ಯುವ ಸಂಗಾತಿ
ಮೇಘ ರಾಮದಾಸ್ ಜಿ.
ವಿಶ್ವ ಯುವ ಕೌಶಲ್ಯ ದಿನದ ಅಂಗವಾಗಿ-
‘ಶಾಂತಿ ಮತ್ತು ಅಭಿವೃದ್ಧಿಗಾಗಿ
ಯುವ ಕೌಶಲಗಳು’
ಭಾರತ ಯುವ ರಾಷ್ಟ್ರ, ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 29ರಷ್ಟು ಅಂದರೆ ಪ್ರಸ್ತುತ 420 ದಶ ಲಕ್ಷ ಯುವ ಜನರು ಭಾರತದಲ್ಲಿದ್ದಾರೆ. ಈ ಎಲ್ಲ ಯುವಜನತೆಯು ಕೂಡ ವಿವಿಧ ಪ್ರದೇಶ, ಜನಾಂಗ, ಭಾಷೆ, ಸಂಸ್ಕೃತಿ, ಜಾತಿ, ವರ್ಗ, ವರ್ಣದವರಾಗಿದ್ದಾರೆ. ಎಲ್ಲರ ಮನಸ್ಥಿತಿಗಳು ಹಾಗೂ ಪರಿಸ್ಥಿತಿಗಳು ಬಹಳ ವಿಭಿನ್ನವಾಗಿವೆ. ಆದರೆ ಈ ಎಲ್ಲಾ ಯುವಜನತೆ ಎದುರಿಸುತ್ತಿರುವ ಸಮಸ್ಯೆಗಳು ಮಾತ್ರ ಒಂದೇ ಆಗಿವೆ. ಈ ಎಲ್ಲಾ ಸಮಸ್ಯೆಗಳಿಗೂ ಅವರೇ ಪರಿಹಾರದ ಧ್ವನಿಯಾಗುವ ಅವಶ್ಯಕತೆ ಇದೆ. ಈ ಯುವ ಧ್ವನಿಗೆ ಸಾತ್ ನೀಡಲೆಂದೇ ವಿಶ್ವಸಂಸ್ಥೆ ಯುವ ಜನರಿಗಾಗಿಯೇ ಕೆಲವು ವಿಶೇಷ ದಿನಗಳನ್ನು ನಿಗದಿಪಡಿಸಿದೆ. ಅದರಲ್ಲಿ ” ವಿಶ್ವ ಯುವ ಕೌಶಲ್ಯ ದಿನ ” ಕೂಡ ಒಂದಾಗಿದೆ.
ಯುವಜನತೆಯನ್ನು ಮುಖ್ಯವಾಗಿ ಬಾಧಿಸುತ್ತಿರುವ ದೊಡ್ಡ ಸಮಸ್ಯೆ ಎಂದರೆ ಅದು ‘ ನಿರುದ್ಯೋಗ ‘. ಹೆಚ್ಚಿನ ಶಿಕ್ಷಣ ಪಡೆಯದೇ ಇರುವುದು, ವೃತ್ತಿ ಮಾರ್ಗದರ್ಶನ ಸಿಗದಿರುವುದು, ಕೌಶಲ್ಯಗಳ ಕೊರತೆ, ಆರ್ಥಿಕ ಸಮಸ್ಯೆ ಹೀಗೆ ಈ ನಿರುದ್ಯೋಗ ಸಮಸ್ಯೆಗೆ ಹಲವು ಕಾರಣಗಳಿವೆ. ಇವುಗಳಿಗೆ ಪರಿಹಾರೋಪಾಯಗಳನ್ನು ರೂಪಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ಪ್ರತಿ ವರ್ಷ ಜುಲೈ 15ರಂದು ವಿಶ್ವ ಯುವ ಕೌಶಲ್ಯ ದಿನವನ್ನು ಒಂದೊಂದು ವಿಶೇಷ ಥೀಮ್ ನ ಜೊತೆಗೆ ಆಚರಿಸುತ್ತದೆ. ಈ ಬಾರಿಯ ಥೀಮ್ ‘ ಶಾಂತಿ ಮತ್ತು ಅಭಿವೃದ್ಧಿಗಾಗಿ ಯುವ ಕೌಶಲ್ಯಗಳು ‘ ಎಂಬುದಾಗಿದೆ. ಬಹುಶಃ ದೇಶದ ಈಗಿನ ಪರಿಸ್ಥಿತಿಗೆ ಇದು ಅತ್ಯಂತ ಸೂಕ್ತವಾದ ವಿಷಯವಾಗಿದೆ.
