ಸಂಗಾತಿ ವಾರ್ಷಿಕ ವಿಶೇಷಾಂಕ

ಎ ಎಸ್. ಮಕಾನದಾರ

ಅನುದಿನ ನೆನೆಯುವೆ ಆ ದಿನಗಳನ್ನು

ಏಳನೇ ತರಗತಿ ವಾರ್ಷಿಕ ಫಲಿತಾಂಶ ಬಂತು. ನಾನು ಶರಣಯ್ಯ ಸರಗಣಾಚಾರಿ ಮಠ, ರಾಘವೇಂದ್ರ ತಾಸಿನ.ಸಂಗಣ್ಣಕೋಟಗಿ.ರಾಘವೇಂದ್ರ ಭಟ್ ಮುಂತಾದ ಗೆಳೆಯರು ಪಾಸ್ ಆಗಿದ್ದೆವು.
ಅವ್ವ ಆಗ್ಲೇ ಮಾಸ್ಟರ್ ಪ್ಲಾನ್ ಹಾಕಿ 8 ಎತ್ತಿನ ಕಮತ ಇರುವ ಕೊಡೇಕಲ್ಲ ಅವರ ಮನೆಯಲ್ಲಿ ನನ್ನನ್ನು ಜೀತಕ್ಕ ಇಡಬೇಕು ಅಂತ. ವರುಷಕ್ಕೆ 2 ಚೀಲ ಜೋಳ,ಖರ್ಚಿಗೆ ಸ್ವಲ್ಪ ರೊಕ್ಕಾ ಕೊಡ ಕೊಡೇಕಲ್ ಅವರು ಕೊಡತಾರ ಅಂತ ಗೊತ್ತಿತ್ತು.ಅವರ ಹೊಲಕ್ಕೆ ಕಳೆವು ತೇಗಿಯಾಕ ಹೋಗೋ ಮುಂದ ವಿಷಯ ಪ್ರಸ್ತಾವನೆ ಮಾಡಿದ್ದಳು,

ಸಾಲಿ ಸೂಟಿ ಬಿಟ್ಟಾಗ ನಿನ್ನ ಮಗನ್ನ ಕರಕೊಂಡ ಬಾರಬೇ ಮಾಬವ್ವ  ಹಂಗ ಬಿಟ್ರ
ಹುಡುಗರು ದಾರಿ ಬಿಡ್ತಾವ್. ಮೈಯಾಗ ಮುಗ್ಗಲಗೇಡುತನ  ಬೆಳಿತೈತೆ ಅಂತ ಸಾಹುಕಾರ್ ಹೇಳಿದ್ದ ಮಾತು ಅವ್ವನ ತಲೆಯೊಳಗ ಬೋರಾಣಿ ಕೊರದಂಗ ಕೊರಿತಿತ್ತು.

ಅಮ್ಮ ನಾ ಪಾಸ್ ಆದೆ ದೊಡ್ಡ ಸಾಲಿಗೆ ಹೆಸರು ಹಚ್ಚಬೇಕು ಅಂತ ಹೇಳಿದ್ದೇ ತಡ
  ಅಯ್ಯ  ಭಾಡಕೋ ಮುಂಜಾನೆ ಸತ್ರ ಮಣ್ಣಿಗಿಲ್ಲ ಸಂಜಿಕೆ ಸತ್ರ ಎಣ್ಣಿಗಿಲ್ಲ ಅನ್ನೋ ಬದುಕು ನಮ್ಮದಾಗೈತೆ .ನಿಮ್ಮಪ್ಪ ನೋಡಿದ್ರ ದುಡಿಯೋವ ಅಲ್ಲ ದುಕ್ಕ ಬಡಿಯುವ ಅಲ್ಲ.
ಕೊಡೇಕಲ್ ಸಂಗಪ್ಪ ಸಾಹುಕಾರ್ ಮನೆಗೆ ಜೀತಕ್ಕ ಹಚ್ಚತೀನಿ ನಡಿ ಸುಮ್ನೆ ಧಿಮಾಕ್ ಮಾಡಬೇಡ. ಸಾಲಿ ಕಲ್ತು ಯಾರ್ ಬಕಬಾರ್ಲಿ ಬಿದ್ದಾರಾ ಅಂತ ಕೈ ಹಿಡ್ಕೊಂಡು ಸೀದಾ ಗಣಾಚಾರಿ ಬಸಮ್ಮನ ಮನೆಗೆ ಕರೆಕೊಂಡು ಹೋದ್ಲು.

