ಕಥಾ ಸಂಗಾತಿ
ಬಿ ಟಿ ನಾಯಕ್
ವ್ಯಾಕುಲತೆಯ ಅಮ್ಮ

ನಾನು ಆಡಿಟರ್ ಸೇವೆಯಲ್ಲಿ ಇದ್ದಾಗ ಕರೀಂನಗರ, ತೆಲಂಗಾಣದಲ್ಲಿ ಭಾನುವಾರದಂದು ಒಂದು ವೃದ್ಧಾಶ್ರಮಕ್ಕೆ ಭೇಟಿ ಕೊಟ್ಟೆ. ಅಲ್ಲಿ ರಾಮಿರೆಡ್ಡಿ ಎಂಬ ಕಾರ್ಯದರ್ಶಿಗಳ ಬಳಿಗೆ ಹೋಗಿ, ನನ್ನ ಪರಿಚಯ ಮಾಡಿಕೊಂಡೆ. ಅಲ್ಲದೆ, ಅಲ್ಲಿರುವ ವೃದ್ಧರು ಹೇಗೆ ಇರುತ್ತಾರೆಂದು ಅರಿಯಲು ಆತುರದಿಂದ ಕಾಯ್ದು ಅವರಿಗೆ ನನ್ನ ಬಯಕೆ ತಿಳಿಸಿದೆ. ಅವರು ಒಪ್ಪಿ ಅದಕ್ಕೆ ಒಂದು ಷರತ್ತು ಹಾಕಿದರು. ಯಾವುದೇ ಕಾರಣಕ್ಕಾಗಿ ಅಲ್ಲಿಯವರು ದುಃಖಿತರಾಗಬಾರದು.
ಅದಕ್ಕೆ ಒಪ್ಪಿ ನಾನು ಮೇಲಂತಸ್ತಿನ ಒಂದು ಕೋಣೆಗೆ ಹೋದೆ;
‘ಅಮ್ಮ ನಾನು ಬರಬಹುದೇ ?’
‘ಬನ್ನಿಯಪ್ಪಾ’ ಎಂದಾಗ; ನಾನು ಹೋಗಿ;
‘ಅಮ್ಮಾ ಇಲ್ಲಿಗೆ ಬಂದುದಕ್ಕೆ ನಿಮಗೆ ತೊಂದರೆ ಇಲ್ಲ ತಾನೇ ?’
‘ಇಲ್ಲ ಇಲ್ಲ. ಆದರೆ, ಬಂದ ಕಾರಣ ?
ಇಲ್ಲಿ ಹಿರಿಯರು ಇರ್ತಾರೆ, ಅವರ ಆಶೀರ್ವಾದ ಪಡೆದು ಹೋಗೋಣ ಎಂದು ಒಳಗೆ ಬಂದೆ’ ‘ಆಯ್ತಪ್ಪ.. ನನ್ನ ವಿಷಯ ಕಟ್ಟಿಕೊಂಡು ಏನಾಗಬೇಕಿದೆ. ನನ್ನ ಕಷ್ಟ ನನ್ನ ಬಳಿಯೇ ಇರಲಿ’ ಎಂದಳು.
‘ಅಮ್ಮಾ ತಮಗೆ ತುಂಬು ಕುಟುಂಬ ಇರಬಹುದು ಎಂದುಕೊಳ್ತೇನೆ. ಅವರನ್ನು ಬಿಟ್ಟು ಇಲ್ಲಿಗೆ ಹೇಗೆ ಬಂದಿರೀ ?’ ಎಂದಾಗ ಆಕೆಗೆ ಕಣ್ಣೀರು ಮೂಡಿದವು.
‘ಅಮ್ಮ, ನಿಮಗೆ ಕಣ್ಣೀರು ತರಿಸುವ ಉದ್ದೇಶ ನನಗಿಲ್ಲ. ನಿಮ್ಮ ತೊಂದರೆಗಳನ್ನು ತಿಳಿದು ಕೊಂಡು, ಸಾಧ್ಯವಾದಷ್ಟು ಸಾಂತ್ವನ ಹೇಳಬಹುದೇನೋ ಎಂದು ಬಂದಿದ್ದೇನೆ.’ ಎಂದೆ.
