ಸಿ.ಸುವರ್ಣ ಶಿವಪ್ರಸಾದ್ ಅವರ ಹಳ್ಳಿ ಬದುಕಿನ ನೈಜ ಚಿತ್ರಣ ‘ಚಾಕಣದ ಸುಭದ್ರೆ’ಅವಲೋಕನ ಗೊರೂರು ಅನಂತರಾಜು

ಪುಸ್ತಕ ಸಂಗಾತಿ

ಸಿ.ಸುವರ್ಣ ಶಿವಪ್ರಸಾದ್

‘ಚಾಕಣದ ಸುಭದ್ರೆ’

ಗೊರೂರು ಅನಂತರಾಜು

ವಿದ್ಯಾರ್ಥಿ ದೆಸೆಯಿಂದಲೇ ಪ್ರಗತಿಪರ ಚಿಂತನೆಗಳನ್ನು ಮೈಗೂಡಿಸಿಕೊಂಡು ಬೆಳೆದವರು ಸಿ.ಸುವರ್ಣ ಶಿವಪ್ರಸಾದ್. ಶಿವಪ್ರಸಾದ್ ಸರ್, ನಾಡು ಕಂಡ ಪ್ರಸಿದ್ಧ ಅಂತರಾಷ್ಪ್ರೀಯ ಚಿತ್ರಕಾರರು. ಸುವರ್ಣ ಮೇಡಂ ಹಾಸನವಾಣಿ ದಿನಪತ್ರಿಕೆಯ ಮುಖೇನ ಪತ್ರಿಕಾ ಕ್ಷೇತ್ರಕ್ಕೆ ಅಡಿಯಿಟ್ಟವರು. ನಾನು ಹಾಸನ ವಾಣಿಯಲ್ಲಿ ಹಾಸನ ಜಿಲ್ಲೆಯ ಐತಿಹ್ಯ ದೇವಾಲಯಗಳ ಕುರಿತಾಗಿ ಇದೇ ಪತ್ರಿಕೆಯ ಭಾನುವಾರದ ಸಂಚಿಕೆಯಲ್ಲಿ ೬೮ ವಾರಗಳು ಬರೆಯುವಾಗ ಮೇಡಂ ಅಲ್ಲಿ ಕೆಲಸ ಮಾಡುತ್ತಾ ನನಗೆ ಪರಿಚಿತರಾದರು. ಈ ದಾರಾವಾಹಿ  ಹಾಸನ ಜಿಲ್ಲೆಯ ದೇವಾಲಯಗಳ ದರ್ಶನ ಎಂದು ಸದ್ಯ ಪುಸ್ತಕವಾಗಿ ಪ್ರಕಟವಾಗಿದೆ. ಇವರು ನಂತರ ಜನತಾ ಮಾಧ್ಯಮ ಪತ್ರಿಕೆಯಲ್ಲೂ ಕೆಲಸ ಮಾಡಿದ್ದಾರೆ. ಈಗಾಗಲೇ ಕನ್ನಡ ಸಾಹಿತ್ಯ ಲೋಕಕ್ಕೆ ಬದುಕು ಮಾಯೇ ಎಂಬ ಲೇಖನ ಸಂಗ್ರಹ ಕೃತಿ ನೀಡಿದ್ದಾರೆ. ಒಂದ್ಕತೆ ಮತ್ತು ಬೆಳಕು ಇವು ಇವರ ಕಾದಂಬರಿಗಳು. ಕನ್ನಡ ಪುಸ್ತಕ ಪ್ರಾಧಿಕಾರದಿಂದ ಧನ ಸಹಾಯ ಪಡೆದ ಚಾಕಣದ ಸುಭದ್ರೆ ಕಥಾ ಸಂಕಲನದಲ್ಲಿ ೬ ಕಥೆಗಳಿವೆ. ಇದರಲ್ಲಿ ಚಾಕಣದ ಸುಭದ್ರೆಯದೇ ೧೧೫ ಪುಟಗಳ ಸಿಂಹ ಪಾಲು. ಸ್ತ್ರೀ  ಸಂವೇದನೆ ರೈತ ಸಂವೇದನೆಯ ಕೇರಿ ಬದುಕಿನ ನೀಳ್ಗತೆ. ಸಂಕಲನದ ಎಲ್ಲಾ ಕಥೆಗಳಲ್ಲೂ ಮಹಿಳೆಯ ನೋವಿನ ಓಳ ನೋಟವನ್ನು ನೀಡುವಂತಹ ಪ್ರಯತ್ನ ಮಾಡಿದ್ದೇನೆ ಎಂದಿದ್ದಾರೆ ಕಥೆಗಾರ್ತಿ. ಚಾಕಣದ ಸುಭದ್ರೆ ದಲಿತ ಮಹಿಳೆಯ ಬದುಕು ಭವಣೆಯ  ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ವಿದ್ಯಾವಂತೆಯಾಗಿ ಪುರುಷನಿಗೆ ಸರಿ ಸಮಾನವಾಗಿದ್ದರೂ ಕೂಡ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳಲು ಏನೆಲ್ಲಾ ನೋವು ಅನುಭವಿಸಬೇಕು ಎನ್ನುವುದರ ಬಹುಮುಖಿ ಕಥಾನಕ ಜೊತೆಗೆ ಹೆಣ್ಣಿಗೆ ಹುಟ್ಟಿನಿಂದ ಸಾಯುವಶತನಕ  ನೆಮ್ಮದಿಯಿಲ್ಲದ ಹೋರಾಟದ ಬದುಕಿನಲ್ಲಿ ಅನೇಕ ಸುಳಿಗಳಲ್ಲಿ ಸಿಲುಕಿ ಮತ್ತೆ ಮತ್ತೆ ಶಕ್ತವಾಗುತ್ತ ಸಾಗಿ  ತನ್ನ ಹೆಜ್ಜೆ ಗುರುತು ಮೂಡುತ್ತದೆ ಎಂಬ ಆಶಾಭಾವನೆ ಅಭಿವ್ಯಕ್ತವಾಗಿದೆ. ಬಾಯಿ ಇದ್ದವರು ಬರಗಾಲದಲ್ಲೂ ಬದುಕಿದರು ಎಂಬಂತೆ ಬದುಕಲು ಬಲವಾದ ಆಯಾಮ ಇಲ್ಲವಾದಾಗ ಬಾಯಿಯನ್ನು ಬಂಡವಾಳ ಮಾಡಿಕೊಂಡು ಬದುಕುವ ವಿಧವೆ ಸುಭದ್ರಮ್ಮನ ಕಥೆ ನೀಳ್ಗತೆಯಲ್ಲಿ ಒಂದು ಪಾತ್ರ.ಈಕೆ ಗಯ್ಯಾಳಿ ಅನ್ನೋದು ಊರ‍್ಗೆ ಗೊತ್ತಿದ್ದರೂ ಭೀಮೇಗೌಡ ಇವಳಿಗೆ ಮನೆ ಬಾಡಿಗೆ ಕೊಟ್ಟಿದ್ದಾನೆ. ‘ಸ್ವಲ್ಪ ದಿನ ಆದ ಮೇಲೆ ತಗೊಳಿ ಅವಳ ಗೇಟಫೆ ಬದಲಾಯ್ತು. ಭೀಮೇಗೌಡ ಮನೆ ಬಾಡಿಗೆ ಕೇಳೋಕ್ಕೋದರೆ ಸಾಕು ಅವ್ನಗೆ ಮನಸೋ ಇಚ್ಛೆ ಬಾಯಿಗೆ ಬಂದಂಗೆಲ್ಲಾ ಬೈಯೋದಿಕ್ಕೆ ಶುರು ಮಾಡ್ತಾಳೆ. ಕಥೆಯ ಮಾತುಗಾರಿಕೆ ನಿರೂಪಣೆ ಎಲ್ಲವೂ ಹಳ್ಳಿಯ ಸೊಗಡಿನಲ್ಲೇ ಇದೆ. ಆದರೆ ಓದಲು ತೊಡಕ್ಕಿದೆ.