ಎಕ್ಕ ನೋಡಬೇ ನನ್ನ ಮಕ್ಕಳ ಕಾಲಾಗ ಸಾಕು ಸಾಕ್ ಆಗೈತೆ.
ಜೀತಕ್ಕ್ ಹಾಕ್ತಿನಿ ಅಂದ್ರವಲ್ಲೆ ಅಂತ ಅಳ್ಕೋತ ಕುಂತಾನ.

ನೀನರ ಸ್ವಲ್ಪ ಬುದ್ದಿ ಹೇಳಬೇ ಅಕ್ಕ ಅಂತ ಒಂದೇ ಸವನೆ ದಯನಾಸ ಬಿಟ್ಲು.
ಗಣೇಚಾರಿ ಬಸಮ್ಮಗ ನಾವು ಅತ್ತಿ ಅಂತ, ಕಳಕಯ್ಯ ಅಜ್ಜಗ ಮಾಮಾ ಅಂತಾ ಈಗಲ್ಯೂ ಕರೀತೀವಿ. ನಮ್ಮ ಅಪ್ಪಗ ಅಣ್ಣ ಅಂತಳ ಆ ನಡೀಯಿಂದ ಬಸಮ್ಮನ ಅಳಿಯ, ಸೊಸೆಯಂದಿರು ಅಂತಲೇ ಸಂಬಂಧದ ನಡೆ ನಡೆಯುತ್ತಾರೆ.ನಡೆಸುತ್ತಲೇ ಬಂದಿದ್ದೇವೆ ನಾವು ಮತ್ತೂ ನಮ್ಮ ಓಣಿಯ ಎಲ್ಲ ಧರ್ಮ ಜಾತೀಯ ಕುಟುಂಬ ಒಂದೇ ತಂದೆ ತಾಯಿಯ ಮಕ್ಕಳಂತೆ ಬೆಳೆದು ಬಾಳಿ ಬದುಕುತ್ತಿದ್ದೇವೆ
. ಬಸಮ್ಮ ಅತ್ತಿ ನನ್ನ ಕಿವಿ ಹಿಂಡಿ ಬುದ್ದಿವಾದ ಹೇಳಿ ಜೀತಕ್ಕ ಕಳಸತಾಳ ಅಂತ ನಮ್ಮ ಅವ್ವನ ಲೆಕ್ಕಾಚಾರ ಆಗಿತ್ತು. ಬಾಯಿ ಮಾಡೋದು ಕೇಳಿ ಕೋಟಗಿ ಶರಣವ್ವ ಕೂಡ ಹಾಜರಿ ಹಾಕಿದಳು.
ಮಗ ಶ್ಯಾನೆ ಅದಾನ ನಿನ್ನ ತಲಿ ಕೆಟ್ಟೇತೇ ಏನ್ ಬೇ ಮಾಬವ್ವ.
ಬಡತನ ಎಷ್ಟು ದಿವಸದ್ದು ನಿನಗೆ ಓದಸಾಕ ಆಗಲಿಲ್ಲ ಅಂದ್ರ ನನ್ನ ಮಕ್ಕಳ ಜೊತೆಗೆ ನಾನು ನನ್ನ ಅಳಿಯಾಗ ಓದಸತ್ತೀನಿ ಬಿಡು.
ಲೋ ಅಬ್ದುಲ್ಲಾ ನೀ ಮರೆ ಜೀತಕ್ಕ ಹೋಗಬೇಡ.
ಸಾಲಿಗೆ ಹೋಗಿ ಶ್ಯಾಣೇ ಆಗು. ಚೊಲೋತ ನ್ಯಾಗ ಓದಿ ಮುಂದಬಾ  ಶೀಪಣ್ಣ, ಶರಣಪ್ಪ ಜೊತೆಗೆ ನೀ ಸಾಲಿಗೆ ಹೋಗು ಪುಸ್ತಕ ನಾನು ಕೊಡಸ್ತೀನಿ ಸಾಲಿ ಸೂಟಿ ಇದ್ದಾಗ ಐಕ್ರೀಮ್, ಬ್ರೆಡ್ ಮಾರಿ ನಿನ್ನ ಸಾಲಿ ಫೀ ತುಂಬಕೊ ನಿಮ್ಮವ್ವನರ ಎಲ್ಲಿಂದ ತರಬೇಕು ರೊಕ್ಕಾ ಕಡಿಮೆ ಬಿದ್ರ ಶೆಟ್ಟರ ಕಡೆಗೆ ನಾನು ಸಾಲ ಕೇಳ್ತೀನಿ ಅಂದದ್ದೇ ತಡ ನನಗೆ ಮುಗಿಲು ಮೂರೇಗೇಣು.