‘ನೋಡಪ್ಪಾ, ಯಾರೂ ಸುಮ್ಮ ಸುಮ್ಮನೆ ಕಣ್ಣೀರು ಹಾಕುವುದಿಲ್ಲ. ದುಃಖ ಮಿತಿ ಮೀರಿದಾಗ ಅದು ತಾನಾಗಿಯೇ ಹೊರ ಬರುತ್ತದೆ. ಅಲ್ಲದೆ, ಎಷ್ಟೋ ಬಾರಿ ನನಗೆ ನಾನು ಸಮಾಧಾನ ಹೇಳಿಕೊಳ್ಳುತ್ತೇನೆ ಮತ್ತು ನನ್ನಷ್ಟಕ್ಕೆ ನಾನು ಸುಮ್ಮನಾಗುತ್ತೇನೆ. ಏಕೆಂದರೆ, ಬರೀ
ಅಳುವುದರಿಂದ ದುಃಖ ಶಮನವಾಗುವುದಿಲ್ಲ ಎಂಬುದು ತಿಳಿದಿದೆಯಾದರೂ, ಅಳು ಬರುತ್ತದೆ ನಾನೇನು ಮಾಡಲಿ ?’
‘ನಾನೂ ನಿಮಗೆ ಮಗ ಎಂದುಕೊಳ್ಳಿ. ನಿಮ್ಮ ನೋವು ನನ್ನಲ್ಲಿ ಹಂಚಿಕೊಳ್ಳಿ ‘ ಎಂದಾಗ;
‘ನನಗೆ ಒಬ್ಬನೇ ಮಗ. ಅವನು ಬಹಳೇ ಬುದ್ಧಿವಂತ. ಶಾಲೆ, ಕಾಲೇಜು ಮತ್ತು ಹೆಚ್ಚಿನ ವ್ಯಾಸಂಗದಲ್ಲಿ, ಸದಾ ಮುಂದೆ ಇರುತ್ತಿದ್ದ. ಆತ ಇಂಜಿನೀರಿಂಗ್ ಮುಗಿಸಿದ ಮೇಲೆ ಮತ್ತೊಂದು ಪದವಿ ಪಡೆದ. ಆತನ ಯೋಗ್ಯತೆಗೆ ತಕ್ಕಂತೆ, ಒಳ್ಳೆಯ ಉದ್ಯೋಗ ಅಮೆರಿಕೆಯಲ್ಲಿ ಸಿಕ್ಕಿತು. ಆನಂತರ ಆತನಿಗೆ ಮದುವೆಯೂ ಆಯಿತು. ತಾನು ಅಲ್ಲಿ ಉದ್ಯೋಗ ಮಾಡುತ್ತಾ, ಕೆಲವು ದಿನಗಳ ನಂತರ ಇಡೀ ಸಂಸಾರ ಸಮೇತ ಅಲ್ಲಿಗೆ ಹೋಗಲು ಸಿದ್ಧನಾದ. ನನಗೂ ಮತ್ತು ನನ್ನ ಯಜಮಾನನಿಗೂ ಅಲ್ಲಿಗೆ ಹೋಗಲು ಬಹಳೇ ಒತ್ತಾಯಿಸಿದ. ಆದರೆ, ನನ್ನ ಯಜಮಾನ,
ವಿದೇಶಕ್ಕೆ ಹೋಗಲು ಒಪ್ಪಲಿಲ್ಲ. ನನಗೂ ಕೂಡಾ ಏಕೋ ಹಿಡಿಸಲಿಲ್ಲ. ಹೀಗಾಗಿ, ನಾವು ಇಬ್ಬರೂ ಇಲ್ಲಿಯೇ ಉಳಿದುಕೊಂಡೆವು, ಅವರು ಹೊರಟು ಹೋದರು.
