ಕನ್ನಡ ರಾಜ್ಯೋತ್ಸವ ವಿಶೇಷ
ರಾಜೇಶ್ವರಿ ಎಸ್. ಹೆಗಡೆ
ಇದೇ ನಾಡು ಇದೇ ಭಾಷೆ
ಎಂದೆoದೂ ನಮ್ಮದಾಗಿರಲಿ…
: ಕನ್ನಡ ನಾಡು ಚೆಂದ ಕನ್ನಡ ನುಡಿಯು ಅಂದ.ಕೇಳಲು ಎಷ್ಟು ಇಂಪೋ ಹಾಡಲು ಅಷ್ಟೇ ಸವಿ ತಂಪು.ಸುಂದರ ಅಕ್ಷರ ಪೋಣಿಸುವ ಕನ್ನಡ ಭಾಷೆ ನಮ್ಮದಾಗಿದೆ.ಈ ಭಾಷೆಗೆ ಎರಡುವರೆ ವರ್ಷಗಳ ಇತಿಹಾಸವಿದೆ ಎಂಬುದು ವಿಶ್ವಾಸನೀಯ. ಯಾವುದೇ ಅನ್ಯ ಭಾಷೆಗಳಲ್ಲಿ ಕನ್ನಡ ನಿಗoಟು ಇರುವದಿಲ್ಲ ಆದರೆ ನಮ್ಮ ಕನ್ನಡ ಭಾಷೆಗೆ ಮಾತ್ರ ಕನ್ನಡ ನಿಗoಟು ಎಂಬ ಕೂಸೊಂದು ಹುಟ್ಟಿ ಕೊಂಡಿದೆ.ಗಂಧ ಚೆಂದನ ,
ಶಿಲ್ಪಿಗಳು, ಕಲಾಕಾರರನ್ನು ಕನ್ನಡ ನಾಡು ಹೊಂದಿದೆ. ಕಾವೇರಿ, ಕೃಷ್ಣೆ,ಶರಾವತಿ, ನದಿಗಳನ್ನು ಹೊಂದಿದೆ.
ಸಂಸ್ಕ್ರತಿ,..
ಇದೊಂದು ಚೆಲುವ ಕನ್ನಡ ನಾಡು ಎಂದು 1956 ರಲ್ಲಿ ಏಕೀಕರಣ ಮೂಲಕ ಉದಯಿಸಿತು. ಕನ್ನಡಿಗರು ವಿಶಾಲ ಹೃದಯದ ಸುಸಂಸ್ಕೃತರು ಡೊಳ್ಳು ಕುಣಿತ,ಸಂಗೀತ,ನಾಟಕ ಯಕ್ಷಗಾನ, ಭರತ ನಾಟ್ಯ, ಹಬ್ಬ ಹರಿದಿನ,ಪಂಚಾಂಗ,ನಾಡ ದೇವಿ ಉತ್ಸವ ಎಲ್ಲದರಲ್ಲೂ ಹಿರಿಮೆ ಮೆರೆದವರು ಕನ್ನಡಿಗರು ಆಗಿದ್ದಾರೆ. ಒಬ್ಬೊಬ್ಬ ಹಿರಿಯ ಕವಿಗಳು ಕನ್ನಡ ನಾಡು ನುಡಿ ಸಂಸ್ಕ್ರತಿ ಕುರಿತು ಒಂದೊಂದು ರೀತಿಯಲ್ಲಿ ಬಣ್ಣಿಸಿ ಹಾಡಿ ಹೊಗಳಿದ್ದಾರೆ.
ಕಾವ್ಯ ಪರಂಪರೆ…
ಎಂಟು ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರ ಹೆಗ್ಗಳಿಕೆಗೆ ಪಾತ್ರರಾದ ಶ್ರೀಮಂತ ಸಾಹಿತಿಗಳಿಂದ ಶ್ರೀಮಂತ ಕಾವ್ಯ ಪರಂಪರೆ ಹೊಂದಿದ ಕರುನಾಡು ನಮ್ಮದಾಗಿದೆ.