ಅವ್ವನ ಆಟ ನಡೀಲಿಲ್ಲ ಮುಖ ಪೆಚ್ಚಗ ಆತು
ನನಗೆ ಮನಿಯಾಗ ಹೊರ್ಗ್ ಎಲ್ಲವು ಇಂತವು ಈದಿ ಜೋಡ ಆಗ್ಯಾವು ಹೊರಗ ನವರು ಹೇಳ್ತಾರ ಆದ್ರ ಮನೆತನ ನಡೆಸೋದು ಅವರಿಗೇನು ಗೊತ್ತ ಆಗತೈತಿ. ಅವರ ಗಂಡರು ಮಕ್ಕಳು ದುಡಿತಾರ ಮನಿ ನಡಿತೈತೆ ಎಲ್ಲರ ಮನಿ ಬಾಳೆ ಬದುಕು ತಮ್ಮದು ಇದ್ದಂಗ ಐತೆ ತಿಳ್ಕೊoಡಾರ ಅಂತ ಗೊಣಗುತ್ತಲೇ ಇದ್ದಳು.
ಫಕೀರ ಸಂಪ್ರದಾಯವಾದ ಮಕಾನದಾರ ಖಾನದಾನ್ ಗೆ ಜೋಳಿಗೆ ದೈವದತ್ತವಾಗಿ ಬಳುವಳಿಯಾಗಿ ಬಂದಿದೆ. ಆದರೆ,ಮನೆ ಮನೆಗೆ ಭಿಕ್ಷೆ ಬೇಡಲು ಹೋಗಬೇಕ ಆದರೆ ಚಮಲಾ (ಭಿಕ್ಷೆ ಪಾತ್ರೆ ) ಬೇಕೇ ಬೇಕು.
ಬಿಕ್ಷಾ ಪಾತ್ರೆ ನಮ್ಮ ಬಳಿ ಇಲ್ಲ. ಅಂದ್ರೆ ಭಿಕ್ಷೆ ಬೇಡಲೂ ಹೋಗುವಂತಿಲ್ಲ
ಭಿಕ್ಷೆ ಬೇಡಲು ಖೈರಾತ್ ಬೇಡಲು ಸೀಜರಾ ಮತ್ತೂ ಚಮಲಾಬೇಕು.ಇದು ಜಮಾ ತಿನ ಅಲಿಖಿತ ನಿಯಮ.

ಕವಿರಾಜ ಮಾರ್ಗಕಾರನ ಕಾವ್ಯದ ತಿರುಳಿನಂತೆ ಗಜೇಂದ್ರಗಡದ ನಮ್ಮ ಟೆಕ್ಕೇದ ಓಣಿ ಇದೆ.

ಕಸವರ ಮೆಂಬುದು
ನೆರೆ ಸೈರಿಸಲಾರ್ಪೋಡೆ
ಪರವಿಚಾರ ಮುಮು0
ಪರ ಧರ್ಮಮುಮು0

ಈ ಮಾತು ಇಂದಿಗೂ ನಿತ್ಯ ಸತ್ಯವಾಗಿದೆ ನಮ್ಮ ಓಣಿಯಲ್ಲಿ
ನನ್ನ ಮನೆ ಎದುರು ಪಟ್ಟೆಗಾರ್ ಕುಟುಂಬ. ಬಲಕ್ಕೆ ಅಗಸರ  ಎರಡು ಮನೆ ಬಿಟ್ಟರೆ,ಬ್ರಾಹ್ಮಣರ ಅಗ್ರಹಾರ. ಶೆಟ್ಟರ್ ಮನೆ  ಜಂಗಮರ ಮನೆ,ಮರಾಠರ,ನಾಪಿತರ ಮನೆಗಳು. ಮನೆ ಹಿಂದೆ ನೇಕಾರರ, ಕಮ್ಮಾರರ ಮನೆಗಳು ಹೀಗೆ ಸಾಲು ಸಾಲು ಮನೆಗಳಲ್ಲಿ ಸ್ನೇಹ, ಸೌಹಾರ್ದತೆ, ಮಾನವೀಯತೆ ತುಂಬಿ ತುಳುಕುತ್ತದೆ.

