ಕಲ್ಯಾಣಿಯವರಿಗೆ ಯಾವಾಗ ನಿದ್ರೆ ಹತ್ತಿತೋ ತಿಳಿಯಲಿಲ್ಲ.

ಬೆಳಗ್ಗೆ ನಾರಾಯಣನ್ ಬಂದರು. ಪತ್ನಿಯೊಡನೆ ಹೆಚ್ಚು ಮಾತನಾಡಲೇ ಇಲ್ಲ. ಕಲ್ಯಾಣಿಯ ಜೊತೆ ಬಂದ ಪುಟ್ಟ ಹುಡುಗಿಯು ತನ್ನ ಮಗಳು ಎಂದು ತಿಳಿದರೂ ಆ ಹುಡುಗಿಯ ಜೊತೆಯೂ ನಾರಾಯಣನ್ ಹೆಚ್ಚು ಮಾತನಾಡಲಿಲ್ಲ. ಮೊದಲಿನ ಹಾಗೆ ಕಲ್ಯಾಣಿ ಮತ್ತು ನಾರಾಯಣನ್ ಮನಸ್ಸು ಒಂದಾಗಲೇ ಇಲ್ಲ. ಅಲ್ಲಿನ ವಾತಾವರಣ ಕಲ್ಯಾಣಿಯವರಿಗೆ ಉಸಿರು ಕಟ್ಟಿಸುವ ಹಾಗೆ ಅನಿಸಿತು. ಸುಮತಿಗೆ ಮೊದಲ ಮಗು ಹುಟ್ಟಿರುವ ವಿಷಯ ತಿಳಿದು ಪ್ರೀತಿಯ ಮಗಳ ಮನೆಗೆ ಬಂದರು. ಅಮ್ಮನನ್ನು ಕಂಡ ಸುಮತಿಯ ಸಂತೋಷ ಇಮ್ಮಡಿಸಿತು. ಸುಮತಿಯ ಮಗುವಿಗೆ ಆಗಿನ್ನೂ ನಾಲ್ಕು ತಿಂಗಳು ತುಂಬಿತ್ತು. ಮಗಳ ಹಾಗೂ ಮೊಮ್ಮಗನ ಆರೈಕೆಯನ್ನು ಮಾಡುತ್ತಾ ಕೆಲವು ತಿಂಗಳು ಸುಮತಿಯ ಮನೆಯಲ್ಲಿ ಇದ್ದ ಕಲ್ಯಾಣಿಯವರು ಹಿರಿಯ ಮಗಳ ಮನೆಗೆ ಹೋದರು. ಕೊನೆಗೂ ಊರಿಂದ ಅಮ್ಮ ಬಂದ ಸಂತೋಷ ಮಕ್ಕಳಿಗೆ. ಅಮ್ಮನನ್ನು ಹಾಗೂ ತಂಗಿಯನ್ನು ನಾಲ್ವರು ಮಕ್ಕಳೂ ಚೆನ್ನಾಗಿ ನೋಡಿಕೊಂಡರು. ಹಿರಿಯ ಮಗನಿಗೆ ಕೆಲಸ ಸಿಕ್ಕಿದ ನಂತರ 

ಕಲ್ಯಾಣಿಯವರು ಅಲ್ಲಿಯೂ ಸ್ವಲ್ಪ ದಿನಗಳ ಕಾಲ ಇದ್ದರು.

ಆದರೆ ಹೆಚ್ಚಾಗಿ ಪತಿಯಿರುವೆಡೆಗೆ ಹೋಗಲೇ ಇಲ್ಲ. ಅಲ್ಲಿ ಹೋದರೂ ಮೊದಲಿನ ಆದರವಾಗಲೀ ಪ್ರೀತಿಯಾಗಲೀ ತನಗೆ ಸಿಗುವುದಿಲ್ಲ ಎನ್ನುವುದು ಕಲ್ಯಾಣಿಯವರಿಗೆ ಮನವರಿಕೆಯಾಗಿತ್ತು. ಇದನ್ನು ಮಕ್ಕಳೂ ಬಲ್ಲವರಾದ್ದರಿಂದ  ಅಮ್ಮನನ್ನು ಅಪ್ಪಇರುವಲ್ಲಿಗೆ ಹೋಗಲು ಬಿಡದೇ ಕಾಳಜಿಯಿಂದ ನೋಡಿಕೊಂಡರು. ಹಿರಿಯ ಮಗನ ಮನೆಯಲ್ಲಿ ಇದ್ದ ಕಲ್ಯಾಣಿಯವರನ್ನು ಒಂದು ದಿನ ಸುಮತಿಯ ಪತಿ ವೇಲಾಯುಧನ್ ಬಂದು ಅವರ ಮನೆಗೆ ಕರೆದುಕೊಂಡು ಹೋದರು. ತಮ್ಮೆಲ್ಲರ ಜೀವನ ಮೊದಲಿನಂತೆ ಇಲ್ಲವಲ್ಲ, ಪತಿ ಊರಲ್ಲಿದ್ದ ಆಸ್ತಿಯನ್ನು ಮಾರಿ ಮಕ್ಕಳನ್ನು ಈ ಸ್ಥಿತಿಗೆ ತಂದರಲ್ಲ ಎನ್ನುವ ಕೊರಗು ಕಲ್ಯಾಣಿಯವರನ್ನು ಬಹಳವಾಗಿ ಕಾಡುತ್ತಿತ್ತು. ತನ್ನನ್ನು ಚಿಕ್ಕ ಮಗ ಕೇರಳದಿಂದ ಇಲ್ಲಿಗೆ ಕರೆತಂದರೂ ಕೂಡಾ ಮೊದಲಿನ ಪ್ರೀತಿ ಪತಿಯು ತೋರದೇ ಇದ್ದದ್ದು ಕೂಡಾ ಅವರ ಚಿಂತೆಗೆ ಕಾರಣವಾಗಿತ್ತು.

ಹೀಗೆ ಒಳಗೊಳಗೇ ಚಿಂತಿಸಿ ಕೊರಗುತ್ತಿದ್ದ ಕಲ್ಯಾಣಿಯವರ ಆರೋಗ್ಯ ದಿನೇ ದಿನೇ ಕ್ಷೀಣಿಸುತ್ತಾ ಬಂತು. ಸಕಲೇಶಪುರದ ತಂಪಾದ ವಾತಾವರಣ ಕೂಡಾ ಅವರಿಗೆ ಸರಿ ಹೊಂದಲಿಲ್ಲ. ಕೃಶರಾಗತೊಡಗಿದರು. ಅಮ್ಮನ ಈ ಸ್ಥಿತಿಯನ್ನು ಕಂಡು ಮಕ್ಕಳಿಗೆ ಬಹಳ ಚಿಂತೆಯಾಯಿತು. ಸಕಲೇಶಪುರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರಿಗೆ ತೋರಿಸಿದಾಗ ಅವರಿಗೆ ಕ್ಷಯರೋಗ ಬಂದಿರುವುದು ಪತ್ತೆಯಾಯಿತು.