ಅಂಕಣ ಬರಹ
ಪೋಷಕರಿಗೊಂದು ಪತ್ರ–01
ಇಂದಿರಾ ಪ್ರಕಾಶ್
ಪತ್ರ-ಒಂದು
ಆತ್ಮೀಯರೆ, ಇದು ನನ್ನ ಸಲಹೆಯೂ ಅಲ್ಲ, ಆಗ್ರಹವೂ ಅಲ್ಲ, ಹಾಗೆಂದು ನಿಮಗೆ ನನ್ನ ವಿನಂತಿಯೂಅಲ್ಲ. ನನ್ನ ಮಗನಿಗೆ ಅಥವಾ ಮಗಳಿಗೆ ಇದನ್ನೇ ಕಲಿಸಿ, ಹೀಗೆ ಕಲಿಸಿ, ಅಂತ ಸೂಚಿಸುವ ಪ್ರಯತ್ನವೂ ಅಲ್ಲ. ಇದು ನನ್ನ ಅನುಭವಗಳೊಂದಿಗೆ ಹುಟ್ಟಿಕೊಂಡ ನನ್ನ ಪುಟ್ಟ ಅನಿಸಿಕೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಒಂದು ಇಚ್ಛೆ ಮಾತ್ರ.
ದಯವಿಟ್ಟು ಮಕ್ಕಳಿಗೆ ಇಷ್ಟೇ ಅಂಕಗಳನ್ನು ತೆಗೆಯಬೇಕೆಂಬ ಹುಚ್ಚು ಹಿಡಿಸಬೇಡಿ. ಆತ ಅಥವಾ ಆಕೆ ಕಲಿಕೆಯ ಪುಸ್ತಕದ ಚೌಕಟ್ಟಿನಲ್ಲೇ ಇರುವಂತೆ ಮಾಡಬೇಡಿ. ನೀನು ಇಂತದ್ದೇ “ಒಂದು ಉನ್ನತ ಮಟ್ಟದ ಹುದ್ದೆ ಹಿಡಿಯುವುದಕ್ಕಾಗಿ ಓದಲೇಬೇಕು”ಎಂದು ದಯವಿಟ್ಟು ಹೇಳಿಕೊಡಬೇಡಿ. ಕೆಲಸ ಯಾವುದೇ ಇರಲಿ ಅದನ್ನು ಪ್ರಾಮಾಣಿಕವಾಗಿ, ಖುಷಿಯಿಂದ, ಹೆಮ್ಮೆಯಿಂದ, ನಿಷ್ಠೆಯಿಂದಮಾಡುವುದೇ ಶ್ರೇಷ್ಠ ಎಂಬುದನ್ನು ತಿಳಿಸಿ. ಉತ್ತಮ ಪುಸ್ತಕಗಳನ್ನು ಓದುವ ಹಂಬಲ ಬರುವಂತಹ ಮಾತುಗಳನ್ನಾಡಿ.
ನೀವೂ ಸಹ ಮಗುವಿಗಾಗಿ ಸಮಯ ಕೊಟ್ಟು ಒಳ್ಳೆಯ ಪುಸ್ತಕವನ್ನು ಓದಲು ಕುಳಿತರೆ, ಮಕ್ಕಳೂ ಸಹ ನಿಮ್ಮನ್ನು ಅನುಸರಿಸುತ್ತಾರೆ. ಅದು ಬಿಟ್ಟು ನಾನು ಬೆಳಿಗ್ಗೆಯಿಂದ ಆಫೀಸಿನಲ್ಲಿ ದುಡಿದು ಬಂದಿದ್ದೇನೆ ಅಥವಾ ಗೃಹಿಣಿಯಾಗಿ ಮನೆಯಲ್ಲಿ ಬಿಡುವಿಲ್ಲದೆ ಸಂಜೆಯವರೆಗೆ ದುಡಿದು ದಣಿವಾಗಿದೆ. ನಾನು ಸ್ವಲ್ಪ ಸಮಯದೂರದರ್ಶನವನನ್ನೋ, ಅಥವಾ ಸೆಲ್ಲನ್ನುನೋಡುವೆ. ನೀನು ರೂಮಲ್ಲಿ ಕುಳಿತು ಓದು ಎಂದರೆ ಆ ಮಗುವಿಗೆ ನೀವು ನೋಡುತ್ತಿರುವ ಟಿವಿ ಧಾರವಾಹಿಗಳ, ಸಿನಿಮಾಗಳ, ಅಥವಾ ಯಾವುದೇ ಕಾರ್ಯಕ್ರಮಗಳ ನೋಡುವಿರೋ ಆ ತರಂಗಗಳೇ ಮಗುವಿನ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಓದುವ ಆಸಕ್ತಿಯೇ ಇಲ್ಲದಂತಾಗುತ್ತದೆ. ಓದಲು ಉತ್ತಮ ಪರಿಸರ ಮುಖ್ಯವಾಗುತ್ತದೆ. ದಯಮಾಡಿ ಅದನ್ನು ಮಕ್ಕಳಿಗೆ ಕಲ್ಪಿಸಿಕೊಡಿ.ಶಾಲೆಯ ಪುಸ್ತಕಗಳನ್ನು ಮಾತ್ರ ಓದಬೇಕು ಎನ್ನುವ ಚೌಕಟ್ಟು ಹಾಕಬೇಡಿ. ಮಕ್ಕಳು ಭಯದಿಂದ ನಡುಗುವ ಬದಲು, ಖುಷಿಯಿಂದ ಶಿಸ್ತಿಗೆ ಹೊಂದಿಕೊಳ್ಳುವ ಮನೋಭಾವವನ್ನು ಬೆಳೆಸಿ.
ಇಂದಿರಾ ಪ್ರಕಾಶ್.
ಇಂದಿರಾ ಪ್ರಕಾಶ್
ಲೇಖಕರು ಡೆಕ್ಕನ್ ಸ್ಕೂಲ್ ಆಫ್ ಎಜುಕೇಶನ್ ಸಂಸ್ಥೆಯ ಪಾಲುದಾರರಾಗಿ, ಪ್ರಾಂಶುಪಾಲರಾಗಿ ಹಾಗೂ ಶಾಲೆಯ ಮುಖ್ಯ ಶಿಕ್ಷಕರಾಗಿ ಕಾರ್ಯವನ್ನು ನಿರ್ವಹಿಸಿದ್ದಾರೆ
ಹವ್ಯಾಸ ಕಥೆ ಕವನ ಲೇಖನಗಳನ್ನು ಬರೆಯುವುದು. ಪುಸ್ತಕಪ್ರೇಮಿ.