ಆನಂತರ, ಒಂದೆರಡು ವರ್ಷ ನಾವಿಬ್ಬರೂ ಆರೋಗ್ಯದ ದೃಷ್ಟಿಯಿಂದ ಸ್ವಲ್ಪ ಗಟ್ಟಿಯಾಗಿದ್ದೆವು. ಹಾಗಾಗಿ, ನಮಗೆ ಆಗ ಅಷ್ಟೇನೂ ತೊಂದರೆಯಾಗಲಿಲ್ಲ. ಇನ್ನೊಮ್ಮೆ
ನಮ್ಮ ಆತ ಇಲ್ಲಿಗೆ ಬಂದಾಗ, ತನಗೆ ಪರಿಚಯವಿದ್ದ ವೃದ್ಧಾಶ್ರಮದ ಬಗ್ಗೆ ತಿಳಿಸಿದ ಮತ್ತು
ಒಳ್ಳೆಯ ವಸತಿ, ಊಟ ಕೊಡುವುದಲ್ಲದೆ ಆರೋಗ್ಯದ ಕಾಳಜಿಯನ್ನೂ ಮಾಡುತ್ತಾರೆ
ಎಂದು ತಿಳಿಸಿದ.. ಅವರಿಗೆ ಪ್ರತಿ ತಿಂಗಳು ತಾನು ನೇರವಾಗಿ ಹಣವನ್ನು ಕಳಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿ, ಯಾವ ತೊಂದರೆ ಬಾರದ ಹಾಗೆ ಅವರು
ನೋಡಿಕೊಳ್ಳುತ್ತಾರೆ ಎಂದು ಕೂಡಾ ಹೇಳಿ, ಇಲ್ಲಿ ವ್ಯವಸ್ತಿಸಿ ಹೊರಟು ಹೋದ.
ಏತನ್ಮಧ್ಯೆ ನಾನು ಅಮ್ಮನನ್ನು ಹೀಗೆ ಪ್ರಶ್ನಿಸಿದೆ;
‘ನಿಮ್ಮ ಯಜಮಾನರು ಕಾಣಿಸುತ್ತಿಲ್ಲವಲ್ಲ ?’ ಎಂದಾಗ;
‘ ಅಯ್ಯೋ, ಅದು ಒಂದು ದಾರುಣ ಕಥೆ. ಆರು ತಿಂಗಳ ಹಿಂದೆ ನನ್ನ ಯಜಮಾನನಿಗೆ
ಹೃದಯಾಘಾತವಾಗಿ ಪ್ರಾಣ ಬಿಟ್ಟರು. ಆಗ ಆಶ್ರಮದವರು ವಿದೇಶದಲ್ಲಿದ್ದ ನನ್ನ ಮಗನನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ಹಲವು ಗಂಟೆಗಳ ನಂತರ, ಆತ ದೊರಕಿದ. ಆತನು ಅಲ್ಲಿಂದ ಬೇರೊಂದು ದೇಶಕ್ಕೆ ಕೆಲಸದ ಮೇಲೆ ನಿಯೋಜನೆಗೊಂಡು ಹೋಗಿದ್ದನಂತೆ. ನಮ್ಮ ಆಶ್ರಮದವರು ಆತನಿಗೆ ವಿಷಯ ತಿಳಿಸಿದರು. ಆದರೆ, ಆತನು ಬಹಳೇ ದೂರ ಹೋಗಿದ್ದರಿಂದ
ಇಲ್ಲಿಗೆ ಬರಲು ಸಾಧ್ಯವಿಲ್ಲವೆಂದು ಹೇಳಿ, ನಮ್ಮ ಆಶ್ರಮದ ಕಾರ್ಯದರ್ಶಿಗಳಿಗೆ ಆ ಉಸ್ತುವಾರಿಯನ್ನು ವಹಿಸಿದ ಮತ್ತು ತಕ್ಷಣಕ್ಕೆ ಒಂದು ಲಕ್ಷ ರೂಪಾಯಿಯನ್ನು