ಅಮ್ಮನ ಆರೋಗ್ಯ ಸರಿ ಇಲ್ಲವಲ್ಲ ಎಂದು ಮಕ್ಕಳು ಬಹಳವಾಗಿ ಕೊರಗಿದರು. ಮಕ್ಕಳ ಈಗಿನ ಪರಿಸ್ಥಿತಿಯನ್ನು ನೆನೆದು ಕಲ್ಯಾಣಿಯವರ ಮನ ಬಹಳ ವ್ಯಾಕುಲವಾಗಿತ್ತು. ಏನೇ ಔಷಧಿ ಕೊಟ್ಟರೂ ಅವರ ಕ್ಷಯ ರೋಗ ಇಳಿಮುಖವಾಗಲಿಲ್ಲ. ಮಾನಸಿಕವಾಗಿ ಅವರು ಬಹಳ ಕುಗ್ಗಿ ಹೋಗಿರುವುದರಿಂದ ಔಷಧಿಗಳು ಕೂಡಾ ಕೆಲಸ ಮಾಡುತ್ತಿಲ್ಲ ಎಂದು ವೈದ್ಯರು ಹೇಳಿದರು. ಚಿಕಿತ್ಸೆಯು ಫಲಕಾರಿ ಆಗದೇ ಕಲ್ಯಾಣಿಯವರನ್ನು ಮತ್ತೆ ಸುಮತಿಯ ಮನೆಗೇ ಕರೆದುಕೊಂಡು ಬಂದರು. ಅಮ್ಮ ಬದುಕಿರುವವರೆಗೂ ಇಲ್ಲಿಯೇ ಇರಲಿ ಎಂದು ಸುಮತಿ ಮತ್ತು ವೇಲಾಯುಧನ್ ತೀರ್ಮಾನ ಮಾಡಿದ್ದರು. ಉಳಿದ ಮಕ್ಕಳೆಲ್ಲಾ ಆಗಾಗ ಬಂದು ಅಮ್ಮನ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳುತ್ತಿದ್ದರು. ಅಮ್ಮನಿಗೆ ಬೇಕಾದ ಔಷಧಿಯನ್ನು ತಂದುಕೊಡುತ್ತಿದ್ದರು. ಪತ್ನಿಯ ಅನಾರೋಗ್ಯದ ವಿಷಯವನ್ನು ತಿಳಿದ ನಾರಾಯಣನ್ ಕೂಡಾ ಆಗಾಗ ಬಂದು ನೋಡಿ ಹೋಗುತ್ತಿದ್ದರು. ತನ್ನಿಂದ ಹೀಗೆಲ್ಲಾ ಆಯ್ತಲ್ಲಾ ಎನ್ನುವ ಕೊರಗು ನಾರಾಯಣನ್ ರವರನ್ನು ಕಾಡುತ್ತಿದ್ದ ಕಾರಣ ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಕಲ್ಯಾಣಿಯವರಿಗೆ ಅನ್ನ ನೀರು ಸೇರದಾಯ್ತು.  ತಮ್ಮ ಪ್ರೀತಿಯ ಅಮ್ಮನ ಸ್ಥಿತಿ ಕಂಡು ಮಕ್ಕಳಿಗೆ ಬಹಳ ಸಂಕಟವಾಗುತ್ತಿತ್ತು.

