ಅನುಭವ ಸಂಗಾತಿ
ಸುಧಾ ಹಡಿನಬಾಳ
‘ಮುಖ್ಯ ಶಿಕ್ಷಕಿಯಾಗಿಗೆಲುವಿನ ನಗೆ’
ಅನುಭವ ಕಥನ
ನನ್ನಿಷ್ದದ ಶಿಕ್ಷಕ ವೃತ್ತಿಯಲ್ಲಿ ೨೫ ವರ್ಷಗಳನ್ನು ಒಂದೇ ಶಾಲೆಯಲ್ಲಿ ಕಳೆದು ಜನ ಮೆಚ್ಚುಗೆ ಗಳಿಸಿ ಸ್ವ ಇಚ್ಛೆಯಿಂದ ಪಕ್ಕದ ಶಾಲೆಗೆ ಪರಸ್ಪರ ವರ್ಗಾವಣೆಯಲ್ಲಿ ಬಂದೆ. ಬರುವಾಗ ಆ ಶಾಲೆಯಲ್ಲಿ ನಾನು ಎಲ್ಲರಿಗಿಂತ ಕಿರಿಯಳು ; ಪದೋನ್ನತ ಮುಖ್ಯ ಶಿಕ್ಷಕರು, ನನಗಿಂತ ಮೇಲೆ ಮತ್ತೆ ಮೂವರು ಸಹಶಿಕ್ಷಕರು ಹೀಗೆ ಹೆಚ್ಚೇನೂ ಜವಾಬ್ದಾರಿ ಇಲ್ಲದೆ ಒಬ್ಬ ಸಹ ಶಿಕ್ಷಕಿಯಾಗಿ ಒಂದು ವರ್ಷ ಈ ಹಿಂದಿನಂತೆ ಬೋಧನೆ , ಸಂಘಟನೆ, ಸಾಂಸ್ಕೃತಿಕ ಜವಾಬ್ದಾರಿ ನಿಭಾಯಿಸಿಕೊಂಡು ಬಂದೆ . ಒಂದುವರೆ ವರ್ಷದಲ್ಲಿ ವರ್ಗಾವಣೆ, ನಿವೃತ್ತಿ ,ಹೆಚ್ಚುವರಿ ಹೀಗೆ ಇರುವ ಶಿಕ್ಷಕರುಗಳೆಲ್ಲ ಖಾಲಿಯಾಗಿ ಮುಖ್ಯ ಶಿಕ್ಷಕರ ಹುದ್ದೆಯೇ ಹೇಗಲೇರಿದಾಗ ಒಂದಿಷ್ಟು ದಿನ ನಿದ್ದೆ ಕಳೆದುಕೊಂಡೆ! ಮನಃಶ್ಯಾಂತಿ ಕಳೆದುಕೊಂಡೆ, ತುಂಬಾ ಕಸಿವಿಸಿಕೊಂಡೆ ….
