ಶೋಭಾ ನಾಗಭೂಷಣ್ ಅವರ ಕೃತಿ “ಭಾವರಂಗದ ಪಯಣ” ಒಂದುಅವಲೋಕನ- ರಾ‍ಘವೇಂದ್ರ ಸಿ.ಎಸ್.

ಮನದ ಭಾವ ಪುಟಗಳನ್ನು ತೆರೆದಿಡುವ ಕವನಸಂಕಲನ ಭಾವರಂಗದ ಪಯಣ

ಇಪ್ಪತ್ತೊಂದನೆ ಶತಮಾನ ನವಶಕೆಗಳ ದಾಖಲೆಗೆ ತೆರೆದ ಪುಸ್ತಕವಾಗಿದೆ. ಒಬ್ಬ ಮಹಿಳೆ ಮನಸ್ಸು ಮಾಡಿದರೆ ಯಾವುದೇ ಕೆಲಸವನ್ನಾದರೂ, ಯಾವುದೇ ಸಾಧನೆಯನ್ನು ಬೇಕಾದರೂ ಮಾಡಬಲ್ಲರು ಎಂಬುದಕ್ಕೆ ಶ್ರೀಮತಿ ಶೋಭಾ ನಾಗಭೂಷಣ್ ಉತ್ತಮ ನಿದರ್ಶನವಾಗುತ್ತಾರೆ. ಶಿಕ್ಷಕಿಯಾಗಿ, ಕನ್ನಡ ವಿಭಾಗದ ಮುಖ್ಯಸ್ಥೆಯಾಗಿ, ಕವಯತ್ರಿಯಾಗಿ, ಕನ್ನಡ ಕಾರ್ಯಕ್ರಮಗಳ ನಿರೂಪಕಿಯಾಗಿ, ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ(ನೋಂ ) ಮೈಸೂರಿನ ಪ್ರಧಾನ ಕಾರ್ಯದರ್ಶಿಯಾಗಿ ಸಾಹಿತ್ಯ ಸೇವೆಯಲ್ಲಿ ಅಹರ್ನಿಶಿಯಾಗಿ ಕಾರ್ಯನಿರ್ವಹಿಸುತ್ತಾ ಸದಾ ಚಟುವಟಿಕೆಯಿಂದ ಹಸನ್ಮುಖಿಯಾಗಿ, ಹೊಸ ಹೊಸ ಪ್ರತಿಭೆ ಉಳ್ಳವರನ್ನು ಗುರುತಿಸಿ ಪ್ರೋತ್ಸಾಹಿಸುವ ಆದರ್ಶಗುಣ ಹೊಂದಿರುವ ಶ್ರೀಮತಿ ಶೋಭಾ ನಾಗಭೂಷಣ್ ಅವರ ಎರಡನೇ ಕವನ ಸಂಕಲನ ಭಾವರಂಗದ ಪಯಣ.

ಭಾವರಂಗದ ಪಯಣ ಈ ಕವನ ಸಂಕಲನದಲ್ಲಿ ೬೫ ಕವನಗಳಿವೆ. ಉತ್ತಮ ಪದಪ್ರಯೋಗದಿಂದ ಅತ್ಯುತ್ತಮ ಭಾಷೆಯ ಹಿಡಿತದಿಂದ, ಹೊಸ ಬಗೆಯ ದೃಷ್ಟಿಕೋನದ ಕವನಗಳು ಇಲ್ಲಿವೆ. ಕವಿ, ಕಾದಂಬರಿಕಾರರು, ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ‌ ಪ್ರತಿಷ್ಠಾನದ ಅಧ್ಯಕ್ಷರು ಆಗಿರುವ ಎಂ.ಬಿ.ಸಂತೋಷ್ ಸರ್ ಅವರು ಸೊಗಸಾದ ಮುನ್ನುಡಿಯನ್ನು ಬರೆದಿದ್ಡಾರೆ. ಕವಯತ್ರಿ, ಸಂಘಟಕಿ‌ ಹಾಗೂ ಹೇಮಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕದ ಅಧ್ಯಕ್ಷರಾದ ಎ.ಹೇಮಗಂಗಾ ಮೇಡಂ ಅವರು ಬೆನ್ನುಡಿಯನ್ನು ಬರೆದು ಶುಭ ಹಾರೈಸಿದ್ದಾರೆ.

