ಸಾವಿಲ್ಲದ ಶರಣರು ಮಾಲಿಕೆ-ಅಪ್ರತಿಮ ಸಮಾಜ ಸುಧಾರಕ ಕುದ್ಮಲ್ ರಂಗರಾವ-ಡಾ.ಶಶಿಕಾಂತ್ ಪಟ್ಟಣ ರಾಮದುರ್ಗಪೂನಾ

ವ್ಯಕ್ತಿ ತನ್ನ ಜಾತಿ ಶ್ರೇಷ್ಠತೆ ತೊರೆದು ಬ್ರಾಹ್ಮಣ ತೊರೆದು ದಲಿತರಿಗಾಗಿ ಶ್ರಮಿಸಿದ ಅಪ್ರತಿಮ ಸಾಮಾಜಿಕ ಚಳುವಳಿಯ ನಾಯಕರು.

29-06-1859 – ರಂಗರಾಯರ  ಜನನ

ಅದು 1880 ರ ಆಸುಪಾಸಿನ ದಿನಗಳು, ಸೌತ್ ಕೆನರಾ ಜಿಲ್ಲೆಯ ಅಂದರೆ ಈಗಿನ ದಕ್ಷಿಣ ಕನ್ನಡ ಜಿಲ್ಲೆಯ ಬ್ರಿಟೀಷ್ ನ್ಯಾಯಾಧೀಶರು ಸಿಡಿಮಿಡಿಗೊಂಡಿದ್ದರು. ಕಾರಣ ಆ ನ್ಯಾಯಾಲಯಕ್ಕೆ ಹೊಸತಾಗಿ ಒಬ್ಬ ದಲಿತ ವ್ಯಕ್ತಿ ಬೆಂಚ್ ಕ್ಲರ್ಕ್ ಆಗಿ ನೇಮಕಗೊಂಡಿದ್ದರು. ಅವರ್ಣೀಯನೊಬ್ಬ ಮುಟ್ಟಿದ ಕಡತಗಳನ್ನು ತಾವು ಮುಟ್ಟುವುದಿಲ್ಲ ವೆಂದು ಕಚೇರಿಯಲ್ಲಿದ್ದ ಸವರ್ಣೀಯರು, ಹಾಗೆಯೇ ವಕೀಲರು ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸುವ ಮಟ್ಟಿಗೆ ಹೋಗಿದ್ದರು. ಸೆಷನ್ಸ್ ನ್ಯಾಯಾಧೀಶರಿಗೆ ಭಾರತವನ್ನು ಪ್ಲೇಗಿನಂತೆ ಕಾಡುತ್ತಿದ್ದ ಅಸ್ಪೃಷ್ಯತೆಯ ಸಮಸ್ಯೆಯ ಅರಿವಿತ್ತಾದರೂ ಅದು ವಿದ್ಯಾವಂತ ಸಮಾಜದಲ್ಲಿಯೂ ಇಷ್ಟು ಹಾಸುಹೊಕ್ಕಾಗಿರುವುದನ್ನು ನೋಡಿ ರೇಜಿಗೆಯಾಗಿತ್ತು. ಅಂದು ಕೋರ್ಟಿಗೆ ಹಾಜರಾಗಿದ್ದ ಯುವ ವಕೀಲ ಕುದ್ಮಲ್ ರಂಗರಾಯರನ್ನು ಆ ಬ್ರಿಟೀಷ್ ಜಡ್ಜ್  ತರಾಟೆಗೆ ತೆಗೆದುಕೊಂಡಿದ್ದರಂತೆ. ‘ಏನ್ರಿ ಇದು ಮಿ. ರಾವ್, ಅದ್ಯಾವ ಕಾಲದಲ್ಲಿ ಬದುಕುತ್ತಿದೇರಿ ನಿಮ್ಮ ಜಿಲ್ಲೇ ? ಇನ್ನೂ ಮನುಷ್ಯ ಮನುಷ್ಯರ ನಡುವೆ ಈ ಪಾಟೀ ತಾರತಮ್ಯ ಇದ್ರೆ ಈ ದೇಶ ಹೆಂಗ್ರೀ ಉದ್ಧಾರ ಆಗುತ್ತೇ ?’. 

