‘ಹಳ್ಳದ ಕಲ್ಲು- ಉತ್ತಮ ಎ. ದೊಡ್ಮನಿ ಅವರ ಸಣ್ಣ ಕಥೆ

ಕೋಳಿ ಕೂಗುವ ಹೊತ್ತಿಗೆ, ಶಾಣಮ್ಮ ಕಣ್ಣ ವರುಸಕೋತ ಎದ್ದು, ಹೊರಗಡೆ ಬಂದಳು. ಅಯ್ಯೋ! ಇಷ್ಟು ಬೇಗ ಬೆಳುಕು ಹರಿತಲ್ಲ, ಈಗರೇ ಜರಾ ಜುಳುಕ್ ಹತ್ತಿತು ಅಂತ, ಅಡಗಿ ಮನಿಗ ಹೋಗಿ, ಒಲ್ಯಾಗಿನ ಬೂದಿ ತಗುದು, ಬುಟ್ಯಾಗ ತುಂಬಿ, ಮನಿ ಕಸ, ಅಂಗುಳ ಕಸ ಉಡುಗಿ, ತಿಪ್ಯಾಗ ಚೆಲ್ಲಬಂದು, ಅಡಗಿಮನಿ ಹೊಕ್ಕುಳು.

   ಶಾಣಮ್ಮ ಇರೋದು ಒಂದು ಸಣ್ಣ ಹಳ್ಳಿ.  ಮೂಲ ಸೌಕರ್ಯಗಳಿಂದ ತುಂಬಾನೇ ವಂಚಿತವಾಗಿದ್ದು. ಊರ-ಕೇರಿಗ ಹೋಗಬೇಕಾದುರ ಕಮಾಂಡರ್ ಜೀಪೇ ಅವರಿಗ ಗತಿ. ಇಲ್ಲಂದುರ ಅಡ್ಡ ದಾರಿ ಹಿಡುದು, ನಡಕೋತ ಬಸ್ ಬರ ಊರಿಗ ಹೋಗಿ ಬಸ್ಸಿಗಾಗಿ ಕಾಯಿಬೇಕಿತ್ತು.
ಎಲ್ಲಾ ಊರಿನಲ್ಲಿ ಇರುವಂತೆ ಈ ಊರಿನಲ್ಲಿ ಕೂಡ, ಊರಿನ ಖಾರಬಾರ ಮಾತ್ರ ಪೊಲೀಸ್ ಗೌಡುನ ಉಸ್ತುವಾರಿಯಲ್ಲೇ ಇತ್ತು. ಮೇಲು-ಕೀಳು, ಜಾತಿ-ಧರ್ಮ ಇವುಗಳನ್ನು ಅಲ್ಲಿನ ಜನರು ಒಂದಿಂಚು ತಪ್ಪದೇ ಪಾಲಿಸಿಕೊಂಡು ಬರುತ್ತಿದ್ದರು.

     ನಿಸರ್ಗ ಸಂಪತ್ತಿಗೇನು ಕಡಿಮೆ ಇಲ್ಲ. ಊರಿನ ಸಮೀಪದಲ್ಲಿ ಒಂದು ಸುಂದರವಾದ ಹಳ್ಳ. ಆ ಹಳ್ಳುಕ ಹೋಗಬೇಕಾದುರ ಗೌಡುನ ಕಬ್ಬಿನ ತ್ವಾಟುದು ಬಲ್ಲಿದೇ ಹಾದಿ ಇತ್ತು. ಕಬ್ಬಿಗು ಹಳ್ಳುದ ನೀರೆ ಗತಿ. ಅದಾದ ನಂತರ ಜಾಲಿ ಗಿಡ, ಬಬಲಿ ಗಿಡುದು ಬನಾ. ಅವು ಕುರಿ ಕಾಯೋರಿಗೆ ಸ್ವಂತ. ಒಬ್ಬುರಿಗ ಹೋಗುಕ ಭಯ, ಅಷ್ಟೊಂದು ದಟ್ಟವಾಗಿ ಬೆಳದಿವು. ಅಕಾಡಿ-ಇಕಡಿ ಹೆದುರಕೋತಿ, ಉಸುರ ಬಿಗಿ ಹಿಡಕೋತಿ, ಗಿಡ-ಗಂಟಿ ದಾಟಿದ ಮೇಲ ನೀರ ಹರ್ಯಾದು ಸೌಂಡ್ ಕೇಳತಿತ್ತು. ಹಳ್ಳದಾಗ ಬಟ್ಟಿ ವಗ್ಯಾವುರ ಅವಾಜ ಕೇಳನ ಭಯನು ಕಡಿಮಾತಿತ್ತು.