ಭಾವರಂಗದ ಪಯಣ ಎಂಬ ಕವನದಲ್ಲಿ ಭಾವನೆಗಳಿಲ್ಲದೆ ಮನುಷ್ಯ ಬದುಕಲಾರ. ಭಾವನೆಗಳೊಂದಿಗೆ ಬದುಕಿನ‌ ಪಯಣವು ಸಾಗುತ್ತಲಿರುತ್ತದೆ ಎಂಬುದನ್ನು ಈ ಕವನ ಕಟ್ಟಿಕೊಡುವ ಪ್ರಯತ್ನ ಮಾಡುತ್ತದೆ.

ಭಾವವಿಲ್ಲದ ಜೀವನ ಸಾಗುವುದಿಲ್ಲ
ಅದರ ಪಯಣ
ಸಾವಿನಲ್ಲೂ ಶಾಂತ ಭಾವವು


ಈ ಸಾಲುಗಳು ಭಾವನೆಗಳಿಲ್ಲದೆ ಮನುಷ್ಯ ಬದುಕಲು ಸಾಧ್ಯವಿಲ್ಲ ಎಂಬುದನ್ನು ಮನದಟ್ಟು ಮಾಡಿ ತಿಳಿಸುತ್ತದೆ. ಭಾವನೆಗಳೊಂದಿಗೆ ಬದುಕು‌ ನಡೆಸುವ ಮಾನವರು ನವರಸಗಳಲ್ಲಿ‌ ಯಾವುದಾದರೊಂದು ರಸವನ್ನು ಅಭಿವ್ಯಕ್ತಪಡಿಸುತ್ತಾರೆ ಎಂಬುದನ್ನು ಈ ಕವನ ತಿಳಿಸುತ್ತದೆ.

           ಜಯ ಜಯ ಭುವನೇಶ್ವರಿ ಎಂಬ ಕವಿತೆಯು ಲೇಖಕಿಗೆ  ಕನ್ನಡ ಭಾಷೆಯ ಮೇಲೆ ಇರುವ ಅಪಾರವಾದ ಗೌರವವನ್ನು ತೋರ್ಪಡಿಸಿದಂತಿದೆ. ಪ್ರತಿಯೊಬ್ಬ ಕನ್ನಡಿಗರೂ ತಾವು ತಮ್ಮ‌ ಭಾಷೆಯ ಬಗೆಗೆ ತೋರಬೇಕಾದ ಪ್ರೀತಿ, ಪ್ರೇಮವನ್ನು ಈ ಕವನ  ತಿಳಿಸಿದಂತಿದೆ.

ಕನ್ನಡಿಗರ ಎದೆಯ ತಟ್ಟಿ
ಮನೆಮನಗಳ ಕದವ ಮೆಟ್ಟಿ
ಹೆಮ್ಮೆಯಿಂದ ಬೀಗುವೆ
ತಾಯಿ ಕನ್ನಡಾಂಬೆಯೇ

ಈ ಸಾಲುಗಳ‌ ಒಳಗಿರುವ ಮಹತ್ವವನ್ನು ಅರ್ಥಮಾಡಿಕೊಂಡರೆ ಸಾಕು ನಮ್ಮ ಬದುಕಿನಲ್ಲಿ ಕನ್ನಡಾಂಬೆ

ಶಾಶ್ವತವಾಗಿ ನೆಲೆನಿಲ್ಲುತ್ತಾಳೆ. ಕನ್ನಡಿಗರು ಎಂಬ ಅಭಿಮಾನ, ಹೆಮ್ಮೆ ಎಂದೆಂದಿಗೂ ಚಿರಸ್ಥಾಯಿಯಾಗಿ ನಿಲ್ಲುತ್ತದೆ.

     ಮತ್ಸರವೇಕೆ ದೇವಾ ಮತ್ತೆ ಮತ್ತೆ ಎಂಬ ಕವನ ಬದುಕಿನಲ್ಲಿ  ಏನೇ ಸಮಸ್ಯೆಗಳು ಬಂದರೂ ಅದನ್ನು ಧೈರ್ಯವಾಗಿ ಎದುರಿಸಿ ನಿಲ್ಲುವ ಮನೋಭಾವ ವ್ಯಕ್ತವಾಗಿದೆ.