ಆದಾಗಲೇ ಸಾಕಷ್ಟು ಪುರೋಗಾಮಿ ವಿಚಾರಗಳನ್ನು ಮೈಗೂಡಿಸಿಕೊಂಡಿದ್ದ ಯುವ ವಕೀಲ ರಂಗರಾವ್, ತಮ್ಮ ಊರಿನ ಬಗ್ಗೆ ಬ್ರಿಟೀಷ್ ನ್ಯಾಯಾಧೀಶ ತಳೆದಿದ್ದ ದೃಷ್ಠಿಕೋನವನ್ನು ಕಂಡು ತೀರಾ ವಿಚಲಿತರಾದರು. ತನ್ನ ಮೇಲ್ಜಾತಿಯ ಸಮಾಜ ತನ್ನ ಸಹ ನಾಗರೀಕರನ್ನು ಪಶುಗಳಂತೆ ನಡೆಸಿಕೊಂಡ ಪರಿಯನ್ನು ಚಿಂತಿಸತೊಡಗಿದರು. ಮೇಲು ಕೀಳು ಎಂಬುದು ಮೇಲ್ಜಾತಿಯವರಲ್ಲಿ ಸಹಜವೆಂಬಂತೆ ಹಾಸುಹೊಕ್ಕಾಗಿರುವುದನ್ನು ಕಂಡುಕೊಂಡಾಗ ಮತ್ತು  ತಾನೂ ಅಂತಹದೇ ವ್ಯವಸ್ಥೆಯ ಭಾಗವಾಗಿ ಇಷ್ಟುಕಾಲ ಬದುಕಿದ್ದೆನಲ್ಲಾ ಎಂಬ ಭಾವನೆಯು ಮನಸ್ಸಿನಲ್ಲಿ ಹಾದುಹೋಗಿ ಲಜ್ಜೆ‌, ಅವಮಾನಗಳಿಂದ ಅವರ ತಲೆ ತಗ್ಗಿಹೋಯಿತು. 

ರಂಗರಾಯರು ಅನ್ನ ನೀರುಗಳನ್ನು ಮರೆತು ಯೋಚಿಸಿದರು. ಅದು ಕರ್ಮಠತನವೇ ಆಚರಣೆಯ ಭಾಗವಾಗಿದ್ದ ಕಾಲ. ಅಸ್ಪೃಷ್ಯತೆಯನ್ನು ಸಲೀಸಾಗಿ ಧಾರ್ಮಿಕ ಆಚರಣೆಗಳ ಭಾಗವಾಗಿಸಿ, ಶೋಷಿತರ ಮೂಲಕವೇ ಅಶೃಷ್ಯತೆಯನ್ನು ಅಧಿಕೃತಗೊಳಿಸಿ ಅವರ ಕತ್ತಿಯಿಂದಲೇ ಅವರ ಕೊರಳನ್ನು ಕೊಯ್ಯಿಸುವಂತಹಾ ವಿದ್ರೋಹದ ಕಾಲ.‌ ಇಂತಹ ಕಾಲದಲ್ಲಿ ಸಮಾಜದಿಂದ ಹೊರದಬ್ಬಲ್ಪಟ್ಟಿದ್ದ ಈ ನೆಲದ ನಿಜದ ಹಕ್ಕುದಾರರನ್ನು ಮತ್ತೆ ಸಮಾಜಕ್ಕೆ ಕರೆತರುವುದು ಹೇಗೆ? ಧರ್ಮದ ಮದರಸವನ್ನು ಕುಡಿದು ಮತ್ತವಾದ ಮದ್ದಾನೆಯಂತಿರುವ ಈ ಸಮಾಜಕ್ಕೆ ಅಂಕುಶ ಹಾಕುವುದು ಹೇಗೆ ? ಯಾವ ದಾರಿಯ ಮೂಲಕ ಅದು  ಸಾಧ್ಯವಾಗಬಹುದು? ಕೆಲವರಿಗೆ ಮನೆಗೆ ಪ್ರವೇಶವಿಲ್ಲ, ಕೆಲವರಿಗೆ ದೇವಸ್ಥಾನಗಳಿಗೆ ಪ್ರವೇಶವಿಲ್ಲ , ಕೆಲವರಿಗೆ ಊರಿಗೇ ಪ್ರವೇಶವಿಲ್ಲ !! ಇನ್ನು ಇಂತಹವರ ಪರ ನಿಂತರೆ ತನಗೆ ತನ್ನ ಕುಟುಂಬ , ಸಮಾಜ ಮತ್ತು‌ ಬಂಧುಗಳೇ ಬಹಿಷ್ಕಾರ ಹಾಕಬಹುದು.  ರಂಗರಾಯರು ಯೋಚಿಸುತ್ತಾ ಹೋದಂತೆ ಮತ್ತಷ್ಟು ಹೈರಾಣಾಗಿ ಹೋದರು. 