ಒಂದು ದಿನ ಮಕ್ಕಳೆಲ್ಲರೂ ಕಲ್ಯಾಣಿಯವರನ್ನು ನೋಡಲು ಬಂದರು. ನೀರು ಆಹಾರ ಸೇವಿಸದೇ ಕಲ್ಯಾಣಿಯವರು ಬಹಳ ನಿತ್ರಾಣರಾಗಿದ್ದರು. ಯಾರು ಕರೆದರೂ ಅರೆ ಕಣ್ಣು ತೆರೆದು ನೋಡಿ ಪುನಃ ಕಣ್ಣುಮುಚ್ಚಿ ಮಲಗುತ್ತಿದ್ದರು. ಇನ್ನು ಅಮ್ಮ ಬದುಕುವುದು ಕಷ್ಟ ಎಂದು ಮಕ್ಕಳಿಗೆ ತಿಳಿದು ಹೋಯ್ತು. ಕಲ್ಯಾಣಿಯವರು ಮಕ್ಕಳನ್ನು ಹತ್ತಿರ ಕರೆದು ಪತಿಯನ್ನು ನೋಡಬೇಕು ಎನ್ನುವ ಬಯಕೆ ವ್ಯಕ್ತ ಪಡಿಸಿದರು. ಇದನ್ನು ಅರಿತ ಎರಡನೆಯ ಮಗ ಅಪ್ಪನನ್ನು ಕರೆದುಕೊಂಡು ಬರಲು ಹೋದ. ಸ್ವಲ್ಪ ಹೊತ್ತಿಗೆಲ್ಲ ನಾರಾಯಣನ್ ಬಂದರು. ಮಕ್ಕಳೆಲ್ಲರೂ ಕಲ್ಯಾಣಿಯವರ ಬಳಿಯೇ ನಿಂತರು. ಪತಿಯನ್ನು ಕಂಡ ಕಲ್ಯಾಣಿಯ ಬಾಡಿ ಬಳಲಿದ ಮುಖದಲ್ಲಿ ಸಣ್ಣನಗು ಮೂಡಿ ಮಾಯವಾಯ್ತು. ಪತಿಯನ್ನು ಹತ್ತಿರ ಬರುವಂತೆ ಕರೆದರು. ಏನೋ ಹೇಳಬೇಕು ಎಂದು ಬಾಯ್ತೆರೆದರು. ಧ್ವನಿ ಹೊರಗೆ ಬರಲೇ ಇಲ್ಲ. ನೋಡು ನೋಡುತ್ತಲೇ ಕಲ್ಯಾಣಿಯವರ ಕುತ್ತಿಗೆ ಪಕ್ಕಕ್ಕೆ ವಾಲಿತು. ಕಲ್ಯಾಣಿಯವರು ಇಹಲೋಕ ತ್ಯಜಿಸಿದರು. ಮಕ್ಕಳಿಗೆ ಅದು  ತುಂಬಲಾರದ ನಷ್ಟವಾಗಿತ್ತು. ಅಮ್ಮನ ಆರೋಗ್ಯ ಕ್ಷೀಣಿಸುತ್ತಾ ಇದ್ದರೂ ಇಷ್ಟು ಬೇಗ ತಮ್ಮನ್ನೆಲ್ಲಾ ಅಗಲಿ ಮತ್ತೆಂದೂ ಬಾರದ ಲೋಕಕ್ಕೆ ಹೋಗುವರು ಎಂದು ಮಕ್ಕಳು ಯಾರೂ ಯೋಚಿಸಿರಲಿಲ್ಲ. ನಾರಾಯಣನ್ ಯಾರ ಬಳಿಯೂ ಮಾತನಾಡದೇ ಪತ್ನಿಯ ಪಾರ್ಥಿವ ಶರೀರವನ್ನು ನೋಡುತ್ತಾ ಕುಳಿತುಬಿಟ್ಟರು.  ಹತ್ತಿರ ಸಂಬಂಧಿಕರಿಗೆ ವಿಷಯ ತಿಳಿಸಿದರು. ಕೇರಳದಿಂದ ಅಷ್ಟು ದೂರ ಯಾರೂ ಬರಲು ಸಾಧ್ಯವಿರಲಿಲ್ಲ. ಅಲ್ಲಿಂದ ಹೊರಟರೆ ಇಲ್ಲಿಗೆ ತಲುಪಲು ದಿನಗಳು ಹಿಡಿಯುತ್ತಿತ್ತು. ಆದರೂ ಟೆಲಿಗ್ರಾಂ ಮುಖಾಂತರ ವಿಷಯವನ್ನು ತಲುಪಿಸಿದರು. ಅನಾರೋಗ್ಯದಿಂದ ಕಲ್ಯಾಣಿಯವರು ಮರಣ ಹೊಂದಿದ ಕಾರಣ ಹೆಚ್ಚು ಹೊತ್ತು ಶರೀರವನ್ನು ಇಡುವಂತೆ ಇರಲಿಲ್ಲ. ಹಾಗಾಗಿ ನಾಯರ್ ಸಂಪ್ರದಾಯದ ಪ್ರಕಾರ ಎಲ್ಲಾ ವಿಧಿವಿಧಾನಗಳನ್ನು ಆದಷ್ಟೂ ಬೇಗ ಮಾಡಿ ಮುಗಿಸಿದರು. 