ಕಳಿಸಿದ. ಆ ಹಣವನ್ನು ಆಶ್ರಮದವರು ವ್ಯಯ ಮಾಡಿ, ಸಂಸ್ಕಾರ ಕ್ರೀಯೆ ನಡೆಸಿ, ಉಳಿದ ಹಣವನ್ನು ಹಾಗೆಯೇ ತಮ್ಮಲ್ಲಿ ಇಟ್ಟುಕೊಂಡಿದ್ದಾರೆ. ಆಗಿನ ಜವಾಬ್ದಾರಿ ಅಷ್ಟಕ್ಕೇ
ಮುಗಿಸಿದರು. ಆದರೆ, ನನ್ನ ಯಜಮಾನನಿಗೆ ಇನ್ನೂ ಮೋಕ್ಷ ಸಿಕ್ಕಿಲ್ಲ, ಈಗಾಗಲೇ ಆರು ತಿಂಗಳು ಗತಿಸಿವೆ, ಆತನ ಮರಣೋತ್ತರ ಕ್ರೀಯೆಗಳು ಆಗಿಲ್ಲ. ನನ್ಮಗ ಈಗ ಬರ್ತಾನೆ ಆಗ ಬರ್ತಾನೆ ಎಂದು ದಿನಂಪ್ರತಿ ಕಾಯುತ್ತಿದ್ದೇನೆ. ಇಲ್ಲಿಗೆ ಬರಬೇಕೆಂದಾಗ ವಿಘ್ನವು ಆತನನ್ನು ದಾರಿ ತಪ್ಪಿಸುತ್ತಿದೆ. ಅಲ್ಲಿ ಮೂಲೆಯಲ್ಲಿಯ ಕೈಚೀಲ ನೋಡು. ಅದು ನಮ್ಮ ಯಜಮಾನನ ಆಸ್ತಿಗಳನ್ನು ಜೋಪಾನವಾಗಿ ತೆಗೆದು ಇಟ್ಟಿದ್ದಾರೆ. ಆ ವಿಸರ್ಜನೆಯ ಕೆಲಸ ಯಾವಾಗ
ಆಗುತ್ತದೆ ಎಂಬುದು ತಿಳಿಯದಾಗಿದೆ. ನನ್ನ ಪತಿಯ ಆತ್ಮ ಇಲ್ಲಿಯೇ ಓಡಾಡುತ್ತಾ ಇದೆ
ಎಂದು ನನಗೆ ಅನ್ನಿಸುತ್ತದೆ.
ಒಂದು ಬಾರಿ ಆತನು ಇಲ್ಲಿಗೆ ಬರುವ ತಯಾರಿ ಮಾಡಿಕೊಂಡಿದ್ದನು. ಕೊನೆ ಘಳಿಗೆಯಲ್ಲಿ ಭದ್ರತೆಗಳ ಕಾರಣದಿಂದ ವಿಮಾನ ಸೇವೆ ರದ್ದು ಮಾಡಿದರಂತೆ. ಅದಾದ ಮೇಲೆ ಬರೋಬ್ಬರಿ ಒಂದು ತಿಂಗಳಿಗೆ ಕೂಡಾ, ಇಲ್ಲಿಗೆ ಬರುವ ತಯಾರಿ ಮಾಡಿಕೊಂಡಿದ್ದ. ಆತನು ಒಂದು ಜಿಮ್ಮೆದಾರಿ ಹುದ್ದೆಯಲ್ಲಿ ಇದ್ದುದರಿಂದ ಬರುವುದಕ್ಕೆ ಆಗಲೂ ಅಡಚಣೆ ಉಂಟಾಯಿತಂತೆ. ಆದರೆ, ಸಧ್ಯಕೊಂದು ಸಂತೋಷದ ಸುದ್ದಿ ಏನೆಂದರೆ, ಆತ ಮುಂದಿನ ತಿಂಗಳು ದುಬೈಗೆ
ಬರುವ ಕಾರ್ಯಕ್ರಮ ಇದೆ. ಅಲ್ಲಿಗೆ ಬಂದಾಗ, ಹತ್ತಿರದಲ್ಲಿ ನಮ್ಮ ದೇಶ ಇದೆ, ಇಲ್ಲಿಗೆ
ಬಂದು ಹೋಗುತ್ತೇನೆ ಎಂದು ಒಂದು ಬಾರಿ ಫೋನಿನಲ್ಲಿ ತಿಳಿಸಿದ. ಆಗ ನನಗೆ ಆತನು
