“ಬದುಕು ಕಬ್ಬಿನಾಲಿನ ಬಂಡಿ” ಆದಪ್ಪ ಹೆಂಬಾ ಮಸ್ಕಿ ಅವರ ಸಣ್ಣ ಕಥೆ

ಅವತ್ತು  ಮಟ ಮಟ ಮದ್ಯಾನ, ಅಮರೇಶ ತನ್ನೇಣ್ತಿ ಜತಿಗೆ ತನ್ನ ಮನಿ ದೇವ್ರು ಮನಸಿನ್ಯಾಗಿನ ದೇವ್ರು ಗುಡುಗುಂಟಿ ಅಮರೇಶ್ವರಕ್ಕೆ ಹೋಗಿದ್ದ. ಯವಾಗ್ಲು ನೀರಾಗ ತಣ್ಣಗಿರುವ ಅಮರಗುಂಡ ಅವತ್ತೂ ಕೂಡ ಆ ದಂಪತಿಗಳಿಗೆ ತಣ್ಣಗ ದರ್ಶನ ಕೊಟ್ಟ. ಪೂಜಾರರು ಕೊಟ್ಟ ತೀರ್ಥ, ಹೂವುನ್ನ ಭಕ್ತಿಯಿಂದ ತಗೊಂಡು ಇಬ್ರೂ ಹೊಸ್ದಾಗಿ ಮದುವೆಯಾಗ್ಯಾರನು ಅನ್ನೋಹಂಗ ಕೈ ಕೈ ಹಿಡಕೊಂಡ್  ಮ್ಯಾಲ ಬಂದ್ರು. ಸೂರ್ಯ ನೆತ್ತಿಮ್ಯಾಲ ತಕಪಕ ಕುಣಿಯಾಕತ್ತಿದ್ರೂ ಅಮರೇಶ ತನ್ನೇಣ್ತಿಗೆ,
“ಛಾ ಕುಡ್ಯಾಮನು ಅಂದ” ಅಂವ ಪಕ್ಕಾ ರಾಚೂರಿನ್ಯವ.
“ಇಂಥಾ ಬಿಸಲಾಗ ಛಾ ಕುಡ್ಯಾದ? ನೀವೇನರ ಮಾಡ್ಕೋರಿ ನಾ ಮಾತ್ರ ಕಬ್ಬನಾಲ್ ಕುಡಿತೀನಿ “ ಅಂದ್ಲು. ಅಕಿ ಸ್ವಲ್ಪ ಸುಧಾರಿಸಿದಾಕಿ, ಗದಗಿನ್ಯಾಕಿ.
“ಆತ್ ಬುಡು ನಾನೂ ಕಬ್ನಾಲಾ ಕುಡಿತೀನಿ” ಅನ್ಕೋತ ಇಬ್ರೂ ಒಂದ್ ಕಬ್ನಾಲಿನ ಬಂಡೀ ಮುಂದ ಹೋದ್ರು. ಅಲ್ಲಿದ್ದಿದ್ದು ಸಣ್ ಹುಡಗಿ. ಪಾಪ ಎಂಟೊಂಬತ್ತನೇ  ಕ್ಲಾಸ್  ಇರಬಹುದು.  ಕಬ್ನಾಲ ಕುಡುಕೋತ ಮಾತಾಡಾಗ ಅವ್ರಿಗೆ ಗೊತ್ತಾತು ಆ ಹುಡುಗಿ ತನ್ನ ಮನಿ ಪರಿಸ್ಥಿತಿ ಸಲುವಾಗಿ ಸಾಲಿ ಬುಟ್ಟಾಳಾಂತ.  ಎರಡ ವರ್ಷದ ಹಿಂದ ಎಂಟನೇ ಕ್ಲಾಸ್ ಇದ್ಲಂತ. ಅಲ್ಲಿಗೆ ಸಾಲಿ ಬುಟ್ಟು ಈಗ ಕಬ್ನಾಲ್ ಮಾರಾಕತ್ಯಾಳ. ಅಮರೇಶನೂ ಒಂದ್ ಹೈಸ್ಕೂಲಿನ ಹೆಡ್ಮಾಸ್ತ್ರಾಗಿದ್ರಿಂದ ಅರ್ಧಕ್ಕ ಸಾಲಿ ಬುಟ್ಟ  ಆ ಹುಡುಗಿ ಬಗ್ಗೆ ಸ್ವಲ್ಪ ಅವನಿಗೆ ಕನಿಕರ ಬಂತು. ಪಾಪ ಪರಿಸ್ಥಿತಿ ಆ ಹುಡುಗಿ ಶೈಕ್ಷಣಿಕ ಜೀವನ ಹಾಳ್ ಮಾಡಿತೆಲಪಾ ಅಂತನೂ ಅನಿಸ್ತು. ಕುತೂಹಲಕ್ಕೆ ಮಾತು ಮುಂದುವರಿಸ್ದ.
