್ತ ಸಪ್ತಪದಿ ತುಳಿದಾಗ ( ಕಥಾಸಂಕಲನ)ಗಿರಿನವಿಲ ನೆನಪುಗಳು( ಪ್ರೇಮ ಲಹರಿಗಳು)
ಬಾಂಧವ್ಯದ ಮೆರಗು (ಅಂಕಣ ಬರಹ)ಬೊಗಸೆಯೊಳಗಿನ ಆಕಾಶ (ಅಂಕಣ ಬರಹ)ಸಂಕಲ್ಪೋತ್ಸವ ಕನ್ನಡ ನುಡಿಗವಿತೆಗಳು ( ಸಂಪಾದಕೀಯ ಕವನಸಂಕಲನ)ಚಿಣ್ಣರ ಕವಿತೆಗಳು ( ಸಂಪಾದಕೀಯ ಕವನ ಸಂಕಲನ)ಸಕಾಲ (ಅಂಕಣ ಬರಹ) ಬೇಲಿಯಾಚಿನ ಪಿಸುಮಾತು ( ಕವನ ಸಂಕಲನ).
ಅತೀ ಸುಂದರ ಅಧ್ಭುತ ಲೇಖನ. ಗುರುವಿನ ಮಹತ್ವ ಸಾರಿದ ತಮ್ಮ ಲ್ಲಿಯ ಗುರುವಿಗೆ ನಮೋ ನಮ:.
ಸಹೋದರಿ,
ನಿನ್ನ ಬರಹ ಓದುವುದೇ ಒಂದು ಕಲಿಕೆಯಾಗುವುದು.
ಬರಹದೊಳಗೆ ಘನವಾದ ವಸ್ತುಸ್ಥಿತಿಯ ಸ್ಥಾವರವಿದೆ.
ಅಭಿನಂದನೆಗಳು ಸಲ್ಲಿಸುವೆನು.