ಲೇಖನ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
‘ಆಯ್ಕೆಗಳಿಲ್ಲದ ಬದುಕು’
ಆಕೆ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿನಿ. ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಮೊದಲ ಸ್ಥಾನವನ್ನು ಬಿಟ್ಟುಕೊಡದ ಆಕೆ ಹತ್ತನೇ ತರಗತಿಯಲ್ಲಿ ಅತಿಹೆಚ್ಚಿನ ಅಂಕಗಳನ್ನು ಗಳಿಸಿ ತನ್ನ ಶಾಲೆಗೆ ಮೊದಲಿಗಳಾದಳು.ತನ್ನೂರಿನ ಸರಕಾರಿ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪ್ರವೇಶ ಪಡೆದ ಆಕೆಯ ಗುರಿ ವೈದ್ಯಕೀಯ ಪದವಿ ಪಡೆದು ವೈದ್ಯಳಾಗಿ ಸೇವೆ ಸಲ್ಲಿಸಬೇಕೆಂಬ ಆಕಾಂಕ್ಷೆ.
ಮುಂದೆ ಪಿಯುಸಿಯಲ್ಲಿಯೂ,ಸಿಇಟಿ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಪಡೆದಳು ನಿಜ, ಆದರೆ ಆಕೆಗೆ ವೈದ್ಯಕೀಯ ಪ್ರವೇಶಕ್ಕೆ ಬೇಕಾದ ಅರ್ಹತಾ ಅಂಕಗಳು ದೊರೆಯಲಿಲ್ಲ. ಅತ್ಯಂತ ಬಡತನದ ಹಿನ್ನೆಲೆಯಿಂದ ಬಂದ ಆಕೆಗೆ ಇದುವರೆಗೂ ಸರ್ಕಾರ ಕೊಡ ಮಾಡುವ ಉಚಿತ ಶಿಕ್ಷಣ ಯೋಜನೆಯಡಿ ವಿದ್ಯಾಭ್ಯಾಸ ದೊರೆತಿತ್ತು, ಆದರೆ ಉನ್ನತ ಶಿಕ್ಷಣ ಆಕೆಯ ಪಾಲಿಗೆ ಗಗನ ಕುಸುಮವೇ ಸರಿ.
ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದ ಆಕೆಯ ಪಾಲಕರು ಆಕೆಗೆ ಹೇಗಾದರೂ ಮಾಡಿ ಒಂದು ಡಿಗ್ರಿ ಪೂರೈಸಿ ಯಾವುದಾದರೂ ಶಾಲೆಯಲ್ಲಿ ಇಲ್ಲವೇ ಕಚೇರಿಯಲ್ಲಿ ನೌಕರಿ ಮಾಡಲು ಹೇಳಿದರು.
ಎರಡು ಹೊತ್ತಿನ ಊಟಕ್ಕೂ ಅನುಕೂಲವಿಲ್ಲದ ಪರಿಸ್ಥಿತಿಗಳಿರುವ ಲಕ್ಷಾಂತರ ಕುಟುಂಬಗಳ ಮಕ್ಕಳು ವಿದ್ಯೆಯಿಂದ ವಂಚಿತರಾಗುತ್ತಿದ್ದಾರೆ. ಅದೆಷ್ಟೇ ಸರಕಾರಗಳು ಯೋಜನೆಗಳನ್ನು ಹಾಕಿಕೊಂಡರೂ ಉನ್ನತ ಶಿಕ್ಷಣದ ಕನಸು ನನಸಾಗುತ್ತಿಲ್ಲ…. ಇದಕ್ಕೆಲ್ಲ ಕಾರಣ ಬಡತನ.
ಸರಕಾರಿ ದಾಖಲೆಗಳ ಪ್ರಕಾರ ಅತಿ ಹೆಚ್ಚು ಆರೋಗ್ಯ ತೊಂದರೆಗಳನ್ನು ಅನುಭವಿಸುತ್ತಿರುವವರು ಬಡವರು .
ಬಡತನದ ಬದುಕು ಒಂದು ಸರಪಣಿ ಕ್ರಿಯೆ ಇದ್ದಂತೆ. ನಾವು ಚಿಕ್ಕಂದಿನಲ್ಲಿ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಸಮಾಜಶಾಸ್ತ್ರ ತರಗತಿಯಲ್ಲಿ ಬಡತನ, ನಿರುದ್ಯೋಗ, ಮೂಢನಂಬಿಕೆ, ಆಹಾರ ಧಾನ್ಯಗಳ ಕೊರತೆ ಇವುಗಳ ಕುರಿತು ನಮ್ಮ ಗುರುಗಳು ಪಾಠ ಮಾಡುತ್ತಿದ್ದಾಗ ನಾವು ನಮ್ಮ ಗುರುಗಳಿಗೆ ಕೇಳ್ತಾ ಇದ್ದದ್ದು ಇದೆಲ್ಲ ತೊಂದರೆಗಳಿವೆಯೆ ಅಂತ. ಯಾಕೆಂದರೆ ಪ್ರತಿ ತಿಂಗಳು ಸಂಬಳ ಪಡೆವ ನೌಕರರ ಮಕ್ಕಳಿಗೆ, ವ್ಯಾಪಾರ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವವರ ಮಕ್ಕಳಿಗೆ ಈ ಎಲ್ಲಾ ತೊಂದರೆಗಳ ಅರಿವು ಅಷ್ಟಾಗಿ ಇರುವುದಿಲ್ಲ. ಇವೆಲ್ಲವೂ ಆ ಮಕ್ಕಳ ಪಾಲಿಗೆ ಫ್ಯಾನ್ಸಿ ಪದಗಳಂತೆ ತೋರಿದರೆ ಅಚ್ಚರಿಯೇನಿಲ್ಲ. ಯಾಕೆಂದರೆ ಅವರೆಲ್ಲ ಸಮಾಜದ ಕೆನೆ ಪದರಿನಲ್ಲಿ ಬದುಕುವವರು.
ಯಾರಾದರೂ ಶ್ರೀಮಂತರಿಗೆ ಮೈಯಲ್ಲಿ ದೇವರು ಕಾಣಿಸಿಕೊಂಡಿದ್ದಾಳೆಯೆ?! ದೇವರು ಮುನಿಸಿಕೊಂಡಿದ್ದಾನೆಯೇ??
ಖಂಡಿತವಾಗಿಯೂ ಇಲ್ಲ. ಬಡವರ ಮಕ್ಕಳಿಗೆ ಪಾಲಕರ ಬಡತನ ಮತ್ತು ಅಜ್ಞಾನದ ಕೊರತೆಯಿಂದ ಪೌಷ್ಟಿಕ ಆಹಾರ ದೊರೆಯದೆ ಹೋದಾಗ, ಸ್ವಚ್ಛತೆಯ ಅರಿವಿನ ಕೊರತೆ ಇದ್ದಾಗ ಆ ಮಕ್ಕಳು ಪದೇ ಪದೇ ಅನಾರೋಗ್ಯಕ್ಕೆ ಈಡಾಗುತ್ತಾರೆ. ಇದನ್ನು ಅರಿಯದ ಬಡ ಜನತೆ ಯಾವುದೋ ದೇವಿಯ ಮುನಿಸು, ಕಾಡಾಟ ಈ ರೀತಿ ತಮ್ಮ ಮಕ್ಕಳನ್ನು ಬಲಿ ತೆಗೆದುಕೊಳ್ಳುತ್ತದೆ ಎಂಬ ಮೌಢ್ಯತೆಯನ್ನು,ಭಯವನ್ನು ಹೊಂದಿ ಮಕ್ಕಳ ಆರೋಗ್ಯ ಸುಧಾರಿಸಲು ಹರಕೆ ಕಟ್ಟಿಕೊಳ್ಳುತ್ತಾರೆ. ಇನ್ನೂ ಕೆಲವೊಮ್ಮೆ ದೇವರಿಗೆ ತಮ್ಮ ಮಕ್ಕಳನ್ನು ಬಿಡುವುದಾಗಿ ಕೂಡ ಹರಸಿಕೊಳ್ಳುತ್ತಾರೆ ಇದಂತೂ ಮಾನವ ಸಮಾಜದ ಅತ್ಯಂತ ಕ್ರೌರ್ಯದ ಪರಾಕಾಷ್ಟೆ ಎನ್ನಬಹುದು.ಇದು ಒಂದು ರೀತಿಯಲ್ಲಿ ನೋವಿನ ಮೂಲ ಅರಿಯದೆ ಔಷಧಿ ಕೊಟ್ಟಂತೆ.ನೋವು ತಾತ್ಕಾಲಿಕವಾಗಿ ಉಪಶಮನ ಹೊಂದಬಹುದು… ಆದರೆ ಅದರ ಮೂಲದಲ್ಲಿ ನೋವು ಇನ್ನೂ ಜೀವಂತವಾಗಿ ಇರುತ್ತದೆ.