     ಎರಡು ಕಣ್ಣ ಸಾಲ್ತರಲಿಲ್ಲ ನೋಡುಕ ಅಷ್ಟೊಂದು ರಮಣೀಯವಾಗಿ ಇತ್ತು. ಸುತ್ತ ದೊಡ್ಡ-ದೊಡ್ಡ ಗಿಡಗಳು ಅದರ ಮ್ಯಾಲ ಪ್ರಾಣಿ-ಪಕ್ಷಿಗಳು ಕೂಗಾಟ. ಅದು ನಮುಗ ಕೂಗಾಟ ಅಂತ ಅನಿಸಿದ್ರು. ಅವುದುರ ಭಾಷೆಯಲ್ಲಿ ಸಮಾಲೋಚನೆ ಮಾಡ್ತಿವು. ಬಾಲ್ಯಗಳ ಕಾಟ ಹೇಳುಕಾತಿರಲಿಲ್ಲ. ಬಟ್ಟಿ ವಣುಗಕ ಹಾಕಿದು ತೊಗೊಂಡಿ ಹೋಗತಿವು. ಹುಡಿಕೊದುರ ಟಿಸ್-ಟಿಸ್ ಅಂತ ಹಲ್ಲ ಕಿಸುದು ಮ್ಯಾಲ ಬಂದಾಗ ಮಾಡವು. ಹೆದುರ ಸಾಯಿಬೇಕು. ಹಂತ ಖತರನಾಕ ಮಂಗ್ಯಾಗಳು.

     ಅಲ್ಲಿನ ಜನರಿಗೆ ಅದೆ ಹಳ್ಳನೆ ಜೀವನಾಡಿ. ಹೊಲ-ಗದ್ದೆ, ಬಟ್ಟೆ ತೊಳೆಯಲು, ದನಗಳಿಗೆ ಮೈ ತೊಳೆಯಲು, ಊರಿನ ಪರಗೋಳಿಗೆ ಬೇಸಿಗೆಯಲ್ಲಿ ಈಜಾಡಲು, ಮೀನು ಪ್ರೀಯರಿಗೆ ಮೀನು ಹಿಡಿಯಲು ಮತ್ತು ಇನ್ನಿತರ ಕೃಷಿ ಚಟುವಟಿಕೆಗಳಿಗೆ. ಅಂದರೆ ಪುಂಡಿ ಕಟಗಿ ನೀರಿನಲ್ಲಿ ಹಾಕಿ ನಾರು ತೆಗೆಯಲು. ಹೀಗೆ ಹಲವು ರೀತಿಯಲ್ಲಿ ಆ ಊರಿನ ಬದುಕೇ ಆ ಹಳ್ಳ.

        ಶರಣಮ್ಮ,ನಿಂಗವ್ವ,ಅಂಬವ್ವ,ಭಾಗ್ಯ,ಇವರೆಲ್ಲ ಗೆಳತಿಯರು ಮತ್ತ ಒಂದೆ ಕೇರಿ ಇವರ ಜೋಡಿ ಪಕ್ಕದ ಕೇರಿಯ ಬಸಮ್ಮ, ಗಂಗಾ, ಶೋಭಾ. ಒಟ್ಟಾರೆ ಹೇಳಬೇಕೆಂದರ ಐದರಿಂದ ಆರು ಜನ ಖಾಸ್ ದೋಸ್ತಿಯರು. ಇವರು ದಿನಾಲು ತಪ್ಪದೇ ಎರಡರಿಂದ ಮೂರು ಸಲ ತಮ್ಮದೆ ಆದ ರೀತಿಯಲ್ಲಿ ಭೇಟೆಯಾಗುತ್ತಿದ್ದರು. ಅದು ದಿನಾಲು ಬಟ್ಟೆ ತೊಳೆಯಲು ಹಳ್ಳುಕ ಹೋದಾಗ ಮತ್ತು ಮುಂಜಾನೆ ಸಂಜೆ ದಿನ ನಿತ್ಯ ಸಂಡಸ್ ಮಾಡಲು ಹೋದಾಗ, ಆ ಹಾಣಾದಿಯಲ್ಲೇ ಎಲ್ಲಾ ಕಷ್ಟ-ಸುಖದ ಮಾತುಗುಳು ನಡೀತಿವು.

     ಎಲ್ಲಾ ಊರಿನಲ್ಲಿ ಇರುವಂತೆ ಮುಟ್ಟಿ-ತಟ್ಟಿ ಇಲ್ಲಿ ಕೂಡ ರಾಜಾರೋಷವಾಗಿ ನಡೀತಿತ್ತು. ಹೋಟೆಲ್, ಕಟಿಂಗ್ ಶಾಪ್, ದೇವಸ್ಥಾನ, ಬೋರವೆಲ್. ಪ್ರತಿಯೊಂದರಲ್ಲೂ ಈ ಜಾತಿಯ ಭೂತಾ ಹಾಸುಹೊಕ್ಕಿತ್ತು. ಅಲ್ಲಿನ ಜನರಿಗೆ ಇದು ಮಾಮೂಲಿ ಬದುಕಾಗಿತ್ತು. ಯಾಕೆಂದರೆ ಅವುರಿಗ ಬೇರೆ ಪ್ರಪಂಚನೆ ಇರಲಿಲ್ಲ. ನಾವುಗಳು ಅವರಿಗಿಂತ ಕೆಳಗೆ, ಯಾವುದೋ ಜನ್ಮದಲ್ಲಿ ಪಾಪ ಮಾಡಿದೆವು ಅದಕ್ಕೆ ಇದು ಶಿಕ್ಷೆ ಅಂತ ತಲೆಯಲ್ಲಿ ಅಳಿಸಲಾಗದ ಶಾಹಿಯಿಂದ ಕೆತ್ತಿದರು.

