ಡಾ. ವಿಜಯಲಕ್ಷ್ಮಿ ಸತ್ಯಮೂರ್ತಿ ಅವರ ಕೃತಿ ‘ಧರಿತ್ರಿ’ ಒಂದು ಅವಲೋಕನ ರುಕ್ಮಿಣಿ ನಾಯರ್

ಕೃತಿ: ಧರಿತ್ರಿ
ಲೇಖಕರು: ಡಾ. ವಿಜಯಲಕ್ಷ್ಮಿ ಸತ್ಯಮೂರ್ತಿ
ಮೊಬೈಲ್ ಸಂಖ್ಯೆ 8904483376
ಪ್ರಕಟಣೆ : ಋತುಸೌರಭ ಫೌಂಡೇಶನ್
ಪುಸ್ತಕದ ಬೆಲೆ: 165/-

ನನ್ನ ಮೆಚ್ಚಿನ ಲೇಖಕಿ ಡಾ. ವಿಜಯಲಕ್ಷ್ಮಿ ಸತ್ಯಮೂರ್ತಿಯವರು ಬರೆದಿರುವ *ಧರಿತ್ರಿ* ಪುಸ್ತಕವು ನನ್ನ ಕೈ ಸೇರಿ ತಿಂಗಳುಗಳು ಕಳೆಯಿತು. ಜೂನ್ ತಿಂಗಳಲ್ಲಿ ಪುಸ್ತಕ ಬಿಡುಗಡೆಯಾದ ದಿನ ಅವರ ಅಭಿಮಾನಿಯೊಬ್ಬರಿಂದ ಈ ಪುಸ್ತಕವು ನನಗೆ ಉಡುಗೊರೆಯಾಗಿ ದೊರೆಯಿತು.

ಒಂದು ಅತ್ಯುತ್ತಮ ಕಾದಂಬರಿಯನ್ನು ನನಗೆ ಉಡುಗೊರೆಯಾಗಿ ಕೊಟ್ಟಂತಹ ಆ ಅಭಿಮಾನಿಗೆ ಮೊದಲು ಹೃತ್ಪೂರ್ವಕ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.

ಧರಿತ್ರಿ ನನ್ನ ಕೈ ಸೇರಿದ ಮೂರು ದಿನಗಳಲ್ಲೇ ಬಿಡುವಾದಾಗೆಲ್ಲಾ ಸ್ವಲ್ಪ ಸ್ವಲ್ಪವಾಗಿ ಕಥೆಯನ್ನು ಓದಿ ಮುಗಿಸಿದೆ. ಕಥೆಯನ್ನು ಓದುವ ಮೊದಲು ಪ್ರಕಾಶಕರ ನುಡಿ,ಮುನ್ನುಡಿ, ಆಶಯನುಡಿ, ಲೇಖಕರ ಮಾತು,ಹಿನ್ನುಡಿ ಯಾವುದನ್ನೂ ಓದದೇ ನೇರವಾಗಿ ಕಥೆಯನ್ನೇ ಓದಿದೆ. ನಂತರವೇ ಇತರ ಎಲ್ಲ ನುಡಿಗಳನ್ನು ಓದಿದ್ದು. ನನ್ನ ಮೆಚ್ಚಿನ ಲೇಖಕಿಯು ಮುಖ ಪುಸ್ತಕದ ಅವರ ಖಾತೆಯಲ್ಲಿ ಧರಿತ್ರಿಯ ಬಗ್ಗೆ ಕೊಟ್ಟಂತಹ ಪರಿಚಯ ನನ್ನನ್ನು ಕುತೂಹಲಕ್ಕೆ ತಳ್ಳಿದ್ದೇ ಇದಕ್ಕೆ ಕಾರಣ. ಅವರು ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಅಧ್ಯಕ್ಷೆಯಾಗಿ ಪದಗ್ರಹಣ ಮಾಡಿದ ಸಂದರ್ಭದಲ್ಲಿ ಅವರಿಂದ ಮತ್ತೊಮ್ಮೆ ಧರಿತ್ರಿಯು ಉಡುಗೊರೆಯಾಗಿ ಸಿಕ್ಕಾಗ ಬರೆಯದೇ ಇರಲು ನನ್ನಿಂದ ಸಾಧ್ಯವಾಗಲಿಲ್ಲ.