30-40 ವರುಷದ ಹಿಂದೆ ತುತ್ತು ಕೂಳಿಗಾಗಿ ನಾವು ಪರದಾಡುವ ಸಂದರ್ಭದಲ್ಲಿ ಬ್ರಾಹ್ಮಣರು ಮಾಡಿದ ಅಡುಗೆ ಉಳಿದಿದೆ ಅಂದ್ರೆ ಮಾಬವ್ವನ ಮಕ್ಕಳಿಗೆ ಕರೆದು ಕೊಡ್ರಿ ಅನ್ನ ಕೆಡಸಬ್ಯಾಡ್ರಿ ಅಂತ ಹೇಳುತ್ತಿದ್ದರು.  ಉಳಿದ ಅಡುಗೆ ದೂರದಿಂದ ಕೈ ಎತ್ತಿ ನಮ್ಮ ತಾಟು ಡಬರಿಗೆ ಹಾಕುತ್ತಿದ್ದರು
ಶೀಲ ಮಾಡಲು ಕೈ ಎತ್ತಿ ಸಾರು ಡಬರಿಗೆ ಸುರುವುತ್ತಿದ್ದರೆ ಬಟ್ಟಿಗೆ ಚಿತ್ತಾರವಾಗಿ ಮೂಡಿದ ಕಲೆ ಸ್ವಾದಿಷ್ಟ ವಾಸನೆ ಮುಂದೆ ಮಾಯಾವಾಗುತಿತ್ತು.
ಕಸ ಮುಸುರೆ ತಿಕ್ಕಿ ಉಳಿದ ಅಡುಗೆ ತಂದ ಹೊಸಮನಿ ಪಾರವ್ವ ನಮಗೂ ಕೊಡದೆ ಎಂದೂ ತುತ್ತು ಎರಡು ಮಾಡಿಲ್ಲ . ಮಡಿವಾಳ ಮಲ್ಲಪ್ಪ ಕುಟುಂಬವೂ ಅಷ್ಟೇ ನಾಲ್ಕು ತುತ್ತಿನಲ್ಲಿ ನಮಗೂ ಎರಡು ತುತ್ತು ಮೀಸಲು ಇರುತ್ತಿತ್ತು. ಅಗಸರ ಮಲ್ಲಪ್ಪನಿಗೆ ಕಾಕಾಅಂತ ಕರೆಯುತ್ತಿದ್ದೆವು.
ವರುಷನೂ ಗಟ್ಟಲೆ ನಮ್ಮ ಬಟ್ಟೆ ಫ್ರಿಯಾಗಿ ತೊಳೆದು ಇಸ್ತ್ರಿ ಮಾಡಿ ಕೊಡುತ್ತಿದ್ದರು. ಬಸಪ್ಪ ಕಾಕಾ ಬಟ್ಟೆಗೆ ಹಾಕಿದ ಗಂಜಿ ಹೇಗೆ ಮರೆಯಲು ಸಾಧ್ಯ?
ಹಡಪದ್ ಈರಪ್ಪ ಕಾಕಾ ನಮಗೆ ಕಟಿಂಗ್ ಮಾಡಿದರ ಒಮ್ಮೆಯೂ ರೊಕ್ಕಾ ಕೇಳಿದ್ದು ನೆನಪಿಲ್ಲ.
ಅವಾಗ ರೊಕ್ಕಾ ಕೇಳಿದ್ರ್ ನಮ್ಮ ಕಡೆಗೆ ಕೊಡಾಕ ರೊಕ್ಕಾ ಇರಲಿಲ್ಲ. ಈಗ ರೊಕ್ಕಾ ಕೊಟ್ಟು ಋಣ ತೀರಿಸಿ ಕೊಳ್ಳಬೇಕು ಅಂದ್ರೆ ಕಾಕಾ ಇಲ್ಲ.