        ಈ ಬೋರವೆಲ್ ಗೇ ಒಂದು ಸಪ್ರೆಟ್ ಹೆಸುರಿತ್ತು. “ಊರನವುರ ಬೋರವಲ್ ಅಂತ” ಅದೆ ಹೆಸುರ ಫೇಮಸ್. ಎಲ್ಲಾ ಕಡೆ ಸರಕಾರದವುರು ಊರಿಗ ಅನಕೂಲ ಆಗಲಿ ಅಂತ ಊರಲ್ಲಿ ನಾಲ್ಕರಿಂದ ಐದು ಬೋರವೆಲ್ ಹಾಕ್ಸಿರು. ಅದರಲ್ಲಿ ಒಂದು ಶಾಣಾಮುಂದು ಕೇರಿಯಲ್ಲಿ ಇತ್ತು. ಅದು ಏನಾದರು ಖರಬಾದರೆ ನೀರಿಗ ಊರನ ಬೋರವೆಲ್ ಕ್ಕೆ ಹೋಗಬೇಕಿತ್ತು. ಆದ್ರೆ ಮುಟ್ಟಂಗ ಇರಲಿಲ್ಲ.

     ಯಾರದುರು ಬಂದು ಅವುರ ಕೊಡದಾಗ ನೀರ ತುಂಬಿ, ಇವುರ ಕೊಡದಲ್ಲಿ ಹಾಕಬೇಕಿತ್ತು. ಯಾರಾದರು ಬರತನಕ ಕಾಯಿಕೋತ ಕೂಡಬೇಕು. ಅವುರು ಬಂದಿ ಬೈಕೋತ ನೀರ ಹಾಕಿ ಹೋತಿರು. ಇಲ್ಲ ಆ ದಾರಿಯಲ್ಲಿ ಹೋಗಾ ಬರಾ ಮಂದಿಗ ಕೈ ಮುಗುದು ಗೌಡಾ,,, ಗೌಡತಿ,,, ಅಂತ ಭಿಕ್ಷುಕರ ಹಾಗೆ ಕರುದು ನೀರ ತುಂಬುಸಕೋಬೇಕಿತ್ತು.

     ಅವುರು ಬೈಯದೆನ ಹಿಂದಗಡೆ ಬೈಯಿತಿರಲಿಲ್ಲ. ಬೋರವೆಲ್ಲ್ ಹುಡುಕೋತೆ ಬೈತಿರು. ಇಷ್ಟೋಂದು ನೀರ ಯಾಕ ಬೇಕ. ಅಲ್ಲೆ ಹಳ್ಳಾ ಅದಲ್ಲ,,, ಹೋಗದಲ್ಲ. ನಮುಗೆನ ಬೇರೆ ಕೆಲಸ ಇಲ್ಲ. ನೀವು ನೀರಿಗ ಬಂದಾಗ ಬೊರಲ್ ಹುಡಿಕೆ ಇದ್ದೆವು. ಯಾವಗ ನೋಡದುರ ಮೈ-ಕೈ ಹೊಲುಸ ಇರ್ತದ, ಅಷ್ಟೊಂದು ನೀರ ತೊಗೊಂಡಿ ಏನ್ ಮಾಡ್ತಿರಿ ಅಂತ. ಆದುರು ಇದು ಯಾವುದೂ ಕಿವಿಗ ಹಾಕೊತಿರಲಿಲ್ಲ. ಅವುರ ಬೈಗುಳಕಿಂತ ನೀರ ಇಂಪಾರ್ಟೆಂಟ್.

      ಒಂದೊಂದ ಸಾರಿ ನಮ್ಮ ಮೇಲಿನ ಸಿಟ್ಟ ಊರ ಗೌಡ-ಪಾಟಿಲುನ ಮ್ಯಾಲ ತಿರುತಿತ್ತು. ಬೊರವೆಲ್ ರೀಪೆರಿ ಮಾಡಸಲಾಗ್ಯಾರಂತ. ಹಿಂತ  ಹಲವು ಘಟನೆಗಳು ಎದೆಯ ಆಳದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಬೆಚ್ಚಗೆ ಹುದಗಿ ಕುಂತಿವು ಶಿವಗಂಗೆ ಎಂಬ ಊರಲ್ಲಿ.

