ಕಾಡಬೇಡವೆಂದರೂ ಕಾಡುತ್ತಲೇ ಇರುವ, ಸದಾ ಎದೆ ಗೂಡಲ್ಲಿ ಹಾಡಾಗುತ್ತಲೆ ಇರುವ ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರ ಕಾವ್ಯಧಾರೆ ಮಾನವ್ಯದ ಶರಧಿ

ವಿಶೇಷಬರಹ

ಕಾಡಬೇಡವೆಂದರೂ ಕಾಡುತ್ತಲೇ ಇರುವ,

ಸದಾ ಎದೆ ಗೂಡಲ್ಲಿ ಹಾಡಾಗುತ್ತಲೆ ಇರುವ

ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರ

ಕಾವ್ಯಧಾರೆ ಮಾನವ್ಯದ ಶರಧಿ

ಸುಹೇಚ ಪರಮವಾಡಿ

ಸದಾ ಕಾಡುವ ಜಿ. ಎಸ್. ಶಿವರುದ್ರಪ್ಪನವರ ಸಮನ್ವಯ ಕವಿತೆಗಳು

          ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ
ನಾಲ್ಕು ಹನಿಯ ಚೆಲ್ಲಿ
ದಿನದಿನವು ಕಾದು ಬಾಯಾರಿ ಬೆಂದೆ
ಬೆಂಗದಿರ ತಾಪದಲ್ಲಿ .

              ನನ್ನೆದೆಯ ಹಸಿರ ಉಸಿರು ಕುಗ್ಗಿದರು
              ಬರಲಿಲ್ಲ ನಿಮಗೆ ಕರುಣ
              ನನ್ನ ಹೃದಯದಲಿ ನೋವು ಮಿಡಿಯುತಿದೆ
              ನಾನು ನಿಮಗೆ ಶರಣ.

ಬಡವಾಗದ ನನ್ನ ಒಡಲುರಿಯ ಬೇಗೆ
ನಿಮಗರಿವು ಆಗಲಹುದೇ?
ನೀಲಗಗನದಲಿ ತೇಲಿ ಹೋಗುತಿಹ
ನಿಮ್ಮನೆಳೆಯಬಹುದೇ?

              ಬಾಯುಂಟು ನನಗೆ, ಕೂಗಬಲ್ಲೇನಾ
              ನಿಮ್ಮೆದೆಯ ಪ್ರೇಮವನ್ನು.
              ನೀವು ಕರುಣಿಸಲು ನನ್ನ ಹಸಿರೆದೆಯು
              ಉಸಿರುವುದು ತೋಷವನ್ನು.

ಓ ಬನ್ನಿ ಬನ್ನಿ, ಓ ಬನ್ನಿ ಬನ್ನಿ
ನನ್ನೆದೆಗೆ ತಂಪತನ್ನಿ,
ನೊಂದ ಜೀವರಿಗೆ ತಂಪನೀಯುವುದೇ
ಪರಮ ಪೂಜೆಯೆನ್ನಿ
.

                      ಇಂದು ನಾಡಿನಾದ್ಯಂತ ಬರದ ಛಾಯೆ ಆವರಿಸಿದೆ. ಅನಾವೃಷ್ಟಿಯ ಕಾರಣ ಬೆಳೆಯಲ್ಲದೆ, ತಂಪು ಗಾಳಿಯಿರದೆ, ಸುಡುವ ಬಿಸಲ ಧಗೆಯಲ್ಲಿ ರೈತಾಪಿ ಜನ, ಕೂಲಿ – ಕಾರ್ಮಿಕರ ಬದುಕು ಜರ್ಜರಿತವಾಗಿದೆ. ಜನಜಾನುವಾರಕ್ಕೆ ಕುಡಿಯಲು ಮತ್ತು ನಿತ್ಯ ಕಾರ್ಯ ಚಟುವಟಿಕೆಗಳಿಗೆ ನೀರು ಸಿಗದೆ ಪರದಾಡುವಂತಿದೆ. ಆಹಾರಕ್ಕಾಗಿ ಮುನುಷ್ಯರು ಪ್ರಾಣಿ ಪಕ್ಷಿಗಳು ನರಳುವಂತಾಗಿದೆ. ಮುಂಗಾರಿ ಮತ್ತು ಹಿಂಗಾರಿ ಮಳೆಯ ಸುಳಿಯಿಲ್ಲದೆ ನದಿ, ಕೆರೆ, ಬಾವಿ, ನಾಲೆ, ಹಳ್ಳ – ಕೊಳ್ಳ, ಹೊಳೆ ಬತ್ತುವ ಹಂತಕ್ಕೆ ತಲುಪಿವೆ. ಇಂತಹ ಕ್ಷಾಮ ಆಗಾಗ ಬರುತ್ತಲೇ ಇರುತ್ತದೆ ಇದನ್ನು ನೋಡಿ ಕವಿ ಜಿ. ಎಸ್. ಎಸ್ ಶಿವರುದ್ರಪ್ಪನವರು ಆಗಸದಲ್ಲಿ ತೇಲುವ ರಾಸಿ ರಾಸಿ ಕಪ್ಪು ಮೋಡಗಳು ಹನಿ ಉದುರಿಸಿ ಬೆಂದ ಭೂವಡಲು ತಣಿಸದೆ ಮಗೃಜಲದಂತೆ ಮಂಗಮಾಯವಾಗುತ್ತಿರುವುದು ಕವಿ ಹೃದಯಕ್ಕೆ ನಿರಾಸೆ ತಂದಿದೆ. ರೈತಾಪಿ ಜನರ ನೋವು ತಮ್ಮದೆ ಎಂಬತೆ ಸಂಕೇತಿಸಿ ಬರೆದ ಕವಿತೆ ಸದಾ ಕಾಲವು ಕಾಡುತ್ತದೆ ಮತ್ತು ಈ ಬರಗಾಲಕ್ಕೆ ಕನ್ನಡಿ ಹಿಡಿದಿದೆ. ಓ ಬನ್ನಿ…. ನೊಂದ ಜೀವರಿಗೆ ತಂಪನೀಯುವುದೇ
ಪರಮ ಪೂಜೆಯೆನ್ನಿ. ಎಂಬುದಾಗಿ ಮಳೆರಾಯನಲ್ಲಿ ನಿವೇದಿಸಿಕೊಳ್ಳುತ್ತಾರೆ. ಇದರಿಂದ ಎಚ್ಚೆತ್ತುಕೊಂಡು ಜನ ಗಿಡ – ಮರ ಬೆಳೆಸಿ, ಬೆಡ್ಡ – ಗುಡ್ಡ ಉಳಿಸಿ, ಸಮೃದ್ಧ ಮಳೆ – ಬೆಳೆಗೆ ಒಗ್ಗಟ್ಟಿನಿಂದ ಪರುಶ್ರಮಿಸಿದಾಗ ಮಾತ್ರ ಬರದಿಂದ ತಪ್ಪಸಿಕೊಳ್ಳಲು ಸಾಧ್ಯ.