ದೇವಸ್ಥಾನಗಳಿಗೆ ಪ್ರವೇಶ ನಿಷಿದ್ದವಿರುವ ಜಾತಿಗಳಿಗೆ ಇನ್ನೊಂದು ದೇವಾಲಯ ಕಟ್ಟಿಸಿಕೊಡಬಹುದು ಆದರೆ ಊರ ಪ್ರವೇಶವೇ ನಿಷಿದ್ಧವಾಗಿರುವವರಿಗೆ ಇನ್ನೊಂದು ಪ್ರತಿನಗರವನ್ನು ಸೃಷ್ಠಿಸುವುದು ಹೇಗೆ ಸಾಧ್ಯ? ಊರ ಹೊರಗೆಯೇ ಶಾಲೆ ಕಟ್ಟಿಸಿದರೇ ? ರಂಗರಾಯರ ತಲೆಯಲ್ಲಿ ಕ್ರಾಂತಿಯ ಮಿಂಚು ಹೊಳೆದಾಗಿತ್ತು. ಮಿಂಚು ಸಿಡಿಲಾಗಿ ಅಪ್ಪಳಿಸಲು ಇನ್ನೆಷ್ಟು ಕಾಲಬೇಕು ? ರಂಗರಾಯರು ವಕೀಲ ಕೋಟನ್ನು ಕಳಚಿದರು, ನಗನಾಣ್ಯಗಳನ್ನು ಮಾರಿದರು , ಜಮೀನನ್ನು ಅಡವಿಟ್ಟರು,

ಅಸ್ಪೃಷ್ಯರೊಡನೆ ಸಹಾನುಭೂತಿ ತೋರಿಸುವುದೆಂದರೆ ಮೊದಲು ತಾನು ತನ್ನ  ಮೇಲ್ಜಾತಿಯವನೆಂಬ ಪದವಿಯನ್ನು ತಿರಸ್ಕರಿಸುವುದು ಮಾತ್ರವಲ್ಲದೆ ಅದರ ಪ್ರತೀ ಸಂಕೇತಗಳನ್ನೂ ಸಂಪೂರ್ಣವಾಗಿ ನಾಶ ಪಡಿಸುವುದು ಎಂಬುದನ್ನು ಕಂಡುಕೊಂಡರು.‌ ಆ ನಿಟ್ಟಿನಲ್ಲಿ ಜನಿವಾರವನ್ನು ತ್ಯಾಗ ಮಾಡಿದರು, ಸಂಧ್ಯಾವಂದನೆ, ತ್ರಿಪುಂಡ್ರಕ ಧಾರಣೆ ಯನ್ನೂ ತ್ಯಜಿಸಿದರು, ಅಗತ್ಯ ಬಿದ್ದರೆ ತಾನು ಮೇಲ್ಜಾತಿಯ ಕುಟುಂಬದಲ್ಲಿ ಜನಿಸಿದುದಕ್ಕಾಗಿ ಇಡಲಾದ  ಹೆಸರನ್ನೂ ಬದಲಿಸಲು ಪಣ ತೊಟ್ಟರು,   ದಕ್ಷಿಣಪಥದಿಂದಲೇ ತನ್ನ ಕರ್ಮಸ್ಥಾನದ ಗಮ್ಯ ಸೇರಲು ಸಾಧ್ಯ ಎಂಬ ವಿಚಾರವನ್ನು ಅರಿತರು.‌ 

ಸೌತ್ ಕೆನರಾ ಜಿಲ್ಲೆಯ ಮೂಲೆ ಮೂಲೆಗಳಲ್ಲಿ  ಸಮಾಜದಿಂದ ಬಹಿಷ್ಕೃತರಾಗಿದ್ದ ಸಮುದಾಯಗಳ ಜನರನ್ನು ಬೇಟಿಯಾದರು. ತನ್ನ ವಕೀಲ ವೃತ್ತಿಯ ಸ್ಥಾನಮಾನವನ್ನು ಬದಿಗಿಟ್ಟು ಸಾಮಾನ್ಯನಂತೆ ಅವರೊಡನೇ ಒಡನಾಡಿದರು, ಅವರೊಡನೇ ಊಟ ಮಾಡಿದರು , ಅವರ ಕೊಟ್ಟದಲ್ಲಿಯೇ ಮಲಗಿದರು.  

