ಜಗತ್ತಿನ ಪ್ರಖ್ಯಾತ ಬಾಣಸಿಗರಲ್ಲಿ ಒಬ್ಬರಾದ ಸ್ಟಾರ್ ಶೆಫ್ ವಿಕಾಸ್ ಖನ್ನ ಯಾರಿಗೆ ಗೊತ್ತಿಲ್ಲ. ರುಚಿಕರವಾದ ಖಾದ್ಯಗಳನ್ನು ಮಾಡಿ ಬಡಿಸುವುದರ ಜೊತೆ ಜೊತೆಗೆ ತನ್ನ ಸರಳತೆಗೂ ಹೆಸರಾದ ವ್ಯಕ್ತಿ ವಿಕಾಸ್ ಖನ್ನ. 2020 ರಲ್ಲಿ ಬಿಬಿಸಿ ವರ್ಲ್ಡ್ ಚಾನೆಲ್ ಗೆ  ನೀಡಿದ ಸಂದರ್ಶನವೊಂದರಿಂದ ಇದೀಗ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

 ಭಾರತೀಯ ಪಾಕ ಕಲೆಯ ಸಾಂಸ್ಕೃತಿಕ ಇತಿಹಾಸವನ್ನು ಅರಿಯದ, ಸಹಭೋಜನ, ಪ್ರಸಾದ, ದಾಸೋಹಗಳ ಹೆಸರಿನಲ್ಲಿ ದೀನ ದಲಿತರಿಗೆ ಉಣ ಬಡಿಸುವ ಭಾರತ ದೇಶದ ಶ್ರೀಮಂತ ಸಂಸ್ಕೃತಿಯ ಗರಿಮೆಯನ್ನು ಅರಿಯದ ಬಿಬಿಸಿಯ ಸಂದರ್ಶಕ ವಿಕಾಸ ಖನ್ನ ಅವರಿಗೆ ಭಾರತದಲ್ಲಿ ಬಡತನ ತಾಂಡವವಾಡುತ್ತಿರುವ ಕಾರಣ ನಿಮಗೆ ಹಸಿವು ಎಂಬ ಪದದ ಅರಿವು ಉಂಟಾಯಿತಲ್ಲವೇ? ಎಂದು ಪ್ರಶ್ನೆಯೆಸಗಿದ.  

 ಅತ್ಯಂತ ಶಾಂತವಾದ ಮನಸ್ಥಿತಿಯೊಂದಿಗೆ ವಿಕಾಸ್ ಖನ್ನ ಉತ್ತರಿಸಿದರು “ನನಗೆ ‘ಹಸಿವು’ ಎಂಬ ಪದದ ಅರಿವು ಭಾರತ ದೇಶದಲ್ಲಿ ಆಗಿಯೇ ಇಲ್ಲ ಕಾರಣ ನಾನು ಹುಟ್ಟಿ ಬೆಳೆದದ್ದು ಭಾರತ ದೇಶದ ಗೋದಿಯ ಕಣಜ ಪಂಜಾಬಿನ ಅಮೃತಸರದಲ್ಲಿ. ನಮ್ಮಲ್ಲಿ ಬೃಹತ್ ಸಮುದಾಯ ಅಡುಗೆ ಕೋಣೆಗಳಿದ್ದು ಎಲ್ಲರಿಗೂ ಅಡುಗೆ ತಯಾರಾಗುವ ಅಲ್ಲಿ ಯಾರು ಬೇಕಾದರೂ ಹೊಟ್ಟೆ ತುಂಬಾ ಊಟ ಮಾಡಿ ತಮ್ಮ ಹಸಿವನ್ನು ತೀರಿಸಿಕೊಳ್ಳಬಹುದು. ಇಡೀ ಅಮೃತಸರವೆ ಉಣ್ಣಬಹುದಾದಷ್ಟು ಅಡುಗೆಯನ್ನು ‘ಲಂಗರ’ ಎಂಬ ಸಮುದಾಯ ಅಡುಗೆ ಕೋಣೆಗಳಲ್ಲಿ ತಯಾರಿಸಲಾಗುತ್ತದೆ. ಭಾರತವನ್ನು ಬಿಟ್ಟು ನಾನು ನ್ಯೂಯಾರ್ಕ್ಗೆ ಬಂದಾಗ ನನ್ನ ಕಷ್ಟದ ದಿನಗಳಲ್ಲಿ ನನಗೆ ಹಸಿವು ಎಂದರೇನು? ಎಂಬುದರ ನಿಜವಾದ ಅರಿವಾಯಿತು ಎಂದು ಅತ್ಯಂತ ಹೆಮ್ಮೆಯಿಂದ ಆತ ಭಾರತೀಯ ಸಂಸ್ಕೃತಿ ಮತ್ತು ತನ್ನ ದೇಶದ ಕುರಿತಾದ ಭಕ್ತಿ, ಅಭಿಮಾನವನ್ನು ತೋರಿದ.