      ಆದರೆ ಈ ಊರಿನಲ್ಲಿ ಇನ್ನೊಂದು ವಿಚಿತ್ರವಾದ ಪದ್ದತ್ತಿ ಇತ್ತು. ಅದೇ “ವಗ್ಯಾ ಕಲ್ಲ” ಅಂದರೆ “ಬಟ್ಟಿ ವಗ್ಯಾ ಕಲ್ಲ”. ಇದೇನಪ್ಪ ಅಂತ ಅನಿಸಬಹುದು. ಅವಾಗೆ ಹೇಳಿದಂತೆ ಈ ಊರಿನ ಜೀವ ನಾಡಿ ಅಲ್ಲಿನ ಹರಿಯುವ ಹಳ್ಳ. ಈ ಹಳ್ಳ ಯಾರಪ್ಪನ ಸ್ವಂತ ಅಲ್ಲದರು, ಅಲ್ಲಿನ ಮೇಲ ಜಾತಿದವುರೆ ತಮ್ಮ ಅಪ್ಪುಂದೆ ಅನ್ನುವ ಹಾಗೆ ಅದರ ಮೇಲೆ ಹುಕ್ಕುಮತ್ತ ಜಮಾಸಿದರು.

    ಊರಿಗೇನು ನೀರಿನ ಬರಾ ಇರಲಿಲ್ಲ. ಎಲ್ಲಾ ಕಾಲದಲ್ಲೂ ಭರಪೂರ ಜಲ ಸಂಪತ್ತು. ಬಟ್ಟೆ ತೊಳೆಯಲು ಎಲ್ಲರೂ ಅದೇ ಹಳ್ಳುಕೆ ಹೋಗುತಿದ್ದರು. ಅಲ್ಲಿಗ ಹೋಗಲು ಶಾಣಮ್ಮ ಮತ್ತ ಅವುರ ಗೆಳತಿಯರ ಮನೆ ಮುಂದೆ ಹಾದಿ ಇತ್ತು. ಯಾವುದೆ ಊರಲ್ಲಿ ಇವುರದೆಲ್ಲ ಮನಿ  ಇರೋದು ಊರ ಹೊರಗೆ. ಇಲ್ಲಿ ಕೂಡ ಆ ರೂಲ್ಸ್ ಮೂರ್ದಿರಲಿಲ್ಲ.

       ಕುರುಬುರು, ಕಬ್ಬುಲಗ್ಯಾರು, ಗೌಡುರು ಹೀಗೆ ಸಣ್ಣ ಪುಟ್ಟ ಜಾತಿಯವರು ಈ ಹಾಣಾದಿಯಿಂದೆ ಹೋಗುತಿದ್ದರು. ಹೋಗುವಾಗ ಮನಿ ಎದುರ ಬಂತ್ತು ಅಂದರೆ ಮೂಗಿಗ ಸೆರುಗ ಮುಚ್ಚಿಕೊಂಡು ಹೋತಿರು, ಸೆರಗು ಮುಚ್ಚಿಕೊಂಡೆ ಮಾತಾಡತಿರು. ಅಷ್ಟೊಂದು ಶೀಲಾ ಮಾಡತಿರು.

     ಹಳ್ಳದಾಗ ಬಟ್ಟಿ ತೊಳಿಕಾ ಗೌಡುನ ಹೆಂಡತಿ ಒಂದು ರೂಲ್ಸ್ ಮಾಡಿಳು. ಎಲ್ಲದುಕ್ಕೂ ಅವಳೇ ಲೀಡರ್. ಅದು ಎಲ್ಲರೂ ಚಾಚೂ ತಪ್ಪದೇ ಪಾಲನೆ ಮಾಡಬೇಕಿತ್ತು. ಆದುರ ಇದು ಶಾಣಮ್ಮ ಮತ್ತ ಅವುರ ಗೆಳತೆರಿಗ ಪಸಂದ ಇರಲಿಲ್ಲ.

       ಹಳ್ಳದ ಮೇಲಗಡೆ ಗೌಡತಿಯ ವಗ್ಯಾಕಲ್ಲ. ಅದರ ಮ್ಯಾಲ ಯಾರು ಬಟ್ಟಿ ವಗ್ಯಾಂಗಿಲ್ಲ ಅಷ್ಟೇ ಯಾಕ? ಅದು! ಮುಟ್ಟಾಂಗೂ ಇರಲಿಲ್ಲ. ಅದುರ ಕೆಳುಗ ಕಬ್ಬುಲಗ್ಯಾರು, ನಂತರ ಕುರಬುರು ಹೀಗೆ ಅವುರ-ಅವುರ ಜಾತಿಗ ತಕ್ಕಂತೆ ಕಲ್ಲ ಹಾಕಿರು. ಎಲ್ಲಾರಕಿನ ಕೊನೆಗೆ ಇವುರ ವಗ್ಯಾಕಲ್ಲ. ಈ ಜಾತಿ ಅನ್ನೋದು ಊರ ಬಿಟ್ಟು ಹಳ್ಳುಕ ಬಂದುರ ಬಿಟ್ಟಿರಲಿಲ್ಲ. ಎಲ್ಲಾ ಊರಿನ ಕಥೆ ಬೇರೆ ಇದ್ದುರ ಈ ಊರಿನ ಕಥಿನೇ ಬೇರೆ. ಅದೇ “ಬಟ್ಟಿ ವಗ್ಯಾ ಕಲ್ಲಿನ ಕಥಿ”.

