‘ಒಂದು ಕಾಲ್ಪನಿಕ ಪ್ರೇಮಪತ್ರ’-ಶೃತಿ ಮಧುಸೂದನ್

ಗೆ,
ಆರ್ಕೆ
ನನ್ನ ನಲ್ಲ
ಬಾರದ ಊರಿನ ಗೆಳೆಯ.

ಪ್ರೀತಿಯ ಇನಿಯ….

ಹೇಗಿದ್ದೀಯಾ ಎಂದು ನಾ ಕೇಳಲಾರೆ. ಇಲ್ಲಿ ನಾನು ಚೆನ್ನಾಗಿದ್ದೀನಿ ಕಣೋ ಎಂದು ಹೇಳಲಾರೆ. ಇಬ್ಬರ ಪರಿಸ್ಥಿತಿಯೂ ಒಂದೇ ಆಗಸದ ಮೋಡಗಳಂತೆ.
ಗಾಳಿ ಬಂದ ಕಡೆಗೆ ತೂರಿ ಹೋಗುವಂತ ಹಗುರ ಬಿಳಿ ಮೋಡವಲ್ಲ. ಪ್ರೇಮ ಧಾತು. ಸ್ವಾತಿ ಮಳೆಯನ್ನು ತನ್ನೊಳಗೆ ಸಂಪೂರ್ಣ ತುಂಬಿಕೊಂಡಿರುವ ಕಪ್ಪು ಮೋಡ. ಪ್ರೇಮದ ಬರಗಾಲ ಯಾವ ಊರಿಗೆ ಬಂದಿದೆ ಎಂದು ತಿಳಿದು ಒಮ್ಮೆ ಹೋಗಿ ಮಳೆ ಸುರಿದು ಹಗುರಾಗಬೇಕಿದೆ. ನಿನ್ನೊಡನೆ ಪ್ರೀತಿ ಭಾವನೆ ಹಂಚಿಕೊಂಡ ಕೆಲವೇ ಕೆಲವು ದಿನಗಳ ಋಣಭಾರ ಇಳಿಸಬೇಕಿದೆ.

ನೀನು ಬರೆಯುವ ಪ್ರತಿ ಸಾಲಿನಲ್ಲೂ ನನ್ನ ಕಾಡು ಮಲ್ಲಿಗೆಯಂತೆ ಮುದ್ದಿಸಿ ಘಮಿಸುತ್ತಿದ್ದೆ. ನಿನ್ನ ಬೆರಳ ತುದಿಗೆ ಅಂಟಿದ ಆ ಬರಹ ಪ್ರೇಮವೇ ನನ್ನ ಹೃದಯ ಸಿಂಹಾಸನದಲ್ಲಿ ಪ್ರೀತಿಯಾಗಿ ರಾಜ್ಯಭಾರ ಮಾಡಿತ್ತು. ಅಲ್ಲಿ ಪ್ರತಿ ದಿನ ನಾನೇ ನಿನ್ನೊಲವಿನ ಪಲ್ಲಕ್ಕಿಯ ಮಹಾರಾಣಿ. ಬರೆಯುವ ಸಾಲುಗಳ ಹುಚ್ಚಿನ ನಶೆ ಏರಿಸಿಕೊಂಡವಳು ನಾನು ಕಣೋ. ನೀನು ಹೋಗುವ ಮುನ್ನ ಆ ಹುಚ್ಚನ್ನಾದರು ವಾಸಿ ಮಾಡಬೇಕಿತ್ತು ಅಲ್ವಾ..?

ತುಂಟ ನಗೆಯ ತುಟಿ ಮಚ್ಚೆಗೆ ಮುತ್ತು ಕೊಡುವ ಆಸೆಯನ್ನು ಬಚ್ಚಿಟ್ಟು ಬರಹಕ್ಕೆ ಇಳಿಸಿದ ಕವಿತೆಗಳೆಲ್ಲಾ ನೀನಿಲ್ಲದೆ ಅನಾಥ ಕೂಸು. ಅಮ್ಮಳಾಗಿ ನಾನು ಸಾಕಿ ಸಲುಹಿ ನೀನು ಹೇಳಿದಂತೆ ಕನ್ನಡದ ಕವಿಯತ್ರಿಯಾಗಿದ್ದು ಸತ್ಯ. ಈ ಹುಡುಗಿ ಕನ್ನಡ ಕಲಿತು ಕವಿತೆ ಬರೆದದ್ದು ಸಾಹಸವೇ? ಪ್ರೀತಿಗೆ ಶಕ್ತಿ ಇದೆ ಎನ್ನುವುದಕ್ಕೆ ಸಾಕ್ಷಿ ನಾನು. ಆದರೆ ಅದರ ಹುಟ್ಟಿಗೆ ಕಾರಣಕರ್ತ ಯಾರಿಗೂ ಹೇಳದೆ ಮರೆಯಾಗಿದ್ದ. ಅದಕ್ಕೆ ನಿನಗೆ ನಾನು ಕೊಟ್ಟ ಹೆಸರು ಮರ್ಮ ಕವಿ. (ಸಿಗದವನು)