 ಸಾಮಾಜಿಕ ಜಾಲತಾಣದಲ್ಲಿ ಈ ವಿಷಯದ ಕುರಿತು ಪೋಸ್ಟ್ ಮಾಡಿದ ವಿಕಾಸ್ ಖನ್ನ ಅವರು  ಪ್ರತಿಯೊಂದು ದೇಶಕ್ಕೂ ತನ್ನದೇ ಆದ ಏರಿಳಿತಗಳು ಇದ್ದೇ ಇರುತ್ತವೆ, ಅಂತೆಯೇ ಭಾರತವು ಕೂಡ ಬಿ ಬಿ ಸಿ ಯ ಸಂದರ್ಶಕ ಕೇಳಿದ ಅಪ್ರಬುದ್ಧ ಪ್ರಶ್ನೆಯನ್ನು ಖಂಡಿಸಿ ಬರೆದರು.

 ಭಾರತವು ವೈವಿಧ್ಯತೆಯಿಂದ ಕೂಡಿದ ಬಹು ಸಂಸ್ಕೃತಿಯ ನಾಡು.ಭಾರತ ದೇಶ ತನ್ನ ಪೂರ್ವಜರು ಹಾಕಿಕೊಟ್ಟ ಸಂಸ್ಕೃತಿ ಸಂಪ್ರದಾಯಗಳನ್ನು ಪಾಲಿಸುತ್ತಾ ಬಂದಿದೆ. ಅಲ್ಲದೆ ಅಭಿವೃದ್ಧಿಯನ್ನು ಹೊಂದುತ್ತಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದು. ನಮ್ಮ ಆಹಾರ ಪದ್ಧತಿಯು ನಮ್ಮ ಅತಿ ದೊಡ್ಡ ಶಕ್ತಿಯಾಗಿದ್ದು ನಮ್ಮ ಸಾಹಿತ್ಯ,ಸಂಗೀತ ನೃತ್ಯ ಕಲೆ  ವಿಜ್ಞಾನ ಸಂಶೋಧನೆ ಮತ್ತು ತಂತ್ರಜ್ಞಾನಗಳು ಇಡೀ ಜಗತ್ತಿಗೆ ಅದ್ವಿತೀಯ ಕಾಣಿಕೆಯನ್ನು ನೀಡಿವೆ. ಭೂಗೋಳದಿಂದ ಖಗೋಳದವರೆಗೆ ಎಲ್ಲ ಶಾಸ್ತ್ರಗಳಲ್ಲಿ, ಖಡ್ಗ, ಕತ್ತಿ ಕಠಾರಿಯಿಂದ ಇದೀಗ ಅತ್ಯಾಧುನಿಕ ಯುದ್ಧ ವಿಮಾನಗಳವರೆಗೆ, ವಾಗ್ಭಟ, ಚರಕ, ಸುಶ್ರುತ ವರಾಹಮಿಹಿರರಿಂದ ಹಿಡಿದು ಇಂದಿನ ಆಧುನಿಕ ವೈದ್ಯಕೀಯ ತಂತ್ರಜ್ಞಾನದವರೆಗೆಭಾರತ ಆವರಿಸಿಕೊಂಡಿದೆ.

