ಅದ್ಭುತ ಕಂಠದ ರಂಗನಾಯಕಿ…. ಬಿ ಜಯಶ್ರೀ-ವೀಣಾ ಹೇಮಂತ್ ಗೌಡ ಪಾಟೀಲ್.

 ಪುಟ್ಟ ಹಳ್ಳಿಯೊಂದರಲ್ಲಿ ರಂಗ ತರಬೇತಿ ನೀಡುತ್ತಿದ್ದ ಆಕೆಗೆ ಅಸಾಧ್ಯವಾದ ಎದೆ ನೋವು, ದೇಹವಿಡಿ ತಪತಪನೆ ಬೆವರಿತ್ತು. ಅದನ್ನು ನೋಡಿ ತಂಡದ ಎಲ್ಲ ಸದಸ್ಯರು ಗಾಬರಿಗೊಂಡರಲ್ಲದೆ ಆಕೆಗೆ ಕೂಡಲೇ ಆಸ್ಪತ್ರೆಗೆ ಹೋಗಲು ಹೇಳಿದರು. ಯಾರ ಮಾತನ್ನೂ ಕೇಳದೆ ತನ್ನ ಕಾರ್ಯವನ್ನು ಮುಂದುವರಿಸಿದ ಆಕೆಗೆ ಅಂದು ಸಾಯಂಕಾಲ ದೆಹಲಿಗೆ ವಿಮಾನದಲ್ಲಿ ಪ್ರಯಾಣಿಸಿ ಅಲ್ಲೊಂದು ನಾಟಕದಲ್ಲಿ ಪಾತ್ರ ನಿರ್ವಹಿಸಬೇಕಿತ್ತು. ಆದರೂ ಎಲ್ಲರ ಒತ್ತಾಯದ ಮೇರೆಗೆ ಆಸ್ಪತ್ರೆಗೆ ಹೋಗಿ ನೋಡಿದರೆ ಆಕೆಯ ಬಿಪಿ ವಿಪರೀತ ಹೆಚ್ಚಾಗಿದ್ದು ನಾಡಿ ಬಡಿತವಂತೂ ಕೈಗೆ ಸಿಗುತ್ತಲೇ ಇರಲಿಲ್ಲ. ತಕ್ಷಣ ಈ. ಸಿ .ಜಿ .ಮಾಡಿದ ವೈದ್ಯರು ಕೂಡಲೇ ಅಡ್ಮಿಟ್ ಆಗಲು ಒತ್ತಾಯಿಸಿದರು. ಆದರೆ ದೆಹಲಿಯಲ್ಲಿ ತಾನು ಮಾಡಲೇಬೇಕಾಗಿದ್ದ ನಾಟಕ ಮತ್ತು ಅದರ ಹೊಣೆಗಾರಿಕೆಯ ಅರಿವಿದ್ದ ಆಕೆ ವೈದ್ಯರ ಮಾತಿಗೆ ಒಪ್ಪದೇ ಅಲ್ಲಿಂದ ನೇರವಾಗಿ ಬಂದು ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಿದಳು. ದೆಹಲಿಯಲ್ಲಿ ತನಗೆ ಕಾಯುತ್ತಿದ್ದ ಪತಿ ಆನಂದರಾಜು ಅವರೊಂದಿಗೆ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಬಂದು ಇಡೀ ದಿನ ಅಸಾಧ್ಯ ನೋವಿನ ನಡುವೆಯೂ ತಾಲೀಮು ನಡೆಸಿ ಅಂದು ನಾಟಕವನ್ನು ಪ್ರದರ್ಶಿಸಿಯೇ ಬಿಟ್ಟರು. ನಂತರ ಹೋಗಿ ಆಸ್ಪತ್ರೆಗೆ ದಾಖಲಾದರು. ಅಂತಹ ಅಸಾಮಾನ್ಯ ಧೀಶಕ್ತಿಯುಳ್ಳ ಮಹಿಳೆಯೇ ಕಂಚಿನ ಕಂಠದ ಗಾಯಕಿ, ರಂಗ ನಾಯಕಿ, ಕಂಠದಾನ ಕಲಾವಿದೆ ಕರಿಮಾಯಿ ತಾಯಿಯ ಸೃಷ್ಟಿಕರ್ತೆ, ಕರ್ನಾಟಕ ನಾಟಕ ರಂಗದ ಅದ್ವಿತೀಯ ಪುರುಷ ದಿವಂಗತ ಗುಬ್ಬಿ ವೀರಣ್ಣನವರ ಮೊಮ್ಮಗಳು ಬಿ ಜಯಶ್ರೀ.

ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದಂತಹ ಪಾತ್ರವೇ ತಾನಾಗುವ ಅದ್ಭುತ ನಟಿ. ದೈಹಿಕ ತೊಂದರೆಗಳನ್ನು ಮೀರಿ ರಂಗದಲ್ಲಿಯೇ ಜೀವವನ್ನು ಅರ್ಪಿಸಬೇಕೆಂಬ ಅದಮ್ಯ ಹಂಬಲವನ್ನು ಹೊಂದಿರುವ ರಂಗ ಶಿಕ್ಷಕಿ, ತೆರೆಯ ಮೇಲೆ ಆಕೆ ಹಾಡ ತೊಡಗಿದರೆ ಮೈಕ್ ಕೂಡ ಬೇಕಾಗದಂತಹ ದಿವ್ಯ ಕಂಠಸಿರಿ ಒಂದೇ ಎರಡೇ ಆಕೆಯ ಪ್ರತಿಭೆಯನ್ನು ಅಳೆಯಲು. ಭಾರತ ದೇಶದ ನಾಲ್ಕನೇ ಅತ್ಯುಚ್ಚ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು. 2010ರಲ್ಲಿ ರಾಜ್ಯಸಭಾ ಸದಸ್ಯರಾಗಿ ನಾಮ ನಿರ್ದೇಶನಗೊಂಡವರು. ಆಕೆಯೇ ಅಭಿಜಾತ ಕಲಾವಿದೆ, ನಾಟಕ ರಂಗದ ಅತಿ ದೊಡ್ಡ ಹೆಸರು ಗುಬ್ಬಿ ವೀರಣ್ಣನವರ ಮಗಳು ಜಿ.ವಿ. ಮಾಲತಮ್ಮನವರ ಪುತ್ರಿ ಬಿ.ಜಯಶ್ರೀ.

ತನ್ನ ಆತ್ಮಕಥೆಯಲ್ಲಿ ಆಕೆಯೇ ಹೇಳುವಂತೆ ಅವರದ್ದು ನಾಟಕದ ಕುಟುಂಬ. ಕಂಪನಿಯಲ್ಲಿಯೇ ವಾಸ. ನಾಟಕದ ಕಂಪನಿ ಮಾಲೀಕರಾದ ತಾತ ಗುಬ್ಬಿ ವೀರಣ್ಣನವರು ದೈವ ಭಕ್ತರು. ವಾರಕ್ಕೆ ಒಂದು ದಿನ ನಾಟಕಕ್ಕೆ ರಜೆ. ಆ ದಿನ ಮುಂಜಾನೆ ದೇವರ ವಿವಿಧ ರೀತಿಯ ಚಿತ್ರಪಟಗಳ ಜೊತೆ ಜೊತೆಗೆ ನಾಟಕಕ್ಕೆ ಬಳಸುವ ಸರ್ವ ಪರಿಕರಗಳನ್ನು ರಂಗದ ಮೇಲೆ ಹೊಂದಿಸಿ ಅವುಗಳನ್ನು ಪೂಜಿಸುವ ಸಡಗರ. ಎರಡು ಮೂರು ತಿಂಗಳಿಗೊಮ್ಮೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾವಣೆಯಾಗುವ ನಾಟಕ ಕಂಪನಿಯವರಿಗೆ ಮನೆ ಎಂಬ ಪರಿಕಲ್ಪನೆ ಇರಲಿಲ್ಲ. ಸಾಂಪ್ರದಾಯಿಕ ಶಿಕ್ಷಣವಂತೂ ಮತ್ತೂ ದೂರ. ಆದರೆ ಓದು ಬರಹದ ಅರಿವಿತ್ತು. ಹಗಲು ನಡೆಯುತ್ತಿದ್ದ ನಾಟಕದ ತಾಲಿಮನ್ನು ನೋಡುತ್ತಾ ಕೇಳುತ್ತಾ ಬೆಳೆಯುತ್ತಿದ್ದ ಅವರಿಗೆ ನಾಟಕದ ಎಲ್ಲ ಪಾತ್ರಗಳ ಡೈಲಾಗ್ ಗಳು ಕಂಠಸ್ತವಾಗಿದ್ದವು. ಯಾರಾದರೂ ಪಾತ್ರಧಾರಿಗಳು ಕೈಕೊಟ್ಟಾಗ ಆಯಾ ಪಾತ್ರಗಳ ವೇಷವನ್ನು ಇವರಿಗೆ ತೊಡಿಸಿ ವೇದಿಕೆಗೆ ಕಳುಹಿಸುತ್ತಿದ್ದರು.

