ಪುಸ್ತಕ ಸಂಗಾತಿ
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ನಾಗರಾಜ ಹರಪನಹಳ್ಳಿ ಅವರ ಕೃತಿ
‘ವಿರಹಿ ದಂಡೆ’
ಪ್ರಕೃತಿಯೊಡನೆ
ಅನುಸಂಧಾನಗೈಯುವ :
ವಿರಹ ದಂಡೆಯ ಕಾವ್ಯ.
ಪುಸ್ತಕ : ವಿರಹಿ ದಂಡೆ
(ಕವನ ಸಂಕಲನ)
ಕವಿ : ನಾಗರಾಜ ಹರಪನಹಳ್ಳಿ
ಪ್ರಕಾಶನ : ನೌಟಂಕಿ ಪ್ರಕಾಶನ ಬೆಂಗಳೂರು
ಪುಟಗಳು : 80
ಬೆಲೆ : 80ಅ
ಮನುಷ್ಯ ಪ್ರಕೃತಿಯೊಡನೆ ; ಪ್ರಕೃತಿ ಮನುಷ್ಯನೊಡನೆ ಸಂಬಂಧ ಬೆಸೆದಾಗ ಬದುಕು ಸುಂದರವಾಗುತ್ತದೆ. ಅಂತಹ ಸುಂದರ ಬದುಕನ್ನು ನಾವು ಪ್ರಕೃತಿಯೊಡನೆ ತೆರೆದಾಗ ಹೃದಯ ಮನಸ್ಸು ಹಗುರಾಗುತ್ತದೆ. ಮನುಷ್ಯನನ್ನು ಸದಾ ಕಾಡಬೇಕಾದ ಸಂಗತಿಗಳೆಂದರೆ ನಿಸರ್ಗ, ನಿಸರ್ಗದೊಡಲಲ್ಲಿರುವ ಗಿಡ, ಮರ, ಬಳ್ಳಿ, ಬೆಟ್ಟ – ಗುಡ್ಡ, ಮಳೆ, ಕಡಲು ಜೀವ ಜಂತುಗಳು… ಹೀಗೆ ಅವು ನಮನ್ನು ಕಾಡುತ್ತಾ ಹೋದಂತೆ ನಮ್ಮೊಳಗೆ ಪ್ರೀತಿ ಮೊಳಕೆಯೊಡೆಯುತ್ತದೆ. ಅಂತಹ ಪ್ರಕೃತಿಯೊಡನೆ ಸದಾ ಅನುಸಂಧಾನಗೈಯುವ ಗೆಳೆಯ, ಪತ್ರಕರ್ತ, ಸಾಹಿತಿ ನಾಗರಾಜ ಹರಪನಹಳ್ಳಿ ಅವರ ಕವನ ಸಂಕಲನ ‘ವಿರಹಿ ದಂಡೆ’ ಒಂದು ವಿಶಿಷ್ಟ ಪ್ರಕೃತಿ ಮತ್ತು ಬದುಕನ್ನು ಮುಖಾಮುಖಿಯಾಗಿಸುವ ಕೃತಿಯಾಗಿದೆ.
‘ವಿರಹಿ ದಂಡೆ’ ಕವನ ಸಂಕಲನ 40 ಕವನಗಳನ್ನು ಒಳಗೊಂಡಿದೆ. ಇಲ್ಲಿಯ ಕವನಗಳು ಬಹುತೇಕವಾಗಿ ಪ್ರಕೃತಿಯೊಡನೆ ಮುಖಾಮುಖಿಯಾಗಿವೆ. ದಟ್ಟ ಮಲೆನಾಡಿನ ಸೆರಗಂಚಿನಲ್ಲಿರುವ ಕರಾವಳಿ ಪ್ರದೇಶದ ಉತ್ತರ ಕನ್ನಡ (ಕಾರವಾರ) ಜಿಲ್ಲೆಯ ನಿವಾಸಿಯಾಗಿರುವುದರಿಂದ ನಾಗರಾಜರವರಿಗೆ ಇಳೆ ಮತ್ತು ಮಳೆ ಹನಿಗಳು, ಸಮುದ್ರದ ದಂಡೆಯು ಅವರನ್ನು ಬಹುವಾಗಿ ಕಾಡಿವೆ. ಕವಿಗೆ ಬದುಕನ್ನು ಪ್ರಕೃತಿಯೊಡನೆ ಸಮೀಕರಿಸಿಕೊಂಡು, ತಾತ್ವಿಕ ಚಿಂತನೆಗಳನ್ನು ಕವಿತೆಯಲ್ಲಿ ಮೂಡಿಸಿದ್ದಾರೆ.