ನೇಕಾರರ ಸಹಕಾರ ಸಂಘದಿಂದ ಬಡ ಮಕ್ಕಳಿಗೆ ಸಹಾಯ ಮಾಡುತ್ತಿದ್ದರು. ಒನೆತ್ತಕ್ಕ ಎರಡು ರೂಪಾಯಿ ಎರಡನೇತ್ತಕ್ಕ ನಾಲ್ಕು ರೂಪಾಯಿ ಹತ್ತನೇತ್ತಕ್ಕ ಇಪ್ಪತ್ತು ರೂಪಾಯಿ
ಹಳೆ ಪುಸ್ತಕ ಕೊಟ್ಟು ಹಿಂದಿನ ವರುಷ ಓದಿದ ಹಳೆ ಪುಸ್ತಕ ತೆಗೆದುಕೊಂಡು ಬರಬೇಕು ನೋಟು ಬುಕ್ಸ್ ಗಾಗಿ ಪೆನ್ ಪೆನ್ಸಿಲ್ ಕಂಪಾಸ್ ಗಾಗಿ ಹತ್ತಿಪ್ಪತ್ತು ರೂಪಾಯಿ ಸಹಾಯ ಕೊಡುತ್ತಿದ್ದರು.ನಮ್ಮ ಮಕ್ತುಮ್ ಚಾಚಾ ಸೊಸೈಟಿ ಯಲ್ಲಿ ನೂಲಿಗೆ ಬಣ್ಣ ಹಾಕುತ್ತಿದ್ದರು ಹೀಗಾಗಿ ನೇಕಾರರ ಮಕ್ಕಳಿಗೆ ಆರ್ಥಿಕವಾಗಿ ಸಹಾಯ ಸಂಘದ ಪರವಾಗಿ ಮಾಡುತ್ತಿದ್ದರು.
ಎಂಟನೇ ತರಗತಿ ಓದು ಮುಗಿಸಿ,6ವರುಷದ ನಂತರ ಎಸ್ ಎಸ್ ಎಲ್ ಸಿ ಬಾಹ್ಯ ವಿದ್ಯಾರ್ಥಿಯಾಗಿ ಪಾಸ್ ಮಾಡಿ ಕೊಳ್ಳಲು ಕೆ ಎಸ್ ಗಾರವಾಡ ಹಿರೇಮಠ್.ಅಮರಪ್ಪ ಕೋಟಗಿ ಮಾಸ್ತ ರ್, ಸಹೋದರ ಸ್ವರೂಪ ರಾದ ನನ್ನ ಬಾಳಿನ ದಿಕ್ಕನ್ನೇ ಬದಲಿಸಿದ ಯು ಆರ್ ಚನ್ನಮ್ಮನವರ . ಹಾಸ್ಟೆಲ್ ನಲ್ಲಿ ಸೇವೆ ಮಾಡುತ್ತಿರುವ ಎನ್. ಎಸ್. ಪಾಟೀಲ್.
1987 ರಲ್ಲಿ ನಿರಂತರ ವೇದಿಕೆ ಹುಟ್ಟಿಕೊಂಡು ಸಂಸ್ಕೃತಿ ಕ ವಾಗಿ ಸಾಮಾಜಿಕವಾಗಿ, ನೈತಿಕವಾಗಿ ಬೆಳೆಯಲು ಬಳಗದ ಸದಸ್ಯರು ಪ್ರೊ. ಬಿ ಎ ಕೆಂಚ ರೆಡ್ಡಿ. ಮಲ್ಲಿಕಾರ್ಜುನ ಕುಂಬಾರ. ಪುಂಡಲೀಕ. ಕಲ್ಲಿಗನೂರ ಮುಂತಾದ ಹಿರಿಯರ ಮಾರ್ಗದರ್ಶನ ಹೇಗೆ ಮರೆಯಲು ಸಾದ್ಯ?