ನಮ್ಮ ಪ್ರೀತಿ ಅಸಭ್ಯವಲ್ಲ. ಅವಶೇಷಗಳ ಕೆದಕಿ ತೆಗೆದ ಇತಿಹಾಸ. ಅನುಬಂಧವಲ್ಲ ಆತ್ಮ ತೃಪ್ತಿ. ಜೊತೆಯಾಗಿ ಸಾಗುವ ರಸಮಯ ಕ್ಷಣವಲ್ಲ. ಸೇರದ ರೇಖೆಗಳ ರಸಿಕತೆ. ಸೇರುವ ಬಯಕೆಯ ಕಾಯುವಿಕೆ. ಅದು ನಮ್ಮಿಬ್ಬರ ಗುಟ್ಟು. ಪೋಷಿಸಿದ್ದು ನಾನ ನೀನಾ…?

ಉತ್ತರವಿಲ್ಲ.!!

ನೀನೇ ಹೇಳಿದ ಮಾತಿನಂತೆ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಇಲ್ಲ ಕಣೆ. ಅಪರಿಪೂರ್ಣ ನನ್ನಂತೆ. ಈ ಪ್ರಕೃತಿಯಂತೆ. ಪೂರ್ಣವಲ್ಲದ ಒಂದಿಷ್ಟು ತಿರುಕನ ಕನಸುಗಳು. ಅದೇ ಚೆಂದ. ನನ್ನ ನಿನ್ನ ಪ್ರೇಮದ ಪರಿಗೆ ಆತುಕೊಂಡ ಒಲವಿನ ಸಾಗರದ ಅಲೆಗಳಂತೆ. ದಡಕ್ಕೆ ಸ್ವಂತವಲ್ಲ. ಕ್ಷಣದ ಸುಖದ ಮತಿಭ್ರಮಣೆ ಪ್ರೀತಿ. ಬೇಕು ಎಂದಾಗಲೆಲ್ಲ ಸಿಗುವ ಮುತ್ತು ನೀನಲ್ಲ. ಬೇಡದ ಒಂದಿಷ್ಟು ನೋವಿಗೆ ಮದ್ದು ನೀನು ಎಂದ  ಅಷ್ಟು ಸಾಲುಗಳನ್ನು ಇಂದಿಗೂ ಓದುವೆ. ಗ್ರಹಿಸುವೆ. ನನಗೆ ಅರ್ಥವಾಗದ ಸಾಲುಗಳಂತೆ ಇಂದು ಮಾಯೆ…

ನನ್ನೊಳಗಿನ ಪ್ರೇಮದ ವಿರಹ ಜ್ವಾಲೆಗೆ ಸುಟ್ಟ ಒಂದಿಷ್ಟು ಕರಿ ಮಸಿ ಅಕ್ಷರಗಳ ಪೆಟ್ಟಿಗೆ ನಿನ್ನ ಮುಂದೆ ತೆರೆದು ಇಡುವೆ. ಸಾಧ್ಯವಾದರೆ ನೀನೇ ಬಂದು ಓದಿ ಬಿಡು. ನಾನು ಈ ಪತ್ರವನ್ನು ಕೂಡ ನಿನಗಾಗಿ ಅಂಚೆ ಪೆಟ್ಟಿಗೆಗೆ ಹಾಕಲಾರೆ.ಪದ ಪದಗಳಲ್ಲೂ ಅಡಗಿರೋ
ನಿನ್ನ ಪ್ರೇಮಕ್ಕೆ ಪತ್ರದ ಧಾತುವೇಕೆ? ನೀನು ಉಸಿರಿಗೆ
ಅಂಟಿರುವ ರಸಮಯ ಘಮಲು. ನನಗೆ ಮಾತ್ರ
ಸ್ವಂತದ್ದು. ಬರೆದರೂ ಓದುಗಾರನಿಗೆ ಅರ್ಥವಾಗದ್ದು. ನಿನಗೆ ತಲುಪದು
.