ಪ್ರತಿಯೊಂದು ಕುಟುಂಬದಲ್ಲಿನ ಪತಿ ಎನ್ನಿಸಿಕೊಂಡ ಜೀವಿ ಯಾವುದೇ ದುಶ್ಚಟಗಳನ್ನು ಹೊಂದಿರದೆ ಇದ್ದರೆ
ಅದು ಆ ಕುಟುಂಬದ ಪಾಲಿಗೆ ಬೋನಸ್ ಇದ್ದಂತೆ ಇಲ್ಲದೆ ಹೋದರೆ ಅದೆಷ್ಟೇ ದುಡಿದರೂ ಆತನ ದುಡಿಮೆಯ ಹಣ ಧೂಮ್ರಪಾನ, ಮಧ್ಯಪಾನ, ಜರ್ದಾ ಬೀಡಗಳ ಸೇವನೆ, ಜೂಜಾಟ ಮುಂತಾದ ದುರ್ವ್ಯಸನಗಳ ಪಾಲಾಗುತ್ತದೆ. ಆಗ ಆ ಮನೆಯ ಹೆಣ್ಣುಮಗಳು ಅವರಿವರ ಮನೆಗಳಲ್ಲಿ, ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ, ಹೊಲಗಳಲ್ಲಿ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡಬೇಕಾಗುತ್ತದೆ. ಅಷ್ಟಾಗಿಯೂ ನೆಮ್ಮದಿಯ ಜೀವನ ದುಸ್ತರ. ಮೊದಮೊದಲು ಕುಡಿತದಂತಹ ದುರ್ವ್ಯಸನಗಳಿಗೆ ತುತ್ತಾದ ವ್ಯಕ್ತಿ ಕೆಲಸಕ್ಕೆ ಹೋಗುವುದು ಕಡಿಮೆಯಾಗಿ ಮಾಲೀಕರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸದೆ ಹೋದಾಗ ಅವರನ್ನು ಕೆಲಸದಿಂದ ತೆಗೆದು ಹಾಕುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಆತ ಮೊದಮೊದಲು ಹೆಂಡತಿಯನ್ನು ಪೀಡಿಸಿ ಕಾಡಿಸಿ ತನ್ನ ಚಟಗಳನ್ನು ಪೂರೈಸಿಕೊಂಡರೆ ನಂತರ ಮನೆಯ ಸಣ್ಣ ಪುಟ್ಟ ವಸ್ತುಗಳನ್ನು ಕದ್ದು ಮಾರಿ, ಹೆಂಡತಿಯನ್ನು ಹೊಡೆದು ಬಡಿದು ಹಣವನ್ನು ಕಿತ್ತುಕೊಂಡು ತನ್ನ ಚಟಗಳನ್ನು ಪೂರೈಸಿಕೊಳ್ಳುತ್ತಾನೆ. ಅಂತಹ ಕುಟುಂಬಗಳಲ್ಲಿ ಅನಪೇಕ್ಷಣೀಯ ಘಟನೆಗಳು ಸರ್ವೇಸಾಮಾನ್ಯವಾಗಿದ್ದು ಆ ಕುಟುಂಬದ ಮಕ್ಕಳು ಇದರ ಬಲಿಪಶುಗಳಾಗುವುದಲ್ಲದೆ ಮುಂದೆ ದೊಡ್ಡವರಾದ ಮೇಲೆ ಸಮಾಜ ಬಾಹಿರ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ.