 ಬ್ಯಾಂಕಿನವರು ಸಾಲ ವಸೂಲಿಗಾಗಿ ಮನೆ ಜಪ್ತಿ ಮಾಡುವಲ್ಲಿಂದ ಕಥೆ  ಶುರು.  ರೈತರು ಬ್ಯಾಂಕಿನವರ ಸಂಘರ್ಷ ಜಪ್ತಿ ತಗಾದೆ ವಿವಾದಗಳು  ರೈತ ಚಳುವಳಿ ದಿನಗಳ ಸರಪಳಿ. ಸಾಲ-ಶೂಲ ಬೆಳೆ ನಾಶ ಕಾಡು ಬದುಕಿನ ಆನೆ ಮಾನವ  ಸಂಘರ್ಷ ಇವೆಲ್ಲಾ ಹೊಸೂರು ಎಂಬ ಹಳ್ಳಿ ಬದುಕಿನಲ್ಲಿ ಹಾಸು ಹೊಕ್ಕಾಗಿವೆ. ಮನೋಜ್ ಪ್ರಮೋದ್ ವಿಜೇಯೆಂದ್ರ ವರುಣ್‌ ಇವರೆಲ್ಲಾ ಬ್ಯಾಂಕಿನವರ ಜಪ್ತಿ ವಿರುದ್ದ ತಿರುಗಿ ಬಿದ್ದು ಕೋರ್ಟ್ ಕಛೇರಿ ಅಲೆದಾಡುವ ದೃಶ್ಯ ನಾವು ಕಂಡಿದ್ದೇವೆ.  
 ಸುಭದ್ರೆ ಮಗಳು ಚಂಚಲ ಓದಲು  ಪಟ್ಟಣಕ್ಕೆ ಬರುತ್ತಾಳೆ. ಮೇಲ್ಜಾತಿಯ ಸುರೇಶ್ ಕೆಲಸ ಮಾಡುವ ಬ್ಯಾಂಕ್‌ನಲ್ಲಿ ಇಬ್ಬರಿಗೂ ಗೆಳತನವಾಗಿ ಪ್ರೇಮಕ್ಕೆ ತಿರುಗಿ ಕಾಲಗತಿಯಲ್ಲಿ ಬ್ಯಾಂಕಿನಿಂದ ಸುರೇಶ್‌ ಡಿಸ್‌ಮಿಸ್‌ ಆಗುತ್ತಾನೆ. ಬಾಡಿಗೆ ಕಟ್ಟಲು ಹಣವಿಲ್ಲದೇ ದಂಪತಿಗಳು ದಮ್ ಕಳೆದುಕೊಳ್ಳುತ್ತಾರೆ. ಚಂಚಲ ಗರ್ಭಿಣಿ ಆಗಿ ಅಬಾರ್ಷನ್ ಮಾಡಿಸಲು ಆಸ್ಪತ್ರೆಗೆ ಹೋದರೆ ಚಂಚಲೆಗೆ ಹುಟ್ಟುವ ಮಗು ತನಗೆ ಕೊಟ್ಟರೆ ಐದು ಲಕ್ಷ ಕೊಡುವುದಾಗಿ ಆಮಿಷ ಒಡ್ಡುತ್ತಾಳೆ ನರ್ಸ್ ಲಕ್ಷ್ಮಮ್ಮ. ತುರ್ತು ಹಣದ ಅಗತ್ಯ ಮತ್ತು ವಾಸಕ್ಕೆ ಮನೆ ಬೇಕಿರಲು ಚಂಚಲೆ ಮೊದಲುಶಒಪ್ಪಿ ಹೆರಿಗೆ ನಂತರ ತಿರುಗಿ ಬೀಳುತ್ತಾಳೆ. ಗಾಂಚಾಲಿ ಮಾಡಿದರೆ ಪೊಲೀಸ್‌ ಕಂಪ್ಲೆಂಟ್‌ ಕೊಡುವುದಾಗಿ ಬೆದರಿಸಿ ತಾನೆತ್ತ ಮಗುವನ್ನು ತನ್ನಲ್ಲೇ ಉಳಿಸಿಕೊಳ್ಳುತ್ತಾಳೆ. ಈ ಕಡೆ ನರ್ಸ್ಗೆ ಗಂಟು ಪೋಯ ನಂಟು ಪೋಯ..!
