ದಿನಗಳು ಉರುಳುತ್ತಾ ಇದೆ. ಉದರದಲ್ಲಿ ಕಂದನ ಮಿಸುಕಾಟ ಓಡಾಟದ ತುಂಟತನಗಳ ಅರಿವಾದಂತೆ ಕಲ್ಯಾಣಿಯು ಉತ್ಸಾಹಗೊಳ್ಳುವರು. ನನ್ನ ಜೊತೆ ಈಗ ಪುಟ್ಟ ಜೀವವೊಂದು ಇದೆ. ನನ್ನ  ನೋವು ಸಂಕಟಗಳಿಗೆ ಸಾಂತ್ವನ ನೀಡಲು ಪುಟ್ಟ ಜೀವವೊಂದು ನನ್ನಲ್ಲಿ ತುಡಿಯುತ್ತಿದೆ. ದೇವನು ನನ್ನ ವಿಧಿ ಲಿಖಿತದಲ್ಲಿ

ಇಂಥಹಾ ವಿಪರೀತ ಪರಿಸ್ಥಿತಿಯಲ್ಲಿ ಕೂಡಾ ನನಗೆ ಊರುಗೋಲಾಗಿ, ಸಾಂತ್ವನವಾಗಿ, ಸಂಜೀವಿನಿಯಾಗಿ ಈ ಪುಟ್ಟ ಜೀವವನ್ನು ನನ್ನ ಒಡಲಲ್ಲಿ ಇಟ್ಟಿದ್ದಾನೆ. ಕಷ್ಟ ಕೊಡುವವನು ಅವನೇ ಕೈ ಹಿಡಿದು ಕಾಪಾಡುವವನು ಅವನೇ… ನೀರಿನಲ್ಲಿ ಮುಳುಗಿಸುವವನು ನೀನೇ ಕೃಷ್ಣಾ… ಗರಿಕೆ ಹುಲ್ಲಿನ ಕಡ್ಡಿಯನ್ನು ಸಮಯಕ್ಕೆ ಇತ್ತು ಮೇಲೆತ್ತಿ ಕಾಪಾಡುವವನು ನೀನೇ ಕೃಷ್ಣಾ…. ನಿನ್ನ ನಂಬಿದವರ ಕೈ ನೀ ಎಂದಿಗೂ ಬಿಡುವುದಿಲ್ಲ….ದಯಾಮಯಿ ನೀನು…ಎಂದು ಕಣ್ಣು ಮುಚ್ಚಿ ತನ್ನ ಆಪತ್ಕಾಲದ ಅಂಬಲಪ್ಪುಳ ಭಗವಾನನನ್ನು ಮನಸ್ಸಿನಲ್ಲಿಯೇ ನೆನೆದು ತುಪ್ಪದ ದೀಪ ಹಚ್ಚುವ ಹರಕೆ ಹೊತ್ತರು.  ಈ ಸಂತಸದ ಸುದ್ಧಿಯನ್ನು ಪತಿ ಹಾಗೂ ಮಕ್ಕಳಿಗೆ ತಿಳಿಸಲು ಉತ್ಸುಕರಾದರು.  ಪತಿ ಹಾಗೂ ಮಕ್ಕಳ ಚಿಂತೆಯಿಂದ ಊಟ ನಿದ್ರೆ ಅವರಿಗೆ ಇಲ್ಲದಾಯಿತು. ಮನೆ ಹಾಗೂ ತೋಟ ಆಸ್ತಿ ಎಲ್ಲವೂ ಪರರ ಪಾಲಾದದ್ದು ಅವರಿಗೆ ದುಖಃ ತರಲಿಲ್ಲ. ಮಕ್ಕಳು ಹಾಗೂ ಪತಿ ಹಿಂದಿರುಗಿ ಬಾರದೇ ಇರುವುದು ಅವರಿಗೆ ತಾಳಲಾರದ ದುಖಃ ಉಂಟು ಮಾಡುತ್ತಿತ್ತು. ಇಂದು ಬರುವರು ನಾಳೆ ಬರುವರು ಎಂದು ದಾರಿ ಕಾಯುವುದೇ ಅವರ ಕೆಲಸವಾಗಿತ್ತು. ತೋಟ ಖರೀದಿಸಲು ಇಷ್ಟು ದಿನ ಬೇಕಾಯಿತೆ?  ಶುರುವಿನಲ್ಲಿ ಪತಿಯು ತನ್ನ ಮೇಲೆ ಕೋಪಗೊಂಡು ಪುನಃ ಇಲ್ಲಿಗೆ ಬಂದು ನನ್ನನ್ನು ಕರೆದುಕೊಂಡು ಹೋಗಲು ತಡ ಮಾಡುತ್ತಾ ಇರುವರು ಅನಿಸಿತ್ತು. ಆದರೆ ದಿನ ಕಳೆದಂತೆ ಆತಂಕ ಮನದಲ್ಲಿ ಮನೆ ಮಾಡಿತು .ಆದರೆ ಈಗ ಅವರಿಗೆ ಯಾವುದೋ ಆಪತ್ತು ಸಂಭವಿಸಿದೆ ಎಂದು ಮನಸ್ಸು ಸಾರಿ ಸಾರಿ ಚೀರಿ ಹೇಳುತ್ತಿರುವಂತೆ ಭಾಸವಾಗುತ್ತಿತ್ತು. ತೋಟ ಖರೀದಿಸುವ ವಿಚಾರ ಹೇಳಿದ ದಿನದಿಂದ ಕಾಣಿಸಿಕೊಂಡ ಅಪಶಕುನಗಳ ನೆನಪಾಗಿ ಮನಸ್ಸು ಅಧೀರವಾಯಿತು.

ಮತ್ತೆಯೂ ಕೆಟ್ಟ ಶಕುನಗಳು ಅವರ ಮನಸ್ಸನ್ನು ವ್ಯಾಕುಲಗೊಳಿಸುತ್ತಿತ್ತು. ಇಷ್ಟೂ ದಿನ ಅಲ್ಲಿಂದ ಒಂದು ಪತ್ರ ಬಾರದೇ ಇರುವುದು ಕೂಡಾ ಅವರ ಆತಂಕಕ್ಕೆ ಕಾರಣವಾಯಿತು. “ಏನಾಯಿತು ನನ್ನ ಮಕ್ಕಳಿಗೂ ಹಾಗೂ ಪತಿಗೂ…. ಅಣ್ಣನಿಗೆ ಹೇಳಬೇಕು ಒಮ್ಮೆ ಅವರ ಅಕ್ಕನ ಮನೆಯನ್ನು ಹುಡುಕಿ ಹೋಗಿ ಅವರ ವಿವರಗಳನ್ನು ತಿಳಿಯಲು…. ಇನ್ನೂ ನನ್ನಿಂದ ಈ ನೋವುಗಳನ್ನು ತಡೆಯಲು ಸಾಧ್ಯವಿಲ್ಲ. ಈ ಪರಿಸ್ಥಿತಿಯೂ ನನ್ನನ್ನು ಉಸಿರು ಕಟ್ಟಿಸುತ್ತಿದೆ…. ಇಲ್ಲಿ ತವರಿನಲ್ಲಿ ಯಾವುದೇ ತೊಂದರೆ ನನಗಿಲ್ಲ….