‘ಅಮ್ಮನಿಗೆ ವಯಸ್ಸಾಯ್ತು’ಲೇಖನ-ವೀಣಾ ಹೇಮಂತ್ ಗೌಡ ಪಾಟೀಲ್

ಪ್ರೀತಿಯ ಪುಟ್ಟ,
 ನಿನ್ನಮ್ಮನಿಗೆ ವಯಸ್ಸಾಯ್ತು ಕಣೋ, ಆಕೆಯ ಪ್ರಖರ ಕಣ್ಣುಗಳೀಗ ತನ್ನ ಹೊಳಪು ಕಳೆದುಕೊಂಡು ಮಂದವಾಗಿವೆ. ಬಲಿಷ್ಠ ಕಾಲುಗಳು,ಪಾದಗಳು ದಣಿದಿದ್ದು ಮೊದಲಿನಷ್ಟು ಸಲೀಸಾಗಿ ಓಡಾಡಲು ಸಾಧ್ಯವಾಗುವುದಿಲ್ಲ. ಒಮ್ಮೊಮ್ಮೆ ಕುಳಿತಲ್ಲೇ ಕುಳಿತು  ಎದ್ದ ಕೂಡಲೇ ನಡೆಯಲಾಗುವುದಿಲ್ಲ.

 ಈಗ ಆಕೆಗೆ ನಿನ್ನ ಪ್ರೀತಿ ಪೂರ್ವಕ ಕಾಳಜಿಯ ಅವಶ್ಯಕತೆ ಇದೆ. ತೆರೆದ ಹೃದಯ ಮತ್ತು ಮಾಸದ ಮುಗುಳ್ನಗೆಯೊಂದಿಗೆ ಆಕೆಯನ್ನು ಅಪ್ಪಿಕೊಂಡು ಬಿಡು. ಇನ್ನೆಷ್ಟು ಕಾಲ ಆಕೆ ನಿನ್ನೊಂದಿಗಿರುತ್ತಾಳೆ.ಆಗ ಭಾರವಾದ ಮನಸ್ಸು ಮತ್ತು ಹೃದಯದೊಂದಿಗೆ ಆಕೆಯನ್ನು ನೀನು ಬೀಳ್ಕೊಡಲೇಬೇಕು.

 ಆಕೆ ನಿನಗೆ ಅದೆಷ್ಟೇ ಪ್ರಶ್ನೆಗಳನ್ನು ಕೇಳಲಿ ಸಮಾಧಾನದಿಂದ ಉತ್ತರಿಸುವ ಮನವಿರಲಿ. ನಿನ್ನ ಚಿಕ್ಕಂದಿನಲ್ಲಿ ನಿನ್ನೆಲ್ಲ ತಲೆ ಹರಟೆಗಳಿಗೆ, ಒಂದರ ಮೇಲೊಂದರಂತೆ ಎಸೆಯುವ ಪ್ರಶ್ನೆಗಳಿಗೆ ಆಕೆ ಅದೆಷ್ಟು ಸಮಾಧಾನದಿಂದ ಉತ್ತರಿಸಿದ್ದಳು, ಗೊತ್ತೇ!
 ಶಾಂತಿ, ಸಮಾಧಾನ ಮತ್ತು ಸಹನೆಯಿಂದ ಆಕೆಯೊಂದಿಗೆ ವರ್ತಿಸು… ನಿನ್ನ ಪ್ರೀತಿಯ ಮತ್ತು ತಾಳ್ಮೆಯ ಉತ್ತರಗಳು ಆಕೆಗೆ ಒಳ್ಳೆಯ ಅನುಭೂತಿಯನ್ನು ಈ ಸಮಯದಲ್ಲಿ ಕೊಡಬಲ್ಲವು.