    ಪರಗೊಳು ಸಾಲಿ ಕಲಿಕ ಕಲ್ಬುರಗಿಗ ಹೋಗಿ ಬಂದ ಮ್ಯಾಲ ಜರಾ ಶ್ಯಾಣ್ಯಾ ಆಗಿರು. ಎಲ್ಲರಿಗೂ ಅದುರ ಗಾಳಿ ಬಡದಿತ್ತು, ಅದು ಶಾಣಮ್ಮಗು. ಬಾಳ ಚುರುಕ ಇದ್ದಿಳು. ಮುಟ್ಟಿ-ತಟ್ಟಿ ಕಂಡುರ ಸಿಡುಕ್ತಿದ್ದುಳು.

     ಗೌಡತಿಗ ಮತ್ತ ಅವುರ ಚಮಚಗಳಿಗ ಬುದ್ದಿ ಕಲುಸಬೇಕು ಅಂತ ಡಿಸೈಡ್ ಮಾಡ್ದುರು, ಹೊತ್ತ ಮುಣಿಗ ಹಾಣದ್ಯಾಗ ಸಂಡಸ್ ಕುಂತಲ್ಲಿ. ಇದು ನಮುಗ ಬಿಟ್ಟು ಯಾರಿಗೂ ಗೊತ್ತಾಬಾರದು ಅಂತ ಕೈ ತಕ್ಕೊಂಡು ಆಣಿ ಮಾಡ್ದುರು ಬ್ಯಾಟ್ರಿ ಬೆಳಕಿನಲ್ಲಿ.

     ಅದು ಮಳಿ ಗಾಲ ಟೈಮ್, ಹಾಣದಿ ಸುತ್ತಾ ಎಲ್ಲ ಹಣಜಿ ಹುಲ್ಲ { ಕಾಂಗ್ರೆಸ ಹುಲ್ಲ} ಬೇಳದಿತ್ತು ಮಣಕಲತನ. ಶಾಣಮ್ಮ ಇದೆ ಸರಿಯಾದ ಟೈಮ್ ಅದಂತ ಎಲ್ಲರಿಗೂ ಒಂದೊಂದು ಕೆಲಸ ಒಪ್ಪುಸದುಳು. ಅವುರು ವಗಿಕ ಹೋಗಗಾ ಅವುರ ಜೋಡಿ ಇಬ್ಬರು ಹೋಗಬೇಕು ಅವುರಿಗ ಡೌಟ್ ಬರಬಾರದು ಅಂತ. ಅದುಕ್ಕ ಶಾಣಮ್ಮ ಪಕ್ಕುದ ಕೇರಿ ಶೋಭಾ ಅಂತ ಫಿಕ್ಸ್ ಆಯಿತು. ವಗಿಕ ಬರದು ಕಾಯಿಕೋತ ಕೂಡದು, ಗಿಡದಾಗ ಏರಿ ಕೂಡದು ಹೀಗೆ ಎಲ್ಲಾನೂ ಪ್ಲಾನ್ ಪ್ರಕಾರನೆ ಮಾಡಿದರು.

     ಅವತ ರಾತ್ರಿ ಯಾರಿಗೂ ನಿದ್ದೆ ಬರಲಿಲ್ಲ. ಎಲ್ಲಿ ನಾವು ಮಾಡುದ್ದು ಗೊತ್ತಾದುರ, ಚರಮ ಸುಲಿತಾರ ಅಂತ. ಅದುಲ್ಲದೆ ಗೌಡತಿ ಬ್ಯಾರೆ, ಹೀಗೆ ಮನದಲ್ಲಿ ಭಯ, ಆತಂಕ ಮನಸಿನಲ್ಲಿ ಪದಗಳ ಜೊತೆ ವಾಗ್ವಾದ ನಡಿತು ರಾತ್ರಿಯಲ್ಲ. ಆದುರು ಶಾಣಮ್ಮ ಎಲ್ಲದೂಕು ಸಿದ್ದವಾಗೆ ನಿಂತಿಳು. ಸೂರ್ಯ ಹೊಂಡ್ರಾ ಮಾರಿಗ ಎದ್ದು ದಿನಾ ನಿತ್ಯದ ಕರ್ಮ ಮುಗಿಸಿ, ತಿಪ್ಯಾಗಾ ಕಸ ಚೆಲ್ಲುಕ ಹೋದಾಗ ಮತ್ತೊಮ್ಮೆ ಮನದಟ್ಟ ಮಾಡಿದಳು ಶಾಣಮ್ಮ ಎಲ್ಲರಿಗೂ.