ಋತು ಸೌರಭ ಫೌಂಡೇಶನ್ ನ ಉಪಾಧ್ಯಕ್ಷರಾದ ಶ್ರೀಯುತ ಬಾಲಾಜಿ ರಾವ್.ಎನ್ ರವರು ಬರೆದಿರುವ ಪ್ರಕಾಶಕರ ನುಡಿಯಲ್ಲಿ ವಿಜಯಲಕ್ಷ್ಮಿ ಸತ್ಯಮೂರ್ತಿಯವರ ಬರಹಗಳ ಸಮಗ್ರ ಚಿತ್ರಣವನ್ನು ಹಾಗೂ ಕನ್ನಡ ನಾಡಿಗೆ ಅವರು ಸಲ್ಲಿಸುತ್ತಿರುವ ಸೇವೆಯ ಕಿರು ಪರಿಚಯವನ್ನೂ ಮಾಡಿದ್ದಾರೆ.

ಕವಿ, ಸಂಶೋಧಕರು ಹಾಗೂ ಸಾಮಾಜಿಕ ಕಾರ್ಯಕರ್ತರಾದಂತಹ ಡಾ. ವಡ್ಡಗೆರೆ ನಾಗರಾಜಯ್ಯನವರು ಧರಿತ್ರಿ ಕಾದಂಬರಿಯ ಕಿರು ಪರಿಚಯವನ್ನು ಮಾಡುತ್ತಾ ತಮ್ಮ ಅದ್ಭುತ ಬರವಣಿಗೆಯಲ್ಲಿ ಕಥಾ ಸಾರಾಂಶವನ್ನು ತೆರೆದಿಟ್ಟಿದ್ದಾರೆ. 

ಈ ಕಾದಂಬರಿಯ ಲೇಖಕಿ, ಮಹಿಳಾ ಪ್ರತಿನಿಧಿ, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಋತು ಸೌರಭ ಫೌಂಡೇಶನ್ ಅಧ್ಯಕ್ಷರು ಆದಂತಹ ಶ್ರೀಮತಿ ಡಾ. ವಿಜಯಲಕ್ಷ್ಮಿ ಸತ್ಯಮೂರ್ತಿ ಯವರು ಈ ಕಥೆಯನ್ನು ಬರೆಯುವಾಗ ತಮಗಾದ  ಭಾವಾವೇಶಗಳ ಅನುಭವವನ್ನು *ಧರಿತ್ರಿ*ಯ ಅಂತರಂಗದಲ್ಲಿ ವಿವರಿಸಿದ್ದಾರೆ. ಕಥೆ ಕಾದಂಬರಿಯ ಪಾತ್ರಗಳಲ್ಲಿ ಇಳಿದು ಅದನ್ನು ಅಕ್ಷರ ರೂಪಕ್ಕೆ ಇಳಿಸಿ ಮೊದಲ ಪುಟದಿಂದ ಕೊನೆಯ ಪುಟದವರೆಗೂ ಓದುಗರನ್ನು ತನ್ಮಯತೆಯಿಂದ ಓದುವಂತೆ ಮಾಡುವ ಕೆಲಸ ಅಷ್ಟು ಸುಲಭವಲ್ಲ. 

ಬಾಲ್ಯ ಕಾಲದಲ್ಲಿ ಪ್ರಾರಂಭವಾದ ಗೆಳೆತನವನ್ನು ಕೊನೆಯುಸಿರು ಇರುವವರೆಗೂ ಕಾಯ್ದು ಕಾಪಾಡಿಕೊಂಡು ಬಂದಂತಹ ಇಬ್ಬರು ಆತ್ಮೀಯ ಸ್ನೇಹಿತೆಯರ ಕಥೆ ಧರಿತ್ರಿಯಲ್ಲಿ ಅಡಕವಾಗಿದೆ. ಜೀವನದ ಅನೇಕ ಘಟ್ಟಗಳಲ್ಲಿ 