ಪ್ರೀತಿ ಹಾಗೂ ಅತೀ ಕಾಳಜಿಯಿಂದ ನನ್ನನ್ನು ನೋಡಿಕೊಳ್ಳುವ ಅಪ್ಪ ಅಮ್ಮ, ಅಣ್ಣಂದಿರು ಅತ್ತಿಗೆಯರು ಇದ್ದಾರೆ…. ನನ್ನ ತವರು ನನಗೆ ಸ್ವರ್ಗಕ್ಕೆ ಸಮಾನ….ಇಲ್ಲಿ ಯಾವುದಕ್ಕೂ ಕೊರತೆ ಇಲ್ಲ….ಆದರೂ ಪತಿಯ ನೆರಳು, ಮಕ್ಕಳ ಮಮತೆ ವಾತ್ಸಲ್ಯಗಳು ಇಲ್ಲದ ನನ್ನ ಈ ಬಾಳು ನರಕಕ್ಕೆ ಸಮ…. ಅಷ್ಟ ಐಶ್ವರ್ಯಗಳು ನನ್ನ ಪಾಲಿಗೆ ಸುಖದ ಸುಪ್ಪತ್ತಿಗೆ ಆಗದೇ ಮುಳ್ಳಿನ ಹಾಸಿಗೆಯಾಗಿದೆ”…. ಹೀಗೆ ಅತಿಯಾದ ಚಿಂತೆಯಿಂದ ದಿನ ದಿನಕ್ಕೂ ಕೃಶರಾಗ ತೊಡಗಿದರು. ಊಟ ತಿಂಡಿ ಹಣ್ಣು ಹಂಪಲು ಬೇಡವಾಯಿತು. ಉದರದಲ್ಲಿ ಇರುವ ಜೀವಕ್ಕಾಗಿ ಬಹಳ ಹಸಿವಾದಾಗ ಏನಾದರೂ ತಿನ್ನುತ್ತಾ ಇದ್ದರು. ಇವರ ಈ ಸ್ಥಿತಿಯನ್ನು ನೋಡಿ ತವರಿನ ಎಲ್ಲರಿಗೂ ಆತಂಕ ಶುರುವಾಯಿತು. ಪ್ರಸವದ ದಿನ ಸಮೀಪಿಸುತ್ತಾ ಇದೆ.  ಅವರ ಈಗಿನ ಸ್ಥಿತಿ ನೋಡಿದರೆ ಕರುಳು ಕಿತ್ತು ಬರುವ ಹಾಗೆ ಅನಿಸುತಿತ್ತು. ಬಿಳುಚಿಕೊಂಡ ಮುಖ ಗುಳಿ ಬಿದ್ದ ಕಣ್ಣುಗಳು, ಕಣ್ಣುಗಳ ಸುತ್ತ ಕಪ್ಪು ವರ್ತುಲ. ಕುತ್ತಿಗೆಯ ಕೆಳಗೆ ಎಲುಬುಗಳು ಕಾಣಿಸುತ್ತಿದೆ. ಸೋತ ಮುಖ, ಉಟ್ಟ ವಸ್ತ್ರವು ಕೂಡಾ ಬೇಕೋ ಬೇಡವೋ ಎಂದು ಉಟ್ಟ ಹಾಗೆ ಇದೆ.  ಹೊಟ್ಟೆ ಮಾತ್ರ ದೊಡ್ಡದಾಗಿ ಕಾಣಿಸುತ್ತಿದೆ. ದೇಹ ಸೋತು ಕೃಶವಾಗಿದೆ. ಕಪ್ಪು ನೀಳ ಕೇಶರಾಶಿಯನ್ನು ಉದಾಸೀನವಾಗಿ  ಹೆಣೆದು ಕಟ್ಟಿದ್ದಾರೆ.  