ಭಾರತ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತರ ರಾಷ್ಟ್ರ. ಇಲ್ಲಿ ವೈವಿಧ್ಯತೆಗೆ, ಭಿನ್ನತೆಗೆ, ವಿವಿಧತೆಗೆ ಕೊರತೆ ಇಲ್ಲ. ಈ ವಿಷಯಕ್ಕಾಗಿಯೇ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ವಿಶೇಷ ಸ್ಥಾನವಿದೆ. ಆದರೆ ಇಂದು ಈ ವಿಶೇಷತೆಯೇ ದೇಶ ಇಬ್ಬಾಗವಾಗಲು ಕಾರಣವಾಗುತ್ತಿದೆ. ಶಾಂತಿಯನ್ನು ತನ್ನ ದ್ವಜದ ಒಂದು ಬಣ್ಣವಾಗಿ ಇರಿಸಿಕೊಂಡಿರುವ ದೇಶದಲ್ಲಿ ಇಂದು ದ್ವೇಷ, ಅಸೂಯೆ, ದಬ್ಬಾಳಿಕೆ, ಹಿಂಸಾಚಾರ, ಸರ್ವಾಧಿಕಾರಗಳಂತಹ ಶಾಂತಿ ನಾಶಕ ಘಟನೆಗಳು ಲೆಕ್ಕವಿಲ್ಲದಷ್ಟು ಕ್ಷಣಕ್ಕೊಂದಂತು ನಡೆಯುತ್ತಲೇ ಇವೆ. ಹಾಗಾದರೆ ಇಂತಹ ಘಟನೆಗಳು ಏಕೆ ನಡೆಯುತ್ತಿವೆ? ಯಾರನ್ನು ಗುರಿಯಾಗಿಸಿಕೊಂಡು ನಡೆಯುತ್ತಿವೆ? ಯಾರನ್ನು ಇಲ್ಲಿ ಬಲುಪಶುಗಳನ್ನಾಗಿ ಮಾಡಲಾಗುತ್ತಿದೆ? ಎಂದು ಯೋಚಿಸುವುದು ಬಹಳ ಮುಖ್ಯವಾಗುತ್ತದೆ.
ಮೇಲ್ನೋಟಕ್ಕೆ ನೋಡಿದರೆ ಈ ಎಲ್ಲಾ ಘಟನೆಗಳಲ್ಲಿ ಕಾರಣಕರ್ತರು, ಮುಂದಾಳುಗಳು ಹಾಗೂ ಭಾಗಿದಾರರು ಯುವ ಜನರೇ ಆಗಿದ್ದಾರೆ. ಯಾಕೆ ಯುವ ಜನರೇ ಇದರಲ್ಲಿ ಭಾಗಿಯಾಗುತ್ತಾರೆ? ಹೇಗೆ ಇವರನ್ನು ಈ ಘಟನೆಗಳ ಪಾಲುದಾರರಾಗಿ ಮಾಡುತ್ತಾರೆ ಎಂದು ಯೋಚಿಸಬೇಕಿದೆ. ದೇಶದಲ್ಲಿ ಯುವಶಕ್ತಿ ಹೆಚ್ಚಿನ ಸಂಖ್ಯೆಯಲ್ಲಿದೆ ಎನ್ನುವುದು ತಿಳಿದಿದೆ. ಈ ಯುವಶಕ್ತಿಯು 15 ರಿಂದ 29 ವರ್ಷದ ವಯೋಮಾನದವರಾಗಿದ್ದು ಅತಿ ವೇಗವಾಗಿ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆ ಇರುವವರು. ಯಾವುದೇ ವಿಚಾರವಾದರೂ ಅದನ್ನು ಪರಾಮರ್ಶಿಸಿ ನೋಡುವ ವಿವೇಕ ಇದ್ದರೂ ಸಹ ಕೆಲವೊಂದು ಸೂಕ್ಷ್ಮ ವಿಚಾರಗಳಿಗೆ ಬೇಗನೆ ಆಕರ್ಷಿತರಾಗುತ್ತಾರೆ. ಇವರಲ್ಲಿ ಹುಮ್ಮಸ್ಸು ಜಾಸ್ತಿ, ಮುಂದಾಳತ್ವ ವಹಿಸುವ ಬಯಕೆ ಜಾಸ್ತಿ, ಇತರರಿಗೆ ರೋಲ್ ಮಾಡೆಲ್ ಗಳಾಗುವ ಹಂಬಲ ಜಾಸ್ತಿ. ಹಾಗಾಗಿ ಯಾವೆಲ್ಲ ಕೆಲಸಗಳು ಇವರನ್ನು ಕೆಲವರು ಗುರುತಿಸುವಂತೆ ಮಾಡುತ್ತವೆಯೋ ಅಂತ ಕೆಲಸಗಳಿಗೆ ಬೇಗ ಜಾರುತ್ತಾರೆ. ಅದರಲ್ಲಿಯೂ ಧರ್ಮ ಹಾಗೂ ದೇಶಭಕ್ತಿ ಎನ್ನುವ ವಿಚಾರಗಳು ಯಾವ ಯುವಜನತೆಯನ್ನು ಸಹ ಅದರಿಂದ ಹಿಂದೆ ಸರಿಯಲು ಬಿಡುವುದಿಲ್ಲ.
ಯುವಜನತೆ ಎಷ್ಟೇ ಪ್ರಗತಿ ಪರವಾಗಿ ಯೋಚಿಸಿ ಮುನ್ನಡೆದರು ಸಹ ಈ ಧರ್ಮ ಎನ್ನುವ ಸಂಕೋಲೆಯನ್ನು ಬಿಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ದೇಶಭಕ್ತಿ ಹಾಗೂ ಧರ್ಮ ಎಂಬ ವಿಚಾರಗಳು ಬೇಗ ವಶೀಕರಣ ಮಾಡಿಕೊಳ್ಳುವಂತಹ ಶಕ್ತಿ ಹೊಂದಿವೆ, ಈ ಎರಡು ವಿಚಾರಗಳಿಗೆ ಯುವಜನರು ರಾಜಕೀಯ ದಾಳದಳಾಗಿ ಬಳಕೆಯಾಗುತ್ತಿದ್ದಾರೆ. ನಿರುದ್ಯೋಗ ಸಮಸ್ಯೆ ಈ ಕೃತ್ಯಕ್ಕೆ ಪುಷ್ಟಿ ನೀಡುತ್ತಿದೆ. ಇದರ ಜೊತೆಗೆ ಸಾಮಾಜಿಕ ಜಾಲತಾಣಗಳ ಪ್ರಭಾವ, ಗುರುತಿಸಿಕೊಳ್ಳುವ ಹೆಬ್ಬಯಕೆ, ಮನೆಯಲ್ಲಿನ ಜವಾಬ್ದಾರಿಗಳ ಒತ್ತಡ, ಶ್ರಮವಿಲ್ಲದೆ ಹಣ ಗಳಿಸುವ ದುರಾಸೆ ಈ ಎಲ್ಲವೂ ಅವರನ್ನು ತಪ್ಪು ದಾರಿ ಹಿಡಿಯುವಂತೆ ಮಾಡುತ್ತಿವೆ. ದೇಶದ ಶಾಂತಿ ಕಾಯುವ ಯೋಧರ ಆಗಬೇಕಿರುವ ಯುವ ಪಡೆ ಇಂದು ಕ್ಷುಲ್ಲಕ ಕಾರಣಗಳಿಗೆ ದೇಶದಲ್ಲಿ ಅಶಾಂತಿ ಹರಡುವ ಆಯುಧಗಳಾಗಿ ಮಾರ್ಪಟ್ಟಿದ್ದಾರೆ.