ಜಿಲ್ಲೆಯ ಮೂಲೆ ಮೂಲೆಗಳಲ್ಲಿ ದಲಿತರ ಮಕ್ಕಳಿಗೋಸ್ಕರ ಶಾಲೆಗಳನ್ನು ತೆರೆದು ಅವುಗಳಿಗೆ ‘ಪಂಚಮ ಶಾಲೆಗಳು’ ಎಂಬ ಹೆಸರಿಡಲು ಯೋಚಿಸಿದರು.‌  ಅತ್ತಾವರ, ಬಾಬುಗುಡ್ಡೆ,  ಕಂಕನಾಡಿ, ದಡ್ಡಲ್ ಕಾಡು, ನೇಜಾರು, ಬೈಲೂರು, ಮೂಲಿಕಿ, ಬನ್ನಂಜೆ, ಉಡುಪಿ ಪ್ರದೇಶಗಳಲ್ಲಿ ಪಂಚಮ ಶಾಲೆಗಳನ್ನು ಹಂತ ಹಂತವಾಗಿ ತೆರೆಯಲು ಜಿಲ್ಲೆಯ ಕೊರಗ ಸಮುದಾಯದ ಹಿರಿಯರು ಟೊಂಕಕಟ್ಟಿ ನಿಂತರು.  

ಮಕ್ಕಳನ್ನು ಪಂಚಮ ಶಾಲೆಗೆ ಬರುವಂತೆ ಪ್ರೋತ್ಸಾಹಿಸಲು ರಂಗರಾಯರು ಮಧ್ಯಾಹ್ಮದ ಊಟದ ಯೋಜನೆಯನ್ನು ಜಾರಿಗೆ ತಂದರು ಮಾತ್ರವಲ್ಲದೆ ಮಕ್ಕಳ ಪೋಷಕರಿಗೆ ದಿನವೊಂದಕ್ಕೆ ಎರಡು ಪೈಸೆಗಳನ್ನು ನೀಡುವ ಯೋಜನೆಯನ್ನೂ ರೂಪಿಸಿದರು.‌

ಕೊರಗ ಸಮುದಾಯದ ಹಿರಿಯರು ಹೇಳಿಕೇಳಿ ಈ ದಕ್ಷಿಣ ಕನ್ನಡ ಜಿಲ್ಲೆಯನ್ನು ಅಳಿದವರು, ಶತಮಾನಗಳ ಹಿಂದೆಯೇ ತುಳುನಾಡಿನ ದೊರೆ ಹುಬಾಷಿಕರನ್ನು ಕೊಂದು, ಅವರ ಪ್ರಜೆಗಳನ್ನು  ನಾಡಿನಿಂದಲೇ ಹೊರಗಟ್ಟಲಾಗಿತ್ತು. ಮಾತ್ರವಲ್ಲದೆ ಹುಬಾಷಿಕರ ಪ್ರಜೆಗಳು ಮತ್ತು ಸಂತತಿಯು ಯಾವ ಕಾಲಕ್ಕೂ ತಮ್ಮ ಪೂರ್ವ ವೈಭವವನ್ನು ನೆನಪಿಸದ ರೀತಿಯಲ್ಲಿ ಸಾಮಾಜಿಕ ಕಟ್ಟಲೆಯನ್ನು ಹೆಣೆಯಲಾಗಿತ್ತು.‌ ಆದರೆ ತಾವು ಒಂದೊಮ್ಮೆ ತುಳುನಾಡನ್ನು ಆಳಿದವರೆಂಬ ಹೆಗ್ಗಳಿಕೆಯು  ಕೊರಗ ಸಮುದಾಯದೊಳಗೆ ವಂಶವಾಹಿನಿಯಂತೆಯೇ ಹರಿದು ಬಂದಿತ್ತು. ಕಷ್ಟ ಕಾರ್ಪಣ್ಯಗಳನ್ನು ಸಹಿಸಿ ಕಾಡಿನಲ್ಲಿ  ಶತಮಾನಗಳಿಂದ ಕಡು ಕಷ್ಟದ ದಿನಗಳನ್ನು ಕಳೆದಿದ್ದ ಸಮುದಾಯವು ಇನ್ನೊಬ್ಬ ಬಹಿಷ್ಕೃತ ರಂಗರಾಯನನ್ನು ತಮ್ಮವನಂತೇ ಅಪ್ಪಿಕೊಂಡಿತು.  ಹೀಗೆ ಒಂದು ಮಾತಿನಲ್ಲಿ ಹೇಳುವುದಾದರೆ ಕುದ್ಮಲ್ ರಂಗರಾಯರ ಮಹಾನ್ ವ್ಯಕ್ತಿತ್ವದ ರೂಪಣೆಯ ಹಿಂದೆ ಕೊರಗ ಸಮುದಾಯದ‌ ಹಿರಿಯರ ಶ್ರಮ, ಪ್ರೀತಿ, ವಿಶ್ವಾಸ, ಧೈರ್ಯ, ತ್ಯಾಗಗಳೂ ಇವೆ. 