 ಇಡೀ ಜಗತ್ತು ಆಗ ತಾನೇ ನಾಗರಿಕತೆಯ ಹೊಸ್ತಿಲಲ್ಲಿ ಇರುವಾಗ ಭಾರತ ದೇಶವು ಆಧುನಿಕ ವಿಜ್ಞಾನ ತಂತ್ರಜ್ಞಾನಗಳ ಜೊತೆ ಜೊತೆಗೆ ಖಗೋಳದ ಅಧ್ಯಯನವನ್ನು ಕೂಡ ಮಾಡಿದ್ದು 5,000 ವರ್ಷಗಳ ಹಿಂದೆಯೇ ಭೂಮಿ ಮತ್ತು ಸೂರ್ಯನ ನಡುವೆ ಇರುವ ದೂರವನ್ನು ಲೆಕ್ಕ ಹಾಕಿದ, ಯಾವುದೇ ಆಧುನಿಕ ವೈದ್ಯಕೀಯ ತಂತ್ರಜ್ಞಾನಗಳು ಇಲ್ಲದ ಕಾಲದಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡಿದ ನಾಡು ನಮ್ಮದು.
 ಆರ್ಥಿಕ ಬಡತನ ನಮ್ಮಲ್ಲಿದ್ದರೂ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಹಿರಿಮೆಯನ್ನು ಹೊಂದಿದ ಹಸಿದವರಿಗೆ ಉಣ್ಣಲು ಕೊಡುವ ಭಾರತ ದೇಶದಲ್ಲಿ ಕರೋನ ಸಂಕಷ್ಟದ ಸಮಯದಲ್ಲಿ ಉಳ್ಳವರು ಆಹಾರದ ಪೊಟ್ಟಣಗಳನ್ನು ಹಂಚಿದರೆ, ಬಡವರು ಮತ್ತು ಮಧ್ಯಮ ವರ್ಗದವರು ತಮ್ಮ ಜೀವಮಾನದ ದುಡಿಮೆಯಾದ  ನಿವೇಶನಗಳನ್ನು, ಆಸ್ತಿಯನ್ನು ಮಾರಿ ದಾಸೋಹ ಸೇವೆಯನ್ನು ಎಸಗಿದರು. ಸಮಾನ ಮನಸ್ಕರು ಸೇರಿ ಅಲ್ಲಲ್ಲಿ ಅಡುಗೆ ಮಾಡಿ ಆಹಾರ ಪೊಟ್ಟಣಗಳನ್ನು ಬಡವರ, ನಿರ್ಗತಿಕರ, ಹಸಿದವರ  ಮನೆಗಳಿಗೆ ತಲುಪಿಸಿದರು.
 ಇಂದಿಗೂ ಭಾರತ ದೇಶದ ಮಠ ಮಾನ್ಯಗಳಲ್ಲಿ ನಿರಂತರ ದಾಸೋಹ ವ್ಯವಸ್ಥೆ ಇದೆ.

ಮತ್ತೆ ಕೆಲ ಲಾಭಬಡುಕರು ವೈದ್ಯಕೀಯ ಚಿಕಿತ್ಸೆಯ ಹೆಸರಿನಲ್ಲಿ ದುಡ್ಡು ಮಾಡಿಕೊಂಡರು ಬಿಡಿ…. ನೀರಿರುವಲ್ಲಿ ಕೆಸರು ಕೂಡ ಇರುವಂತೆ ಅಂಥವರು ಕೂಡ ಇರುತ್ತಾರೆ.