                   ಪೂರ್ವದಿಂದ ಜನಗಣಮನ – ಗೀತಾಂಜಲಿ – ವಿಶ್ವ ಭಾರತಿಯ ಗುರುದೇವ ಬಂಗಾಳದ ವಿಶ್ವಕವಿ ರವೀಂದ್ರನಾಥ ಠಾಗೋರ್ ರ ಕಾವ್ಯಸೆಲೆ ದಕ್ಷಿಣದಿಂದ ಚಿಕ್ಕಮಗಳೂರು ಮಲೆನಾಡ ಮಡಿಲಿನ ವಿಶ್ವಮಾನವ ಕವಿ ರಾಮಾಣ ದರ್ಶನದ ಕುವೆಂಪುರವರ ಕಾವ್ಯ ಸಾಗರ, ಉತ್ತರದಿಂದ ಮಲೆನಾಡ ಸೆರಗಂಚಿನ ಸಾಧನ ಕೆರೆ ಸಾಧಕ ನಾಕುತಂತಿಯ ವರಕವಿ ಬೇಂದ್ರೆಯವರ ಜನಪದ ಕಾವ್ಯದ್ಹೊಳೆ, ಹಲವು ಶರಣ – ಸಂತರ, ವಚನ – ಕಿರ್ತನೆ ಪಂಕ್ತಿಗಳು ಸಾಲುಸಾಗಿ ಕಾಡುತ್ತಲೆ ಇರುತ್ತವೆ. ಹಾಡಾಗಿ ಎದೆಗೂಡಲಿ ಆಳವಾದ ಚಿಂತನೆಗಿಡು ಮಾಡುತ್ತಲೆ ಇರುತ್ತವೆ. ಸಮಾಜಮುಖಿಯಾಗಿ ಕಾರಂಜಿಸುತ್ತಲೆ ಇರುತ್ತವೆ. ಅಂತೆಯೆ ಸ್ವರ್ಗದೈಸಿರಿಯಂತಿರುವ ಶಿವಮೊಗ್ಗದ ಜೀವಪರ ಕವಿ – ಸಮನ್ವಯ ಕವಿ ಕನ್ನಡದ ೦೩ನೇ ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರ ಕವಿತೆಗಳು ನನಗೆ ಕಾಡಬೇಡವೆಂದರು ಅನಂತ ತಾನ್ ಅನಂತವಾಗಿ ಕಾಡುತ್ತಲೇ ಇರುತ್ತವೆ. ಮನಸಿನೊಳಗೆ – ಕನಸಿನಾಚೆ, ಗುಡಿಯಲ್ಲಿ – ಗಡಿಯಾಚೆಗೆ, ನಾಡಿನಲ್ಲಿ – ನಾಡಿನಾಚೆಗೆ, ನುಡಿಯಲ್ಲಿ – ನಾಡಿಯಲ್ಲಿ, ಪ್ರತಿ ಹೃದಯ ಬಡಿತದಲ್ಲಿ ಉಸಿರಾಗಿ – ಹಸಿರಾಗಿ – ಹಸನಾಗಿ ಮಾರ್ದನಿಸುತ್ತಲೇ ಇರುತ್ತವೆ. ಊರು – ಕೇರಿ, ಓಣಿ – ಓಣಿಯ ಜನ – ಜಾನುವಾರ, ಮಣ್ಣಿನ ಕಣ – ಕಣದಲ್ಲಿ ಕಾವ್ಯಗಂಧ ಪಸರಿಸುತ್ತಲೇ ಇರುತ್ತದೆ. ಆ ಗೀತೆಗಳ ಕೆಲ ಪಲ್ಲವಿ, ಚರಣ, ಸಾಲುಗಳ ಅರ್ಥ ಸ್ವಾರಸ್ಯ ವಿವರಣೆಯೊಂದಿಗೆ ಇಲ್ಲಿ ಉಲ್ಲೇಖಿಸಲು ಹರ್ಷಿಸುತ್ತೇನೆ. ಸಹೃದಯರಿಗೆ ಉಣಬಡಿಸಲು ಇಚ್ಚಿಸುತ್ತೇನೆ.

ಯಾವ ಹಾಡು ಹಾಡಲಿ ಯಾವ ಹಾಡಿನಿಂದ ನಿಮಗೆ
ನೆಮ್ಮದಿಯನು ನೀಡಲಿ?

ಸುತ್ತ ಮುತ್ತ ಮನೆ ಮಠಗಳು | ಹೊತ್ತಿಕೊಂಡು ಉರಿಯುವಲ್ಲಿ
ಸೋತು ಮೂಕವಾದ ಬದುಕು | ನಿಟ್ಟುಸಿರೊಳು ತೇಲುವಲ್ಲಿ| ಯಾವ ಹಾಡು ಹಾಡಲಿ || ೧ ||

ಬರಿ ಮಾತಿನ ಜಾಲದಲ್ಲಿ | ಶೋಷಣೆಗಳ ಶೂಲದಲ್ಲಿ
ವಂಚನೆಗಳ ಸಂಚಿನಲ್ಲಿ | ಹಸಿದ ಹೊಟ್ಟೆ ನೆರಳುವಲ್ಲಿ |
ಯಾವ ಹಾಡು ಹಾಡಲಿ || ೨ ||

ಉರಿವ ಕಣ್ಣ ಚಿತೆಗಳಲ್ಲಿ | ಇರುವ ಕನಸು ಸೀಯುವಲ್ಲಿ
ಎದೆ ಎದೆಗಳ ಜ್ವಾಲಾಮುಖಿ | ಹೊಗೆ ಬೆಂಕಿಯ ಕಾರುವಲ್ಲಿ| ಯಾವ ಹಾಡು ಹಾಡಲಿ || ೩ ||

ಬೆಳಕಿಲ್ಲದ ದಾರಿಯಲ್ಲಿ | ಪಾಳುಗುಡಿಯ ಸಾಲಿನಲ್ಲಿ
ಬಿರುಗಾಳಿಯ ಬೀಡಿನಲ್ಲಿ | ಕುರುಡ ಪಯಣ ಸಾಗುವಲ್ಲಿ| ಯಾವ ಹಾಡು ಹಾಡಲಿ || ೪ ||


                ಸ್ವಾರ್ಥಿಗಳ ಕೂಟದಲ್ಲಿ ದ್ವೇಷಿಗರ, ಕೇಡಿಗರ, ರಕ್ತ ಪಿಪಾಸು ನರ ರಕ್ಕಸರ ಅಟ್ಟಹಾಸಕ್ಕೆ ಮುಗ್ದ ಜನರ, ಜನಸಾಮಾನ್ಯರ ಬದುಕು ಅತಂತ್ರ ಆಗಿರುವುದನ್ನು ಕಂಡು, ಮನನೊಂದು, ನೋವುಂಡು, ವೈರ – ಮತ್ಸರ, ಯುದ್ಧ, ಜಗಳ, ಒಳಸಂಚಿನ ಚೂರಿ ಇರಿತ, ಬಾಂಬು, ಗನ್ನುಗಳ ಸದ್ದಿಗೆ ಅಮಾಯಕರು ಬಲಿಯಾಗುವುದನನ್ನು ಕಂಡು ಕವಿ ಜಿ. ಎಸ್. ಎಸ್ ರವರು ಬರೆದ ಅನುಭಾವ ಕವಿತೆ. ಪ್ರಸ್ತುತ ಇಸ್ರೇಲ್ – ಹಮಾಸ್ ಯುದ್ಧ ನಡೆದು ಮಕ್ಕಳು, ಮಹಿಳೆಯರು, ಜನಸಾಮಾನ್ಯರ ಮಾರಣ ಹೋಮ ನಡೆದು ವಿಶ್ವದ ಎಲ್ಲ ಜನರಲ್ಲಿ ಆತಂಕ ಹುಟ್ಟಿಸಿರುವುದನ್ನು ನಾವೆಲ್ಲರೂ ದೃಷ್ಯ ಮಾಧ್ಯಮದ ಮೂಲಕ ನೋಡಿ ರೋಧಿಸುತ್ತಿರುವುದು ಈ ಕವನ ಮಾನವನ ಕ್ರೌರ್ಯವನ್ನು ಟೀಕಿಸುತ್ತದೆ. ಬೆಳಕಿನಲ್ಲೂ ಕತ್ತಲೆ ತುಂಬಿರುವುದನ್ನು ಕೊಲೆ, ಸುಲಿಗೆ, ದರೋಡೆ, ದಗಲ್ಬಾಜಿತನದ ಒಳಾರ್ಥವನ್ನು ಕವಿತೆ ಅನಾವರಣಗೊಳಿಸುತ್ತಿದೆ. ಸತ್ಯ, ಶಾಂತಿ, ಸಾಮರಸ್ಯ ಸಮನ್ವತೆಯಯಿಂದ ಕೂಡಿಬಾಳಲು ಕರೆ ನೀಡುತ್ತಿದೆ.

                     ಸಾಮಗಾನ (೧೯೪೭), ಚೆಲುವು-ಒಲವು (೧೯೫೧), ದೇವಶಿಲ್ಪ (೧೯೫೩), ದೀಪದ ಹೆಜ್ಜೆ (೧೯೫೬), ಕಾರ್ತಿಕ (೧೯೫೯), ಅನಾವರಣ (೧೯೬೧), ತೆರೆದ ದಾರಿ (೧೯೬೩), ಗೋಡೆ (೧೯೬೬), ಕಾಡಿನ ಕತ್ತಲಲ್ಲಿ (೧೯೭೨), ಪ್ರೀತಿ ಇಲ್ಲದ ಮೇಲೆ (೧೯೮೨), ಚಕ್ರಗತಿ (೧೯೮೭), ವ್ಯಕ್ತಮಧ್ಯ (೧೯೯೩), ಅಗ್ನಿಪರ್ವ (೨೦೦೦), ತೀರ್ಥವಾಣಿ (೧೯೫೩), ಜಾರಿದ ಹೊವು, ಸಮಗ್ರ ಕಾವ್ಯ, ಎದೆತುಂಬಿ ಹಾಡಿದೆನು, ಮೇರಾ ದಿಯಾ ಮತ್ತು ಇತರ ಕವನಗಳು (ರಾಜಮಂಗಲ ಪಬ್ಲಿಕೇಷನ್ಸ್ ೨೦೨೨) ಕುವೆಂಪುರವರನ್ನು ಗುರುವಾಗಿ ಸ್ವೀಕರಿಸಿ ಸಮಾಜೀಕ ಸಮಾನತೆ, ರಾಷ್ಟ್ರೀಯತೆ, ವಿಶ್ವ ಪ್ರೇಮವನ್ನು ತಮ್ಮ ಕವನ ಸಂಕಲನಗಳಲ್ಲಿ ದಾಖಲಿಸಿದ್ದಾರೆ.