ತಮ್ಮ ಯೋಜನೆಗಳಿಗೆ ಸಮಾಜದಲ್ಲಿ ತುಳಿತಕ್ಕೊಳಗಾದವರಿಂದ ಪ್ರೋತ್ಸಾಹ ದೊರೆತುದನ್ನು ಕಂಡು ನೆಮ್ಮದಿಯ ನಿಟ್ತುಸಿರು ಬಿಟ್ಟ ರಂಗರಾಯರು ಆ ಯೋಜನೆಗೆ ಒಂದು ಸಾಂಸ್ಥಿಕ ಸ್ವರೂಪವನ್ನು ನೀಡುವ ಕೈಂಕರ್ಯದಲ್ಲಿ ತೊಡಗಿದರು.‌  1897ರಲ್ಲಿ ‘ಡಿಪ್ರೆಸ್ಸ್ಡ್ ಕ್ಲಾಸಸ್ ಮಿಷನ್ ‘  ಸ್ಥಾಪನೆ ಮಾಡಿದರು.‌ ಸಮಾಜದಲ್ಲಿ ತುಳಿತಕ್ಕೊಳಗಾದವರ ಪರವಾಗಿ ಡಿಪ್ರೆಸ್ಡ್ ಕ್ಲಾಸ್ ಮಿಷನ್ ಬೆಂಬಲವಾಗಿ ನಿಂತಿತು. ಜಮೀನುದಾರರ ಕೈಕೆಳಗೆ ಜೀತ‌ ಮಾಡುತ್ತಿದ್ದ ಜನರನ್ನು ಜೀತ ಮುಕ್ತಗೊಳಿಸಲು ತೊಡಗಿತು, ತುಳಿತಕ್ಕೊಳಗಾದವರಿಗೆ ಭೂಮಿಯಲ್ಲಿ ಒಡೆತನ ನೀಡಲು ಸರಕಾರವನ್ನು ಒತ್ತಾಯಿಸಿತು.‌ ಸರಕಾರವು ಮುಂದೆ ತುಳಿತಕ್ಕೊಳಗಾದವರಿಗೆ ಸರಕಾರಿ ಜಮೀನನ್ನು ಮೀಸಲು ಇಡಲು ಕೂಡಾ ಇಂತಹ ಹಕ್ಕೊತ್ತಾಯಗಳೇ ಕಾರಣವಾಯಿತು. ಇಂದಿಗೂ ಕೂಡಾ ಡಿ.ಸಿ ಮನ್ನಾ (ಡಿಪ್ರೆಸ್ಡ್ ಕ್ಲಾಸ್ ರಿಸರ್ವ್) ಜಮೀನುಗಳನ್ನು ಹಲವು ಗ್ರಾಮಗಳಲ್ಲಿ‌ ನೋಡಬಹುದು.‌ 