ಒಡ್ಡು ಪರೀಕ್ಷೆಗಳ ಸಾವಿರಾರು
ಧೈರ್ಯದಿ ಎದುರಿಸುವೆ
ನಿನ್ನ ಮತ್ಸರವೇನು ಮಾಡದು
ಬಿಡು ನಿನ್ನ ಸಣ್ಣ ತನವ ದೇವಾ

ಈ ಸಾಲುಗಳನ್ನು ಗಮನಿಸಿದಾಗ ಹಣ್ಣಿರುವ ಮರಕ್ಕೆ ಹೆಚ್ಚು ಪೆಟ್ಟು ಬೀಳುವುದು ಹಾಗೆಯೇ ಒಳ್ಳೆಯವರಿಗೆ ಸಮಸ್ಯೆಗಳು ಬರುವುದು ಎಂಬ ಮಾತು ನೆನಪಿಗೆ ಬರುತ್ತದೆ. ಎಷ್ಟೇ ಸಮಸ್ಯೆಗಳು ಬಂದರೂ ತೊಂದರೆಗಳು ಎದುರಾದರೂ ಧೈರ್ಯದಿಂದ ಎದುರಿಸಿ ನಿಲ್ಲುವ ಶಕ್ತಿ ತಮ್ಮಲ್ಲಿದೆ ಎಂಬುದನ್ನು ಕವಿಯತ್ರಿ ಈ ಕವನದ ಮೂಲಕ ತಿಳಿಸಿದ್ದಾರೆ.

ಆತ್ಮಶಕ್ತಿ ಎಂಬ ಎಂಬ ಕವನ ನಿಂದಿಸುವವರು ಇದ್ದರೂ ಅದರ ಬಗ್ಗೆ ಆಲೋಚಿಸದೆ ಮುನ್ನುಗ್ಗುತ್ತಲಿರು ಎಂಬ ಸಂದೇಶವನ್ನು ರವಾನಿಸಿದಂತಿದೆ. ಕೊಲ್ಲುವವರು ಸಾವಿರ ಜನ ಇದ್ದರೂ ಕಾಯುವವನು ಒಬ್ಬನು ಇರುತ್ತಾನೆ ಎಂಬ ಮಾತಿನಂತೆ ನಮ್ಮ ಆತ್ಮಬಲವನ್ನು ಕುಗ್ಗಿಸುವವರ ನಡುವೆಯೇ ನಿಂತು ಅವರ ಮುಂದೆಯೇ ಎದ್ದು ನಿಲ್ಲಬೇಕೆಂಬ ಆಶಯ ಈ ಕವನದಲ್ಲಿದೆ.ಮುಖ್ಯವಾಗಿ ಈ ಸಾಲುಗಳನ್ನು ಗಮನಿಸಬಹುದು.

ಕುಗ್ಗಿಸಲು ಬಯಸುವವರು
ಉರಿದುಕೊಳ್ಳುವ ಹಾಗೆ
ಆತ್ಮ ಬಲವಿರಲು ದೈವ ಕೃಪೆ ಇರಲು
ಇರಿದು ಕೊಚ್ಚಿ ಕೊಂದರೂ
ಮತ್ತೆ ಎದ್ದು ನಿಲ್ಲು

ಆತ್ಮಬಲ, ದೈವ ಕೃಪೆ ಇದ್ದರೆ ಎಂತಹ ಸಂದರ್ಭ ಬಂದರು, ಧೈರ್ಯವಾಗಿ ನಿಲ್ಲಲು ಸಾಧ್ಯ ಎಂಬ ಸಕಾರಾತ್ಮಕತೆಯ ಅಂಶವನ್ನು ಈ ಸಾಲುಗಳು ತಿಳಿಸುತ್ತದೆ.