 ಆಕೆಗೆ ಕಿವಿಯಷ್ಟೇ ಮಂದವಾಗಿಲ್ಲ, ಬುದ್ಧಿಯು ಕೂಡ ತನ್ನ ಮುಂಚಿನ ತೀಕ್ಷ್ಣತೆಯನ್ನು ಕಳೆದುಕೊಂಡಿದೆ, ಆದ್ದರಿಂದ ನೀನು ಹೇಳುವುದು ಆಕೆಗೆ ಬೇಗ ಅರ್ಥವಾಗದಿರಬಹುದು… ಎಳೆ ಮಗುವಿಗೆ ಹೇಳುವಂತೆ ಆಕೆಗೆ ನಿಧಾನವಾಗಿ ತಿಳಿಸಿ ಹೇಳು, ನಿನ್ನೊಂದು ಪ್ರೀತಿಯ ಸ್ಪರ್ಶ ಆಕೆಯ ಇಡೀ ದಿನವನ್ನು ಸುಂದರವಾಗಿಸುವಂತೆ ನಡೆದುಕೋ. ಅದೊಂದು ದಿನ ನೀನು ಅದೆಷ್ಟೇ ಆಕೆಯ ಪ್ರಶ್ನೆಗಾಗಿ ಕಾದರೂ ಆಕೆ ಮೌನವನ್ನು ಹೊದ್ದು ಮತ್ತೆಂದು ಏಳದಂತಹ ಚಿರನಿದ್ದೆಗೆ ಜಾರಬಹುದು.

 ಹಳೆಯ ಹಲವಾರು ವಿಷಯಗಳನ್ನು ಮೆಲು ದನಿಯಲ್ಲಿ ಸವಿಸ್ತಾರವಾಗಿ ನೆನಪಿಸಿಕೊಂಡು ಹೇಳುವ ಆಕೆ ತನ್ನ ಕನ್ನಡಕ, ಊರುಗೋಲುಗಳನ್ನು ಎಲ್ಲಿಟ್ಟಿದ್ದಾಳೆ ಎಂಬುದನ್ನು ಮರೆತು ತಡಕಾಡಬಹುದು. ಹಲ್ಲಿನ ಸೆಟ್ಟು ಹುಡುಕಬಹುದು. ಆಕೆ ಗಾಬರಿಯಿಂದ ಹುಡುಕುವಾಗ ನಿನಗೆ ಇದೇನು ದೊಡ್ಡ ವಿಷಯ ಎಂದು ತೋರಬಹುದು. ಬದುಕಿನ ಇಳಿಸಂಜೆಯಲ್ಲಿ ಆಕೆಗೆ ಜಗತ್ತನ್ನು ನೋಡಲು, ಹೆಜ್ಜೆ ಕಿತ್ತಿಡಲು, ಜೀವನದ ಸವಿ ಸವಿಯಲು ಇವುಗಳೇ ಮುಖ್ಯ ಎಂದು ಹರೆಯದ ನಿನಗೆ ಹೇಗೆ ಅರ್ಥವಾಗಬೇಕು? ಮುಂದೊಂದು ದಿನ ಆಕೆ ಅಳಿದರೂ ಆಕೆಯ ಈ ವಸ್ತುಗಳು ನಿನ್ನ ಮನೆಯ ಯಾವುದೋ ಒಂದು ಮೂಲೆಯಲ್ಲಿ ತಮ್ಮ ಒಡತಿಯ ನೆನಪು ಮೂಡಿಸಬಹುದು.

