ಕಾವ್ಯ ಸಂಗಾತಿ
ವಿದ್ಯಾಲೋಕೇಶ್ ಮಂಗಳೂರು
ಅವಳೆಂದರೆ….
ಅವಳೆಂದರೆ…
ತನ್ನ ಬದುಕಿನ ತುಂಬಾ
ಕವಿದಿರುವ ಕತ್ತಲ ಲೆಕ್ಕಿಸದೆ
ಮಕ್ಕಳ ಬದುಕಿಗೆ ಬೆಳಕಾದವಳು.
ಅವಳೆಂದರೆ…
ತನ್ನೊಳಗೆ ಹೆಪ್ಪುಗಟ್ಟಿರುವ
ನೋವ ಅಡಗಿಸಿ
ತನ್ನವರಿಗೆ ನಗುವಿನ
ಸಿಹಿಯ ಹಂಚಿದವಳು.
ಅವಳೆಂದರೆ….
ತನ್ನೊಳಗೆ ಚೂರಾಗಿಸಿದ್ದ
ನೂರಾರು ಆಸೆ, ಕನಸುಗಳ
ಮಕ್ಕಳ ಕಣ್ಣಲಿ ತುಂಬಿ
ಕಾಣಬಯಸಿದವಳು.
ಅವಳೆಂದರೆ….
ತಾನು ಬದುಕಿದ ಒಂಟಿ
ಬದುಕಿನ ಬಿಸಿ ತನ್ನವರಿಗೆ
ತಾಕದಂತೆ ಬಣ್ಣ ಬಣ್ಣದ
ಬದುಕ ಕಟ್ಟಿ ಕೊಟ್ಟವಳು.
ಅವಳಿಲ್ಲದಿರೆ…
ಬೆಳಕ ದಾರಿಯಲಿ ಕಗ್ಗತ್ತಲು
ಕವಿದಂತೆ. ಮನೆ ತುಂಬ
ತುಂಬಿರುವ ಮಾತಿನ
ಗದ್ದಲದ ನಡುವೆಯು
ಸ್ಮಶಾನ ಮೌನ ಆವರಿಸಿದಂತೆ
ಅವಳೆಂದರೆ….
ದೇವರ ಪ್ರತಿರೂಪ
ಆಗಿರುವಳು. ಅವಳೆಂದರೆ
ಬೇರಾರು ಅಲ್ಲ ನನ್ನ
ಹೆತ್ತಬ್ಬೆಯಾಗಿರುವಳು
ವಿದ್ಯಾಲೋಕೇಶ್ ಮಂಗಳೂರು