ಎತ್ತ ಸಾಗುತಿದೆ ಈ ಜಗವು ಎಂಬ ಕವನವು ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಪರಸ್ಪರ ದ್ವೇಷ, ಅಸೂಯೆ,ಸ್ವಾರ್ಥಗಳ ಬಗ್ಗೆ ಮರುಕ ವ್ಯಕ್ತಪಡಿಸುತ್ತಾ ಈ ನೆಲದ ಮಹಿಮೆಯನ್ನು ಅರಿಯದೇ ಮಾನವೀಯ ಮೌಲ್ಯಗಳನ್ನು ಮರೆತು ಸಾಗುತ್ತಿರುವ ವ್ಯವಸ್ಥೆಯ ಬಗ್ಗೆ ಅಸಮಾಧಾನವನ್ನು ಹೊರಹಾಕಿದಂತಿದೆ.

ಯಾಂತ್ರಿಕ ಬದುಕಿನ ಗೋಜಿಗೆ ಸಿಲುಕಿ
ಓದು ಬರಹ ಲೆಕ್ಕದೋಕುಳಿಯಲ್ಲಿ ಮಿಂದು
ನೀತಿ ಪಾಠವ ಕಡೆಗಣಿಸಿ ಇಂದು
ಎತ್ತ ಸಾಗುತ್ತಿದೆ ಈ ಜಗವು !

ಕೇವಲ ನಾನು, ನನ್ನ ಕುಟುಂಬ ಚೆನ್ನಾಗಿದ್ದರೆ ಸಾಕು ಎಂದು ಎಂಬ ಸ್ವಾರ್ಥ ತುಂಬಿರುವ ಈ ಜಗದಲ್ಲಿ ಸಮಾಜದ ಒಳಿತಿಗಾಗಿ ಪರಿತಪಿಸುವ ಕವಯತ್ರಿಯ ಈ ಮನೋಭಾವ ಯಾರೇ ಆದರೂ ಮೆಚ್ಚುವಂತದ್ದು. ಉತ್ತಮ ಸಮಾಜ ನಿರ್ಮಾಣವಾಗಬೇಕೆಂಬ ಸಾಮಾಜಿಕ ಕಳಕಳಿಯನ್ನು ಒಳಗೊಂಡಿರುವ ಕವನ ಇದಾಗಿದೆ.

ಬದುಕಿ ಬಿಡು ಗೆಳತಿ ಎಂಬ ಕವನವು ಹೆಣ್ಣು ಮಕ್ಕಳಿಗೆ ಹೊಸ ಭರವಸೆಯನ್ನು ನವ ಚೈತನ್ಯವನ್ನು ಹುಟ್ಟು ಹಾಕುವ ನಿಟ್ಟಿನಲ್ಲಿ ಬರೆದ ಕವನದಂತಿದೆ. ಪುರುಷ ಕೇಂದ್ರಿತ ಸಮಾಜದಲ್ಲಿ ಸ್ತ್ರೀಯ ಸ್ವತಂತ್ರ ಅಸ್ತಿತ್ವವೇ ಇಲ್ಲದ ಹಾಗೆ ಮಾಡುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಹೆಣ್ಣುಮಕ್ಕಳಿಗೆ ತಮ್ಮ ತನವನ್ನು ಕಳೆದುಕೊಳ್ಳದೆ ಛಲದಿಂದ ಬದುಕಬೇಕೆಂದು ಎಚ್ವರಿಕೆಯನ್ನು ಹೊಸ ಭರವಸೆಯನ್ನು ನೀಡಿದ್ದಾರೆ.

ಗಾವುದ ಗಾವುದ ದೂರ
ಕಣ್ಣಿಗೆ ಕಾಣದ ಹಾಗೆ
ನಿನ್ನ ತನವ ಕೊಲ್ಲುವವರ
ಕೈಗೆ ನೀ ಸಿಗದೆ ಓಡಿ ಬಿಡು

ಎಂಬ ಈ ಸಾಲುಗಳು ತನ್ನತನವನ್ನು ಕಳೆದುಕೊಂಡು ಬಾಳುವ ಸಂದರ್ಭ ಎದುರಾದರೆ ಅದನ್ನು ತ್ಯಜಿಸಿ‌ ಸ್ವತಂತ್ರವಾಗಿ ಬದುಕನ್ನು ಎದುರಿಸಿ ನಿಲ್ಲಲ್ಲು ಸಿದ್ಧವಾಗು ಎಂಬುದನ್ನು ತಿಳಿಸಿದಂತಿದೆ.