ಹಲವು ರೀತಿಯ ಬದಲಾವಣೆಗಳಾದವು ಆದರೂ ತಮ್ಮಿಬ್ಬರ ಸ್ನೇಹವೆಂಬ ಪಾರಿಜಾತದ ಗಿಡವನ್ನು ನೀರೆರೆದು ಪೋಷಿಸಿದ್ದಾರೆ ಇಬ್ಬರೂ ಗೆಳತಿಯರು. ಗೆಳೆತನವೆಂಬುದು ಒಂದು ಅತ್ಯಮೂಲ್ಯ ಉಡುಗೊರೆ. ತಂದೆತಾಯಿ, ಒಡ ಹುಟ್ಟಿದವರು, ಮಕ್ಕಳು ಈ ಎಲ್ಲಾ ಸಂಬಂಧಗಳನ್ನೂ ಮೀರಿದ್ದು ಗೆಳೆತನ. ಆ ಗೆಳೆತನದ ಆಳ ಅಗಲಗಳನ್ನು ಈ ಇಬ್ಬರೂ ಗೆಳತಿಯರ ಕಥೆಯ ಮೂಲಕ ವಿಜಯಲಕ್ಷ್ಮಿ ಸತ್ಯಮೂರ್ತಿಯವರು *ಧರಿತ್ರಿ* ಕಾದಂಬರಿಯಲ್ಲಿ ಅನಾವರಣಗೊಳಿಸಿದ್ದಾರೆ. 

ಕಾದಂಬರಿಯ ಆರಂಭದಲ್ಲಿ ಪುಟ್ಟ ಮಕ್ಕಳಾದ ತೇಜಸ್ವಿನಿ ಹಾಗೂ ರುಕ್ಮಿಣಿ ಇವರಿಬ್ಬರ ಗೆಳೆತನ ಪ್ರಾರಂಭವಾದ ಪರಿಯನ್ನು ಅಷ್ಟೇ ನಾಜೂಕಾಗಿ ವಿವರಿಸಿದ್ದಾರೆ. ಪ್ರಾಥಮಿಕ ಶಾಲೆಯ ಓದಿನ ಹಂತದಲ್ಲಿ ಆದ ಅವರ ನಡುವಿನ  ಅನುಬಂಧವನ್ನು ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ. 

ಇಬ್ಬರ ನಡುವೆ ಎರಡು ವಯಸ್ಸಿನ ಅಂತರವಿದ್ದರೂ, ಅವರ ಸ್ನೇಹಕ್ಕೆ ವಯಸ್ಸು ಅಡ್ಡಿಯಾಗಲಿಲ್ಲ. ತೇಜು ಹೈಸ್ಕೂಲಿನ ಹಂತದಲ್ಲಿ ಇರುವಾಗ ರುಕ್ಕು ಅನಿವಾರ್ಯ ಕಾರಣಗಳಿಂದ ಅವಳಿಂದ ಸ್ವಲ್ಪ ದೂರ ಹೋಗಿ ವಾಸಿಸಬೇಕಾದ ಸಂದರ್ಭ ಹಾಗೂ ಅವರಿಬ್ಬರಿಗಾದ ಅಗಲಿಕೆಯ ನೋವನ್ನು ಮನಮುಟ್ಟುವಂತೆ ಲೇಖಕಿಯ ಬಿಂಬಿಸಿದ್ದಾರೆ.

ಇಬ್ಬರ ಮನೆಗಳೂ ಈಗ ದೂರವಿದ್ದರೂ ಅವರ ಸ್ನೇಹಕ್ಕೆ ಯಾವುದೇ ಕಡಿಮೆ ಇರಲಿಲ್ಲ. ಆಗಾಗ ಅವರ ಭೇಟಿಯ ಮೂಲಕ ಅವರ ಗೆಳೆತನವನ್ನು ಗಟ್ಟಿಗೊಳಿಸಿದ್ದ ರೀತಿಯನ್ನು ಕೂಡಾ ಬಹಳ ಸೊಗಸಾಗಿ ಚಿತ್ರಿಸಿದ್ದಾರೆ. ಪದವಿಯ ಹಂತವನ್ನು ಮುಗಿಸಿದಾಗ ತೇಜುವಿಗೆ ವರನನ್ನು ನೋಡಿ ವಿವಾಹ ಮಾಡಲು ಮನೆಯವರು ತೀರ್ಮಾನ ಮಾಡಿದಾಗ 

ಇಬ್ಬರಿಗೂ ಉಂಟಾದ ನೋವನ್ನು ಹಾಗೂ ಎಲ್ಲಾ ಸಂದರ್ಭದಲ್ಲೂ ಜೊತೆ ಇದ್ದು ತೇಜುವಿಗೆ ಸಮಾಧಾನ ಮಾಡುತ್ತಾ ಅವಳ ಜೊತೆ ಇದ್ದ ರುಕ್ಕುವಿನ ಸ್ನೇಹವನ್ನು ಓದುಗರ ಮನ ಮಿಡಿಯುವಂತೆ ವರ್ಣಿಸಿದ್ದಾರೆ. 