 ವಿಧಿವತ್ತಾಗಿ ಮದುವೆಯಾಗದೆ ತಾಯಿಯಾಗಿರುವ ಚಂಚಲೆ ಒಂದು ಕಡೆ, ಉದ್ಯೋಗ  ಕಳೆದುಕೊಂಡು ನಿರುದ್ಯೋಗಿಯಾಗಿರುವ ಗಂಡ ಇನ್ನೊಂದು ಕಡೆ ಹೊಟ್ಟೆ ಪಾಡಿನ ಮಾರ್ಕೇಟಿನಲ್ಲಿ ಸುಳ್ಳಿನ ಮಾರಾಟ ಮಾಡಿ ಕಡೆಗೆ ತೌರಿಗೆ ಪತಿ ದೇವರೊಂದಿಗೆ ಚಂಚಲ ತಾಯಿ ಚಾಕಣದ ಸುಭದ್ರೆಯನ್ನೇ ಆಶ್ರಯಿಸುವಲ್ಲಿಗೆ ಇವರ ಕಥೆ ಮುಗಿದು ಮತ್ತೊಂದು ಕುಟುಂಬದ ಕಥೆ ತೆರೆದುಕೊಳ್ಳುತ್ತದೆ. ಗ್ರಾಮ್ಯ ಭಾಷೆ ಸೃಷ್ಟಿಯಲ್ಲಿ ಒಂದೊಂದು ಕೌಟುಂಬಿಕ ಕುಟುಂಬದ ಕಥಾನಕಗಳು ನೈಜ  ಸಹಜ ಬದುಕಾಗಿ ರೂಪು ತಳೆದಿವೆ.
‘ಹೊಸೂರು ಪಾಪಯ್ಯ ಗ್ರಾಮ ದೇವತೆ ರೇಣುಕಾದೇವಿ ಅಮ್ಮನ ಜಾತ್ರೆಗೆ ಅಂತಾ ಹೆಸರು  ಹೇಳಿ ಕುರಿ ಸಾಕಿದ್ದ. ಅದೋ ಅವರಿವರ ಹೊಲ್ದಾಲ್ಲಿ ಮೇದು ಮೇದು ನೆಣ ಹೆಚ್ಚಾಗಿ ನೆಡೆಲಯಕ್ಕೆ ಆಗ್ದಾಂಗೆ ಆಗಿತ್ತು. ಅಷ್ಟೋ ದಷ್ಟ ಪುಷ್ಟವಾಗಿ ಎರಡು ವರ್ಷದಿಂದಲೂ ಸಾಕಿದ್ದ. ಇಡೀ ಹೊಸೂರು ಜನ್ರು ಕಣ್ಣೆಲ್ಲಾ ಆ ಕುರಿ ಮೇಲೆ ಇತ್ತು. ಎಂದಿನಂತೆ ಪಾಪಯ್ಯ ಮನೆಯಿಂದ ಮೇಯೋಕೆ ಒಡ್ಕೊಂಡು ಹೋಗಿ ಹೊಲ್ದಾಲಿ ಬಿಟ್ಟು ತೋಟ್ದಾಲ್ಲಿ ಕಾಯಿ ಕೀಳಿಸೋಕೆ ಹೋಗ್ತಾನೆ. ಎಲ್ಲಾ ಕೀಳಿಸಿ ಬಂದು ನೋಡೋದರೋಲಗೆ ಕುರಿನೇ ಇಲ್ಲ..!   (ಭಾಷೆ ಓದಲು ತ್ರಾಸವಷ್ಟೇ?) ಕಾಳಜಿಯಿಂದ ಸಾಕಿದ್ದ ಕುರಿ ಕಳೆದುಕೊಂಡು ಊರು ಕೇರಿ ಎಲ್ಲಾ ಹುಡುಕುವ ಪಾಪಯ್ಯನ ಪಡಿಪಾಡಲು ನಾವು ಹಳ್ಳಿಗಾಡಿನಲ್ಲಿ ಕಾಣವಂತದ್ದೇ!