ವಿಮಾನ ಪ್ರಯಾಣ ಎಂಬ ಕವನದಲ್ಲಿ ಮೊದಲ ಬಾರಿಗೆ ವಿಮಾನ ಪಯಣದ ಮಾಡಿದ‌ ಮುಗ್ದತೆಯ ಆನಂದದ ಅನುಭವವನ್ನು ಕಾಣಬಹುದು. ಸಾಮಾನ್ಯವಾಗಿ ಪ್ರಥಮ ಎಂಬುದು ಯಾವಾಗಲೂ ವಿಶೇಷವಾದದ್ದು. ಮೊದಲು ಕಲಿತ ಪಾಠ, ಕಲಿಸಿದ ಗುರು, ಮೊದಲ ಪ್ರೇಮ ಹೀಗೆ ಜಿವನದಲ್ಲಿ ಪ್ರಥಮ ಎನ್ನುವುದು ಎಂದೆಂದಿಗೂ ಮಾಸದ ನೆನಪಾಗಿ ಕಾಡಬಲ್ಲದು. ಇಲ್ಲಿಯೂ ಅದೇ ಭಾವ ವ್ಯಕ್ತವಾದಂತಿದೆ.

ಮೊದಲ ಬಾರಿಗೆ ವಿಮಾನ ಹತ್ತಿದಾಗ
ಉತ್ಸಾಹ ಉಲ್ಲಾಸ ಹೇಳುತ್ತಿರುವುದು
ಅಪಾದ ಮಸ್ತಕ ನಡುಗಿತು
ವಿಮಾನವು ಆಗಸದೆಡೆಗೆ ಮುಖ ಮಾಡಿ ಸಾಗಿದಾಗ

ಈ ಕವನವನ್ನು ಓದಿದರೆ ಎಂತವರಿಗಾದರೂ ಜೀವನದಲ್ಲಿ ಒಮ್ಮೆ ವಿಮಾನ ಪಯಣ ಮಾಡಬೇಕೆಂಬ ಆಸೆ ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೂವಿನೊಂದಿಗೆ ಬದುಕು ಕವನ ಹೂವನ್ನು ಮಾರಿ ಬದುಕುವವರ ನೈಜ ಚಿತ್ರಣವನ್ನು ಕಣ್ಣಿನ ಮುಂದೆ ತರುವಂತಿದೆ‌. ಬದುಕು ಒಬ್ಬೊಬ್ಬರಿಗೆ ಒಂದೊಂದು ಬಗೆಯಲ್ಲಿ ಕಾಣುತ್ತದೆ. ಆ ಬದುಕನ್ನು ಬದುಕಿದವರಷ್ಟೇ ಅದನ್ನು ತಿಳಿಯಬಲ್ಲರು. ಬೆಂಕಿ ಸುಡುತ್ತದೆ ಎಂಬುದು ಜ್ಞಾನ ಆ ಬೆಂಕಿಯಲ್ಲಿಯೇ ಬೆಂದು ನೊಂದು ಅದರಿಂದ ಎದ್ದು ನಿಲ್ಲುವುದೇ ಜೀವನ ಎಂಬ ಅನುಭವದ ಪಾಠವನ್ನು ಈ ಕವನ ಕಟ್ಟಿಕೊಡುತ್ತದೆ.

ಕೊಳ್ಳುವವರಿಲ್ಲದೆ, ಮುಡಿಯುವವರಿಲ್ಲದೆ
ಬಾಡಿ ಹೋಗುತಿಹುದು ಕುಸುಮವು
ಪ್ರತಿದಿನವೂ ಇದೇ ಗತಿಯು
ಕೇಳುವವರಿಲ್ಲ ನಮ್ಮಯ ಸ್ಥಿತಿ

ಈ ಸಾಲುಗಳು ಹೂವನ್ನು ಕೊಳ್ಳುವವರು ಇಲ್ಲ ಮುಡಿಯುವವರು ಕೂಡ ಇಲ್ಲ. ಇಲ್ಲಿ ಬಾಡಿ ಹೋಗುತ್ತಿರುವುದು ಹೂ ಮಾತ್ರವಲ್ಲ ಆ ಹೂವನ್ನು ಮಾರಿ ಬದುಕು ಕೂಡ ಎಂಬ ಕಟುವಾಸ್ತವವನ್ನು ಇದಕ್ಕಿಂತ ಮನಮುಟ್ಟುವಂತೆ ತಿಳಿಸಲು ಸಾಧ್ಯವೇ ?ನೊಂದವರ ನೋವನ್ನು ನೋಯದವರು ಅನುಭವಿಸಲು ಸಾಧ್ಯವಾಗಬಹುದೇ ?!