ಒಂದು ಬಾರಿ ನಾಟಕ ಪ್ರದರ್ಶನ ನಡೆಯುತ್ತಿರುವಾಗ ಕರೆಂಟಿನ ವೈರಿನ ಮೇಲೆ ಕಾಲಿಟ್ಟ ತಾಯಿ  ಮಾಲತಮ್ಮನವರ ಸೊಂಟದ ಕೆಳಗಿನ ಭಾಗ ಸಂಪೂರ್ಣ ನಿಷ್ಕ್ರಿಯವಾಯಿತು. ಅವರ ಚಿಕಿತ್ಸೆಗಾಗಿ ಬೆಂಗಳೂರಿಗೆ ಸ್ಥಳಾಂತರಗೊಂಡವರು ಮಾಲತಮ್ಮ, ಅವರ ಎರಡನೇ ಪತಿ, ಜಯಶ್ರೀ ಮತ್ತು ಇತರ ಕುಟುಂಬದ ಸದಸ್ಯರು. ಅಲ್ಲಿಯೇ ಮಾಲತಮ್ಮನವರಿಗೆ ಚಿಕಿತ್ಸೆ ನಡೆದು ಆಕೆ ಬದುಕುಳಿದರೂ ಜೀವಮಾನವೆಲ್ಲ ವೀಲ್ ಚೇರಿನಲ್ಲಿ ಕುಳಿತು ಬದುಕು ನಡೆಸುವಂತಹ ಪರಿಸ್ಥಿತಿ ಒದಗಿತ್ತು. ತಾಯಿಯ ನಿಷ್ಕ್ರಿಯ ದೇಹ, ಆಕೆ ಪಡುವ ನೋವುಗಳನ್ನು ನೋಡುತ್ತಲೇ ಬೆಳೆದ ಜಯಶ್ರೀ ಅವರಿಗೆ ಸ್ವತಃ ತಾಯಿಯ 2ನೆಯ ಪತಿಯಿಂದ ಲೈಂಗಿಕ ಶೋಷಣೆ.  ಅರಿವಾಗುವ ಮುನ್ನವೇ ಘಟಿಸಿದ ಈ ತೊಂದರೆ ಜಯಶ್ರೀ ಅವರನ್ನು ಇನ್ನಿಲ್ಲದಂತೆ ಹಿಂಸೆಗೀಡು ಮಾಡಿತ್ತು. ಸ್ವತಹ ತಾಯಿಯ ಬಳಿ ಹೇಳಿಕೊಳ್ಳಲು ಮುಜುಗರದ ಪರಿಸ್ಥಿತಿ. ಆದರೂ ಮುಂದೊಂದು ದಿನ ತಾಯಿಯ ಮುಂದೆ ಇದನ್ನು ಹೇಳಿದಾಗ ಎಷ್ಟೋ ಹೊತ್ತಿನವರೆಗೆ ತಾಯಿ ಮಗಳು ಒಬ್ಬರನ್ನೊಬ್ಬರು ತಬ್ಬಿಕೊಂಡು ಅತ್ತಿದ್ದರು. ಈ ಅಂಧಕಾರದ ಹಿಂದೆಯೂ ಆಕೆಗೆ ಭವ್ಯ ಭವಿಷ್ಯತ್ತಿನ ಸೂರ್ಯೋದಯ ಕಾಯುತ್ತಿತ್ತು.