ದೃಷ್ಟಿ ಮಾತ್ರ ಸದಾ ಹೊರ ಬಾಗಿಲ ಕಡೆಗೆ. ಮಗಳ ಈ ಸ್ಥಿತಿಯನ್ನು ಕಂಡು ಅವರ ಅಪ್ಪ ಅಮ್ಮನಿಗೆ ಏನು ಮಾಡಬೇಕೆಂದು ತೋಚುತ್ತಿಲ್ಲ. ಅಣ್ಣಂದಿರು ಅತ್ತಿಗೆಯರು ಕೂಡಾ ಅವರ ಈ ವೇದನೆ ನೋಡದಾದರು. ಅಣ್ಣಂದಿರ ಮಕ್ಕಳು ಕೂಡಾ ಅತ್ತೆಯ ಸ್ಥಿತಿ ಕಂಡು ಮರುಗಿದರು. ಯಾರಲ್ಲೂ ಹೆಚ್ಚು ಮಾತಿಲ್ಲ. ಸದಾ ಮಕ್ಕಳದೇ ಚಿಂತೆ. ನನ್ನ ಮಕ್ಕಳು ಈಗ ನನ್ನ ಜೊತೆ ಇದ್ದಿದ್ದರೆ ಎಂದು ಅಣ್ಣನ ಮಕ್ಕಳನ್ನು ಕಂಡಾಗ ಮನಸ್ಸು ಬಯಸುತ್ತಿತ್ತು. ಗರ್ಭಿಣಿಯರಿಗೆ ಇರುವ ಬಯಕೆ ಕೂಡಾ ಇಲ್ಲದಾಯಿತು. ಉದರದಲ್ಲಿ ಆಗಾಗ ಮಿಸುಕಾಡಿ ಆ ಪುಟ್ಟ ಜೀವವು ತನ್ನ ಇರುವನ್ನು ಸೂಚಿಸುತ್ತಾ ಇತ್ತು. ಆಗೆಲ್ಲಾ ಹೊಟ್ಟೆಯ ಮೇಲೆ ಕೈ ಆಡಿಸುತ್ತಾ ಸವರಿ…. “ನನ್ನ ಕಂದಾ… ನಿನ್ನ ಅಪ್ಪ ಅಕ್ಕಂದಿರು ಅಣ್ಣಂದಿರು ಇನ್ನೂ ಬಂದಿಲ್ಲವಲ್ಲ….ನೀನು ನನ್ನ ಉದರದಲ್ಲಿ ಬೆಚ್ಚಗೆ ಇರುವುದನ್ನು ಕೂಡಾ ಅವರಿಗೆ ತಿಳಿಸಲಾರದೆ ಹೋದೆನಲ್ಲ…. ನಾನೋರ್ವ ನತದೃಷ್ಟ ಪತ್ನಿ ಹಾಗೂ ಅಮ್ಮ….ನೀನು ನನ್ನ ಉದರದಲ್ಲಿರುವುದನ್ನು ತಿಳಿದು ಎಲ್ಲರೂ ಸಂತೋಷದಿಂದ ನಿನ್ನ ಇರುವನ್ನು ಸಂಭ್ರಮಿಸಿ ನಿನ್ನ ಆಗಮನವನ್ನು ಕಾಯುವ ಆ ಕಾತುರ ನೋಡುವ ಭಾಗ್ಯ ನನಗೆ ಇಲ್ಲದಾಗಿ ಹೋಯಿತು….ನಾನು ಬಹಳ ದೊಡ್ಡ ತಪ್ಪು ಮಾಡಿದೆ….ಪತಿಯೇ ಪರದೈವ….ಅವರೇ ನನ್ನ ಎಲ್ಲಾ ಎನ್ನುವುದು ತಿಳಿದೂ ಕೂಡಾ ಮತ್ತೆ ಹಿಂತಿರುಗಿ ಬರುವರು ಎನ್ನುವ  ಹುಚ್ಚು ಆಸೆಯಿಂದ ಜೊತೆಗೆ ಹೋಗದೇ ಇಲ್ಲಿಯೇ ಉಳಿದು ಬಿಟ್ಟೆನಲ್ಲ….ನನ್ನ ಮಕ್ಕಳ ಅಪರಾಧಿ ನಾನು….ನಾನು ಇಲ್ಲದೇ ನನ್ನ ಮಕ್ಕಳು ಎಷ್ಟು ಕೊರಗುತ್ತಾ ಇರಬಹುದು…. ಗಂಡು ಮಕ್ಕಳು ಇನ್ನೂ ಚಿಕ್ಕವರು…ಕೊನೆಯವನಂತು ಬಹಳ ಚಿಕ್ಕವನು….ನನ್ನ ನೋಡದೇ ಇರನು…ಈಗ ಹೇಗೆ ಇದ್ದಾನೋ….ನನ್ನ ಮಕ್ಕಳ ನೋವಿಗೆ ಅಳುವಿಗೆ ಸಾಂತ್ವನ ಹೇಳದ ನಾನು ಕೂಡಾ ಒಬ್ಬ ತಾಯಿಯೇ?… ನಾನಿದ್ದು ಸತ್ತಂತೆಯೇ ಎಂದು ತನ್ನನ್ನು ತಾನು ದೂಷಿಸುತ್ತಾ…. ಕಲ್ಯಾಣಿ ಹೀಗೆ ವ್ಯರ್ಥ ಪ್ರಲಾಪ ಮಾಡುತ್ತಾ ಅಳುತ್ತಾ ದಿನಗಳನ್ನು ದೂಡುತ್ತಾ ಇದ್ದಾರೆ. ಸದಾ ಕಣ್ಣುಗಳು ನೀರಿನ ಕೊಳಗಳಾಗಿ ತುಂಬಿಕೊಂಡಿವೆ.