‘ಎಷ್ಟು ನೀರು ಕುಡಿದರೂ..’ ಕವಿತೆಯಲ್ಲಿ,
“ನಿಲ್ಲುವಂಥದ್ದಲ್ಲ ಮಳೆ ಥೇಟ್ ನಿನ್ನಂಥದ್ದೇ ಹರೆಯ ಅದಕೆ
ಬಿರುಸು ಸೊಗಸು ಮುನಿಸು ವ್ಯಯ್ಯಾರ ಥಳಕು ಬಳಕು..”
ಹೀಗೆ ತನ್ನ ಪ್ರಿಯತಮೆಯ ಸೊಗಸನ್ನು ಮಳೆಯೊಂದಿಗೆ ಸಮೀಕರಿಸಿ ಅಸ್ವಾದಿಸಿದ್ದಾರೆ.
ಇಂತಹ ಹಲವಾರು ಕವಿತೆಗಳು ಪ್ರಿಯತಮೆಯೊಂದಿಗೆ ಪ್ರಕೃತಿಯನ್ನು ವರ್ಣನೆ ಮಾಡಿರುವ ನಾಗರಾಜ ಹರಪನಹಳ್ಳಿಯವರು ಕಾವ್ಯದ ಅನುಸಂಧಾನ ಮಾಡಿದ್ದಾರೆ. ಕವಿಗೆ ಸಮುದ್ರ ತುಂಬಾ ಕಾಡಿದೆ ಸಮುದ್ರದ ಅಲೆಗಳು, ಬದುಕಿನ ಸೆಳೆತಗಳು ಅವುಗಳನ್ನು ಅವಲೋಕನ ಮಾಡಿಕೊಳ್ಳುತ್ತಾ, ದಂಡೆಯ ಮೇಲೆ ನಿಂತು ಬದುಕಿನ ವೈರುಧ್ಯಗಳನ್ನು, ವೈದಾಟಗಳನ್ನು ಕಟ್ಟಿಕೊಟ್ಟಿದ್ದಾರೆ.
‘ದಂಡೆಯ ಜೊತೆ ಮಾತು ಬಿಟ್ಟೆ’ ಈ ಕವಿತೆ ಕವಿಯ ಅಂತರಾಳದ ಅಂತರಂಗವನ್ನು ತೆರೆದಿಡುತ್ತದೆ.
“ಈ ದಂಡಿಯೇ ಹೀಗೆ ಒಮ್ಮೊಮ್ಮೆ ನಿಷ್ಕರುಣಿ ಸಂಬಂಧಗಳ ಹೊಸೆದು ಕಸಿದು ಕೊಳ್ಳುತ್ತದೆ
ಸುಳಿವು ಕೊಡದಂತೆ..”
“ದಂಡೆ ಜೊತೆ ಮಾತು ಬಿಟ್ಟು
ಹೆಜ್ಜೆ ಹಾಕಿದೆ
ಒಂದಿಷ್ಟು ಸಡಿಲವಾಗಲಿಲ್ಲ
ಮುಖ ಉಬ್ಬಿಸಿಕೊಂಡಿತ್ತು..”
ಕವಿ ದಂಡೆಯ ಜೊತೆಗೆ ಮುನಿಸಿಕೊಳ್ಳುತ್ತಾನೆ. ಕೋಪಗೊಳ್ಳುತ್ತಾನೆ. ಸಂವಾದ ನಡೆಸುತ್ತಾನೆ. ಬದುಕಿನ ಅಲೆಗಳಿಗೆ ಮುಖಮುಖಿಯಾಗುವಂತೆ ಅದರ ಜೊತೆ ಹೆಜ್ಜೆ ಹಾಕುತ್ತಾನೆ. ಬದುಕು ಕೂಡ ದಂಡೆಯಂತೆ ಕೆಲವು ಸಲ ನಿಷ್ಕರಣೆಯಂತೆಯೇ ವರ್ತಿಸುತ್ತದೆ..!