ತಾಯಿ ಹೃದಯ ಎಂಬ ಕವನವು ತಾಯ್ತನದ ಸಾರ್ಥಕತೆಯನ್ನು ತಿಳಿಸುವಂತಿದೆ. ಹೆಣ್ಣು ತಾಯಿಯಾದಾಗ ಪರಿಪೂರ್ಣತೆಯನ್ನು ಅನುಭವಿಸಿದಂತೆ ಎಂಬ ಹಿರಿಯರ ನುಡಿ ತಾಯ್ತನದ ಮಹತ್ವವನ್ನು ತಿಳಿಸುತ್ತದೆ. ಮನುಷ್ಯ ವರ್ಗದಲ್ಲಾಗಲೀ, ಪ್ರಾಣಿಗಳಾಗಲೀ ಹೆರುವ ಶಕ್ತಿ ಇರುವುದು ಹೆಣ್ಣಿಗೆ. ತಾಯಿಯ ತ್ಯಾಗವನ್ನು ಎಂದಿಗೂ ತೀರಿಸಲಾಗದು. ಅಂತಹ ಮಾತೃ ಬಗೆಗೆ ಬರೆದಿರುವ ಕವನ ಇದಾಗಿದೆ.

ತಾಯಿಯಾಗಲು ಹಡೆಯಲೇ
ಬೇಕೆಂದೇನಿಲ್ಲ ನೊಂದ,
ಪ್ರೀತಿ ಬಯಸಿದ ಮನಕೆ
ತೋರುವ ನಿಜ ಮಮತೆಯದು

ಈ ಸಾಲುಗಳು ಹೆತ್ತ ಮಾತ್ರಕ್ಕೆ ತಾಯಿಯಾಗಬೇಕಿಲ್ಲ‌ ನೊಂದಿರುವ ಮನಕ್ಕೆ ನಿಜವಾದ ಮಮತೆಯನ್ನು ತೋರಿದರೆ ಸಾಕು ಅದು ಕೂಡ ತಾಯಿಯಂತೆ ಭಾಸವಾಗಲ್ಲದು ಎಂಬುದನ್ನು ತಿಳಿಸುತ್ತದೆ.

ನಲಿಯಿರಿ ಕಲಿಯಿರಿ ಎಂಬ ಕವನ ನಲಿಯುತ್ತಾ ಕಲಿ ಎಂಬ ತತ್ವವನ್ನು ತಿಳಿಸಿದಂತಿದೆ. ಓದು ಎಂಬುದು ಯಾವುದೇ ಕಾರಣಕ್ಕೂ ಹೊರೆಯಲ್ಲ ಅದನ್ನು ನಡೆಯುತ್ತಾ ಕಲಿತರೆ ಬದುಕಿಗೊಂದು ಅನುಭವದ ಹೂರಣವನ್ನು ಬಡಿಸಬಲ್ಲದು ಎಂಬುದನ್ನು ಈ ಕವನ ತಿಳಿಸುತ್ತದೆ. ಶಾಲಾ ಹಂತದಲ್ಲಿ ಕಲಿಯುವ ಆರು ಭಾಷೆಗಳನ್ನು ಜೀವನದ ಅನುಭವದೊಂದಿಗೆ ಕಲಿಯಬೇಕೆಂದು ತಿಳಿಸಿದ್ದಾರೆ.