ಬರಿಯ ರೇಖೆಗಳಿಂದ ಕೂಡಿದ್ದ  ಬರಹಕ್ಕೆ ಸೋತವಳು
ನಾನು. ನನ್ನಲ್ಲಿನ ಬಣ್ಣವನು ಕಸಿದು ನಿನ್ನ
ತುಟಿಯಂಚಿನ ಕಪ್ಪುಮಚ್ಚೆಯಲ್ಲಿ ಸೆರೆಹಿಡಿದು
ಬಂಧಿಸಿದ್ದೆ. ಮಸಿಯೋ ಮತಿಯೋ ತಿಳಿಯಲಾರೆ.


ಲೇಖನಿಗೆ ಮುತ್ತಿಕ್ಕಿ ಗೀಚಿದ ನಿನ್ನ ಅದೆಷ್ಟೋ ಸಾಲುಗಳ ಆರ್ಥನಾದ ಪ್ರತಿ ದಿನ ಈ ನನ್ನ ಕಿವಿಗೆ ಕೇಳುತ್ತೆ.
ನಿನ್ನ ಹೆಸರಲ್ಲೇ ನಾನು “ಶೃತಿ ನಾದ” ವಾದೆ. ರವಿವರ್ಮನಲ್ಲ ಕಣೋ ನೀನು ನನ್ನ ನಲ್ಲ. ಕವಿ ಮರ್ಮ.

ಸಾಲುಗಳೇ ಹಾಗೆ ಸಾಲ ಪಡೆವ ತವಕದಲ್ಲಿ ಈ ಪತ್ರವನ್ನು ಗೀಚಿರುವೆ. ಪದಗಳ ವ್ಯಾಮೋಹಕ್ಕೆ ನಾನೇ
ಜೀವನವಿಡೀ ಬಡ್ಡಿ ಕಟ್ಟುವ ವ್ಯಾಕರಣವೇ ಸರಿ. ಎಷ್ಟೇ ಕೂಡಿ  ಗುಣಿಸಿದರೂ, ನನ್ನಂತಹ
ಶತ ಮೂರ್ಖ  ಹುಡುಗಿಗೆ ನಿನ್ನ ಕನ್ನಡದ ಪದಗಳ ಗೂಡಾರ್ಥ ಅರ್ಥವಾಗದ್ದು. ನಾನಂತೂ ಸಾಲ ಮಾಡಿ ತುಪ್ಪ ತಿನ್ನು ಎನ್ನುವ ಗಿರಾಕಿ. ಜಸ್ಟ್ ಎಂಜಾಯಿಂಗ್ ಮೈ ವರ್ಡ್ಸ್  ವಿತ್ ಮೈ ಸೋಲ್ ಪೈನ್…

ಅದೇ ಮೂರು ಚುಕ್ಕಿ. ಬಿಡುಗಡೆ ಮಾತ್ರ ನೀನೇ ಉಳಿಸಿದ ಶೇಷದಿಂದಲೇ. ಮರು ಹುಟ್ಟು ಕವಿತೆಯಿಂದಲೇ. ನಿನ್ನ ನೋಟದ ಸನ್ನೆಯ ಸಲಾಕೆ ಏಟಿಗೆ ಹೃದಯವೇ ಪ್ರೇಮ ಶಿಲೆಯಾಗಿತ್ತು. ಪೂಜಿಸಲು ಸಿದ್ದಳಾದ ನನಗೆ ಪದಗಳ ಗಮ್ಯ ಹುಡುಕಾಟದಲ್ಲೇ ನಿನ್ನ ಪಡೆದಿರುವೆ. ತೃಪ್ತಿಯ ನಿಷ್ಕಲ್ಮಶ ಪ್ರೀತಿ ಕರ್ಮಕ್ಕೆ ಸಿಕ್ಕ ಹೆಸರು ಸಿಗದವಳ ಪೂಜಿಸಿದ ಕವಿ ಪೂಜಾರಿ ನೀನು ಎಂದು. ಅಶ್ಲೀಲವಲ್ಲ ಬಿಡು. ಅಪರೂಪ ನಮ್ಮ ಕವಿತೆ ಕಾಮ ಕಾವ್ಯ ಈ ಶೃತಿ ಶೃಂಗಾರ.