     ಮೋದಲೆ ಡಿಸೈಡ್ ಮಾಡಿದಂತೆ ಶಾಣಮ್ಮನ ಮನಿ ಬಲ್ಲಿ ಶೋಭಾ ಬುಟ್ಯಾಗ ಬಟ್ಟಿ ತುಂಬಕೊಂಡು ಬಂದುಳು. ಗೌಡತಿ  ದಂಡ ಬರದು ನೋಡಿ ನಿಂಗಮ್ಮ ಕಣ್ಣ ಸನ್ನೆಯಲ್ಲಿ ವರದಿ ಒಪ್ಪುಸದುಳು. ಏನ್ ಶಾಣಿ ಬಟ್ಟಿ ವಗಿಕ ಬರಲೇನೆ? ಅಂತ ಜಮಾದಾರ ಮಾದೇವಿ.

     ನಮ್ಮ ಕಲ್ಲ, ಅಲ್ಲೆ ಇರತಾವ ಜಮಾದರತಿ, ಅವು ಎಲ್ಲಿಗ ಓಡಿ ಹೋತವ. ಅದುರ ಮ್ಯಾಲ ಯಾರ ಬಟ್ಟಿ ವಗಿತಾರ ಅಂತ ಶಾಣಮ್ಮ ಚುಚ್ಚಿ ಮಾತಾಡದುಳು. ಹೌದಲ್ಲ!.. ಶಾಣಿ, ಬಾಳ ಹುಶ್ಯಾರ ಆಗಿ ನೋಡು, ಜರಾ ತಡಿ ಮಾಪಣ್ಣುಗ ಹೇಳಿ ಜಲ್ದಿ ಮದಿ ಮಾಡಿ ಕಳುಸ ಅಂತ ಹೇಳ್ತೀನಿ. ಆವಾಗ ಗೊತ್ತಾತದ ನಿನ್ನ ಸೊಕ್ಕ. ಮದಿ ಆದ ಮೇಲ ಗಂಡ ಸೊಂಟ್ಟ ಮುರಿತನಲ್ಲ ಅಂತ ಗೌಡತಿ. ಅಂದುರ ಗೌಡುರೂ ನಿಮ್ಮ ಸೊಂಟ ಮೂರದರೆನ್ರಿ ಗೌಡ್ತಿ. ಗೌಡ ಏನು ಸುಮ್ನೆ ಅನ್ಕೊಂಡೇನೇ ಶಾಣಿ, ಗೌಡತಿಗ ಮೆಚ್ಚಿ ಹಾರುಸ್ಕೊಂಡು ಬಂದರ. ಅಂತ ಕುರುಬುರ ಪೂಜಾರ್ತಿ.

            ಹೌದಲ್ಲ! ನನುಗ ಇದು ತಲಿಗ ಹೋಳಿಲೆ ಇಲ್ಲ ನೋಡು, ಅದಕ್ಕೆ ಇಟ್ಟೊಂದು ಧೀಮಾಕ ಅನ್ನು. ಬಣ್ಣ ಕರ್ರುಗ ಇದ್ದುರು ನೋಡುಕ ಗುಂಡಗುಂಡುಕ ಇದ್ದಿ, ನೋಡವುರ ಕಣ್ಣಿಗ  ಎದ್ದಿ ಬೀಳತಿ ಅಂತ ಗೌಡತಿ. ನೀನು ಮದಿ ಆಗು ಅವಾಗ ಈ ನಿನ್ನ ಸೊಕ್ಕಿಂದ ಮಾತಾಡದು ತಿಳಿತದ. ಶಾಣಮ್ಮ ಬಾಯಾಗ  ಬೈಕೋತ ಬುಟ್ಟಿ ಬಟ್ಟಿ ತಲಿ ಮ್ಯಾಲ ಇಟ್ಕೊಂಡು ಹಳ್ಳದು ಹಾದಿ ಹಿಡುದುಳು ಟೊಂಕಾ ಹೊಳ್ಳುಸಕೋತ.

     ಅವುರು ಹೋದ ಮ್ಯಾಲ ಇಲ್ಲಿ ಇದ್ದವುರು, ಅವುರವುರ ಕೆಲಸದಲ್ಲಿ ಮಗ್ನರಾದುರು. ಬರ ಹಾದಿ ಕಡೆ ಮೋತಿ ಮಾಡಿ ಪಿಳಿ-ಪಿಳಿ ಕಣ್ಣ ಬಿಟ್ಟಕೋತಿ ಕುಂತುರು. ನಿಂಗಮ್ಮ ತನ್ನ ತಮ್ಮನಾದ ಮಾರುತಿಗ ಹುಣಚಿನ ಗಿಡ ಎರಸಿಳು, ಬರದು ಹೇಳಂತ. ಮಾರುತಿಗು ಅದೇ ಬೇಕಿತ್ತು. ಗಿಡ ಏರ್ದುರ ಬೈತಿಳು ಬೀಳ್ತಿ ಅಂತ, ಈಗ ಅವುಳೇ ಏರು ಅಂತಳ ಅಂತ. ಗಿಡ ಎರದೆ ತಡಾ ಮಸುರ ಹುಣಚಿನ ಕಾಯಿ ಹುಡುಕಿ ಚಿಪಕೋತಿ ಕುಂತ  ಕೋತಿ ಹಾಗ.