ಗೊಟಗೋಡಿ ಟಿ.ಬಿ. ಸೋಲಬಕ್ಕನವರು ಏಳು ಕೊಳ್ಳದ ಎಲ್ಲಮ್ಮ ದೊಡ್ದಾಟ ಕ್ಕೆ ಒಂದು ಹೊಸ ಸ್ಪರ್ಶ ನೀಡಿ ನಾಡಿನ ತುಂಬಾ ಪ್ರದರ್ಶನ ಎ ರ್ಪಡಿಸಲಾಗಿತ್ತು 90 ರ ದಶಕ ದಲ್ಲಿ ನಿರಂತರ ಸಾಹಿತ್ಯ ವೇದಿಕೆ  ಕಾರ್ಯದರ್ಶಿ ಯಾಗಿದ್ದ ಸಂದರ್ಭದಲ್ಲಿ ನಮ್ಮ ಮನೆ ಮುಂದಿನ ಬಯಲು ಜಾಗೆ ಮುಳ್ಳು ಕಂಟಿ ಸ್ವಚ್ಛ ಗೊಳಿಸಿ ಪ್ರದರ್ಶನ ಮಾಡಿದೆವು.ಮಹಿಳೆಯರು ಬಹಿರ್ದೇಸೆಗಾಗಿ ಕುಳಿತು ಕೊಳ್ಳುವ ಜಾಗೆ ಈಗ ಕಟ್ಟಿ ಬಸವೇಶ್ವರ ರಂಗ ಮಂದಿರ ವಾಗಿದೆ.
ಸೀಗಿ ಹುಣ್ಣಿಮೆ,ಗೌರಿ ಹುಣ್ಣಿಮೆಯಲ್ಲಿ ಓಣಿಯ ಹೆಣ್ಣು ಮಕ್ಕಳು ಸಕ್ಕರೆ ಆರತಿ ಬೆಳಗಲು ಸಣ್ಣ ಗೂಡಿನ ಗುಡಿ 1980 ರಲ್ಲಿ ನನ್ನ ಹಿರಿಯ ಅಣ್ಣ ಮಸೂಮ್ ಅಲಿ ಕಟ್ಟಿದ್ದು. ಕಟ್ಟಿ ಬಸವೇಶ್ವರ ದೇವಸ್ಥಾನಕ್ಕೆ ನನ್ನ ಹಿರಿಯ ಅಣ್ಣ,  ಸೂಪಿ ಸಂತ ಮೆಹಬೂಬ್ ಅಲಿಷಾ ಪೀರಾ ಅವರು ಬಯಲು ಜಾಗೆ ದಾನ ಕೊಟ್ಟಿದ್ದು ಮಾತ್ರವಲ್ಲ ಅಡಿಗಲ್ಲು ಸಮಾರಂಭವನ್ನು ಅವರೇ ನೆರವೇರಿಸಿ ಕೊಟ್ಟಿದ್ದಾರೆ.ಈಗಲೂ ವಿಜಯದಶಮಿಯ ಸಂದರ್ಭದಲ್ಲಿ ಟೆಕ್ಕೆದ ದರ್ಗಾದ ಪೀಠಾಧಿಪತಿಗಳೇ ಮೊದಲು ಬನ್ನಿ
ಮುಡಿಯುವ ಕಾರ್ಯಕ್ರಮ ಕ್ಕೆ ಚಾಲನೆ ನೀಡುತ್ತಾರೆ.
ಹಿಂದೂ ಮುಸ್ಲಿಂ ಆದಿಯಾಗಿ ಮೊಹರಂ ಮತ್ತೂ ಉರುಸು ಕಾರ್ಯಕ್ರಮ ಜರಗುತ್ತವೆ
ಪ್ರತಿ ವರುಷ ಬುದ್ಧ ಪೂರ್ಣಿಮೆ ದಿನ ಗ್ರಾಮ ದೇವತೆ ಕೆಳಗಲ ಪೇಟೆ ದುರ್ಗಾ ದೇವಿ ಜಾತ್ರೆ ಮತ್ತೂ ಟೆಕ್ಕೇದ ಉರುಸು ಏಕ ಕಾಲಕ್ಕೆ ನಡೆಯುತ್ತವೆ. ಉಚ್ಚಾಯಕ್ಕೆ ದರ್ಗಾ ದಿಂದ ಬ್ರಹತ್ ಪ್ರಮಾಣದ ಹೂವಿನ ಹಾರ ಸಮರ್ಪಣೆ ಮಾಡಿದ ನಂತರ ಉತ್ಸವ ಕಾರ್ಯಕ್ರಮ ನಡೆಯುತ್ತವೆ.ದರ್ಗಾದಲ್ಲಿ ಎಲ್ಲ ವರ್ಗದ ಜನರು ಉರು ಸ್ ಸಮಾರಂಭದಲ್ಲಿ ಪಾಲ್ಗೊಂಡುಭಕ್ತಿ ಯಿಂದ ಪ್ರಸಾದ
ಸ್ವೀಕಾರ ಮಾಡುತ್ತಾರೆ.ದಾನ ಧರ್ಮದಲ್ಲೂ ತಮ್ಮ ಶಕ್ತಿಅನುಸಾರವಾಗಿರುತ್ತದೆ.