                 ಒಟ್ಟು ೫೯೧ ಕವಿತೆಗಳು ೩೯ ಅನುವಾದಿತ ಕವಿತೆಗಳು ೧೮ ಕವನ ಸಂಕಲನಗಳು ಇವರ ಕಾವ್ಯ ಪ್ರೀತಿಗೆ ಹಿಡಿದ ಕೈಗನ್ನಡಿಯಾಗಿದೆ. ಇವರ ಕಾವ್ಯಾರ್ಥ ಚಿಂತನ’ ವಿಮರ್ಶಾ ಕೃತಿಗೆ ೧೯೮೪ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಒಲಿದು ಬಂತು. ಗೋವಿಂದ ಪೈ, ಕುವೆಂಪು ನಂತರ ‘ರಾಷ್ಟ್ರಕವಿ’ ಗೌರವಕ್ಕೆ ಪಾತ್ರರಾದ ಬಳಿಕ ನವೆಂಬರ್ ೧, ೨೦೦೬ ಸುವರ್ಣ ಕರ್ನಾಟಕ ರಾಜ್ಯೋತ್ಸವದಂದು ಶಿವರುದ್ರಪ್ಪನವರನ್ನು ರಾಷ್ಟ್ರಕವಿ ಎಂದು ಘೋಷಿಸಲಾಯಿತು. ಅವರನ್ನು ಸಮನ್ವಯ ಕವಿ ಎಂದೇ ಗುರುತಿಸಲಾಗುತ್ತದೆ.

ಹಾಡು…ಹಾಡು …ಹಾಡು ಹಳೆಯದಾದರೇನು ಭಾವ ನವನವೀನ..
ಎದೆಯ ಭಾವ ಹೊಮ್ಮುವುದಕೆ ಭಾಷೆ ಒರಟು ಯಾನ….

ಹಳೆಯ ಹಾಡು ಹಾಡು ಮತ್ತೆ ಅದನೆ ಕೇಳಿ ತಣಿಯುವೆ
ಹಳೆಯ ಹಾಡಿನಿಂದ ಹೊಸತು ಜೀವನಾ ಕಟ್ಟುವೆ…..

ಹಮ್ಮು ಬಿಮ್ಮು ಒಂದೂ ಇಲ್ಲ ಹಾಡು ಹೃದಯ ತೆರೆದಿದೆ
ಹಾಡಿನಲ್ಲಿ ಲೀನವಾಗಲೆನ್ನ ಮನವು ಕಾದಿದೆ.

                  ಮನುಷ್ಯನ ಜೀವನದ ಪಾಡುಗಳು ಹಾಡಾಗಿ ಆಗಾಗ ಕಾಡುತ್ತಲೇ ಇರುತ್ತವೆ. ಅದನ್ನೇ ಮತ್ತೇ ಮತ್ತೇ ಹಾಡಲು ಬಹಳ ಜನ ಇಷ್ಟಪಡಲ್ಲ. ಆದರೆ ನಮಗಾದ ಅಪಮಾನ – ನಿಂದೆ, ಮಾನ – ಸನ್ಮಾನಗಳಿಂದ ಕಲಿತ ಪಾಠದಿಂದ ನಾವು ಉನ್ನತವಾದದ್ದನ್ನು ಸಾಧಿಸಬೇಕು. ಹಳೆಯ ಸಂಗತಿಗಳಿಂದ ಹೊಸ ಬದುಕು ಕಟ್ಟಬೇಕು. ಸವಾಲಾಗಿ ಜೀವನ ಮುನ್ನಡೆಸುತ್ತಾ ನಿರ್ಹಂಕಾರಿಗಳಾಗಿ ನಿರ್ಮಲ ಬದುಕು ನಡೆಸಬೇಕೆಂಬುದು ನಾಡೋಜ ಶಿವರುದ್ರಪ್ಪನವರ ಆಶಯ. ಎಲ್ಲರಿಗೂ ಅನ್ವಯಿಸುತ್ತದೆ. ಇತ್ತಿನ ಚಲನಚಿತ್ರ ಗೀತೆಗಳ ಕರ್ಣ ಕಠೋರ ಅರ್ಥ – ಅನರ್ಥ ನಿಸ್ಸಾರ ಗೀತೆಗಳನ್ನು ಕೇಳಲು ಮನ್ಸಾಗದೆ ಆ ಮಧುರ – ಸುಮಧುರ ೭೦ – ೮೦ ರ ದಶಕದ ಹಾಡುಗಳು ಮತ್ತೇ ಮತ್ತೇ ಕಾಡುತ್ತವೆ. ಈ ದಿಸೆಯಲ್ಲಿ ಜಿ. ಎಸ್.ಎಸ್ ಬರೆದಿರುವ ಹಾಡು ಹಳೆಯದಾದರೇನು ಭಾವ ನವನಜೀವನ ಎಂಬುದು ಅಕ್ಷರಶಃ ಸತ್ಯ.

ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೆ ||

ಎಲ್ಲಿದೆ ನಂದನ, ಎಲ್ಲಿದೆ ಬಂಧನ
ಎಲ್ಲಾ ಇದೆ ಈ ನಮ್ಮೊಳಗೆ
ಒಳಗಿನ ತಿಳಿಯನು ಕಲಕದೆ ಇದ್ದರೆ
ಅಮೃತದ ಸವಿಯಿದೆ ನಾಲಿಗೆಗೆ ||

ಹತ್ತಿರವಿದ್ದೂ ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆಯೆಂಬುದು
ನಾಲ್ಕುದಿನದ ಈ ಬದುಕಿನಲಿ |
|

                         ಕಲ್ಲು – ಮಣ್ಣಿನ ಗುಡಿಯೊಳಗೆ ಹಣ್ಣು – ಕಾಯಿ, ಕರ್ಪೂರ ಬೆಳಗಿಸಿ ಪೂಜೆ – ಪುನಸ್ಕಾರಗಳಿಂದ ಮಾತ್ರ ದೇವರು ಒಲಿಯುವುದಿಲ್ಲ. ಬದಲಿಗೆ ನಮ್ಮಂತೆಯ ನಮ್ಮ ನೆರೆಯವರಿಗೆ ನೆರೆಯಾಗಬೇಕು. ಬಡವರ ಬಡತನದ ಹೊರೆ ಇಳಿಸಬೇಕು ಪ್ರೀತಿ, ಸ್ನೇಹ, ಕಾರುಣ್ಯದಿಂದ ಕಾಣಬೇಕು. ಹೊಂದಾಣಿಕೆಯ ಜೀವನ ಸಾಕ್ಷಾತ್ಕಾರಕ್ಕೆ ದಾರಿಯಾಗಿದೆ ಎಂಬುದನ್ನು ಮಾರ್ಮಿಕವಾಗಿ ಹೇಳಿದ್ದಾರೆ. ಗುಡಿ ಚರ್ಚು ಮಸೀದಿ ಬಿಟ್ಟು ಹೊರ ಬನ್ನಿ ಮಾನವರೆಲ್ಲ ಒಂದಾಗಿ ಕೂಡಿಬಾಳಿ ಎಂಬ ಕುವೆಂಪುರವ ಕವಿತೆಯನ್ನು ಇದಕ್ಕೆ ಸಂವಾದಿಯಾಗಿಸಬಹುದು. ಮಹಾ ಜನರೇ ಹೇಳಿ.. ಹೊಟ್ಟೆಗಿಲ್ಲದೆ ಕತ್ತರಿಸುವ ದೇವಸ್ಥಾನಗಳನ್ನೇನು ಮಾಡೋಣ? ಕಣ್ಣಲ್ಲೆ ಬೆಳಕಿಲ್ಲದ ದೇವಸ್ಥಾನಗಳ‌ನ್ನೇನು ಮಾಡೋಣ? ಬಾಯಿ ಇಲ್ಲದೆ ಬತ್ತಲಾಗಿ ಬಿದ್ದಿರುವ ದೇವಸ್ಥಾನಗಳನ್ನು ಏನು ಮಾಡೋಣ? ಎಂಬುದಾಗಿ ಜಿ. ಎಸ್. ಎಸ್ ರವರು ‘ಚಕ್ರಗತಿ ಕವನ’ ಸಂಕಲನದಲ್ಲಿ “ಕೇಳಿದಿರಾ ಮಹಾಜನರೇ? ದೇವಸ್ಥಾನ ಕಟ್ಟಿಸುತ್ತಾರಂತೆ” ಎಂಬ ಕವನದಲ್ಲಿ ಬಹು ವೈಚಾರಿಕವಾಗಿ ಬರೆದಿದ್ದಾರೆ. ಅದನ್ನು ಅನುಪಾಲಿಸುವುದು ಜನರ ಕರ್ತವ್ಯವಾಗಬೇಕು.

ಕಾಣದ ಕಡಲಿಗೆ ಹಂಬಲಿಸಿದೆ ಮನ….
ಕಾಣಬಲ್ಲೆನೆ ಒಂದು ದಿನ?
ಕಡಲನು ಕೂಡಬಲ್ಲೆನೆ ಒಂದು ದಿನ?
ಕಾಣದ ಕಡಲಿನ ಮೊರೆತದ ಜೋಗುಳ
ಒಳಗಿವಿಗಿಂದು ಕೇಳುತಿದೆ.
ನನ್ನ ಕಲ್ಪನೆಯು ತನ್ನ ಕಡಲನೆ
ಚಿತ್ರಿಸಿ ಚಿಂತಿಸಿ ಸುಯ್ಯುತಿದೆ.
ಎಲ್ಲಿರುವುದೋ ಅದು, ಎಂತಿರುವುದೋ ಅದು

ನೋಡಬಲ್ಲೆನೇ ಒಂದು ದಿನ,
ಕಡಲನು ಕೂಡಬಲ್ಲೆನೆ ಒಂದು ದಿನ?
ಸಾವಿರ ನದಿಗಳು ತುಂಬಿ ಹರಿದರೂ,
ಒಂದೇ ಸಮನಾಗಿಹುದಂತೆ.
ಸುನೀಲ, ವಿಸ್ತರ, ತರಂಗಶೋಭಿತ,
ಗಂಭೀರಾಂಬುಧಿ ತಾನಂತೆ.
ಮುನ್ನೀರಂತೆ, ಅಪಾರವಂತೆ.

ಕಾಣಬಲ್ಲೆನೆ ಒಂದು ದಿನ?
ಅದರೊಳು ಕರಗಲಾರೆನೆ ಒಂದು ದಿನ?
ಜಟಿಲ ಕಾನನದ ಕುಟಿಲ ಪಥಗಳಲಿ
ಹರಿವ ತೊರೆಯು ನಾನು.
ಎಂದಿಗಾದರು ಕಾಣದ ಕಡಲನು
ಸೇರಬಲ್ಲೆನೇನು?
ಸೇರಬಹುದೇ ನಾನು?
ಕಡಲ ನೀಲಿಯೊಳು ಕರಗಬಹುದೇ ನಾನು
?

                  ಕಾಣದ ಕಡಲಿಗೆ ಹಂಬಲಿಸಿದೆ ಭಾವಗೀತೆಯನ್ನು ಕೇಳದವರು ಬಹು ವಿರಳ. ಎಲ್ಲರ ನಾಲಿಗೆ ಮೇಲೆ, ಹೃಯದ ಗುಡಿಯೊಳಗೆ ಅಚ್ಚೊತ್ತಿರುವ ಗೀತೆ. ಸಿ. ಅಶ್ವತ್ಥರವರ ಕಂಚಿನ ಕಂಠದ ಮಾಧುರ್ಯದೊಂದಿಗೆ ತಾತ್ವಿಕ ಚಿಂತನೆಗೆ ಹಚ್ಚುವ ಗೀತೆ. “ಇರುವುದನ್ನು ಬಿಟ್ಟು ಇರದುದುದರ ಕಡೆಗೆ ತುಡಿಯುವುದೆ ಜೀವನ”. ಎಂಬ ಗೀತೆಯಂತೆ, ಬುದ್ಧನ ಜೀವನದ ಮಾರ್ಗದಂತೆ; ಮಾಗಿದ ಮನುಷ್ಯರ ಮನಸ್ಸು ಸದಾ ಬಯಲೊಳಗೆ ಲೀನವಾಗಲು ಬಯಸುತ್ತದೆ. ಜೀವನದ ಸಂಧ್ಯಾಕಾಲದಲ್ಲಿ ಮುಕ್ತಿಗಾಗಿ ಹಂಬಲಿಸುವ ಮನ ಆದಾವುದೋ ಅವ್ಯಕ್ತ ಲೋಕದ ವಿಶಾಲ ಶರಧಿಯೊಳಗೆ ಲೀನವಾಗಲು ಬಯಸುವುದನ್ನು ಬಹು ಚಿಂತನಾರ್ಹವಾಗಿ ಬರೆದು ಎಲ್ಲರ ಹೃದಯ ಸಾಮ್ರಾಜ್ಯಕ್ಕೆ ಲಗ್ಗೆ ಹಾಕಿದೆ. ನನ್ನ ತುಟಿಗಳು ಸಹ ನನಗರಿವಿಲ್ಲದೆ ಸದಾ ಗುನುಗುನುಗಿಸುವ ಕಾಣದ ಕಡಲದು ಅನಂತವಾಗಿ ಕಾಡುತ್ತಿರುತ್ತದೆ

ನವೋದಯದ ಕಿರಣಲೀಲೆ
ಕನ್ನಡದೀ ನೆಲದ ಮೇಲೆ
ಶುಭೋದಯವ ತೆರೆದಿದೆ.

                                  ನದನದಿಗಳ ನೀರಿನಲ್ಲಿ
                                  ಗಿರಿವನಗಳ ಮುಡಿಗಳಲ್ಲಿ
                                  ಗಾನ ಕಲಾ ಕಾವ್ಯ ಶಿಲ್ಪ
                                  ಗುಡಿಗೋಪುರ ಶಿಖರದಲ್ಲಿ
                                  ಶುಭೋದಯವ ತೆರೆದಿದೆ.

ಮುಗ್ಧ ಜಾನಪದಗಳಲ್ಲಿ
ದಗ್ಧ ನಗರ ಗೊಂದಲದಲಿ
ಯಂತ್ರತಂತ್ರದ ಅಟ್ಟಹಾಸ
ಚಕ್ರಗತಿಯ ಪ್ರಗತಿಯಲ್ಲಿ
ಶುಭೋದಯವ ತೆರೆದಿದೆ
.

ಹಿರಿಯರಲ್ಲಿ ಕಿರಿಯರಲ್ಲಿ
                                  ಹಳಬರಲ್ಲಿ ಹೊಸಬರಲ್ಲಿ
                                  ನವಚೇತನದುತ್ಸಾಹದ
                                  ಚಿಲುಮೆಚಿಮ್ಮುವೆದೆಗಳಲ್ಲಿ
                                  ಶುಭೋದಯವ ತೆರೆದಿದೆ

                ಸ್ವಾತಂತ್ರ್ಯೋತ್ತರ ವೈಜ್ಞಾನಿಕ ಕ್ರಾಂತಿಯಿಂದ ಕರುನಾಡಿನಲ್ಲಿ ಕಲೆ, ಸಾಹಿತ್ಯ, ತಂತ್ರಜ್ಞಾನ, ಗುಡಿ ಗೋಪುರ ಮತ್ತು ಮುಗ್ದ ಜನರಲ್ಲಿ ಆಗಿರುವ ಅಮೂಲಾಗ್ರ ಬದಲಾವಣೆಗಳನ್ನು ಸೂಚ್ಯವಾಗಿ ಚಿತ್ರಿಸಿದ್ದು; ಇಷ್ಟೆಲ್ಲಾ ಜಂಜಡಗಳ ನಡುವೆಯು ನವೋದಯದ ಈ ಕಾಲಘಟ್ಟದಲ್ಲಿ ಕನ್ನಡದ ನೆಲದ ಮೇಲೆ ಶುಭೋದಯ ತಂದಿದೆ ಎಂಬ ಕನ್ನಡದ ಅಸ್ಮಿತೆಯನ್ನು ಮೆರೆವ ಗೀತೆ ಸದಾ ನನ್ನನ್ನು ಕಾಡುತ್ತಿರುತ್ತದೆ.