ವಿಧಿಯಾಟವೋ ಅಥವಾ ತೇಜುವಿನ ಹಣೆಬರಹವೋ

ಅವಳ ಜೀವನದಲ್ಲಿ ದಾಂಪತ್ಯದ ಮಧುರ ಮೈತ್ರಿಯ ಸಾಂಗತ್ಯ ದೊರೆಯದೇ ವಿವಾಹಿತಳಾದರೂ ಕನ್ಯೆಯಾಗಿಯೇ ಉಳಿಯಬೇಕಾಗಿ ಬಂದಂತಹ ವೈಪರಿತ್ಯವನ್ನು ವಿವರಿಸಿರುವ ರೀತಿಯು ಓದುಗರ ಮನಸ್ಸನ್ನೂ ಕೂಡಾ ಕಲಕಿ ತೇಜುವಿನ ಬಗ್ಗೆ ಮರುಗುವ ಹಾಗೆ ಮಾಡಿದೆ. ಆದರೂ ತನ್ನ ನೋವನ್ನು ಯಾರಲ್ಲೂ ಹೇಳಿಕೊಳ್ಳದೇ ನಗು ನಗುತ್ತಾ ಬದುಕನ್ನು ಸ್ವೀಕರಿಸಿದ ತೇಜುವಿನ ಸಹಿಷ್ಣುತೆಗೆ ಓದುಗರು ತಲೆಬಾಗಲೇಬೇಕು. ತನ್ನ ಆತ್ಮೀಯ ಗೆಳತಿಯಲ್ಲೂ ಕೂಡಾ ತನ್ನ ನೋವನ್ನು ಹೇಳದೇ, ಎಲ್ಲಿ ನೊಂದುಕೊಳ್ಳುವಳೋ ಗೆಳತಿ ಎನ್ನುವ ಅವಳ ಕಾಳಜಿಯನ್ನು ಓದುವಾಗ ಕಣ್ಣಲ್ಲಿ ನೀರು ಜಿನುಗಿದ್ದು ಸುಳ್ಳಲ್ಲ. 

ಕಾಲ ಕ್ರಮೇಣ ಒಬ್ಬರನ್ನು ಇನ್ನೊಬ್ಬರು ಭೇಟಿ ಮಾಡಲು ಸಾಧ್ಯವಾಗದೇ ಹೋದಾಗ ಪತ್ರಗಳ ಮುಖೇನ ಇವರಿಬ್ಬರ ಗೆಳೆತನ ಮುಂದುವರೆಯಿತು. ನಂತರದ ದಿನಗಳಲ್ಲಿ ರುಕ್ಕು ತೇಜು ಇರುವ ಊರಿಗೆ ವರ್ಗವಾದಾಗ ಇಬ್ಬರಿಗೂ ಆದ ಸಂತೋಷವನ್ನು ಬಹಳ ಚೆನ್ನಾಗಿ ವಿವರಿಸಿದ್ದಾರೆ. ಅಷ್ಟು ಹತ್ತಿರ ತನ್ನ ಗೆಳತಿ ಬಂದರೂ ಕೂಡಾ ತನ್ನ ವೈವಾಹಿಕ ಜೀವನದ ಗುಟ್ಟನ್ನು ಬಿಟ್ಟು ಕೊಡದೇ, ತೇಜು ತನ್ನ ನೋವನ್ನು ತಾನೊಬ್ಬಳೇ ನುಂಗಿಕೊಂಡು ನಗುತ್ತಿದ್ದ ರೀತಿಯಂತೂ ಓದುಗರನ್ನು ಯೋಚನೆಗೆ ತಳ್ಳಿದ್ದು ನಿಜ.