“ಯಾಕವಾ ಯಾಕ್ ಸಾಲಿ ಬುಟ್ಟಿ ಮುಂದ್ ಓದಬೇಕಿತ್ತಿಲ್ಲಬೆ”


“ಏನ್ಮಾಡಾದ್ರಿ ಸರ ನಮಪ್ಪ ಓಗಿ ಬುಟ್ಟನ್ರೀ, ಇನ್ ನಮ್ಮವ್ವ ಒಬ್ಬಾಕೆ ಎಸ್ಟಂತ ದುಡೀಬೇಕ್ರೀ, ನಮ್ ತಮ್ಮ ಗಣಮಗ ಅದಾನ್ರಿ ಅವನ್ನೋದಿಸ್ರಿದಾತು ಅಂತ ನಾನು ನಮ್ಮವ್ವ ಇದನ್ ಸುರು ಮಾಡಿದಿವ್ರಿ”
“ಯಾಕವಾ ನಿಮ್ಮಪ್ಪಗೇನಾಗಿತ್ತೂ……”
“ಕುಡದ್ ಕುಡದಾ ಸತ್ತನ್ರೀ” ಅಂದಿತು, ಯಾವ ಏಚು ಪೇಚಿಲ್ಲದ  ಮುಗ್ಧ ಹಳ್ಳಿ ಮನಸ್ಸು.
“ನಿಮ್ ತಮ್ಮ ಏನೋತ್ತಾನವ” ಅಂತ ಅಮರೇಶ ಆ ಹುಡುಗೀನ ಕೇಳತಲೇ ಅವರವ್ವ ಅಚ್ಚಿಕಡಿಲಿಂದ ಬಂದ್ಲು. ಅಮರೇಶನ ಮಾತಿಗೆ ಅಕೀನ ಉತ್ರ ಕೊಟ್ಲು.
“ಅವನು ಈವರ್ಷ ಯೋಳನೇತ್ತ ಅದಾನ್ರೀ”
“ಅಲ್ಲಬೇ ಎಕ್ಕ, ಮತ್ತ ಇಕಿನ್ನೂ ಓದಸಬೇಕು, ಇಕಿನ್ಯಾಕ ಸಾಲಿ ಬುಡಿಸಿದೆವಾ ತಾಯಿ”
“ಎಲ್ಲರನ್ನ ಓದಸಾಕ ನಮ್ಮಂತೋರಿಗೆ  ಎಂಗಾತೈತ್ರಿ, ನಾವೇನ್ ಇದ್ದವ್ರನು. ದುಡೀಬಕು ತಿನಬಕು, ಇಕಿ ಎಣಮಗಳು ಕೊಟ್ ಮನೀಗೆ ಓಗಾಕಿ, ಇಕಿನ್ ಓದಿಸಿದ್ರ ನಮಗ ಬರತ್ತನ್ರಿ. ಅದಕ ಗಣಮಗ ಓದ್ಲಿ ಸಾಕು ಅಂತ ಅವನ್ನಾಟ ಓದಸಾಕತ್ತಿವ್ರಿ.” ಅಂದ ಅಕಿ ಮಾತಿನ್ಯಾಗೂ ಯಾವ ಏಚು ಪೇಚೂ ಇರ್ಲಿಲ್ಲ. ಇದ್ದದ್ದ ಇದ್ದಂಗ್ ಏಳಿದ್ಲು. ಅಮರೇಶ ಆ ಹುಡಿಗಿನ್ನ ನೋಡ್ತಾ,
“ಏನವಾ ನಿನ್ನೆಸ್ರು?”
“ಅಮ್ರಮ್ಮ ರೀ”
“ದಿನಾ ಎಷ್ಟಾತೈತವ ಯ್ಯಾಪಾರ?”
“ಆತ್ತ್ರೀ ಒಂದಳತಿಗೆ ಬೇಸಾತ್ರೀ”
“ನಾ ಏನ್ ಕಸಗಳಲವಾ ಅಮ್ರಮ್ಮ ಬೇಸಾಗತ್ತಂದ್ರ ಎಷ್ಟಾತಯತೆಬೇ” ಎಂದನು ನಗುತ್ತಾ.