ಸಾರಸ್ವತ ಬ್ರಾಹ್ಮಣ ವಕೀಲ ರಂಗರಾಯರು ಅಸ್ಪೃಷ್ಯರ ಸಂಗದಲ್ಲಿ ಬಿದ್ದದ್ದನ್ನು ನೋಡಿ ಸಮಾಜವು ಹಲ್ಲು ಕಡಿಯಿತು, ರಂಗರಾಯರ ಕುಟುಂಬವೇ ಬಹಿಷ್ಕಾರಕ್ಕೊಳಗಾಯಿತು. ರಂಗರಾಯರು ಕಾಲಿಟ್ಟ ಕುಲೀನರ ಬೀದಿಗಳನ್ನು ಜನರು ಹಸುವಿನ ಸೆಗಣಿಯಿಂದ‌ ಸ್ವಚ್ಛಗೊಳಿಸಿ ನೆಟಿಕೆ ಮುರಿದರು.  ಈ ಸಂಕ್ರಮಣ ಕಾಲದಲ್ಲಿಯೇ ಕುದ್ಮಲ್ ರಂಗರಾಯರ ಮಗಳು ದೊಡ್ಡವಳಾಗಿ ವಿವಾಹವೂ ಆಗಿತ್ತು.‌ ಆದರೆ ಆಕೆ ಗಂಡನನ್ನು ಕಳೆದುಕೊಂಡು ವಿದವೆಯಾಗಿದ್ದರು.  ವಿದವಾ ವಿವಾಹವೇ ನಿಷಿದ್ದವಾಗಿದ್ದ ಕಾಲದಲ್ಲಿ ರಂಗರಾಯರು ಇನ್ನೊಮ್ಮೆ ದೊಡ್ಡ ಕ್ರಾಂತಿಯನ್ನೇ ಮಾಡಿಬಿಟ್ಟರು. ತನ್ನ ಮಗಳಿಗೆ ಎರಡನೇ ಮದುವೆಯನ್ನು ಮಾಡಿಸಲು ಪಣತೊಟ್ಟರು, ಅದೂ ಕೂಡಾ ಅಂತರ್ಜಾತೀಯ ಮದುವೆ ! ಕುಮಾರಮಂಗಲಂನಲ್ಲಿನ ಓರ್ವ ಜಮೀನುದಾರನ ಮಗ ಸುಬ್ಬರಾಯ ಎಂಬ ತಮಿಳು ದ್ರಾವಿಡರನ್ನು ತನ್ನ ಮಗಳು ರಾಧಾಬಾಯಿಗೆ ಎರಡನೇ ಸಂಬಂಧವಾಗಿ ವಿವಾಹವೇರ್ಪಡಿಸಿದರು.  ಅಲ್ಲಿಗೆ ಸಮಾಜ ರಂಗರಾಯರ ಆಸೆ ಬಿಟ್ಟಿತು.‌  ಆ ಸುಬ್ಬರಾಯ ರಾಧಾ ದಂಪತಿಗಳ ಮಗನೇ ಮೋಹನ ಕುಮಾರ ಮಂಗಲಂ. ಅವರ ಮಗ ರಂಗರಾಜನ್ ಮುಂದೆ ಕಾಂಗ್ರೆಸ್ ಪಕ್ಷದಲ್ಲಿ ಚುನಾಯಿತರಾಗಿ ಮಂತ್ರಿಯೂ ಆಗಿದ್ದರು.  ಮುಂದೊಮ್ಮೆ ಮಂಗಳೂರಿಗೆ ಬೇಟಿ ನೀಡಿದ್ದ ಗಾಂಧೀಜಿ ಕುದ್ಮಲ್ ರಂಗರಾಯರು ತನಗೆ ಗುರು ಸಮಾನರು, ಅವರ ವಿದವಾ ವಿವಾಹ ಮತ್ತು ಅಂತರ್ಜಾತಿ ವಿವಾಹದ ಮೇಲ್ಪಂಕ್ತಿಯನ್ನು ಅನುಸರಿಸಿಯೇ ತಾನು ತನ್ನ ಮಗನನ್ನು  ಚಕ್ರವರ್ತಿ ರಾಜಗೋಪಾಲಾಚಾರ್ಯರ‌ ಮಗಳೊಂದಿಗೆ ವಿವಾಹ ಮಾಡಿಕೊಡಲು ಸಾಧ್ಯವಾಯಿತು ಎಂದು ಹೇಳಿದ್ದರು.‌