ಮೊದಲಿಗೆ ಚಾಕಣ ಎಂದ ಕೂಡಲೇ ನನಗೆ  ನಮ್ಮೂರಿನಲ್ಲಿ ಚಾಕಣ ಮಾರುತ್ತಿದ್ದ ಒಬ್ಬಾತ ನೆನಪಾದನು. ಅವ ಶನಿ ಮಹಾತ್ಮೆ ನಾಟಕದಲ್ಲಿ ಅಲೋಲಿಕೆಯ ಸಖಿ ಪಾತ್ರದಲ್ಲಿ ನಟಿಸಿ ನುಲಿಯತ್ತ‘ಹೆಂಗಿತ್ರಕ್ಕ ನನ್ನ ಪಾರ್ಟು..ಎಂದು ನಮ್ಮ ಅಂಗಡಿಗೆ ಎಲೆ ಅಡಿಕೆ ಖರೀದಿಸಲು ಬಂದು ನಮ್ಮ ತಾಯಿಯವರಲ್ಲಿ ಕೇಳುತ್ತಿದ್ದಾಗ ನನಗೆ ನಗು ಬಂತು. ಅವ  ಹೆಣ್ಣಿಗನ ತರಹ ಮಾತನಾಡುತ್ತಿದ್ದಿದ್ದು ನನಗೆ ತಮಾಷೆಯಾಗಿ ಕಾಣುತ್ತಿತ್ತು. ನಮ್ಮ ಮನೆ ಮೇಲ್ಗಡೆ ರಸ್ತೆಯಲ್ಲಿ ಒಂದು  ಷರಾಪ್‌ ಅಂಗಡಿ ಇತ್ತು.  ಅಲ್ಲೊಬ್ಬರು ಹೆಂಗಸು ಹೆಸರು ಬೇಡ.  ಸ್ವಲ್ಪ ಎತ್ತರದ ಸ್ಥಳದಲ್ಲಿ ಕುಳಿತು ಷರಾಪ್ ಮಾರುತ್ತಿದ್ದರು. ೫೦ ಲೀಟರ್‌ ಕ್ಯಾನ್‌ನಿಂದ ನಲ್ಲಿಯಲ್ಲಿ ನೀರು ಬಿಟ್ಟಂತೆ ಷರಾಪ್‌ನ್ನು ಗಿರಾಕಿಕೊಟ್ಟ ಹಣಕ್ಕೆ ತಕ್ಕಂತೆ ಅಳತೆ ಮಾಡಿ ಬಿಡುತ್ತಿದ್ದರು. ಕುಡಿದ ಮಹಾಶಯರು ಸಖಿ ಬಳಿ ಸಾಗಿ ಕಡ್ಲೇಕಾಳು, ಹೆಸರು ಕಾಳು ಹುಸ್ಲಿ, ದುಡ್ಡು ಹೆಚ್ಚಿದ್ದರೆ ಬೋಟಿ, ಕುರಿ ಬ್ಲಡ್ ಮಸಾಲೆ, ಮೊಟ್ಟೆ ಆಮ್ಲೇಟ್‌ ಇತ್ಯಾದಿ ಬಿಸಿ ಬಿಸಿ ಬೇಯಿಸಿಕೊಟ್ಟಿದ್ದನ್ನು ತಿಂದು ನಾಲಿಗೆ ಚಪ್ಪರಿಸುತ್ತಿದ್ದ ದೃಶ್ಯ ಅಚಾನಕ್ಕಾಗಿ ಕಣ್ಮುಂದೆ ಬಂತು. ಅಲ್ಲಿ ನಡೆಯುತ್ತಿದ್ದ ಗಲಾಟೆ ಗದ್ದಲಗಳು, ಕುಡಿತ  ಹೆಚ್ಚಾಗಿ ಅಲ್ಲೇ ಒರಗಿಕೊಳ್ಳುತ್ತಿದ್ದ ಇಲ್ಲವೇ ರಸ್ತೆ ಪಕ್ಕ ಚರಂಡಿಯಲ್ಲಿ ಬಿದ್ದಿರುತ್ತಿದ್ದ ದೃಶ್ಯಗಳು ಸರ್ವೇ ಸಾಮಾನ್ಯವಾಗಿದ್ದವು. ದೇಶದ ಜನಸಂಖ್ಯೆ ಇಳಿಸುವಲ್ಲಿ ಸೇಂದಿ ಅಂಗಡಿಗಳ ಪಾತ್ರವು ಮಹತ್ವದ್ದಾಗಿದೆ ಎಂಬುದನ್ನು ಮರೆಯುವಂತಿಲ್ಲ.  ಆ ಕಾಲಕ್ಕೆ ಹುಡುಗರಾಗಿದ್ದ ನಮಗೆ ಈ ವಿಷಯಗಳೆಲ್ಲಾ ಕಥೆ ಬರೆಯಲು ಹೊಳೆಯಲಿಲ್ಲ. ಮೇಡಂ ಅವರ ಕಥೆ ಚಾಕಣದ ಸುಭದ್ರೆ ಎಂದು ಹೆಸರಿದ್ದರೂ ಆಕೆ ಚಾಕಣ ಮಾರುವ ಘಾಟು ಗಮ್ಮತು ಏನೂ ಇಲ್ಲ. ಆದರೂ ಸುಭದ್ರೆ ಮಾತ್ರ ಘಾಟಿ ಹೆಂಗಸು ಎಂಬುದನ್ನು ಹೇಳುತ್ತಾರಷ್ಟೇ.  ನಾನು ವಿದ್ಯಾರ್ಥಿ ದಿನಗಳಲ್ಲಿ ಓದುತ್ತಿದ್ದ ಮಹಿಳೆಯರ ಕಾದಂಬರಿಗಳು   ನಯ ನಾಜೂಕಿನ ಕಾಲ್ಪನಿಕ ಕಥೆಗಳಾಗಿ ರಂಜನೆಯೇ ಪ್ರಧಾನವಾಗಿರುತ್ತಿದ್ದವು. ಸುವರ್ಣ ಮೇಡಂ ತಮ್ಮ ಸುತ್ತಲ ಬದುಕನ್ನು ನೈಜವಾಗಿ ಚಿತ್ರಿಸಿರುವಂತಿದೆ. ಸಂಕಲನದ  ಇನ್ನುಳಿದ ಐದು ಕಥೆಗಳು ಒಡಲಿನ ಕಿಚ್ಚು, ಚಂಚಲ, ನಿರೀಕ್ಷೆ, ಆಸರೆ, ಗಾಯ ಇವೆಲ್ಲಾ ಇದೇ ಹಾದಿಯಲ್ಲಿ ಸಾಗಿವೆ. ಇವು ಚಿಕ್ಕ ಕಥೆಗಳೇ.  ಇವುಗಳನ್ನೆಲ್ಲಾ ಒಟ್ಟಾಗಿಸಿ ಕಾದಂಬರಿಯಾಗಿಯೇ ತರಬಹುದಿತ್ತೇನೋ..? ಏಕೆಂದರೆ ಸುಭದ್ರೆ ಕಥೆಯಲ್ಲಿ ಬೇರೆ ಬೇರೆ ಸನ್ನಿವೇಶ, ದೃಶ್ಯ, ಸಂಸಾರಗಳ ಕಥೆಗಳಿವೆಯಷ್ಟೇ. ಅಂತೆಯೇ
ಇವುಗಳನ್ನು ಒಟ್ಟುಗೂಡಿಸಿದ್ದರೇ ಒಂದು ಕಾದಂಬರಿ ಆಗಬಹುದಿತ್ತಷ್ಟೇ..!

————————————–

ಗೊರೂರು ಅನಂತರಾಜು

Leave a Reply

Back To Top