ಹೀಗೇ ಒಂದು ದಿನ ಪತಿ ಹಾಗೂ ಮಕ್ಕಳ ಯೋಗ ಕ್ಷೇಮದ ಬಗ್ಗೆ ಚಿಂತಿಸುತ್ತಾ ಕುಳಿತಿರುವಾಗ ಇದ್ದಕ್ಕಿದ್ದ ಹಾಗೆ ಕಲ್ಯಾಣಿಗೆ ಸೊಂಟ ಹಾಗೂ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿತು. ಮಕ್ಕಳೆಲ್ಲರೂ ಒಟ್ಟಾಗಿ….” ಅಮ್ಮಾ” ….ಎಂದು ಕೂಗಿದ ಹಾಗೆ ಅನಿಸಿತು. ನೋವು ಹೆಚ್ಚುತ್ತಲೇ ಹೋಯಿತು. ತಡೆಯಲು ಅಸಾಧ್ಯವಾಯಿತು. ಕಣ್ಣ ಮುಂದೆ ಕತ್ತಲೆ ಆವರಿಸಿತು. ನಿಧಾನವಾಗಿ ಎದ್ದು ನಿಂತರು. ಅತ್ತಿಗೆಯರನ್ನು ಕರೆಯಬೇಕು ಎಂದು ಇನ್ನೇನು ಎರಡು ಹೆಜ್ಜೆ ಇಟ್ಟಾಯಿತು. ಇದ್ದಕ್ಕಿದ್ದ ಹಾಗೆ ನೆತ್ತಿ ನೀರು ಒಡೆದು  ಲೋಳೆಯಂತಹ ದ್ರವ ಕಾಲುಗಳನ್ನು ಉಟ್ಟ ಬಟ್ಟೆಯನ್ನು ತೋಯಿಸಿ ನೆಲದಲ್ಲಿ ಹರಡಿತು. ಒಮ್ಮೆಲೇ ಆದ ಈ ಘಟನೆಯಿಂದ ಗಾಭರಿಯಾಗಿ ತಲೆ ಸುತ್ತು ಬಂದಂತಾಗಿ ….” ಅಮ್ಮಾ”…. ಎಂದು ಕೂಗಿ ಇನ್ನೇನು ನೆಲಕ್ಕೆ ಬೀಳಬೇಕು ಅಷ್ಟರಲ್ಲಿ ಕಲ್ಯಾಣಿ ಎಲ್ಲಿ ಕಾಣುತ್ತಾ ಇಲ್ಲವಲ್ಲ ಎಂದು ಹುಡುಕುತ್ತಾ ದೊಡ್ಡ ಅತ್ತಿಗೆ ಬಂದರು. ಇದ್ದಕ್ಕಿದ್ದಂತೆ ಆದ ಕಲ್ಯಾಣಿಯ ಈ ಸ್ಥಿತಿಯನ್ನು ಕಂಡು ಗಾಭರಿಯಿಂದ ಅವರ ಹತ್ತಿರ ಓಡಿ ಇನ್ನೇನು ಬಿದ್ದೇ ಬಿಟ್ಟಳು ಎನ್ನುವಂತಿದ್ದ ಕಲ್ಯಾಣಿಯನ್ನು  ಹಿಡಿದು ಅಪ್ಪಿಕೊಂಡರು. ಅಷ್ಟು ಹೊತ್ತಿಗಾಗಲೇ ಕಲ್ಯಾಣಿಗೆ ಪ್ರಜ್ಞೆ ತಪ್ಪಿತು. ಅತ್ತಿಗೆಯ ತೋಳಿಗೆ ವಾಲಿದರು. ದೊಡ್ಡ ಅತ್ತಿಗೆ ಸ್ವಲ್ಪ ಜೋರಾಗಿಯೇ ತನ್ನ ವಾರಗಿತ್ತಿಯನ್ನು ಕೂಗಿದರು. ಅವರು ಅಕ್ಕನ ಕೂಗನ್ನು ಕೇಳಿ ಅಡುಗೆ ಮನೆಯಿಂದ ಓಡೋಡಿ ಬಂದರು. ಅಲ್ಲಿಗೆ ಬಂದು ಕಲ್ಯಾಣಿಯ ಸ್ಥಿತಿಯನ್ನು  ಕಂಡು ಗಾಬರಿಯಿಂದ ಹತ್ತಿರ ಬರುತ್ತಲೇ…. “ಕಲ್ಯಾಣಿಗೆ ಇನ್ನೂ ದಿನ ತುಂಬಿಲ್ಲ….ನಿನ್ನೆ ತಾನೇ ಒಂಭತ್ತು ತಿಂಗಳು ಪ್ರಾರಂಭವಾಗಿದೆ…. ಅವಳ ಕೊನೆಯ ಮುಟ್ಟಿನ ದಿನವನ್ನು ಎಣಿಸಿದರೆ!!!…..ಕಲ್ಯಾಣಿಯನ್ನು ನಿಧಾನವಾಗಿ ಹಾಗೇ ಕೋಣೆಗೆ ಕರೆದುಕೊಂಡು ಹೋಗೋಣ ಇಬ್ಬರೂ….ಅವಳನ್ನು ಅಲ್ಲಿ ಮಂಚದ ಮೇಲೆ ಮಲಗಿಸಿದ ಮೇಲೆ  ನೀವು ಅವಳ ಜೊತೆ ಇರಿ….ನಾನು ಕೆಲಸದ ಆಳುಗಳನ್ನು ಕಳುಹಿಸಿ ಸೂಲಗಿತ್ತಿಯನ್ನು ತಕ್ಷಣೆವೇ ಮನೆಗೆ ಕರೆತರುವ ಏರ್ಪಾಡು ಮಾಡುತ್ತೇನೆ….”ಗುರುವಾಯುರಪ್ಪ  ನಮ್ಮೆಲ್ಲರನ್ನೂ ಕಾಪಾಡು….ಕಲ್ಯಾಣಿಗೆ ಏನೂ ತೊಂದರೆ ಆಗದಿರಲಿ”…. ಎಂದು ಬೇಡಿಕೊಳ್ಳುತ್ತಾ ಕಲ್ಯಾಣಿಯನ್ನು ಕೋಣೆಯಲ್ಹಿ ಮಲಗಿಸಿ ಹಿಂದಿನ ಹಜಾರದಲ್ಲಿ ಕೆಲಸ ಮಾಡುತ್ತಾ ಇದ್ದ ಹೆಣ್ಣಾಳನ್ನು ಕರೆದು ವಿಷಯ ತಿಳಿಸಿ ಬೇಗನೆ ಸೂಲಗಿತ್ತಿಯನ್ನು ಕರೆದುಕೊಂಡು ಬರುವಂತೆ ಆಜ್ಞೆ ಮಾಡಿದರು.

*********

Leave a Reply

Back To Top