ಇಲ್ಲಿಗೆ ಬಂದೇ ಬಿಟ್ಟನೇನೋ ಎನ್ನುವ ಹಾಗೆ ಖುಷಿಯಾಗಿತ್ತು. ಆ ಕರೆ ಬಂದು ಈಗಾಗಲೇ ಎರಡು ತಿಂಗಳಾಯಿತು.’ ಎಂದು ನೊಂದು ನುಡಿದಳು. ಆಗ ನಾನು;
ಅಮ್ಮ, ಸಂಸ್ಕಾರ ಕ್ರೀಯೆ ಮಾಡಬೇಕಾದರೆ, ನಿಮ್ಮ ಮಗನೇ ಆಗಬೇಕೆಂದೇನಿಲ್ಲ. ಆತನಿಗಾಗಿ ಕಾಯುವದಕ್ಕಿಂತ, ಇಲ್ಲಿ ಯಾರಾದರೂ ನಿಮ್ಮ ಸಮೀಪದ ಸಂಬಂಧಿಗಳ ಜೊತೆಗೆ ಮಾಡಿಸಬಹುದಲ್ವೆ ?
‘ನೀನು ಹೇಳೋದು ಒಂದು ರೀತಿ ಸರಿಯಾಗಿದೆ. ಆದರೆ, ಅವರಿವರರಿಂದ ಸಂಸ್ಕಾರ ಮಾಡಿಸುವ ಹಾಗಿದ್ದರೆ, ಇದ್ದ ಒಬ್ಬ ಮಗ ವ್ಯರ್ಥ ಆದಂತೆಯೇ ಅಲ್ವ ?’
‘ಅಮ್ಮ.. ಇದಕ್ಕೆ ನಾನು ಏನೂ ಹೇಳಲಾರೆ ‘ಎಂದು ಸುಮ್ಮನಾದೆ. ಅಷ್ಟರಲ್ಲಿ ಪರಿಚಾರಕ ಅಮ್ಮನ ಬಳಿ ಬಂದು ಆಕೆಗೆ ಫೋನ್ ಬಂದಿದೆ ಎಂದು ತಿಳಿಸಿದ. ಆಗ ಅಮ್ಮ ಎದ್ದು ನಿಂತು, ತಕ್ಷಣಕ್ಕೆ ಜಿಂಕೆಯಂತೆ ಶರವೇಗದಲ್ಲಿ ಕೆಳಗೆ ಹೋದಳು. ಆಕೆಯ ಮಗ ಕರೆ ಮಾಡಿದ್ದಾನೆ ಎಂದು ಅಲ್ಲಿಯ ಸಿಬ್ಬಂದಿ ತಿಳಿಸಿದಾಗ, ಬಹಳೇ ಹಿಗ್ಗಿದಳು. ಬಹುಶಃ ತನ್ನ ಮಗ ದುಬೈಗೆ ಬಂದಿರಬಹುದೇನೋ ಎಂದು ಲೆಖ್ಖ ಹಾಕಿದಳು. ಆದರೆ, ದುರಾದೃಷ್ಟ ಹೇಗಿದೆ ಎಂದರೆ,
ಆಕಡೆಯಿಂದ ಈಕೆಯ ಯೋಗ ಕ್ಷೇಮವೇನೋ ವಿಚಾರಿಸಿದ. ಆದರೆ, ತಾನು ದುಬೈಗೆ ಬರುವ ಕಾರ್ಯಕ್ರಮ ರದ್ದಾಗಿದೆ ಎಂದು ತಿಳಿಸಿದನಂತೆ. ಹಾಗಾಗಿ, ತಾನು ಬರುವುದು ಇನ್ನೂ
ವಿಳಂಬವಾಗಬಹುದು ಎಂದು ಹೇಳಿದನಂತೆ. ಅಲ್ಲದೆ, ಆತನು ಆಕೆಯ ಸಮಾಧಾನಕ್ಕಾಗಿ, ತಾನು ರಜೆಯನ್ನು ಕೋರಿ ಅರ್ಜಿ ಹಾಕಿದ್ದಾನೆಂದು, ಬಹುಶಃ ಮಂಜೂರಿ ಆಗಬಹುದೆಂದು
ಹೇಳಿ ಫೋನು ಇಟ್ಟನಂತೆ. ಆತ ಸಧ್ಯಕ್ಕಂತೂ ಬರುವುದಿಲ್ಲ ಎಂಬುದು ಧೃಢವಾದಾಗ, ಆಕೆ ಬಿಕ್ಕಿ ಬಿಕ್ಕಿ ಅತ್ತಳು !