ಪತಿಯು ಕೆಲಸ ಕಳೆದುಕೊಂಡು ಕುಳಿತಾಗ ತಾನೇ ಗಾಣದೆತ್ತಿನಂತೆ ಸಂಸಾರದ ನೊಗ ಹೊತ್ತು ಒಂಟಿಯಾಗಿ ದುಡಿದು ಇಡೀ ಕುಟುಂಬವನ್ನೇ ತಾನು ಸಾಕುತ್ತಿದ್ದ ತೇಜುವಿನ ತಾಳ್ಮೆಯನ್ನು ಪದಗಳಲ್ಲಿ ಅಚ್ಚುಕಟ್ಟಾಗಿ ಹಿಡಿದಿಟ್ಟಿದ್ದಾರೆ ಲೇಖಕಿ.

ಪತಿಗೆ ಮೊದಲೇ ವಿವಾಹವಾಗಿ ಒಂದು ಮಗನೂ ಇರುವನು  ಎನ್ನುವ ವಿಷಯ ತಿಳಿದ ನಂತರವೂ ತನಗಾದ ಅನ್ಯಾಯವನ್ನು, ನೋವನ್ನು ಸಹಿಸಿದ ರೀತಿಯನ್ನು ಬರೆಯುವಾಗ ಲೇಖಕಿಯು ಅದೆಷ್ಟು ಮನಸ್ಸನ್ನು ಗಟ್ಟಿ ಮಾಡಿಕೊಂಡು ತೇಜುವಿನ ನೋವಿಗೆ ಸ್ಪಂದಿಸಿ ಕಥೆಯನ್ನು ಮುಂದುವರೆಸುತ್ತಾ ಸಾಗಿರಬಹುದು? ಎನ್ನುವ ಅರಿವು ಓದುಗರನ್ನು ಕಾಡುತ್ತದೆ. ರುಕ್ಕುವಿಗೆ ತೇಜು ಆಗಾಗ ಪತ್ರ ಬರೆಯುತ್ತಿದ್ದರೂ ಕೂಡಾ ಚುಟುಕಾಗಿ ತನ್ನ ನೋವಿನ ಕೆಲವು ಅಂಶಗಳನ್ನು ಬರೆಯುತ್ತಿದ್ದಳು. ಅದನ್ನು ಓದಿ ರುಕ್ಕು ಮರುಗಿ ಗೆಳತಿಗಾಗಿ ಏನನ್ನಾದರೂ ಮಾಡಲೇಬೇಕು ಎಂದು ತುಡಿಯುತ್ತಿದ್ದ ಪರಿಯನ್ನು ಬಹಳ ಚೆನ್ನಾಗಿ ವಿವರಿಸಿದ್ದಾರೆ. 

ಕಥೆಯ ನಡುವೆ ರುಕ್ಕು ಕೂಡಾ ಜೀವನದ ಏರಿಳಿತಗಳಲ್ಲಿ ಬಳಲಿ ಬೆಂಡಾಗಿರುತ್ತಾಳೆ. ತಂದೆ ತಾಯಿಯನ್ನು ಕಳೆದುಕೊಂಡು ಒಂಟಿಯಾಗಿ ಬಿಡುತ್ತಾಳೆ. ಇಂಥಹ ಸಮಯದಲ್ಲಿ ಅವಳ ಸಹೋದ್ಯೋಗಿ ಅವಳಿಗೆ ನೀಡುವ ಸಾಂತ್ವನ, ಆಸರೆಯನ್ನು ಕೂಡಾ ಅರ್ಥಪೂರ್ಣವಾಗಿ ಲೇಖಕಿಯು ವಿವರಿಸಿದ್ದಾರೆ. ರುಕ್ಕು ಹಾಗೂ ಮನೋಹರ್ ವಿವಾಹಿತರಾಗಿ ತೇಜುವನ್ನು ನೋಡಲು ಬಂದಾಗ ಅವಳಿಗೆ ಕೊಡುವ ಅಮೂಲ್ಯ ಉಡುಗೊರೆಯನ್ನು ಕೂಡಾ ತೇಜುವಿನ ಪತಿ ಹಾಗೂ ಮಗ ಕಿತ್ತುಕೊಂಡು ಇಬ್ಬರ ನಡುವೆ ಮಾತುಕತೆಗಾಗಿ ಇದ್ದ ಆ ಕೊಂಡಿಯನ್ನು ಕೂಡಾ ಇಲ್ಲದಂತೆ ಮಾಡುವ ರೀತಿಯನ್ನು ಓದಿದಾಗ ಕಣ್ಣು ಮಂಜಾಗಿ ಒಂದು ಕ್ಷಣ ಓದುವುದನ್ನು ನಿಲ್ಲಿಸಿ, ಅಯ್ಯೋ ವಿಧಿಯೇ!!! ನೀನೆಷ್ಟು ಕ್ರೂರಿ ಎನ್ನುವ ಭಾವವೊಂದು ಓದುಗರಲ್ಲಿ ಮೂಡಿಸುತ್ತದೆ.