ಕನ್ನಡ ಕಲಿಯಿರಿ ನಾಡಿಗಾಗಿ
ನಮ್ಮ ಭಾಷೆಯೇ ನಮ್ಮ ಹೆಮ್ಮೆಯು
ನಾಡಿನ ಗರ್ವಕ್ಕೆ ಅದುವೇ ಗರಿಮೆ
ನಾಡು ನುಡಿಯ ಜೊತೆಗೆ ಬೆರತು
ನಾಡ ಕೀರ್ತಿಯ ಪಸರಿಸೋಣ

ಎಂಬ ಸಾಲುಗಳು ಪ್ರತಿಯೊಬ್ಬ ಕನ್ನಡಿಗರೂ ಕನ್ನಡಿಗನಾಗಿ ಹುಟ್ಟಿದ್ದಕ್ಕೆ ಗರ್ವವನ್ನು, ಹೆಮ್ಮೆಯನ್ನು ಪಡಬೇಕು ಎಂಬುದನ್ನು ತಿಳಿಸುವುದರ ಜೊತೆಗೆ ಮಾತೃಭಾಷೆಯ ಬಗೆಗೆ ಕವಯತ್ರಿಗಿರುವ ಅಭಿಮಾನವನ್ನು ಪ್ರಕಟಪಡಿಸಿದಂತಿದೆ.

ಒಂದು ಹೊತ್ತಿನ ಊಟಕ್ಕಾಗಿ ಎಂಬ ಕವನವು ಬದುಕನ್ನು ಸಾಗಿಸಲು ಬಡವರು ಅನುಭವಿಸುವ ಬವಣೆಗಳನ್ನು ಮಾಡುವ ಕೆಲಸಗಳನ್ನು ತಿಳಿಸುತ್ತದೆ.ಒಂದು ಹೊತ್ತಿನ ಊಟಕ್ಕಾಗಿ ಪಡುವ ಶ್ರಮವನ್ನು, ಹಾಕುವ ವೇಷಗಳನ್ನು ತಿಳಿಸುತ್ತದೆ.

ಇಳಿವಯಸ್ಸಿನಲ್ಲಿಯೂ ಗಾಡಿ ತಳ್ಳಿ
ಬೀದಿ ಬೀದಿಗಳ ತಿರುಗಿ
ಸೊಪ್ಪು – ಗಿಪ್ಪುಗಳ ಕೊಳ್ಳಿರೆಂದು ಸಾರಿದ್ದು
ಒಂದು ಹೊತ್ತಿನ ಊಟಕ್ಕಾಗಿ

ಎಂಬ ಸಾಲುಗಳು ಮನಮುಟ್ಟುವಂತಿದೆ.ಇಂತ ಜನರೊಂದಿಗೆ ವ್ಯಾಪಾರ ಮಾಡುವಾಗ ಚೌಕಾಸಿ ಮಾಡದೆ ಅವರ ಜೀವನ ನಿರ್ವಹಣೆಗೆ ನಮ್ಮಿಂದಾಗುವ ಅಲ್ಪ ಸಹಾಯವನ್ನಾದರೂ ಮಾಡಿದರೆ ನಿಜಕ್ಕೂ ಮಾನವೀಯತೆಗೊಂದು ಅರ್ಥ ಬರುತ್ತದೆ. ಕವನ ಓದಿದಾಗ ಎಲ್ಲರೂ ಮಾಡುವುದು ಹೊಟ್ಟೆಗಾಗಿ,ಗೇಣು ಬಟ್ಟೆಗಾಗಿ ಎಂಬ ದಾಸರ ಕೀರ್ತನೆ ನೆನಪಿಗೆ ಬರುವಂತಿದೆ.

ಮಾತು ಎಂಬ ಕವನ ನಾವಾಡುವ ಮಾತುಗಳು ಹೇಗಿರಬೇಕೆಂಬ ಸಂದೇಶವನ್ನು ಸಾರಿದಂತಿದೆ.

ಒಮ್ಮೆ ಆಡಿದ ಮಾತನು
ಹಿಂಪಡೆಯಲಾಗದು ಎಂದೆಂದೂ
ಮುದುಡಿ ಹೋಗದಂತೆ ಮನ
ತಿಳಿದು ನುಡಿಯಬೇಕು

ಎಂಬಂತಹ ಸಾಲುಗಳು ನಾವಾಡುವ ಮಾತು ಮತ್ತೊಬ್ಬರ ಮೇಲೆ ಗಾಢವಾದ ಪರಿಣಾಮವನ್ನು ಬೀರಬಲ್ಲದಾದ್ದರಿಂದ ಆಲೋಚಿಸಿ ಯಾರಿಗೂ ನೋವಾಗದಂತೆ ಮಾತನಾಡಬೇಕೆಂಬುದನ್ನು ತಿಳಿಸಿದಂತಿದೆ.