ಆಕೆಯ ಪರಿಸ್ಥಿತಿ ನೋಡಿ ಆಶ್ರಮದ ಕಾರ್ಯದರ್ಶಿಯವರು ಚಿಂತಿತರಾದರು. ಆಗ ಅವರು ಅಮ್ಮನ ಬಳಿ ಬಂದು, ನನ್ನ ಮುಂದೆಯೇ ಹೀಗೆ ಹೇಳಿದರು.
‘ಅಮ್ಮ ಏನೂ ಬೇಜಾರು ಮಾಡಿಕೊಳ್ಳಬೇಡಿ, ನಿಮ್ಮ ಮಗನ ರಜೆ ಮಂಜೂರು ಆಗಿದೆಯಂತೆ. ಹಾಗಂತ ಈಗ ತಾನೇ ಮರು ಕರೆ ಮಾಡಿ ಖಚಿತ ಪಡಿಸಿದ.ಎಂದಾಗ ಆಕೆಯ ದುಃಖ ತಕ್ಕ
ಮಟ್ಟಿಗೆ ಶಮನ ಮಾಡಿಕೊಂಡಳು. ಅಲ್ಲದೆ, ಆಕೆ ತನ್ನ ಮನಸ್ಸಿನಲ್ಲಿ ಹೀಗೆ ಅಂದುಕೊಂಡಳು ‘ಇಂಥಹ ಕರೆಗಳು ಅದೆಷ್ಟೋ ಬಂದಿವೆ, ಆದರೆ, ಅದರಲ್ಲಿ ಹುರುಳಿರುವುದಿಲ್ಲ. ಎಂದು ಸುಮ್ಮನಾದಳು. ಆಗ ಕಾರ್ಯದರ್ಶಿಗಳು ಅಲ್ಲಿಂದ ಹೋಗುವಾಗ ನನ್ನೆಡೆಗೆ ಸನ್ನೆ ಮಾಡಿ, ಹೊರಗೆ ಬರಲು ಹೇಳಿದರು. ಆಗ ಅಮ್ಮನಿಗೆ ನಮಸ್ಕರಿಸಿ, ನಾನೂ ಅವರ ಹಿಂದೆಯೇ ಹೊರಟೆ.
