ಕನ್ನಡ ರಾಜ್ಯೋತ್ಸವ ವಿಶೇಷ
ಡಾ ದಾನಮ್ಮಝಳಕಿ
ಕರ್ನಾಟಕ ರಾಜ್ಯೋತ್ಸವದ ಸಂಭ್ರಮ
ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ, ಕನ್ನಡ ಗೋವಿನ ಓ! ಮುದ್ದಿನ ಕರು ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು ಎಂಬ ಕುವೆಂಪು ಅವರ ನುಡಿಗಳಂತೆ ಹಾಗೂ, ಚಿರಕಾಲ ಬೆಳಗಲಿ ಕನ್ನಡದ ದೀಪ ಜನಕೆಲ್ಲ ಬೆಳಕಾಗಿ ಪುಣ್ಯಪ್ರದೀಪ ಭಾರತಕೆ ಬಲವಾಗಿ ಭವ್ಯದೀಪ ಕಳೆಯುತ್ತ ತಾಪ ಬೆಳೆಸುತ್ತು ಸೈಪ ಹೊತ್ತಿತ್ತೋ ಹೊತ್ತಿತ್ತು ಕನ್ನಡದ ದೀಪ ಎಂಬ ಡಾ.ಸಿದ್ದಯ್ಯ ಪುರಾಣಿಕ ಅವರ ವೈಭವದ ಇತಿಹಾಸವುಳ್ಳ ನಾಡಿದು ನಮ್ಮ ಚೆಲುವ ಕನ್ನಡ ನಾಡು, ಸಿರಿ ಸಂಸ್ಕೃತಿಯ ಬೀಡಿದು, ಕಲೆ ಸಾಹಿತ್ಯದ ತವರೂರಿದು. ಈ ಪುಣ್ಯ ನೆಲದಲ್ಲಿ ಜನಿಸಿದ ನಾವೇ ಧನ್ಯ. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಕರ್ನಾಟಕ ಸಂಭ್ರಮ 50, ಹೆಸರಾಯಿತು ಕರ್ನಾಟಕ, ಉಸಿರಾಗಲಿ ಎಂಬ ಕನ್ನಡ ಘೋಷ ವಾಕ್ಯದ ಮೂಲಕ ಇಂದು ವಿಜೃಂಭಣೆಯಿಂದ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ-ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ.. ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾಯರು, ಕರ್ನಾಟಕ ಏಕೀಕರಣ ಚಳುವಳಿಯನ್ನು ೧೯೦೫ ರಲ್ಲಿ ಪ್ರಾರಂಭಿಸಿದರು.
೧೯೫೬ ರ ನವೆಂಬರ್ ೧ ರಂದು, ಮದ್ರಾಸ್, ಮುಂಬಯಿ, ಹೈದರಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು. ಹೊಸದಾಗಿ ಏಕೀಕೃತಗೊಂಡ ರಾಜ್ಯದ ಆರಂಭದಲ್ಲಿ ಮುಂಚಿನ ರಾಜ್ಯದ ಹೆಸರು ಇರಲೆಂದು “ಮೈಸೂರು” ಹೆಸರನ್ನು ಉಳಿಸಿಕೊಂಡರು. ಆದರೆ ನವೆಂಬರ್ ೧, ೧೯೭೩ ರಂದು “ಕರ್ನಾಟಕ” ಎಂದು ರಾಜ್ಯಕ್ಕೆ ಪುನರ್ ನಾಮಕರಣ ಮಾಡಲಾಯಿತು.