ಇನ್ನು ಹಲವು ಜನ ಹೆಣ್ಣಮಕ್ಕಳು ಮೂಲಭೂತ ಅವಶ್ಯಕತೆಗಳ ಪೂರೈಕೆಯಲ್ಲಿ ತಮ್ಮ ಇಡೀ ಜೀವನವನ್ನು ಸವೆಸುತ್ತಾರೆ. ಬೇರೆಯವರ ಮನೆ ಕಸ ಗುಡಿಸಿ, ನೆಲ ಒರೆಸಿ, ಪಾತ್ರೆ ಬಟ್ಟೆಗಳನ್ನು ಸ್ವಚ್ಛವಾಗಿ ತೊಳೆದು ಪಳಪಳ ಹೊಳೆಯುವಂತೆ ಮಾಡುವ ಇವರ ಮತ್ತು ಇವರ ಮಕ್ಕಳ ಭವಿಷ್ಯ ಮಾತ್ರ ಮಸುಕಾಗಿರುತ್ತದೆ.
ಇನ್ನು ಹಲವೆಡೆ ಬಡತನ ಅತಿಯಾಗಿ ತಾಂಡವವಾಡುತ್ತಿದ್ದು ಹೊಟ್ಟೆಗಿದ್ದರೆ ಬಟ್ಟೆಗಿಲ್ಲ ಎಂಬಂತಹ ಪರಿಸ್ಥಿತಿ. ದೊಡ್ಡ ಊರುಗಳಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಹೋಗುವವರಿಗೆ ಸಂಪಾದನೆ ಚೆನ್ನಾಗಿರುತ್ತದೆ ಎಂದು ಹೇಳುವಂತಿಲ್ಲ, ಆದರೆ ಮಹಾನಗರಗಳಲ್ಲಿ ವಾಸಿಸುವವರು ಆ ನಗರದ ಸ್ಲಮ್ಮುಗಳಲ್ಲಿಯೂ ಕೂಡ ದುಬಾರಿ ಬಾಡಿಗೆ, ವಿದ್ಯುತ್ ಬಿಲ್, ನೀರಿನ ಬಿಲ್ ಕಟ್ಟುವಲ್ಲಿ ತಮ್ಮ ಸಂಪಾದನೆಯ ಬಹುಪಾಲು ಹಣವನ್ನು ಕಳೆದುಕೊಳ್ಳುತ್ತಾರೆ. ಇದರ ಮೇಲೆ ದಿನಸಿ, ಮಕ್ಕಳ ಶಾಲೆ ಕಾಲೇಜುಗಳ ಶುಲ್ಕ, ಹೋಗಿ ಬರುವ ಬಸ್ ಚಾರ್ಜ್ ಹೀಗೆ ಹತ್ತು ಹಲವು ಖರ್ಚುಗಳು ಅವರನ್ನು ಹಿಂಡಿ ಹಿಪ್ಪೆ ಮಾಡುತ್ತವೆ.
ಹಳ್ಳಿಯೂರುಗಳಲ್ಲಿ ಸಾಕಷ್ಟು ಕೆಲಸ ಕಾರ್ಯಗಳು ದೊರೆಯುತ್ತವೆ ಎಂಬುದು ಕೂಡ ಸುಳ್ಳಾಗಿದೆ. ಬಾರದ ಮಳೆ, ಆಳುಗಳ ಕೊರತೆ, ಸಮಯಕ್ಕೆ ಸರಿಯಾಗಿ ಸಿಗದ ಬೀಜ ಗೊಬ್ಬರಗಳು, ದನ ಕರುಗಳಿಗೆ ಮೇವನ್ನು ಪೂರೈಸಲಾಗದ ಅಸಹಾಯಕತೆ ಒಕ್ಕಲುತನ ಮಾಡಲು ರೈತರು ಹಿಂದೇಟು ಹಾಕುವಂತೆ ಮಾಡಿದೆ.