ಹದಿ ಹರೆಯದಲ್ಲಿ ತನ್ನ ಮನವನ್ನು ಕದ್ದ ಹುಡುಗನ ಪ್ರೀತಿಯನ್ನು ಕೂಡಾ ಕೊನೆವರೆಗೂ ಗೆಳತಿಯಲ್ಲಿ  ಹೇಳದೇ ಉಳಿದಿದ್ದಳು ತೇಜು. ಅವನ ಆಕಸ್ಮಿಕ ಭೇಟಿಯನ್ನು ಪತಿ ಕಂಡು, ತನ್ನಿಂದಾಗಿ ತೇಜುವಿನ ಜೀವನ ಹಾಳಾಗಿದ್ದನ್ನು ಮುಚ್ಚಿಟ್ಟು ಪತಿಯಾದವನು ಅವಳನ್ನೇ ತಪಿತಸ್ಥೆಯನ್ನಾಗಿ ಮಾಡಿ ನಿಲ್ಲಿಸುತ್ತಾನೆ. ಅವಳನ್ನು ಆಗಾಗ ಅನಾರೋಗ್ಯ ಕಾಡಿದಾಗಲೂ ಅವಳನ್ನೇ ನಿಂದಿಸಿ ಮೂಲೆಗುಂಪು ಮಾಡಿದ ಪತಿ. ಅಯ್ಯೋ ವಿಧಿಯೇ ಏನಿದು ನಿನ್ನ ಆಟ ಎನ್ನುವಷ್ಟು ಮನವನ್ನು ಕಾಡುತ್ತದೆ ಈ ಕಾದಂಬರಿ.

ಅನಾರೋಗ್ಯಕ್ಕೆ ತುತ್ತಾಗಿ ಗೆಳತಿ ಮಡಿದ ನಂತರ ಅವಳ ಮನೆಗೆ ಬಂದಾಗ ತನಗಾಗಿ ತೇಜು ಬರೆದಿಟ್ಟ ಡೈರಿಯನ್ನು ಓದಿದ ರುಕ್ಕುವಿನ ಮಾನಸಿಕ ತಲ್ಲಣವನ್ನು ಮನೋಜ್ಞವಾಗಿ ಬಿಡಿಸಿ ಹೇಳಿದ್ದಾರೆ ಲೇಖಕಿ. ನಂತರದ ದಿನಗಳಲ್ಲಿ ತನ್ನ ಪ್ರಿಯ ಆತ್ಮೀಯ ಗೆಳತಿಯ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಗೆಳತಿ ರುಕ್ಕು ಪಡುವ ಶ್ರಮ ಹಾಗೂ ತನ್ನ ಪತ್ನಿಯ ಜೊತೆಗೆ  ಸಂಪೂರ್ಣ ಮನಸ್ಸಿನಿಂದ ಜೊತೆ ನಿಂತು ಅವಳ ಜವಾಬ್ದಾರಿಗಾಗಿ ತಾನು ಎಂದೋ ಖರೀದಿಸಿದ ಜಮೀನನ್ನು ಮಾರಿ, ರುಕ್ಕುವಿಗೆ ಹೆಗಲಾಗಿ ನಿಲ್ಲುವ ಪತಿ ಮನೋಹರ್ ರವರ ವಿಶಾಲ ಮನೋಭಾವವನ್ನು ಮನ ಮುಟ್ಟುವಂತೆ  ಓದುಗರ ಮುಂದೆ ಲೇಖಕಿ ತೆರೆದಿಟ್ಟಿದ್ದಾರೆ. ಹೆಣ್ಣುಮಕ್ಕಳ ಜೀವನವನ್ನು ಹಸನುಗೊಳಿಸಲು ಇವರಿಬ್ಬರೂ ಮಾಡಿದ ತ್ಯಾಗ ನಿಜಕ್ಕೂ ಇತರರಿಗೂ ಪ್ರೇರಕ. 