ಸಂವಿಧಾನದ ಮಹತ್ವವನ್ನು ತಿಳಿಸುವ ಕವನ ,ಭಾರತೀಯನಾಗಿ ಹುಟ್ಟಿದ್ದಕ್ಕೆ‌ ಹೆಮ್ಮೆ‌ಪಡಬೇಕೆಂದು ತಿಳಿಸುವ ಕವನ, ವಿದ್ಯಾರ್ಥಿಗಳ ಬದುಕಿನಲ್ಲಿ ಶಿಕ್ಷಕರ ಪಾತ್ರವನ್ನು ತಿಳಿಸುವಂತಹ ಶಿಕ್ಷಕರು ಎಂಬ ಕವನ, ಹಣಕ್ಕಾಗಿ ಮತವನ್ನು ಮಾರಿಕೊಳ್ಳುವವರಿಗೆ ನೀತಿಯನ್ನು ಹೇಳಿದಂತಿರುವ ಓಟಿನ ಓಟ ಹೀಗೆ ಒಂದಕ್ಕಿಂತ ಒಂದು ಬಹಳ ಸೊಗಸಾಗಿ ಮನಮುಟ್ಟುವಂತಿದೆ. ಒಂದು ಸುಂದರವಾದ ಹೂದೋಟದಲ್ಲಿ ಯಾವ ಹೂವು ಚೆನ್ನಾಗಿದೆ‌ ಎಂದು ವಿವರಿಸಲು ಸಾಧ್ಯವಿಲ್ಲವೋ ಹಾಗೆಯೇ ಈ‌ ಕವನ ಸಂಕಲನದಲ್ಲಿ ಆಯ್ಕೆ ಮಾಡಿಕೊಂಡಿರುವ ವಸ್ತು‌ಗಳು, ಅವುಗಳನ್ನು ಪ್ರಸ್ತುತ ಪಡಿಸಿರುವ ರೀತಿ‌, ಬಳಸಿರುವ ಭಾಷೆಗಳಿಂದ ಒಂದಕ್ಕಿಂತ ಒಂದು ಕವನಗಳು ಭಿನ್ನವಾಗಿ, ಸುಂದರವಾಗಿ ,ಮನಕ್ಕೆ ಹತ್ತಿರವಾಗುವಂತಿದೆ.ಹಣ್ಣಿನ ರುಚಿಯನ್ನು ಸವಿದವನೇ ಬಲ್ಲ ,ನೋಡಿದವನಲ್ಲ ಎಂಬ ಮಾತಿನಂತೆ ಈ ಕವನಗಳನ್ನು ಪುಸ್ತಕ ಖರೀದಿಸಿ ಓದಿದರೆ ಕವನಗಳು ಮತ್ತಷ್ಟು, ಮಗದಷ್ಟು ಆಪ್ತವಾಗಬಲ್ಲದು. ಒಟ್ಟಾರೆಯಾಗಿ ಶೋಭಾ ನಾಗಭೂಷಣ ಅವರು ರಚಿಸಿರುವ ಕವನ ಸಂಕಲನವು ಪ್ರಸ್ತುತ ಮನಸ್ಸುಗಳ ಅಂತರಂಗವನ್ನು, ಭಾವನೆಗಳ ಶ್ರೇಷ್ಠ ರೂಪಗಳನ್ನು ತೆರೆದಿಡುವುದರಲ್ಲಿ ಅನುಮಾನವಿಲ್ಲ ಕವಿತೆಯ ಬಂಧ ಅನುಬಂಧ ರೂಪದಾರಣೆ, ಶ್ರೇಷ್ಠತೆಯಿಂದ ಕೂಡಿರುವುದು ಕವಿತೆಯ ಸಂಕಲನಕ್ಕೆ ಸುವರ್ಣ ಭಾವವನ್ನು ಮೂಡಿಸಿದೆ.


Leave a Reply

Back To Top