 ಭಾರತೀಯ ಪದ್ಧತಿಯಲ್ಲಿ ವ್ಯಕ್ತಿಯು ತಾನು ದುಡಿವ ಹಣದಲ್ಲಿ ಒಂದು ಭಾಗ ತನ್ನ ಕುಟುಂಬದ ನಿರ್ವಹಣೆಗೆ, ಮತ್ತೊಂದು ಭಾಗ ಮಕ್ಕಳ ಶಿಕ್ಷಣ ಮತ್ತು ಇತರ ಖರ್ಚು ವೆಚ್ಚಗಳಿಗೆ, ಮೂರನೆಯ ಒಂದು ಭಾಗ ಆರೋಗ್ಯ ಮತ್ತಿತರ ತೊಂದರೆಗಳನ್ನು ನಿಭಾಯಿಸಲು ಭವಿಷ್ಯಕ್ಕಾಗಿ ಎತ್ತಿಡಲು ಮತ್ತು ನಾಲ್ಕನೇ ಒಂದು ಭಾಗ ದೀನ ದಲಿತರ ದರಿದ್ರರ ದಾಸೋಹಕ್ಕಾಗಿ ನೀಡಬೇಕೆಂಬ ಅಲಿಖಿತ ನಿಯಮವಿದ್ದು ಬಹಳಷ್ಟು ಜನ ಇಂದಿಗೂ ಅದನ್ನು ಪಾಲಿಸುತ್ತಾರೆ.
 ಎಲ್ಲಾ ದಿನಗಳಲ್ಲೂ ಈ ರೀತಿಯ ಸೇವೆ  ಸಾಧ್ಯವಿಲ್ಲದವರು ಹಬ್ಬ ಹರಿದಿನಗಳಲ್ಲಿ ಇತರರಿಗೆ ಉಣ ಬಡಿಸಿ ತಾವು ಉಣ್ಣುತ್ತಾರೆ.. ಇಂದಿಗೂ ಮಠಮಾನ್ಯಗಳ ದಾಸೋಹ ಸೇವೆ ನಡೆಯುವುದು ಸಾರ್ವಜನಿಕರು ನೀಡುವ ದವಸ, ಧಾನ್ಯ ಮತ್ತು  ದೇಣಿಗೆಗಳಿಂದ. ಸರ್ಕಾರವು ಕೂಡ ಇಂತಹ ದೇಣಿಗೆಗಳಿಗೆ ಆದಾಯ ತೆರಿಗೆಯಲ್ಲಿ ರಿಯಾಯಿತಿ ನೀಡಿ ಜನರನ್ನು ಪ್ರೋತ್ಸಾಹಿಸುತ್ತದೆ. ಹಲವಾರು ಧರ್ಮ ಜಾತಿ ಮತಗಳಿದ್ದರೂ ಕೂಡ ಭಾರತ ದೇಶದಲ್ಲಿ ಕೂಡಿ ಉಣ್ಣುವ ಅನ್ನ ಸಂಸ್ಕೃತಿ ಪದ್ಧತಿ ಇಂದಿಗೂ ಚಾಲ್ತಿಯಲ್ಲಿದೆ.

 ಸಮಾಜವಾದವನ್ನು ತಮ್ಮ ಜೀವನದ ಧ್ಯೇಯವನ್ನಾಗಿಸಿಕೊಂಡ ಶ್ರಮ ಸಂಸ್ಕೃತಿಗೆ ‘ಕಾಯಕ’ ಎಂಬ ಗೌರವನಾಮವನ್ನು ಇಟ್ಟು ದುಡಿದು ಉಣ್ಣಲು ಹೇಳಿದ, ನುಡಿದಂತೆ ನಡೆದ ವಿಶ್ವಗುರು  ಬಸವಣ್ಣನವರ ನಾಡಿನಲ್ಲಿ ನಾವು ಜನಿಸಿದ್ದೇವೆ ಎಂಬ ಹೆಮ್ಮೆ, ಅವರು ಕಲಿಸಿದ ಕಾಯಕ, ದಾಸೋಹ ಸಂಸ್ಕೃತಿಯನ್ನು ಮುಂದುವರೆಸಿಕೊಂಡು ಹೋಗುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ.


Leave a Reply

Back To Top