ಬೆಳೆದ ಬೆಳೆ ಕೈಗೆ ಹತ್ತುವವರೆಗೆ ಹಲವು ರೀತಿಯಲ್ಲಿ ಹಣ ಖರ್ಚಾಗುತ್ತದೆ. ಇನ್ನು ಬೆಳೆ ಬಂದ ನಂತರ ಅದನ್ನು ಕೊಯ್ದು ಮಾರುಕಟ್ಟೆಗೆ ಸಾಗಿಸುವ,ನಂತರ ದಲ್ಲಾಳಿಗಳ ಮೂಲಕ ಅದನ್ನು ಮಾರುವ ಹೊತ್ತಿಗೆ ರೈತ ಸೋತು ಸುಣ್ಣವಾಗಿರುತ್ತಾನೆ. ಆತನ ಸಂಪಾದನೆಗಿಂತ ಎಷ್ಟೋ ಬಾರಿ ಆತನ ಖರ್ಚೆ ಹೆಚ್ಚಾಗಿರುವುದರಿಂದ ಆತನ ಶ್ರಮಕ್ಕೆ ಬೆಲೆ ಇಲ್ಲದಂತಾಗುತ್ತದೆ. ಇದು ಕೂಡ ಒಕ್ಕಲುತನ ಅನಾಕರ್ಷಕವಾಗಿರಲು ಕಾರಣವಾಗಿದೆ. ರೈತಾಪಿ ಕೆಲಸಗಳು, ದನಕರುಗಳ ನಿರ್ವಹಣೆ, ಅಳುಗಳ ಜಾಗದಲ್ಲಿ ತಾವೇ ದುಡಿಯಬೇಕಾದ ಅನಿವಾರ್ಯತೆ ರೈತಾಪಿ ಜೀವನದ ಅನಿಶ್ಚಿತ ಆದಾಯ ಇವುಗಳ ಪರಿಣಾಮವಾಗಿ ರೈತರ ಮಕ್ಕಳಿಗೆ ವಧು ದೊರೆಯುವುದು ಕೂಡ ಕಷ್ಟವಾಗಿದೆ.
ಆದ್ದರಿಂದಲೇ ಹಲವಾರು ರೈತರ ಮಕ್ಕಳು ವಿದ್ಯೆ ಕಲಿಯದಿದ್ದರೂ ಹೊಲದಲ್ಲಿ ಮೈಬಗ್ಗಿಸಿ ದುಡಿಯಲು ಒಪ್ಪದೇ ಮಹಾನಗರಗಳ ದೊಡ್ಡ ದೊಡ್ಡ ಆಫೀಸ್ ಗಳಲ್ಲಿ, ಮಾಲ್ಗಳಲ್ಲಿ, ಕಸಗುಡಿಸುವ ನೆಲ ಒರೆಸುವ ದಿನಗೂಲಿ ನೌಕರರಾಗಿ, ಆಫೀಸ್ ಬಾಯ್ಗಳಾಗಿ ಸೆಕ್ಯೂರಿಟಿ ಗಾರ್ಡ್ ಗಳಾಗಿ ಕಾರ್ಯನಿರ್ವಹಿಸುವ ಕೆಲಸ ಮಾಡುತ್ತಾರೆ. ಇನ್ನು ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಜನರು ಕಾಫೀ ಸೀಮೆಗೆ, ಬೆಂಗಳೂರಿನಂತಹ ಮಹಾನಗರಗಳಿಗೆ ತಮ್ಮ ಜೀವನ ನಿರ್ವಹಣೆಗಾಗಿ ಗುಳೇ ಹೋಗುತ್ತಾರೆ. ಅಂತಹ ಮನೆಗಳಲ್ಲಿ ವಯಸ್ಸಾದ ಹಿರಿಯರು ಮತ್ತು ಶಾಲೆಗಳಲ್ಲಿ ಓದುವ ಮಕ್ಕಳು ಮಾತ್ರ ಇರುತ್ತಾರೆ.