ಆಕಾಶದ ನೀಲಿಯಲ್ಲಿ ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ ನಿನಗೆ ಬೇರೆ ಹೆಸರು ಬೇಕೇ
ಸ್ತ್ರೀ ಎಂದರೆ ಅಷ್ಟೇ ಸಾಕೆ || ಪ ||

ಹಸುರನುಟ್ಟ ಬೆಟ್ಟಗಳಲಿ ಮೊಲೆಹಾಲಿನ ಹೊಳೆಯನಿಳಿಸಿ
ಬಯಲ ಹಸಿರ ನಗಿಸಿದಾಕೆ ನಿನಗೆ ಬೇರೆ ಹೆಸರು ಬೇಕೇ
ಸ್ತ್ರೀ ಎಂದರೆ ಅಷ್ಟೇ ಸಾಕೆ || ೧ ||

ಮರಗಿಡ ಹೂ ಮುಂಗುರುಳನು ತಂಗಾಳಿಯ ಬೆರಳ ಸವರಿ
ಹಕ್ಕಿ ಗಿಲಕಿ ಹಿಡಿಸಿದಾಕೆ ನಿನಗೆ ಬೇರೆ ಹೆಸರು ಬೇಕೇ

ಸ್ತ್ರೀ ಎಂದರೆ ಅಷ್ಟೇ ಸಾಕೆ || ೨ ||

ಮನೆಮನೆಯಲಿ ದೀಪ ಉರಿಸಿ ಹೊತ್ತುಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ ನಿನಗೆ ಬೇರೆ ಹೆಸರು ಬೇಕೇ
ಸ್ತ್ರೀ ಎಂದರೆ ಅಷ್ಟೇ ಸಾಕೆ || ೩ ||

                     ಮನೆಯು ತಾನೆ ಮೊದಲ ಶಾಲೆ, ಜನನಿ ತಾನೆ ಮೊದಲ ಗುರು, ಆ ಜನನಿಯಿಂದ ಪಾಠ ಕಲಿತ ನಾವೆಲ್ಲರೂ ಧನ್ಯರು. ಎಂಬ ಜನಪದ ತ್ರಿಪದಿಯು ನಮಗೆ ಹೆಣ್ಣಿನ ಶ್ರೇಷ್ಠತೆ ಮತ್ತು ಪೂಜ್ಯತೆಯನ್ನು ದರ್ಶಿಸುತ್ತದೆ. ಜಿ. ಎಸ್. ಎಸ್ ರವರು ಹೆಣ್ಣಿನ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದರು. ಹಾಗಾಗಿ ಸ್ತ್ರೀಯು ಮಮತೆ, ಕರುಣೆ, ತ್ಯಾಗಗಳಿಂದ ಮುದ್ದಿಸಿ ಮಗುವಿಗೆ ಎದೆಪಾನಿಸಿ ಜೋಗುಳ ಹಾಡಿ, ತೊಟ್ಟಿಲು ತೂಗಿ ಜೋಪಾನವಾಗಿ ಬೆಳೆಸುತ್ತಾಳೆ. ಬಂಧು ಬಳಗ ಗಂಡ ಮನೆತನ ಎಲ್ಲವನ್ನೂ ಸಂಭಾಳಿಸುತ್ತಾಳೆ. ಕತ್ತಲಾವರಿಸುವ ಮೊದಲೆ ದೀಪ ಹಚ್ಚಿ ಮನೆಗೆ ಬೆಳಕು ನೀಡುವ ಹೆಣ್ಣಿಗೆ ಹೆಣ್ಣೆ ಸಾಟಿ. ಅದನ್ನು ಯಾವ ಉಪಮಾನದಿಂದಲೂ ಬಣ್ಣಿಸಲು ಸಾಧ್ಯವಿಲ್ಲ! ಎಂಬುದನ್ನು “ಸ್ತ್ರೀ ಎಂದರೆ ಅಷ್ಟೇ ಸಾಕೆ”!? ಎಂದಿದ್ದಿರು ಈ ಹಾಡು ಯಾರಿಗೆ ತಾನೆ ಇಷ್ಟ ಇಲ್ಲ. ನಾನಂತೂ ಯಾವಾಗಲು ಹಾಡುತ್ತಿತಿರುತ್ತೇನೆ.ನಾನು ಸ್ಪರ್ಧೆಗಳಲ್ಲಿ ಹಾಡಿ ಬಹುಮಾನ ಸಹ ಪಡೆದಿದ್ದುಂಟು. ಇದು ಹಸಿರು ಮರದಂತೆ ಸದಾ ಹಸನಾದ ಹಾಡಾಗಿದೆ.

ಯಾವ ರಾಗಕೊ ಏನೊ ನನ್ನೆದೆ ವೀಣೆ ಮಿಡಿಯುತ ನರಳಿದೆ
ಬಯಸುತಿರುವಾ ರಾಗ ಹೊಮ್ಮದೆ ಬೇರೆ ನಾದಗಳೆದ್ದಿವೆ

ಉದಯ ಅಸ್ತಗಳೆದೆಯ ಆಳಕೆ ಮುಳುಗಿ ಹುಡುಕಿತು ರಾಗವ
ಬಿಸಿಲ ಬೇಗೆಗೆ ತಣಿಲ ತಂಪಿಗೆ ಧುಮುಕಿ ಶೋಧಿಸಿ ಬಳಲಿತು
ಬೀಸಿಬಹ ಬಿರುಗಾಳಿಯಬ್ಬರದೆದೆಗೆ ತಂತಿಯ ಜೋಡಿಸಿ
ಅದರ ರಾಗವ ತನ್ನ ಎದೆಯಲಿ ಹಿಡಿಯಲೆಳಸುತ ಸೋತಿತು

ಮುಗಿಲ ತಾರೆಯ ರಜತನಂದನದಲ್ಲಿ ದನಿಯನು ಹುಡುಕಿತು

ಸರ್ವ ಋತುಗಳ ಕೋಶಕೋಶಕೆ ನುಗ್ಗಿ ತೃಪ್ತಿಯನರಸಿತು
ಏನು ಆದರು ದೊರೆಯದಾದುದು ಮನದ ಬಯಕೆಯ ರಾಗವು
ಬರಿಯ ವೇದನೆ ಎದೆಯ ತುಂಬಿದೆ, ಮೂಕವಾಗಿದೆ ಹೃದಯವು.

                    ಒಂದೊಂದು ಸಲ ತನ್ನ ತಾನೆ ಹೃದಯ ಕಳವಳಗೊಳ್ಳುತ್ತದೆ. ಮನಸ್ಸು ನೋವಿನಿಂದ ನರಳುತ್ತದೆ. ಅದಾವುದಾವುದೋ ಘಟನಾವಳಿಗಳು ಸುಳಿಸುಳಿದು ಭಾವದೆದೆಗೆ ದಾಳಿಯಿಡುತ್ತವೆ. ಈ ರೀತಿಯ ಏರು – ಪೇರು ಎಲ್ಲರ ಜೀವನದಲ್ಲೂ ಘಟಿಸುತ್ತವೆ. ಸುಖಾಸುಮ್ಮನೆ ದು:ಖ ಉಮ್ಮಳಿಸಿ ಕಣ್ಣೀರು ಸುರಿಯತೊಡಗುತ್ತದೆ. ಆ ಸಂದರ್ಭದ ಆಳಕ್ಕಿಳಿದು ಅಕ್ಷರ ರೂಪ ನೀಡಿರುವ ಕವಿತೆ. ಮಾತು ಬರದ ಮೂಗನಂತೆ ಮುಕ ಸನ್ನೆಯಲ್ಲೆ ಎಲ್ಲವನ್ನೂ ಹೇಳಿಬಿಡುತ್ತದೆ. “ಬಯಸುತ್ತಿರುವ ರಾಗ ಹೊಮ್ಮದೆ ಬೇರೆ ನಾದಗಳೆದ್ದಿವೆ”. ನಾವು ಅನಕ್ಕೊಂಡಿದ್ದೊಂದು ಒಂದು ವಿಧಿ ಮಾಡಿದ್ದು ಇನ್ನೊಂದು ಅಂತಾರಲ್ಲ ಇಂಥ ಕವಿತೆ ಯಾರಿಗೆ ತಾನೇ ಆಪ್ತವಾಗಲ್ಲ. ಸದಾ ಹಾಡಾಗಿ ಕಾಡಲ್ಲ ಗೀತೆಯಿದು.