     ಗಿಡುದು ಬಡ್ಯಾಗ ಕುಂತಿದ ಮಾರುತಿ ಮಸುರ ಹುಣಚಿನಕಾಯಿ ಚೀಪತ್ತಾ ಇದ್ದುರ ಕೂಡಾ ಅವುನ ಕವಿ ಮಾತ್ರ ಹಳ್ಳುದ ಹಾದಿ ಕಡೆ ಇದ್ದಿವು. ಹೆಂಗಸುರ ಅವಾಜ ಕೇಳದುರೆ ಸಾಕು ಅಕ್ಕ ಬಂದುರ ಅಂತ ಮೆಲ್ಲುಗ ಹೇಳ್ತೀನು, ಆಮೇಲೆ ಅವುರಲ್ಲಂತ ಗೊತ್ತಾದ ಕೂಡ್ಲೆ ಅವುರಲ್ಲ-ಅವರಲ್ಲ ಅಂತ ಹೀಗೆ ಮೂರು ನಾಕು ಸಲಾ ಆದ ಮ್ಯಾಲ ಶಾಣಮ್ಮುಂದು ಅವಾಜ ಕೇಳ್ತು. ಓ..! ಬರ್ತಾ ಇದ್ದಾರ ಅಂತ ಎಲ್ಲರೂ ಏಕದಮ್ಮ್ ಅಲರ್ಟ್ ಆದೂರು. ಜಲ್ದಿ-ಜಲ್ದಿ ತಮ್ಮ-ತಮ್ಮ ಕೆಲಸ ಮುಗಿಸಿ ಕದ್ದಿ ಕುಂತರು. ಕುಳಬಾನ ಹಿಂದ, ಗ್ವಾಡಿ ಪಕ್ಕ, ಗಿಡುದ ಬಡ್ಡಿಗ, ಯಾರಿಗೂ ಕಾಣಲ್ದಂಗೆ, ಅವುರಿಗ ಅನಕೂಲ ತಕ್ಕಂತೆ ಬಾಯಿ ಮೇಲೆ ಬಟ್ಟ ಇಟ್ಟಕೊಂಡು.

       ಮೊದಲೇ ಸೂರ್ಯ ನೆತ್ತಿ ಸುಡ್ತಿದ್ದ, ಹೊಟ್ಟಿ ಬ್ಯಾರೆ ತಾಳ ಹಾಕ್ತಿತ್ತು. ಹಂತರದಾಗ ಕೆಸುರ ಬ್ಯಾರೆ. ಕೇಳಗಡೆ ನೋಡದುರ ಕೆಸರು ಯಾವುದೊ, ಹೆಂಡಿ ಯಾವುದೊ, ಹೇಲ ಯಾವುದೊ ಒಂದು ಗೊತ್ತಾತಿರಲಿಲ್ಲ ಎಲ್ಲಾ ಮಿಕ್ಸ್ ಆಗಿತ್ತು. ನೋಡು ನೋಡಲದಂಗ ಕಾಲ ಎತ್ತಿ ಇಡ್ತಿರು. ಪಚ್ಚ-ಪಚ್ಚ ಅಂತ ಕೆಸುರ ಸೌಂಡ. ಇದೆಲ್ಲ ಸಹಿಸಕೊಂಡು ಮಳಕಲತನ ಸೀರಿ ಎತ್ತಿ, ಒಂದು ಕೈ ಬಟ್ಟಿ ಬುಟ್ಟಿಗ, ಇನ್ನೊಂದು ಕೈ ಸೆರುಗಿಂದ ಮೂಗ ಮುಚ್ಚಕೊಂಡಿರು. ಹಂತರದಾಗ ಎಲ್ಲ ಶಕ್ತಿ ಒಟ್ಟ ಮಾಡಿ ಬರ್ರ್-ಬರ್ರ್ ಅಂತ ಕೈ ಬಿಸಕೋತ, ದೊಡ್ಡೂ ಹೆಜ್ಜಿ ಹಾಕೋತ-ಹಾಕೋತ ಎದುರು ಇದ್ದ ಗೌಡತಿ ಕೆಸರಾಗ ದಪ್ಪನೆ ಕುಂಡಿ ಮ್ಯಾಲ ಮಾಡಿ ಬಿದ್ದುಳು. ಕೆಸುರ ಪಚ್ಚಂತ ಎಲ್ಲರ ಮೈ-ಮಾರಿ ಸಿಡಿತ್ತು. ಅವುಳ  ಮ್ಯಾಲ ಜಮದಾರ್ತಿ, ಪೂಜಾರ್ತಿ, ಸಾಲ-ಸಾಲಾಗಿ ಒಬ್ಬರ ಮೇಲೆ ಒಬ್ಬರು ಬಾಳೆ ದಿಂಡ ಬಿದ್ದಾಂಗ ಬಿದ್ದುರು. ಇದು ನೋಡಿ ಅಲ್ಲಿ ಕದ್ದಿ  ಕುಂತಿರವುರು ಕೊಳ್ಳ ಅಂತ ನಕ್ಕುರು, ಆದೂರು ಇದು ಬಿದ್ದವರ ಕೀವ್ಯಾಗ ಬೀಳಿಲ್ಲ. ಇದೆ ಚಾನ್ಸ್ ಅದ ಅಂತ ತಿಳಿದು ಶಾಣಮ್ಮನು ಅವುರ ಮ್ಯಾಲ ಬಿದ್ದುಳು.