ಹೇಳಿಕೇಳಿ ನಾನು ನನ್ನ ಮೊದಲಿನ ಶಾಲೆಯಲ್ಲಿಯೂ ಮೂರನೇ ಸಹ ಶಿಕ್ಷಕಿಯಾಗಿ ಕೆಲಸ ನಿರ್ವಹಿಸಿದ್ದರಿಂದ ಮುಖ್ಯ ಶಿಕ್ಷಕರ ಆಡಳಿತಾತ್ಮಕ ಕೆಲಸಗಳ ಜವಾಬ್ದಾರಿ ಇರಲಿಲ್ಲ ; ಹಣಕಾಸಿನ ವ್ಯವಹಾರವಂತೂ ಗೊತ್ತೇ ಇರಲಿಲ್ಲ! ಸದಾ ಮಕ್ಕಳೊಂದಿಗೆ ವರ್ಗ ಕೋಣೆಯಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮ , ಶಿಸ್ತು , ಕಲಿಕೆ ಇವುಗಳೊಂದಿಗೆ ಸದಾ ತೊಡಗಿಸಿಕೊಂಡ ನನಗೆ ಮುಖ್ಯ ಶಿಕ್ಷಕರ ಹುದ್ದೆ ಹೊರಲಾರದ ಭಾರವೆನ್ನಿಸಿತು ಒಮ್ಮೊಮ್ಮೆ ಹಿಂದಿನ ಶಾಲೆಯಲ್ಲಿದ್ದಾಗ ಶಾಲೆಯ ಅಭಿವೃದ್ಧಿಗಾಗಿ ಏನೂ ಮಾಡಲಾಗದ ಕೈಕಟ್ಟಿದ ಸ್ಥಿತಿ ಅನ್ನಿಸಿದ್ದೂ ಉಂಟು .ಆಗೆಲ್ಲಾ ನಾನೇ ಮುಖ್ಯಾಧ್ಯಾಪಕಿಯಾದರೆ ಖಂಡಿತ ಶಾಲೆಯ ಅಭಿವೃದ್ಧಿಗೆ ನನ್ನಿಂದಾದ ಕೊಡುಗೆಯನ್ನು ನೀಡಲೇಬೇಕೆಂದು ಪಣತೊಟ್ಟಿದ್ದೆ. ಆದರೂ ಮನಸ್ಸು ಹಿಂಜರಿಯುತ್ತಿತ್ತು… ಇತ್ತೀಚಿನ ದಿನಗಳಲ್ಲಿ ಮುಖ್ಯಾಧ್ಯಾಪಕರ ಜವಾಬ್ದಾರಿ, ಒತ್ತಡ ಅತೀ ಹೆಚ್ಚಾಗಿದೆ ಕೂಡ…
‘ಮುಖ್ಯ ಶಿಕ್ಷಕಿಯಾಗಿ ಗೆಲುವಿನ ನಗೆ’ ಅನುಭವ ಕಥನ ಸುಧಾ ಹಡಿನಬಾಳದರೂ ಅದೊಂದು ಹಲವು ವಿಷಯಗಳಲ್ಲಿ ಖ್ಯಾತಿ ಹೊಂದಿದ ಕೆಲವು ಕಾರಣಗಳಿಂದಾಗಿ ಅಪಸ್ವರ ಹೊಂದಿದ್ದ ಶಾಲೆ. ಗೊತ್ತಿದ್ದೂ ಆಯ್ದಕೊಂಡರೂ ಪೂರ್ಣ ಜವಾಬ್ದಾರಿ ನಿಭಾಯಿಸುವುದು ಅಲ್ಲಿ ಕಷ್ಟಸಾಧ್ಯ ಎಂಬುದು ಕೆಲವು ಶಿಕ್ಷಕರ ಅನುಭವದ ಮಾತು. ಹೀಗಿದ್ದೂ ಇಂತಲ್ಲಿಯೆ ಬದಲಾವಣೆ, ಸುಧಾರಣೆ ತರುವ ಸವಾಲು ನನ್ನ ಮುಂದಿತ್ತು…. ಯಾವುದೇ ಬಗೆಯ ಜವಾಬ್ದಾರಿ ಹೊತ್ತರೂ ಅದರಲ್ಲಿ ಬೇಜವಾಬ್ದಾರಿ ನನ್ನ ಜಾಯಮಾನ ಅಲ್ಲ. ಜೊತೆಗೆ ಗೊತ್ತಿಲ್ಲದ್ದನ್ನು ಕೇಳಿ ತಿಳಿದುಕೊಳ್ಳುವುದರಲ್ಲಿ ನನಗಾವ ಮುಜುಗರವೂ ಇಲ್ಲ; ಹೀಗಾಗಿ ಜವಾಬ್ದಾರಿ ಹೆಗಲೇರಿದೊಡನೆ ನನ್ನ ಆತ್ಮೀಯರೆನಿಸಿದ ಅನೇಕ ಶಿಕ್ಷಕರನ್ನು ವಿಶೇಷವಾಗಿ ಹೆಸರಿಸಲೇಬೇಕೆಂದರೆ ಜಿಎಸ್ ಹೆಗಡೆ, ತುಳಸಿ ಭಂಡಾರಿ ,ವೀಣಾ ಹೆಗಡೆ , ಲಕ್ಷ್ಮಿ ಭಟ್ಟ ,ಜನಾರ್ಧನ ಸಿಆರ್ಪಿಗಳಾಗಿರುವಂತಹ ಶ್ರೀ ಎಸ್ ಎಂ ಭಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶ್ರೀ ಜಿಎಸ್ ನಾಯ್ಕ್ ಸರ್ ಇವರೆಲ್ಲರನ್ನೂ ಹಲವು ಬಾರಿ ಮಾರ್ಗದರ್ಶನಕ್ಕಾಗಿ ತಡಕಾಡಿದ್ದೇನೆ. ಬಹುತೇಕ ಶಿಕ್ಷಕರೆಲ್ಲರ ಮೊದಲ ಅನುಭವವು ನನ್ನಂತೆ ಆಗಿದ್ದು ಧೈರ್ಯ ತುಂಬಿ ‘ನಿಮ್ಮಿಂದ ಸಾಧ್ಯವಾಗುತ್ತದೆ ಕಲಿಯುತ್ತೀರಿ ‘ಎಂಬ ಕಿವಿಮಾತಿನೊಂದಿಗೆ ತಮಗೆ ಗೊತ್ತಿರುವುದನ್ನು ತುಂಬಾ ಪ್ರೀತಿಯಿಂದ ತಿಳಿಸುತ್ತಿದ್ದರು. ಇವರೆಲ್ಲರ ಮಾರ್ಗದರ್ಶನ ಇತ್ತೀಚಿನ ದಿನಗಳಲ್ಲಿ ತುಂಬಾ ಒತ್ತಡ, ಕಿರಿಕಿರಿ ಉಂಟುಮಾಡುವ ಆನ್ಲೈನ್ ಕೆಲಸ ,ಹಣಕಾಸಿನ ಲೆಕ್ಕಾಚಾರ ಇವುಗಳನ್ನು ಕಲಿತುಕೊಳ್ಳಲು ಸಹಾಯವಾಯಿತು..
ಒಂದೆರಡು ತಿಂಗಳು ಹೊಂದಿಕೊಳ್ಳುವ ಹೊತ್ತಿಗೆ ವೃತ್ತಿ ಬದುಕಿನ ಬಹುದೊಡ್ಡ ಸವಾಲೊಂದು ಹೆಗಲೇರಿತು!