ಸಾಹೇಬ್ರೇ, ಇಲ್ಲಿಯ ವಾಸ್ತವಿಕವೇ ಬೇರೆ. ನಮ್ಮಲ್ಲಿಯ ವೃದ್ಧರಿಗೆ ಯಾವ ಮಾನಸಿಕ ಯಾತನೆ ಮೂಡಬಾರದು ಎಂಬುದೇ ನಮ್ಮ ಉದ್ದೇಶ. ಈಗಾಗಲೇ, ಯಜಮಾನನನ್ನು ಕಳೆದು ಕೊಂಡಾಗಿದೆ, ಆ ಸ್ಥಿತಿ ಮರುಕಳಿಸಬಾರದೆಂದೇ ನಮ್ಮ ಪ್ರಯತ್ನ. ಈಗ ಒಂದು ಸುಳ್ಳು ಹೇಳಿ ಆಕೆಯ ದುಃಖವನ್ನು ತಕ್ಕ ಮಟ್ಟಿಗೆ ಶಮನ ಮಾಡಿದ್ದೇವೆ. ಅವರ ಮಗ ರಜೆಯ ಸಲುವಾಗಿ ಇನ್ನೂ ಪ್ರಯತ್ನದಲ್ಲಿಯೇ ಇದ್ದಾನೆ ಮತ್ತು ರಜೆ ಮಂಜೂರಿ ಸಧ್ಯಕ್ಕೆ ಆಗುತ್ತಿಲ್ಲ. ಅಲ್ಲಿಯ ಪಾಶ್ಚಿಮಾತ್ಯರಿಗೆ ನಮ್ಮಂತೆ ಭಾವ, ಉದ್ವೇಗ ಇರುವುದಿಲ್ಲ ಮತ್ತು ನಮ್ಮ ಆಚರಣೆಗಳು ಅವರಿಗೆ ಅರ್ಥವಾಗುವುದಿಲ್ಲ. ಹೀಗಾಗಿ, ಇದು ಒಂದು ದುರುಳ ಸಂಕಟ. ಆಡಿಟರ್ ಸಾಹೇಬರೇ, ನೀವು ಇಲ್ಲಿಯ ಅನುಭವ ಕಂಡು ಕೊಂಡೀರಲ್ಲ, ತಾವು ಹೊರಡಬಹುದು ಧನ್ಯವಾದಗಳು ಎಂದು ಹೇಳಿ ಕಾರ್ಯದರ್ಶಿಗಳು ನನ್ನನ್ನು ಬಾಗಿಲವರೆಗೆ ಬಂದುಬೀಳ್ಕೊಟ್ಟರು !
ಬಿ.ಟಿ.ನಾಯಕ್

ಈ ಕಥೆ ಓದಿದ ಮೇಲೆ ಅನಿಸಿತು. ತಂದೆ,ತಾಯಿ ಗಳು ಮಕ್ಕಳ ಭವಿಷ್ಯ ಉಜ್ವಲ ವಾಗಲಿ ಎಂದು ಕಷ್ಟ ಪಟ್ಟು ಒಳ್ಳೆಯ ಶಿಕ್ಷಣ ಕೊಡಿಸುವುದು ವರವೋ ಶಾಪವೋ ಎನ್ನುವ ಪ್ರಶ್ನೆ ಉದ್ಭವ ಆಗುವದು ಸಹಜ.ಅಜ್ಜೀ ಅವರಂತೆ ತಪಿಸುವರು ಹೆಚ್ಚಾಗುತ್ತಿರುವುದು ಕಳವಳದ ಸಂಗತಿ. ಇದಕ್ಕೆ ಪರಿಹಾರ ಹೂಡುಕುವದು ಸಮಾಜ ಹಾಗೂ ಸರ್ಕಾರ ಮುಂದೆ ಬಂದು ಇದನ್ನು ತಡೆಯಬಹುದು
ನಿಮ್ಮ ಕಥೆ ‘ವ್ಯಾಕುಲತೆ ಅಮ್ಮ’ ಅರ್ಥ ಪೂರ್ಣ ವಾಗಿ ಮೂಡಿ ಬಂದೀದೆ.