ನಿಶ್ಯಬ್ದದಲ್ಲಿ ನಿಂತು ನೆನೆಯುತ್ತೇನೆ.
ನಿಮ್ಮಂದ ನಾ ಪದೆಡ ಹೊಸ ಹುಟ್ಟುಗಳ, ಗುಟ್ಟುಗಳ
ನೀವು ಕಲಿಸಿದಿರಿ ನನಗೆ ತಲೆ ಎತ್ತಿ ನಿಲ್ಲುವುದನ್ನು,
ಕಿರುಕುಳಗಳಿಗೆ ಜಗ್ಗದೆ ನಿರ್ಭಯವಾಗಿ ನಡೆವುದನ್ನು, ಸದ್ದಿರದೆ ಬದುಕುವುದನ್ನು, …………..
ಕಟ್ಟಿ ಹರಿಸಿದರಿ ಕನ್ನಡದ ಕಂಕಣವನ್ನು ಕೈಗೆ.

                ‘ಕಾಡಿನ ಕತ್ತಲಲ್ಲಿ’ ಕವನ ಸಂಕಲನದಲ್ಲಿ ಶಿವರುದ್ರಪ್ಪ ನವರು ತಮ್ಮ ಸಾಹಿತ್ಯಗುರು ವಿಶ್ವ ಕವಿ ಕುವೆಂಪು ರವರನ್ನು ಈ ಮೇಲಿನಂತೆ ಸ್ಮರಿಸಿ ಗುರು ಕಾಣಿಕೆ ನೀಡಿದ್ದಾರೆ. ಗುರುವಿನ ಆದರ್ಶ ಜಗಕ್ಕೆ ಸಾರಿದ್ದಾರೆ. ಕನ್ನಡದ ರಕ್ಷಣೆಗೆ ತಮ್ಮ ಗುರು ಕುವೆಂಪು ದೀಕ್ಷೆ ನೀಡಿದ್ದಾರೆ ಎಂಬುದಾಗಿ ಪ್ರಾಮಾಣಿಕವಾಗಿ ತೋರಿದ್ದಾರೆ. ಅಂತೆಯೇ ಎಲ್ಲರೂ ತಮಗೆ ದಾರಿ ತೋರಿದ ಗುರುಗಳನ್ನು ಸ್ಮರಿಸುವ ಕಾರ್ಯ ಯಾರಿಗೆ ತಾನೆ ಅಪ್ಯಾಯಮಾನವಾಗುವುದಿಲ್ಲ. ಹೊಸತನಕೆ ನವೀನ ಆವಿಷ್ಕಾರಕ್ಕೆ ಗುರು ಮಾರ್ಗವಾಗಿದ್ದಾರೆ;  ಹಾಗಾಗಿ ಮೌನದ ಶಾಂತ ಸ್ಥಳದಲ್ಲಿ ಗುರುವಂದನೆ ಮಾಡುವುದಾಗಿ ಎಂಬುದು ಈ ಕವನ ಧ್ಯೇನಿಸುತ್ತದೆ.

ಎದೆತುಂಬಿ ಹಾಡಿದೆನು ಅಂದು ನಾನು,
ಮನವಿಟ್ಟು ಕೇಳಿದಿರಿ ಅಲ್ಲಿ ನೀವು
ಇಂದು ನಾ ಹಾಡಿದರು ಅಂದಿನಂತೆಯೆ ಕುಳಿತು
ಕೇಳುವಿರಿ ಸಾಕೆನಗೆ ಅದುವೆ ಬಹುಮಾನ.
ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ?

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ
ಹಾಡುವುದು ಅನಿವಾರ್ಯ ಕರ್ಮ ನನಗೆ,
ಕೇಳುವವರಿಹರೆಂದು ನಾ ಬಲ್ಲೆನದರಿಂದ
ಹಾಡುವೆನು ಮೈದುಂಬಿ ಎಂದಿನಂತೆ
ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ.

                    ನೋವು – ನಲಿವು, ಸುಖ – ದುಖ, ಭಾವ ಧ್ವನಿ, ಮಾನ – ಸಮ್ಮಾನ, ಹಿಂಸೆ – ನಿಂದೆ, ಜಯ – ಅಪಜಯ …ಮುಂತಾದ ಸಂದರ್ಭದಲ್ಲಿ ಕವಿಗೆ ಕಾವ್ಯ ಅಥವಾ ಹಾಡು ಆಶ್ರಯ ನೀಡುವಂತಾಗಿದೆ. ಎಲ್ಲ ರೀತಿಯ ಪಾಡುಗಳನ್ನು ಹಾಡು ಮಾಡಿ, ಎದೆಯ ಭಾರ ಹೊರಬರುವಂತೆ, ಮೈಮರೆತು ಹಾಡುವ ಕವಿಗಳು, ಪ್ರಶಸ್ತಿ ಪುರಸ್ಕಾರಕ್ಕಾಗಿ ಅಥವಾ ಬೇರೆಯವರ ಮೆಚ್ಚುಗೆ ಹೊಗಳಿಕೆಗಾಗಿ ತಾವು ಎನನ್ನು ಬಯಸದೆ; ತಮ್ಮ ಮನ ಸಂತೈಸಿಕೊಳ್ಳಲು ಮಾಧ್ಯಮವಾಗಿ ಬರೆದ ಕವಿತೆ. ಜಾತಿ – ಧರ್ಮದ ಗಡಿಮೀರಿ, ಎಲ್ಲರ ಎದೆ ಹಾಡಾಗಿ ಎಲ್ಲಾ ಸಭೆ – ಸಮಾರಂಭಗಳಲ್ಲಿ ಹಿರಿಕಿರಿಯರೆನ್ನದೆ ಪ್ರತಿಯೊಬ್ಬರೂ ಎದೆತುಂಬಿ ಹಾಡುವ ಹಾಡು. ಸದಾ ಕಾಡುವಂತದಾಗಿದೆ. ಹಾಯಾಗಿ ಮಧುರವಾಗಿ ಹಾಡುವಂತಾಗಿದೆ.

ಹಣತೆ ಹಚ್ಚುತ್ತೇನೆ ನಾನು;
ಕತ್ತಲೆಯನ್ನು ದಾಟುತ್ತೇನೆ ಎಂಬ ಭ್ರಮೆಯಿಂದಲ್ಲ, ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು, ನೋಡಬಹುದೆಂಬ ಒಂದೇ ಒಂದು ಆಸೆಯಿಂದ;
ಹಣತೆ ಆರಿದ ಮೇಲೆ, ನೀನು ಯಾರೋ, ಮತ್ತೆ ನಾನು ಯಾರೋ
.

                   ಹಣತೆ (ದೀಪ) ಹಚ್ಚುವ ಕಾಯಕ ಶುಭದಾಯಕ. ಕತ್ತಲೆಯನ್ನು ಓಡಿಸುವ ಕೃತ್ಯ. ಬದುಕಿನಲ್ಲಿ ಮನುಷ್ಯ ಒಳ್ಳೆಯ ಕಾರ್ಯ ಮಾಡಬೇಕೆಂದು ಸಂಕೇತಿಸುವ ರೂಪಕ ಕಾವ್ಯ ಇದು. ಒಬ್ಬರಿಗೊಬ್ಬರು ಒಳಿತನ್ನು ಮಾಡಬೇಕು. ಜೀವನದ ಕೊನೆ ಉಸಿರಿರುವರೆಗೂ ಲೇಸನ್ನೆ ಬಯಸಬೇಕು. ನೆರೆಯವರಿಗೆ ಬೆಳಕನ್ನೆ ನೀಡಬೇಕು ಎಂಬ ಸದಾಯದ ಕವಿತೆಯಲ್ಲಿ ಕವಿ “ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ” ಎನ್ನುತ ಪ್ರಾಣಪಕ್ಷಿ ಹಾರಿ ಹೋದ ಮೇಲೆ ನನಗೂ ನಿನಗೂ ಸಂಭದವೇನೋ ಎಂದು ಸಂಕೇತಿಸಿರುವ ಕವಿತೆ ಇರುವಷ್ಟು ಕಾಲ ಪರಸ್ಪರ ಸಹಾಯ ಸಹಕಾರದಿಂದ ಬಾಳಬೇಕೆಂಬ ಕವಿತೆ ಅನನ್ಯ ಗೀತೆ.