ಕನ್ನಡ ಭಾಷೆ ಹೊರತು ಪಡಿಸಿ ಬೇರೆ ಯಾವುದೇ ಭಾಷೆಗೆ ಇಷ್ಟೊಂದು ಜ್ಞಾನಪೀಠ ಪ್ರಶಸ್ತಿಗಳು ದೊರೆತಿಲ್ಲ.ಎಂಬುದು ಸತ್ಯಾರ್ಹವಾಗಿದೆ.ಚಂಪಕಾವ್ಯ ಹರಿಹರ,ಛಂದಸ್ಸು,
ಹಳಗನ್ನಡ,ಹೊಸಗನ್ನಡ, ಮಹಾಭಾರತ, ರಾಮಾಯಣ, ದಾಸ ಸಾಹಿತ್ಯ,ವಚನ ವೈಭವ ಇವನ್ನೇಲ್ಲ ಕಾವ್ಯ ಪರಂಪರೆ ಹೊಂದಿದ ನಾಡು ನಮ್ಮ ಹೆಮ್ಮೆಯ ಕನ್ನಡನಾಡು.ಕನ್ನಡ ನಾಡು ಮನವನು ತಂಪಾಗಿಸುವ ಮೋಹನ ಸುದೆಯಿಂದ ತುಂಬಿದ ಹೆಮ್ಮೆಯ ಕನ್ನಡ ನಾಡಾಗಿದೆ.
ಕನ್ನಡ ನಾಡಿನ ಸ್ಥಿತಿ.
ಆದರೆ ಇಷ್ಟೇಲ್ಲ ಇರುವ ಈ ಶ್ರೀಮoತ ನಾಡಿನಲ್ಲಿ ಕನ್ನಡ ಬೆಳೆಸಬೇಕು ಕನ್ನಡ ಉಳಿಸಬೇಕು, ಎಂಬ ಘೋಷವಾಕ್ಯವು ಹುಟ್ಟಿ ಕೊಳ್ಳುವುದು ನವೆಂಬರ್ ತಿಂಗಳ ಒಂದನೇ ತಾರೀಖು ಬಂದಾಗ ಮಾತ್ರ ಎಂಬ ಅನಿವಾರ್ಯತೆ ನಮ್ಮ ನಾಡಿಗೆ ಒದಗಿ ಬಂದಾಗಿದೆ.
ಆಡಳಿತ ನಡೆಸುವ ಚುಕ್ಕಾಣಿಗಳಿಗೆ ಕನ್ನಡ ಭಾಷೆ ಬೇಕಾಗಿಲ್ಲ.ಅಪ್ಪ ಅಮ್ಮoದಿರಿಗೆ ಕಾನ್ವೆಂಟ್ ಬೇಕಾಗಿದೆ.ಮಕ್ಕಳಿಗೆ ಮಮ್ಮಿ ,ಡ್ಯಾಡಿ ಎನ್ನುವ ಹುಚ್ಚು ಅಡಗಿದೆ.ನಾಡಿನ ನಾಗರಿಕರು ತಮಗೆ ಬಂದ ರೀತಿಯ ಮಾತನ್ನು ಆಡುತ್ತಾರೆ. ಬೇರೆಯವರು ಕರ್ನಾಟಕಕ್ಕೆ ಬಂದರೆ ಕನ್ನಡ ಉಪಯೋಗಿಸುವ ಅಗತ್ಯತೆ ಅನಿವಾರ್ಯತೆ ಅವರಿಗೆ ಇರುವುದಿಲ್ಲ. ನಮ್ಮಲ್ಲೇ ಭಾಷೆಯ ಮಾತ್ರ ಪ್ರೇಮ ,ಅನ್ನ ಹಾಕುವ ಭಾಷೆಯ ವ್ಯಾಮೋಹ ಇಲ್ಲವೆಂದ ಮೇಲೆ ಬೇರೆಯವರು ಯಾಕೆ ಕಲಿಯುವರು. ಮೊದಲು ನಮ್ಮ ಡೊಂಕು ಸರಿಪಡಿಸಿಕೊಂಡು ಕನ್ನಡ..ಕನ್ನಡ..ಕನ್ನಡ ಎಂಬುದನ್ನು ಹಣತೆ ಬೆಳಕಿನಲ್ಲಾದರೂ ಕಣ್ಣು ಬಿಟ್ಟು ಓದಿ ಸಂತೋಷಿಸಿ ಪ್ರೀತಿಸ ಬೇಕು.ಎಲ್ಲ ಹೊಟೇಲ್ ಅಂಗಡಿಗಳ ಬಿಲ್ಲುಗಳು ಕನ್ನಡದಲ್ಲಿ ಪ್ರಿಂಟ್ ಆಗಿ ಕನ್ನಡ ಭಾಷೆಯ ಬಿಲ್ಲು ಪಡೆವ ಪ್ರಯತ್ನ ನಮ್ಮೆಲ್ಲರದ್ದು ಅಗಿರಬೇಕು.ಆವಾಗ ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ ಎಂದು ಹೇಳ ಬಹುದಾಗಿದೆ.