ಅಭಿನಂಧನೆಗಳು
ಈ ಮೇಲಿನ ಫ್ರತೀಕ್ರೀಯೆ ಬರೆದವರು
ವಾಮನಾಚಾರ್ಯ
ವಿದೇಶಿ ವ್ಯಾಮೋಹ ಹೆಚ್ಚಾದಂತೆ ಈ ಸಮಸ್ಯೆ ಕೂಡ ಇರುತ್ತದೆ. ಮೊದಲಿಗೆ ಹಲವು ಪೋಷಕರು ಮಗ/ಮಗಳು ವಿದೇಶಕ್ಕೆ ಹಾರಿ ಲಕ್ಷಾಂತರ ಸಂಪಾದನೆ ಮಾಡಲಿ ಎಂದೇ ಬಯಸುತ್ತಾರೆ. ಆದರೆ ವಯಸ್ಸಾದಂತೆ ತಾವು ಒಂಟಿಯಾದಂತೆನಿಸಿ ಪರಿತಾಪ ಪಡುತ್ತಾರೆ. ಇಂತಹ ಸ್ಥಿತಿಗೆ ಮಕ್ಕಳು ಹಾಗೂ ಪೋಷಕರು ಸಹಾ ಕಾರಣ. ಕಥೆ ತುಂಬಾ ಚೆನ್ನಾಗಿ ಬಂದಿದೆ. ಓದಿ ಸ್ವಲ್ಪ ಹೊತ್ತು ಕಸಿವಿಸಿಗೊಂಡಿತು.
ಮಕ್ಕಳನ್ನು ಏನೆಲ್ಲಾ ಕಷ್ಟಪಟ್ಟು, ಕನಸು ಕಟ್ಟಿ ಬೆಳೆಸುತ್ತೇವೆ, ಆದರೆ ಮಕ್ಕಳಲ್ಲಿ ಹೆತ್ತವರ ಬಗ್ಗೆ ಈ ರೀತಿಯ ತಾತ್ಸಾರ ಮನೋಭಾವ ಯಾಕೆ ಬರುತ್ತವೆಯೊ ಗೊತ್ತಿಲ್ಲ.
ತಮ್ಮ ಅನುಭವವನ್ನು ಹಂಚಿಕೊಂಡಿದ್ದಕ್ಕೆ ಹಾಗೂ ಸಂಗಾತಿ ಪತ್ರಿಕೆಯಲ್ಲಿ ಇದು ತಮ್ಮ 25ನೆಯ ಲೇಖನವೆಂದು ತಿಳಿದು ಸಂತೋಷವಾಯಿತು ಹಾಗೂ ಅಭಿನಂದನೆಗಳು ಸರ್. ಮತ್ತಷ್ಟು ಅನುಭವದ ಲೇಖನಗಳು ಬರಲಿ ಸರ್.
ಮಕ್ಕಳು ಉದ್ಯೋಗ ಅರಸಿಕೊಂಡು ವಿದೇಶಗಳಿಗೆ ಹೋಗಿರುವ ಬಹಳಷ್ಟು ಹೆತ್ತವರ ಪಾಡು ಇದೇ ಆಗಿದೆ. ಎಲ್ಲವೂ ಕಾಲಾಯ ತಸ್ಮೈ ನಮಃ ಎನ್ನಬೇಕಷ್ಟೇ.
ಈಗಿನ ವಾಸ್ತವಿಕ ಚಿತ್ರಣ ಕಥೆಯಲ್ಲಿದೆ. ವಿದೇಶಕ್ಕೆ ಹಾರಿದ ಮಕ್ಕಳು ಇಲ್ಲಿಯ ಸಂಬಂಧಗಳನ್ನು ಕಾಲಕ್ರಮದಲ್ಲಿ ಕಡಿದುಕೊಳ್ಳುತ್ತಿದ್ದಾರೆ. ಮಾನವೀಯತೆ, ರಕ್ತಸಂಬಂಧ, ಕರುಣೆ, ದಯೆ ಇವೆಲ್ಲದರ ಬಗ್ಗೆ ಅವರು ಯೋಚಿಸುವುದಿಲ್ಲ. ಹಣವೊಂದೇ ಅವರೆದುರು ನರ್ತಿಸುತ್ತಿರುತ್ತದೆ. ಹಣದಿಂದ ಎಲ್ಲವೂ ಸಾಧ್ಯ ಎನ್ನುವ ಮಿಥ್ಯೆಯ ಹಿಂದಿರುವ ಸತ್ಯ ಅವರಿಗೆ ಅರ್ಥವಾಗಬೇಕಾದರೆ ಬದುಕಿನ ಇಳಿಸಂಜೆ ಬರಬೇಕು.
ಅಭಿನಂದನೆಗಳು.