ದಂಡೆಯ ಜೊತೆ ಮಾತು ಬಿಟ್ಟೆ, ದಂಡೆಯಲ್ಲಿನ ಹಕ್ಕಿ ನಾಚಿತು, ಕಡಲು ಬಯಲು ನಗುತ್ತಿತ್ತು, ಪಿಸುಮಾತಿಗೆ ಉಲ್ಲಸಿತ ಕಡಲು, ಇಂತಹ ಕವಿತೆಗಳು ಓದುಗರನ್ನು ಮನಸೆಳೆಯುತ್ತವೆ. ಪ್ರೇಮ, ವಿರಹ, ಹೂವು, ನಕ್ಷತ್ರ, ಪಿಸುಮಾತು… ಇವುಗಳು ಓದುಗರೆದರು ಸಾಕ್ಷಿಯಾಗಿ ನಿಲ್ಲುತ್ತವೆ.
‘ಎದೆಗೆ ಬಿದ್ದ ಅಕ್ಷರ ಹೊತ್ತು’
ಕವಿತೆಯು ಕೆಲವು ಸಲ ಅರ್ಥವಿಲ್ಲದ ಮನುಷ್ಯ ಬದುಕಿನ ತುಮಲುಗಳನ್ನು ಈ ಕವಿತೆ ಕಟ್ಟಿಕೊಡುತ್ತದೆ. ಅಕ್ಷರಗಳನ್ನು ಬಿತ್ತಿಕೊಂಡ ಎದೆಗಳು ಅನೇಕ ವೈರುಧ್ಯಗಳಿಗೆ ಮುಖಾಮುಖಿಯಾಗುತ್ತವೆ. ಕೆಲವು ಸಲ ಅಕ್ಷರವಿರುವ ಎದೆಯು ಮನುಷ್ಯತ್ವವನ್ನು ಬಿತ್ತುತ್ತದೆ. ಮಾನವೀಯ ಮೌಲ್ಯಗಳನ್ನು ತಿಳಿಸುತ್ತವೆ. ಅವರ ಕವಿತೆಯ ಸಾಲುಗಳು..,
“ಅಕ್ಷರಗಳ ಹಸಿವಿರುವಲ್ಲಿ ಹಂಚಿದೆ
ಮನೆ ಮನೆಗಳಲ್ಲಿ ದೀಪವಾಯಿತು
ಮಹಲುಗಳ ಜಗಲಿಗೆ ಇಟ್ಟು ಬಂದೆ
ಕೋಣೆಯ ದುಃಖಕ್ಕೆ ದೀಪವಾಯಿತು”
ಈ ಸಾಲುಗಳು ಅಕ್ಷರಗಳ ಬೆಳಕನ್ನು ಸೂಚಿಸುತ್ತವೆ. ಮನುಷ್ಯನನ್ನು ಅಜ್ಞಾನದಿಂದ ಸುಜ್ಞಾನದ ಕಡೆಗೆ ಕೊಂಡೊಯ್ಯುತ್ತವೆ. ಎನ್ನುವ ತಾತ್ವಿಕ ಸಿದ್ದಾಂತವನ್ನು ಕವಿ ನಾಗರಾಜ ಹರಪನಹಳ್ಳಿ ಅವರು ಹೇಳುವಲ್ಲಿ ಸಫಲರಾಗಿದ್ದಾರೆ ಎನ್ನಬಹುದು.
‘ಬೋದಿಲೇರ್ ಮತ್ತೆ ಮತ್ತೆ ನೆನಪಾದ’ ಎನ್ನುವ ಕವಿತೆ ಗಾಢವಾದ ಮನುಷ್ಯತ್ವವನ್ನು ಪ್ರತಿಬಿಂಬಿಸುತ್ತದೆ. ನಮ್ಮ ದೇಶದಲ್ಲಿ ಹೆಣ್ಣನ್ನು ಗೌರವದಿಂದ ಕಾಣುತ್ತೇವೆ. ದೇವತೆಗೆ ಹೋಲಿಸಲಾಗಿದೆ. ಆದರೆ ಶೋಷಣೆ ಮಾತ್ರ ಎಗ್ಗಿಲ್ಲದಂತೆ ನಡೆದಿದೆ. ಇಂತಹ ಸಂದರ್ಭದಲ್ಲಿ “ನನ್ನ ದೇಶದಲ್ಲಿ ಬೋದಿಲೇರ ಹುಟ್ಟಬೇಕಾಗಿತ್ತು” ಎಂದು ನೆನಪಿಸಿಕೊಳ್ಳುತ್ತಾರೆ ಕವಿ ನಾಗರಾಜ ಅವರು.