ಇನ್ನು ಸಣ್ಣ ಪುಟ್ಟ ಊರುಗಳಲ್ಲಿ ಕೆಲಸ ಮಾಡುವ ಜನರಿಗೆ ಕೆಲಸಗಳೇನೋ ಸಾಕಷ್ಟಿವೆ ಆದರೆ ಮಾಡುವ ಮನಸ್ಥಿತಿಯಲ್ಲಿ ಅವರಿಲ್ಲ.ಅವರಿಗೆ ಸಂಬಳ ಕೊಡುವ ಮಾಲೀಕರು ಒಂದು ದಿನದ ರಜೆಯನ್ನು ಕೂಡ ಕೊಡದೆ ದುಡಿಸಿಕೊಳ್ಳುತ್ತಾರೆ, ಮುಂದೆ ನಿಂತು ಕೆಲಸ ಮಾಡಿಸಿಕೊಳ್ಳುತ್ತಾರೆ ಪ್ರತಿದಿನ ಅವರ ಕಿರಿಕಿರಿ ಅನುಭವಿಸಬೇಕು ಎಂಬ ನೆವಗಳು ಅವರಲ್ಲಿ. ಅಷ್ಟಾಗಿಯೂ ಮಾಲೀಕ ಮತ್ತು ಕೆಲಸಗಾರರ ನಡುವೆ ಒಂದು ಸೌಹಾರ್ದಯುತ ಸಂಬಂಧ ಏರ್ಪಡುವುದು ತಾವು ಪರಸ್ಪರ ಅವಲಂಬಿತರು ಎಂಬ ಅರಿವು ಇಬ್ಬರಲ್ಲಿಯೂ ಮೂಡಿದರೆ ಮಾತ್ರ ಜೀವನ ಸುಗಮ.
ಒಂದು ಕುಟುಂಬದ ಗಂಡ ಹೆಂಡತಿ ಇಬ್ಬರೂ ದುಡಿದರೆ ಆ ಕುಟುಂಬ ಸಾಕಷ್ಟು ಅನುಕೂಲಕರ ಸ್ಥಿತಿಯಲ್ಲಿ ಇರಬಹುದು ಎಂದು ಭಾವಿಸಿದರೆ ಅದು ತಪ್ಪಾಗುತ್ತದೆ. ಮನೆಯ ಬಾಡಿಗೆ, ದಿನಸಿಯ ಖರ್ಚು, ಸಾರಿಗೆ ವೆಚ್ಚ ಹೀಗೆ ಅವರು ದುಡಿದ ಹಣ ನೀರಿನಂತೆ ಸೋರಿ ಹೋಗುತ್ತದೆ. ಅದರಲ್ಲೂ ಕುಟುಂಬದ ಯಜಮಾನ ಎನಿಸಿಕೊಂಡ ಗಂಡಸು ಪ್ರಾಣಿ ಕುಡಿತ, ಧೂಮ್ರಪಾನಗಳಂತಹ ಚಟಗಳಿಗೆ ದಾಸನಾಗಿದ್ದರೆ ಆ ಮನೆಯ ಪರಿಸ್ಥಿತಿ ಇನ್ನೂ ಅಸ್ತವ್ಯಸ್ತ. ಕುಟುಂಬದ ಹೆಣ್ಣು ಮಕ್ಕಳು ಕುಡಿದು ತೂರಾಡುತ್ತ ತನ್ನ ಸಂಬಳದ ಹಣವನ್ನು ಖಾಲಿ ಮಾಡಿ ಬರುವ ಗಂಡನ ಹೊಡೆತ ಬಡಿತಗಳಿಗೆ, ಕೆಟ್ಟ ಮಾತುಗಳಿಗೆ ಈಡಾಗುತ್ತಾ ತನ್ನ ಮಕ್ಕಳನ್ನು ಸಂಭಾಳಿಸಿಕೊಂಡು ಬದುಕಬೇಕಾದ ದುಸ್ಥಿತಿ ಆಕೆಯ ಶತ್ರುವಿಗೂ ಬೇಡ ಎಂಬಂತೆ ಭಾಸವಾಗುತ್ತದೆ. ಇದರ ಮೇಲೆ ಆಗಾಗ ಕಾಡುವ ಅನಾರೋಗ್ಯ ಇವರನ್ನು ಸಾಲದ ಸುಳಿಗೆ ಸಿಲುಕಿಸುತ್ತದೆ. ದೈಹಿಕವಾಗಿ ದುಡಿದು ದಣಿವ ಜನ ಮಾನಸಿಕವಾಗಿಯೂ ಹೈರಾಣಾಗುತ್ತಾರೆ.
