“ಸಾವಿನ ಸನಿಹದ ಕ್ಷಣಗಳ ಎದೆ ಬಡಿತದ ಸಂಕಟಗಳು…”ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಸಾವು…..!!

ಬದುಕುವ ಆಸೆಯಿರುವವರಿಗೆ ಅದೊಂದು ಕ್ರೂರ ಪದ..!!  ಬಹುತೇಕ ಎಲ್ಲರಿಗೂ ಅಷ್ಟೇ ಈ ಪದ ಯಾರಿಗೂ ಹಿಡಿಸುವುದಿಲ್ಲ.

ಸಾವನ್ನು ಅತ್ಯಂತ ಪ್ರೀತಿಯಿಂದ ಕರೆಯುವುದೆಂದರೆ ಬದುಕನ್ನು ತಿರಸ್ಕರಿಸಿದಂತೆ…!!  ಸಾವು ಕೂಡ ಒಂದು ಸಂಭ್ರಮವೋ…ಸಂಕಟವೋ  ಎನ್ನುವುದನ್ನು ತಿಳಿಯಬೇಕಾದರೆ ನೀವೊಂದು ಸಲ ದೊಡ್ಡ ದೊಡ್ಡ ಆಸ್ಪತ್ರೆಯೊಳಗೆ ಇಲ್ಲವೇ  ಮೆಡಿಕಲ್ ಕಾಲೇಜಿನ ಮೆಡಿಕಲ್ ಆಸ್ಪತ್ರೆಯೊಳಗೆ,  ವಿಶೇಷವಾಗಿ ತುರ್ತು ಚಿಕತ್ಸೆಯ ಕೊಠಡಿಯೊಳಗೆ ಹೋಗಿ ಬನ್ನಿ…!!

ಆಗ ನಿಮಗೆ ಸಾವಿನ ಬಗ್ಗೆ ತುಂಬಾ ಪರಿಚಯವಾಗುತ್ತದೆ. ಸಾವನ್ನು ತೀರಾ ಹತ್ತಿರದಿಂದ ನೋಡಿದವರು ಅಳುತ್ತಾರೆ. ಹತಾಶೆಯಿಂದ ನಗುತ್ತಾರೆ. ಆದರೂ.. ಅವರಿಗೆ ಸಾವು ಬೇಕೇ ಬೇಕು ಎಂದರೆ, ಅವರು  ಸಾವು  ಬಯಸಲು  ನೂರಾರು ಕಾರಣಗಳಿರಬಹುದು…!!

ಅವನ ಹೃದಯ ಬಡಿತ ಹೆಚ್ಚು ಕಡಿಮೆಯಾಗಿ ಹೃದಯದ  ಒತ್ತಡಕ್ಕೆ ಒಳಗಾಗಿದ್ದಾನೆ.  ‘ಹಾರ್ಟ್ ಅಟ್ಯಾಕ್’ ಎನ್ನುವ ವೈರಿಯೊಡನೆ ಐ ಸಿ ಯು ವಿನಲ್ಲಿಯೂ ಹೋರಾಟ ಮಾಡುತ್ತಿದ್ದಾನೆ.

 ಇನ್ನೊಬ್ಬ ಅಪಘಾತಕ್ಕೀಡಾಗಿ, ಕೈಕಾಲು ಕಳೆದುಕೊಂಡು, ದೇಹದ ವಿವಿಧ ಭಾಗಗಳಿಗೆ ಬಲವಾದ ಪೆಟ್ಟು ಬಿದ್ದಿದರಿಂದ ಚೀರಾಡುತ್ತಾನೆ, ಅಳುತ್ತಾನೆ, “ನನ್ನಿಂದ ಇದನ್ನು ಸಹಿಸಲು ಸಾಧ್ಯವಿಲ್ಲ”  ಎಂದು ಜೋರಾಗಿ ಕೂಗುತ್ತಾನೆ.  