ಇದಷ್ಟನ್ನು ಮಧ್ಯರಾತ್ರಿಯ  ಕತ್ತಲಿನ ನಡುವೆ ಮೂಡಿದ ಚಂದ್ರನನ್ನು ನೋಡೇ ಬರೆಯುತ್ತಿರುವೆ. ಯಾಕೆ ಗೊತ್ತಾ. ನೀನು ಆ ಸಾವಿರ ನಕ್ಷತ್ರಗಳ ಮಧ್ಯೆ ಹೊಳೆಯುವ ಚಂದ್ರನಂತೆ. ದೂರದಲ್ಲೇ ಇದ್ದರೂ ನನ್ನ ಒಲವಿಗೆ ಬೆಳದಿಂಗಳನ್ನು ಚೆಲ್ಲಿ ಹೂವಾಗಿಸುವ ಪೂರ್ಣಚಂದ್ರ.

ಈ ಕಾಡು ಮಲ್ಲಿಗೆ ಅರಳುವುದು ರಾತ್ರಿ ಎಂದು ಯಾವುದೋ ಪುಸ್ತಕದಲ್ಲಿ ಓದಿದ ನೆನಪು. ಸತ್ಯವೇನೋ ? ಈಗ ಅರಳಿ ಕುಳಿತಿರುವೆ ಘಮಿಸಲು ನಿನ್ನ ಪ್ರತಿಬಿಂಬವೆ ಬೇಕೆನಗೆ. ರಾತ್ರಿಯಲ್ಲಿ ಹೊತ್ತಿಕೊಳ್ಳುವ ಈ ಅಗ್ನಿಗೆ ಕಾವು ಹೆಚ್ಚೋ ತಿಳಿಯದು. ಆದರೆ ಕಾದು ಕಾದು ತಾಳ್ಮೆ ಹೆಚ್ಚಾಗಿದೆ. ಎದೆ ಮೇಲಿರುವ ತಾಳಿ ತಣ್ಣಗೆ ಕೊರೆಯುತ್ತಿದೆ. ಬಿಟ್ಟು ಹೋದ ನಿನ್ನ ಮೇಲೆ ಇನ್ನಷ್ಟು ಹೆಚ್ಚು ಪ್ರೀತಿ ಆಗಿದೆ…

ಇಂತಿ ನಿನ್ನ ಪ್ರೀತಿಯ….

ಸಿಗದವನ ಪೂಜಿಸಿ ಸೋತವಳು.
ವಿಳಾಸ ನಿನ್ನ ಹೃದಯವೇ…

———————————

3 thoughts on “‘ಒಂದು ಕಾಲ್ಪನಿಕ ಪ್ರೇಮಪತ್ರ’-ಶೃತಿ ಮಧುಸೂದನ್

  1. ವಾವ್.. ಅದೆಂತಹ ಹುಚ್ಚು ಪ್ರೇಮಿಯ ಕಾಲ್ಪನಿಕ ಪದಗಳು, ಒಂದು ಕ್ಷಣ ಈ ಪತ್ರದ ಚಿತ್ರವು ನನ್ನ ಕಣ್ಣೆದುರು ತಟ್ಟನೆ ತಪ್ಪಳಿಸಿ, ಇದು ಕಲ್ಪನೆಯಲ್ಲ ಕಥೆಯಲ್ಲ ಆದರೂ ನನ್ನ ಕಲ್ಪನೆಗೂ ಸಿಗದ ಈ ಪ್ರೇಮ ಪತ್ರಕ್ಕೆ , ಒಂದು ಸಲ ಕಳೆದುಹೋದೆ.. ಮತ್ತೆ ಮತ್ತೆ ಈ ಪ್ರೇಮದ ಪತ್ರವನ್ನು ಓದಿ ಆ ಕಾಲ್ಪನಿಕ ಲೋಕದಲ್ಲಿ ಕಳೆದುಹೋಗಲು ಮನ್ಸು ಬಯಸುತ್ತಿದೆ… ನಿಜ ಈ ಪತ್ರ ತುಂಬಾ ಇಷ್ಟವಾಯ್ತು..

  2. ಒಂದು ಸುಂದರ ಪ್ರೇಮ ಪರಾಕಾಯ ಪ್ರವೇಶದ ಕಾಲ್ಪನಿಕ ಪತ್ರ. ಓದಿದಷ್ಟು ಮತ್ತೆ ಮತ್ತೆ ಓದಿಸಿಕೊಳ್ಳುವ ಪದಪುಂಜಗಳ ಮೋಡಿಗೆ ಮಾರುಹೋದದ್ದು ಸುಳ್ಳಲ್ಲ.

Leave a Reply

Back To Top