ರಂಗರಾಯರು ತಮ್ಮ ಜಾತಿವಿನಾಶದ ಸಂಕಲ್ಪದಂತೆ ಹಿಂದೂ ಬ್ರಾಹ್ಮಣ್ಯವನ್ನು ತ್ಯಜಿಸಲು ನಿರ್ಧರಿಸಿದರು. ಬ್ರಹ್ಮಸಮಾಜವನ್ನು‌ ಸೇರಿ ಸ್ವಾಮಿ ಈಶ್ವರಾನಂದರಾದರು. ಪಂಚಮ ಬ್ರಹ್ಮನಾಗಿ ತನ್ನ ಆಸ್ತಿಪಾಸ್ತಿಗಳನ್ನು ಸಮಾಜಕ್ಕೆ ತ್ಯಾಗ ಮಾಡಿದರು. ತನ್ನ ಮೃತ ಶರೀರಕ್ಕೆ ತನಗೆ ಅತೀ ಪ್ರೀತಿ ಪಾತ್ರರಾದ ಕೊರಗ ಸಮುದಾಯದ ಮಕ್ಕಳೇ ಹೆಗಲುಕೊಡಬೇಕು ಎಂದು ಉಯಿಲು ಬರೆದಿಟ್ಟರು.‌  ಆತ್ತಾವರ ಬಾಬುಗುಡ್ಡೆಯಲ್ಲಿ ಕುದ್ಮಲ್ ರಂಗರಾಯರ ಶಾಲೆಯಿಂದ‌ಅಣತಿ ದೂರದಲ್ಲಿ ನಂದಿಗುಡ್ಡೆ ಸ್ಮಶಾನವಿದೆ, ಅದರ ಪಕ್ಕದಲ್ಲಿ ಕುದ್ಮಲ್ ರಂಗರಾಯ ಈಶ್ವರಾನಂದರ ಸಮಾಧಿಯಿದೆ. ಅದರ ಮೇಲೆ ಕುದ್ಮಲ್ ರಂಗರಾಯರು ತಾನು ಹೇಳುತ್ತಿದ್ದ‌ ಕನಸುಗಳನ್ನು  ಬರೆಯಲಾಗಿದೆ.‌

” ನನ್ನ ಶಾಲೆಯಲ್ಲಿ ಕಲಿತ ಒಬ್ಬ ದಲಿತ ವಿದ್ಯಾರ್ಥಿಯು ತನ್ನ ಸಾಧನೆಯಿಂದ ಕಾರುಕೊಂಡುಕೊಂಡು ಅದರ ಚಕ್ರದ ದೂಳು ನನ್ನ ತಲೆಯ ಮೇಲೆ ಬಿದ್ದಾಗ ನನ್ನ ಜನ್ಮ ಸಾರ್ಥಕವಾಗುವುದು 

ಇಂತಹ ಒಬ್ಬ ಅಪರೂಪದ ಅಪೂರ್ವ ಕ್ರಾಂತಿಕರಿ

ಶ್ರೀ ಕುದ್ಮಲ್ ರಂಗರಾಯರು ನಾಡು ಕಂಡ  ಸಾವಿಲ್ಲದ ಶರಣರು.

________________________________

4 thoughts on “ಸಾವಿಲ್ಲದ ಶರಣರು ಮಾಲಿಕೆ-ಅಪ್ರತಿಮ ಸಮಾಜ ಸುಧಾರಕ ಕುದ್ಮಲ್ ರಂಗರಾವ-ಡಾ.ಶಶಿಕಾಂತ್ ಪಟ್ಟಣ ರಾಮದುರ್ಗಪೂನಾ

  1. ಆಚರಣೆಯಲ್ಲಿ ತರಬೇಕು .ಹುಟ್ಟಿ ಬರಬೇಕು ಮತ್ತೆ ಕುದ್ಮುಲ್ ರಂಗರಾವ್ ಮಹಾತ್ಮರಿಗೂ ಮಹಾತ್ಮರು ….

  2. ಅಪರೂಪದ ವ್ಯಕ್ತಿತ್ವದ ಪರಿಚಯದ ಲೇಖನ ಸರ್

    ಡಾ ಗೀತಾ ಡಿಗ್ಗೆ

  3. ಅದ್ಭುತ ಲೇಖನ ಓದಲು ಹಚ್ಚುವ ಬರಹ ಸರ್

Leave a Reply

Back To Top