ನಮ್ಮ ಶಾಲೆ ಮಾದರಿ ಹಿರಿಯ ಪ್ರಾಥಮಿಕ ಶಾಲೆ; ಬಹುದೊಡ್ಡ ಆವಾರ ,ವಿಶಾಲವಾದ ಕಟ್ಟಡಗಳು ನೂರು ವರ್ಷದ ಇತಿಹಾಸ ಹೊಂದದ ಶಾಲೆಯಲ್ಲಿ ಶತಮಾನೋತ್ಸವ ಸಂಘಟನೆ ನನ್ನನ್ನೂ ಒಳಗೊಂಡು ಕೇವಲ ಇಬ್ಬರೇ ಮಹಿಳಾ ಶಿಕ್ಷಕಿಯರು ಜೊತೆಗೆ ಓರ್ವ ಅತಿಥಿ ಶಿಕ್ಷಕಿ ತುಂಬಾ ಒತ್ತಡದ ನಂತರ ಇನ್ನೋರ್ವ ಅತಿಥಿ ಶಿಕ್ಷಕರನ್ನು ನೀಡಿದರು. ಹಿರಿಯ ಶಿಕ್ಷಕರಾರೂ ಇಲ್ಲ. ನನ್ನ ಪೂರ್ವ ವಿದ್ಯಾರ್ಥಿಗಳೂ ಯಾರೂ ಇಲ್ಲ. ಹೀಗಿರುವಾಗ ಬಹುದೊಡ್ಡ ಸಂಘಟನೆಯನ್ನು ಸಂಘಟಿಸುವುದು ಸವಾಲೇ ಸರಿ. ಹೀಗಿದ್ದರೂ ಸಂಘಟನೆ ನನಗೆ ಅಷ್ಟೇನೂ ಹೊಸದಲ್ಲ ಜೊತೆಗೆ ಊರಿನವರ ಪೂರ್ಣ ಪ್ರಮಾಣದ ಸಹಕಾರ ,ಉದಾರ ಮನಸ್ಥಿತಿಯಿಂದ ಬಂದ ಹಣಕಾಸಿನ ಹರಿವು ತಾಯಂದಿರು, ನನ್ನ ಸಹೋದ್ಯೋಗಿಗಳ ಸಹಕಾರ ಈ ಎಲ್ಲವುಗಳಿಂದ ಶತಮಾನೋತ್ಸವ ತುಂಬಾ ಅದ್ದೂರಿಯಾಗಿ ಅರ್ಥಪೂರ್ಣವಾಗಿ ಯಶಸ್ವಿಯಾಗಿ ನಡೆಯಿತು. ಜೊತೆಗೆ ಇಲಾಖೆಯ ಸಾರ್ವಜನಿಕರ ಪ್ರಶಂಸೆಗೂ ಪಾತ್ರವಾಯಿತು. ಈ ನಡುವೆ ಶತಮಾನ ಕಂಡ ಶಾಲೆಯ ಗತಕಾಲದ ವೈಭವವನ್ನು ದಾಖಲಿಸುವ ಸ್ಮರಣ ಸಂಚಿಕೆಯ ಜವಾಬ್ದಾರಿಯೂ ನನ್ನ ಹೆಗಲೇರಿತು. ಸಾಹಿತ್ಯ ಕ್ಷೇತ್ರ ನನ್ನ ಆಯ್ಕೆಯಾಗಿದ್ದರಿಂದ ಅಲ್ಲಗಳೆಯದೆ ಈ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವಲ್ಲಿ ಯಶಸ್ವಿಯಾದೆ. ಶಾಲೆಯಲ್ಲಿ ಕಲಿತ ಅನೇಕರು, ವಿದ್ವಾಂಸರು, ಪೂರ್ವ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು ಅಮೂಲ್ಯವಾದ ಲೇಖನಗಳನ್ನು ಕವನಗಳನ್ನು ನೀಡಿ ಸಹಕರಿಸಿದರು .