ಈ ಸಂದರ್ಭದಲ್ಲಿ ದೇವರಾಜ ಅರಸ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಕರ್ನಾಟಕ ಏಕೀಕರಣದ ಮನ್ನಣೆ ಇತರ ವ್ಯಕ್ತಿಗಳಿಗೂ ಸೇರುತ್ತದೆ. ಅವರೆಂದರೆ ಕೆ.ಶಿವರಾಮ ಕಾರಂತ, ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾವ್, ಅನಕೃ, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಮಂಗಳವೇಡೆ ಶ್ರೀನಿವಾಸರಾಯರು, ಕೆಂಗಲ್ ಹನುಂತಯ್ಯ, ಎಚ್. ಎಸ್. ದೊರೆಸ್ವಾಮಿ, ಕೋ. ಚನ್ನಬಸಪ್ಪ, ಅಲ್ಲಂ ಸುಮಂಗಳಮ್ಮ, ಗೋರೂರು ರಾಮಸ್ವಾಮಿ ಅಯ್ಯಂಗಾರ್, ಪಾಟೀಲ್ ಪುಟ್ಟಪ್ಪ, ಹಾರನಹಳ್ಳಿ ರಾಮಸ್ವಾಮಿ, ಎ.ಎನ್.ಕೃಷ್ಣರಾವ್, ಬಿ. ಎಂ. ಶ್ರೀಕಂಠಯ್ಯ, ನಾಡಿಗೇರ್, ಹುಯಿಲಗೋಳ ನಾರಾಯಣರಾವ್, ಆಚಾರ್ಯ, ಜಿ. ಬಿ. ಜೋಷಿ, ಕೆ. ವಿ. ಅಯ್ಯರ್, ವಿ. ಬಿ. ನಾಯಕ್, ಕರ್ಣ, ಗಂಗಾಧರ ದೇಶಪಾಂಡೆ, ಡೆಪ್ಯುಟಿ ಚೆನ್ನಪಬಸಪ್ಪ ಸೇರಿದಂತೆ ಹಲವು ಮಂದಿ ಕನ್ನಡಕ್ಕಾಗಿ ಹೋರಾಡಿದ್ದಾರೆ.
ಕರು+ನಾಡು= ಕರುನಾಡು ಎಂಬ ಪದವು ಕರ್ನಾಟಕವಾಯಿತು ಎನ್ನಲಾಗುತ್ತದೆ. ಕರು ಎಂದರೆ ಕಪ್ಪು, ಇದರರ್ಥ ಕಪ್ಪು ಮಣ್ಣಿನ ನಾಡು ಎಂದೂ ಸಹ ಹೇಳಲಾಗುತ್ತದೆ. ಹಳೆಯ ಗ್ರಂಥಗಳು ಇದನ್ನು ಕರ್ನಾಟ ಎಂಬ ಪದದಿಂದ ಪಡೆಯಲಾಗಿದೆ ಎಂದು ಸೂಚಿಸುತ್ತವೆ, ಕೆಲವು ಮೂಲಗಳು ಕರ್ನಾಟಕವನ್ನು ಎತ್ತರದ ಭೂಮಿಗೆ ಅನುವಾದಿಸುತ್ತದೆ.
ಐತಿಹಾಸಿಕವಾಗಿ ಕನ್ನಡ ಬಾಷೆ ಮತ್ತು ನಾಡಿನ ವಿಸ್ತಾರವನ್ನು ನೋಡಬೇಕಾದರೆ ಚರಿತ್ರೆಯ ಪುಟ ತಿರುವಬೇಕು. ಕರ್ನಾಟಕ’ ಮಹಾರಾಷ್ಟ್ರ, ಲಾಟ, ಕುಂತಳ, ಕೊಂಕಣ, ಇವೇ ಮುಂತಾದ ಭಾಗಗಳಿದ್ದವು, ಆದರೆ ಮುಂದೆ ಬರಬರುತ್ತ ‘ಕರ್ನಾಟಕ’ ವೆಂಬ ಭಾಗವೇ ಹೆಚ್ಚು ಪ್ರಬಲವಾದುದರಿಂದ, ಅದೇ ಹೆಸರು ಕನ್ನಡ ದೇಶಕ್ಕೆಲ್ಲ ರೂಢವಾಯಿತು; ಮತ್ತು ಇತಿಹಾಸ ದೃಷ್ಟಿಯಿಂದ ನೋಡಿದರೆ, ಕನ್ನಡ ದೇಶಕ್ಕೆ ‘ಕರ್ನಾಟಕ’ ವೆಂಬ ಹೆಸರೇ ಒಪ್ಪುತ್ತದೆಂದು ಕಂಡು ಬರುವದು. ಯಾಕೆಂದರೆ, ಕನ್ನಡ ಭಾಷೆಗೆ ‘ಕರ್ನಾಟಕ’ ಎಂಬ ಹೆಸರು ಬಹು ಪುರಾತನ ಕಾಲದಿಂದಲೂ ನಡೆದು ಬಂದಿದೆ. ಚಾಲುಕ್ಯರ ದಂಡಿಗೆ ‘ಕರ್ನಾಟಕ ಬಲ’ ವೆಂಬ ಹೆಸರಿರುವುದಾಗಿ ಶಿಲಾಲಿಪಿಗಳಿಂದ ತಿಳಿದುಬರುತ್ತದೆ, ವಿಜಯನಗರದ ಸಾಮಾಜ್ಯ ಸ್ಥಾಪಕರಾದ ವಿದ್ಯಾರಣ್ಯರಿಗೆ ‘ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ’ ಎಂಬ ಬಿರುದಿತ್ತು, ಇವೆಲ್ಲ ಸಂಗತಿಗಳನ್ನು ಮನಸ್ಸಿನಲ್ಲಿ ತಂದುಕೊಂಡರೆ, ಭಾಷಾದೃಷ್ಟಿಯಿಂದಲೂ, ರಾಜ್ಯ ವಿಸ್ತಾರದ ದೃಷ್ಟಿಯಿಂದಲೂ ಸಾರ್ಥಕವಾದ ಈ ‘ಕರ್ನಾಟಕ’ ಎಂಬ ಹೆಸರನ್ನೇ ಕನ್ನಡಿಗರೆಲ್ಲರೂ ಅಭಿಮಾನಪೂರ್ವಕವಾಗಿ ಎತ್ತಿಕೊಂಡಿರುವದೇನೂ ಆಶ್ಚರ್ಯವಲ್ಲ. ಇನ್ನು ಕನ್ನಡ ಭಾಷೆಯು ಹಿಂದೆ ಎಲ್ಲಿಯ ವರೆಗೆ ಹಬ್ಬಿತ್ತೆಂಬು ದನ್ನು ವಿಚಾರಮಾಡುವ, ೯ನೆಯ ಶತಮಾನದಲ್ಲಿ ಅದು ಉತ್ತರದಲ್ಲಿ ಗೋದಾವರಿಯಿಂದ ದಕ್ಷಿಣಕ್ಕೆ ಕಾವೇರಿಯವರೆಗೆ ಹಬ್ಬಿತ್ತೆಂಬುದಕ್ಕೆ ನೃಪತುಂಗನ ಕವಿ ರಾಜಮಾರ್ಗದಲ್ಲಂತೂ ಬಲವಾದ ಪ್ರಮಾಣವಿದೆ. ಇದೇ ವಿಧಾನವನ್ನು ೧೬ನೆಯ ಶತಮಾನದಲ್ಲಿಯ ನಂಜುಂಡನೆಂಬ ಕವಿಯು ತನ್ನ ಪರದಾರ ಸೋದರ ರಾಮನಾಥ ಚರಿತವೆಂಬ ಗ್ರಂಥದ ಎರಡನೆಯ ಸಂಧಿಯಲ್ಲಿ ‘ಕಾವೇರಿಯಿಂದ ಗೋದಾವರಿದಾವರೆಗಮಿರ್ದಾ ವಸುಧಾ ತಳವಳಯ | ಭಾವಿಸೆ ಕರ್ನಾಟಕ ಜನಪದವದನವನೊಲಿದು ಬಣ್ಣಿಸುವನು ||’ ಎಂಬುದಾಗಿ ಬಲಪಡಿಸಿರುವನು. ಅಂದರೆ ಕರ್ನಾಟಕದ ವ್ಯಾಪ್ತಿಯು, ಆಗಿನ ಕಾಲಕ್ಕೆ ಕಾವೇರಿಯಿಂದ ಗೋದಾವರಿಯವರೆಗೆ ಇತ್ತೆಂಬುದು ಸ್ಪಷ್ಟವಾಗುತ್ತದೆ.