1992 ರ ನಂತರ ಮಂದಿರ ಮಸೀದೆ ವಿವಾದ ಭುಗಿಲೆದ್ದಾಗ ಇದೇ ಟೆಕ್ಕೇದ ಉರುಸಿನಲ್ಲಿ ಸರ್ವ ಧರ್ಮ ಸಮ್ಮೇಳನ ಹಮ್ಮಿ ಕೊಂಡಿದ್ದು ಮಕಾನದಾರ ಸಹೋದರರು.
ಎಲ್ಲ ಧರ್ಮದ ಮುಖ್ಯಸ್ಥರು ಸಹಕಾರ ನೀಡಿದ್ದಾರೆ. ಪಾಲ್ಗೊಂಡಿದ್ದಾರೆ.
ರಾಜ್ಯದಲ್ಲಿ ಅಲ್ಲಲ್ಲಿ ಸೌಹಾರ್ದ ವಾತಾವರಣ ಹದಗೆಡುತ್ತಿದೆ ಆದರೂ

ಗಜೇಂದ್ರಗಡ ತಾಲೂಕಾ ಕೇಂದ್ರ ದಲ್ಲಿ ಟೆಕ್ಕೆದ ದರ್ಗಾ, ದುರ್ಗಾ ದೇವಿ ಜಾತ್ರೆ, ಕಟ್ಟಿ ಬಸವೇಶ್ವರ ದೇವಸ್ಥಾನದ ಪ್ರಸ್ತ. ಚೌಕಿಮಠದ ಸಂಸ್ಕೃತಿಕ ವಾತಾವರಣ ವೆಲ್ಲವೂ ಮಾನವೀಯತೆಯ ಕುರುಹುಗಳಾಗಿವೆ.

ಇವಲ್ಲವು ಮನುಷ್ಯ ಬದುಕಿಗೆ ಅಗಾಧವಾಗಿ ಪರಿಣಾಮ ಬೀರಬಲ್ಲ ಶಕ್ತಿ ಕೇಂದ್ರಗಳೂ ಹೌದು.
ಇದಕ್ಕೆಲ್ಲ ಕಾರಣವೆಂದರೆ ಮನೆ ಶಾಲೆ, ಜೀವನ ಶಾಲೆ, ನಿಸರ್ಗ ಶಾಲೆಯಲ್ಲಿ ಕಲಿತ ಪಾಠಗಳು ಮಾತ್ರವಲ್ಲ  ಪಶು ವೈದ್ಯ ಇಲಾಖೆಯ ಉಡಚಪ್ಪ ಚನ್ನಮ್ಮನವರ  ಅವರು ರಾತ್ರಿ ಶಾಲೆಯಲ್ಲಿ ಕಲಿಸಿದ ಪಾಠಗಳೇ ಪ್ರೇರಣೆ
ಜೊತೆಗೆ
 ಸ್ವಾಮಿಗಳು, ಅಗಸರು, ಮರಾಠಿಗರು,ಬ್ರಾಹ್ಮಣರು,ಮುಸ್ಲಿಮರು ನಾಪಿತರು ಕೊಟ್ಟ ಕೈತುತ್ತು. ತನ್ನ ಬೆವರಿನ ಪ್ರತಿಫಲವಾಗಿ ರಾಶಿ ಕಣದಲ್ಲಿ ಆಯಾಗಾರರಿಗೆ ಅಂತ ಮೀಸಲಿರಿಸಿ ದಾನ ಮಾಡಿದ ರೈತನ ಬೆವರುಂಡ ಪ್ರತಿ ಫಲವಾಗಿದೆ


ಎ ಎಸ್. ಮಕಾನದಾರ

Leave a Reply

Back To Top