“…ಹೆಣ್ಣನ್ನು ಇನ್ನಿಲ್ಲದಂತೆ ಭೋಗಿಸಿ ಆರಾಧಿಸುವ
ಕ್ಷಣಮಾತ್ರದಲ್ಲಿ
ಅದೇ ಹೆಣ್ಣು ತೋಳಗಳಲ್ಲಿ ತೊಡೆಗಳಲ್ಲಿ….
… ಬೇಕಾಬಿಟ್ಟಿ ಸಿಗುತ್ತಿದ್ದವು”
ಹೀಗೆ ಕವಿ ಭಾರತದ ಇಂದಿನ ಪ್ರಸ್ತುತ ಪರಿಸ್ಥಿತಿಯನ್ನು ಅನುಸಂಧಾನಗೈಯುತ್ತಾ, ತಮ್ಮ ಕಾವ್ಯದ ಮೂಲಕ ಓದುಗರನ್ನು ತಲುಪುತ್ತಾರೆ.
ವಿಭಿನ್ನ ಒಳನೋಟಗಳನ್ನು ಸೂಕ್ಷ್ಮವಾಗಿ ಗ್ರಹಿಸುವ ಕವಿ, ತಮ್ಮ ಬದುಕನ್ನು ನಿಸರ್ಗದೊಡಲಿಗೆ ಅರ್ಪಿಸಿ ನಲಿಯುತ್ತಾರೆ. ಪತ್ರಕರ್ತರಾಗಿರುವ ನಾಗರಾಜರ ಒಡಲೊಳಗೆ ಸಹೃದಯಿ ಕವಿ ಮಿಡಿಯುತ್ತಾನೆ. ‘ವಿರಹಿದಂಡೆ’ ಒಂದು ಉತ್ತಮ ಕವನ ಸಂಕಲನ.
ಇದು ಮನುಷ್ಯ ಮನುಷ್ಯರ ಬದುಕಿನ ಜೊತೆಗೆ ಪ್ರಕೃತಿಯನ್ನು, ಪ್ರಕೃತಿಯ ಒಡಲನ್ನು ಪ್ರೀತಿಸಬಲ್ಲವರು ಮಾತ್ರ ಪ್ರಕೃತಿಯನ್ನು ಅರಿಯಬಲ್ಲರು. ಹಾಗಾಗಿ ಕವಿಗೆ ಕಾಡು, ಪಕ್ಷಿ, ಸಮುದ್ರ, ದಂಡೆ, ಸಮುದ್ರ, ಅಲೆಗಳು, ಮನುಷ್ಯನ ದ್ವಂದ್ವದ ಸಾಚಾತನಗಳು.. ಇವೆಲ್ಲವೂ ಅವರ ಕಾವ್ಯದಲ್ಲಿ ಬಂದು ಹೋಗಿವೆ. ಎಷ್ಟೋ ಜನರ ಬದುಕಿನ ಕತ್ತಲುಗಳಿಗೆ ದೀಪದ ಬೆಳಕಾಗುವ ದಾರಿಯನ್ನು ಕಾವ್ಯದ ಸಾಲುಗಳು ತಿಳಿಸುತ್ತವೆ. ಜೊತೆಗೆ ಕವಿ ನಾಗರಾಜ ಹರಪನಹಳ್ಳಿಯವರು ತನ್ನ ಪ್ರಿಯತಮೆಯನ್ನು ಪ್ರೀತಿಸಿದಷ್ಟೇ ಸಮುದ್ರವನ್ನು, ಸಮುದ್ರದ ಅಲೆಯನ್ನು, ದಂಡೆಯನ್ನು ಪ್ರೀತಿಸುತ್ತಾರೆ. ಇವರ ಕಾವ್ಯದ ಸಾಲುಗಳು ಬೋರ್ಗೆರೆಯುವ ಅಲೆಗಳಾಗದೆ, ಶಾಂತವಾದ ಅಲೆಗಳುಕ್ಕಿ ಒಂದಕ್ಕೊಂದು ಹೋರಾಡುತ್ತವೆ. ಅಂತಹ ಅನೇಕ ಪ್ರಶಸ್ತವಾದ ಕಾವ್ಯದ ಸಾಲುಗಳನ್ನು ಕಟ್ಟಿಕೊಡುವಲ್ಲಿ ಕವಿತೆಗಳಿಗೆ ಮೊರೆಹೋಗಿರುವುದು ಕಾವ್ಯದ ನೇರವಂತಿಕೆಯನ್ನು ತೋರಿಸುತ್ತದೆ. ಪ್ರಕೃತಿಯ ಪ್ರೀತಿಯ ಕವಿ ನಾಗರಾಜ ಹರಪನಹಳ್ಳಿಯವರಿಂದ ಇನ್ನು ಹಲವಾರು ಕವನ ಸಂಕಲನಗಳು ಬರಲೆಂದು ಆಶಿಸೋಣ.
