ಮಮತಾ ಕೆ. ಅವರ ಕವಿತೆ ಕಾಲಚಕ್ರ..

ಕಾವ್ಯ ಸಂಗಾತಿ

ಮಮತಾ.ಕೆ

ಕಾಲಚಕ್ರ..

ಅಪ್ಪನ ಕೈಗಳಲ್ಲಿ ಅಡಿಪಾಯ ಹಾಕಿದ
ಮನೆ ಉರುಳುತಿದೆ
ನೆನಪುಗಳು ಮರುಕಳಿಸುತಿದೆ
ಅಟ್ಟದಲ್ಲಿದ್ದ ಹಳೆಯ ವಸ್ತುಗಳು
ಚರಿತ್ರೆಯನು ಹೇಳುತಿವೆ….//

ಮಣ್ಣಿನ ಗೋಡೆಯಲಿ ಅಂಟಿದ
ಮಸಿ ಕೂಡು ಕುಟುಂಬದ
ಸಂಬಂಧವನು ನೆನಪಿಸುತಿದೆ
ನೆನಪುಗಳು ಮಾತ್ರ ಉಳಿದಿವೆ
ಭಾವನೆಗಳು ಸುಟ್ಟು ಕರಕಲಾಗಿದೆ..//

ಅಡುಗೆ ಕೋಣೆಯಲ್ಲಿದ್ದ ಮರದ
ಸೌಟುಗಳು,ಮಣ್ಣಿನ ಮಡಿಕೆಗಳು
‌ಮೂಲೆಗುಂಪಾಗಿದೆ
ಅಮ್ಮನ ಕೈ ಬಳೆಯ ನಾದ ಗುಂಯ್ ಗುಡುತಿದೆ
ಸ್ಟೀಲ್ ಗಾಜಿನ ಪಾತ್ರೆಗಳು
ಐಶಾರಾಮಿ ಬದುಕಿನ ಭವಿಷ್ಯವನು
ಹೇಳುತಿವೆ.//

ಅರೆಯುವ ಕಲ್ಲು ಅನಾಥವಾಗಿದೆ
ಅಡುಗೆಯ ಘಮ  ಹೇಳ ಹೆಸರಿಲ್ಲದೆ
ಮಾಯವಾಗಿದೆ
ಬೀಸುವ ಕಲ್ಲಿನಲ್ಲಿದ್ದ ಸಂಭ್ರಮ
ಕೃತಕ ಬದುಕಿಗೆ ನಾಂದಿಯಾಗಿದೆ
ಕೃತಕತೆಯ ಮುಖವಾಡ ಮೆರೆದಿದೆ..//

ಹಾರೆ, ಪಿಕ್ಕಾಸುಗಳು ಒಗ್ಗಟ್ಟಿನ ಬಲದಿ
ಮೆರೆಯುತ್ತಿದ್ದ ಆ ಕಾಲ ಬದಲಾಗಿ
ತಂತ್ರಜ್ಞಾನದಲಿ ಒಂಟಿತನವನು
ಮೆರೆಸಿ ಮನಸುಗಳು
ಛಿದ್ರವಾಗಿದೆ ಅಹಮ್ಮಿನ ಕೋಟೆ
ಬಲವಾಗಿ ಮೆರೆದಿದೆ..//

ಹೆಂಚು ಮನೆಯಲ್ಲಿ ಹದವಾದ
ಗಾಳಿಯ ತಂಪು ಇನ್ನಿಲ್ಲವಾಗಿ
ಕಾಂಕ್ರೀಟ್ ಮನೆಯ ಬೆಚ್ಚಗಿನ
ಉಸಿರಿನೊಳಗೆ …


ಮಮತಾ ಕೆ.

One thought on “ಮಮತಾ ಕೆ. ಅವರ ಕವಿತೆ ಕಾಲಚಕ್ರ..

Leave a Reply

Back To Top