ಇನ್ನು ದೇಶದ ಅಭಿವೃದ್ಧಿಯ ವಿಚಾರಕ್ಕೆ ಬಂದರೆ ಯುವ ಜನತೆ ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆ ಬಹಳ ಕಡಿಮೆ. ಇದಕ್ಕೆ ಅವಕಾಶಗಳ ಸಮಾನತೆ ಇಲ್ಲದಿರುವುದು ಒಂದು ದೊಡ್ಡ ಕಾರಣವಾಗಿದೆ. ಆರ್ಥಿಕವಾಗಿ ಸಬಲರಾಗಿರುವ ಗುಂಪಿನ ಯುವ ಜನತೆ ತಮ್ಮದೇ ಇಷ್ಟದ ಶಿಕ್ಷಣ, ಉದ್ಯೋಗ, ಜೀವನ ಪಡೆಯುವ ಎಲ್ಲಾ ಅವಕಾಶಗಳು ಸಿಗುತ್ತವೆ. ಆದರೆ ಆರ್ಥಿಕವಾಗಿ ಹಿಂದುಳಿದಿರುವ ಗುಂಪಿಗೆ ಇದ್ಯಾವುದೋ ಅವರಿಷ್ಟದಂತೆ ಸುಲಭವಾಗಿ ಸಿಗುವುದಿಲ್ಲ. ಹಾಗಾಗಿ ದೇಶದಲ್ಲಿ ಆರ್ಥಿಕ ಸಮಾನತೆ ಉಂಟಾಗುವುದು ಬಹಳ ಅವಶ್ಯಕವಾಗಿದೆ. ಎಲ್ಲಾ ವರ್ಗದ ಮಕ್ಕಳಿಗೂ ಏಕರೂಪ ಶಿಕ್ಷಣ, ಸಮಾನ ಉದ್ಯೋಗಾವಕಾಶ ಸೃಷ್ಟಿಯಾಗುವಂತಾಗಬೇಕು. ಆದ್ದರಿಂದ ಯುವ ಜನತೆ ದೇಶದ ಅಭಿವೃದ್ಧಿಯ ಭಾಗವಾಗಬೇಕಾದರೆ ಅವರು ಮೊದಲು ಅಭಿವೃದ್ಧಿ ಹೊಂದಬೇಕಾಗಿದೆ.
ವಿಶ್ವಸಂಸ್ಥೆಯ ಈ ವರ್ಷದ ಥೀಮ್ ಶಾಂತಿ ಮತ್ತು ಅಭಿವೃದ್ಧಿಗಾಗಿ ಯುವ ಕೌಶಲಗಳು ನಮ್ಮ ಯುವ ಜನತೆಗೆ ಬಹಳ ಮುಖ್ಯವಾಗಿ ಬೇಕಾಗಿದೆ. ಸರ್ಕಾರಗಳು ಯುವಜನರನ್ನು ಬಳಸಿಕೊಳ್ಳುವ ಬದಲಿಗೆ ಕೌಶಲ್ಯಗಳನ್ನು ನೀಡಿ ಬೆಳೆಸಬೇಕಿದೆ. ಯುವಶಕ್ತಿ ದೇಶದ ಆಸ್ತಿ, ಅವರಿಂದ ಅಭಿವೃದ್ಧಿ ಸಾಧ್ಯ ಎಂದೆಲ್ಲಾ ಕೇವಲ ಭಾಷಣಗಳಿಗೆ ಸೀಮಿತವಾದ ಮಾತುಗಳು ಶಾಸನಗಳಾಗಿ ಬದಲಾಗಿ ನಿಜವಾಗಬೇಕಿದೆ. ದೇಶದಲ್ಲಿ ಯುವಜನರ ಜನಸಂಖ್ಯೆ ಮಾತ್ರವಲ್ಲ ಅವರ ಅಭಿವೃದ್ಧಿ ಕೂಡ ಜಗತ್ತಿನಲ್ಲಿ ಇತಿಹಾಸ ಸೃಷ್ಟಿಸಬೇಕಿದೆ. ಇದಕ್ಕೆಲ್ಲ ಯುವ ಜನತೆ ತಮ್ಮ ಹಕ್ಕುಗಳಿಗಾಗಿ ನಿಲ್ಲುವ ಅವಶ್ಯಕತೆ ಇದೆ. ಯುವ ಜನರಿಗೆ ಸಿಗುವ ಕೌಶಲ್ಯಗಳು ದೇಶದಲ್ಲಿ ಶಾಂತಿ ಹರಡುವ ಹಾಗೂ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವಂತಿರಬೇಕಾಗಿದೆ.
ಮೇಘ ರಾಮದಾಸ್ ಜಿ
ಯುವಜನ ಕಾರ್ಯಕರ್ತರು ಹೊಂಬಾಳೆ ಟ್ರಸ್ಟ್
ಗುಳಿಗೇನಹಳ್ಳಿ ಸಿರಾ ತಾಲ್ಲೂಕು ತುಮಕೂರು ಜಿಲ್ಲೆ