ನನಗೆ ಈ ಎಲ್ಲವುಗಳಿಗಿಂತ ಬಹಳ ಮುಖ್ಯವಾಗಿ ನನ್ನ ಕನಸಿನ ಶಾಲೆ ಶತಮಾನೋತ್ಸವದ ನೆಪದೊಂದಿಗೆ ಸಾಕಾರಗೊಂಡಿದ್ದು ಖುಷಿಯ ವಿಚಾರ .ಶೈಕ್ಷಣಿಕವಾಗಿ ತುಸು ಜಾಗೃತಿಯುಳ್ಳ ಈ ಊರಿನಲ್ಲಿ ಅನೇಕ ಪೂರ್ವ ವಿದ್ಯಾರ್ಥಿಗಳು, ರಾಷ್ಟ್ರ ,ಅಂತರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸ್ಥಾನಮಾನ ಹೊಂದಿದವರಾಗಿ ಶಾಲೆಗೆ ಉದಾರವಾಗಿ ದೇಣಿಗೆಯೊಂದಿಗೆ ಶಾಲೆಗೆ ಅಗತ್ಯವಾದ ಮೂಲಭೂತ ಸೌಕರ್ಯಗಳು ಒದಗಿ ಬಂದವು. ಮೂಲ ಶಾಲೆ ಆರಂಭಗೊಂಡ ದೊಡ್ಮನೆ ಕುಟುಂಬದವರು ಲಕ್ಷಕ್ಕೂ ಅಧಿಕ ಮೌಲ್ಯದ ಸ್ಮಾರ್ಟ್ ಕ್ಲಾಸ್ ,ಓರ್ವ ಅತಿಥಿ ಶಿಕ್ಷಕರು ಇನ್ನಿತರ ಅನೇಕ ಬಗೆಯ ಸೌಲಭ್ಯಗಳನ್ನು ಒದಗಿಸಿದರೆ ಗ್ರಾಮ ಪಂಚಾಯಿತಿಯಿಂದ ನೂತನ ಧ್ವಜ ಕಟ್ಟೆ ನಿರ್ಮಾಣ,ಪೂರ್ವ ವಿದ್ಯಾರ್ಥಿಗಳು ಇನ್ವರ್ಟರ್ ,ಮೈಕ್, ಗ್ರೀನ್ ಬೋರ್ಡ್, ಸೌಂಡ್ ಸಿಸ್ಟಮ್, ಆಟೋಮ್ಯಾಟಿಕ್ ಬೆಲ್, ಪ್ರಿಂಟರ್ ಹೀಗೆ ತುಸು ಬೇಡಿಕೆ ಇಟ್ಟಾಗಲೂ ಎಲ್ಲರಿಂದ ಸಹಕಾರ ಸಿಕ್ಕಿತು.. ಇನ್ನೇನು ಬೇಕು ಸಂಭ್ರಮಿಸಲು…
ಶತಮಾನೋತ್ಸವ ಮುಗಿದ ನಂತರವೂ ಖಾತೆಯಲ್ಲಿ ಎರಡುವರೆ ಲಕ್ಷದಷ್ಟು ಹಣ ಉಳಿದುಕೊಂಡಿತ್ತು. ಇದೇ ಸುಸಂದರ್ಭವನ್ನು ಬಳಸಿಕೊಂಡು ಶಾಲೆಗೆ ಅಗತ್ಯವಿರುವ ಎಲ್ಲ ಬಗೆಯ ಬೇಡಿಕೆಯ ಪಟ್ಟಿಯನ್ನು ಶತಮಾನೋತ್ಸವ ಸಮಿತಿಗೆ ನೀಡಲಾಗಿ ಇಂದು ಶಾಲೆಯಲ್ಲಿ ಮಕ್ಕಳ ದೈಹಿಕ ಬೆಳವಣಿಗೆ, ಮನೋರಂಜನೆಗೆ ಅಗತ್ಯವಾದ ಜಾರುಬಂಡಿ ,ಜೋಕಾಲಿ, ಇನ್ನಿತರ ಆಟಿಕೆ ಸಾಮಗ್ರಿಗಳು ಜೊತೆಗೆ ಶಾಲೆಯ ಸಣ್ಣಪುಟ್ಟ ರಿಪೇರಿ ಹೀಗೆ ಬಹುತೇಕ ಕಾರ್ಯಗಳು ಮುಗಿದವು. ಇನ್ನೂ ಒಂದೆರಡು ಸಾಕಾರಗೊಳ್ಳಬೇಕಿದೆ.