 ಮುಂದೆ ಅಜ್ಜನ ಒಪ್ಪಿಗೆಯ ಮೇರೆಗೆ 1973ರಲ್ಲಿ ಪುಣೆಯಲ್ಲಿದ್ದ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಅಭ್ಯಾಸ ಮಾಡಿದರು. ಬಿ ಜಯಶ್ರೀ. ನಾಸಿರುದ್ದೀನ್ ಶಾ, ಓಂ ಪುರಿ ಮುಂತಾದ ದಿಗ್ಗಜ ನಟರು ಆಕೆಯ ಎನ್ಎಸ್ ಡಿ  ಸಹಪಾಠಿಗಳಾಗಿದ್ದರು. ಇಬ್ರಾಹಿಂ ಅಲಖಾಜಿ ಅವರು ಈಕೆಯ ಅಧ್ಯಾಪಕರಾಗಿದ್ದರು. ಮೂರು ವರ್ಷಗಳ ರಂಗ ತರಬೇತಿಯ ಪದವಿಯನ್ನು ಪಡೆದು ಮರಳಿ ಬೆಂಗಳೂರಿಗೆ ಬಂದ ಜಯಶ್ರೀ ತಾತನನ್ನು ಕಳೆದುಕೊಂಡಿದ್ದರು.

ಬಿ ವಿ ಕಾರಂತರ ತಂಡದಲ್ಲಿ ಕಾರ್ಯನಿರ್ವಹಿಸಿದ ಜಯಶ್ರೀ ಅಮ್ಮ ಮುಂದೆ ಮೈಸೂರಿನ ರಂಗಾಯಣದಲ್ಲಿ ಕೂಡ ಕಾರ್ಯನಿರ್ವಹಿಸಿದರು. 1997ರಲ್ಲಿ ತೆರೆಗೆ ಬಂದ ನಾಗಾಭರಣರ ‘ನಾಗಮಂಡಲ’ ಚಲನಚಿತ್ರದಲ್ಲಿ ಕುರುಡವ್ವನಾಗಿ ಅದ್ಭುತ ಅಭಿನಯ ಪ್ರತಿಭೆ ತೋರಿದ ಜಯಶ್ರೀ ಅಮ್ಮ ನಾಡಿನ ಮನೆ ಮಾತಾದರು. ದೇವೀರಿ ಮತ್ತು ಕೇರ್ ಆಫ್ ಫುಟ್ಪಾತ್ ಚಲನಚಿತ್ರಗಳಲ್ಲಿಯೂ ಕೂಡ ಈಕೆ ಪಾತ್ರ ನಿರ್ವಹಿಸಿದ್ದರು.

ಖ್ಯಾತ ಅಭಿನೇತ್ರಿಯರಾದ ಜಯಪ್ರದಾ, ಅಂಬಿಕಾ, ಸುಮಲತಾ, ಮಾಧವಿ, ಗಾಯತ್ರಿ ಮತ್ತು ಇತರ ಕಲಾವಿದೆಯರಿಗೆ ಕಂಠದಾನ ಮಾಡಿದ ಹೆಗ್ಗಳಿಕೆ ಜಯಶ್ರೀ ಅಮ್ಮನದು. ಡಾಕ್ಟರ್ ರಾಜ್ ಚಲನಚಿತ್ರಗಳ ಬಹುತೇಕ ಎಲ್ಲಾ ನಾಯಕಿಯರಿಗೆ ಈಕೆ ಕಂಠದಾನ ಮಾಡಿದ್ದಾರೆ. ಇದಕ್ಕೂ ಮುನ್ನ ಪರಿಸರ ಉಳಿಸುವ ನಿಟ್ಟಿನಲ್ಲಿ ಈಕೆ ತಯಾರಿಸಿದ ಸಾಕ್ಷ್ಯಚಿತ್ರ ದೂರದರ್ಶನದಲ್ಲಿ ಪ್ರಸಾರವಾಗಿ ಮೆಚ್ಚುಗೆ ಗಳಿಸಿತ್ತು. ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ನನ್ನ ಪ್ರೀತಿಯ ಹುಡುಗಿ’ ಚಲನಚಿತ್ರದಲ್ಲಿ ಕಾರ್ ಕಾರ್ ಎಂಬ ಹಾಡನ್ನು ಹಾಡಿದ ಈಕೆ ಜನಪ್ರಿಯತೆಯ ಉತ್ತುಂಗ ಶಿಖರ ತಲುಪಿದರು.

