ಡಾ.ಸುಜಾತಾ.ಸಿ ಕವಿತೆ-ಗುಲಮೋಹರ ಕನ್ನಡತಿ ನನ್ನವಳು

ಕನ್ನಡ ರಾಜ್ಯೋತ್ಸವ ವಿಶೇಷ

ಡಾ.ಸುಜಾತಾ.ಸಿ

ಗುಲಮೋಹರ ಕನ್ನಡತಿ ನನ್ನವಳು

ಹಾಲರಾಜನ ಗಾಥಾಸಪ್ತಸತಿ ಪದ್ಯ ಕಾವ್ಯದಲ್ಲಿ ಹಾಲುಂಡವಳು
ಶ್ರವಣಬೆಳಗೊಳದ ಶಾಸನದಲ್ಲಿ ಉಪಮೆಗಳ ಸೊಗಡಿನ
ಗುಲಮೊಹರ ಕನ್ನಡತಿ ನನ್ನವಳು

ವಡ್ಡಾರಾಧನೆಯ ಗಾಹೆಗಳ ಗಾಥೆಯಾದವಳು
ಆದಿ ಕವಿಯ ಆಗಮಿಕ-ಲೌಕಿಕದೊಳಗೆ ಚಂಪೂವಾಗಿ
ಕಂಪಿಸಿದ ಗುಲಮೊಹರ ಕನ್ನಡತಿ ನನ್ನವಳು

ಕಾಯಕವೇ ಕೈಲಾಸದ ಬಸವನ ವಚನ ವೈಚಾರಿಕ ಪ್ರಜ್ಞೆಗೆ
ನಿಬ್ಬೆರಗಾಗಿ ನಿಂತ ಅಕ್ಕ ಮಹಾದೇವಿಯ ಮಲ್ಲಿಕಾರ್ಜುನನ ಹುಡುಕಾಟಕ್ಕೆ
ದಿಟ್ಟೆಯಾಗಿನಿಂತ ಗುಲಮೊಹರ ಕನ್ನಡತಿ ನನ್ನವಳು

ಬೇಂದ್ರೆ ಅಜ್ಜನ ನಾಕುತಂತಿ ಮೀಟಿ
ಕುವೆಂಪುವಿನ ಶ್ರೀರಾಮಾಯಣ ದರ್ಶನದಲ್ಲಿ
ವಿಹರಿಸಿದ ಗುಲಮೊಹರ ಕನ್ನಡತಿ ನನ್ನವಳು

ಕಾರಂತಜ್ಜನ ಮೂಕಜ್ಜಿಯ ಕನಸುಗಳ ಲೋಕದ ಸಪ್ನ ಸುಂದರಿಯಾಗಿ
ಚುಂಬಕರಾಣಿ ಗುಲಮೊಹರ ಕನ್ನಡತಿ ನನ್ನವಳು
ಅನಂತರ ಸಂಸ್ಕಾರ ಊಣಬಡಿಸಿ
ಗಿರೀಶರ ಬಲಿಯ ಹಿಟ್ಟಿನ ಕೋಳಿಯಾಗಿ
ಕೂಗಿದಾಕೆ ಗುಲಮೊಹರ ಕನ್ನಡತಿ ನನ್ನವಳು

ತಮಟೆ ಜಾಗಟೆಯ ಧೂಳೆಬ್ಬಿಸಿ ಚೋಮನನ್ನು ಶಿವರಾಮರಲ್ಲಡಗಿಸಿ
ಮಲೆಗಳಲ್ಲಿ ಮದುಮಗಳನ್ನು ಹುಡುಕುವ ಶೂದ್ರಜ್ಜನ
ಗುಲಮೊಹರ ಕನ್ನಡತಿ ನನ್ನವಳು

ಸಿದ್ದಲಿಂಗಯ್ಯರ ಸಾವಿರಾರು ನದಿಗಳ ಒಂದೆಡೆ ಸೇರಿಸಿ
ದೇವನೂರರ ಒಡಲಾಳದ ಕಿಚ್ಚಿಗೆ ಕುಸುಮಬಾಲೆಯಾಗಿ
ಬಂದವಳು ಗುಮಮೊಹರ ಕನ್ನಡತಿ ನನ್ನವಳು

ಪಟ್ಟದಕಲ್ಲು ವೀರಗಲ್ಲುಗಳ ವೀರಾವೇಶ ನೋಡಿ
‘ ಐ’ ಹೋಳೆ ಎಂದು ಗೊಲಗುಮ್ಮಜಿನ ತುತ್ತ ತುದಿಗೇರಿದವಳು
ಗುಲಮೊಹರ ಕನ್ನಡತಿ ನನ್ನವಳು

ಯವ್ವಾ ಎನ್ನುವ ಸಿಹಿ ತುತ್ತು ಜೇನ ತುಟಿಗಳಿಗೆ ವರಸಿ
ಹುಡಿಗಾಲ ಎಳ ನೀರನಿಂದ ತೊಳೆದ ಜಾನಪದದ
ಸಿರಿ ಗುಲಮೊಹರ ಕನ್ನಡತಿ ನನ್ನವಳು

ಇಳೆ ಹೊತ್ತಲ್ಲಿ ಚುಕ್ಕಿ ಚಂದ್ರಮರನ್ನು ಬಡಿದೆಬ್ಬಿಸಿ
ಮಕ್ಕಳಲಾಲಿ ಹಾಡಾಗಿ ಹೊತ್ತು ಹೊತ್ತಿಗೆ ಅನ್ನ ತಿನ್ನುವಾಗ
ಇಣುಕಿಣುಕಿ ನೋಡುವ ಗುಲಮೊಹರ ಕನ್ನಡತಿ ನನ್ನವಳು

ಎಲುಬಿನ ಹಂದರಕ್ಕೆ ತಾಯ್ ಕರುಳಿನ ಚಪ್ಪರವಾಗಿ ನಿಂತವಳು
ಹಳದಿ-ಕೆಂಪಿನ ಬಾವುಟ ಹಾರಿಸಿ ಕನ್ನಡ ಕಂಪನ್ನು ಸೂಸಿದ ಗುಲಮೊಹರ ಕನ್ನಡತಿ ನನ್ನವಳು


ಡಾ.ಸುಜಾತಾ.ಸಿ

Leave a Reply

Back To Top