ಕಣ್ಣೀರ ಹನಿಯಲ್ಲಿ ಮೊಗದ ನಗೆಯನ್ನು ಕಂಡೆ
ಕಣ್ಣೀರ ಹನಿಯಲ್ಲಿ ಜಗದ ಹೃದಯವ ಕಂಡೆ ಕಣ್ಣೀರಿನಲ್ಲಿ ವಿವಿಧ ಅನುಭವದ ಸವಿಯುಂಡೆ

ಕಣ್ಣೀರಿಂ ಮಿಗಿಲು ತತ್ವ ಬೋಧಕರಿಲ್ಲ
ಮುನ್ನೀರು ಎಂಬುದು ಕಣ್ಣೀರೇ ಎಲ್ಲ!

ಕಣ್ಣೀರ ಹೊಳೆಯಲ್ಲಿ ರಾಜ್ಯಗಳು ಉದಿಸಿದುವು
ಕಣ್ಣೀರ ಹೊಳೆಯಲ್ಲಿ ಮಕುಟಗಳು ತೇಲಿದುವು
ಕಣ್ಣೀರಿನಲ್ಲಿ ಕಾಲ ದೇಶಗಳು ಕರಗುವುವು

ವಿಶ್ವದಲ್ಲಿ ತೇಲುವೀ ಬ್ರಹ್ಮಾಂಡಗಳು ಎಲ್ಲ ಕಣ್ಣಿರಿನುಂಡೆಗಳೋ, ಬಲ್ಲವನೆ ಬಲ್ಲ!

                ಜಗತ್ತಿನ ಸಮಸ್ತ ಏರು – ಪೇರಿಗೆ, ಆಗು – ಹೋಗಿಗೆ ಕಣ್ಣೀರೇ ಸಾಧನ, ಅಸ್ತ್ರ, ಮೆಟ್ಟಿಲು, ತೊಟ್ಟಿಲು. ಕಣ್ಞೀರಿಗೆ ಹೆಣ್ಣು – ಗಂಡು, ಜಾತಿ – ಪಂಥ, ಕಾಲ – ದೇಶ – ಗಡಿಯ ಹಂಗಿಲ್ಲದೆ ಸಾಧಕ ಭಾದಕತೆಗೆ ಮೂಲ ದ್ರವ್ಯವಾಗಿದೆ. ಈ ಕಣ್ಣೀರಿಗೆ ಕರಗದವರಾರು? ಎಂಬ ಗಾದೆ ಮಾತಿದೆ. ಅಂದರೆ ಅತ್ತು, ಅಳಿಸುವ ಗತ್ತಿನ ಮುಂದೆ ಉಳಿದೆಲ್ಲ ಶೂನ್ಯ. ಕಣ್ಣೀರೇ ಸಾರ್ಥಕ್ಯ ನಗೆಯ ಧನ್ಯಬಾಳಿಗೆ ರಹದಾರಿ ಹಾಗಾಗಿ ಯಾರೊಬ್ಬರನು ಬಿಡದೆ ನನ್ನಾದಿಯಾಗಿ ಎಲ್ಲರಿಗೂ ಕಾಡುವ ಕವಿತೆ ‘ಕಣ್ಣೀರ ಹನಿಯಲ್ಲಿ ಜಗದ ಹೃದಯವ ಕಂಡೆ’ ಇದು ಸತ್ಯ. ಎಂತಹ ರೂಪಕದ ಮೂಲಕ ಕಣ್ಣೀರನ ಮಹಿಮೆ ಸಾರಿದ್ದಾರೆ.

ಪ್ರೀತಿ ಇಲ್ಲದ ಮೇಲೆ-
ಹೂವು ಅರಳೀತು ಹೇಗೆ?
ಮೋಡ ಕಟ್ಟೀತು ಹೇಗೆ?
ಹನಿಯೊಡೆದು ಕೆಳಗಿಳಿದು
ನೆಲಕ್ಕೆ ಹಸಿರು ಮೂಡೀತು ಹೇಗೆ?

ಪ್ರೀತಿ ಇಲ್ಲದ ಮೇಲೆ-
ಮಾತಿಗೆ ಮಾತು ಕೂಡಿತು ಹೇಗೆ?
ಅರ್ಥ ಹುಟ್ಟೀತು ಹೇಗೆ?
ಬರಿ ಪದಕ್ಕೆ ಪದ ಜೊತೆಗಿದ್ದ ಮಾತ್ರಕ್ಕೆ
ಪದ್ಯವಾದೀತು ಹೇಗೆ?

ಪ್ರೀತಿ ಇಲ್ಲದ ಮೇಲೆ-
ದಕ್ಷಿಣ ಆಫ್ರಿಕಾದ ಕಗ್ಗತ್ತಲಿಗೆ
ಬೆಳಕು ಮೂಡೀತು ಹೇಗೆ?
ಸೆರೆಮನೆ ಕಂಬಿ ನಡುವೆ ಕಮರುವ
ಕನಸುಗಳು ಕೊನರೀತು ಹೇಗೆ?
ಬಿಳಿ ಜನರ ಕರಾಳ ಕಪ್ಪು ಹೃದಯಕ್ಕೆ
ಕ್ರಿಸ್ತನ ಕರುಣೆ ಅರ್ಥವಾದೀತು ಹೇಗೆ?

ಪ್ರೀತಿ ಇಲ್ಲದ ಮೇಲೆ
ಸಂಶಯದ ಗಡಿಗಳುದ್ದಕ್ಕೂ,
ಸಿಡಿಗುಂಡುಗಳ ಕದನ ನಿಂತೀತು ಹೇಗೆ ?
ಜಾತಿಮತಭಾಷೆ ಬಣ್ಣಗಳ ಗೋಡೆಯ ನಡುವೆ
ನರಳುವ ಪಾಡು ತಪ್ಪೀತು ಹೇಗೆ ?
ನಮ್ಮ ನಿಮ್ಮ ಮನಸ್ಸು
ಮರುಭೂಮಿಯಾಗದ ಹಾಗೆ
ತಡೆಗಟ್ಟುವುದು ಹೇಗೆ ?

                             ಸೂರ್ಯೋದಯ – ಸೂರ್ಯಾಸ್ತ, ಮಳೆ – ಬೆಳೆ, ಹಸಿರಾದ ಪರಿಸರ, ಗಿಡ – ಮರ – ಬಳ್ಳಿ, ಕಾಡು – ಮೇಡು, ಚಿಲಿಪಿಲಿಗುಟ್ಟುವ ಹಕ್ಕಿ – ಪಕ್ಷಿ, ಮಾನವರ ನಡುವಿನ ಬಂಧ – ಅನುಬಂಧ…. ಮುಂತಾದ ಪ್ರಕ್ರಿಯೆಗಳೆಲ್ಲ ಪ್ರೀತಿ ಕಾರಣದಿಂದ ಸಾಧ್ಯವಾಗಿದೆ ಎಂಬುದು ಜಿ. ಎಸ್. ಎಸ್ ರವರ ಅನುಭಾವಜನ್ಯ ಸಂವೇದನಾಶೀಲ ಕಾವ್ಯ. ಸಮಸ್ತ ಮನುಕುಲಕ್ಕೆ ಅರಿವಿನ ದೀಪದಂತಿದೆ. ಆದರೆ ಮನುಷ್ಯರು ಕೇವಲ ತನಗಾಗುವ ಲಾಭ ಸ್ವಾರ್ಥಪರವಾಗಿ ಯೋಚಿಸುತ್ತ ಪ್ರಕೃತಿಯ ಒಡಲನ್ನು ಬರಿದು ಮಾಡಿದ್ದಾನೆ. ನಿಸರ್ಗದ ಸಂಪತ್ತನೆಲ್ಲ ದೋಚಿದ್ದಾನೆ. ಇದಕ್ಕೆ ಕಾರಣ ತಮ್ಮ ಮೇಲಿರುವ ಪ್ರೀತಿ ಪ್ರಕೃತಿ ಮೇಲಿಲ್ಲ. ಹಾಗಾಗಿ ಇಂದು ಅನಾವೃಷ್ಟಿಯಾಗಿ ಬರಗಾಲ ನೆಮ್ಮದಿಯ ಜೀವನಕ್ಕೆ ಬರೆ ಹಾಕಿದೆ.