“ಮೊದ್ಲು ಬಾಳ ಬೇಸಾತಿತ್ರೀ …….. ಈಗ ಕಮ್ಯಾಗ್ಯಾದ್ರಿ, ಅಮಾಸಿ ಉಣಿವಿ ದಿನ್ದಾಗ ನಾಕೈದ್ ಸಾವ್ರ ಆತೈತ್ರೀ ಬಿಡಿ ದಿನ್ದಾಗ  ದಿವ್ಸಾ ದೀಡಸಾವ್ರ, ಎರ್ಡಸಾವ್ರ ಆತೈತ್ರೀ”
“ಮೊದ್ಲ ಬೇಸಾತಿತ್ತು ಅಂದ್ಯಲವ, ಈಗ್ಯಾಕ ಕಮ್ಯಾತೈತಿ”
“ಮೊದ್ಲು ನಮ್ದೊಂದಾ ಬಂಡಿ ಇತ್ರೀ, ಈಗ ನಾವ್ ಮಾಡಿದ್ ನೋಡಿ ನಾಕ ಮಂದಿ ಮಾಡ್ಯಾರಿ, ಅದೂ ನಮ್ಮೂರವ್ರಾ, ಅದೂ ಬ್ಯಾರೆ ಅಲ್ರೀ ನಮ್ಮಂದೀನಾ ಮಾಡ್ಯಾರ್ರೀ, ಇಂಗಾಗಿ ಕಡಿಮ್ಯಾತೈತ್ರಿ.”
“ಹೌದನವ”
“ನೀವಾ ನೋಡ್ರೀ ಸರ ಮೊದ್ಲು ಎಲ್ಡ ಸಾವ್ರಾಗಲೀ ಮೂರ್ಸಾವ್ರಾಗಲಿ ನಮಗೊಬ್ರಿಗೇ ಆತಿತ್ರಿ, ಈಗ ನಾಕ್ ಬಂಡೀ ಆಗ್ಯಾವ ತಲಾಕೀಟು ಐದ್ನೂರು ……. ಆರ್ನೂರು……  ಏಟಾತ್ತ ಆಟು ಅಂಚಿಗ್ಯಾಬೇಕ್ರಿ” ಅವಳು ಲೆಕ್ಕದಲ್ಲಿ ಭಾಳ್ ಪಕ್ಕಾ ಇದ್ಲು.
ಅಮರೇಶನಿಗೆ ಅವಳ ಗಣಿತ ಕೇಳಿ ಭಾಳ ಖುಷೀ ಆತು.
“ಎಂಟನೇತ್ತತನ ಎಲ್ಲಿ ಕಲ್ತೆಬೇ ಅಮ್ರಮ್ಮ”
“ಇಲ್ಲೇ ನಮ್ಮೂರ್ ಸರಕಾರಿ ಸಾಲ್ಯಾಗ್ರೀ ……. ಅಲ್ಲೇ ಕಲತೀವ್ರಿ. ರೊಕ್ಕ ಇದ್ದವ್ರು ಪ್ರೈವೇಟ್ ಬಸ್ಸಿನ್ಯಾಗ ಲಿಂಗಸೂರ ತನ  ಓಗಿ ಪ್ರೈವೇಟ್ ಸಾಲ್ಯಾಗ್ ಕಲಿತಾರ್ರಿ. ನಮಗೆಂಗಾತೈತ್ರಿ, ಅದಕ ಇಲ್ಲೇ ಸರಕಾರಿ ಸಾಲ್ಯಾಗ ಕಲತೀನ್ರಿ, ನಮ್ ಸಾಲ್ಯಾಗಾ ಬೇಕಾದಂಗ ಚೊಲೊ ಕಲಸ್ತಿದ್ರು ಬುಡ್ರಿ. ಅದಕ ನಮ್ ತಮ್ಮನ್ನೂ ಇಲ್ಲೇ ನಮ್ ಸಾಲ್ಯಾಗ ಕಲಸಾಕತ್ತೀನ್ರಿ. ಮುಂದ್ ನೋಡಾಮ್ರೀ ಕಾಲೇಜು, ಪೀಲೇಜಿಗಂತ ದೊಡ್ ಊರಿಗೆ ಕಳಸಾದೈತಲ್ರಿ ಅವಾಗ ನೋಡಾಮಂತ ಇಲ್ಲೇ ಕಲಸಾಕತ್ತೀವ್ರಿ.”
ಅವಳ ಜಾಣತನ ಮತ್ತು ಸರಕಾರಿ ಸಾಲಿ ಬಗ್ಗೆ ಅಕಿಗೆ ಇರೋ ಗೌರವ ನೋಡಿ ಅಮರೇಶನಿಗೆ ಖಿಷಿ ಆತು. ಮತ್ತೆ ಅಕಿ ಜೋಡಿ ಮಾತು ಮುಂದುವರೆಸಿದ.
“ಇದನ್ನ ಮಾಡಬೇಕಂತ ನಿಂಗ ಎಂಗ್ ಐಡಿಯಾ ಬಂತವಾ?”
“ಸಾಲಿ ಬುಟ್ ಕೂಡ್ಲೇ ಲಿಂಗಸೂರಾಗ ಒಂದ್ ಕಬ್ನಾಲ್ನಂಗಡ್ಯಾಗಾ ದುಡ್ಯಾಕಿದ್ನ್ರಿ. ಒಂದಾ ತಿಂಗಳದಾಗ ಎಲ್ಲ ನೋಡಿಕೆಂಡಿನ್ರಿ, ನಾವಾ ಸ್ವಂತ್ ಮಾಡಿದ್ರ ಬೇಸಾಗತೈತಿ ಅನಿಸ್ತ್ರ್ಯಾ, ನಮ್ವವ್ವಗ  ಏಳಿದಿನ್ರಿ, ಅಕಿನೂ ಊಂ ಅಂದ್ಲರಿ. ಮಾಡಿದಿವ್ರಿ.”
“ಇದರಾಗ ದುಡಕಿ ಬೇಸೈತನವ?”
“ಊನ್ರಿ ಬೇಸೈತ್ರಿ, ಒಂದ್ ಲೀಟ್ರ  ಆಕಿದ್ರ ಎಲ್ಡ್ ಸಾವ್ರ ರುಪಾಯಿತನ ಕಬ್ನಾಲ್ ತೆಗೀಬೌದ್ ನೋಡ್ರಿ, ಬೇಸತ್ರಿ ಸುಳ್ಯಾಕನಬಕು ನೀವೇನ್ ಕಸಗಂತೀರನು. ಬೇಸೈತಿ. ಮೊದ್ಲು ನಮ್ದೊಂದಾ ಅಂಗಡೀ ಇದ್ದಾಗ ಅಮಾಸಿ ಪಮಾಸಿ ಬಂದ್ರ …… ಅತ್ ಸಾವ್ರತ್ತನ ಮಾಡೀವಿ ನೋಡ್ರಿ. ಈಗ ಕಮ್ಯಾಗದ”
“ಅಬಾಬಬಬಬಬಬ…… ಅಗಾರ ಛಲೋ ದುಡಕಿ ಮಾಡಿಕೆಂಡೀಯವ”
“ಊನ್ರೀ……. ಸುಳ್ಯಾಕ ಏಳ್ಬಕು ಛಲೋ ಮಾಡಿಕೆಂಡಿವ್ರಿ. ಎಲ್ಡ್ ವರ್ಷದಾಗ ಎಂಟ್ ಲಕ್ಷ
ರುಪಾಯಿ ಮನೀ ಕಟ್ಟಿಸಿವ್ ನೋಡ್ರಿ” ಅಂದಳು.
ಅಮರೇಶ ಕೊನೇ ಗುಟುಕು ಕುಡ್ಯಾಕತ್ತಿದ್ದ. ಆ ಉಡಗಿ ಮಾತ್ ಕೇಳಿದ್ ಕೂಡ್ಲೇ ಖುಷಿ ಏನೋ ಆಗಿತ್ತು ಆದ್ರ ನಾಚಿಕಿ ಬರಾಕತ್ತಿತ್ತು ಅವ್ನಿಗೆ. ಯಾಕಂದ್ರ ‘ಹಸರ ಇಂಕಿಲೆ ಸೈ ಮಾಡೋ ಗೆಜೆಟೆಡ್ ಎಡ್ ಮಾಷ್ಟ್ರು ನಾನು’ ಅನ್ನೋ ಅವನೆದೆಯ ಮೂಲೆಯ ಒಂಚೂರು ಅಹಂಕಾರ,- “ಆ ಉಡಿಗಿನ್ ನೋಡ್ ಎಲ್ಡ್ ವರ್ಸದಾಗ ಎಂಟ್ ಲಕ್ಷ ರುಪಾಯಿದು ಮನಿ ಕಟ್ಟಿಸ್ಯಾಳ, ಮೂವತ್ ವರ್ಸಾತು ತಲಿ ಮ್ಯಾಲ ಒಂದು ಸೂರಿಲ್ಲ, ಮತ್ ಗೆಜೆಟೆಡ್ ಅಂತ ಗೆಜೆಟೆಡ್ಡು……” ಅಂತ ಕುಟಿಕಿದಂತಾಗಕತ್ತಿತ್ತು.
“ಒಳ್ಳೇದಾಗ್ಲವಾ…….” ಅಂತೇಳಿ
ದುಸರಾ ಮಾತಾಡ್ದಾ ಕಬ್ನಾಲಿನ ರೊಕ್ಕ ಕೊಟ್ಟು ಕಾರ್ ಸ್ಟಾರ್ಟ್ ಮಾಡಿದ.


Leave a Reply

Back To Top