ಧರಿತ್ರಿಗೆ ಹಲವಾರು ಖ್ಯಾತನಾಮರು ಹಾರೈಕೆಯ ನುಡಿಗಳನ್ನು ಬರೆದಿದ್ದಾರೆ. ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ ಸಾಹಿತಿ ಮತ್ತು ಮಕ್ಕಳ ಹೃದಯ ತಜ್ಞೆ ಇವರು *ಧರಿತ್ರಿ*

“ಒಂದು ಅನುಪಮ ಅಮೋಘ ಕೃತಿ” ಎಂದು ಹೇಳಿದ್ದಾರೆ.

ಡಾ. ನಾಗ ಎಚ್. ಹುಬ್ಳಿ ಪ್ರಾಧ್ಯಾಪಕರು ರಾಂಚಿ ವಿಶ್ವವಿದ್ಯಾಲಯ, ಝಾರ್ಖಂಡ್ ರವರು “ನವಿರಾದ ನಿರೂಪಣೆಯ ವಿನೂತನ ಕಾದಂಬರಿ” ಎಂದು ತಿಳಿಸಿದ್ದಾರೆ. ನಿಡಸಾಲೆ ಪುಟ್ಟಸ್ವಾಮಯ್ಯ ಸಾಹಿತಿ,ನಟ, ನಿರ್ಮಾಪಕ ಹಾಗೂ ಸಂಘಟಕ ಇವರು “ಸಾಹಿತ್ಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತ್ಯುತ್ತಮ ಸಂಘಟಕಿ” ಎಂದು ಲೇಖಕಿಯನ್ನು ಮನಸಾರೆ ಹೊಗಳಿದ್ದಾರೆ. ನೊಣವಿನಕೆರೆ ರಾಮಕೃಷ್ಣಯ್ಯ ಲೇಖಕರು, ಕಲಾವಿದರು ಹಾಗೂ ವಕೀಲರು ” ಇಡೀ ಧರಿತ್ರಿಯಲ್ಲಿ ಹೆಮ್ಮೆಯ ಕುವರಿ. ತಮ್ಮ ಸಾಹಿತ್ಯ ಪ್ರತಿಭೆಯಿಂದ ಪ್ರಖ್ಯಾತರಾಗಲಿ” ಎಂದು ಹರಸಿದ್ದಾರೆ. ಹಿರಿಯ ಸಾಹಿತಿಗಳಾದ ಟಿ.ಕೆ. ವೆಂಕಟರಮಣ ಭಾರತಿಯವರು “ಲೇಖಕಿಯ ಮಾರ್ಗದಲ್ಲಿ ಸುಂದರ ಪುಷ್ಪಗಳು ಉದಿಸಲಿ. ಹೊಂಗೆಯ ತಂಪು ಮಲ್ಲಿಗೆಯ ಕಂಪು ದಾರಿಯುದ್ದಕ್ಕೂ ಲಭಿಸಲಿ” ಎಂದು ಹಾರಸಿದ್ದಾರೆ. ಡಾ. ಹೆಚ್. ಎಸ್. ಗಣೇಶ ಭಟ್ಟ ಶಿಕ್ಷಣ ತಜ್ಞ, ರಾಜ್ಯ ಮತ್ತು ರಾಷ್ಟ್ರಮಟ್ಟದ ಸಂಪನ್ಮೂಲ ವ್ಯಕ್ತಿ ಇವರು “ನೋವು ನಲಿವುಗಳ ಸುರುಳಿ” ಎಂದು ಕಾದಂಬರಿಯನ್ನು ವರ್ಣಿಸಿದ್ದಾರೆ. ಅಪರ್ಣಾ ಎನ್. ನಟಿ, ನಿರೂಪಕಿ ಇವರು “ಅನಿರೀಕ್ಷಿತ ತಿರುವುಗಳ ಧರಿತ್ರಿ ಎಂದು ಹೇಳುತ್ತಾ ಲೇಖಕಿಯ ವಿಜಯ ಪತಾಕೆ ಹಾರುತ್ತಿರಲಿ” ಎಂದು ತುಂಬು ಹೃದಯದಿಂದ ಹಾರೈಸಿದ್ದಾರೆ. ರಾ. ಸು. ವೆಂಕಟೇಶ( ಮಾತಿನ ಮನೆ)