                         ದೇಶ ವಿದೇಶ ಮನುಷ್ಯರಲ್ಲಿ ಪರಸ್ಪರ ಪ್ರೀತಿ ಇರದ ಕಾರಣ ದ್ವೇಷದ ಅಲೆ ಉಕ್ಕಿ ಹರಿದು ಯುದ್ಧ, ಭೂಕಂಪ, ವಿಪರೀತ ತಾಪಮಾನ ಏರಿಕೆಯಿಂದ ಜನ – ಜೀವನ, ಸಾವು – ನೋವಿನಿಂದ ಕಂಗಾಲಾಗಿದ್ದಾರೆ. ದಿಗ್ಗಕಾಣದೆ ಭಯಭೀತರಾಗಿದ್ದಾರೆ. ಪ್ರೀತಿಯ ಅರ್ಥವನ್ನು ತಿಳಿಯದೆ ನೆಲ – ಜಲ, ಗುಡಿ – ನುಡಿ, ಗಡಿಗಾಗಿ ನಿತ್ಯ ಹೊಡೆದಾಟ, ಹಿಂಸಾಚಾರ, ಭ್ರಷ್ಟಾಚಾರ, ಅತ್ಯಾಚಾರ, ಹತ್ಯಾಚಾರ, ಕಳ್ಳತನ, ದರೋಡೆ ಅವ್ಯಾಹತವಾಗಿ ನಡೆದು ಅಲ್ಪಸಂಖ್ಯಾತ ಮಾನವ ಪ್ರೇಮಿಗಳ ನಿದ್ದೆಗೇಡಿಸಿದೆ. ಜನರ ಉನ್ನತಿಗಾಗಿ, ಮೋಕ್ಷಕ್ಕಾಗಿ, ಪಾಪ ನಿವಾರಣೆಗಾಗಿ ತನ್ನನ್ನೆ ಸಿಲುಬೆಗೇರಿಸಿಕೊಂಡ, ಕರುಣಾಮಯಿ ಮಾನವ ಪ್ರೇಮಿ ಕ್ರಿಸ್ತನ ಪ್ರೀತಿಯನ್ನು ಆ ಬಿಳಿಯ ಜನ ಅರಿಯಲಿಲ್ಲ ಎಂದು ಕವಿ ನೊಂದುಕೊಂಡು; “ಬಿಳಿ ಜನರ ಕರಾಳ ಕಪ್ಪು ಹೃದಯಕ್ಕೆ ಕ್ರಿಸ್ತನ ಕರುಣೆ ಅರ್ಥವಾದೀತು ಹೇಗೆ”? ಎಂದು ಬಹು ಅರ್ಥಗರ್ಭಿತವಾಗಿ ಕಾವ್ಯದಲ್ಲಿ ಒಡಮೂಡಿಸಿದ್ದಾರೆ.

                   ಈಗ ನಾವು ಕಣ್ಣಾರೆ ಕಾಣುತ್ತಿದ್ದೆವೆ ಇಸ್ರೇಲ್ ಮತ್ತು ಹಮಾಸ (ಗಾಜಾಪಟ್ಟಿ) ನಡುವೆ ನಡೆಯುತ್ತಿರುವ ಕದನದಿಂದ ಸಾವಿರಾರು ಮಕ್ಕಳು ಮಹಿಳೆಯರು ಜನಸಾಮಾನ್ಯರಾದಿಯಾಗಿ ಭಯೋತ್ಪಾದಕರು ಸಹ ಪ್ರಾಣ ಕಳಿದುಕೊಂಡಿದ್ದಾರೆ. ಎಷ್ಟೋ ಜನ ಅನಾಥರಾಗಿದ್ದಾರೆ. ಬಾಂಬು – ಗುಂಡು – ಸಿಡಿಮದ್ದು ಅಬ್ಬರಿಸುತ್ತಿವೆ. “ಪ್ರೀತಿ ಇಲ್ಲದ ಮೇಲೆ
ಸಂಶಯದ ಗಡಿಗಳುದ್ದಕ್ಕೂ, ಸಿಡಿಗುಂಡುಗಳ ಕದನ ನಿಂತೀತು ಹೇಗೆ”? ಎನ್ನುವ ಸಾಲು ಪ್ರೀತಿಯ ಕೊರತೆಯಿಂದ ಅಮಾನುಷ್ಯವಾಗಿ ವರ್ತಿಸಿ ರಕ್ಕಸರಾಗುತ್ತಿದ್ದಾರೆ. ಜಗತ್ತಿನ ಅನೇಕ ಜನ ದೊಡ್ಡ ದೊಡ್ಡ ಗ್ರಂಥ ಓದಿ ಸತ್ತು ಹೊದರು. ಆದರೆ ಪ್ರೀತಿ ಎಂಬ ಎರಡಕ್ಷರದ ಅರ್ಥ ಅರಿಯದೆ ಹೋದರು ಎಂಬ ಸಂತಕವಿ ಕಬೀರರ ದ್ವೀಪದಿಯನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಲು ಸೂಕ್ತವಾಗುತ್ತದೆ. ಮಾನವ ಪ್ರಾಣಿ ಪಕ್ಷಿ ಜನ ಜಾನುವಾರ ಪ್ರಕೃತಿಯನ್ನ ತನ್ನಂತೆ ಪ್ರೀತಿಸಿದಾಗ ಮಾತ್ರ ಶಾಂತಿ ನೆಲೆಸುತ್ತದೆ. ಬುದ್ದ ಬಸವ ಅಂಬೇಡ್ಕರ್ ದಾರಿಯಲ್ಲಿ ನಡೆದಾಗ ತಾನೆ ಸಾಮರಸ್ಯದ ಸಮೃದ್ಧ ಜಿವನ ಕಾಣಲು ಸಾಧ್ಯ.

                          ಜಿ. ಎಸ್. ಶಿವರುದ್ರಪ್ಪನವರು ೧೯೯೨ ರಲ್ಲಿ ದಾವಣಗೆರೆಯಲ್ಲಿ ಜರುಗಿದ ೬೧ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಸ್ನೇಹ ಕಾರ್ತೀಕ, ಗೌರವ, ಹಣತೆ, ಇವು ಜಿ. ಎಸ್. ಎಸ್ ಅವರಿಗೆ ಅಭಿಮಾನಿಗಳು ಸಲ್ಲಿಸಿದ ಅಭಿನಂದನಾ ಗ್ರಂಥಗಳು. ಶಿವಮೊಗ್ಗದ ಶಿಕಾರಿಪುರದಲ್ಲಿ  ೦೭ ಫೆಬ್ರವರಿ ೧೯೨೬ ರಂದು ಜನಿಸಿದ ಕವಿಮಹನೀಯರು ಜನಾಪೇಕ್ಷಣಿಯ ಕಾವ್ಯ ಬರೆದು ವಚನ ಹೃದಯ ಗುಡಿಯಲ್ಲಿ ವಿರಾಜಮಾನರಾಗಿರುವ ಮಹಾನುಭಾವರು ೨೩ ಡಿಸಂಬರ್ ೨೦೧೩ ರಂದು ಅಮರತ್ವ ಪಡೆದ ಸಮನ್ವಯಕವಿ ನಾಡೋಜ ಜಿ. ಎಸ್. ಶಿವರುದ್ರಪ್ಪ ನವರು ನಮ್ಮ ಮಧ್ಯೆ ಇಲ್ಲವಾದರೂ ಅವರ ಉದಾತ್ತ ಕವಿತೆಗಳ ಮೂಲಕ ನಮ್ಮ ಹೃನ್ಮನಗಳಲ್ಲಿ ಆವರಿಸಿದ್ದಾರೆ. ಅವರು ತಮ್ಮ ಜೀವಪರ, ಪ್ರಗತಿಪರ ಜೀವಂತಿಕೆಯ ಕವಿತೆಗಳ ಮೂಲಕ ಸಕಾರಾತ್ಮಕವಾಗಿ ಸದಾ ನಮ್ಮನ್ನು ಕಾಡುತ್ತಿರುತ್ತಾರೆ. ಹಾಡಾಗಿ – ಹಾಯಾಗಿ ಅಪ್ಯಾಯಮಾನವಾಗುತ್ತಾರೆ. ಅವರ ಸಮನ್ವಯ ತತ್ವವನ್ನು ನಾವು ಪಾಲಿಸಿದಾಗ ಮಾತ್ರ ಅವರಿಗೆ ಗೌರವವಿತ್ತಂತೆ.


ಸುಹೇಚ ಪರಮವಾಡಿ

One thought on “ಕಾಡಬೇಡವೆಂದರೂ ಕಾಡುತ್ತಲೇ ಇರುವ, ಸದಾ ಎದೆ ಗೂಡಲ್ಲಿ ಹಾಡಾಗುತ್ತಲೆ ಇರುವ ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರ ಕಾವ್ಯಧಾರೆ ಮಾನವ್ಯದ ಶರಧಿ

Leave a Reply

Back To Top