ಗಾಯದ ಮೇಲೆ ಬರೆ ಎಳೆದಂತೆ ರೂಢಿಗತವಾಗಿ ಬಂದಿರುವ ಕೆಲ ನಂಬಿಕೆಗಳು, ಸಾಮಾಜಿಕ ಮೌಢ್ಯಗಳು ಅವರನ್ನು ಮೇಲಕ್ಕೇಳಲು ಬಿಡುವುದೇ ಇಲ್ಲ. ಸಮಾಜದಲ್ಲಿ ತುಂಬಿರುವ ಬಡತನ, ಅಜ್ಞಾನ, ನಿರುದ್ಯೋಗ ಸಮಸ್ಯೆಗಳು ಹೆಚ್ಚಾಗುತ್ತಲೇ ಹೋಗುತ್ತಿವೆ. ಪರಿಣಾಮವಾಗಿ ಸಾಂಗತ್ಯ ದೋಷಕ್ಕೆ ಗುರಿಯಾಗುವ ಮನುಷ್ಯ ದುಶ್ಚಟಗಳ ದಾಸನಾಗುತ್ತಾನೆ ಇದರ ಪರಿಣಾಮವಾಗಿ ಕುಟುಂಬಗಳಲ್ಲಿ ಯಾವಾಗಲೂ ಕಹಿ ವಾತಾವರಣ ಏರ್ಪಟ್ಟು ಪತಿ-ಪತ್ನಿಯರ ನಡುವಿನ ಜಗಳಗಳು ಮಕ್ಕಳ ಮೇಲೆ ಮಾನಸಿಕ ಪರಿಣಾಮವನ್ನುಂಟು ಮಾಡಿ ಆ ಮಕ್ಕಳು ಕೂಡ ಸಮಾಜ ಬಾಹಿರ ಕೃತ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತಹ ಪರಿಸ್ಥಿತಿ ಏರ್ಪಡುತ್ತದೆ. ಇಂತಹ ಮಕ್ಕಳೇ ಮುಂದೆ ಬಾಲಾಪರಾಧಿಗಳಾಗಿ ರಿಮ್ಯಾಂಡ್ ಹೋಂಗಳಲ್ಲಿ ಭರ್ತಿಯಾಗುವ ಸಂಭವಗಳು ಹೆಚ್ಚು. ಒಂದು ಬಾರಿ ಪೊಲೀಸ್ ಇಲಾಖೆಯ ಕಪ್ಪು ಹಲಗೆಯ ಮೇಲೆ ಹೆಸರು ಬಂದು ಹೋದರೆ ಜೀವನ ಪೂರ್ತಿ ಕಳಂಕವನ್ನು ಹೊತ್ತು ಬದುಕಬೇಕಾಗುತ್ತದೆ.
ಆದ್ದರಿಂದಲೇ ನಮ್ಮ ಭಾರತ ಸರ್ಕಾರ ಹಸಿವು ನಿರ್ಮೂಲನೆ ಯೋಜನೆಯಡಿ ಎಲ್ಲರಿಗೂ ನಿಗದಿತ ಪ್ರಮಾಣದ ಪಡಿತರವನ್ನು ನೀಡುಲಾಗುತ್ತಿದೆ. ಇದರ ಜೊತೆ ಜೊತೆಗೆ ಶಾಲೆಗಳಿಗೆ ಹಾಜರಾಗುವ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಹಾಲು, ತತ್ತಿ ಬಾಳೆಹಣ್ಣುಗಳಂತಹ ಪೌಷ್ಟಿಕ ಆಹಾರದ ಸರಬರಾಜು ಮಾಡುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಗೆ, ಔಷಧಿಗೆ ಅವಕಾಶ ಮಾಡಿಕೊಟ್ಟಿದೆ. ಜೊತೆಗೆ ಪ್ರಾಥಮಿಕ ಮತ್ತು ಪ್ರೌಢ ಹಂತದ ಶಿಕ್ಷಣ ಕೂಡ ಉಚಿತವಾಗಿದ್ದು ಉನ್ನತ ಶಿಕ್ಷಣದ ಕನಸು ಕಾಣುವ ಮಕ್ಕಳಿಗೆ ಹಾಸ್ಟೆಲ್ ಮತ್ತು ಲೈಬ್ರರಿಗಳ ಸೌಲಭ್ಯವನ್ನು ನೀಡಿದೆ. ಆದರೆ ಬಡತನ ನಿರ್ಮೂಲನೆಗಾಗಿ ಬಡಜನರ ಜೀವನಮಟ್ಟ ಸುಧಾರಣೆಗಾಗಿ ಸರ್ಕಾರ ಕೈಗೊಳ್ಳುವ ಅನುಕೂಲಕರ ಕ್ರಮಗಳನ್ನು ದುರುಪಯೋಗ ಮಾಡಿಕೊಳ್ಳುವವರೇ ಹೆಚ್ಚು. ಇನ್ನು ಹಲವು ಬಾರಿ ತಮ್ಮ ವಯೋಸಹಜ ಹುಡುಗಾಟದಿಂದ ಸರ್ಕಾರದ ಈ ಯೋಜನೆಗಳನ್ನು ತಿರಸ್ಕರಿಸಿ ಬದುಕಿನ ಅಮೂಲ್ಯ ಅವಕಾಶಗಳನ್ನು ಕಳೆದುಕೊಳ್ಳುವರು. ದೀಪದ ಅಡಿಯಲ್ಲಿ ಕತ್ತಲೆ ಎಂಬ ಮಾತು ನಿಜ ತಾನೇ.