1996ರಲ್ಲಿ ಅಖಿಲ ಭಾರತೀಯ ಸಂಗೀತ, ನೃತ್ಯ ಮತ್ತು ನಾಟಕ ಅಕಾಡೆಮಿಯವರು ಕೊಡ ಮಾಡುವ ಅತ್ಯುನ್ನತ ಪ್ರಶಸ್ತಿಯನ್ನು ಆಕೆ ಪಡೆದರು. 2009ರಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಡಿ ಲಿಟ್ ಪದವಿಯನ್ನು ಪಡೆದರು. 2010ರಲ್ಲಿ ಆಕೆ ರಾಜ್ಯಸಭಾ ಸದಸ್ಯೆಯಾಗಿ ಆಯ್ಕೆಯಾದರು.

ಆಕೆಗೆ ಸೋದರ ಸಂಬಂಧದಲ್ಲಿ ಒಂದು ಮದುವೆಯನ್ನು ಮಾಡಲಾಯಿತಾದರೂ ಗಂಡ ಎನಿಸಿಕೊಂಡ ವ್ಯಕ್ತಿ ವಿಪರೀತ ಉಪದ್ರವಿ ಜೊತೆಗೆ ಅನುಮಾನದ ಪ್ರಾಣಿ ಕೂಡ.ಆದರೆ ಈ ದಾಂಪತ್ಯ ಬಹುಕಾಲ ಬಾಳಲಿಲ್ಲ. ಆತನೊಂದಿಗಿನ ದಾಂಪತ್ಯದಲ್ಲಿ ಜಯಶ್ರೀ ಅಮ್ಮನಿಗೆ ಸುಷ್ಮಾ ರಾಜ್ ಎಂಬ ಮಗಳು ಹುಟ್ಟಿದ್ದಳು.  ಮುಂದೆ ಕೆಲವು ವರ್ಷಗಳ ನಂತರ ತಮ್ಮೆಲ್ಲ ನಾಟಕಗಳಿಗೆ ಲೈಟ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕೆ ಆನಂದ್ ರಾಜು ಅವರೊಂದಿಗೆ ಈಕೆ ಮದುವೆಯಾದರು. ಇಬ್ಬರು ಮಕ್ಕಳನ್ನು ದತ್ತು ತೆಗೆದುಕೊಂಡು ಬೆಳೆಸಿದ್ದಾರೆ.

1976 ರಿಂದ ಇಲ್ಲಿಯವರೆಗೂ ಸ್ಪಂದನ ಎಂಬ ಸ್ವಂತ ತಂಡವನ್ನು ಕಟ್ಟಿರುವ ಇವರು ನೂರಾರು ರಂಗನಟರನ್ನು ತರಬೇತಿಗೊಳಿಸಿದ್ದಾರೆ. ಎಲ್ಲಾ ತಾಲೀಮುಗಳಲ್ಲಿಯೂ ಕಡ್ಡಾಯವಾಗಿ ಭಾಗವಹಿಸಿ ತರಬೇತಿ ನೀಡುವ ಇವರ ತಂಡದಲ್ಲಿ ಎಲ್ಲರೂ ಅಸಾಮಾನ್ಯ ನಟರು. ಕರಿಮಾಯಿತಾಯಿ ಹಾಡನ್ನು ಅವರ ತಂಡದವರೆಲ್ಲ ಸೇರಿ ಹಾಡ ತೊಡಗಿದರೆ ಮೈ ರೋಮಾಂಚನಗೊಳ್ಳುತ್ತದೆ.