 ಆಕೆ ಊಟವನ್ನು ನಿಧಾನವಾಗಿ ಮಾಡುವುದು ನಿನ್ನ ಪತ್ನಿಗೆ ರೇಜಿಗೆ ಹುಟ್ಟಿಸಬಹುದು, ಕಟ್ಟಿಸಿದ ಹಲ್ಲುಗಳು ಆಹಾರವನ್ನು ನುರಿಸಬಹುದೇ ಹೊರತು ಸ್ವಾದವನ್ನು ನೀಡುವುದಿಲ್ಲ. ನೀ ಚಿಕ್ಕವನಿದ್ದಾಗ ಆಕೆ ನಿನಗೆ ತಿನ್ನಿಸಿದಾಗ ಒಂದೊಂದು ತುತ್ತನ್ನು ಪುರ್ ಎಂದು  ಬಾಯಿಯಿಂದ ಹೊರಗೆ ತಳ್ಳುತ್ತಿದ್ದ ನಿನ್ನಾಟವನ್ನು ನಗುತ್ತಲೇ ಆಕೆ ಸಹಿಸಿಕೊಂಡಿದ್ದಲ್ಲವೇ, ತನ್ನ ಜೀವನದ ಬಹು ಮುಖ್ಯ ಸಮಯವನ್ನು ನಿನಗೆ ಊಟ ಮಾಡಿಸುವುದರಲ್ಲಿ ಕಳೆದಿದ್ದಳಲ್ಲವೇ? ಸ್ವತಹ ತಾನು ಹಸಿದಿದ್ದರೂ ನಿನ್ನ ಹಸಿವಿಂಗಿಸಲು ಕಾತರಿಸಿ ಕಳವಳಿಸಿದಾಕೆ ಆಕೆಯೇ ಅಲ್ಲವೇ? ದಿನದ ಒಂದು ಹೊತ್ತು ನೀ ಉಣ್ಣದೇ ಹೋದಾಗ ಗಾಬರಿಗೊಂಡು ವೈದ್ಯರ ಬಳಿ ಓಡಿದಾಕೆ ಅಲ್ಲವೇ! ಹೊತ್ತು ಹೊತ್ತಿಗೆ ನಿನಗೆ ಮಾಡಿ ಹಾಕಿದ್ದಲ್ಲದೆ ಶಾಲೆಗೆ ಹೋಗುವ ತನ್ನ ಮಗ ಚೆನ್ನಾಗಿ ತಿಂದುಂಡು ಇರಲೆಂದು ವಿವಿಧ ಬಗೆಯ ಆಹಾರ ಸಿದ್ಧ ಪಡಿಸಿದವಳಲ್ಲವೇ! ಆಕೆಯ ಊಟದ ವೈಖರಿ ನಿನಗಿಂದು ಕಿರಿಕಿರಿಯಾದರೂ ತುಸುವೇ ಸಹಿಸಿಕೋ… ಮುಂದೊಂದು ದಿನ ಆಕೆಯ ತಿಥಿ ಮಾಡಿ ಊಟ ಹಾಕುವಾಗ ಆಕೆಯ ನೆನಪು ಬಾರದೆ ಇರುವುದಿಲ್ಲ.

 ವಯಸ್ಸಾದ ಕಾರಣ ದೇಹದ ನೋವುಗಳು ಬಾಧಿಸುವ ಆಕೆಗೆ ಸರಿಯಾಗಿ ನಿದ್ದೆ ಬರುವುದಿಲ್ಲ. ಹಾಗಾಗಿ ಪದೇ ಪದೇ ಮಗ್ಗಲು ಬದಲಾಯಿಸಿ, ಕೆಲವೊಮ್ಮೆ ನಿಧಾನವಾಗಿ ಬಚ್ಚಲಿಗೆ ಹೋಗುವಷ್ಟರಲ್ಲಿಯೇ ಆಕೆ ಮೂತ್ರ ವಿಸರ್ಜಿಸಬಹುದು ಇಲ್ಲವೇ ಹಾಸಿಗೆಯನ್ನು ಕೂಡ ಒದ್ದೆ ಮಾಡಬಹುದು. ಬೇಸರಪಡದಿರು. ಅದೆಷ್ಟು ಹಗಲುಗಳು ಮತ್ತು ಅದೆಷ್ಟು ರಾತ್ರಿಗಳು ಆಕೆ ನೀನು ಒದ್ದೆಯಾಗದಿರಲೆಂದು, ಒದ್ದೆಯಾದರೆ ನಿನಗೆ ಶೀತ ನೆಗಡಿ ಆದೀತೆಂದು ಹಗಲಿರುಳು ನಿದ್ದೆಗೆಟ್ಟು ನಿನ್ನ ಸೇವೆ ಮಾಡಿಲ್ಲವೆ ಆಕೆ?