ಇಂತದ ಸ್ವರ್ಗದಂತಹ ಕನ್ನಡ ನಾಡಿನಲ್ಲಿ ನಾಡಹಬ್ಬ ರಾಜ್ಯೋತ್ಸವ ದಿನದಂದು ಸಾಹಿತ್ಯ, ಕಲೆ, ನಿಸರ್ಗ ಸಾಂಸ್ಕೃತಿಯ ಬೀಡಲ್ಲಿ ವಿಜೃಂಭಣೆಯಿಂದ ನಾಡ ಹಬ್ಬವನ್ನು ಆಚರಿಸುತ್ತಾ ಪ್ರತಿ ವರ್ಷ ಸಾಹಿತ್ಯ, ಶಿಕ್ಷಣ, ಕಲೆ ಸಮಾಜಸೇವೆ, ವಿಜ್ಞಾನ ಇತ್ಯಾದಿಗಳಲ್ಲಿ ಸಾಧನೆ ಮಾಡಿದವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತದೆ. ಅತೀ ಹೆಚ್ಚು ಜ್ಞಾನ ಪೀಠ ಪ್ರಶಸ್ತಿ ಪಡೆದ ನಾಡು ನಮ್ಮದು. ಬೇಲೂರು ಹಳೇಬೀಡುವಿನಂತಹ ಕಲೆಗಳ ಬೀಡು ನಮ್ಮದು. ಸಹ್ಯಾದ್ರಿಯ ಸಾಲುಗಳ ಸೊಬಗನ್ನು ಹೊಂದಿದ ರನ್ನ ಪಂಪರ ಬೀಡು. ಚೆನ್ನಮ್ಮ, ಅಬ್ಬಕ್ಕ, ಹಾಗೂ ಓಬನಂತವರ ವೀರ ವನಿತೆಯರ ತಾಯ್ನಾಡು. ಸಂಗೊಳ್ಳಿ ರಾಯಣ್ಣನಂತವರ ಸ್ವಾಭಿಮಾನದು ಬೀಡು ನಮ್ಮ ಚೆಲುವ ಕನ್ನಡ ನಾಡು.
ಕರ್ನಾಟಕದ ಪರಂಪರೆ ಅತ್ಯಂತ ಶ್ರೀಮಂತಿಕೆಯಿಂದ ವೈವಿಧ್ಯತೆಯಿಂದ ಕೂಡಿದೆ. ನಮ್ಮ ನಾಡು ನಮ್ಮ ಹೆಮ್ಮೆ. ಕನ್ನಡವೇ ನಮ್ಮ ಉಸಿರು ಕನ್ನಡವೇ ನಮ್ಮ ಹೆಸರು. ಕನ್ನಡ ನಮ್ಮ ಬದುಕಿನ ಕಣ ಕಣದಲಿದೆ. ಬದುಕು ಕಟ್ಟಿದ ಕನ್ನಡ ಉಸಿರು ಕೊಟ್ಟ ಕನ್ನಡ. ಕನ್ನಡ ಬಳಸೋಣ ಕನ್ನಡ ಬೆಳೆಸೋಣ. ಜೈ ಕರ್ನಾಟಕ ಮಾತೆ.
ಡಾ ದಾನಮ್ಮಝಳಕಿ
Wonderful madam
ಅತ್ಯುತ್ತಮವಾದ ಮತ್ತು ಸಮರ್ಪಕವಾಗಿ ಮೂಡಿ ಬಂದ ವಿಶೇಷ ಲೇಖನ … ಮೇಡಂ
ಸುಶಿ