ಈ ಮೇಲಿನ ಎರಡು ಸನ್ನಿವೇಶಗಳು ಕಾಲ್ಪನಿಕವಲ್ಲ. ಇಂತಹ ಸಾವಿರಾರು ಘಟನೆಗಳು. ದಿನನಿತ್ಯ ನೋಡುವ ಅಲ್ಲಿನ  ಆಸ್ಪತ್ರೆಯ ಸಿಬ್ಬಂದಿಗಳಿಗೆ ಸಾವು  ಸರ್ವೇಸಾಮಾನ್ಯವಾಗಿರುತ್ತದೆ. ಅದನ್ನು ನಿತ್ಯ ನೋಡುವ ಇವರಿಗೆ  ಮನೋಭೂಮಿಕೆಯೂ ತುಂಬಾನೇ ಬದಲಾಗಿರುತ್ತದೆ. ದಿನಾಲು  ಸಾವನ್ನು ತುಂಬಾ ಹತ್ತಿರದಿಂದ ನೋಡುವ ಇವರು ಅದರ ಬಗ್ಗೆ ಅಷ್ಟೇ ಭಗೀರಥ ಪ್ರಯತ್ನದಿಂದ  ಚಿಕಿತ್ಸೆ ನೀಡಲು ಪ್ರಯತ್ನಿಸುತ್ತಾರೆ.   ಆದರೆ ಅವರು ಕೈ ಚೆಲ್ಲಿದ ನಂತರ ಸತ್ತ ವ್ಯಕ್ತಿಯ ಬಗ್ಗೆಯಾಗಲಿ, ಸಾವಿನ ಬಗ್ಗೆಯಾಗಲಿ,  ಆ ಸೂತಕದ ಪರಸ್ಥಿತಿಯ ಬಗ್ಗೆಯಾಗಲಿ ಯಾವತ್ತೂ ಅವರು ತಲೆಕೆಡಿಸಿಕೊಳ್ಳುವುದೇ ಇಲ್ಲ…!!  ಕಾರಣವಿಷ್ಟೇ ಸಾವು ಅವರಿಗೆ ತುಂಬಾ ಸನಿಹದ ಸ್ನೇಹಿತನಾಗಿರುತ್ತಾನೆ.  ವೈದ್ಯರಾಗಲಿ, ನರ್ಸ್ ಗಳಾಗಲಿ,  ಆಸ್ಪತ್ರೆಯ ಬೇರೆ ಬೇರೆ ದರ್ಜೆಯ ಉದ್ಯೋಗಿಗಳಾಗಲಿ ದಿನಾಲು ಇಂತಹ ಹಲವಾರು ಪ್ರಕರಣಗಳನ್ನು ನೋಡುತ್ತಿರುತ್ತಾರೆ. ಹಿರಿಯರ ಮಾತೊಂದಿದೆ, “ದಿನ ಸಾಯುವವರಿಗೆ ಅಳುವವರಾರು..?” ಎನ್ನುವಂತೆ ಅವರು   ಸಾವಿನ ಬಗ್ಗೆ  ನಿರ್ಲಿಪ್ತತೆ ತೋರುತ್ತಾರೆ.

ಆದರೆ  ಅದೇ ಸಾವನ್ನು ದೂರದಿಂದಲೇ ನೋಡಿದ  ಪಕ್ಕದ ಬೆಡ್ಡಿನ ರೋಗಿಗಳು ಅಥವಾ ಆ ರೋಗಿಗಳ ಸಂಬಂಧಿಕರು, ಅಪರಿಚಿತ  ಸ್ನೇಹಿತರು ನೋಡಿದಾಗ, “ಅಯ್ಯೋ ಪಾಪ ಹೀಗಾಗಬಾರದಿತ್ತು.  ಆತನಿಗೆ ಅಥವಾ ಅವಳಿಗೆ ಇಷ್ಟು ಬೇಗ ಸಾವು ಬರಬಾರದಿತ್ತು” ಎಂದು ಮಮತೆಯಿಂದ ಮರುಗುತ್ತಾರೆ ಅಷ್ಟೇ..!!

ಆದರೆ ಸತ್ತ ವ್ಯಕ್ತಿಯ ಹತ್ತಿರದ ಸಂಬಂಧಿಕರು, ಮಕ್ಕಳು, ಸಹೋದರರು, ಆಪ್ತ ಸ್ನೇಹಿತರು,  ಯುವಕರಾಗಿದ್ದರೆ  ತಂದೆ ತಾಯಿಗಳು… ಸಾವನ್ನು ಎಷ್ಟೊಂದು  ಸಂಕಟದಿಂದ ನೋಡುತ್ತಾರೆ..! ಎಷ್ಟೊಂದು ಧಿಕ್ಕರಿಸುತ್ತಾರೆ…!! ಚೀರಾಡುತ್ತಾ ತಮ್ಮ ಎದೆಯ ದುಃಖವನೆಲ್ಲಾ ಅಳುತ್ತಾ ಅಳುತ್ತಾ ನೋವನ್ನು,  ಸಂಕಟವನ್ನು ನಾನಾ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ.