ಭಾರತ ದೇಶವು ಬಹು ಭಾಷಿಕರ ಬಹು ಸಂಸ್ಕ್ರತಿಗಳ ತವರುಮನೆ ಆದ ದೇಶವಾಗಿದೆ. ಯಾವುದೇ ಭಾಷಿಕರು ರಾಜ್ಯದ ಯಾವುದೇ ಶಾಲೆಯಲ್ಲಿ ಪ್ರವೇಶವನ್ನು ಪಡೆದು ಕೊಳ್ಳಬಹುದಾಗಿದೆ. ಇದು ಅವರ ಸಾಂವಿಧಾನಿಕ ಹಕ್ಕು ಆಗಿದೆ. ಬಂಡವಾಳ ಶಾಹಿಗಳ ವಿವಿಧ ಬೋಧನೆಗಳ ಆಕರ್ಷಣೆಯಿಂದ ಅನ್ಯ ಭಾಷಿಕರ ಸೆಳೆಯುವಿಕೆ ಜಾಸ್ತಿ ಆಗಿದೆ. ಆ ಪ್ರಯುಕ್ತ ಎಲ್ಲ ರಂಗದಲ್ಲಿಯೂ ವೃತ್ತಿಪರ ಶಿಕ್ಷಣಗಳು ಆಂಗ್ಲ ಭಾಷೆಯ ಹಿಡಿತದಲ್ಲಿ ತೇಲಾಡುತ್ತಿದೆ.
ಈ ನಮ್ಮ ಕರ್ನಾಟಕದ ಕನ್ನಡ ಮಣ್ಣಿನ ನೆಲದಲ್ಲಿ ವಲಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲಿರುವುದು ಅವರಿಗೆಲ್ಲ ಶಾಲಾ ಪ್ರವೇಶಾತಿಯನ್ನು ನೀಡಿದಾಗ ಅನ್ಯ ಭಾಷಿಗರ ಸಂಖ್ಯೆ ಹೆಚ್ಚುತ್ತ ಹೋಗುತ್ತದೆ. ಅವರ ಕುಟುಂಬ ವಾಸ್ತವ್ಯ ಹೆಚ್ಚುತ್ತದೆ.
ಓದಿನಲ್ಲಿ ಪ್ರಥಮ ಭಾಷೆ ಐಚ್ಛಿಕವಾಗಿ ಪಾಲಕರ ವಿದ್ಯಾರ್ಥಿಗಳ ಜವಾಬ್ದಾರಿಗೆ ಬಿಟ್ಟಿರುವುದರಿಂದ ಅವರವರ ಮಾತೃಭಾಷೆ ಆಯ್ಕೆ ಅವಕಾಶ ಕಲ್ಪಿಸಿದಂತೆ ಆಗಿದೆ. ಪ್ರಾಂತೀಯ ಭಾಷೆ ಎಂಬುದು ಉಳಿದು ಕೊಳ್ಳಲಿಲ್ಲ.ನೀತಿ ನಿಯಮಗಳು ಹೀಗಿರುವಾಗ ಒತ್ತಡದಿಂದ ಹೇರಿಕೆ ಮಾಡುವುದು ಅಸಾಧ್ಯವಾಗಿದೆ.ಕನ್ನಡ ನಾಡು ನುಡಿಗೆ ಆಧ್ಯತೆ ನೀಡುವುದು ಹೇಗೋ ಆಡಳಿತ ವ್ಯವಸ್ಥೆಯಲ್ಲಿಯೂ ಭಾಷಾ ಆಧ್ಯತೆಯನ್ನು ಕಡ್ಡಾಯ ಗೊಳಿಸ ಬೇಕಾಗಿದೆ. ಪ್ರತಿಯೊಂದು ಪಕ್ಷಗಳೂ ಆಯ್ಕೆಗಿಂತ ಮೊದಲು ಭರವಸೆ ಕೊಡುವುದು ಸತ್ಯ ಸಂಗತಿ. ಆಯ್ಕೆ ನಂತರ ಇವುಗಳ ಕುರಿತು ತಲೆ ಕೆಡಿಸಿ ಕೊಳ್ಳುವ ಪುರಸೊತ್ತು ಇಲ್ಲದೆ ನುಸುಳಿ ಕೊಳ್ಳುವುದು ಅಷ್ಟೇ ಸತ್ಯ. ಮಾತೃಭಾಷಾ ವ್ಯಾಮೋಹಗಳು ಅವರಿಗಿದ್ದರೆ ಕನ್ನಡ ಭಾಷೆಯ ಸಫಲತೆ ಸಾಧ್ಯವಿರುತ್ತದೆ.