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ರಮೇಶ್ ,ಅವರೇ ನಿಮ್ಮ ವಿಮರ್ಶೆ ಚೆನ್ನಾಗಿದೆ. ನಿಮ್ಮ ಒಳನೋಟ ಚೆಂದ .
ಕವಿತೆಗಳ ಅವಲೋಕನಕ್ಕೆ ಧನ್ಯವಾದಗಳು.
– ನಾಗರಾಜ್ ಹರಪನಹಳ್ಳಿ
ಧನ್ಯವಾದಗಳು ಸರ್, ಕಾವ್ಯವನ್ನು ನೀಡಿದ ತಮಗೂ..
ಕಡಲಿನ ಭೋರ್ಗರೆತ ಅತ್ಯದ್ಭುತ. ನಿಸರ್ಗ ಇಲ್ಲದೇ ಮನುಷ್ಯನ ಬದುಕು, ಬಾಳೇವು ಇರಲು ಸಾಧ್ಯವೇ…? ನಿಮ್ಮ ವಿಶ್ಲೇಷಣೆ, ವಿಮರ್ಶೆ ಮೆಚ್ಚುವಂಥಹದು.
“ನಿಲ್ಲುವಂಥದ್ದಲ್ಲ ಮಳೆ. ಥೇಟ್ ನಿನ್ನಂಥದ್ದೇ ಹರೆಯ. ಆದರೆ ಬಿರುಸು, ಸೊಗಸು, ಮುನಿಸು, ವಯ್ಯಾರ, ಥಳುಕು-ಬಳುಕು.”
“ಈ ದಂಡೆಯೇ ಹೀಗೆ. ಒಮ್ಮೊಮ್ಮೆ ನಿಷ್ಕರುಣಿ. ಸಂಬಂಧಗಳ ಹೊಸೆದು, ಕಸಿದುಕೊಳ್ಳುತ್ತದೆ ಸುಳಿವು ಕೊಡದಂತೆ.”
ಬಹಳ ಚೆಂದದ ಕವಿತೆಗಳು. ಮನದುಂಬಿದ ಅಭಿನಂದನೆಗಳು ಕವಿವರ್ಯರಿಬ್ಬರಿಗೂ. —
— ಶೇಖರಗೌಡ ವೀ ಸರನಾಡಗೌಡರ್ ತಾವರಗೇರಾ.
ತಮ್ಮಂತಹ ಹಿರಿಯ ಕಥೆಗಾರರ ನಿರಂತರ ಪ್ರೋತ್ಸಾಹಕ್ಕೆ ಧನ್ಯವಾದಗಳು, ಶುಭ ರಾತ್ರಿ
ನಾಗರಾಜ್ ನನ್ನ ಆತ್ಮೀಯರು. ಅವರ ಕವನ ಸಂಕಲನದ ವಿಮರ್ಶೆ ಓದಿದೆ. ಕುತೂಹಲ ಕೆರಳಿಸಿತು. ಪ್ರತಿ ಬೇಕಿತ್ತು ಹೇಗೆ ಪಡಕೊಳ್ಳುವುದು ?
ನಿಮ್ಮ ವಿಳಾಸ ಕಳಿಸಿ, ಸಂಕಲನ ಕಳಿಸುವೆ.
94484 08633