ಸತ್ಯ ವ್ಯಕ್ತಿಯ ಆದರ್ಶಗಳ ಗುಣಗಳನ್ನು,  ಮಾಡಿದ ಸಾಧನೆಗಳನ್ನು, ಕಷ್ಟಕ್ಕೆ ಆದ ಸಹಾಯವನ್ನು, ಆತನ ಒಳ್ಳೆಯ ಕೆಲಸಗಳನ್ನು ತುಂಬು ಹೃದಯದಿಂದ ನೆನಪಿಸಿಕೊಳ್ಳುತ್ತಾರೆ. ಹಳ್ಳಿಯವರಾದರಂತೂ ಗ್ರಾಮ್ಯ ಭಾಷೆಯ ಸೊಗಡಿನಲ್ಲಿ ಅಳುವುದು ಇನ್ನಷ್ಟು ಸಂಕಟವನ್ನು ಹೆಚ್ಚಿಸುತ್ತದೆ.  ನಮ್ಮ ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ಸತ್ತ  ವ್ಯಕ್ತಿಗಳ ಮುಂದೆ ಅಳುವ ದೃಶ್ಯಗಳು  ಎಂತಹ ಕಲ್ಲು  ಮನಸ್ಸಗಳನ್ನು  ಕರಗಿಸುತ್ತವೆ.

 ನಮ್ಮ ಜನಪದರ ಹಾಡುಗಳ ಮೂಲಕವೂ ಕರುಣಾಜನಕ  ಸನ್ನಿವೇಶಗಳನ್ನು ಸೃಷ್ಟಿಸುತ್ತಾರೆ.   ನಮ್ಮ ಜನಪದರು ಸಾವನ್ನು ಸಂಕಟದಿಂದ ನೋಡುತ್ತಲೇ ಅವರು  ಹಾಡುವ ಅನುಭಾವಿಕ ಜಾನಪದಗಳು, ತತ್ವಪದಗಳು, ಮಂತ್ರಗಳು ಹಾಗೂ ಒಗಟುಗಳನ್ನು ಹೇಳುತ್ತಾರೆ.  ಸತ್ತ ವ್ಯಕ್ತಿಯ ವ್ಯಕ್ತಿತ್ವವನ್ನು ಗುಣಗಾನ ಮಾಡುವುದನ್ನು ನಾವು ಕಾಣುತ್ತೇವೆ.

ಯಾವುದೇ ಒಂದು ಕುಟುಂಬದಲ್ಲಿ ಕುಟುಂಬದ ಸದಸ್ಯನಿಗೆ  ರೋಗದಿಂದ ಸಾವು ಸನಿಹವಾಯಿತಂದರೆ…

ಸದಸ್ಯ ರೋಗಿಗಾಗಿ   ಓಡಾಡುವ ಆಸ್ಪತ್ರೆಗಳಿರುವುದಿಲ್ಲ,  ಸಂದರ್ಶಿಸುವ ವೈದ್ಯರಿಲ್ಲ, ಕೊಡಿಸಬೇಕಾದ ಚಿಕಿತ್ಸೆಯಿಲ್ಲ , ಎಲ್ಲರೂ  ಅವರಿಗಾಗಿ ಹಪಾಹಪಿಸುತ್ತಾರೆ. ಇನಷ್ಟು ದಿನ ಅವರು  ನಮ್ಮೊಂದಿಗಿರಲೆಂಬ ಪ್ರೀತಿ ಸಾಗರದಷ್ಟಿರುತ್ತದೆ. ಅದೇ ನಮ್ಮ ಕೌಟಂಬಿಕ ವ್ಯವಸ್ಥೆಯ ತಾಕತ್ತು.

 ನಮ್ಮ ಜನಪದರು ತಮ್ಮ ಕರುಳ ಬಳ್ಳಿಗಾಗಿ ದೇವರಿಗೆ ದೀಡು ನಮಸ್ಕಾರ ಹಾಕುವುದು, ಕಾಣಿಕೆ ಕಟ್ಟುವುದು, ಹರಕೆ ತೀರಿಸುವುದು… ಒಂದೇ ಎರಡೇ ಅವರತ್ತ ಸಾವು   ಸುಳಿಯಬಾರದೆಂದು ದೇವರನ್ನು ಪರಿಪರಿಯಾಗಿ ಬೇಡುತ್ತಾರೆ.  ದೇವರ ಮೇಲೆ ಕೆಲವು ಸಲ ಕೋಪಿಸಿಕೊಳ್ಳುತ್ತಾರೆ… ಹೀಗೆ ಕುಟುಂಬದವರ, ಸಂಬಂಧಿಕರ ಸಾವು ಸನಿಹವಾದಾಗಿನ  ದುಃಖ ಹೇಳತೀರದು.