ಕರಿಮಾಯಿ, ದ ಡೆತ್ ಆಫ್ ಅ ಸೇಲ್ಸ್ ಮ್ಯಾನ್, ಬ್ಯಾರಿಸ್ಟರ್, ಲಕ್ಷಾಪತಿ ರಾಜನ ಕಥೆ, ಉರಿಯ ಉಯ್ಯಾಲೆ, ವೈಶಾಖ, ಯಕ್ಷನಗರಿ, ನಹಿ ನಹಿ ರಕ್ಷತಿ ನೀಲಿ ಕುದುರೆ, ನಾಗಮಂಡಲ, ಜಸ್ಮಾ ಓಡನ್, ಸಿರಿಸಂಪಿಗೆ ಮತ್ತು ಅಗ್ನಿಪಥ ಮುಂತಾದ ನಾಟಕಗಳನ್ನು ಇವರು ನಿರ್ದೇಶನ ಮಾಡಿದ್ದಾರೆ. ಹಲವಾರು ಟಿವಿ ಧಾರಾವಾಹಿಗಳಲ್ಲಿ ಕೂಡ ಇವರು ಅಭಿನಯಿಸಿದ್ದಾರೆ. ವ್ಯಾಂಪ್ ಎನ್ನಬಹುದಾದಂತಹ ಗಡಸು ದನಿಯ ಹಾಡುಗಳಿಗೆ ದನಿಯಾಗಿದ್ದಾರೆ.

ತನ್ನ ವೈಯುಕ್ತಿಕ ಜೀವನದಲ್ಲಿ ಹಲವಾರು ಏಳುಬೀಳುಗಳನ್ನು ಕಂಡಿರುವ ಬಿ ಜಯಶ್ರೀ ಅವರಿಗೆ ಕೊನೆಗೂ ಪತಿಯ ರೂಪದಲ್ಲಿ ಆತ್ಮಸಖ ದೊರೆತು ಇದೀಗ ನೆಮ್ಮದಿಯ ಜೀವನ ಅವರದು. 73ರ ಹರೆಯದಲ್ಲಿಯೂ ಕೂಡ ಅವರು ಕ್ರಿಯಾಶೀಲರಾಗಿದ್ದು ನಟನೆ, ನಿರ್ದೇಶನ, ವಸ್ತ್ರ ವಿನ್ಯಾಸ, ನಿರ್ವಹಣೆ ಹೀಗೆ ಹತ್ತು ಹಲವು ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಆಕೆಯ ಆತ್ಮಕಥೆ ‘ಕಣ್ಣಾಮುಚ್ಚೆ ಕಾಡೆ ಗೂಡೆ’ ಯನ್ನು ಪ್ರೀತಿ ನಾಗರಾಜ್ ಎಂಬ ಖ್ಯಾತ ಅಂಕಣಗಾರ್ತಿ ಬರೆದಿದ್ದು ಪ್ರತಿಪುಟದಲ್ಲಿಯೂ ಜಯಶ್ರೀ ಅಮ್ಮನವರ ಜೀವನ ಪ್ರೀತಿ, ಶ್ರದ್ಧೆ, ಅನನ್ಯ ಉತ್ಸಾಹ ಎದ್ದು ಕಾಣುತ್ತದೆ. ಕೆಲವೊಮ್ಮೆ ಆಕೆಯ ಮನದಾಳದ ನೋವು ನಮ್ಮನ್ನು ನಲುಗಿಸುತ್ತದೆ. ಆಕೆಯ ಬಾಲ್ಯದ ಕೆಲ ಕಹಿ ಘಟನೆಗಳನ್ನು ಓದುವಾಗ ಮನಸ್ಸು ಅತೀವ ಸಂಕಟಕ್ಕೆ ಒಳಗಾಗುತ್ತದೆ. ಪ್ರತಿ ಬಾರಿಯೂ ತೀರದ ನೋವನ್ನು ಅನುಭವಿಸಿಯೂ ಫೀನಿಕ್ಸ್ ನಂತೆ ಮತ್ತೆ ಎದ್ದು ಬರುವ ಜಯಶ್ರೀ ಅಮ್ಮನ ಅದ್ಭುತ ಪ್ರತಿಭೆಗೆ, ಕಂಚಿನ ಕಂಠಕ್ಕೆ, ರಂಗ ಭೂಮಿಯ ಅಭಿಜಾತ ಕಲಾವಂತಿಕೆಗೆ ಇದೋ ಶರಣು.

Leave a Reply

Back To Top