ಕನ್ನಡಪರ ಚಿಂತಕರು, ಬರಹಗಾರರು “ಇದೊಂದು ಹೃದಯ ಕಲಕುವ ಸ್ನೇಹಮಯ ಕಥೆ. ಲೇಖಕಿಯ ಸಾಹಿತ್ಯ ಕೃಷಿ ನಿರಂತರ ಸಾಗಿ, ಉತ್ತಮ ಫಸಲು ನಾಡಿಗೆ ಪಸರಿಸಲಿ” ಎಂದು ಆತ್ಮೀಯತೆಯಿಂದ ಹರಸಿದ್ದಾರೆ. ಈ ಎಲ್ಲರ ಹಾರೈಕೆಗಳನ್ನು ಓದುವಾಗ ಧರಿತ್ರಿ ಒಂದು ಉತ್ತಮ ಸಾಮಾಜಿಕ ಸಂದೇಶ ಹೊತ್ತ ಅದ್ಭುತ ಕಾದಂಬರಿ ಎನ್ನುವುದರಲ್ಲಿ ಸಂಶಯವಿಲ್ಲ.

ಇಂಥಹ ವಿಶೇಷ ಕೃತಿಯನ್ನು ರಚಿಸಿದಂತಹ  ಲೇಖಕಿ ಡಾ.ವಿಜಯಲಕ್ಷ್ಮಿ ಸತ್ಯಮೂರ್ತಿಯವರಿಂದ ಇನ್ನೂ ಅನೇಕ ಸುಂದರ, ಅದ್ಭುತ ಕೃತಿಗಳು ರಚಿತವಾಗಲಿ.  ಸಮಾಜದ ಕಣ್ಣು ತೆರೆಸುವಂತಹ ಕಾದಂಬರಿಗಳು ಸೃಷ್ಟಿಯಾಗಿ ಸಮಾಜದ ಒಳಿತಿಗೆ ಕಾರಣವಾಗಲಿ ಎಂದು ಹಾರೈಸುತ್ತೇನೆ.

ಇದೊಂದು ಅಪರೂಪದ ಸ್ನೇಹದ ಕಥೆ. ದಯವಿಟ್ಟು ಆಸಕ್ತರು ಕೊಂಡು ಓದಿ ಲೇಖಕಿಯನ್ನು ಹಾಗೂ ಅವರ ಬರಹವನ್ನು ಪ್ರೋತ್ಸಾಹಿಸಿ ಎಂದು ವಿನಂತಿಸಿಕೊಳ್ಳುತ್ತೇನೆ.

2 thoughts on “ಡಾ. ವಿಜಯಲಕ್ಷ್ಮಿ ಸತ್ಯಮೂರ್ತಿ ಅವರ ಕೃತಿ ‘ಧರಿತ್ರಿ’ ಒಂದು ಅವಲೋಕನ ರುಕ್ಮಿಣಿ ನಾಯರ್

  1. ವಾವ್….ಅದ್ಭುತ ಪುಸ್ತಕಕ್ಕೆ ಅದ್ಭುತ ವಿಮರ್ಶೆ… ತುಂಬಾ ಸುಂದರವಾಗಿ ಬರೆದಿದ್ದೀರಿ .ಅಭಿನಂದನೆಗಳು ಇಬ್ಬರಿಗೂ

  2. ಸೊಗಸಾದ ಪ್ರಕಟಣೆಗಾಗಿ ಸಂಗಾತಿ ಬಳಗಕ್ಕೆ ನನ್ನ ಕೃತಜ್ಞತೆಗಳು ಹಾಗೂ ಹೃತ್ಪೂರ್ವಕ ಧನ್ಯವಾದಗಳು

Leave a Reply

Back To Top