ಗಡಿನಾಡು ಬೆಳಗಾವಿ,ಕಾರವಾರ ಮಂಗಳೂರ, ಪಾವಗಡ ಜಿಲ್ಲೆಗಳಲ್ಲಿ ಅನ್ಯ ಭಾಷಿಕರ ಓಲೈಸಿ ಅವರದೇ ಭಾಷೆಯಲ್ಲಿ ಭಾಷಣ ಮಾಡಿ ಬೇಕಾದ ಸವಲತ್ತುಗಳ ಕುರಿತು ಭರವಸೆ ಮಹಾಪೂರದ ಆಶ್ವಾಸನೆ ನೀಡಿ ಬೀಗಿದ ಭಾಷಣಕಾರರು ಇರುವ ವರೆಗೂ ಮಾತೃಭಾಷೆಯ ಹಿಡಿತ ಸಾಧಿಸುವುದು ಅಸಾಧ್ಯ. ಮಾತ್ರ ಭಾಷಾ ಪ್ರೇಮ ನಾಡು, ನುಡಿ,ಅಸ್ಮಿತೆ ಎಂದು ಹೇಳುವವರು ಬೇಕಾದಷ್ಟು ಇದ್ದಾರೆ. ಭಾಷಣ ಸಂವಾದ ಜನಜಾಗ್ರತಿ ಇವೆಲ್ಲಾ ಪೊಳ್ಳು ಭರವಸೆ ಎನ್ನುವವರು ಇದ್ದಾರೆ.
ಮಾತೃಭಾಷಾ ಪ್ರೇಮದ ಬೋಧನೆ ಬಡವರ ಮಕ್ಕಳು,ಗ್ರಾಮೀಣ ಭಾಗದ ಮಕ್ಕಳು ಮತ್ತು ಜನರುಗಳು ಹಾಗೂ ಕನ್ನಡ ಸಾಹಿತಿಗಳು ಇವರುಗಳಿಂದ ಕನ್ನಡ ಹೆಚ್ಚಿನ ಸಂಖ್ಯೆಯಲ್ಲಿ ಉಳಿದಿದೆ. ಆಟೋ ರೀಕ್ಷಾದವರು ನಾಮ ಫಲಕಗಳನ್ನು ಕನ್ನಡದಲ್ಲಿ ಹಾಕುತ್ತಿರುವುದರಿಂದ ಕನ್ನಡ ಉಳಿವಿಗೆ ಅವರ ಪಾತ್ರವೂ ಇರುತ್ತದೆ.ನಗರ ಪ್ರದೇಶಗಳಲ್ಲಿ ಚಲಾವಣೆಗೆ ಬಾರದ ನಾಣ್ಯದಂತೆ ಕನ್ನಡ ಮಾತೃಭಾಷೆ ಅರಳುವ ಬದಲು ಮುದುಡಿ ಬಾಡಿದೆ.ಪ್ರಯುಕ್ತ ಭಾಷಾಭಿಮಾನ ಎಂಬುದು ಕನ್ನಡ ಮಣ್ಣಿನ ಕಣ ಕಣದಲ್ಲೂ ಇರುವುದರಿಂದ ಕರುನಾಡಲ್ಲಿ ಹುಟ್ಟಿ ಇಲ್ಲಿಯೇ ವಾಸಮಾಡಿ ಇಲ್ಲಿಯ ಅನ್ನದ ಋಣ ತೀರಿಸಲಾದರೂ ಕನ್ನಡ ಉಳಿಸಿ ಬೆಳೆಸಿ ಕನ್ನಡ ನೆಲಸುವಂತೆ ಮಾಡುವುದು ನಮ್ಮೇಲ್ಲರ ಅಧ್ಯ ಕರ್ತವ್ಯವಾಗಿದೆ.
ಇದು ಕರ್ನಾಟಕ ರಾಜ್ಯ ಇಲ್ಲಿ ಕನ್ನಡ ಬಿಟ್ಟರೆ ಎರಡನೇ ಸ್ಥಾನ ಪಡೆವ ಭಾಷೆ ಇನ್ನೊಂದು ಇಲ್ಲದಾಗಿದೆ.ವಿನೋಬಾ ಭಾವೆಯವರು ,,ವಿಶ್ವ ಲಿಪಿಗಳ ರಾಣಿ ಎಂದು ಕನ್ನಡ ಭಾಷೆಯನ್ನು ಕರೆದಿದ್ದಾರೆ. ಕನ್ನಡ ಭಾಷೆಯನ್ನು ಎಲ್ಲರೂ ಒಟ್ಟಾಗಿ ಬೆಳೆಸೋಣ. ಉಳಿಸೋಣ. ಎಲ್ಲ ಮೂಲೆಗಳಲ್ಲೂ ಕನ್ನಡ..ಕನ್ನಡ..ಕನ್ನಡ ಎನ್ನೋಣ. ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ ಎನ್ನೋಣ
ರಾಜೇಶ್ವರಿ ಎಸ್. ಹೆಗಡೆ.