 ಅದೇನೇ ಇರಲಿ,

 ಯಾವುದೇ ವ್ಯಕ್ತಿಯ ಸಾವಾಗಿರಲಿ ಅದನ್ನು ಯಾರು ಸಂಭ್ರಮಿಸಬಾರದು. ಸಾವು ಸೂತಕ. ತಮ್ಮವರನ್ನು ಕಳೆದುಕೊಂಡು ನೋವಿನಲ್ಲಿರುವವರಿಗೆ ಸಾಂತ್ವನ, ಸತ್ತವರ ಬಗ್ಗೆ ಪ್ರೀತಿಯಿಂದ ಎರಡು ಒಳ್ಳೆಯ ಮಾತನಾಡಬೇಕು.

ನನ್ನ ಬದುಕಿನಲ್ಲಿ ಅನೇಕ ಸಲ ನನ್ನ ಕುಟುಂಬ ವರ್ಗದವರ ಹಾಗೂ ನನ್ನ  ರೋಗರುಜಿನಗಳ ಸಮಯದಲ್ಲಿ ಎಷ್ಟೋ ಸಾವುಗಳನ್ನು ಕಣ್ಣು ಮುಂದೇನೇ ನೋಡಿದ್ದೇನೆ.  ಆ ಭಯಂಕರ ಯಾತನೆ ಯಾರಿಗೂ ಬರಬಾರದು. ನನ್ನಪ್ಪ ಸಾವಿನ ಸನಿಹದಲ್ಲಿದ್ದಾಗ, ಸಾಯುವುದಕ್ಕಿಂತ ಮುಂಚಿತ ಐದು ದಿನಗಳ ಕಾಲ ನನ್ನ ತೊಡೆಯ ಮೇಲೆ ಮಲಗಿ, ಪ್ರಾಣ ಬಿಟ್ಟರು. ಉಸಿರಿಗಾಗಿ ಜೀವ ಎಷ್ಟೊಂದು ಹಾತೊರೆಯುತ್ತದೆ…!!  ಅಂತಹ ಉಸಿರು ನಿಲ್ಲಿಸುವ ಸಮಯ ತುಂಬಾ ಸಂಕಟಮಯವಾದುದು. ಸಾವು ಸಹಜವಾಗಿ ಬಂದಾಗ ಅದನ್ನು ಸಹಜವಾಗಿ ಸ್ವೀಕರಿಸಬೇಕು.  ಆದರೆ ಹಲವಾರು ದುಷ್ಟ ಚಟಗಳು, ನಮ್ಮ ಕೈಯಾರೆ ಮಾಡಿಕೊಳ್ಳಬಹುದಾದ ಎಡವಟ್ಟುಗಳಿಂದ ಸಾವಿನ ಸನಿಹದ ಬಾಗಿಲ ಕದತಟ್ಟುವುದು ಬೇಡ. ಸಾವಿನ ಸನಿಹದ ಸಂಕಟದ ಯಾತನೆಗಳನ್ನು ಎಷ್ಟು ಹೇಳಿದರೂ ಕಡಿಮೆಯೇ ಸರಿ.


2 thoughts on ““ಸಾವಿನ ಸನಿಹದ ಕ್ಷಣಗಳ ಎದೆ ಬಡಿತದ ಸಂಕಟಗಳು…”ರಮೇಶ ಸಿ ಬನ್ನಿಕೊಪ್ಪ ಹಲಗೇರಿ

  1. ಸಾವನ್ನು ಸ್ವಾಗತಿಸಲು ಬಹುತೇಕರು ಇಷ್ಟಪಡುವುದಿಲ್ಲ. ನೀವು ಹೇಳಿದಂತೆ ಅದೊಂದು ಕ್ರೂರ ಶಬ್ದವೇ. ಮರಣವೇ ಮಹಾನವಮಿ ಎಂದು ಶರಣರು ಹೇಳಿದಂತೆ ಸ್ವೀಕರಿಸಲಾರರು.
    ಅಭಿನಂದನೆಗಳು.

Leave a Reply

Back To Top