 ಆಕೆಯ ಕೊನೆಯ ಘಳಿಗೆಯಲ್ಲಿ ಎಲ್ಲ ನೆನಪುಗಳನ್ನು ಮರುಕಳಿಸುವಂತೆ ಸಂಭಾಷಿಸು. ಆಕೆ ನಿನ್ನನ್ನು ತಬ್ಬಿ ಹಿಡಿದಂತೆ ನೀನು ಆಕೆಯನ್ನು ತಬ್ಬಿಕೋ. ನಿನ್ನ ಪ್ರೀತಿ ಆಕೆಯ ಕೊನೆಯ ದಿನಗಳ ದಾರಿದೀಪವಾಗಲಿ. ನಿನ್ನ ಪ್ರೀತಿಯ ಅಕ್ಕರೆಯ ಮಾತುಗಳು ಆಕೆಗೆ ಸಮಾಧಾನ ನೀಡುವ  ಅಮೃತ ಸಿಂಚನವಾಗಲಿ.

 ಇನ್ನೇನು ಆಕೆಯ ಬಾಳಿನಲ್ಲಿ ಬಹಳ ದಿನಗಳು ಉಳಿದಿಲ್ಲ. ಈಗಾಗಲೇ ಆಕೆ ಅಸಹಾಯಕತೆಯಿಂದ ಬಳಲುತ್ತಿರುವಳು. ನಿನಗೆ ಹೊರೆಯಾಗಿದ್ದೆನೆಂದು ಭಾವಿಸುತ್ತಿರುವಳು. ವೃದ್ಧಾಪ್ಯದ ಕಾರಣ ದೇಹ  ಶಿಥಿಲಗೊಂಡಿದ್ದು ಮನಸ್ಸು ಮತ್ತು ದೇಹಗಳು ಆಕೆಗೆ ಸಹಕರಿಸುತ್ತಿಲ್ಲ…. ದೇವರೇ ನನ್ನನ್ನು ಕರೆದುಕೋ ಎಂದು ಪ್ರತಿದಿನವೂ ಆಕೆ  ಆ ದೇವರಲ್ಲಿ ಬೇಡುತ್ತಿರುವಳು. ಆದರೆ ಆಕೆಯ ಭೂಮಿಯ ಋಣ ಇನ್ನೂ ತೀರಿಲ್ಲ.

 ಆಕೆಯ ಅಸಹನೀಯ ಬದುಕನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಆ ದೇವರು ನಿನಗೆ ಕೊಡಲಿ, ಆಕೆಯ ಎಲ್ಲಾ ತೊಂದರೆಗಳನ್ನು ಅರಿತು ಆಕೆಯನ್ನು ಆಕೆ ಇರುವಂತೆಯೇ ಪ್ರೀತಿಸುವ, ಒಪ್ಪಿಕೊಳ್ಳುವ  ಸಹೃದಯತೆ ನಿನ್ನದಾಗಲಿ. ಬಾಳಿನ ಸಂಜೆಯಲ್ಲಿ ಆಕೆ ಸಮಾಧಾನದ ನಿಟ್ಟುಸಿರಿನೊಂದಿಗೆ  ಅಂತ್ಯ ಕಾಣುವಾಗ ಆಕೆಯನ್ನು ಚೆನ್ನಾಗಿ ನೋಡಿಕೊಂಡ ತೃಪ್ತಿ ನಿನ್ನದಾಗಲಿ ಎಂದು ಹಾರೈಸುವ

 ನಿನ್ನ ಚಿಕ್ಕಮ್ಮ  

—————————————————————–

2 thoughts on “‘ಅಮ್ಮನಿಗೆ ವಯಸ್ಸಾಯ್ತು’ಲೇಖನ-ವೀಣಾ ಹೇಮಂತ್ ಗೌಡ ಪಾಟೀಲ್

Leave a Reply

Back To Top