ಇಂದು ನಾ ಕಂಡ ಕನಸಿನ ಶಾಲೆ ಊರಿನವರ, ಶತಮಾನೋತ್ಸವ ಸಮಿತಿಯ, ಶಿಕ್ಷಣ ಪ್ರೇಮಿಗಳ, ಹಳೆ ವಿದ್ಯಾರ್ಥಿಗಳ ,ಪಾಲಕ ಪೋಷಕರ ಸಹಕಾರದೊಂದಿಗೆ ಸಾಕಾರಗೊಂಡಿದೆ. ಈ ರೀತಿಯ ಸುಧಾರಣೆ ಮನಸ್ಸಿಗೆ ಮುದ ನೀಡಿದೆ.. ಹಾಗಂತ ನಾನೇನೂ ಪದೋನ್ನತ ಮುಖ್ಯ ಶಿಕ್ಷಕಿ ಅಲ್ಲ. ಜೇಷ್ಠತೆಯ ಆಧಾರದಲ್ಲಿ ಮುಖ್ಯ ಶಿಕ್ಷಕಿ. ಆದರೂ ಈ ಹುದ್ದೆ ಅನೇಕ ಹೊಸತನ್ನು ಕಲಿಸಿದೆ. ಜವಾಬ್ದಾರಿ ಹೆಚ್ಚಿಸಿದೆ. ಹೊಸ ಹೊಸ ಅನುಭವ ನೀಡಿದೆ. ಕಲಿಯಬೇಕಾದುದು, ಸಾಧಿಸಬೇಕಾದುದು ಇನ್ನೂ ದೂರವಿದೆ ಎಂಬ ಅರಿವೂ ಇದೆ.
ಈ ಶೈಕ್ಷಣಿಕ ವರ್ಷದ ಆರಂಭದಲ್ಲಿ ಹೆಗಲ ಮೇಲಿದ್ದ ಬಹುದೊಡ್ಡ ಜವಾಬ್ದಾರಿ ಸ್ಮರಣ ಸಂಚಿಕೆ ‘ ಶತಶ್ರಂಗ ‘ ಬಿಡುಗಡೆ ಕೂಡ ಅಚ್ಚುಕಟ್ಟಾಗಿ ನೆರವೇರಿದೆ ..ಮುಖ್ಯ ಶಿಕ್ಷಕಿಯಾಗಿ ಈ ಎಲ್ಲಾ ಕೆಲಸಗಳನ್ನು ಮಾಡಲು ಹತ್ತು ಹಲವು ಕಾಣದ ಕೈಗಳು ಸಹೋದ್ಯೋಗಿಗಳು ,ಅತಿಥಿ ಶಿಕ್ಷಕರು , ವೃತ್ತಿ ಮಿತ್ರರು,ಮುದ್ದು ಮಕ್ಕಳು ಕಾರಣೀಕರ್ತರು. ಇಲಾಖೆಯ ಅಧಿಕಾರಿಗಳ ಬೆಂಬಲ ಪ್ರೋತ್ಸಾಹ ಎಲ್ಲವೂ ದೊರಕಿರುವಾಗ ವೃತ್ತಿ ಬದುಕಿಗೆ ಹೊಸ ಗರಿ ಮೂಡಿದೆ ..ಅಕ್ಷರ ದೇಗುಲವನ್ನು ಪ್ರವೇಶಿಸುವಾಗ ಮನಸ್ಸಿಗೇನೋ ಸಂಭ್ರಮ ಸಡಗರ.
ಕರ್ತವ್ಯವನ್ನು ಪ್ರೀತಿಸುವವರಿಗೆ, ಕೆಲಸ ಮಾಡುವ ಸ್ಥಳವನ್ನು ಮನೆಯೆಂದೇ ಭಾವಿಸುವವರಿಗೆ ಸುಧಾರಣೆ, ಅಭಿವೃದ್ಧಿ ಕಷ್ಟಸಾಧ್ಯವೇನಲ್ಲ. ಇಚ್ಛಾಶಕ್ತಿ ಬೇಕಷ್ಟೆ.
ಸುಧಾ ಹಡಿನಬಾಳ
One thought on “‘ಮುಖ್ಯ ಶಿಕ್ಷಕಿಯಾಗಿ ಗೆಲುವಿನ ನಗೆ’ ಅನುಭವ ಕಥನ ಸುಧಾ ಹಡಿನಬಾಳ”