ಈ ಎಲ್ಲ ವ್ಯವಸ್ಥೆಗಳು ಎಷ್ಟೋ ಬಡವರ ಪಾಲಿಗೆ ಸಂಜೀವಿನಿಯಂತಾಗಿವೆ. ಇನ್ನು ಸಮಾಜ ಕಲ್ಯಾಣ ಇಲಾಖೆಗಳು,ಕುಟುಂಬ ಕಲ್ಯಾಣ ಇಲಾಖೆಗಳು ಕುರಿತು ಜನರಿಗೆ ಮಾಹಿತಿಯನ್ನು ಒದಗಿಸಿ ಆರೋಗ್ಯ ಸಂಬಂಧಿ ಶಿಕ್ಷಣವನ್ನು ಸಾರ್ವಜನಿಕರಿಗೆ ಕೊಡ ಮಾಡುತ್ತಲಿದೆ.
ಒಂದು ಆರೋಗ್ಯಕರ ಸಮಾಜ ನಿರ್ಮಾಣವಾಗುವುದು ಆ ಸಮಾಜದ ಜನರು ಸಾಮಾಜಿಕವಾಗಿ ಉತ್ತಮ ಸಂಸ್ಕಾರಗಳನ್ನು ಹೊಂದಿದ್ದು,ಆರ್ಥಿಕವಾಗಿ ಸಬಲರಾಗಿದ್ದು, ಆರೋಗ್ಯಕರ ಹವ್ಯಾಸಗಳನ್ನು ಹೊಂದಿದ್ದು, ರಾಜಕೀಯ ತಿಳುವಳಿಕೆಯನ್ನು ಹೊಂದಿದ್ದು ಆ ದೇಶದ ಹಿರಿಮೆ ಗರಿಮೆಗಳನ್ನು ಎತ್ತಿ ಹಿಡಿಯುವ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರೆ ಅದಕ್ಕಿಂತ ಸಂಪತ್ತು ಬೇರೊಂದಿಲ್ಲ… ಅಂತಹ ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ನಾವು ನೀವೆಲ್ಲರೂ ಭಾಗಿಯಾಗೋಣ. ಸದೃಢ ಸಮಾಜವನ್ನು ಕಟ್ಟೋಣ ಎಂಬ ಆಶಯದೊಂದಿಗೆ.
ವೀಣಾ ಹೇಮಂತ್ ಗೌಡ ಪಾಟೀಲ್
ಲೇಖನ ಸೊಗಸಾಗಿ ಮೂಡಿ ಬಂದಿದೆ. ಮುಂದಿನ ಬರಹದಲ್ಲಿ ವ್ಯಕ್ತಿ ಯಾವುದೇ ದುಶ್ಚಟಗಳಿಗೆ ಬಲಿಯಾಗದಂತೆ ಆರೋಗ್ಯಕರ ಬದುಕು ನಡೆಸುವಂತಹ ಲೇಖನ ಬರಲಿ.