ಸುಮತಿ ಮತ್ತು ವೇಲಾಯುಧನ್ ಅವರು ವಾಸವಿದ್ದ ಮನೆಯ ಹಿಂದೆ ಇದ್ದ ಜಾಗದಲ್ಲಿ ಕಲ್ಯಾಣಿಯವರ ದೇಹವನ್ನು ಸಂಸ್ಕಾರ ಮಾಡಲಾಯಿತು. ಕಲ್ಯಾಣಿಯವರ ಆತ್ಮಶಾಂತಿಗಾಗಿ ಮಾಡಬೇಕಾದ ಎಲ್ಲಾ ವಿಧಿವಿಧಾನವನ್ನು ಶಾಸ್ತ್ರೋಕ್ತವಾಗಿ ಮಾಡಲಾಯಿತು. ಹದಿನಾರನೆಯ ದಿನದ ಪುಣ್ಯಕಾರ್ಯವನ್ನು ಮಾಡಿ ಮುಗಿಸಿದರು. ಆದರೆ ಅಮ್ಮನ ಅಗಲಿಕೆಯ ನೋವು ಮಕ್ಕಳಿಗೆ ಸಹಿಸಲು ಸಾಧ್ಯವಾಗಲಿಲ್ಲ. 

ಆಸೆಯಿಂದ ಮಗ ಅಮ್ಮನನ್ನು ಸಕಲೇಶಪುರಕ್ಕೆ ಕರೆದುಕೊಂಡು ಬಂದಿದ್ದ. ಆದರೆ ಅವರು ಹೆಚ್ಚುದಿನ ಜೊತೆ ಇರಲಿಲ್ಲ. ಸಣ್ಣ ವಯಸ್ಸಿನಲ್ಲಿ ಅಪ್ಪನ ಕಾರಣದಿಂದ ಅಮ್ಮನಿಂದ ದೂರ ಇದ್ದೆವು. ಈಗಲಾದರೂ ಅಮ್ಮನ ಜೊತೆ ಇರುವ ಭಾಗ್ಯ ನಮಗೆ ದೊರೆಯುತ್ತದೆ ಎಂದು ಆಸೆಯಿಂದ ಇದ್ದರೆ ಹೀಗೆ ಎಲ್ಲರನ್ನೂ ಅನಾಥರನ್ನಾಗಿ ಮಾಡಿ ಹೋಗುತ್ತಾರೆ ಎಂದು ಮಕ್ಕಳು ತಿಳಿದಿರಲಿಲ್ಲ. ಅಮ್ಮನ ಪ್ರೀತಿಯನ್ನು ಮತ್ತೊಮ್ಮೆ ಅನುಭವಿಸುವ ಭಾಗ್ಯ ಬಂದಾಗ ಅದನ್ನು ಕೂಡಾ ವಿಧಿ ಕಿಟ್ಟುಕೊಂಡಿತು. ಈಗ ತಂಗಿಯನ್ನು ಯಾರು ನೋಡಿಕೊಳ್ಳುವುದು ಎಂಬ ಸಮಸ್ಯೆಯೂ ಉದ್ಭವಿಸಿತು. ಏಕೆಂದರೆ ಅವರವರ ಜೀವನ ಕಟ್ಟಿಕೊಳ್ಳಲು ಎಲ್ಲರೂ ಹೆಣಗಾಡುತ್ತಿದ್ದರು. ಕೊನೆಗೆ ತಂಗಿಯನ್ನು ಕಲ್ಯಾಣಿಯವರ ತವರಿನಲ್ಲಿ ಬಿಡುವುದು ಎಂದು ತೀರ್ಮಾನ ಮಾಡಲಾಯಿತು. ಅಲ್ಲಿಯಾದರೆ ಅವರು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬ ಧೈರ್ಯವಿತ್ತು. ಅಮ್ಮನನ್ನು ಕಳೆದುಕೊಂಡ ಆ ಹುಡುಗಿ ಈಗ ಅಕ್ಷರಶಃ ತಬ್ಬಲಿ ಆದಂತೆ ಆಯಿತು. ಅಕ್ಕಂದಿರಿಬ್ಬರಿಗೂ ಅವಳ ಜವಾಬ್ದಾರಿ ವಹಿಸುವುದು ಕಷ್ಟವಾಗಿತ್ತು. ಏಕೆಂದರೆ ಅವರಿಬ್ಬರ ಪತಿಯರ ಸಂಪಾದನೆ ಹೆಚ್ಚೇನೂ ಇರಲಿಲ್ಲ. ಅವಳ ಅಣ್ಣಂದಿರು ಈಗ ತಾನೇ ಸಣ್ಣ ಪುಟ್ಟ ಕೆಲಸಗಳನ್ನು ಹುಡುಕಿಕೊಂಡು ಅವರ ಹೊಟ್ಟೆ ಹೊರೆಯುತ್ತಿದ್ದರು.

ಇನ್ನು ನಾರಾಯಣನ್ ತನಗೆ ಹೀಗೂ ಒಬ್ಬಳು ಮಗಳು ಇರುವಳು ಎನ್ನುವ ಚಿಂತೆ ಇಲ್ಲದಂತೆಯೇ ಇರುವರು.

ಹಾಗಾಗಿ ಕಲ್ಯಾಣಿಯವರ ತವರಿಗೆ ಕಳುಹಿಸುವುದು ಕ್ಷೇಮವೆಂದು ಎಲ್ಲರಿಗೂ ಅನಿಸಿತು


Leave a Reply

Back To Top