   ಗೌಡತಿ ಮೋತಿ ಹೋಗಿ ಕೆಸರಾಗ ಸಿಕ್ಕಿತ್ತು. ಏ ರಂಡ್ಯಾರೆ ಮ್ಯಾಲಿಂದು ಎಳ್ರೆ ಅಂತ ಚಿರ್ದುಳು. ಎಲ್ಲರೂ ಎದ್ದು ತಮ್ಮ-ತಮ್ಮ ಬಟ್ಟಿ ಬುಟ್ಯಾಗ ತುಂಬಿದರು. ಎಲ್ಲರ ಬಟ್ಟಿ ಕೆಸರಾಗ ಬಿದ್ದಿವು ಮತ್ತ ವಗಿಬೇಕ್ಕಲ್ಲ ಅಂತ ಬೈಕೋತ ಹೊಂಟುರು. ಎಲ್ಲರು ಗೌಡತಿದು ಕಾಲ ಜಾರ್ಯಾದ ಅದಕ್ಕೆ ಬಿದ್ದಾಳಂತ. ಆದುರು ಗೌಡತಿಗ ಗೊತಿತ್ತು ಹಾದ್ಯಾಗ ಎರಡು ಸೈಡ್ ಹಣಜಿ ಕಟ್ಯಾರ, ಕಾಲಿಗ ತಟ್ಟಿ ಬಿದ್ದಿನಂತ. ಈ ಕೆಲಸ  ಶಾಣಿದೆ ಅಂತ. ಆದುರೂ ಯಾರಿಗೂ ಹೇಳದೆ ಬಟ್ಟಿ ತುಂಬಕೊಂಡು ನಡದಳು.

     ಅವತ್ತೇ ಮಧ್ಯಾನ ಎಲ್ಲರೂ ಊಟ ಮಾಡುಕ ಸೇರಿ ಖುಷಿ ಹಂಚಕೊಂಡರು. ಇದು ವಾರಕೊಮ್ಮ, ಹದುನ ದಿನುಕೊಮ್ಮ ರಿಪೀಟಾತಿತ್ತು ಮತ್ತ ಬಟ್ಟಿ ವಗುದು ಹುಣಚಿನ ಗಿಡುದು ಫಂಟ್ಯಾಕ್ ಸೀರಿ ವಣಗ್ಸದು ಅವುರು ಬರ ಹಾದಿಗ. ಅದುರು ನೀರ ಗಾಳಿಗ ಮೋತಿಗ,ಮೈಯಿಗ ಬಡಿಲಿ ಅಂತ. ಇದೆಲ್ಲ ಬೇಕಂತಲೇ ಮಾಡ್ತಾರ ಅಂತ ಗೊತ್ತಿದ್ದರು ಬೈಕೊತ ಹೋತಿರು. ಹಾದಿ ಒಂದೇ ಇತ್ತು.

     ಎಲ್ಲ ಗೆಳತಿಯರು ಮದಿ ಮಾಡಿಕೊಂಡು ಅವರವರ ಗಂಡುನ ಮನಿಗ ಹೋದುರು, ಇದು ಆಗಾಗ ನಡೀತಿತ್ತು. ಇವುರು ಮಾಡದು ನೋಡಿ ತಂಗಿ-ತಮ್ಮ ಮುಂದ ವರ್ಸಿರು.

      ಆದುರು ಈಗ ಎರಡು ಟೈಮ್ ಬಸ್ ಬರ್ತಾದ. ಹೋಟೆಲ್, ಕಟಿಂಗ್, ಎಲ್ಲರಿಗೂ ಮುಕ್ತವಾಗಿವೆ ಮನುಸಿಲ್ದು ಮನುಸ್ಸಿಂದ. ಆದುರು ಗರ್ಭ ಗುಡ್ಯಾಗಿನ ದೇವರು ಮಾತ್ರ ಇನ್ನು ಕಣ್ಣ ಬಿಟ್ಟಿಲ್ಲ. ಗುಡಿ ಹೊಸ್ತುಲ ಮುಟ್ಟಂಗಿಲ್ಲ. ಈಗ  ವಗ್ಯಾಕಲ್ಲು ಕೇಳೋರಿಲ್ಲ, ಹಳ್ಳದಲ್ಲಿ ಅನಾಥವಾಗಿ ತಮ್ಮ ಪಾಡಿಗ ತಾವು ಬಿದ್ದವ.


2 thoughts on “ ‘ಹಳ್ಳದ ಕಲ್ಲು- ಉತ್ತಮ ಎ. ದೊಡ್ಮನಿ ಅವರ ಸಣ್ಣ ಕಥೆ

Leave a Reply

Back To Top